ವಿಜ್ಞಾನ ಸಂಶೋಧನೆಯಲ್ಲಿ ಆಕಸ್ಮಿಕಗಳು - ಸೆರೆಂಡಿಪಿಟಿ
ಡಾ. ಎಂ. ಜೆ. ಸುಂದರ್ ರಾಮ್
ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿಜ್ಞಾನ ಸಂವಹನಕಾರರು
ವಿಜ್ಞಾನದ ಮುನ್ನಡೆಯಲ್ಲಿ ಆಕಸ್ಮಿಕ ಆವಿಷ್ಕಾರಗಳು
ಬಹುದೊಡ್ಡ ಪಾತ್ರವನ್ನು ವಹಿಸಿವೆ. ಈ ರೀತಿಯ ಆಕಸ್ಮಿಕ ಆವಿಷ್ಕಾರ ಅನ್ವೇಷಣೆಗಳಿಗೆ
ಆಂಗ್ಲಭಾಷೆಯಲ್ಲಿ ಸೆರೆಂಡಿಪಿಟಿ (serendipity) ಎಂದು ಕರೆಯುತ್ತಾರೆ. ಸೆರೆಂಡಿಪಿಟಿ ಎಂದರೆ
ಆಕಸ್ಮಿಕವಾಗಿ ಅದೃಷ್ಟದ ಮತ್ತು ಅನಿರೀಕ್ಷಿತ ಆವಿಷ್ಕಾರಗಳನ್ನು ಮಾಡಬಲ್ಲ ಸಾಮರ್ಥ್ಯ ಎಂದರ್ಥ.
ಮೀನು ಹಿಡಿಯಲು ನಿಮಗೆ ಎರೆಹುಳಗಳು ಬೇಕು. ಅದಕ್ಕಾಗಿ ನೀವು ಭೂಮಿಯನ್ನು ಅಗಿಯುತ್ತಿದ್ದಾಗ
ಎರೆಹುಳಗಳ ಬದಲು ತೈಲವೇ ಉಕ್ಕಿ ಹರಿಯಲಾರಂಭಿಸಿತು ಎಂದುಕೊಳ್ಳಿ. ಅದೇ ಸೆರೆಂಡಿಪಿಟಿ.
ಈ ಪದದ ಮೂಲ ಬಹಳ ಸ್ವಾರಸ್ಯವಾಗಿದೆ ಈ ಪದವನ್ನು 1754 ರಲ್ಲಿ ಹೊರೆಸ್ ವಾಲ್ ಪೋಲ್ (Horace Walpole) ಎಂಬ ಆಂಗ್ಲ ಕಥೆಗಾರರು ಸೆರೆಂದೀಪ್ನ ಮೂವರು ರಾಜಕುಮಾರರು (The Three
Princes of Sarandip) ಎಂಬ ಪರ್ಷಿಯಾದ ಮಕ್ಕಳ ಕಥೆಯಿಂದ ಜೋಡಿಸಿದರು. ಒಂದಾನೊಂದು ಕಾಲದಲ್ಲಿ
ಶ್ರೀಲಂಕಾ ದೇಶಕ್ಕೆ ಉರ್ದು ಮತ್ತು ಪರೀಕ್ಷೆಯ ಭಾಷೆಗಳಲ್ಲಿ ಸ್ವರ್ಣ ದೀಪ ಎಂಬ ಹೆಸರಿತ್ತಂತೆ.
ಅದನ್ನು ಆಂಗ್ಲೀಕರಿಸಿ ಸರಂದೀಪ್ ಎಂದು ಕರೆಯಲಾಗುತ್ತಿತ್ತಂತೆ. ಇನ್ನೊಂದು ಮಾಹಿತಿಯ ಪ್ರಕಾರ
ಶ್ರೀಲಂಕಾಗೆ ಸಿಂಹಳದ್ವೀಪ ಅಥವಾ ಸಿಂಹಗಳ ಆವಾಸದ್ವೀಪ ಎಂಬ ಪದದಿಂದ ಈ ರೀತಿಯ ಹೆಸರು ಬಂತು ಎಂದೂ
ಹೇಳುತ್ತಾರೆ.
ಆ ರಾಜ್ಯವನ್ನು ಒಬ್ಬ ಅತಿ ಬಲಶಾಲಿ ರಾಜನು
ಆಳುತ್ತಿದ್ದನಂತೆ. ಅವನಿಗೆ ಮೂರು ರಾಜಕುಮಾರ ರಿದ್ದರಂತೆ. ಅವರನ್ನು ಅತ್ಯಂತ ಪ್ರೀತಿಯಿಂದಲೂ
ಅಕ್ಕರೆಯಿಂದಲೂ ಕಾಣುತ್ತಿದ್ದ ರಾಜನು ಪ್ರಸಿದ್ಧ ಗುರುಗಳನ್ನು ಹುಡುಕಿ ಇವರಿಗೆ ಶಿಕ್ಷಣ
ಕೊಡಿಸಿದನಂತೆ. ಇವರಿಗೆ ಸಕಲ ರೀತಿಯಲ್ಲಿ ಶಿಕ್ಷಣವನ್ನು ಕಲಿಸಿದ ಗುರುಗಳು ಇವರ
ಬುದ್ಧಿವಂತಿಕೆಯನ್ನೂ ಆಳವಾದ ಜ್ಞಾನವನ್ನೂ ಮೆಚ್ಚಿ, ರಾಜನಲ್ಲಿ ಅವರ ಬಗ್ಗೆ ಹೆಮ್ಮೆಯಿಂದ ಅರಿಕೆ ಮಾಡಿಕೊಂಡರಂತೆ. ಆದರೆ ರಾಜನಿಗೆ ಇದರಿಂದ
ಸಮಾಧಾನವಾಗಲಿಲ್ಲವಂತೆ. ಅವರನ್ನು ಕರೆದು, ತಾನು ಅವರಿಗೆ ರಾಜ್ಯವನ್ನಾಳುವ ಹೊಣೆಯನ್ನು ವಹಿಸುವುದಾಗಿಯೂ ಮುಂದೆ ಅವರು ಈ ರಾಜ್ಯವನ್ನು
ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂದೂ ತಿಳಿಸಿದನಂತೆ. ಆಗ ಆ ರಾಜಕುಮಾರರು ರಾಜನ
ಆಹ್ವಾನವನ್ನು ತಿರಸ್ಕರಿಸಿ, ತಮಗಿಂತಲೂ ರಾಜನೇ
ಹೆಚ್ಚು ಬುದ್ಧಿವಂತನೂ ಸಮರ್ಥನೂ ಆಗಿದ್ದು ಅವನೇ ರಾಜ್ಯವನ್ನು ಆಳಬೇಕೆಂದು ಒತ್ತಾಯಿಸಿದರಂತೆ.
ಅವರ ಹೇಳಿಕೆಯಿಂದ ಸಂತುಷ್ಟನಾದ ರಾಜ ತನ್ನ ಸಂತಸವನ್ನು ತೋರ್ಪಡಿಸಿಕೊಳ್ಳದೆ ಅವರ ಮೇಲೆ
ಕೋಪಗೊಂಡಂತೆ ನಡೆಸಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಿಬಿಟ್ಟನಂತೆ.
ರಾಜ್ಯವನ್ನು ಬಿಟ್ಟು ರಾಜಕುಮಾರರು ತಮ್ಮ ಅನುಭವವನ್ನು
ಶ್ರೀಮಂತಗೊಳಿಸಿಕೊಳ್ಳಲು ವಿಶ್ವಪರ್ಯಟನೆಗೆ ಸಜ್ಜಾದರಂತೆ. ಹೀಗೆ ಹೊರಟಾಗ ತಮ್ಮ ಜಾಣತನದಿಂದ ಅಥವಾ
ಆಕಸ್ಮಿಕವಾಗಿಯೋ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲಾರಂಭಿಸಿದರಂತೆ. ಈ ರೀತಿ
ಪ್ರಯಾಣಿಸುತ್ತಿರುವಾಗ ತಾವು ನೋಡಿರದ ಯಾವುದೋ ಪ್ರಾಣಿಯೊಂದು ಆ ದಾರಿಯಲ್ಲಿ ಸಾಗಿದ್ದ ಕೆಲವು
ಕುರುಹುಗಳನ್ನು ಗುರುತಿಸಿ, ಆ ಪ್ರಾಣಿ
ಒಂಟೆಯಾಗಿರಬಹುದೆಂದೂ, ಅದರ ಒಂದು ಕಾಲು ಊನ
ಆಗಿರಬೇಕೆಂದೂ, ಅದರ ಒಂದು ಕಣ್ಣು ಕುರುಡಾಗಿರಬೇಕೆಂದೂ
ಮತ್ತು ಅದರ ಒಂದು ಹಲ್ಲು ಉದುರಿ ಹೋಗಿರಬೇಕೆಂದು ಊಹಿಸಿದರಂತೆ. ಒಂಟೆ ಒಬ್ಬ ಗರ್ಭಿಣಿ
ಹೆಣ್ಣುಮಗಳನ್ನು ಹೊತ್ತುಕೊಂಡಿದ್ದು, ಅವಳು ಒಂದು
ಬದಿಯಲ್ಲಿ ಜೇನುತುಪ್ಪವನ್ನೂ ಮತ್ತೊಂದು ಬದಿಯಲ್ಲಿ ಬೆಣ್ಣೆಯನ್ನೂ ಇಟ್ಟುಕೊಂಡಿದ್ದಿರಬೇಕೆಂದು
ಊಹಿಸಿದರಂತೆ.
ಸ್ವಲ್ಪ ದೂರ ಮುಂದೆ ಸಾಗಿದಾಗ, ವ್ಯಕ್ತಿಯೊಬ್ಬ
ಅವರಿಗೆ ಎದುರಾದನಂತೆ ಅವನು ಒಂದು ಒಂಟೆ ಯಜಮಾನನೆಂದೂ, ಅದು ತಪ್ಪಿಸಿಕೊಂಡು ಬಿಟ್ಟಿದೆ ಎಂದೂ ಅದರ ಸುಳಿವೇನಾದರೂ ಇವರಿಗೆ ತಿಳಿದಿರಬಹುದೋ ಎಂದು
ವಿಚಾರಿಸಿದನಂತೆ. ಒಂಟೆಯನ್ನು ಸ್ವತಃ
ನೋಡದಿದ್ದರೂ, ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು
ಸಂಗ್ರಹಿಸಿದ್ದ ಅವರು ಅವನನ್ನು ತಮಾಷೆ ಮಾಡತೊಡಗಿದರು. ಸಮೀಪದಲ್ಲಿ ಒಂಟೆಯೊಂದನ್ನು ಕಂಡದ್ದಾಗಿ
ಹೇಳಿ ಅವನೊಡನೆ ಸಂವಾದದಲ್ಲಿ ತೊಡಗಿದರು:
“ಹೇಳು ಸೋದರ ನಿನ್ನ ಒಂಟೆಗೆ ಒಂದು ಕಣ್ಣು ಕುರುಡಾಗಿರಬೇಕಲ್ಲ?“ ಎಂದು ಕೇಳಿದ ಮೊದಲನೆಯ ರಾಜಕುಮಾರ. “ಹೌದು ನಿಜ” ಎಂದುತ್ತರಿಸಿದ ಒಂಟೆಯ ಮಾಲಿಕ.
“ಜೊತೆಗೆ ಅದಕ್ಕೊಂದು ಹಲ್ಲು ಉದುರಿರಬೇಕಲ್ಲ” ಎಂದು ಎರಡನೆಯವನು ಪ್ರಶ್ನಿಸಿದ.
ಇದಕ್ಕೂ ಒಂಟೆಯ ಮಾಲಿಕ “ಹೌದು“ ಎಂದು ತಲೆಯಾಡಿಸಿದ. ಮೂರನೆಯ ರಾಜಕುಮಾರ ತನ್ನ ಸರದಿ ಬಂದಾಗ,
“ಹಾಗಾದರೆ ನಿನ್ನ ಒಂಟೆಯ ಒಂದು ಕಾಲೂ ಕುಂಟಾಗಿರಬೇಕಲ್ಲ” ಎಂದು ಪ್ರಶ್ನಿಸಿದ.
“ಹೌದು“ ಎಂದುತ್ತರಿಸಿದ ಒಂಟೆಯ ಮಾಲೀಕ.
"ಅದರ ಮೇಲೆ ಗರ್ಭಿಣಿ ಹೆಣ್ಣುಮಗಳೊಬ್ಬಳು ಕುಳಿತಿದ್ದು ಅವಳ ಎಡಬಲಗಳಲ್ಲಿ ಬೆಣ್ಣೆ ಹಾಗೂ ಜೇನುತುಪ್ಪ ಇದ್ದಿರಬೇಕಲ್ಲವೇ? ಎಂದು ರಾಜಕುಮಾರರು ಮತ್ತೆ ಅವನನ್ನು ವ್ಯಂಗ್ಯವಾಗಿ ಕೆಣಕಿದರು.
ಒಂಟೆಯ
ಮಾಲಿಕ,
ಆನಂದಾಶ್ಚರ್ಯಗಳಿಂದ “ಹೌದು. ಹೌದು” ಎಂದುತ್ತರಿಸಿದ. ಅವರು ಒಂಟೆಯನ್ನು ನೋಡಿದ ಜಾಗವನ್ನು ಅವನಿಗೆ
ತೋರಿಸುವಂತೆ ಅಂಗಲಾಚಿದ. ಹಾಗಾದರೆ, ನಾವು ದಾರಿಯಲ್ಲಿ
ನಿನ್ನ ಒಂಟೆಯನ್ನು ಕಂಡೆವು. ಕೆಲವೇ ಸಮಯದ ಹಿಂದೆ ಅದನ್ನಗಲಿ ಇಲ್ಲಿಗೆ ಬಂದೆವು’ ಎಂದು ಸುಳ್ಳು
ಹೇಳಿದರಂತೆ.
ಒಂಟೆಯ ಮಾಲೀಕ ಸಂತೋಷದಿಂದ ಅದನ್ನು ಹುಡುಕುತ್ತಾ ಹೊರಟ. ಆದರೆ ಸುತ್ತಮುತ್ತ ಎಲ್ಲೆಡೆಗಳಲ್ಲೂ ಜಾಲಾಡಿ ಹುಡುಕಿದರೂ ಅವರಿಗೆ ಒಂಟೆಯ ಸುಳಿವೇ ಸಿಗಲಿಲ್ಲ. ರಾಜಕುಮಾರನ್ನು ಹುಡುಕಿಕೊಂಡು ಬಂದು ಕುಪಿತನಾಗಿ, “ನೀವೇ ನನ್ನ ಒಂಟೆಯನ್ನು ಯಾರಿಗೋ ಮಾರಿದ್ದೀರಿ” ಎಂದು ಆರೋಪಿಸಿ, ಅವರ ಮೇಲೆ ರಾಜನಿಗೆ ದೂರು ಕೊಟ್ಟು ಅವರನ್ನು ಸೆರೆಮನೆಗೆ ಕಳಿಸಿದನಂತೆ. ರಾಜನು ಅವರ ವಿಚಾರಣೆ ಮಾಡಿದಾಗ ಅವರು ನಾವು ಒಂಟೆಯನ್ನು ನೋಡಿಯೇ ಇಲ್ಲ ಎಂದರು.
“ಹಾಗಾದರೆ ಅದರ ಸೂಕ್ಷ್ಮ ವಿಚಾರಗಳನ್ನು ನೀವು ಹೇಗೆ ಇಷ್ಟು ನಿಖರವಾಗಿ ಹೇಳಲು ಸಾಧ್ಯ? “ ಎಂದು ರಾಜ ಅವರನ್ನು ಪ್ರಶ್ನಿಸಿದಂತೆ. ಆಗ ರಾಜಕುಮಾರರು ತಮಗೆ ದೊರೆತ ಸಣ್ಣಪುಟ್ಟ ಪುರಾವೆಗಳನ್ನು ಬುದ್ಧಿವಂತಿಕೆಯಿಂದ ವಿಶ್ಲೇಷಿಸಿ ಒಂಟೆಯ ನ್ಯೂನತೆಗಳನ್ನು ಊಹಿಸಿದುದಾಗಿಯೂ ತಿಳಿಸಿದರಂತೆ. ಸಮಾಧಾನವಾಗದ ರಾಜ ಒಂಟೆಯ ಬಗ್ಗೆ ಅವರ ಗ್ರಹಿಕೆಯನ್ನು ವಿಷದೀಕರಿಸುವಂತೆ ಕೇಳಿದನಂತೆ.
“ಒಂಟೆಯು,
ರಸ್ತೆಯ ಒಂದು ಮಗ್ಗುಲಲ್ಲಿ ಹುಲುಸಾಗಿ
ಬೆಳೆದ ಹುಲ್ಲನ್ನು ತಿನ್ನದೇ, ಮತ್ತೊಂದು
ಮಗ್ಗುಲಲ್ಲಿ ಸುಮಾರಾಗಿ ಬೆಳೆದಿದ್ದ ಹುಲ್ಲನ್ನು ತಿಂದುಕೊಂಡು ಹೋಗಿತ್ತು. ಇದರಿಂದ ಅದರ ಒಂದು
ಕಣ್ಣು ಕುರುಡಿರಬೇಕೆಂಬ ನಿರ್ಧಾರಕ್ಕೆ ಬಂದೆವು” ಎಂದರು.
ಒಂಟೆಯ ಹಲ್ಲಿನ ಗಾತ್ರದ, ಅಗಿದಿದ್ದ ಹುಲ್ಲಿನ ಮುದ್ದೆಗಳು ರಸ್ತೆಯ ಬದಿಯಲ್ಲಿ ಬಿದ್ದಿದ್ದರಿಂದ
ಅದರ ಒಂದು ಹಲ್ಲು ಉದುರಿರಬೇಕೆಂದು ನಿರ್ಧರಿಸಿದೆವು. ಹಾಗೆಯೇ, ಅದು ನಡೆದು ಹೋದ ದಾರಿಯಲ್ಲಿ ಮೂರು ಪಾದಗಳ ಗುರುತು ಮಾತ್ರ
ಗೋಚರಿಸಿದವು. ಇದರಿಂದ ಅದರ ಒಂದು ಕಾಲು ಕುಂಟಾಗಿರಬೇಕೆಂದು ಊಹಿಸಿದೆವು’ ಎಂದರು ರಾಜಕುಮಾರರು.
‘ಒಂಟೆಯ ಎರಡು ಪಕ್ಕಗಳಲ್ಲಿ ಬೆಣ್ಣೆ ಮತ್ತು
ಜೇನುತುಪ್ಪ ಇರಿಸಿದ್ದುದನ್ನು ಹೇಗೆ ಗುರುತಿಸಿದಿರಿ?’ ಎಂದು ರಾಜ ಮರುಪ್ರಶ್ನೆ ಮಾಡಿದಾಗ ‘ಒಂಟೆ ನಡೆದು ಬಂದಿರಬಹುದಾದ ದಾರಿಯ ಒಂದು ಬದಿಯಲ್ಲಿ
ಇರುವೆಗಳು ಸಾಲಾಗಿ ಹರಿದುಬಂದು ಅತ್ತ ಕಡೆ ಮುತ್ತಿಕೊಂಡಿದ್ದವು. ಬೆಣ್ಣೆ ಕರಗಿ
ಸೋರುತ್ತಿದ್ದುದರಿಂದ ಈ ರೀತಿಯಾಗಿರಬೇಕೆಂದೂ, ಮತ್ತೊಂದು ಬದಿಯಲ್ಲಿ ಅನೇಕ ನೊಣಗಳು ಮುತ್ತಿಕೊಂಡಿದ್ದುದರಿಂದ ಆ ಕಡೆ ಜೇನುತುಪ್ಪ
ಇದ್ದಿರಬೇಕೆಂಬ ನಿರ್ಣಯಕ್ಕೆ ಬಂದೆವು’ ಎಂದರು. ರಾಜಕುಮಾರರು.
ಮುಂದುವರಿದು, ‘ಅದು ಸರಿ, ಆದರೆ ಒಂಟೆಯ ಮೇಲೆ
ಗರ್ಭಿಣಿ ಹೆಣ್ಣುಮಗಳು ಕುಳಿತಿದ್ದಳು ಎಂದುವ ಹೇಗೆ ನಿರ್ಧರಿಸಿದಿರಿ?’ ಎಂದು ರಾಜ ಪ್ರಶ್ನಿಸಿದನಂತೆ. ಅದಕ್ಕೆ ರಾಜಕುಮಾರರು, ‘ಒಂದೆಡೆ ಒಂಟೆ ಮಂಡಿಯೂರಿ ಕೆಳಗೆ ಕುಳಿತಿದ್ದ ಗುರುತು ಕಂಡಿತು. ಆ
ಸ್ಥಳದಲ್ಲಿ ಮನುಷ್ಯನ ಪಾದದ ಗುರುತನ್ನು ಕಂಡೆವು. ಅದರ ಸಮೀಪದಲ್ಲೇ ಮೂತ್ರವಿಸರ್ಜನೆಯಾಗಿದ್ದು, ಅದರ ವಾಸನೆಯಿಂದ ಅದು ಗರ್ಭಿಣಿಯ ಮೂತ್ರವಿರಬೇಕೆಂದೂ, ಆದ್ದರಿಂದ ಆ ಪಾದ ಗರ್ಭಿಣಿ ಹೆಣ್ಣಿನ ಪಾದವಾಗಿರಬೇಕೆಂಬ ತೀರ್ಮಾನಕ್ಕೆ
ಬಂದೆವು’ ಎಂದು ಸಮಜಾಯಿಷಿ ನೀಡಿದರಂತೆ!!!.
ಈ ರೀತಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಅಲ್ಲಿಗೆ
ಒಬ್ಬ ಪ್ರವಾಸಿಗ ರಾಜನ ಮುಂದೆ ಹಾಜರಾಗಿ ಮರಳುಗಾಡಿನಲ್ಲಿ ದಾರಿತಪ್ಪಿ ಅಲೆದಾಡುತ್ತಿದ್ದ
ಒಂಟೆಯೊಂದನ್ನು ನೋಡಿರುವುದಾಗಿ ತಿಳಿಸಿದನಂತೆ.
ಅವನಿಂದ ವಿವರಗಳನ್ನು ಪಡೆದು ಅದೇ ಕಳೆದುಹೋಗಿದ್ದ ಒಂಟೆ ಎಂದು ತೀರ್ಮಾನಿಸಿದನಂತೆ.
ರಾಜಕುಮಾರ ಬುದ್ಧಿವಂತಿಕೆಯನ್ನು ಮೆಚ್ಚಿ ಅತಿ ಸಂತುಷ್ಟನಾಗಿ ಅವರನ್ನು ಬಿಡುಗಡೆ ಮಾಡಿ
ಅವರಿಗೆ ಆಕರ್ಷಕ ಉಡುಗೊರೆಗಳನ್ನು ಕೊಟ್ಟುದಲ್ಲದೆ, ಅವರನ್ನು ತನ್ನ ಆಪ್ತ ಸಲಹೆಗಾರರನ್ನಾಗಿ ನೇಮಿಸಿಕೊಂಡನೆಂದು ಕಥೆ ಮುಕ್ತಾಯವಾಗುತ್ತದೆ.
M. K. ಸ್ಟಾಸ್ ಕಾಫ್ ಎಂಬ ವಿಜ್ಞಾನಿಯು
ಆಕಸ್ಮಿಕ ಅನುಕೂಲಕರ ಆವಿಷ್ಕಾರಗಳು ವಿಜ್ಞಾನದ ಬೆಳವಣಿಗೆಯ ಅತ್ಯಂತ ಪ್ರಮುಖ ಮೌಲ್ಯಗಳಾಗಿವೆ
ಎಂದಿದ್ದಾರೆ. ವಿಜ್ಞಾನಿಗಳು ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುತ್ತಾರೆ ಎಂದು ನಮ್ಮಲ್ಲಿ
ಅನೇಕರು ತಿಳಿದಿದ್ದಾರೆ. ಆದರೆ ಎಲ್ಲಾ ಆವಿಷ್ಕಾರಗಳನ್ನು ಪ್ರಕೃತಿ ತನ್ನ ಗರ್ಭದಲ್ಲಿ
ಅಡಗಿಸಿಟ್ಟುಕೊಂಡಿರುವ ಪವಾಡಗಳನ್ನು ವಿಜ್ಞಾನಿಗಳು ಕಂಡುಹಿಡಿಯುತ್ತಿದ್ದಾರಷ್ಟೇ !!!. ಆದ್ದರಿಂದ, ನಿಜಕ್ಕೂ ಎಲ್ಲಾ ಅತ್ಯದ್ಭುತ ಸೋಜಿಗಗಳಿಗೂ ಪ್ರಕೃತಿಗೆ ನೊಬೆಲ್
ಪ್ರಶಸ್ತಿ ಸಲ್ಲಬೇಕು ಎಂದು ಮತ್ತೊಬ್ಬ ವಿಜ್ಞಾನಿ ತಿಳಿಸಿದ್ದಾರೆ.
ಸೆರೆಂಡಿಪಿಟಿಯ ಅನುಭವವಾಗಬೇಕಾದರೆ
ಅದರಲ್ಲಿ ಅಡಗಿರುವ ನಿಗೂಢ ರಹಸ್ಯಗಳು ಆಕಸ್ಮಿಕ ಜಾಡು ಹಿಡಿಯಬಲ್ಲ ಮುಕ್ತ ಮತ್ತು ಸದಾ ಸಿದ್ಧ
ಮನಸ್ಸಿರಬೇಕು. “ಗಮನವಿಟ್ಟು ವೀಕ್ಷಿಸಿದಾಗ ಆಕಸ್ಮಿಕವು ಎಂದೂ ಸಿದ್ಧ ಮನಸ್ಸಿಗೆ ಒಲಿಯಲಿದೆ” ಎಂಬ
ಲೂಯಿ ಪಾಶ್ಚರ್ ರವರ ಹೇಳಿಕೆ ಅರ್ಥಗರ್ಭಿತವಾಗಿದೆ.
ಮನುಕುಲಕ್ಕೆ ಭಯಂಕರ ಪಿಡುಗು ಸಂಭವಿಸಿ
ಆಗಾಧವಾಗಿ ಸಮಾಜವನ್ನೇ ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿದಾಗ ಯಾವುದಾದರೂ ವಿಜ್ಞಾನಿ ಅವತರಿಸಿ ಈ
ರೀತಿಯಲ್ಲಿ ನಿರ್ಮೂಲನ ಮಾಡಿ ಮನುಕುಲವನ್ನು ಕಾಪಾಡಿದ ಅನೇಕ ಉದಾಹರಣೆಗಳಿವೆ. ದುಷ್ಟಶಕ್ತಿಗಳು
ಇಂದಿಗೂ ಮನುಕುಲವನ್ನು ನಾಶಮಾಡಿ ಜಯಗಳಿಸಿದ ಒಂದೇ ಒಂದು ಉದಾಹರಣೆಯೂ ಇಲ್ಲ. ಈ ಸತ್ಯವನ್ನೇ
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ -
ಪರಿತ್ರಾಣಾಯ ಸಾಧೂನಾಂ ವಿನಾಶಯ ಚ
ದುಷ್ಕೃತಾಂ || ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
ಎಂಬ ಸಂದೇಶವನ್ನು ಸಾರಿದ್ದಾನೆ.
ಸೆರೆಂಡಿಪಿಟಿ ಸಂದೇಶವೂ ಇದೆ ಆಗಿದೆ.
ಇದುವರೆಗೂ ಸೆರೆಂಡಿಪಿಟಿ ಬಗ್ಗೆ ಓದಿದಿರಿ. ಯಾವುದನ್ನೋ ನಿರೀಕ್ಷಿಸಿ ಅದರ ಹುಡುಕಾಟದಲ್ಲಿದ್ದ ವಿಜ್ಞಾನಿಗಳಿಗೆ ಮತ್ಯಾವುದೋ ಜ್ಞಾನ ದರ್ಶನವಾಗಿ ಅನೇಕ ಆಕಸ್ಮಿಕ ಆವಿಷ್ಕಾರಗಳಿಗೆ ಹೇತುವಾದ ರೋಚಕ ಕತೆಗಳೆಷ್ಟೋ? ಮುಂದಿನ ಸಂಚಿಕೆಗಳಲ್ಲಿ ವಿಜ್ಞಾನರಂಗದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾದ ಕತೆಗಳನ್ನು ನಿರೀಕ್ಷಿಸಿ.
ರೋಚಕ ಬರಹ ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ
ReplyDeleteಪತ್ತೇದಾರಿ ಕಥೆ ಸೊಗಸಾಗಿ ಮೂಡಿಬಂದಿದೆ... ಆಕಸ್ಮಿಕ ಆವಿಕ್ಷಾರದ ಕಥೆಗಳು ಇನ್ನೂ ರೋಚಕ ಅನುಭವ ಕೊಡಬಲ್ಲವು... ಧನ್ಯವಾದಗಳು ಸರ್
ReplyDelete