ಒಲೆ ಹತ್ತಿ ಉರಿದರೆ ನಿಲ್ಲಬಹುದು, ಧರೆ ಹತ್ತಿ ಉರಿದರೆ ......
ಪರಮೇಶ್ವರಯ್ಯ ಸೊಪ್ಪಿನಮಠ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹಗರಿಬೊಮ್ಮನಹಳ್ಳಿ
ಬಳ್ಳಾರಿ(ಜಿ)-583212
ಸೆಪ್ಟೆಂಬರ್ ಮೊದಲ ವಾರದಲ್ಲಿ, ಭೂಮಿ ಮರಳುಗಾಡು ಆಗುವುದನ್ನು ತಡೆಯುವ ಕುರಿತಂತೆ ವಿಶ್ವಸಂಸ್ಥೆಯ
ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ 14ನೇ
ಶೃಂಗಸಭೆಯ (conference of parties) ಆಯೋಜಿಸುವ ಭಾಗ್ಯ ಭಾರತಕ್ಕೆ ಒಲಿದು ಬಂದಿತ್ತು.
ಈ ಶೃಂಗಸಭೆಯಲ್ಲಿ ಅತಿಹೆಚ್ಚು ದೇಶಗಳು ಭಾಗವಹಿಸಿದ್ದವು. ಭೂ ಸವಕಳಿಯನ್ನು ತಡೆಯುವ ಅಥವಾ
ಅದನ್ನು ಪೂರ್ವ ಸ್ಥಿತಿಗೆ ಮರಳಿಸುವ ಜಾಗತಿಕ ಬದ್ಧತೆಯ ಕುರಿತು ಇನ್ನಾದರೂ ಎಲ್ಲರೂ ಗಂಭೀರವಾಗಿ
ಯೋಚಿಸಬೇಕು ಎನ್ನುವ ಆಶಯವನ್ನು ಈ ಸಭೆ ಪ್ರತಿಧ್ವನಿಸಿತು.
ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ನಮ್ಮ ಪ್ರಧಾನಮಂತ್ರಿಗಳು, ಭಾರತದ ಸಂಸ್ಕೃತಿಯಲ್ಲಿ ಭೂಮಿಗೆ ಅತ್ಯಂತ ಪವಿತ್ರ ಸ್ಥಾನವಿದೆ ಮತ್ತು ಅದನ್ನು ನಾವು ತಾಯಿಯ ರೂಪದಲ್ಲಿ ಗೌರವಿಸುತ್ತೇವೆ ಎಂದು ನುಡಿದರು. ಹವಾಮಾನ ಮತ್ತು ಪರಿಸರ ಎರಡೂ ನಮ್ಮ ಜೈವಿಕ ವೈವಿಧ್ಯತೆ ಮತ್ತು ಭೂಮಿಯ ಮೇಲೆ ಬೀರುತ್ತಿರುವ ಪರಿಣಾಮ, ಅದರಿಂದಾಗುವ ಅನಾಹುತಗಳತ್ತ ಅವರು ತಮ್ಮ ಮಾತಿನಲ್ಲಿ ಹೆಚ್ಚು ಗಮನ ಸೆಳೆದರು. ಭೂಮಿ ಮತ್ತು ಗಿಡಮರಗಳು ಹಾಗೂ ಪ್ರಾಣಿಗಳು ಅಳಿವಿನ ಅಂಚಿಗೆ ತಲುಪಿರುವುದು, ಪ್ರಕೃತಿಯ ಅಸಮತೋಲನ, ಇವು ಭೂಮಿಗೂ ಸಂಕಟ ತಂದಿದೆ. ಸಮುದ್ರದಲ್ಲಿ ನೀರಿನ ಮಟ್ಟದ ವ್ಯತ್ಯಾಸ, ಬಿರುಗಾಳಿಯಿಂದ ಕೂಡಿದ ಭಾರಿ ಮಳೆ, ಬಿಸಿ ಉಷ್ಣಾಂಶದಿಂದ ಉಂಟಾಗುವ ಮರಳಿನ ಬಿರುಗಾಳಿ, ಹಾಗೂ ಜಗತ್ತಿನ 23 ರಾಷ್ಟ್ರಗಳ ಭೂಮಿ ಮರುಭೂಮಿಯಾಗುತ್ತಿರುವ ಕುರಿತಾದ ಕಳವಳವನ್ನು ಅವರು ತಮ್ಮ ಭಾಷಣದಲ್ಲಿ ತೋರಿದರು.
ಪ್ರಧಾನ ಮಂತ್ರಿಗಳು ಈ ಸಂದೇಶ ಸಾರಲು
ಅನೇಕ ಕಾರಣಗಳಿದ್ದವು. ಮನು ಸಂಕುಲ ಅತ್ಯಂತ ಅಪಾಯಕಾರಿ ಸ್ಥಿತಿಗೆ ಬಂದು ನಿಂತಿದೆ. ನಾವೆಲ್ಲ
ಒಂದಾಗಿ ಕ್ರಮ ಕೈಗೊಳ್ಳದಿದ್ದರೆ ಹವಾಮಾನ ಬದಲಾವಣೆಯಿಂದಾಗಿ, ಇಡೀ ಭೂ ಮಂಡಲವೇ ಧೂಳೀಪಟವಾಗುತ್ತದೆ.
ಭವಿಷ್ಯ ಮತ್ತು ಭದ್ರತೆ ಇಲ್ಲದಂತಾಗಿ, ಮುಂದೆ ಭೂಮಿಯ ಈ ಸ್ಥಿತಿಗೆ ನಾವು ಕಾರಣ ಹೌದು ಅಲ್ಲವೇ ಎಂದು ಚರ್ಚೆ ಮಾಡುತ್ತಾ ಕೂರುವಷ್ಟು
ಸಮಯ ನಮಗಿರುವುದಿಲ್ಲ. ತುರ್ತಾಗಿ ಇದರ ಬಗ್ಗೆ ಜಾಗೃತಿ ಮೂಡಿಸಿ ಕ್ರಮ ಕೈಗೊಳ್ಳಬೇಕು. ಈ ಅಂಶಗಳೇ
ಎಲ್ಲಾ ದೇಶಗಳ ಒಗ್ಗೂಡುವಿಕೆ ಮತ್ತು ಒತ್ತಾಯಕ್ಕೆ ಪ್ರಮುಖ ಕಾರಣವಾಗಿದ್ದವು.
ಮುಂದುವರೆದ ದೇಶಗಳು ಒಪ್ಪಂದದ ನಿಯಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಮೇರಿಕದಲ್ಲಿ ಕೇವಲ ಶೇಕಡ ಎರಡರಷ್ಟು ತೈಲ ನಿಕ್ಷೇಪವಿದೆ. ಆದರೆ ಅದು ಶೇ25ರಷ್ಟು ತೈಲವನ್ನು ದೇಶದ ಸಾರಿಗೆಗೆ ನೀರಿನಂತೆ ಖರ್ಚು ಮಾಡುತ್ತಿದೆ. ಯುರೋಪ್ ದೇಶಗಳು ಹಾಗೂ ಜಪಾನ್ ದೇಶ ಕೂಡ ಇದೇ ಹಾದಿಯಲ್ಲಿವೆ. ಜಾಗತಿಕ ಪ್ರಭಾವದಿಂದಾಗಿ ಹಾಗೂ ದುಂದುಬಳಕೆಯಿಂದಾಗಿ, ಪಾಶ್ಚಾತ್ಯ ದೇಶಗಳಲ್ಲಿ ಯಂತ್ರಗಳ ನೆರವಿಲ್ಲದೆ ಕೈಕಾಲು ಆಡಿಸುವುದು ಕಷ್ಟ ಎಂಬ ಸ್ಥಿತಿಗೆ ಅವರು ಬಂದು ತಲುಪಿದ್ದಾರೆ. ಇದನ್ನೇ ಅವರು ಅಭಿವೃದ್ಧಿ ಎಂಬ ಹೆಸರಲ್ಲಿ ಕರೆಯುತ್ತಾರೆ. ಚೀನಾ, ಭಾರತ, ಬ್ರೆಜಿಲ್ ಮುಂತಾದ ಮುಂದುವರೆಯುತ್ತಿರುವ ದೇಶಗಳು ಅಮೇರಿಕಕ್ಕೆ ಸರಿಸಾಟಿಯಾದ ಪ್ರಗತಿ ಸಾಧಿಸಲು, ಪೆಟ್ರೋಲಿಯಂ ಆಮದಿಗೆ ಹಾಗೂ ನಿಕ್ಷೇಪ ಶೋಧ ಕಾರ್ಯಗಳಲ್ಲಿ ತೊಡಗಿವೆ.
ಭೂಮಿಯ ರಕ್ಷಣೆಯ ಮಾತು ಬಂದಾಗ, ನಮ್ಮೆಲ್ಲ ಕಣ್ಣು ಹಿಮಗಳಿಂದ ಹೊದ್ದಿರುವ ಧ್ರುವ ಪ್ರದೇಶಗಳ ಕಡೆ ವಾಲುತ್ತದೆ. ಸಮಾನ್ಯವಾಗಿ ಭೂಮಿಯ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ 160ರಿಂದ 200ಪಿ.ಪಿ.ಎಂ.ವರೆಗೆ ಇರಬೇಕು. ಆದರೆ, ಕಳೆದ 130 ವರ್ಷಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ 380ಪಿ.ಪಿ.ಎಂ.ಗೆ ಏರಿಕೆಯಾಗಿದೆ. ಪೆಟ್ರೋಲಿಯಂ ವಸ್ತುಗಳನ್ನು ನಿರಂತರವಾಗಿ ಉರಿಸುತ್ತಿರುವುದೇ ಇದಕ್ಕೆ ಕಾರಣ. ಭೂಮಿಯ ಉಷ್ಣತೆ ನಿರಂತರವಾಗಿ ಏರುತ್ತಿದೆ. ಹಾಗಾಗಿ, ಕೋಟ್ಯಾಂತರ ವರ್ಷಗಳಿಂದ ಮಲಗಿ ಮೈತುಂಬಾ ಹೊದ್ದ ಹಿಮ ಸದ್ದಿಲ್ಲದೆ ಕರಗಿ ನೀರ್ಗಲ್‍ಗಳ ರೂಪದಲ್ಲಿ ಸಾಲುಗಟ್ಟಿ ಸಮುದ್ರಕ್ಕೆ ತೇಲಿ ಬರುತ್ತಿದೆ. ಹೀಗಾಗಿ ಸಮುದ್ರ ಮಟ್ಟ ನಿಧಾನವಾಗಿ ಏರುತ್ತಿದೆ. ಭೂಮಿಯ ಎಲ್ಲಾ ಖಂಡಗಳಲ್ಲಿ ಹವಾಮಾನ ಸಂಬಂಧಿ ದುರಂತಗಳು ಹೆಚ್ಚುವಂತಾಗಿದೆ.
ಆಶ್ಚರ್ಯಕರ ಸಂಗತಿ ಎಂದರೆ, ಪರಿಸರ ತಜ್ಞರು ಅಧಿಕವಾಗಿರುವ ಯುರೋಪ್ ಹಾಗೂ ಅಮೇರಿಕಾದಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ನೆರೆ ಹಾವಳಿಯ ರೂಪದಲ್ಲಿ, ಅತಿಯಾದ ಬಿಸಿಲಝಳ, ಅತಿಗಾಳಿ, ಅಗ್ನಿ ಪ್ರಳಯ, ಹಾಗೂ ಚಂಡ ಮಾರುತಗಳ ರೂಪದಲ್ಲಿ ಸಂಭವಿಸಿ ಹೊಸ ಕಾಯಿಲೆಗಳು ಹುಟ್ಟುವಂತೆ ಮಾಡಿವೆ. ಯುರೋಪ್ ಪರಿಸರ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ 1980ರ ದಶಕದಲ್ಲಿ ಹವಾಮಾನ ಸಂಬಂಧಿ ದುರಂತಗಳಿಗಿಂತ ದುಪ್ಪಟ್ಟು ದುರಂತಗಳು 1990ರಲ್ಲಿ ಘಟಿಸಿವೆ. 1990ರ ದಶಕವಂತೂ ಹಿಂದಿನ ಎಲ್ಲಾ ದಶಕಗಳ ದಾಖಲೆಗಳನ್ನು ಅಳಿಸಿ ಹಾಕಿದೆ. 2002 ಮತ್ತು 2003ರಲ್ಲಿ ಪ್ರಕೃತಿ ವಿಕೋಪಗಳು ಇನ್ನೂ ಹೆಚ್ಚಾಗಿ ಯುರೋಪಿನಲ್ಲಿ ಅತಿಯಾದ ಬಿಸಿಲ ಝಳದಿಂದ ಸರಾಸರಿ 20 ಸಾವಿರ ಜನ ಸತ್ತಿದ್ದಾರೆ. 1997-98ರಲ್ಲಿ ಎಲ್‍ನಿನೊ ಹಾವಳಿಯಿಂದ ಭೂಖಂಡಗಳಲ್ಲಿ ಅನೇಕ ಕಡೆ ಅರಣ್ಯಗಳಿಗೆ ಬೆಂಕಿ, ಅತಿವೃಷ್ಠಿ, ಬರಗಾಲ, ಚಂಡಮಾರುತಗಳು ತೀವ್ರ ಹಾನಿ ಮಾಡಿವೆ. ಚಂಡಮಾರುತಗಳು ಭೂಮಿ ಬಿಸಿಯಾಗಿರುವುದರ ಸಂಕೇತವಾಗಿವೆ. ಸಮುದ್ರದ ನೀರು ಬಿಸಿಯಾದಂತೆಲ್ಲ ಚಂಡಮಾರುತಗಳ ತೀವ್ರತೆ ಹೆಚ್ಚುತ್ತದೆ ಎಂದು ವಿಜ್ಞಾನಿಗಳ ಎಚ್ಚರಿಸುತ್ತಿದ್ದರೂ ನಮ್ಮ ಕಿವಿಗಳಿಗೆ ಅದು ಮುಟ್ಟುತ್ತಿಲ್ಲ.
ಕೆಲ ವರ್ಷಗಳ ಹಿಂದೆ ಏಷ್ಯಾ ಖಂಡದಲ್ಲಿ ಜಲ ಪ್ರಳಯವು ಸಂಭವಿಸಿದಾಗ ಯುರೋಪಿನ ಹಲವು ರಾಷ್ಟ್ರಗಳು ಬಿಸಿಲಿನ ಝಳದಿಂದಾಗಿ ಕಾಡ್ಗಿಚ್ಚಿನ ಹಾವಳಿ ಅನುಭವಿಸಿದವು. ದಕ್ಷಿಣ ಅಮೇರಿಕದ ದೇಶಗಳು ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದ ಬರಗಾಲವನ್ನು ಎದುರಿಸಿದವು. ಹವಾಮಾನದ ಈ ಅವಾಂತರದಿಂದಾಗಿ ಜಗತ್ತಿನಲ್ಲಿ ಬೇಳೆ ಕಾಳುಗಳ ಮತ್ತು ಅಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸಾಕಷ್ಟು ಕಡಿಮೆಯಾಗಿದೆ. ಇದರಿಂದಾಗಿ, ಮುಂಬರುವ ದಿನಗಳಲ್ಲಿ ಪ್ರೋಟೀನ್ ಕೊರತೆಯಿಂದ ನಾನಾ ಬಗೆಯ ಖಾಯಿಲೆಗಳು ಹಬ್ಬಲಿವೆ. ಸ್ವೀಡನ್ ದೇಶದಲ್ಲಿ ಚಳಿ ಪ್ರಮಾಣ ಕಡಿಮೆಯಾದ್ದರಿಂದ ಮಂಗನ ಕಾಯಿಲೆಗೆ ಕಾರಣವಾದ ರೋಗವಾಹಕ ತಿಗಣೆಗಳು ಕಾಲಿಟ್ಟಿವೆ. ಇಟಲಿಯ ಜಿನೇವಾ ಸಮುದ್ರ ತೀರದಲ್ಲಿ ರೋಗಕಾರಕ ಸೂಕ್ಷ್ಮ ಪಾಚಿಗಳು ಪತ್ತೆಯಾಗಿವೆ.
ನಮ್ಮ ಕೇರಳದ ಕಡಲ ತೀರದಲ್ಲಿ ಎಂದೂ ಇಲ್ಲದ ಕೆಂಪು ಪಾಚಿಗಳು ತೇಲಿ ಬಂದಿವೆ. ಅಮೇರಿಕಾದಲ್ಲಿ ಕಟ್ರೀನಾ ಚಂಡಮಾರುತ ಹಲವು ಸಮಸ್ಯೆಗಳನ್ನು ತಂದೊಡ್ಡಿತು. ಅಲ್ಲಿ ಮಡುಗಟ್ಟಿದ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ನೀರಿನಲ್ಲಿ ಪೆಟ್ರೋಲಿಯಂ, ಆಸಿಡ್, ಕಾರ್ಖಾನೆಯ ವಿಷ ವಸ್ತುಗಳು, ಕೊಳೆತ ಶವಗಳು, ಫ್ರಿಜ್‍ನಿಂದ ಸೋರಿದ ಆಹಾರ ವಸ್ತುಗಳು, ಚರಂಡಿ ದ್ರವ್ಯಗಳು, ಹಾಗೂ ನಾನಾ ಬಗೆಯ ತೈಲಗಳು ಸೇರಿ ಒಂದು ದೊಡ್ಡ ಕೂಪವೇ ನಿರ್ಮಾಣವಾಗಿದೆ. ಇಂತಹ ದುರ್ಬಲ ಸಂದರ್ಭದಲ್ಲಿಯೇ ಎಲ್ಲಾ ಬಗೆಯ ಪರಿಸರ ರಕ್ಷಣಾ ಕಾನೂನುಗಳಿಗೆ ಎಳ್ಳುನೀರು ಬಿಡುವಂತಹ ಸರ್ಕಾರದ ಅದೇಶಗಳು ಜಾರಿಯಾಗುತ್ತಿರುವುದು ವಿಷಾದನೀಯ.
ಮುಂದಿನ ದಿನಗಳಲ್ಲಿ ಭೂಮಿಯ ಬಿಸಿ ಹೆಚ್ಚಾದಂತೆ ಋತುಮಾನಗಳೆಲ್ಲ ಅನಿಶ್ಚಿತವಾಗುತ್ತವೆ. ಮಳೆ, ಚಳಿ, ಬಿಸಿಲಿನ ಪ್ರಖರತೆಯಲ್ಲಿ ಅನಿಶ್ಚಿತತೆ ಹಾಗೂ ಅನಿರ್ದಿಷ್ಟತೆ ಆವರಿಸುತ್ತದೆ. ಇತ್ತೀಚೆಗೆ ಕೊಡಗಿನಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಎಲ್ಲರೂ ನಡುಗಿ ಹೋಗಿದ್ದೇವೆ. ಇಂತಹ ಪರಿಣಾಮಗಳಿಂದ ಕೃಷಿ ವಲಯದ ಚಟುವಟಿಕೆಗಳು ಏರುಪೇರಾಗುವ ಸಾಧ್ಯತೆಗಳು ಹೆಚ್ಚು. ದೊಡ್ಡ ನಗರಗಳಲ್ಲಿ ನೀರಿನ ಪೂರೈಕೆ ಅಸಮರ್ಪಕವಾಗುತ್ತದೆ. ಸಮುದ್ರ ಮಟ್ಟ ಏರುವುದರಿಂದ ಕೆಲವೇ ಮೀಟರ್‍ಗಳ ಎತ್ತರವಿರುವ ಮಾಲ್ಡೀವ್ಸ್ ದ್ವೀಪಗಳು, ಕೆರಬೀಯನ್ ದ್ವೀಪ ಸಮೂಹಗಳು, ಫಿಜಿದ್ವೀಪಗಳು, ಕ್ರಿ.ಶ. 2050ರೊಳಗೆ ಮುಳುಗಿ ಹೋಗುವ ಸಾಧ್ಯತೆಗಳಿವೆ. ಹೀಗಾಗಿ, ಬಹುಸಂಖ್ಯೆಯಲ್ಲಿ ಜನರು ನಿರಾಶ್ರಿತರಾಗುವ ಸಾಧ್ಯತೆಗಳಿವೆ. ಹಿಮಾಲಯದ ತಪ್ಪಲುಗಳು, ಅಮೇಜಾನ್, ಜಾವ ದ್ವೀಪ ಸಮುಹಗಳು ಹಾಗು ನಮ್ಮ ಪಶ್ಚಿಮ ಘಟ್ಟಗಳು, ದಟ್ಟ ಅರಣ್ಯಗಳಿಂದ ಕೂಡಿವೆ. ಭೂಮಿಯ ಬಿಸಿ ಹೆಚ್ಚಾದಂತೆಲ್ಲ ಅರಣ್ಯಗಳಲ್ಲಿ ವಾಸಿಸುವ ಜೀವಿಗಳು ಅರ್ಧಕ್ಕರ್ಧ ನಾಶವಾಗುತ್ತವೆ. ಹೊಸ ಹೊಸ ಬಗೆಯ ರೋಗರುಜಿನಗಳು ಸೃಷ್ಟಿಯಾಗುತ್ತಾ ಆರೋಗ್ಯ ವ್ಯವಸ್ಥೆಗೆ ಸವಾಲೊಡ್ಡುತ್ತವೆ. ನೀರು, ಹಾಗೂ ಆಹಾರ, ಎರಡೂ ಅನಿಶ್ಚಿತವಾದಾಗ, ಯುದ್ಧ, ಕ್ಷಾಮ, ಸಾಮಾಜಿಕ ಕ್ಷೋಭೆ ಮುಂತಾದುವು ಹೆಚ್ಚಾಗುವ ಸಾಧ್ಯತೆಗಳಿವೆ.
ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ವರ್ಷಗಳ ಹಿಂದೆ ಅನೇಕ ನೈಸರ್ಗಿಕ ಕಾರಣಗಳಿಂದ ಭೂಮಿಯಲ್ಲಿ ಉಷ್ಣತೆ ಹೆಚ್ಚಾಗಿತ್ತು. ಆಗ ಹಿಮಬಂಡೆಗಳು ಕರಗಿ, ನೀರಾಗಿ ಸಮುದ್ರದ ಮಟ್ಟ ಆರು ಮೀಟರ್‍ಗಳವರೆಗೆ ಏರಿತ್ತು. ಅಂದು ಜನರಿಗೆ ಹೆಚ್ಚಿನ ಅಪಾಯ ಆಗಿರಲಿಲ್ಲ. ಏಕೆಂದರೆ, ಆಗ ಕರಾವಳಿ ತೀರದಲ್ಲಿ ಮನೆಗಳಿರಲಿಲ್ಲ. ಆದರೆ ಇಂದು?.
ನಿಸರ್ಗ ತನ್ನ ಸಮತೋಲನವನ್ನು ಕಳೆದುಕೊಳ್ಳಬಾರದು. ಪ್ರಕೃತಿಯ ಕಿರೀಟದಂತಿರುವ ಮಾನವನಿಗೆ ಸಾಗರದ ಮಧ್ಯ ಕಾಲುವೆಗಳನ್ನು ತೋಡಬಲ್ಲ ಕೌಶಲವಿದೆ. ಗಿಡಮರಗಳನ್ನು ಬೆಳೆಸಿ ಬರಗಾಲವನ್ನು ತಡೆಗಟ್ಟುವ ಶಕ್ತಿ ಇದೆ. ಕೃತಕ ಮಳೆಯಿಂದ ಕಾಡಿನ ಬೆಂಕಿಯನ್ನು ನಂದಿಸಬಲ್ಲ ಸಾಮರ್ಥ್ಯವಿದೆ. ಆದರೆ, ಮಾನವನೇ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದ್ದಾನೆ. ಭೂಮಿಯ ತಳಭಾಗದ ಪೆಟ್ರೋಲ್ ಹೊರತೆಗೆದು, ಹೆಚ್ಚಿನ ದುರ್ಬಳಕೆಯಿಂದ ಭೂಮಿಯ ಸರಾಸರಿ ಉಷ್ಣಾಂಶವನ್ನು ಹೆಚ್ಚಿಸಿ, ಧ್ರುವಗಳಲ್ಲಿನ ಹಿಮ ಬಂಡೆಗಳು ಬೆದರಿ, ಬೆವರುವಂತೆ ಮಾಡಿದ್ದಾನೆ.
ಅಪಾಯದ ಸಂಕೇತ ಎಲ್ಲಾ ದಿಕ್ಕುಗಳಲ್ಲಿ ಕಂಡುಬಂದಾಗ, ಸರಿಯಾಗಿ ಎದುರಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಒಂದುಗೂಡಿವೆ. ಪರಿಣಾಮವಾಗಿ 1988ರಲ್ಲಿ ವಿಶ್ವಮಟ್ಟದ ಮೊದಲ ಹವಾಗುಣ ಸಮಾವೇಶ ನಡೆಯಿತು. ಇದರ ಕೂಲಂಕಷ ಅಧ್ಯಯನಕ್ಕೆ ವಿಶ್ವಸಂಸ್ಥೆ ನೂರಾರು ದೇಶಗಳಿಂದ ಆಯ್ದ 450ಕ್ಕು ಹೆಚ್ಚು ವಿಜ್ಞಾನಿಗಳನ್ನು ಒಳಗೊಂಡ ಐ.ಪಿ.ಸಿ.ಸಿ. ಹೆಸರಿನ ಅಧ್ಯಯನ ಮಂಡಲಿಯೊಂದನ್ನು ರಚಿಸಿದೆ. ಈ ತಜ್ಞರು ಭೂ ಚರಿತ್ರೆಯನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದರು. ಆಕಾಶ, ಪಾತಾಳಗಳಲ್ಲಿ ಸಮೀಕ್ಷೆ ನಡೆಸಿದರು. ವಾಯು ಮಂಡಲದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಳೆದ 50 ವರ್ಷಗಳಿಂದ ಹೆಚ್ಚುತ್ತಿರುವುದರಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ ಎಂದು ಘೋಷಿಸಿದರು. ಭೂಮಿಯಿಂದ ಕಲ್ಲಿದ್ದಲು ಮತ್ತು ಪೆಟ್ರೋಲ್‍ಅನ್ನು ಅತಿ ದೊಡ್ಡ ಪ್ರಮಾಣದಲ್ಲಿ ತೆಗೆಯುತ್ತ ಹೈಟೆಕ್ ಕೃಷಿ, ಹೈಟೆಕ್ ಸಂಚಾರ, ಹೈಟೆನ್ಷನ್ ವಿದ್ಯುತ್‍ನ ಅತಿ ಬಳಕೆ ಮಾಡಿದ್ದೇ ಇದಕ್ಕೆ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು.
ಅದರ ನಂತರ, ಜಪಾನಿನಲ್ಲಿ ಶೃಂಗ ಸಭೆ ನಡೆಸಿದ ಶ್ರೀಮಂತ ರಾಷ್ಟ್ರಗಳೆಲ್ಲ ಕ್ಯೂಟೋ ಒಪ್ಪಂದಕ್ಕೆ 1997ರಲ್ಲಿ ಸಹಿ ಹಾಕಿದವು. ಅದರಲ್ಲಿ ತುಸುಮಟ್ಟಿಗೆ (ಶೇ. 5 ರಷ್ಟು) ಕಾರ್ಬನ್ ಡೈಆಕ್ಸೈಡ್ ಕಡಿಮೆ ಮಾಡುವುದಾಗಿ ಘೋಷಿಸಿವೆ. ಈ ಒಪ್ಪಂದಕ್ಕೆ, ಅಮೇರಿಕ ಮತ್ತು ಆಸ್ತ್ರೇಲಿಯಾ ದೇಶಗಳು ಸಹಿ ಹಾಕಲಿಲ್ಲ. ಭಾರತ, ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಒಪ್ಪಂದಕ್ಕೆ ಬದ್ಧವಾಗಬೇಕೆಂದು ಹಟ ಹಿಡಿದವು. ಇನ್ನೊಂದೆಡೆ, ಬಲಾಢ್ಯ ತೈಲ ಕಂಪನಿಗಳು ಭೂಮಿ ಬಿಸಿಯಾಗುತ್ತಿರುವುದು ಮನುಷ್ಯನಿಂದಲ್ಲ ಎಂದು ಸಾರತೊಡಗಿದುವು. ಈ ನಡುವೆ, ಶ್ರೀಮಂತ ದೇಶಗಳ ಕಂಪನಿಗಳು ಬಂಡವಾಳ ಹೂಡಿಕೆಯ ಹೊಳೆ ಹರಿಸಿ ಚೀನಾ, ಭಾರತ, ಬ್ರೆಜಿಲ್, ಮೆಕ್ಸಿಕೊ, ದಕ್ಷಿಣ ಆಪ್ರೀಕಾ ದೇಶದ ಜನರನ್ನು ಆಧುನಿಕತೆಗೆ ದಾಸರಾಗಿಸಿದರು. ಈ ದೇಶಗಳಲ್ಲೂ ಶತಕೋಟಿ ಶ್ರೀಮಂತರ ಸಂಖ್ಯೆ ಹೆಚ್ಚಾಯಿತು. ಜನರಲ್ಲಿ ಕೊಳ್ಳು ಬಾಕತನ ವೃದ್ಧಿಯಾಯಿತು. ಕಾರು, ಮೆಟ್ರೋ, ಐಷಾರಾಮಿ ಹೋಟೆಲ್‍ಗಳನ್ನು ಕೊಂಡು ಬಿಸಾಡುವ ಪ್ರವೃತ್ತಿ ಬೆಳೆಯಿತು. ಹೀಗಾಗಿ ಕ್ಯೋಟೋ ಒಪ್ಪಂದ ಸಂಪೂರ್ಣವಾಗಿ ನಿರ್ಬಲವಾಯಿತು.
ಅಮೇರಿಕವನ್ನು ಸೇರಿಸಿಕೊಂಡು ಇನ್ನೊಂದು ಒಪ್ಪಂದ ಅಗಲೇಬೇಕೆಂದು 2008ರಲ್ಲಿ ಬಾಲಿ ಸಮ್ಮೇಳನದ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಫಲವೇ ಕೋಪನ್ ಹೇಗನ್‍ನಲ್ಲಿ ನಡೆದ ಹವಾಮಾನ ಶೃಂಗಸಭೆ, ವರ್ಷ ಒಂದಕ್ಕೆ ಹೊರಸೂಸುವ ಒಟ್ಟು ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ತೆಗೆದುಕೊಂಡಾಗ, ಚೈನಾ ವರ್ಷ ಒಂದಕ್ಕೆ 627 ದಶಲಕ್ಷ ಟನ್ ಕಾರ್ಬನ್ ಹೊರಸೂಸಿ ಮೊದಲಿನ ಸ್ಥಾನದಲ್ಲಿದೆ. ನಂತರದ ಮೂರು ಸ್ಥಾನಗಳಲ್ಲಿ ಅಮೇರಿಕಾ (5769ದಶಲಕ್ಷ ಟನ್), ರಷ್ಯ (1587 ದಶಲಕ್ಷ ಟನ್ ) ಹಾಗೂ ಭಾರತ (1324 ದಶಲಕ್ಷ ಟನ್) ಆಗಿವೆ. ಭೂರಕ್ಷಣೆಗೆ ವಿಜ್ಞಾನಿಗಳು ಕಾರ್ಬನ್ ಹೊರಸೂಸುವಿಕೆಯ ಈ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಕಾರ್ಬನ ಲೆಕ್ಕಾಚಾರವನ್ನು ಸರಳವಾಗಿ ಬಿಡಿಸಿ ಇಟ್ಟಿದ್ದಾರೆ.
ಅದರ ಪ್ರಕಾರ, ಭೂಮಿಯ ಮೇಲೆ ಬದುಕುಳಿಯಬೇಕೆಂದರೆ ಇಂದಿನಿಂದ 2050ವರೆಗೆ ಗರಿಷ್ಠ 750 ಶತಕೋಟಿ ಟನ್ ಕಾರ್ಬನ್ ಮಾತ್ರ ವಾತಾವರಣಕ್ಕೆ ಬಿಡಬಹುದು. ಈ ಕೋಟಾವನ್ನು ಭೂಮಿಯ ಮೇಲಿನ ಎಲ್ಲಾ ದೇಶಗಳಿಗೂ ಸಮನಾಗಿ ಹಂಚಿಕೊಳ್ಳಬೇಕು. ಹಾಗಾದಲ್ಲಿ ಅಮೇರಿಕಾ ದಿವಾಳಿ ಅಂಚಿಗೆ ಬರುತ್ತದೆ. ಅಂದರೆ, ಅದರ ಪಾಲು ಕೇವಲ 35 ಶತಕೋಟಿ ಕಾರ್ಬನ್ ಮಾತ್ರ ಯುರೋಪ್ ರಾಷ್ಟ್ರಗಳ ಕೋಟ ಮುಂದಿನ 12 ವರ್ಷಗಳಿಗೆ, ಬ್ರೆಜಿಲ್ 46 ವರ್ಷ ಹಾಗೂ ಭಾರತ ದೇಶದ ಕೋಟಾ 88 ವರ್ಷಗಳ ಕಾಲ ಈಗಿನ ಪ್ರಮಾಣದಲ್ಲಿ ಕಾರ್ಬನ ಹೊಗೆ ಹೊರ ಬಿಡಬಹುದಾಗಿದೆ. ಅಂತಹ ಸಮಯದಲ್ಲಿ ಅಮೇರಿಕದಂತಹ ಶಕ್ತಿವಂತ ರಾಷ್ಟ್ರಗಳು ಮುಂದಿನ 10 ವರ್ಷಗಳಲ್ಲಿ ಪೆಟ್ರೋಲ್ ಇಂಧನಕ್ಕೆ ಬದಲಾಗಿ ಪರ್ಯಯ ಶಕ್ತಿ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ. ಉಳಿದ ಸಮಯಕ್ಕೆ ಹೆಚ್ಚುವರಿ ಕೋಟಾ ಇರುವ ಬ್ರೆಜಿಲ್ ಮತ್ತು ಭಾರತದಂತಹ ರಾಷ್ಟ್ರಗಳಿಂದ ಖರೀದಿಸಬೇಕಾಗುತ್ತದೆ. ಅದಕ್ಕೆ ಪರಿಹಾರವಾಗಿ ಆ ಸಮಯದವರೆಗೆ ವಿದ್ಯುತ್ ಸಲಕರಣೆಗಳನ್ನು, ಅರಣ್ಯ ಬೆಳೆಸುವ ಖರ್ಚು-ವೆಚ್ಚಗಳನ್ನು ನೀಡಬೇಕಾಗುತ್ತದೆ. ಈ ನಿಯಮವನ್ನು ಅಮೇರಿಕಾ ಒಪ್ಪಿಕೊಳ್ಳುತ್ತಿಲ್ಲ. ಒಪ್ಪಿಕೊಳ್ಳುವುದೂ ಇಲ್ಲ.
ದೊಡ್ಡಣ್ಣನಾದ ಅಮೇರಿಕವು ಚೀನ, ಭಾರತ, ಬ್ರೆಜಿಲ್ ಹಾಗೂ ದಕ್ಷಿಣ ಆಪ್ರಿಕಾ ದೇಶಗಳನ್ನು ಶ್ರೀಮಂತ ರಾಷ್ಟ್ರಗಳ ಜೊತೆಗೆ ಸೇರಿಸಿ ಕಾನೂನು ರೀತಿ ಸಹಿ ಹಾಕಲು ಒತ್ತಾಯಿಸುತ್ತಿದೆ. ಇದರ ಫಲವಾಗಿ, ಜಾಗತಿಕ ರಂಗದಲ್ಲಿ ಎರಡು ಬಣಗಳಾಗಿವೆ. ಧನಿಕ ರಾಷ್ಟ್ರಗಳ ಗುಂಪು ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳ ಗುಂಪು. ಕೋಪನ್ ಹೇಗನ್ ಶೃಂಗ ಸಭೆಯಲ್ಲಿ ಈ ಗುಂಪುಗಳ ಮಧ್ಯ ಭಿನ್ನಮತ ಸರಿಪಡಿಸುವ ಯತ್ನದಲ್ಲೇ ಬಹು ಸಮಯ ಹಾಳಾಯಿತು. ಶೃಂಗ ಸಭೆಯ ಕೊನೆಯ ದಿನ, ಆತುರದಲ್ಲಿ ಬಿಕಟ್ಟು ಶಮನಗೊಳಿಸುವ ಭಾಗವಾಗಿ ಯುರೋಪ ದೇಶಗಳು ವಾತಾವರಣಕ್ಕೆ ಹೊರಬಿಡುವ ಕಾರ್ಬನ್ ಪ್ರಮಾಣವನ್ನು 2020ರಲ್ಲಿರುವುದಕ್ಕಿಂತ ಶೇ 20 ರಿಂದ 26ಕ್ಕೆ ಕಡಿಮೆ ಗೊಳಿಸುವುದಾಗಿ ಒಪ್ಪಿಗೊಂಡಿವೆ. ಭಾರತವೂ ಸಹ 2020ರಲ್ಲಿ ಹೊರಬಿಡುವ ಕಾರ್ಬನ್ ಪ್ರಮಾಣವನ್ನು ಶೇಕಡ 20 ರಿಂದ 25 ರಷ್ಟು, ಚೀನಾದೇಶ ಶೇಕಡ 40 ರಿಂದ 45 ರಷ್ಟು ಹಾಗೂ ಅಮೇರಿಕ ಕೇವಲ ಶೇಕಡ 17 ರಷ್ಟು ಕಡಿಮೆ ಮಾಡುವುದಾಗಿ ಘೋಷಿಸಿವೆ. ಒಟ್ಟಾರೆ, ಶೃಂಗಸಭೆಯ ಅಂತಿಮ ಒಪ್ಪಂದದ ಕರಡು ನಿಯಮ ಭೂ ರಕ್ಷಣೆಯ ದೃಷ್ಟಿಯಿಂದ ಭರವಸೆ ಮೂಡಿಸಿದೆ. ಈ ಸಭೆಯ ಯಶಸ್ಸು ಮುಂದಿನ 20 ವರ್ಷಗಳಲ್ಲಿ ಎಲ್ಲಾ ದೇಶಗಳು ವಾತಾವರಣಕ್ಕೆ ಹೊರಬಿಡುವ ಕಾರ್ಬನ್ ಪ್ರಮಾಣ ಕಡಿಮೆ ಮಾಡುವುದರ ಮೇಲೆ ಅವಲಂಬಿತವಾಗಿದೆ. ಇದರ ಮುಂದುವರೆದ ಭಾಗ ಎನ್ನುವಂತೆ, ಭೂಮಿ ಮರಳುಗಾಡು ಆಗುವುದನ್ನು ತಡೆಯುವ ಕುರಿತಂತೆ ವಿಶ್ವಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ 14ನೇ ಶೃಂಗಸಭೆ ಜರುಗಿದೆ.
ಇಷ್ಟೆಲ್ಲಾ ಚಿಂತನೆಗಳ ನಡುವೆಯೂ, ಅನೇಕ ದೇಶಗಳು ತಮ್ಮ ದೇಶದ ಭೂ ಪ್ರದೇಶದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳಿಗೆ ಶೋಧವನ್ನು ಮುಂದುವರೆಸಿವೆ. ಏಕೆಂದರೆ, ಪೆಟ್ರೋಲ್ ಅತಿ ಸುಲಭವಾಗಿ ಸಿಗುವ ಶಕ್ತಿ ಮೂಲ. ಮೇಲಾಗಿ ಪರ್ಯಾಯ ಶಕ್ತಿ ಮೂಲಗಳಾದ ಸೌರ್ಯಶಕ್ತಿ, ಪವನ ಶಕ್ತಿ, ಜೈವಿಕ ಅನಿಲ ಶಕ್ತಿಗಳ ಬಳಕೆ ಇನ್ನೂ ಪ್ರಾರಂಭದ ಹಂತದಲ್ಲಿವೆ. ಇನ್ನು ಆಯಾ ಭಾಗಗಳಲ್ಲಿ ಸಾಕಷ್ಟು ಸಂಶೋಧನೆಗಳು ಆಗಬೇಕಿದೆ. ಆದರೆ, ಸಂಪೂರ್ಣವಾಗಿ ಪೆಟ್ರೋಲ್‍ಅನ್ನು ತಿರಸ್ಕರಿಸಿ ಪರ್ಯಾಯ ಶಕ್ತಿಗಳ ಮೇಲೆ ಅವಲಂಬಿಸಲು ಸಾಧ್ಯವಿಲ್ಲ. ಈ ಅಂಶಗಳಿಂದ ಮುಂಬರುವ ವರ್ಷಗಳಲ್ಲಿ ಪೆಟ್ರೋಲ್ ಹೊಗೆಯ ಪ್ರಮಾಣವು ವಾತಾವರಣದಲ್ಲಿ ಕಡಿಮೆಯಾಗುವುದು ಕಷ್ಟ ಸಾಧ್ಯ. ಅದರಿಂದ, ಭೂಮಿಯ ತಾಪಮಾನ ಇನ್ನೂ ಹೆಚ್ಚುತ್ತದೆ. ಭೂಮಿ ಬಿಸಿ ಪ್ರಳಯದ ಹಾದಿಯಲ್ಲಿ ಸಾಗುವ ಸಾಧ್ಯತೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಇದರಿಂದ, ಪ್ರಕೃತಿ ವಿಕೋಪಗಳು ಹಾಗೂ ಅನಾಹುತಗಳು ಹೆಚ್ಚಾಗಿ ಮನುಕುಲದ ಉಳಿವಿಗೆ ಸಂಚಕಾರ ಬರಬಹುದು.
12ನೇ ಶತಮಾನದಲ್ಲಿಯೇ ಈ ಸತ್ಯ ಕಂಡುಕೊಂಡಿದ್ದ ಅಕ್ಕ ಮಹಾದೇವಿಯ “ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲ್ಲಲಾಗದು" ಎಂಬ ವಚನದ ಸಾಲನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂಬ ಮಾತು ಹಿಂದಿನಿಂದಲೂ ಕೇಳುತ್ತಿದ್ದೇವೆ. ಆದರೆ, ಆ ದಿಶೆಯಲ್ಲಿ ನಮ್ಮ ಪಯಣ ಮಾತ್ರ ಸಾಗುತ್ತಿಲ್ಲ. ಈಗಲಾದರೂ ಇರುವುದನ್ನು ಯಥಾಸ್ಥಿತಿಯಲ್ಲಿ ಕಾಪಾಡುವುದು ಒಂದು ಕಡೆಯಾದರೆ, ಇನ್ನೊಂದೆಡೆ ಅದನ್ನು ಮತ್ತಷ್ಟು ಸುಸ್ಥಿತಿಗೆ ತೆಗೆದುಕೊಂಡು ಹೋಗುವುದಾಗಿದೆ. ಈ ದಿಕ್ಕಿನಲ್ಲಿ ನಮ್ಮ ಪಯಣ ಸಾಗಿದರೆ ಮಾತ್ರ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುತ್ತದೆ.
very informative....
ReplyDelete