ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, March 4, 2021

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ 


ಲೇಖನ: ಡಾ.ಟಿ.ಎ.ಬಾಲಕೃಷ್ಣ ಅಡಿಗ
       ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತ್ರ ಉಪನ್ಯಾಸಕರು


ವಿದ್ಯಾರ್ಥಿಗಳು ದೇಶದ ಅತ್ಯಮೂಲ್ಯ ಆಸ್ತಿ. ಪ್ರತಿಯೊಬ್ಬ ವಿದ್ಯಾಥಿಯನ್ನು ಈ ದೇಶದ ಪ್ರಜ್ಞಾವಂತ ನಾಗರೀಕನನ್ನಾಗಿ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು. ಅದರಲ್ಲಿಯೂ ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಎಲ್ಲ ಹಂತಗಳಲ್ಲಿ ಅತ್ಯಂತ ಪ್ರಮುಖವಾದುದು. ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೇಳಿರುವಂತೆ

ತಂದೆಗೂ ಗುರುವಿಗೂ ಒಂದು ಅಂತರವುಂಟು.

ತಂದೆ ತೋರುವನು ಸದ್ಗುರುವ | ಗುರುರಾಯ

ಬಂಧನವ ಕಳೆವ ಸರ್ವಜ್ಞ. “


ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿಗದಿತ ಶಿಕ್ಷಣವನ್ನು ಕೊಡುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧಗೊಳಿಸುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇದನ್ನು ಪ್ರಸ್ತುತ ಜಾರಿಯಲ್ಲಿರುವ ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಒತ್ತಿ ಹೇಳಲಾಗಿದೆ. ಮುಂದೆ ಬರಲಿರುವ ಹೊಸ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ನೈತಿಕ ಶಿಕ್ಷಣ, ಮೌಲ್ಯ ಶಿಕ್ಷಣ ಮುಂತಾದ ಅವಧಿಗಳನ್ನು ತರಗತಿಗಳಲ್ಲಿ ಅಳವಡಿಸಿಕೊಳ್ಳುವ ಪದ್ಧತಿ ಈಗಾಗಲೇ ಜಾರಿಯಲ್ಲಿದೆ.

ವಿದ್ಯಾರ್ಥಿಗಳು ಕಲಿಯುತ್ತಿರುವ ಯಾವುದೇ ತರಗತಿಯ ಯಾವುದೇ ವಿಷಯಗಳಲ್ಲಿ, ಅದು ಭಾಷೆಯಾಗಿರಬಹುದು, ವಿಜ್ಞಾನವಿರಬಹುದು, ಸಮಾಜ ವಿಜ್ಞಾನವಿರಬಹುದು ಅಥವಾ ಗಣಿತವಿರಬಹುದು, ಹಲವು ಬಗೆಯ ಮೌಲ್ಯಗಳು ಅಂತರ್ಗತವಾಗಿರುತ್ತವೆ. ಯಾವುದೇ ಒಂದು ವಿಷಯವನ್ನು ಬರೀ ಪರೀಕ್ಷಾ ದೃಷ್ಟಿಯಿಂದ ಬೋಧಿಸುವ ಬದಲಿಗೆ, ಅದರ ವಿವಿಧ ಅಧ್ಯಾಯಗಳಲ್ಲಿರುವ ಜೀವನ ಮೌಲ್ಯಗಳನ್ನು ಗುರುತಿಸಿ ವಿದ್ಯಾಥಿಗಳಿಗೆ ಮನದಟ್ಟು ಮಾಡಿಸಿದಲ್ಲಿ, ಅವರಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಉಂಟುಮಾಡುವುದರಲ್ಲಿ ಶಿಕ್ಷಕರು ಯಶಸ್ವಿಯಾಗಬಹುದು.

ವಿಜ್ಞಾನ ಬೋಧನೆಯಲ್ಲಿ ಜೀವನ ಮೌಲ್ಯಗಳನ್ನು ಎಲ್ಲಿಂದ ಹುಡುಕಲಿ?’ ಎಂದು ನಿಮ್ಮಲ್ಲಿ ಕೆಲವರಿಗಾದರೂ ಅನಿಸಿರಬಹುದು. ವಿಜ್ಞಾನ ಪಠ್ಯದ ಮುಖ್ಯ ಶಾಖೆಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ, ಈ ಮೂರರಲ್ಲಿಯೂ ಹಾಸುಹೊಕ್ಕಾಗಿರುವ ಸಾಕಷ್ಟು ಜೀವನ ಮೌಲ್ಯಗಳನ್ನು ಗುರುತಿಸುವುದು ಖಂಡಿತಾ ಸಾಧ್ಯವಿದೆ. ಪ್ರಕೃತಿಯಲ್ಲಿ ನಾವು ನೋಡುವ ಪ್ರತಿಯೊಂದು ಅಂಶದಲ್ಲಿಯೂ ಒಂದು ಸುವ್ಯವಸ್ಥೆ ಇರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅದರಲ್ಲಿರುವ ವೈವಿಧ್ಯತೆ ಹಾಗು ವೈಶಿಷ್ಟ್ಯತೆಗಳನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸುತ್ತೇವೆ, ಅಲ್ಲವೆ? ಧಾತುಗಳ ಅವರ್ತಕÀ ಕೋಷ್ಟಕವಿರಬಹುದು ಅಥವಾ ಜೀವ ಪ್ರಪಂಚವಿರಬಹುದು. ಅದರಲ್ಲಿರುವ ವೈವಿಧ್ಯತೆ, ವೈಶಿಷ್ಟ್ಯತೆ ಹಾಗು ಸುವ್ಯವಸ್ಥೆಗಳನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ? ಈ ಎಲ್ಲ ಅಂಶಗಳು ಮೌಲ್ಯಗಳೇ ಅಲ್ಲವೆ ?

ಯಾವುದೇ ವಿಜ್ಞಾನದ ಶಾಖೆಯಲ್ಲಿ ಹಿಂದಿನ ತರಗತಿಗಳಲ್ಲಿ ಕಲಿತಿಲ್ಲದ ಹೊಸ ಸಿದ್ಧಾಂತವೊಂದನ್ನು ಪರಿಚಯ ಮಾಡಿಕೊಂಡಾಗ ಉಂಟಾಗುವ ಖುಶಿಯೂ ಒಂದು ಮೌಲ್ಯ ಆಗುವುದಲ್ಲವೇ ? ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದ ಹಲವಾರು ಪಾಠಗಳಲ್ಲಿ ನಿಖರತೆ, ಸಮಾನತೆ, ನಿರ್ದಿಷ್ಟತೆ, ಮುಂತಾದ ಮೌಲ್ಯಗಳನ್ನು ಗುರುತಿಸಬಹುದು. ಜೀವಶಾಸ್ತ್ರದ ಪಾಠಗಳಂತೂ ಮೌಲ್ಯ ಶಿಕ್ಷಣಕ್ಕೆ ಅತ್ಯಂತ ಪೂರಕವಾಗಿವೆ. ಸಸ್ಯಗಳಲ್ಲಾಗಲೀ, ಪ್ರಾಣಿಗಳಲ್ಲಾಗಲಿ ನಾವು ಗಮನಿಸಬಹುದಾದ ಹಲವಾರು ಅಂಶಗಳು ನಮಗೆ ಸ್ಪೂರ್ತಿ ನೀಡಬಲ್ಲ ಹಲವಾರು ಮೌಲ್ಯಗಳನ್ನು ಅವಲಂಬಿಸಿವೆ.

ಸಸ್ಯಗಳ ಜೀವನ ಚಕ್ರವನ್ನೇ ಗಮನಿಸಿ ನೋಡಿ. ಸಸ್ಯಗಳು ಬೇರೆಲ್ಲಾ ಜೀವಿಗಳಿಗೆ ವಿಷಕಾರಿಯಾದ ಕಾರ್ಬನ್ ಡೈಆಕ್ಸೈಡ್‍ಅನ್ನು ಸ್ಥಿರೀಕರಿಸಿ ತಮ್ಮಲ್ಲಿರುವ ವಿಶಿಷ್ಟ ಕ್ರಿಯೆಗಳ ಮೂಲಕ ಅಹಾರ ತಯಾರಿಸಿಕೊಳ್ಳುವುದರ ಜೊತೆಗೆ, ಜೀವಿಗಳ ಉಸಿರಾಟಕ್ಕೆ ಅವಶ್ಯವಾದ ಆಕ್ಸಿಜನ್ ಅನ್ನು ಬಿಡುಗಡೆಮಾಡುತ್ತವೆ. ಪರೋಪಕಾರಕ್ಕೆ ಇದಕ್ಕಿಂತ ಉದಾಹರಣೆ ಬೇಕೆ?. ಅಷ್ಟೇ ಅಲ್ಲ, ಸಸ್ಯಗಳು ತಾವು ತಯಾರಿಸಿಕೊಂಡ ಆಹಾರವನ್ನು ತಾವು ಮಾತ್ರ ಬಳಸಿಕೊಳ್ಳುವುದಿಲ್ಲ. ಬದಲಿಗೆ, ಪರಿಸರ ವ್ಯವಸ್ಥೆಯಲ್ಲಿರುª ಇತರ ಎಲ್ಲ ಜೀವಿಗಳೊಂದಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಂಚಿಕೊಳ್ಳುತ್ತವೆ, ಅಲ್ಲವೆ? ಜೊತೆಗೆ, ನಮ್ಮ ಅವಶ್ಯಕತೆಗಳನ್ನು ಪೂರೈಸುವ ಹತ್ತು, ಹಲವು ಉತ್ಪನ್ನಗಳನ್ನು ನಮಗೆ ಒದಗಿಸುತ್ತಿವೆ. ಇವೆಲ್ಲವೂ ಪ್ರಶಂಸೆಗೆ ಅರ್ಹವಾದ ಅಂಶಗಳೇ ಅಲ್ಲವೆ? ಪರಿಸರದ ವಿಭಿನ್ನ ಪರಿಸ್ಥಿತಿಗಳಿಗೆ ಸಸ್ಯಗಳು ಹೊಂದಾಣಿಕೆ ಮಾಡಿಕೊಳ್ಳುವ ರೀತಿಯೂ ಸಹ ಮೆಚ್ಚುಗೆಗೆ ಪಾತ್ರವಾಗುವ ಇನ್ನೊಂದು ಅಂಶ.

ಡೌಗ್ಲಾಸ್ ವಿಲಿಯಮ್ಸ್(Douglas Williams) ಎಂಬ ವಿಜ್ಞಾನಿಯ ಪ್ರಕಾರ ನಮ್ಮಿಂದ ಪ್ರಾಣಿಗಳು ಕಲಿಯುವುದೇನಿಲ್ಲ. ಆದರೆ, ಪ್ರಾಣಿಗಳಿಂದ ನಾವು ಕಲಿಯಬೇಕಾದ ಮೌಲ್ಯಯುತ ಅಂಶಗಳು ಸಾಕಷ್ಟಿವೆ. ನಾವು ಇಂದು ನೋಡುತ್ತಿರುವ ಅಥವಾ ಅಳವಡಿಸಿಕೊಂಡಿರುವ ಬಹಳಷ್ಟು ತಂತ್ರಜ್ಞಾನಗಳ ಹಿಂದಿನ ಸ್ಪೂರ್ತಿ ಪ್ರಾಣಿಗಳೇ ಆಗಿವೆ. ವಿಮಾನಗಳ ಹಾರಾಟದ ಹಿಂದಿರುವ ತಂತ್ರಜ್ಞಾನವನ್ನು ಮಾನವ ಕಂಡುಹಿಡಿದದ್ದು ಹಕ್ಕಿಗಳ ಹಾರಾಟದ ವಿವರಗಳನ್ನು ಅಧ್ಯಯನ ಮಾಡಿದ ಮೇಲೆಯೇ. ಅದೇ ರೀತಿ, ಜಲಾಂತರ್ಗಾಮಿಗಳ ಹಿಂದಿರುವ ತಂತ್ರಜ್ಞಾನ ಮಾನವನಿಗೆ ಹೊಳೆದಿದ್ದು ಜಲಚರಗಳ, ಅದರಲ್ಲಿಯೂ ಮೀನುಗಳ ಜೀವನ ಶೈಲಿಯ ಅಧ್ಯಯನದ ನಂತರವೇ. ರಾಡಾರ್ ತಂತ್ರಜ್ಞಾನ ಸಿದ್ಧಿಸಿದ್ದು, ತಿಮಿಂಗಲ ಹಾಗೂ ಬಾವಲಿಗಳಲ್ಲಿ ಕಂಡುಬರುವ ವಿಶಿಷ್ಟ ಸಾಮಥ್ರ್ಯವನ್ನು ಅರ್ಥ ಮಾಡಿಕೊಂಡ ಮೇಲೆಯೇ.

ವಿವಿಧ ಪ್ರಾಣಿವಂಶಗಳ ಉದಾಹರಣೆಗಳನ್ನು ಅಧ್ಯಯನ ಮಾಡಿದಾಗ ನಮಗೆ ಕಂಡುಬರುವ ಅಂಶಗಳೆಂದರೆ ಅವುಗಳಲ್ಲಿರುವ ರಚನಾ ಕೌಶಲ, ಕ್ರಿಯಾಶೀಲತೆ, ಸಹಕಾರ, ಸಹಿಷ್ಣುತೆ, ಸಂಯಮ, ಶಿಸ್ತು, ಕಾಲಪ್ರಜ್ಞೆ, ಕರ್ತವ್ಯ ನಿಷ್ಟೆ ಮುಂತಾದ ಮೌಲ್ಯಯುತ ಗುಣಗಳು. ಪ್ರಾಣಿಗಳ ಹೆಸರುಗಳನ್ನು ಹೇಳಿ ವಿದ್ಯಾರ್ಥಿಗಳನ್ನು ಬೈಯುವುದರ ಬದಲಿಗೆ ಸೂಕ್ತ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದರ ಜೊತೆಗೆ, ಅಂಥ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬಹುದಲ್ಲವೇ?

ಇರುವೆಗಳ ಉದಾಹರಣೆಯನ್ನೇ ಗಮನಿಸೋಣ. ಸಮಾಜಜೀವಿಗಳಾದ ಇರುವೆಗಳು ಸಹಸ್ರಾರು ಸಂಖ್ಯೆಯಲ್ಲಿರುವ ಗುಂಪುಗಳಲ್ಲಿ ವಾಸಿಸುತ್ತವೆ. ಈ ಗುಂಪುಗಳನ್ನು ವಸಾಹತುಗಳೆಂದು(colonies) ಗುರುತಿಸಲಾಗುತ್ತದೆ. ಈ ಗುಂಪಿನಲ್ಲಿ ರಾಜ, ರಾಣಿ, ಯೋಧರು ಮತ್ತು ಕೆಲಸಗಾರ ಎಂಬ ನಾಲ್ಕು ವರ್ಗದ ಇರುವೆಗಳು ಇರುತ್ತವೆ. ರಾಜ ಮತ್ತು ರಾಣಿ ಇರುವೆಗಳು ಕೇವಲ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಭಾಗವಹಿಸಿ ಪೀಳಿಗೆಯನ್ನು ಬೆಳೆಸುವ ಜವಾಬ್ದಾರಿಯನ್ನು ಹೊಂದಿವೆ. ಯೋಧ ಇರುವೆಗಳು ವಸಾಹತುಗಳಿರುವ ಗೂಡನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಕೆಲಸಗಾರ ಇರುವೆಗಳು ಆಹಾರ ಸಂಗ್ರಹ, ಗೂಡಿನ ಶುಚಿತ್ವ ಕಾಪಾಡುವುದು, ರಾಜ, ರಾಣಿಯರ ಯೋಗಕ್ಷೇಮ ನೋಡಿಕೊಳ್ಳುವುದು, ಮೊಟ್ಟೆಗಳನ್ನು ಹಾಗೂ ಮರಿಗಳನ್ನು ಸಂರಕ್ಷಿಸುವುದು ಮುಂತಾದ ಹತ್ತು ಹಲವು ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸದಾ ಬಿಡುವಿಲ್ಲದೆ ತೊಡಗಿಕೊಂಡಿರುತ್ತವೆ.

ಸದಾ ಕಾರ್ಯಶೀಲವಾಗಿರುವ ಕೆಲಸಗಾರ ಇರುವೆಗಳಿಂದ ನಾವು ಬಹಳಷ್ಟು ಮೌಲ್ಯಗಳನ್ನು ಕಲಿಯಬಹುದು. ಸಾಲಾಗಿ ಸಾಗುತ್ತಿರುವ ಇರುವೆಗಳ ಗುಂಪನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಎಷ್ಟೋ ಬಾರಿ ಆ ಸಾಲನ್ನು ಕಡಿಯುವ ಪ್ರಯತ್ನವನ್ನೂ ಮಾಡಿದ್ದೇವೆ ಅಲ್ಲವೇ ? ಆದರೆ, ಇಲ್ಲಿ ನಾವು ಗಮನಿಸಬಹುದಾದ ಅಂಶವೆಂದರೆ, ಕೆಲವೇ ಕ್ಷಣಗಳಲ್ಲಿ ಇರುವೆಗಳು ಮತ್ತೆ ತಮ್ಮ ಚಲನೆಯ ಪಥವನ್ನು ಗುರುತಿಸಿಕೊಂಡು ಮುಂದುವರೆಯುತ್ತವೆ. ಅಂದರೆ, ತಮ್ಮ ಜವಾಬ್ದಾರಿಯ ನಿರ್ವಹಣೆಯ ಸಂದರ್ಭಗಳಲ್ಲಿ ಉಂಟಾಗುವ ಅಡೆ, ತಡೆಗಳನ್ನು ನಿರ್ಲಕ್ಷಿಸಿ, ತಮ್ಮ ಕರ್ತವ್ಯ ನಿಷ್ಟೆಯನ್ನು ಮುಂದುವರೆಸುತ್ತವೆ ! ಪ್ರತಿಯೊಂದು ಇರುವೆಯೂ ತನ್ನ ಸಾಮಥ್ರ್ಯಕ್ಕೆ ಮೀರಿದ ಶ್ರಮ ಹಾಕುವುದನ್ನೂ ನಾವು ಗಮನಿಸಬಹುದು. ಇರುವೆಯೊಂದು ತನ್ನ ದೇಹದ ತೂಕಕ್ಕಿಂತ ಭಾರವಾದ ವಸ್ತುವನ್ನು ಬಹಳ ಶ್ರಮದಿಂದ ಉರುಳಿಸಿಕೊಂಡು ತನ್ನ ಗೂಡಿನ ಕಡೆಗೆ ಕೊಂಡೊಯ್ಯುವುದನ್ನು ನೋಡಿದ್ದೇವೆ, ಇಲ್ಲವೇ ಕೇಳಿದ್ದೇವೆ. ಭವಿಷ್ಯಕ್ಕಾಗಿ ಆಹಾರ ಸಂಪನ್ಮೂಲಗಳನ್ನು ಹುಡುಕಿ, ಅಲ್ಲಿಂದ ಆಹಾರವನ್ನು ಗೂಡಿಗೆ ಕೊಂಡೊಯ್ದು ಕೆಡದಂತೆ ಸಂರಕ್ಷಿಸಿ ಇಟ್ಟುಕೊಳ್ಳುವ ಜಾಣ್ಮೆ ಈ ಕೆಲಸಗಾರ ಇರುವೆಗಳಿಗಿದೆ. ಸಂಗ್ರಹವಾಗಿರುವ ಆಹಾರವನ್ನು ಕಾಲೋನಿಯ ಎಲ್ಲ ಸದಸ್ಯ ಇರುವೆಗಳೂ ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ, ಸಮನಾಗಿ ಹಂಚಿಕೊಳ್ಳುತ್ತವೆ. ಅಷ್ಟೇ ಅಲ್ಲ, ರಾಜ, ರಾಣಿ, ಮರಿ ಇರುವೆಗಳಿಗೆ ಮತ್ತು ಆಶಕ್ತ ಇರುವೆಗಳಿಗೆ ಆದ್ಯತೆಯ ಮೇಲೆ ಆಹಾರವನ್ನು ಒದಗಿಸುತ್ತವೆ. ಎಲ್ಲ ವಿಷಯಗಳಲ್ಲೂ ತಮ್ಮ ಇಡೀ ಸಮಾಜದ ಬಗ್ಗೆ ಕಾಳಜಿ ವಹಿಸುತ್ತವೆ ! ಇವು ನಾವು ಯೋಚಿಸಬೇಕಾದ ವಿಷಯಗಳಲ್ಲವೇ? ಇವೆಲ್ಲವೂ ನಾವು ಅಳವಡಿಸಿಕೊಳ್ಳಬಹುದಾದ ಜೀವನ ಮೌಲ್ಯಗಳೇ ಅಲ್ಲವೆ?  

ಪ್ರಯೋಗಗಳು ವಿಜ್ಞಾನ ಬೋಧನೆಯ ಅವಿಭಾಜ್ಯ ಅಂಗ. ತರಗತಿಯಲ್ಲಿ ಪ್ರಯೋಗಗಳನ್ನು ಮಾಡಿ ತೋರಿಸುವ ಮೂಲಕ ಅಥವಾ ವಿದ್ಯಾರ್ಥಿಗಳಿಂದಲೇ ಮಾಡಿಸುವ ಮೂಲಕ ಹಲವು ಉತ್ತಮ ಮೌಲ್ಯಗಳನ್ನು ಅವರಲ್ಲಿ ಉದ್ದೀಪನಗೊಳಿಸಬಹುದು. ಪ್ರಯೋಗಕ್ಕೆ ಅಗತ್ಯ ಸಿದ್ಧತೆಯ ಸಂದರ್ಭದಲ್ಲಿ, ಪ್ರಯೋಗ ಮಾಡುತ್ತಿರುವಾಗ ಅಥವಾ ಸಲಕರಣೆಗಳನ್ನು ಉಪಯೋಗಿಸುವಾಗ ವಹಿಸಬೇಕಾದ ಎಚ್ಚರಿಕೆಯಿಂದ ಪ್ರಾರಂಭಿಸಿ, ವೀಕ್ಷಣೆ, ವಿಶ್ಲೇಷಣೆ, ನಿರ್ದಿಷ್ಟತೆ, ತಾಳ್ಮೆ, ಶುಚಿತ್ವ, ಸಹಕಾರ, ಪ್ರಾಮಾಣಿಕತೆ, ಸುವ್ಯವಸ್ಥೆ ಮುಂತಾದ ಉಪಯುಕ್ತ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬಹುದು. ಕೇವಲ ಪರೀಕ್ಷೆಯ ದೃಷ್ಟಿಯಿಂದ ಬೋಧನೆ ಮಾಡಿ ನಮ್ಮ ವಿದ್ಯಾರ್ಥಿಗಳನ್ನು ಕೇವಲ ‘ಅಂಕ ಗಳಿಸುವ ಯಂತ್ರಗಳನ್ನಾಗಿ’ ರೂಪಿಸುವುದಕ್ಕಿಂತ ಅವರನ್ನು ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುವುದೂ ನಮ್ಮ ಕರ್ತವ್ಯ ಅಲ್ಲವೇ ?

ತರಗತಿಯಲ್ಲಿ ನಾವು ಬೋಧಿಸುವ ವಿಜ್ಞಾನದ ಪಾಠಗಳಲ್ಲಿ ಅಂತರ್ಗತವಾಗಿರುವ ಮೌಲ್ಯಗಳನ್ನು ನಮ್ಮ ವಿದ್ಯಾರ್ಥಿಗಳ ಗಮನಕ್ಕೆ ತಂದು ಅವರಲ್ಲಿ ಆಸಕ್ತಿ ಮತ್ತು ಕುತೂಹಲಗಳನ್ನು ಹೆಚ್ಚಿಸುವುದರ ಜೊತೆಗೆ, ಅವರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ನಾವೂ ಸಂತೃಪ್ತಿಯನ್ನು ಹೊಂದಬಹದಲ್ಲವೇ?

8 comments:

  1. ಮೌಲ್ಯಯುತ ಲೇಖನ - ಅಂತರಾವಲೋಕನ ಉಂಟಾಗುವಂತೆ ಮಾಡಿದೆ.

    ReplyDelete
  2. ಸರ್...ಈ ಲೇಖನ ತುಂಬಾ ವಿಶೇಷವಾಗಿ ಮೂಡಿಬಂದಿದೆ. ಮೌಲ್ಯಗಳನ್ನು ನಾವು ಹೇಗೆ ಕಲಿತು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲು ವಿಜ್ಞಾನದ ಕಲಿಕೆ ಪೂರಕವಾಗಿದೆ ಎಂಬುದರ ಬಗ್ಗೆ ಅರಿವು ಮೂಡಿಸಿದ್ದೀರಿ. ಇದನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿ ಪ್ರಮುಖ ವೆಬ್ಸೈಟ್ಗಳಲ್ಲಿ ಪ್ರಕಟವಾಗುವ ಹಾಗೆ ಮಾಡಿದರೆ ಇನ್ನೂ ಹೆಚ್ಚು ಆಸಕ್ತರನ್ನು ತಲುಪಲು ಸಹಕಾರಿ.

    ReplyDelete
  3. ತುಂಬಾಉಪಯುಕ್ತಲೆಖನ.

    ReplyDelete
  4. ತುಂಬಾಉಪಯುಕ್ತಲೆಖನ.

    ReplyDelete
  5. ಗುರುರಾಯರಾದ ತಮ್ಮಿಂದ ಕಲಿಯಬೇಕಾದ ಅಂಶಗಳು ಸಾಕಷ್ಟಿವೆ.
    ಸುತ್ತಮುತ್ತಲಿನ ಪರಿಸರದ ವೈವಿಧ್ಯತೆ ಹಾಗು ವೈಶಿಷ್ಟ್ಯತೆಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗೆ ಇಳಿಮುಖವಾಗಿದೆ.ಉತ್ತಮ
    ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಮಾಡುವುದು ಇಂದಿನ ಸವಾಲು.ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಪ್ರೇರೇಪಣೆ ನೀಡಬಲ್ಲ, ಮೌಲ್ಯಯುಕ್ತ ಲೇಖನ.ಧನ್ಯವಾದಗಳು.
    🙏

    ReplyDelete
  6. ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಮೌಲ್ಯಶಿಕ್ಷಣದ ಅವಧಿಗಳು ತೋರಿಕೆಗೆ ಸೀಮಿತವಾಗಿಬಿಟ್ಟಿದೆ. ಇಡೀ ಕ್ರಿಯಾಯೋಜನೆ sslc ಫಲಿತಾಂಶ ಉತ್ತಮ ಗೊಳಿಸಿಸುವದಕ್ಕೋಸ್ಕರನೇ ರೂಪುಗೊಳ್ಳುತ್ತಿದೆ.
    ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ನಾವೆಲ್ಲಿ ಎಡವುತ್ತಿದ್ದೇವೆ ಎಂದು ನಮ್ಮ ಅಂತರಾವಲೋಕನ ಮಾಡಿಕೊಳ್ಳುವಂತಿದೆ ನಿಮ್ಮ ಲೇಖನ ಸರ್.
    ನಮಗೆ ತುಂಬಾ ಪ್ರೇರಣಾಕಾರಿಯಾದ ಅತ್ಯಮೂಲ್ಯವಾದ ಲೇಖನ ಸರ್.
    ತುಂಬಾ ಧನ್ಯವಾದಗಳು ನಿಮಗೆ.

    ReplyDelete
  7. ಶಿಕ್ಷಕರಿಗೆ ಪ್ರೇರೇಪಣೆ ನೀಡುವ ಉತ್ತಮ ಲೇಖನ, ಧನ್ಯವಾದಗಳು ಸರ್

    ReplyDelete
  8. Very good thought sir. You have always uplifted the inner value of teaching.
    I remember having utilized your ppt about values in teaching science 3 years back for trainings too.
    Indeed a value based focus towards nation building.

    ReplyDelete