ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, July 4, 2021

ಮಕ್ಕಳು ಮೆಚ್ಚಿದ ಶಿಕ್ಷಕ ಸೈಯದ್ ಅಕ್ಬರ್ ಷಾ ಹುಸೇನ್

ತೆರೆ ಮರೆಯ ಸಾಧಕರು 

ಶಿಕ್ಷಣವನ್ನು ಜೀವನದ ಉಸಿರಾಗಿಸಿಕೊಂಡಿರುವ ಅಪರೂಪದ ಸಿದ್ಧಾಂತಿ

ಮಕ್ಕಳು ಮೆಚ್ಚಿದ ಶಿಕ್ಷಕ ಸೈಯದ್ ಅಕ್ಬರ್ ಷಾ ಹುಸೇನ್

ಪರಿಚಯ- ಲಕ್ಷ್ಮೀಪ್ರಸಾದ್ ನಾಯಕ್

ಮೊನ್ನೆ ತಾನೆ ನಮ್ಮ ಶಿಕ್ಷಕರ ಗುಂಪಿನಲ್ಲಿ ನಿವೃತ್ತಿಯ ಶುಭಾಷಯಗಳ ಸುರಿಮಳೆ !! ಮರುದಿನ ದಿನ ನೋಡಿದರೆ, ಹಿಂದಿನ ದಿನ ನಿವೃತ್ತರಾದ ಶಿಕ್ಷಕರಿಂದ ನಮ್ಮ ವಾಟ್ಸಾಪ್ ಗುಂಪಿನಲ್ಲಿ ಮತ್ತು ಗೂಗಲ್‌ ಗ್ರೂಪಿನಲ್ಲಿ ಯಥಾಪ್ರಕಾರ ವಿವಿಧ ಸಂಪನ್ಮೂಲಗಳ ಹಂಚಿಕೆ !!! ಒಂದು ದಿನವಲ್ಲ, ಸತತವಾಗಿ ಅವ್ಯಾಹತವಾಗಿ ಈ ಹಂಚಿಕೆ ನಡೆಯುತ್ತಲೇ ಇದೆ. ಅವರದ್ದು ಕೇವಲ ವಯೋ ನಿವೃತ್ತಿ ! ಕಾಯಕಕ್ಕಲ್ಲ!! ಸಾಮಾನ್ಯ ಶಿಕ್ಷಕರಾಗಿದ್ದರೆ ಇನ್ಯಾಕೆ ವೃಥಾ ಉಸಾಬರಿ ಎನ್ನುತ್ತಿದ್ದರೇನೋ!!!! ಆದರೆ, ಈ ಶಿಕ್ಷಕರು ಆ ಸಾಲಿಗೆ ಸೇರಿದವರಲ್ಲ ಎನ್ನುವುದನ್ನು ನಾನು ಹೇಳಬೇಕಿಲ್ಲವಲ್ಲ .


ಮೌನಸಾಧಕನ್ನು ಕುರಿತು ಪ್ರಶಂಸಿಸುವಾಗ ಎಲೆಮರೆಯ ಕಾಯಿ ಎಂಬ ನುಡಿಗಟ್ಟನ್ನು ಸಾಮಾನ್ಯವಾಗಿ ಬಳಸುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಈ ನುಡಿಗಟ್ಟಿನ ಬಳಕೆ ಎಷ್ಟು ಅತಿಯಾಗಿದೆ ಎಂದರೆ ಅದನ್ನು ಕೇಳಿ ಕೇಳಿ ಆ ಶಬ್ದ ಸವಕಲಾಗಿ ಹೋಗಿ ಅದರ ನಿಜವಾದ ಅರ್ಥ ಸ್ಪುರಿಸುವುದೇ ಇಲ್ಲ. ಹತ್ತೊರೊಳಗೆ ಹನ್ನೊಂದು ಎಂಬಂತಾಗಿ ಹೋದ ಈ ಶಬ್ದಕ್ಕೆ ನಿಜವಾಗಿ ಅನ್ವರ್ಥ ಎನಿಸುವ ವ್ಯಕ್ತಿ ಯಾರೆಂದು ಯೋಚಿಸದೇ ಥಟ್ಟಂತ ಹೊಳೆದಿದ್ದು ಶ್ರೀಯುತ ಸೈಯದ್ ಅಕ್ಬರ್‌ಷಾ ಹುಸೇನ್. ಇಂತಹ ವ್ಯಕ್ತಿಯನ್ನು ಪರಿಚಯಿಸುವುದು ಒಂದು ಗೌರವವೇ.

ದಿನಾಂಕ 01/06/1961 ರಲ್ಲಿ ಜನಿಸಿದ ಶ್ರೀಯುತರು 1984ರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಬರೋಬ್ಬರಿ 35ವರ್ಷ 6 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಮೊನ್ನೆ ಮೊನ್ನೆ ಅಂದರೆ, ದಿನಾಂಕ 31/05/2021 ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾದರು. ಆದರೆ, ಅವರ ಶೈಕ್ಷಣಿಕೈಂಕರ್ಯ ಮಾತ್ರ ಇಂದಿಗೂ ಮುಂದುವರೆಯುತ್ತಿದೆ !

ಶಿ- ಶಿಸ್ತು, ಕ್ಷ-ಕ್ಷಮಾಗುಣ, ಕ-ಕರುಣೆ- ಈ ಮೂರು ಶಬ್ದಗಳ ಮಿಶ್ರಣವೇ ಶಿಕ್ಷಕ ಸೈಯದ್‌ ಅಕ್ಬರ್‌ಷಾ ಹುಸೇನ್ ಅವರು. ಇಂತಹ ಎಲೆ ಮರೆಯ ಶಿಕ್ಷಕರನ್ನು ಪರಿಚಯಿಸಲು ತುಂಬಾ ಹೆಮ್ಮೆ ಎನಿಸುತ್ತದೆ. ಸೈಯದ್‌ ಅಕ್ಬರ್‌ಷಾ ಹುಸೇನ್ ಸರ್ 1984 ರಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.  ತದನಂತರ 1986ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಕೆರೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯವನ್ನು 1991ರವರೆಗೆ ನಿರ್ವಹಿಸಿ, ಬೆಂಗಳೂರಿನ ಸಾರಕ್ಕಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡು 2015ರವರೆಗೆ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿಂದ ಯಲಗೊಂಡನಪಾಳ್ಯ ಸರ್ಕಾರಿ ಉರ್ದು ಪ್ರೌಢಶಾಲೆಗೆ ವರ್ಗಾವಣೆಗೊಂಡು 2021ರವರೆಗೆ ಅಲ್ಲಿ ಕರ್ತವ್ಯವನ್ನು ನಿರ್ವಹಿಸಿ ಕಳೆದ ಮೇ 31ರಂದು ನಿವೃತ್ತರಾದರು. ಸುದೀರ್ಘ 35 ವರ್ಷ 6 ತಿಂಗಳ ಅಗಾಧ ಅನುಭವವನ್ನು ಹೊಂದಿರುವ ಇವರು, ಶಿಕ್ಷಣವನ್ನು ಜೀವನದ ಉಸಿರಾಗಿಸಿಕೊಂಡಿರುವ ಅಪರೂಪದ ಸಿದ್ಧಾಂತಿ.

ವೃತ್ತಿಜೀವನದ ಪ್ರಾರಂಭದಿಂದ ನಿವೃತ್ತಿಯವರೆಗೂ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಚಟುವಟಿಕೆ ಹಾಗೂ ಪ್ರಯೋಗಗಳ ಮೂಲಕ ಬೋಧಿಸಿ ಮೆಚ್ಚುಗೆಗೆ ಪಾತ್ರರಾದವರು ಮಕ್ಕಳ ಪ್ರೀತಿಯ ಸೈಯದ್ ಸರ್. ಅಲ್ಲದೇ, ಅನೇಕ ಗಣಿತ ವಿಜ್ಞಾನದ ರಸಪ್ರಶ್ನೆ, ಚಾರ್ಟ್, ಮಾದರಿ ತಯಾರಿಕೆಗಳ ಸ್ಪರ್ಧೆಗಳನ್ನು ಏರ್ಪಡಿಸಿದವರು. ಹಲವಾರು ವಸ್ತು ಪ್ರದರ್ಶನಗಳಲ್ಲಿ ತೀರ್ಪುಗಾರರಾಗಿ ಕೂಡ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಗಣಿತ ಮತ್ತು ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಕಾರ್ಯಾಗಾರಗಳಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡಿರುತ್ತಾರೆ .ಅಲ್ಲದೆ 190ಕ್ಕೂ ಹೆಚ್ಚು ಯೂಟ್ಯೂಬ್ ವೀಡಿಯೋಗಳನ್ನು ನಿರ್ಮಿಸಿರುತ್ತಾರೆ .

ಸಾಮಾನ್ಯವಾಗಿ 50 ದಾಟುತ್ತಿದ್ದಂತೆ, ಬಹುತೇಕ ಶಿಕ್ಷಕರು ವಯಸ್ಸಾಗಿದೆ ನಮಗೆ ಕಂಪ್ಯೂಟರ್ ಬರುವುದಿಲ್ಲ , ನಮಗ್ಯಾಕೆ ಕಂಪ್ಯೂಟರ್ ತರಬೇತಿ ಎಂದು ಹೇಳುತ್ತಾರೆ. ಆದರೆ, ಇವರು ಇದಕ್ಕೆ ಅಪವಾದ. 2016ರಲ್ಲಿ ಇಲಾಖೆಯು ಪ್ರಾರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ ಐ.ಟಿ.@ ಸ್ಕೂಲ್ , ಇದನ್ನು ರಾಜ್ಯದಾದ್ಯಂತ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಶಿಕ್ಷಕರಿಗೆ ತರಬೇತಿಯನ್ನು ನೀಡಲು ಡಿ.ಎಸ್.ಇ.ಆರ್.ಟಿ ವತಿಯಿಂದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಬೆಂಗಳೂರಿನ ಬನಶಂಕರಿಯಲ್ಲಿ 10 ದಿನಗಳ ಕಾಲ ತರಬೇತಿ ಆಯೋಜಿಸಿತ್ತು. ಆ ಸಂದರ್ಭದಲ್ಲಿ ನಾನೂ ಕೂಡ ಅಕ್ಬರ್ ರವರೊಂದಿಗೆ  ಕಾರ್ಯಗಾರದಲ್ಲಿ ಭಾಗವಹಿಸಿದ್ದೆ ಹಾಗೂ ಸ್ನೇಹಿತನಾಗಿ ಅವರನ್ನು ಇನ್ನೂ ಹತ್ತಿರದಿಂದ ನೋಡಿದ್ದೆ. ಆಗಲೇ ಅಗಾಧ ಕಂಪ್ಯೂಟರ್ ಜ್ಞಾನವನ್ನು ಹೊಂದಿದ್ದ ಅಕ್ಬರ್ ಅವರ ಕೆಲವು ಪ್ರಾಯೋಗಿಕ ಚಟುವಟಿಕೆಗಳು, ಮಾದರಿಗಳ ವಿಡಿಯೋಗಳನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಅಲ್ಲದೆ, ಹಲವಾರು ಶಿಕ್ಷಕರಿಗೆ ಕಂಪ್ಯೂಟರ್ ತರಬೇತಿಯನ್ನು ಡಯಟ್ ಆರ್ .ಆರ್. ನಗರ, ಬೆಂಗಳೂರು, ಇಲ್ಲಿ ನಾವು ಜೊತೆಯಾಗಿ ನೀಡಿದೆವು . ಈಗ ಹೆಚ್ಚಿನ ಶಿಕ್ಷಕರು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಕ್ರಿಯೇಟ್ ಮಾಢಿ ಹಾಕುತ್ತಿದ್ದಾರೆ. ಆದರೆ, ಅಕ್ಬರ್ ಅವರು ಆಗಾಗಲೇ 190ಕ್ಕೂ ಹೆಚ್ಚು ಯುಟ್ಯೂಬ್ ವಿಡಿಯೋಗಳನ್ನು ತಯಾರಿಸಿ ಅಪಲೋಡ್ ಮಾಡಿದ್ದಾರೆ. ರಾಜ್ಯಾದ್ಯಂತ ವಾಟ್ಸಪ್ ಗುಂಪುಗಳ ಶಿಕ್ಷಕರಿಗೆ, ಮಕ್ಕಳಿಗೆ ಉಪಯೋಗವಾಗುವಂತಹ ತಾವು ತಯಾರಿಸಿದ ಗಣಿತ ವಿಜ್ಞಾನದ ರಸಪ್ರಶ್ನೆ, ಪವರ್ ಪಾಯಿಂಟ್ ಸ್ಲೈಡ್‌ಗಳನ್ನು ಮತ್ತು ವಿಡಿಯೋಗಳನ್ನು ಇತರೆ ಶಿಕ್ಷಕರೊಂದಿಗೆ ಹಂಚಿಕೊಳ್ಳುತ್ತಾರೆ. ನಿವೃತ್ತರಾದ ಮೇಲೆ ಕೆಲವು ಶಿಕ್ಷಕರು ಸುಮ್ಮನಿದ್ದು ಬಿಡುತ್ತಾರೆ. ಆದರೆ, ಅಕ್ಬರ್ ಅವರು ಈಗಲೂ ಕೂಡ, ಅದೇ ಉತ್ಸಾಹದೊಂದಿಗೆ ಪ್ರತಿನಿತ್ಯ ಗಣಿತ ವಿಜ್ಞಾನದ ರಸಪ್ರಶ್ನೆ, ತಾನು ತಯಾರಿಸಿದ ವೀಡಿಯೊಗಳನ್ನು ನಮ್ಮಂತಹ ಯುವ ಶಿಕ್ಷಕರೊಂದಿಗೆ ಹಂಚಿಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ .

ಇವರ, ಮತ್ತೊಂದು ವಿಶೇಷತೆ ಏನೆಂದರೆ ಗಣಿತ ಶಿಕ್ಷಕರಾದರೂ ಕೂಡ, ವಿಜ್ಞಾನದಲ್ಲಿ ಕಣ್ಣು ಮತ್ತು ಬೆಳಕಿನ ಪಾಠದ ಪರಿಲ್ಪನೆಗಳನ್ನು ಬೋಧಿಸಲು ಆಡಿನ ಕಣ್ಣಿನ ಮಸೂರವನ್ನು ಡಿಸೆಕ್ಷನ್ ಮಾಡಿ, ಅದನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅದರ ಮೂಲಕ ಬೆಳಕಿಗೆ ಸಂಬಂಧಿಸಿದ ಮೂಲಕ ಪ್ರಯೋಗಗಳನ್ನು ಮಾಡುತ್ತಿದ್ದರು, ಅಲ್ಲದೇ, ರಸಾಯನಶಾಸ್ತ್ರ ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುತ್ತಿದ್ದರು.

ಇಷ್ಟೊಂದು ಅನುಭವವನ್ನು ಹೊಂದಿರುವ ಅಕ್ಬರ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ. ನಮ್ಮಂತಹ ಕಿರಿಯ ಶಿಕ್ಷಕರಿಗೆ ಒಬ್ಬ ಒಳ್ಳೆಯ ಸ್ನೇಹಿತ, ಹಾಗೆಯೇ ಉತ್ತಮ ಮಾರ್ಗದರ್ಶಕರೂ ಕೂಡ. ಇದೇ ರೀತಿ, ಮುಂದೆಯೂ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ನಿಮ್ಮ ಮಾರ್ಗದರ್ಶನ ಸದಾ ದೊರಕಲಿ ಎಂಬುದೇ ನಮ್ಮ ಹಾರೈಕೆ. ಇಂತಹ ಅಪರೂಪದ, ಅನುಕರಣೀಯ ಗುಣಗಳ ಅಕ್ಬರ್ ಅವರ ನಿವೃತ್ತಿ ಜೀವನ ಆಯುರಾರೋಗ್ಯಗಳೊಂದಿಗೆ ಸುಖಮಯವಾಗಿರಲಿ ಎಂದು ಸವಿಜ್ಞಾನ ತಂಡ ಹಾರೈಸುತ್ತದೆ


ವೃತ್ತಿ ಜೀವನದ ಪ್ರಾರಂಭದಲ್ಲಿ ಯುವಶಿಕ್ಷಕ ಸೈಯದ್ ಹುಸೇನ್ ಸರ್ ವಿದ್ಯಾರ್ಥಿಗಳೊಂದಿಗೆ


ಶಿಕ್ಷಕರಿಗೆ ಆಯೋಜಿಸಲಾದ ಕಲಿಕೋಪಕರಣಗಳ ತಯಾರಿಕೆ ಸ್ಪರ್ಧೆಯಲ್ಲಿ ಸೈಯದ್ ಸರ್ 




ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಸೈಯದ್ ಸರ್








ಆಡಿನ ಕಣ್ಣಿನ ಛೇದವನ್ನು ಮಾಡಿ ಮಸೂರವನ್ನು ಹೊರತೆಗೆಯುತ್ತಿರುವ ಸೈಯದ್ ಸರ್





2016 ರಲ್ಲಿ .ಟಿ.@ಸ್ಕೂಲ್ ಯೋಜನೆಯ  ರಾಜ್ಯ ಸಂಪನ್ಮೂಲ ವ್ಯಕ್ತಿಗಳ ತರಬೇತಿ  ಕಾರ್ಯಾಗಾರದಲ್ಲಿ ಭಾಗವಹಿಸುವಿಕೆಯ ಸಂದರ್ಭದಲ್ಲಿ

ಸಹದ್ಯೋಗಿಗಳೊಂದಿಗೆ ಸೈಯದ್ ಹುಸೇನ್ ಸರ್


ಆಗ ಮತ್ತು ಈಗ  ವಿದ್ಯಾರ್ಥಿಳ ಮೆಚ್ಚಿನ ಸೈಯದ್ ಹುಸೇನ್ ಸರ್






7 comments:

  1. Real words about Akbar sir.
    Learned geogebra by Akbar sir

    ReplyDelete
  2. Really you r true sir, he is a mam with full spirt of enthusiasm and hard working,

    ReplyDelete
  3. Really true, Akbar sir is a man with full of enthusiasm and hard worker

    ReplyDelete
  4. True words. His main aim is reach students community by different methods which are understandable and interesting.He is very dynamic caring and loving.

    ReplyDelete
  5. very humble and kind sir you are . nicely explained LPN about ur work ur one of the Jem person god bless u sir

    ReplyDelete
  6. Really true sir, hard worker and also dedicated person. I always questioning myself how sir is managing time to do all these resource.I also inspired to learn geogebra by sir.Thank you sir.

    ReplyDelete