ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, March 4, 2021

ಚಿನ್ನದ ನಾಡಿನ ಜ್ಞಾನದ ಗಣಿ

ಚಿನ್ನದ ನಾಡಿನ ಜ್ಞಾನದ ಗಣಿ

ಲೇಖನ: ಎ. ಶ್ರೀನಿವಾಸ್ ಸರ್ಕಾರಿ ಪ್ರೌಢಶಾಲೆ, ಮುತ್ತೂರು, ಶಿಡ್ಲಘಟ್ಟ (ತಾ),ಚಿಕ್ಕಬಳ್ಳಾಪುರ (ಜಿ).

            & ರಾಮಚಂದ್ರ ಭಟ್‌ ಬಿ.ಜಿ. 


ಯಾರು ಸರ್ ಶಾಸ್ತ್ರಿಗಳಾ?”

ಹೌದು. ಕೋಲಾರದ ವಿ.ಎಸ್. ಎಸ್,ಶಾಸ್ತ್ರಿಗಳು !!!”

ಓಹೋ ಅವರಾ? ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲ ಬಿಡಿ.”

ಓಹ್ ಹೌದಾ ?”

ಹೌದು ಅವರ ಕೈಗೊಂದು ಬಿಸಾಕಿರುವ ಕಾಗದ, ಕತ್ತರಿ ಕೊಟ್ಟು ನೋಡಿ. ಕಣ್ಣೆವೆಯಿಕ್ಕುವಷ್ಟರಲ್ಲೇ ಅವರ ಹಸ್ತದಿಂದ ಕಾಗದದ ಚೂರು ಚಕಚಕನೆ ಕತ್ತರಿಸಲ್ಪಟ್ಟು  ಇರುವೆ, ಜೇಡ, ಮೊದಲಾದ ಆಕೃತಿಗಳು ಕಸವೇ  ರಸವಾದಂತೆ ಮೇಲೆದ್ದು ಜೀವತಳೆಯುತ್ತವೆ. ಮಕ್ಕಳಂತೂ ಬೆರಗುಗಣ್ಣಿಂದ ಅವರ ಮೈದಾಸ್ ಟಚ್ ನೋಡಲು ಬೆಲ್ಲವನ್ನು ಮುತ್ತುವ ಇರುವೆಗಳಂತೆ ಮುತ್ತುತ್ತವೆ. ಮಕ್ಕಳ ಪಾಲಿಗೆ ಕಿಂದರಿಜೋಗಿಯೇ ಈ ಶಾಸ್ತ್ರಿ ತಾತ !!!  ಇನ್ನು ನಿಮ್ಮ ಪಾಲಿಗೆ ?????

ಈ ಮೇಲಿನ ಮಾತುಕತೆ ನಿಮ್ಮಲ್ಲೊಂದು ಕುತೂಹಲ ಕೆರಳಿಸಿರಬಹುದು. ಮೊದಲ ಬಾರಿಗೆ ನಾನು ಶಾಸ್ತ್ರೀಜಿಯವರನ್ನು ಭೇಟಿಯಾಗಿದ್ದು ಸುಮಾರು 20 ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ  ಹವ್ಯಾಸಿ ಬರಹಗಾರರಿಗೆ ಏರ್ಪಡಿಸಲಾದ ಸಾಹಿತ್ಯ ಕಮ್ಮಟವೊಂದರಲ್ಲಿ. ಅವರೂ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು!!! ನಿರಂಜನ ವಾನಳ್ಳಿಯವರು ಬೆಳಗ್ಗೆ ಹೊರಗೆ ಸುತ್ತಾಡಿ ಬನ್ನಿ. ನಿಮ್ಮ ಅನುಭವವನ್ನು ನುಡಿಚಿತ್ರವಾಗಿಸಿ ಎಂದು ಒಂದು ಪುಟ್ಟ ಸವಾಲನ್ನು ಎಸೆದರು. ಆಗತಾನೇ ಕಾಲೇಜು ಮುಗಿಸಿದ ಚಿಗುರು ಮೀಸೆಯ ತರುಣರು ನಾವು!!! ನಮ್ಮ ಎಳೆಯ ಅನುಭವಕ್ಕೆ ನಿಲುಕಿದ ದೃಶ್ಯವೊಂದಕ್ಕೆ ಕನಸಿನರಮನೆಯಿಂದ ಕಸುವನ್ನು ತುಂಬಿದೆವು. ಶಾಸ್ತ್ರೀಜಿಯವರೋ ಬಳ್ಳಾರಿ ಜಾಲಿಯ ಟೊಂಗೆಯಲ್ಲಿ ಕಂಡ ಗಣಿತದ ವಿನ್ಯಾಸ, ಮುಳ್ಳುಗಳ ನಡುವಿನ ಕೋನ ಮತ್ತಿತರ ವಿಚಾರಗಳನ್ನು ಮಂಡಿಸುತ್ತಾ  ಬಹುಷಃ ನಿಸರ್ಗ ಗಣಿತದ ಆಳವಾದ ಹರವಿನ ಸಾಕ್ಷಾತ್ಕಾರದತ್ತ ನಮ್ಮನ್ನು ಕರೆದೊಯ್ದರು!!.  ಡಾ. ರಾಜಕುಮಾರ್ ರವರ ಸಾಕ್ಷಾತ್ಕಾರ ಸಿನಿಮಾ ಹಾಡು ನೆನಪಾಗುತ್ತಿದೆಯಲ್ವಾ? ಹಾಗೆಯೇ ಸಾಕ್ಷಾತ್ಕಾರದ ಹಾದಿಯಲ್ಲಿ ಕೃತಿಯನ್ನು ಮರೆಯುವುದುಂಟೇನು?   ಗಣಿತದ ಈ ಒಲವೇ ಶಾಸ್ತ್ರಿಯವರ ಜೀವನ ಸಾಕ್ಷಾತ್ಕಾರ.   ಈ ಹೊಸಬಗೆಯ ವ್ಯಾಖ್ಯಾನ  ನಮ್ಮನ್ನು ಹೊಸಪ್ರಪಂಚಕ್ಕೇ ಒಯ್ದದ್ದು ಸುಳ್ಳಲ್ಲ!!!.  ಅವರು ಕಟ್ಟಿಕೊಟ್ಟ ನುಡಿಚಿತ್ರದ ಚಿತ್ತಾರ ಇನ್ನೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅದರ ಪ್ರಭಾವ ಎಷ್ಟಿತ್ತುಎಂದು ನೀವು ಊಹಿಸಿಕೊಳ್ಳಬಹುದು. ಇಂತಹ ಗಣಿತದ  ಅಗಣಿತ ಗಣಿ   ನಮ್ಮ ಶೈಕ್ಷಣಿಕ ದೃಷ್ಟಿಕೋನವನ್ನೇ ಬದಲಿಸಿಬಿಡುತ್ತದೆ.    

ಗಣಿತ, ಖಗೋಳಶಾಸ್ತ್ರ, ಚಿತ್ರರಚನೆ, ಓರಿಗಾಮಿ, ಕಿರಿಗಾಮಿ, ವ್ಯಂಗ್ಯಚಿತ್ರ ರಚನೆ, ತೊಗಲು ಬೊಂಬೆಯಾಟ, ಜೇಡಿಮಣ್ಣಿನ ಮಾದರಿ ತಯಾರಿಕೆ, ಶಾಸನ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಉತ್ತಮ ಪ್ರಭುತ್ವ ಸಾಧಿಸಿದ್ದಾರೆ.

ಕೋಲಾರದ ವಿ. ಎಸ್. ಎಸ್. ಶಾಸ್ತ್ರೀ ಕರ್ನಾಟಕದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಚಿರಪರಿಚಿತರು. ಅವರ ಬಹುಮುಖ ವ್ಯಕ್ತಿತ್ವದ  ಪರಿಚಯವನ್ನು ಮಾಡಿಕೊಡುವುದು ದೊಡ್ಡ ಸವಾಲೇ ಸರಿ.  ಎಲ್ಲಿಂದ ಪ್ರಾರಂಭಿಸಲಿಎಲ್ಲಿ ಅಂತ್ಯಮಾಡಲಿ ಎಂಬ   ಗೊಂದಲದಲ್ಲೇ ನಾವು ಮುಳುಗಿ ಹೋದೇವು!!!. ಅವರನ್ನು ಭೇಟಿ ಮಾಡಬಂದ ವ್ಯಕ್ತಿಯೂ ತಾನು ಏನು ಕೇಳಲೆಂದು ಬಂದೆ ಎಂದೇ ಮರೆತು ಹೋಗಬೇಕು!!! ಇಂತಿಪ್ಪ ಪಾದರಸದ ವ್ಯಕ್ತಿತ್ವದ  ಶಾಸ್ತ್ರಿಯವರ ಆಸಕ್ತಿಯ ಕ್ಷೇತ್ರಗಳು ಹತ್ತು ಹಲವು. ಶಿವಶಂಕರ ಶಾಸ್ತ್ರೀಯವರಿಗೆ ಬ್ಯಾಂಕ್‌ ಉದ್ಯೋಗ ಉದರಂಬರಣಕ್ಕಾಗಿ ಮಾತ್ರ.  ಗಣಿತ, ಖಗೋಳಶಾಸ್ತ್ರ, ಚಿತ್ರರಚನೆ, ಓರಿಗಾಮಿ, ಕಿರಿಗಾಮಿ, ವ್ಯಂಗ್ಯಚಿತ್ರ ರಚನೆ, ತೊಗಲು ಬೊಂಬೆಯಾಟ, ಜೇಡಿಮಣ್ಣಿನ ಮಾದರಿ ತಯಾರಿಕೆ, ಶಾಸನ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿದವರಂತೆ ದೇಶ ಸುತ್ತಿ ಕೋಶ ಓದಿ ಸರಿಸುಮಾರು 700 ಹೆಚ್ಚಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಾಗಾರಗಳಲ್ಲಿ ಗಣಿತ ಮತ್ತು ವಿಜ್ಞಾನವನ್ನು ಸೃಜನಾತ್ಮಕವಾಗಿ ಬೋಧಿಸುವ ಕೌಶಲ್ಯಗಳನ್ನು ನಾಡಿಗೆ ಪರಿಚಯಿಸುತ್ತಲೇ ಬಂದಿದ್ದಾರೆ.  ಇವರು ಲಿಮ್ಕಾ ದಾಖಲೆಯ ಪುಟವನ್ನೂ ಅಲಂಕರಿಸಿರುವುದು ನಮಗೆ ಹೆಮ್ಮೆಯ ವಿಷಯ. 

ಸಂಪನ್ಮೂಲವ್ಯಕ್ತಿಯಾಗಿ, ಓರಿಗಾಮಿ ಮೂಲಕ ಗಣಿತ, ಏರೋಡೈನಮಿಕ್ಸ್‌, ಖಗೋಳವಿಜ್ಞಾನದ ಮಾದರಿ ತಯಾರಿಕೆ, ಜಂತರ್‌ ಮಂತರ್‌ ಮಾದರಿ ತಯಾರಿಕೆ, 15 ಅಡಿ ಎತ್ತರದ ಪ್ಲಾನಿಟೋರಿಯಂ ರಚನೆ, ಮಕ್ಕಳಿಗಾಗಿ  ಗಣಿತ ಆಟಿಕೆಗಳು, ಗಣಿತ ಪ್ರಯೋಗಾಲಯ ಎಂಬ ವಿನೂತನ ಪರಿಕಲ್ಪನೆ ಸೃಷ್ಟಿಸಿ ಮಾದರಿಗಳ ತಯಾರಿಕೆ, ನಕ್ಷತ್ರ ವೀಕ್ಷಣೆ ಮುಂತಾದ ಕಾರ್ಯಗಾರಗಳನ್ನು ಪರಿಣಾಮಕಾರಿಯಾಗಿ ನಡೆಸಿ ಶಿಕ್ಷಕರಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಾಸ್ತ್ರೀಯವರ ಲೇಖನಿಯಿಂದ ಹೊರಬಂದ ಪುಸ್ತಕಗಳು ಹತ್ತು ಹಲವು, ಅವರ ಕೃತಿಗಳ ಶೀರ್ಷಿಕೆಗಳು ಚಿತ್ತಾಕರ್ಷಕವಷ್ಟೇ ಅಲ್ಲ ಚಿತ್ತಪ್ರಚೋದಕವು ಹೌದು.  ಸರಳ ಭಾಷೆಯಲ್ಲಿ ಮಂದಗಾಮಿನಿಯಂತೆ  ಸುಲಲಿತವಾಗಿ ಹರಿವ ವಿಷಯ ಹೃದ್ಯವಾಗಿ ಮನಸೂರೆಗೊಳ್ಳುತ್ತದೆ.

ವಿಜ್ಞಾನ ಪ್ರಸಾರ, ಮಾನವ ಸಂಪನ್ಮೂಲ ಮಂತ್ರಾಲಯಗಳು  ಅವರ ಓರಿಗಾಮಿ ಮತ್ತು ಗಣಿತ ಪುಸ್ತಕಗಳನ್ನು ಪ್ರಕಟಿಸಿವೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ‘ವಿಜ್ಞಾನ ವ್ಯಂಗ್ಯ’ ಪುಸ್ತಕವನ್ನು ಹೊರತಂದಿದೆ.

ಭಾರತ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು ʼಥೇಲ್ಸ್‌ʼ, ಅಂಕಿ ಸಂಖ್ಯೆಗಳನ್ನು ಹೇಗೆ ಅರಿತರು?, ಭೂಮಿ ಗುಂಡಾಗಿದೆಯೆಂದು ಹೇಗೆ ಅರಿತರು?, ಗಣಿತಜ್ಞಾನ ಬೋಧನ ಅಳಲು,  -1 ಘಿ  -1  = +1 ಹೇಗೆ? , ಆಹಾ ಚಟುವಟಿಕೆಗಳನ್ನು ಮಾಡಿಕಲಿ, ಮುಂತಾದ ಸರಣಿ ಪುಸ್ತಕಗಳನ್ನು ಪ್ರಕಟಿಸಿ ಜ್ಞಾನದಾಹಿಗಳ ತೃಷೆ ಹಿಂಗಿಸಿವೆ. 

ಕಾಲದತ್ತ ವಾಲಿದಾಗ, ಗಾಂಪರ ಮಠದಲ್ಲಿ ಕಳ್ಳತನ, ನೀವು ವಿಮಾನ ಹಾರಿಸಿ, ಆಟಿಕೆಗಳಲ್ಲಿ ವಿಜ್ಞಾನ ಬೋಧನೆ, ಗಣಿತಜ್ಞನೊಬ್ಬನ ಪ್ರಲಾಪ ಮುಂತಾದ ಶೀರ್ಷಿಕೆಗಳುಳ್ಳ ಅವರ ಪುಸ್ತಕಗಳನ್ನು ಬೆಂಗಳೂರಿನ ನವಕರ್ನಾಟಕ ಪ್ರಕಾಶನಾಲಯದವರು ಪ್ರಕಟಿಸಿದ್ದಾರೆ.

ಇನ್ನು ಶಾಸ್ತ್ರಿಗಳನ್ನು ಅರಸಿ ಬಂದ ಪ್ರಶಸ್ತಿಗಳೆಷ್ಟೋ!!!!!

2009 ರಲ್ಲಿ ಜಪಾನ್‌ ಜ್ಞಾನ ಹಬ್ಬದಲ್ಲಿ ಗೌರವಾರ್ಪಣೆ.

2010 ರಲ್ಲಿ ಗದಗ್‌ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಾರ್ಪಣೆ.

2010 ರಲ್ಲಿ ಅತಿ ಹೆಚ್ಚು ಕಾಗದ ತುಣುಕುಗಳ ಮೂಲಕ ಓರಿಗಾಮಿ ಕೃತಿ ರಚನೆ ʼಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ʼ ಗೆ ಸೇರಿದೆ.

2011 ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ವಿಷನ್‌ ಗ್ರೂಪ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಶಾಸ್ತ್ರಿಗಳ ಸಾಧನೆಯ ಪರಿಚಯ ನಮ್ಮೆಲ್ಲರಿಗೂ ಸಾಧನೆಯ ಹಸಿವನ್ನು ಕಲಿಕೆಯ ತೃಷೆಯನ್ನು ಉದ್ದೀಪಿಸಬಲ್ಲುದು. ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ, ಅವರ ಆತಿಥ್ಯವನ್ನು  ಸ್ವೀಕರಿಸಿನಂತರ ಕುಪ್ಪಂಗೆ ತೆರಳಿದ ನೆನಪುಗಳೇ ಅತಿ ಮಧುರ.  ಪ್ರಸ್ತುತ ಆSಇಖಖಿ ನಡೆಸುತ್ತಿರುವ ಟಾಯ್ ಫೇರಿನ ರಾಜ್ಯ ತಂಡದ  ಮೆಂಟರ್ ಆಗಿ ಮಾರ್ಗ ದರ್ಶನ ನೀಡುತ್ತಿರುವ ಶಾಸ್ತ್ರಿಯವರದ್ದು ದಣಿವಿಲ್ಲದ ರೋಚಕ ಕಥನ . ಅದನ್ನು ಓದಲು ಮುಂದಿನ ಸಂಚಿಕೆಯವರೆಗೂ ಕಾಯುವಿರಲ್ಲವೇ?

7 comments: