ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, November 4, 2021

ಮನಸೂರೆಗೊಳ್ಳುವ ನೀಲಕುರಿಂಜಿ ಲೋಕ

ಮನಸೂರೆಗೊಳ್ಳುವ ನೀಲಕುರಿಂಜಿ ಲೋಕ

ಡಿ. ಕೃಷ್ಣಚೈತನ್ಯ 

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

 

ಪ್ರತಿಯೊಬ್ಬ ನಿಸರ್ಗಾಸಕ್ತ, ಜೀವವಿಜ್ಞಾನಿ, ಸಸ್ಯಶಾಸ್ತ್ರಜ್ಞ ಅಷ್ಟೇ ಏಕೆ ಪ್ರತಿಯೊಬ್ಬ ಪ್ರವಾಸಿಯನ್ನು ಸೂಜಿಯಂತೆ ತನ್ನತ್ತ ಸೆಳೆಯುವ ಪುಷ್ಪಲೋಕ ಎಂದರೆ, ಅದುವೇ ಕುರಿಂಜಿ ಲೋಕ! ಮೊಗೆದಷ್ಟೂ ಸಿಗುವ ಜ್ಞಾನದ ಭಂಡಾರವನ್ನು ತನ್ನ ಅಂತರಾಳದಲ್ಲಿ ಹುದುಗಿಸಿಕೊಂಡಿರುವ ಗಿಡ ಎಂದರೆ, ಅದೇ ನೀಲಕುರಿಂಜಿ. ನೀಲಗಿರಿ ಎಂಬ ಅದ್ಭುತ ಹೆಸರನ್ನೇ ಗಿರಿಶ್ರೇಣಿಗೆ ಬರುವಂತೆ ಮಾಡಿದ ಸುಮ ಇದು. ಲೇಖನವನ್ನು ಓದಿದ ಅಥವಾ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬರನ್ನು ಮುಂದಿನ ಋತುವಿನವರೆಗೆ ಚಡಪಡಿಕೆಯಿಂದ ಕೂರುವಂತೆ ಸಂಮೋಹನಗೊಳಿಸುವ, ಅರಳಿದಾಗ ತನ್ನ ಜಾಗಕ್ಕೆ ಕೈಬೀಸಿ ಕರೆಯುವ ಅಮೋಘ ಗಿಡದ ಗಣಿಗೆ ನೀವೊಮ್ಮೆ ಭೇಟಿ ನೀಡಲು ಸಿದ್ಧರಿದ್ದೀರಾ? ಬನ್ನಿ, ಸ್ನೇಹಿತರೆ!

ನಮ್ಮ ದೇಶ ಜೀವವೈವಿದ್ಯತೆಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಅದೆಷ್ಟೋ ಜೀವಿಗಳನ್ನು ಜೀವಪ್ರಪಂಚಕ್ಕೆ ಪರಿಚಯಿಸಲು ಕಾದಿದೆ ಎಂದರೆ ಅಚ್ಚರಿಯಾಗುವುದಿಲ್ಲವೇ? ಹೌದು,  ಮನುಷ್ಯನಾಗಲಿ, ಜೀವಶಾಸ್ತ್ರಜ್ಞನಾಗಲಿ ಇನ್ನೂ ತಲುಪಲು ಸಾದ್ಯವಾಗದೇ ಇರುವ ಗಿರಿ-ಕಂದರಗಳನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡಿರುವ ಈ ಸ್ಥಳ, ಅಸಂಖ್ಯಾತ ಪ್ರಬೇಧಗಳನ್ನು ನಮಗೆ ಪರಿಚಯಿಸಿ ಅಚ್ಚರಿಗೊಳಿಸಿದೆ. ಅಂತಹ ಸಸ್ಯಗಳಲ್ಲಿ ಕುರಿಂಜಿಗಿಡವೂ ಒಂದು! ಪ್ರತೀ ವರ್ಷ ಜೂನ್ ತಿಂಗಳಿನಿಂದ ನಭದಲ್ಲಿ ಮೇಘ ಮಂದಾರ ಬಿಡಿಸಿದರೆ, ಕೆಲವು ವರ್ಷಗಳಿಗೊಮ್ಮೆ ಅಗಸ್ಟ್ ತಿಂಗಳಲ್ಲಿ ನೀಲಕುರಿಂಜಿ ಘಟ್ಟದಲ್ಲಿ ನೇರಳೆ ಬಣ್ಣದ ಹೂವುಗಳ ಹಾಸನ್ನು ರತ್ನಗಂಬಳಿಯಂತೆ ಹಾಸುವ ಮೂಲಕ ಭೂಮಿಯನ್ನು ರಮ್ಯಗೊಳಿಸುತ್ತದೆ.

ಚಿತ್ರ: ಹೂ ಅರಳುವ ಪ್ರಾರಂಭದಲ್ಲಿ

ಕಳೆದ ವರ್ಷ ಕೊಡಗಿನ ಕೋಟೆ ಬೆಟ್ಟದಲ್ಲಿ ಮತ್ತು ಈ ವರ್ಷ ಕೋಟೆಬೆಟ್ಟ ಮತ್ತು ಮಾಂದಲಪಟ್ಟಿ (ಸ್ಥಳೀಯವಾಗಿ ನಿಶಾನಿಮೊಟ್ಟೆ, ಅಂದರೆ ಮಂಗಳೂರಿನ/ ದಕ್ಷಿಣ ಕನ್ನಡದ ಕಡೆಯಿಂದ ಬರುತ್ತಿದ್ದ ಶತ್ರುಗಳನ್ನು ಪತ್ತೆಹಚ್ಚಲು ಬಾವುಟ ತೋರಿಸಿ, ಸೈನಿಕರನ್ನು ಎಚ್ಚರಿಸುತ್ತಿದ್ದ ಸ್ಥಳ! ನಿಶಾನೆ=ಬಾವುಟ, ಮೊಟ್ಟೆ=ಬೆಟ್ಟ, ಗುಡ್ಡ) ಕೇರಳದ ಮುನ್ನಾರ್ ಹಾಗೂ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ ಶ್ರೇಣಿಗಳ ಸಮತಟ್ಟಾದ ಇಳಿಜಾರಿನಲ್ಲಿ ಈ ಹೂ ಅರಳಿಸಿದವು.

ಆಗಸ್ಟ್ ಇಂದ ಅಕ್ಟೋಬರ್‍ವರೆಗೆ ಹೂ ಅರಳಿಸುವ ನೀಲಕುರಿಂಜಿ ಸಸ್ಯವು ಅಕಾಂತ್ಯೇಸಿ ಕುಟುಂಬಕ್ಕೆ ಸೇರಿದ್ದು, ಮೊಣಕಾಲೆತ್ತರಕ್ಕೆ ಕಾಲಿಡಲೂ ಜಾಗವಿಲ್ಲದಂತೆ ಒತ್ತೊತ್ತಾಗಿ ಬೆಳೆಯುತ್ತದೆ.  ಈ ಹೂವು ಅರಳಬೇಕಾದರೆ ಹದವಾದ ಮಳೆ, ವಾಯುಮಂಡಲದ ಒತ್ತಡ ಮತ್ತು ಸೂರ್ಯನ ಬೆಳಕು ಅತ್ಯವಶ್ಯ. ಪ್ರಪಂಚದಲ್ಲಿ ಸುಮಾರು 350 ಪ್ರಬೇಧಗಳಿದ್ದರೂ, ನಮ್ಮ ದೇಶದಲ್ಲಿ ಸುಮಾರು 70 ಪ್ರಬೇಧಗಳನ್ನು ಗುರುತಿಸಲಾಗಿದೆ. ಕೇರಳದಿಂದ ಮಹಾರಾಷ್ಟ್ರದವರೆಗೂ ಶೋಲಾ ಅರಣ್ಯದ ಅಂಚು, ಹುಲ್ಲುಗಾವಲು ಮತ್ತು ಕೆಳಮಟ್ಟದ ಕಾಡುಗಳ ನಡುವೆ ಬೆಳೆಯುವ ಪ್ರಬೇಧಗಳೂ ಇವೆ. ಘಟ್ಟದ ಮೇಲೆ ಸುಮಾರು ಎರಡು ಮೂರು ತಿಂಗಳವರೆಗೂ ಚಾದರದಂತೆ ಹಾಸಿಕೊಂಡಿರುವ ನೀಲಿಕುರಿಂಜಿ ಹೂವುಗಳು

ಚಿತ್ರ: ಜೇನುನೊಣ ಮತ್ತು ನೊಣ

ಮನುಷ್ಯರನ್ನಷ್ಟೇ ಅಲ್ಲ, ಸಾವಿರಾರು ದುಂಬಿಗಳು, ಚಿಟ್ಟೆಗಳು, ಪತಂಗಗಳು ಮತ್ತು ಖಗರತ್ನಗಳನ್ನೂ ಸೆಳೆದು ಮಕರಂದವನ್ನು ಉಣಬಡಿಸುತ್ತವೆ. 2006ರಲ್ಲಿ ಬಾಬಾಬುಡನ್‍ಗಿರಿ ಮತ್ತು ಮುಳ್ಳಯ್ಯನ ಗಿರಿ ಶ್ರೇಣಿಗಳಲ್ಲಿ ಅರಳಿದ ಸ್ಟ್ರೊಬೈಲಾಂಥಸ್ ಕುಂತಿಯಾನ (Strobilanthes kuntiana) ಎಂಬ ಪ್ರಬೇಧ 12 ವರ್ಷಗಳಿಗೊಮ್ಮೆ ಹೂ ಅರಳಿಸಿದರೆ, ಈ ವರ್ಷ ಹೂ ಅರಳಿಸಿದ ಪ್ರಬೇಧ ಸ್ಟ್ರೊಬೈಲಾಂಥಸ್ ಸೆಸ್ಸಿಲಿಸ್ (Strobilanthes sessilis) ಕೇರಳದ ಇಡುಕ್ಕಿ ಜಿಲ್ಲೆಯ 810 ಮೀಟರ್ ಎತ್ತರವಿರುವ ಅಲಂಕಪುರ ಬೆಟ್ಟಗಳಲ್ಲಿ ಸ್ಟ್ರೊಬೈಲಾಂಥಸ್ ಕುಂತಿಯಾನ ಅರಳಿರುವುದನ್ನು ತಜ್ಞರ ತಂಡ ಈಗ ದಾಖಲಿಸಿದೆ. ಸಾಮಾನ್ಯವಾಗಿ ಕುರಿಂಜಿ ಹೂವುಗಳು 1200 ಮೀಟರ್ ಗೂ ಅಧಿಕ ಎತ್ತರದ ಪ್ರದೇಶಗಳಲ್ಲಿ ಅರಳುತ್ತಿದ್ದವು. ಪಕ್ಷಿಗಳ ಸಹಾಯದಿಂದ ಅಥವಾ ಮಾರುತಗಳ ಪ್ರಭಾವದಿಂದ ಹಾರಿ ಬಂದು ಕೆಳಮಟ್ಟದ ಬೆಟ್ಟಗಳಿಗೆ ಪ್ರಸಾರವಾಗಿರಬಹುದು ಎಂಬುದು ಇವರ ಅಭಿಪ್ರಾಯ.

ಕುರಿಂಜಿ ಹೂವುಗಳು ಅರಳಿದ್ದನ್ನು ಮೊಟ್ಟ ಮೊದಲಿಗೆ ದಾಖಲಿಸಿದ್ದು 1838ರಲ್ಲಿ. ನಂತರ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅಂದರೆ, 1850, 1862, 1874, 1886, 1898, 1910, 1922, 1934, 1946, 1958, 1970, 1982, 1994, 2006 ಮತ್ತು 2018 ರಲ್ಲಿ. ಆದರೆ, ಬೇರೆ ಬೇರೆ ಪ್ರಬೇಧದ ಸಸ್ಯಗಳು ನಿಯಮಿತವಾಗಿ ಪ್ರತೀ ವರ್ಷ, ಇಲ್ಲವೇ 5, 7, 12, ಅಥವಾ1 8 ವರ್ಷಗಳಿಗೊಮ್ಮೆ ಹೂವು ಅರಳಿಸಿ, ಮಕರಂದವನ್ನು ಉಣಬಡಿಸಿ ನಂತರ ಸಾಯುತ್ತವೆ. ಅವುಗಳ ಬೀಜಗಳು ಮತ್ತೆ ಮೊಳಕೆ ಒಡೆದು ಬೆಳೆದರೂ ಹೂ ಬಿಡುವುದು ಮಾತ್ರ ಅಷ್ಟೇ ವರ್ಷಕ್ಕೆ ! ಈ ರೀತಿಯ ವೈಶಿಷ್ಟ್ಯತೆಯನ್ನು ಬಿದಿರು ಸಸ್ಯಗಳಲ್ಲಿ 45 ಮತ್ತು 60 ವರ್ಷಗಳಿಗೊಮ್ಮೆ ಮಾತ್ರ ನೋಡಬಹುದು. ಅಲ್ಲಿಯವರೆಗೆ ಪಕ್ಕಪಕ್ಕದಲ್ಲಿ ಹೊಸ ಗಿಡಗಳು ಭತ್ತ, ರಾಗಿ ಸಸ್ಯಗಳಲ್ಲಿ ತೆಂಡೆ ಹೊಡೆದಂತೆ ಬೆಳೆಯುತ್ತಿರುತ್ತವೆ.

ಚಿತ್ರ: ಪುಷ್ಪ ಮಂಜರಿ

ಗಿಡಗಳಲ್ಲಿರುವ ಎಲೆಗಳು ಹೃದಯದಾಕಾರದಲ್ಲಿ ಚಿಕ್ಕದಾಗಿದ್ದು ಅಂಚುಗಳಲ್ಲಿ ಗರಗಸದಂತ ರಚನೆಯಿರುತ್ತದೆ. ಹೂಗಳು ಚೌಕಾಕಾರದ ತೆನೆಯಲ್ಲಿ ಒಂದೊಂದಾಗಿ ಅರಳುತ್ತವೆ. ಕಾಂಡವು ಗಟ್ಟಿಯಾಗಿದ್ದು ಬೆಟ್ಟದ ಮೇಲೆ ಬೀಸುವ ಮುಂಗಾರಿನ ಗಾಳಿಯನ್ನು ತಡೆಯುವಂತಿದೆ. ನೇರಳೆ ಬಣ್ಣದಲ್ಲಿ ಅರಳಿದ ಹೂವುಗಳು 3-4 ದಿನಗಳಿದ್ದು ಉದುರಿಹೋಗುತ್ತವೆ. ಕೆಳಗಡೆಯ ಹೂವುಗಳು ಉದುರಿದಂತೆ ಮೇಲ್ಭಾಗದ ಹೂವುಗಳು ಅರಳುತ್ತಿರುತ್ತವೆ. ಹಾಗಾಗಿ ಎಲ್ಲಾ ಗಿಡಗಳ ಹೂವಿನ ದಂಡೆಯಲ್ಲಿ ನಾಲ್ಕಾರು ಹೂವುಗಳಿದ್ದು ಎರಡೂವರೆ ಮೂರು ತಿಂಗಳಿನವರೆಗೆ ನಿರಂತರವಾಗಿ ಚಾದರದಂತೆ ಹಾಸಿಕೊಂಡಿರುತ್ತವೆ. ಅರಳಿದಾಗ ಮನುಷ್ಯನ ನಾಸಿಕಕ್ಕೆ ಸಿಗದ ಸುಗಂಧ, ಅದ್ಹೇಗೆ ಪತಂಗ, ಚಿಟ್ಟೆ, ಜೇನುನೊಣ, ಜೀರುಂಡೆ ಮುಂತಾದ ದುಂಬಿಗಳಿಗೆ ಸಿಗುತ್ತದೋ ತಿಳಿಯದಾಗಿದೆ. ಪರಿಮಳದ ಜಾಡನ್ನು ಅರಸಿ ಬರುವ ದುಂಬಿಗಳ ಲೋಕ, ಜಾತ್ರೆಯಂತೆ ಸೇರಿ ಮಕರಂದ ಹೀರಿ ಹೊಟ್ಟೆ ತುಂಬಿಸಿಕೊಂಡು, ತಮ್ಮ ಕಾಲುಗಳಲ್ಲಿರುವ ಚೀಲಗಳಲ್ಲಿ ಮರಿಗಳಿಗೂ ಹೊತ್ತೊಯ್ಯುವುದನ್ನು ನೋಡುವುದೇ ಸೊಗಸು. ಈ ಚಾದರವನ್ನು ನೋಡಲು ಬರುವ ಜನರ ಕಲರವದಲ್ಲಿ ದುಂಬಿಗಳ ಝೇಂಕಾರದ ಮಾರ್ದನಿ ಮೇಳೈಸಿ, ಅಲ್ಲೊಂದು ರಸಮಂಜರಿ ಏರ್ಪಟ್ಟಿರುತ್ತದೆ. ಮಕರಂದ ಹೀರಲು ಬರುವ ಸೂರಕ್ಕಿಗಳ ಇಂಚರವೂ ನಮ್ಮ ಮನಸೂರೆಗೊಳ್ಳುತ್ತವೆ. ಇದಕ್ಕೆ ಹುಳಿಹಿಂಡುವಂತೆ ಡ್ರೋಣ್‍ಗಳ ಹಾರಾಟ ಈ ರಸಮಂಜರಿಗೆ ಅಪಸ್ವರವಾಗುವುದು ಮಾತ್ರ ಏಕೋ ಅಸಹನೀಯ.

ನೀಲಿ ಕುರಿಂಜಿ ಸೌಂದರ್ಯಕ್ಕೆ ಮಾತ್ರ ಹೆಸರುವಾಸಿಯಾಗಿದೆ ಎಂದು ತಿಳಿದುಕೊಳ್ಳಬೇಡಿ. ಈ ಗಿಡದಿಂದ ವಾತ ಸಂಬಂಧಿ ಕಾಯಿಲೆಗಳು, ಪಾಶ್ರ್ವವಾಯು, ಮಧುಮೇಹ, ಮೂತ್ರಸಂಬಂಧಿ ಕಾಯಿಲೆಗಳು, ಜಾಂಡೀಸ್, ಅಧಿಕರಕ್ತಸ್ರಾವ, ಚರ್ಮದ ಉರಿಯೂತದ ಸಮಸ್ಯೆಗಳಿಗೆ ರಾಮಬಾಣವಾಗಿದೆ, ಇದರ ಹೂವು ಮತ್ತು ಎಲೆ. ನೋಡಿ! ಇದರ ಔಷಧೀಯ ಗುಣ!

ಎಂತಹ ದುರ್ಗಮ ಸ್ಥಳವಾದರೂ ತಲುಪಬಲ್ಲ ಶಕ್ತಿ ಇರುವುದು ಮಾನವನೆಂಬ ಕೆಟ್ಟ ಪ್ರಾಣಿಗಲ್ಲದೇ ಮತ್ಯಾರಿಗಾದರೂ ಸಾದ್ಯವೇ? ದೇವರ ಹೆಸರಿನಲ್ಲಿಯೋ ಅಥವಾ ಪ್ರವಾಸಿ ತಾಣದ ನೆಪದಲ್ಲಿಯೋ ಮೊದಲು ರಸ್ತೆ ನಿರ್ಮಿಸಿಕೊಳ್ಳುವ ಈತ, ಇತರರು ಬರಲು ಅನುವು ಮಾಡಿಕೊಡುತ್ತಾನೆ. ಕೋಟೆ ಬೆಟ್ಟದಲ್ಲಿಯೂ ಒಂದು ದೇವಸ್ಥಾನವನ್ನು ಎತ್ತರದ ಬಂಡೆಯ ಗುಹೆಯಲ್ಲಿ ನಿರ್ಮಿಸಿ, ನಂತರ ರಸ್ತೆ ನಿರ್ಮಿಸುತ್ತಾನೆ. ಸುಂದರ ಪರಿಸರ, ದೇವಸ್ಥಾನ ನೋಡಲು ಪ್ರವಾಸಿಗಳು ಬರುವಂತಾದಾಗ, ಅಲ್ಲಿ ಹೋಂಸ್ಟೇ, ರೆಸಾರ್ಟ್ ನಿರ್ಮಿಸುತ್ತಾನೆ. ಕೃಷಿಕ(ಬಲಾಢ್ಯ)ರು ಬೆಟ್ಟದ ಸಮತಟ್ಟಾದ ಜಾಗಗಳನ್ನು ತೋಟಮಾಡಿಬಿಟ್ಟರು. ಅಲ್ಲಿಗೆ ಸುಂದರವಾದ ಪರಿಸರ, ಅಪರೂಪದ ಕುರಿಂಜಿಗಿಡಗಳ ಅವಸಾನ ಪ್ರಾರಂಭವಾಗಿಬಿಟ್ಟಿದೆ. ಇದನ್ನು ಕಾಪಾಡಬೇಕಾದ ಅರಣ್ಯ ಇಲಾಖೆ ಮಾತ್ರ ಚಿರನಿದ್ರೆಗೆ ಜಾರಿದೆ. ಜನರ ಅಜ್ಞಾನದಿಂದ ಗಿಡಗಳ ಮದ್ಯೆ ಛಾಯಾಚಿತ್ರ, ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಅದೆಷ್ಟೋ ಗಿಡಗಳು ಕಾಲ್ತುಳಿತದಿಂದ ನರಳಿ ಜೀವ ಬಿಟ್ಟಿರುವುದುಂಟು.  ಕೆಲವು ಜೀಪ್ ಚಾಲಕರು ಕಳೆದ ವರ್ಷದ ಫೋಟೊಗಳನ್ನು ಪತ್ರಿಕೆಗಳಲ್ಲಿ ಹಾಕಿಸಿ, ಪ್ರವಾಸಿಗರನ್ನು ಆಕರ್ಷಿಸಿ, ಆ ಮೂಲಕ ಹಣ ಸಂಪಾದಿಸಿಕೊಳ್ಳುವ ದಂಧೆ ನಡೆಸುತ್ತಿದ್ದಾರೆ. ಇಂಥವರ ಬಗ್ಗೆ ಎಚ್ಚರದಿಂದ ಇರಬೇಕಷ್ಟೆ. ಮಾನವ ಎಚ್ಚೆತ್ತುಕೊಂಡು ಪರಿಸರದ ತಂಟೆಗೆ ಹೋಗದಿದ್ದರೆ ಅಷ್ಟೇ ಸಾಕು. ಇಲ್ಲದಿದ್ದಲ್ಲಿ ಅವುಗಳ ನಾಶ, ಕ್ರಮೇಣ ನಮ್ಮ ನಾಶ!


27 comments:

 1. Excellent information.. Nice to read and recollect

  ReplyDelete
 2. ಸಂಪೂರ್ಣ ಮಾಹಿತಿಯುಕ್ತ ಲೇಖನ ಸೂಕ್ಷ ವಿಚಾರಗಳನ್ನು ಪ್ರಸ್ತಾಪಿಸಿರುವುದು ಲೇಖಕರ ಪರಿಸರ ಪ್ರೀತಿಗೆ ಸಾಕ್ಷಿ. ಧನ್ಯವಾದಗಳು ಸರ್.

  ReplyDelete
 3. Nice sir excellent information.

  ReplyDelete
 4. Excellent information Chaitanya sir.Thank you.

  ReplyDelete
 5. Very good good information sir.thank you sir

  ReplyDelete
 6. Nice information sir thank you sir

  ReplyDelete
 7. ಬಹಳ ಚಂದವಾದ, ಮಾಹಿತಿಪೂರ್ಣ ಲೇಖನ.

  ReplyDelete
 8. Beautiful article, great information uncle 😊😊

  ReplyDelete
 9. We are thankful to you for the good information, it's useful to all and Marvelous information. 👍

  ReplyDelete
 10. Great information sir,thank you so much

  ReplyDelete
 11. Nice information sir...thank you so much is.
  Very helpfull sir

  ReplyDelete
 12. Very useful information 👌👌👌👌

  ReplyDelete
 13. Very informative sir, thank you so much

  ReplyDelete