ಸಸ್ಯ ಸಗ್ಗದ ಸಹೃದಯನೊಂದಿಗೆ ಅವಿಸ್ಮರಣೀಯ ಅನುಭವ.
ನಮಸ್ತೆ, ನಾನು ಗಣೇಶಯ್ಯ ಮಾತನಾಡೋದು.
ಓಓಓಓ!!!!!!!! ನನಗಾದ ಆನಂದಾಶ್ಚರ್ಯಗಳಿಗೆ ಮುಂದೆ ಒಂದು ಕ್ಷಣ ಮಾತುಗಳೇ ಹೊರಡಲಿಲ್ಲ. ನನ್ನ ಮಗಳು ಮತ್ತು ಮಡದಿಯ ಹರ್ಷೋದ್ಗಾರ ಸ್ವತಃ ಗಣೇಶಯ್ಯನವರಿಗೂ ಕೇಳಿಸಿತ್ತು. ಅಂದು ರಾತ್ರಿ ನಮ್ಮ ಸಂಭ್ರಮಕ್ಕೆ ಎಣೆಯಿರಲಿಲ್ಲ.
ವಿಜ್ಞಾನ ಶಿಕ್ಷಕರು ತಪ್ಪದೇ ಓದಬೇಕಾದ ಪುಸ್ತಕ “ಸಸ್ಯಸಗ್ಗ”,
ಸ್ವತಃ ಗಣೇಶಯ್ಯನವರು ಕೈಗೊಂಡ, ಮಾರ್ಗದರ್ಶನ ನೀಡಿ ಶಿಷ್ಯರಿಂದ ಮಾಡಿಸಿದ ಸಸ್ಯ ಮತ್ತು ಪ್ರಾಣಿ ಲೋಕದ ಹಲವು ಮಹತ್ವದ ಸಂಶೋಧನೆಗಳ ಬಗೆಗಿನ ವಿಶಿಷ್ಟ ಪುಸ್ತಕ “ಸಸ್ಯಸಗ್ಗ” ,
ʼಭ್ರಾತೃ ಹತ್ಯೆʼ, ʼತಾಯಿ ಮಕ್ಕಳ ಕಲಹʼ, ʼಸ್ವಯಂವರʼ ಇಂತಹ ಮಾನವ ಲೋಕದ ವಿದ್ಯಮಾನಗಳು ಸಸ್ಯಗಳಲ್ಲೂ ಸಂಭವಿಸುತ್ತವೆ ಎಂದು ಸಂಶೋಧನೆಗಳ ಆಧಾರದಲ್ಲಿ ನಿರೂಪಿಸುವ ಜೊತೆಗೆ ಜೀವಜಗತ್ತಿನ ಹಲವು ಕೌತುಕಗಳ ಬಗೆಗೆ ಬೆಳಕು ಚೆಲ್ಲುವ, ನಮ್ಮ ಪರಿಸರದಲ್ಲಿ ನಾವೇ ಸಂಶೋಧಿಸಿಕೊಂಡ ಸಂಗತಿಗಳನ್ನು ಉದಾಹರಿಸುತ್ತಾ ನಮ್ಮ ಪರಿಸರದ ಬಗ್ಗೆ ನಾವು ಪಾಠ ಮಾಡಬೇಕಾದ ಅಗತ್ಯ ಮತ್ತು ಸಾಧ್ಯತೆಗಳನ್ನು ತೋರಿಸುವ ವಿಜ್ಞಾನ ಕ್ಷೇತ್ರದ ಹಲವು ಒಳಸುಳಿಗಳ ಪರಿಚಯ ಮಾಡುವ ಅದ್ಭುತ ಪುಸ್ತಕ “ಸಸ್ಯಸಗ್ಗ” ಆರನೇ ತರಗತಿಯ ನನ್ನ ಮಗಳಿಗೆ ಕೆಲವು ಕುತೂಹಲಕರ ವಿಷಯಗಳನ್ನು ಓದಿ ಹೇಳೋಣ ಎಂದುಕೊಂಡು ಪ್ರಾರಂಭಿಸಿದಾಗ ಅವಳು ಬಹಳ ಇಷ್ಟಪಟ್ಟು ಪಟ್ಟುಹಿಡಿದು ಪೂರ್ತಿ ಪುಸ್ತಕ ಓದಿಸಿಕೊಂಡು ಅರ್ಥಮಾಡಿಕೊಂಡು ಖುಷಿಪಟ್ಟದ್ದು ನನಗೂ ಆನಂದಾಶ್ಚರ್ಯಗಳಿಗೆ ಕಾರಣವಾಯ್ತು, ಇದೇ ಸಂಗತಿಯನ್ನು ಸನ್ಮಿತ್ರರಾದ ಶ್ರೀಯುತ ರಾಮಚಂದ್ರ ಭಟ್ಟರಲ್ಲೂ ಹಂಚಿಕೊಂಡಿದ್ದೆ ಅವರಿಗೂ ಖುಷಿಯಾಯ್ತು, ಅಲ್ಲದೇ ನಮ್ಮ “ಸವಿಜ್ಞಾನ” ಕ್ಕಾಗಿ ಶ್ರೀಯುತ ಡಾ|| ಕೆ.ಎನ್. ಗಣೇಶಯ್ಯನವರನ್ನು ಸಂದರ್ಶಿಸಿ, ಸಲಹೆ, ಸೂಚನೆ, ಮಾರ್ಗದರ್ಶನ ಪಡೆಯೋಣ ಎಂದರು. ನಾನು ಆಗಲಿ ಎಂದು ಭಯಮಿಶ್ರಿತ ಒಪ್ಪಿಗೆ ಸೂಚಿಸಿದ್ದೆ. ಏಕೆಂದರೆ, ಅಂಡಮಾನ್ ನಲ್ಲಿ ದೊರೆತ ಎರಡು ಹೊಸ ಸಸ್ಯ ಪ್ರಬೇಧಗಳಿಗೆ ಗಣೇಶಯ್ಯನವರ ಹೆಸರಿನೊಂದಿಗೆ ವೈಜ್ಞಾನಿಕ ದ್ವಿನಾಮಕರಣ ಮಾಡಿದ್ದಾರೆಂದರೆ ಅವರ ಸಾಧನೆ ಎಷ್ಟೆಂದು ನಿಮಗೆ ನಾನು ಇನ್ನು ವಿಶೇಷವಾಗಿ ಹೇಳಬೇಕಿಲ್ಲ.
ಅಂತಹ ಅಪ್ರತಿಮ ವಿಜ್ಞಾನಿ, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್, ವೃತ್ತಿಯಲ್ಲಿ ತೊಡಗಿದ್ದಾಗ ಕನ್ನಡ ಬರೆಯುವ ಸಂಭವವಿಲ್ಲದಿದ್ದರಿಂದ ಸುಮಾರು 35 ವರ್ಷ ಕನ್ನಡವನ್ನೇ ಬರೆಯದಿದ್ದ ಆದರೆ ನಿವೃತ್ತಿಯ ನಂತರ ಬರೆಯತೊಡಗಿ ಸುಮಾರು 25 ಕ್ಕೂ ಹೆಚ್ಚು best seller ಗಳಾದ ಕಥಾಸಂಕಲನ, ರೋಚಕ, ಐತಿಹಾಸಿಕ, ವೈಜ್ಞಾನಿಕ ಕಾದಂಬರಿ, ವೈಚಾರಿಕ ಲೇಖನಗಳನ್ನು ಬರೆದು ಕನ್ನಡ ಸಾಹಿತ್ಯಲೋಕದಲ್ಲಿ ಧಿಡೀರನೆ ಉದ್ಭವಿಸಿ ಶಾಶ್ವತವಾಗಿ ಉಳಿಯುವ ತಾರೆಯಾದ , ಜನಪ್ರಿಯತೆಯ ತುತ್ತ ತುದಿಯಲ್ಲಿರುವ, ಹೊಸದನ್ನು ಅರಸುತ್ತಾ ಸದಾ ಸುತ್ತಾಡುವ ಅವರು ನಮ್ಮ ನಿಲುಕಿಗೆ ಸಿಗುತ್ತಾರೆಯೇ ಎಂಬುದು ನನ್ನ ಅನಿಸಿಕೆಯಾಗಿತ್ತು. ಸವಿಜ್ಞಾನ ಬಳಗದಿಂದ ಮತ್ತೊಮ್ಮೆ ಕೋರಿಕೆ ಬಂದಾಗ ಆಗಲಿ ಪ್ರಯತ್ನಿಸೋಣ ಎಂದು ಧೈರ್ಯ ಮಾಡಿ ನನ್ನ ಪ್ರಾಮಾಣಿಕ ನುಡಿಗಳೊಂದಿಗೆ ಒಂದು e-mail ಮಾಡಿದೆ ರಾತ್ರಿ 10 ಗಂಟೆ ಸುಮಾರಿಗೆ, ಅದು ತಲುಪಿದ ಕೇವಲ 5 ನಿಮಿಷಗಳ ನಂತರ ಮೇಲೆ ಹೇಳಿದಂತೆ ಅವರಿಂದ ಕರೆ ಬಂದದ್ದು. ಗಣೇಶಯ್ಯನವರು “ತುಂಬಿದ ಕೊಡ ತುಳುಕುವುದಿಲ್ಲ” ಎಂಬ ಗಾದೆ ಮಾತನ್ನು ನಿಜಮಾಡಿದ್ದು.
ನಮ್ಮ “ಸವಿಜ್ಞಾನ” ದ ಬಗ್ಗೆ ವಿಚಾರಿಸಿಕೊಂಡರು, ಶಿಕ್ಷಕರಾದ ನಾವುಗಳು ಭೇಟಿ ಬಯಸಿದ್ದರಿಂದ ಖಂಡಿತ ಬನ್ನಿ. ಆದರೆ ನಾನು ನಗರದಿಂದ ದೂರ ಇದ್ದೀನಿ. ಹೇಗೆ ಬರ್ತೀರಪ್ಪ ನೀವು ಎಂದು ನಮ್ಮ ಬಗ್ಗೆಯೇ ಕಾಳಜಿ ತೋರಿಸಿದರು, ದಿನಾಂಕ ಗೊತ್ತು ಮಾಡಿಕೊಳ್ಳಿ. ಸೂಕ್ತ ಸಮಯ ತಿಳಿಸುತ್ತೇನೆ ಎಂದರು, ನನಗೆ ಅವರ ನಿರಹಂಕಾರದ ದರ್ಶನ ಅಂದೇ ಆಗಲೇ ಆಯಿತು. ನಮ್ಮ ತಂಡದೊಂದಿಗೆ ಮಾತನಾಡಿ 17/08/2021 ಮಂಗಳವಾರ ಭೇಟಿ ನಿಗಧಿ ಮಾಡಿಕೊಂಡೆವು. ದಿನಾಂಕ ತಿಳಿಸಿದಾಗ ಬೆಳಿಗ್ಗೆ ಅಥವಾ ಮಧ್ಯಾಹ್ನ ಬನ್ನಿ ಸಂಜೆ ನಾನು ಸೈಕ್ಲಿಂಗ್ ಮತ್ತು ಯೋಗ ಮಾಡಬೇಕು ಎಂದರು. ಮಧ್ಯಾಹ್ನ 2 ಗಂಟೆಗೆ ಭೇಟಿ ನಿಗದಿಯಾಯ್ತು, ನಾನು ನನ್ನ ಬಳಿ ಇರುವ ಅವರ ಎಲ್ಲಾ ಪುಸ್ತಕಗಳನ್ನು ತೆಗೆದುಕೊಂಡೆ. ವಿಶೇಷವಾಗಿ “ಸಸ್ಯಸಗ್ಗ” ವನ್ನು ಓದಿ ಕೆಲವು ಪ್ರಶ್ನೆಗಳನ್ನು ಗುರುತು ಮಾಡಿಕೊಂಡೆ.
YouTube ತೆರೆದು ಅವರ ಬಗ್ಗೆ ನೋಡಿದರೆ ಓ! ಅವರ ಅನೇಕ ಸಂದರ್ಶನಗಳು ಅಚ್ಚುಕಟ್ಟಾಗಿ ತಯಾರಾಗಿ ಕೂತಿವೆ. ಸರಿ ಇಷ್ಟಾಗಿಯೂ ನಮಗೆ ನೀಡಿದ ಅವಕಾಶಕ್ಕೆ ಅವರಿಗೆ ಮನದಲ್ಲೇ ವಂದಿಸುತ್ತಾ ನಾನು, ನನ್ನ ಮಗಳು, ಮಡದಿ ಹೊರಟೆವು, ಶ್ರೀಯುತರುಗಳಾದ ರಾಮಚಂದ್ರ ಭಟ್, ಶ್ರೀನಿವಾಸ್ ಮತ್ತು ಲಕ್ಷ್ಮೀಪ್ರಸಾದ್ ನಾಯಕ್ ಕೂಡ ಜೊತೆಯಾದರು. ನಿಗಧಿತ ಸಮಯಕ್ಕೆ ಮನೆ ತಲುಪಿದೆವು , ಸೆಕ್ಯುರಿಟಿ ಸಿಬ್ಬಂದಿ ಬಳಿ ಹೋಗಿ ಪ್ರವೇಶದ ಬಗ್ಗೆ ವಿಚಾರಿಸುತ್ತಿರುವಾಗಲೇ ಸ್ವತಃ ಗಣೇಶಯ್ಯನವರೇ ಸೆಕ್ಯೂರಿಟಿ ಸಿಬ್ಬಂದಿಗೆ ಕರೆ ಮಾಡಿ ನಮ್ಮನ್ನು ಒಳಗೆ ಬಿಡಲು ತಿಳಿಸಿದರು, ಅಲ್ಲದೆ ತಾವೇ ಮನೆ ಬಾಗಿಲಲ್ಲಿ ನಿಂತು ನಮ್ಮನ್ನು ನಗು ನಗುತ್ತಾ ಬರಮಾಡಿಕೊಂಡರು, ನಮ್ಮ ಅಳುಕನ್ನು ಹೋಗಲಾಡಿಸಿ ಆತ್ಮೀಯ ವಾತಾವರಣ ಮೂಡಿಸಿದರು, ಆದರ ಆತಿಥ್ಯ ನೀಡಿದರು. ಸುಂದರವಾದ ಇಡೀ ಮನೆ ತೋರಿಸಿದರು, ಸೂಕ್ತವಾದ ಸ್ಥಳದಲ್ಲಿ ಕುಳಿತು ಮಾತನಾಡಲು ಅನುವು ಮಾಡಿಕೊಟ್ಟರು. ಇಷ್ಟೆಲ್ಲಾ ಹೇಳುವ ಉದ್ದೇಶ ಏನೆಂದರೆ ನಮಗೆ ವಿಜ್ಞಾನಿಗಳ ಬಗ್ಗೆ, ಜನಪ್ರಿಯ ವ್ಯಕ್ತಿಗಳ ಬಗ್ಗೆ ಒಂದು ಅಭಿಪ್ರಾಯ ಏರ್ಪಟ್ಟಿರುತ್ತದೆ. ಅವರೆಲ್ಲಾ ನಮ್ಮ ನಿಲುಕಿಗೆ ಸಿಗದ ದಂತಗೋಪುರದಲ್ಲಿ ಕುಳಿತಿರುವ ವ್ಯಕ್ತಿಗಳು ಎಂದು, ಕೆಲವು ಸಂದರ್ಭಗಳಲ್ಲಿ ಅದು ನಿಜವೂ ಇರಬಹುದು. ಆದರೆ ಶ್ರೀಯುತ ಗಣೇಶಯ್ಯನವರು ನಮಗೆ ಎಲ್ಲಿಯೂ ಹಾಗೆ ಅನಿಸಲಿಲ್ಲ. ಹಿರಿಯಣ್ಣನಂತೆ ಕಂಡರು. ಮೇಲಿನ ವಿವರಗಳಲ್ಲಿ ಅವರ ವ್ಯಕ್ತಿತ್ವ ಕಟ್ಟಿಕೊಡುವುದು ಮತ್ತು ನಮಗಾದ ಅನುಭವ ಹಂಚಿಕೊಳ್ಳುವುದು ನನ್ನ ಉದ್ದೇಶ. ಇನ್ನು ಅವರ ಬಗ್ಗೆ ವಿವರವಾದ ಮಾಹಿತಿ ನಿಮಗೆ ಸಿಕ್ಕೇ ಸಿಗುತ್ತದೆ, ನಮ್ಮ ಸಂದರ್ಶನದ ಇಡೀ ವಿಡಿಯೋವನ್ನು ಬ್ಲಾಗ್ ನಲ್ಲಿ Upload ಮಾಡಲಾಗುತ್ತದೆ. ಆದರೆ ಅಂದಿನ ನಮ್ಮ ಸಾವಯವ ಅನುಭವ ದಾಟಿಸುವ ಪ್ರಯತ್ನ ಈ ಲೇಖನ.
ವಿಕಾಸವಾದ ಅವರ ನೆಚ್ಚಿನ ವಿಷಯ, ನನ್ನ ಮಗಳೂ ವಿಕಾಸವಾದದ ಬಗೆಗೆ ಕುತೂಹಲಿ, ನಿಮ್ಮ ಬರಹಗಳನ್ನು ಇಷ್ಟಪಡುತ್ತಾಳೆ ಎಂದಾಗ ಅವಳನ್ನು ಕರೆದು ಪ್ರೀತಿಯಿಂದ ಪಕ್ಕ ಕೂರಿಸಿಕೊಂಡರು “may be you are my youngest fan” ಅದೆಲ್ಲಾ ಅರ್ಥ ಆಗುತ್ತೇನಮ್ಮ ನಿನಗೆ ಎಂದು ಕೇಳಿ, ಅವಳು ಹೌದು ಎಂದಾಗ ಖುಷಿಪಟ್ಟರು. ಕರೋನ ಕಾಲದಲ್ಲಿ ಆತ್ಮೀಯರನ್ನು ಕಳೆದುಕೊಂಡ ಬಗ್ಗೆ ಮಾತನಾಡಿದರು, ಅರ್ಧಾಂಗಿ ಎಂಬ ಪದಕ್ಕೆ ಅನ್ವರ್ಥರಾಗಿದ್ದ ಸ್ವತಃ ವಿಜ್ಞಾನಿಯೂ ಆಗಿದ್ದು ಇವರ ಜೊತೆ ಹಲವು ಸಂಶೋಧನೆಗಳಲ್ಲಿ ಭಾಗಿಯಾಗಿದ್ದ, ತಮ್ಮ ಪತ್ನಿ ವೀಣಾರನ್ನು ಕಳೆದುಕೊಂಡದ್ದರ ಬಗ್ಗೆ ಮಾತನಾಡಿದರು, ಮಾತಿನಲ್ಲಿ ನೋವಿತ್ತು ಗೋಳಾಟವಿರಲಿಲ್ಲ. ಆಗ ನನಗೆ ಅವರೊಬ್ಬ ಝೆನ್ ಗುರುವಿನಂತೆ ಕಂಡರು. ತಮ್ಮ ಆತ್ಮೀಯ ಮಿತ್ರ ಉಮಾಶಂಕರ್ ಬಗ್ಗೆ ಮಾತನಾಡಿದರು, ಜಂಟಿಯಾಗಿ ನಮ್ಮಷ್ಟು ಸಂಶೋಧನೆಗಳನ್ನು ಬಹುಷಃ ಬೇರೆ ಯಾರೂ ಮಾಡಿರಲಿಕ್ಕಿಲ್ಲ ಎಂದು ಹೆಮ್ಮೆ ಪಟ್ಟರು. ಸಾಮಾನ್ಯವಾಗಿ ಸಂಶೋಧನೆಯ ಸ್ವಾಮ್ಯಕ್ಕಾಗಿ ತಿಕ್ಕಾಟ ಬಂದು ಇಂತಹ ಜಂಟಿ ಸಂಶೋಧನೆಗಳು ಹೆಚ್ಚು ಕಾಲ ಮುಂದುವರೆಯುವುದಿಲ್ಲ. ಆದರೆ ಅವರ ಮತ್ತು ಉಮಾಶಂಕರ್ ಮಧ್ಯೆ ಅಂತಹ ಅಹಂ ಗೆ ಅವಕಾಶವೇ ಇರಲಿಲ್ಲ. “ನಿನ್ನ ಹೆಸರು ಮೊದಲು ಹಾಕು ಅಂತ ಅವನು, ಇಲ್ಲ ನಿನ್ನ ಹೆಸರು ಮೊದಲು ಹಾಕು ಅಂತ ನಾನು” ಹೀಗೆ ಜಗಳ ಆಡುತ್ತಿದ್ದೆವು ಎಂದರು. ಕೊನೆಗೆ ಅವರ ಪತ್ನಿಯ ಸಲಹೆಯಂತೆ toss ಹಾಕುವುದರ ಮೂಲಕ ಯಾರ ಹೆಸರು ಮೊದಲು ಎಂದು ನಿರ್ಧರಿಸುತ್ತಿದ್ದರಂತೆ, ಇಂತಹ ನಿಸ್ವಾರ್ಥಗುಣ, ಮನ್ನಣೆಗಾಗಿ ಹಪಹಪಿಸದ ಗುಣ ನಿಜಕ್ಕೂ ಅನುಕರಣೀಯ ಅನಿಸಿತು. ಯಾವುದೇ ಪಂಥಕ್ಕೆ ಒಳಗಾಗದೆ ಸತ್ಯಾನ್ವೇಷಣೆಯೇ ಪರಮೋದ್ದೇಶವಾಗಿ ಬರೆಯುತ್ತಿರುವ ಶ್ರೀಯುತರು ಇಂದಿಗೆ ತೀವ್ರ ಅಗತ್ಯವುಳ್ಳ ಚಿಂತಕರಾಗಿ ಕಂಡರು. ವಿಜ್ಞಾನಿ ಎಂದ ಕೂಡಲೇ ಹಳೆಯದನ್ನು ಮೌಢ್ಯವೆಂದು ಸಾರಾಸಗಟಾಗಿ ತಿರಸ್ಕರಿಸದೆ ಅದರಲ್ಲಿ ಇರಬಹುದಾದ ವೈಜ್ಞಾನಿಕ ಅಂಶಗಳನ್ನು ಗುರುತಿಸಿ ಗೌರವಿಸುವ ಅವರ ವಿಶಾಲ ಮನೋಭಾವ ನಾವು ರೂಢಿಸಿಕೊಳ್ಳತಕ್ಕದ್ದೆಸಿತು. ಅವರ ಸಂಶೋಧನೆಗಳು ಸರಳವಾಗಿ ಕಂಡರೂ ಕೈಗೊಳ್ಳುವಾಗ ಇದಿರಾಗುವ ಸಂಕಷ್ಟಗಳನ್ನು ಹಂಚಿಕೊಂಡರು, ಆದರೆ ವಿದ್ಯಾರ್ಥಿಗಳಿಗೆ ಸರಳವಾಗಿ ಅದೇ ಪ್ರಯೋಗಗಳನ್ನು ತೋರಿಸಬಹುದು ಎಂಬ ಸಾಧ್ಯತೆಯನ್ನು ತಿಳಿಸಿಕೊಟ್ಟರು. ಇದು ವಿಜ್ಞಾನ ಶಿಕ್ಷಕರಿಗೆ ತುಂಬಾ ಅವಶ್ಯವೆನಿಸಿತು.
(ಉದಾ: ಸಸ್ಯಗಳಲ್ಲಿ ಸ್ವಯಂವರ ಸಂಶೋಧನೆಯಲ್ಲಿ ಪರಾಗರೇಣುಗಳು ಅಂಡಪಾತ್ರೆಯ ಆಮ್ಲತೆಯನ್ನು ಕಡಿಮೆ ಮಾಡುತ್ತವೆ ಎನ್ನುವ ಅಂಶವನ್ನು ಸಂಶೋಧನಾ ಮಟ್ಟದಲ್ಲಿ ಸೂಕ್ಷ್ಮ ಉಪಕರಣಗಳನ್ನು ಬಳಸಿ ನಿಖರವಾಗಿ ಅಳೆಯಬೇಕಾಗುತ್ತದೆ. ಆದರೆ ಶಾಲೆಯಲ್ಲಿ ಲಿಟ್ಮಸ್ ಪರೀಕ್ಷೆಯಿಂದ ಅದನ್ನು ತೋರಿಸಬಹುದು) ಹೀಗೆ ಅವರೊಂದಿಗೆ ಮಾತನಾಡುತ್ತಾ ಹೋದಂತೆ ಶಿಕ್ಷಕರಾಗಿ ತರಗತಿ ಮಟ್ಟದಲ್ಲಿ ಮಾಡಬಹುದಾದ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ವಿಫುಲವಾದ ಮಾಹಿತಿ ದೊರೆಯುತ್ತಾ ಹೋಯಿತು. ಶಿಕ್ಷಕರಾಗಿ ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳಬೇಕಾದ ರೀತಿ, ಸಹೋದ್ಯೋಗಿಗಳ ಬಗ್ಗೆ ನಮ್ಮ ವರ್ತನೆ, ಇಡೀ ವ್ಯವಸ್ಥೆಯನ್ನು ನೋಡುವ ರೀತಿ, ಸರ್ವಾಂತರ್ಯಾಮಿಯಾದ ವಿಕಾಸವಾದವೇ ದೇವರು ಎಂಬ ನಿಲುವು ಹೀಗೆ ಹಲವು ಉನ್ನತಮಟ್ಟದ ಆಲೋಚನೆಗಳು ನಮ್ಮನ್ನು ಪ್ರೇರೇಪಿಸಿದವು. ಹೆಚ್ಚಿನ ವಿವರಗಳಿಗೆ ಸಂದರ್ಶನದ ವಿಡಿಯೋ ನೋಡಿ.
ವಿಜ್ಞಾನಿಯಾದವನು ಹೇಗೆ ತನ್ನ ಸುತ್ತಮುತ್ತಲ ಪರಿಸರದಿಂದ ಸಂಶೋಧನೆಗೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ವಿಷಯ ತಿಳಿಸಿದರು. ಬೇರೆ ಬೇರೆ ಓದು ಹೇಗೆ ಇದಕ್ಕೆ ನೆರವಾಗುತ್ತದೆ ಎಂಬುದನ್ನೂ ತಿಳಿಸಿದರು.
( ಉದಾ : ಖಗೋಳಶಾಸ್ತ್ರದ ಪುಸ್ತಕ Perfect Symmetry ಓದುತ್ತಿದ್ದಾಗ ಒಂದು ದಿನ ಹೊಂಗೆ ಮರದ ಕೆಳಗೆ ನಿಂತು ನೋಡಿದಾಗ ಇರುವೆಗಳಿಗೆ ಹೊಂಗೆ ಮರವೇ ಒಂದು ವಿಶ್ವದಂತೆ ಅಂತಹ ಮರದಲ್ಲಿ ಅದು ಸುತ್ತಾಡಿ ಹೇಗೆ ತನ್ನ ಗೂಡಿಗೆ ಮರಳುತ್ತದೆ ಎಂಬ ಪ್ರಶ್ನೆ ಮೂಡಿ ಆ ಬಗೆಗೇ ಸಂಶೋಧನೆ ಕೈಗೊಂಡದ್ದು )
ವಿಜ್ಞಾನಿ ಅಥವಾ ಯಾವುದೇ ವ್ಯಕ್ತಿ ಹೇಗೆ ಉತ್ತಮ ಆಡಳಿತಗಾರನೂ, ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಹೇಗೆ ಉತ್ತಮ ಸಂವಹನಕಾರನೂ ಆಗಿರಬೇಕು ಎಂದು ತಿಳಿಸಿದರು.
( ಉದಾ: ಪಶ್ಚಿಮ ಘಟ್ಟಗಳ ಸಸ್ಯಸಂಪತ್ತಿನ ಮೌಲ್ಯಮಾಪನ , ನಕ್ಷೆ ತಯಾರಿ ಕಾರ್ಯ ಅಸಾಧ್ಯ, ಅಪ್ರಾಯೋಗಿಕ ಎಂದು ಒಪ್ಪಿಗೆ ನೀಡದಿದ್ದಾಗ ಈಜಿಪ್ಟನ ಗೀಜಾ ಪಿರಮಿಡ್ ತೋರಿಸಿ, ಅಂದು ಅದು ಸಾಧ್ಯವಾದರೆ ಇಂದು ಇದು ಅಸಾಧ್ಯವಲ್ಲ ಎಂದು ತಾರ್ಕಿಕವಾಗಿ ವಾದ ಮಾಡಿ ಒಪ್ಪಿಗೆ ಪಡೆದು ಆ ಸರ್ವೆಯಲ್ಲಿ ಯಶಸ್ವಿಯಾದದ್ದು ) ಜೀವ ಸಂಪದ ಮತ್ತು ಸಸ್ಯ ಸಂಪದ ಎಂಬ CD ಗಳು ಲಭ್ಯವಿದ್ದು ಆಸಕ್ತ ಶಿಕ್ಷಕರು ಅವನ್ನು ಪಡೆದು ತರಗತಿಗಳಲ್ಲಿ ಬಳಸಬಹುದು.
“ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಮಾತು ಅನುಭವಕ್ಕೆ ನಿಲುಕಿದ ಸಂದರ್ಶನ ಇದಾಗಿತ್ತು. ಅವರ ವಿಶಾಲ ಮನೋಭಾವ, ವೈಜ್ಞಾನಿಕ ಚಿಂತನೆ, ಸತ್ಯಾನ್ವೇಷಣೆ, ಸಕಾರಾತ್ಮಕತೆ, ನಮಗೆ ದೊರೆತ ದೊಡ್ಡ ಕೊಡುಗೆಯಾಯಿತು. ಅವಕಾಶ ಸಿಕ್ಕಾಗ ಶಿಕ್ಷಕರೊಂದಿಗೆ ಮಾತನಾಡಲು ಪ್ರೀತಿಯಿಂದ ಒಪ್ಪಿಕೊಂಡರು, “ಏರಿದವನು ಸಣ್ಣವನಿರಲೇಬೇಕೆಲೆ ಎಂಬ ಮಾತನು ಸಾರುವನು” ಎಂಬ ಮಾತಿನ ಸಾಕಾರ ಮೂರ್ತಿಯಂತೆ ಕಂಡರು. ಕೊನೆಗೆ ತಾವೆ ಕಾಫಿ ಮಾಡಿ ನಮಗೆಲ್ಲಾ ನೀಡಿದರು “ಪ್ರೀತಿಯ ಸಹಜಗೆ, ಸಸ್ಯಸಗ್ಗಕ್ಕೆ ನೀನೂ ಪ್ರವೇಶ ಪಡೆಯುವೆ ಎಂದು ಹಾರೈಸುತ್ತಾ” ಎಂದು ಹರಸಿ Autograph ನೀಡಿ ಬೀಳ್ಕೊಟ್ಟರು.ಅವರ ಮಾತುಗಳಲ್ಲೇ ಹೇಳಬೇಕೆಂದರೆ ಇರುವೆಗೆ ಹೊಂಗೆ ಮರವೊಂದು ವಿಶಾಲ ವಿಶ್ವದಂತೆ, ನಾನೊಂದು ಇರುವೆ ಅವರೊಂದು ವಿಶಾಲ ವೃಕ್ಷ, ಸಂಪೂರ್ಣ ಪರಿಚಯ ನೀಡಿದ್ದೇನೆಂಬ ವಿಶ್ವಾಸವಿಲ್ಲ. ಎಲ್ಲಾ ಓದುಗರಲ್ಲಿ ಕಳಕಳಿಯ ಮನವಿ ಅವರ ಸಸ್ಯಸಗ್ಗ ತಪ್ಪದೆ ಓದಿ. ಇತರ ಪುಸ್ತಕಗಳನ್ನೂ ಓದಿ. NCF ನ ಆಶಯ Integrated Learning ಗೆ ತುಂಬಾ ಅನುಕೂಲವಾಗುತ್ತದೆ. ನಾವು ಅವರ ಮನೆಯಿಂದ ಹೊರಟೆವು. ಅವರು ನಮ್ಮ ಮನದಲ್ಲಿ ಮನೆ ಮಾಡಿದರು.
ವಿಜಯಕುಮಾರ್. ಹೆಚ್.ಜಿ
ಸಹಶಿಕ್ಷಕರು
ಸ.ಪ್ರೌ.ಶಾಲೆ, ಕಾವಲ್ ಭೈರಸಂದ್ರ,
ಬೆಂಗಳೂರು ಉತ್ತರ ವಲಯ - 03
ಡಾ//ಗಣೇಶಯ್ಯ ಸರ್ ಅವರೊಂದಿಗೆ ಸಂವಾದ ನಡೆಸುವ ಸದಾವಕಾಶ ನಿಮ್ಮಿಂದ ದೊರೆಯಿತು, ಧನ್ಯವಾದಗಳು.ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ ಅಭಿನಂದನೆಗಳು ಸರ್
ReplyDeleteThank you sir
ReplyDeleteಲೇಖನ ತುಂಬಾ ಚೆನ್ನಾಗಿದೆ. ಶ್ರೀ ಗಣೇಶಯ್ಯನವರ ಬಗೆಗೆ ತಿಳಿಯದವರಿಗೂ ಸಹ ಅವರ ಸಾಧನೆಯ ಬಗ್ಗೆ ಕಿರು ಪರಿಚಯ ಮೂಡಿಸಿರುವ ರೀತಿ ಆಸಕ್ತಿದಾಯಕವಾಗಿದೆ.
ReplyDeleteNice
ReplyDeleteಉತ್ತಮ ಕೃತಿ, ಅತ್ಯುತ್ತಮ ಲೇಖಕ
ReplyDelete"ಸಸ್ಯ ಸಗ್ಗ" ವನ್ನು ಇತ್ತೀಚೆಗಷ್ಟೇ ಓದಿ ಮುಗಿಸಿದ್ದೆ. ಮೂಲತಃ ಪ್ರಾಣಿಶಾಸ್ತ್ರದ ವಿದ್ಯಾರ್ಥಿಯಾದರೂ ಕೂಡ ಆ ಪುಸ್ತಕವನ್ನು ಓದಿ ಆನಂದಿಸಿದ್ದೆ. ಈಗ ಅವರ "ದಿವ್ಯ ಸುಳಿ" ಪುಸ್ತಕವನ್ನು ಓದಲು ಪ್ರಾರಂಭಿಸಿದ್ದೇನೆ.
ReplyDeleteನಿಮ್ಮ ಈ ಲೇಖನವು ಅತ್ಯುತ್ತಮವಾಗಿ ಮೂಡಿ ಬಂದಿದೆ.
ಎ. ಸುಧೀಂದ್ರ ಹೆಬ್ಬಾರ್, ಜೀವಶಾಸ್ತ್ರ ಉಪನ್ಯಾಸಕರು, ಶ್ರೀ ರಾಮಕೃಷ್ಣ ವಿದ್ಯಾಶಾಲಾ, ಯಾದವಗಿರಿ, ಮೈಸೂರು
ತುಂಬಾ ಚೆನ್ನಾಗಿದೆ ಲೇಖನ. ಸಂದರ್ಶಕರು&ಲೇಖಕರು ತಮ್ಮೊಟ್ಟಿಗೆ ನಮ್ಮನ್ನೂ ಗಣೇಶಯ್ಯನವರ ಮನೆಗೆ ಕರೆದುಕೊಂಡು ಹೋದ ಅನುಭವವಾಯಿತು. ಧನ್ಯವಾದಗಳು ಸರ್.
ReplyDeleteNice👍
ReplyDeleteವ್ಯವಸಾಯ ಶಾಸ್ತ್ರದಲ್ಲಿ ಪಿಹೆಚ್.ಡಿ. ಪದವಿಧರನಾಗಿರುವ ನನಗೆ ಕಾಲೇಜು ದಿನಗಳಿಂದಲೂ ಡಾ. ಗಣೇಶಯ್ಯನವರ ಬಗ್ಗೆ ಗೊತ್ತು.ಅವರ ತಜ್ಞಕ್ಷೇತ್ರದ ಸಾಧನೆಯ ಜೊತೆಗೆ ಕನ್ನಡದಲ್ಲಿ ಅವರಿಂದ ರಚಿತವಾಗಿರುವ ವೈಜ್ಞಾನಿಕ ಕೃತಿಗಳು ನಿಜಕ್ಕೂ ಕನ್ನಡದ ಮೇರು ಕೃತಿಗಳು.
ReplyDeleteThis comment has been removed by the author.
ReplyDeleteವಿಜಯ್, ಸಸ್ಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮಾಡಿ ಅತ್ಯುತ್ತಮ ಕೃತಿಗಳನ್ನು ಓದುಗರಿಗೆ ನೀಡಿದ ಡಾ.ಗಣೇಶಯ್ಯನವರ ಜೊತೆಗಿನ ನಿಮ್ಮ ಸಂದರ್ಶನದ ಸಾರ ಅದ್ಭುತವಾದ ಲೇಖನವಾಗಿ ಹೊರಹೊಮ್ಮಿದೆ. ಅವರು ನಿಲುಕದ ನಕ್ಷತ್ರವಲ್ಲ, ಸರಳ ಸಜ್ಜನ ಜ್ಞಾನಸೂರ್ಯ ಎಂದು ತಿಳಿದು ಹೆಮ್ಮೆಯೆನಿಸಿತು, ಅಭಿಮಾನ ಮೂಡಿತು.ಇಂತಹ ಮಹನೀಯರನ್ನ ಭೇಟಿಯಾಗಿ, 'ಸವಿಜ್ಞಾನ' ಕ್ಕಾಗಿ ಮಾತುಕತೆ ನಡೆಸುವ ಸದಾವಕಾಶ ದೊರಕಿದ್ದು ನಿಮ್ಮೆಲ್ಲರ ಸೌಭಾಗ್ಯ! ಸರ್ ಅವರ ಬಗ್ಗೆ ನನಗೆ ಮೊದಲು ತಿಳಿದದ್ದು ಬಹಳ ಕಡಿಮೆ, ಈಗ ನಿಮ್ಮ ಲೇಖನ ಓದಿ ಅವರ ಜೀವನ-ಸಾಧನೆ ಬಗ್ಗೆ ಸವಿವರವಾಗಿ ತಿಳಿಯುವಂತಾಯ್ತು. ನಿಮ್ಮ ಮನದಲ್ಲಿ ಮನೆ ಮಾಡಿದ ಅವರು ಈಗ ನಮ್ಮ ಮನದಲ್ಲೂ! ನಮ್ಮ ಕನ್ನಡದಲ್ಲಿ ರಚಿಸಿದ ಅವರ ವೈಜ್ಞಾನಿಕ ಕೃತಿಗಳನ್ನು ಓದಲು ಪ್ರಾರಂಭಿಸುವೆ 😊 ಡಾ.ಗೀತಾ ಪಾಟೀಲ, ಕಲಬುರಗಿ
ReplyDeleteತುಂಬಾ ಸಂತೋಷ, ನೀವು ಹೇಳಿದಂತೆ ನಮ್ಮ ಭಾಗ್ಯವೇ ಸರಿ, ಅವರ ಗುಣ ಮತ್ತು ಸಾಧನೆ ದೊಡ್ಡದು, ಅವರ ಓದೇ ಮಾರ್ಗದರ್ಶನ, ಅದು ನಮಗೆಲ್ಲಾ ಸಿಗಲಿ.
Deleteನಿಜ ನೀವು ಹೇಳಿದಂತೆ ಅದು ನಮ್ಮ ಭಾಗ್ಯ. ಗಣೇಶಯ್ಯನವರ ಗುಣ,ಸಾಧನೆ ದೊಡ್ಡದು, ಆದರ್ಶ
ReplyDeleteಪುಣ್ಯಾವಂತರು ನೀವು ದರ್ಶನ ಭಾಗ್ಯ ಪಡೆದುಕೊಂಡಿರಿ 👌
ReplyDelete😊🙏🙏🙏
ReplyDeleteಒಬ್ಬ ಉತ್ತಮ ವಿಜ್ಞಾನಿಯ ಪರಿಚಯ ನನಗೆ ಹಲವು ವಿಚಾರಗಳಿಗೆ ಸ್ಪೂರ್ತಿ ನೀಡಿತು. ಉತ್ತಮ ಲೇಖನ. ನಿರೂಪಣೆ ಸೊಗಸಾಗಿದೆ.
ReplyDelete