ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

ಜನವರಿ ತಿಂಗಳಿನ ದಿನಾಚರಣೆಗಳು

SAVIJNANA

Tuesday, January 4, 2022

ಆಸ್ಪತ್ರೆ ನಂಜು

ಆಸ್ಪತ್ರೆ ನಂಜು

ಡಾ.ಎಂ.ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು,

ವಿಜ್ಞಾನ ಸಂವಹನಕಾರರು

ವಿಜ್ಞಾನದ ಇತಿಹಾಸವನ್ನು ಸರಳ ಭಾಷೆಯಲ್ಲಿ ಕಥೆಯ ರೂಪದಲ್ಲಿ ಪ್ರಸ್ತುತ ಪಡಿಸುವುದರಲ್ಲಿ ನಿಷ್ಣಾತರಾದ ಡಾ.ಎಂ.ಜೆ.ಸುಂದರರಾಮ್ ಅವರ ಕಳೆದ ಸಂಚಿಕೆಯಲ್ಲಿ ಪ್ರಕಟವಾಗಿದ್ದ  ‘ವಿಜ್ಞಾನ ಸಂಶೋಧನೆಯಲ್ಲಿ ಆಕಸ್ಮಿಕಗಳು’ (ಸೆರೆಂಡಿಪಿಟಿ) ಎಂಬ ಲೇಖನದ ಮುಂದುವರೆದ ಲೇಖನ ಇದು. ಶಸ್ತ್ರ ಚಿಕಿತ್ಸೆಯಲ್ಲಿ ನಂಜು ನಿರೋಧಕಗಳ ಬಳಕೆಗೆ ಕಾರಣವಾದ ಜೋಸೆಫ್ ಲಿಸ್ಟರ್ ಅವರ ಸಂಶೋಧನೆಯ ರೋಚಕ ಕಥೆ ಇಲ್ಲಿದೆ.

ಸ್ಕಾಟ್ಲ್ಯಾಂಡ್ ದೇಶದ  ಹೆಸರಾಂತ ವೈದ್ಯರಾದ ಜೋಸೆಫ್ ಲಿಸ್ಟರ್ (Joseph Lister) ಶಸ್ತ್ರಚಿಕಿತ್ಸೆಯನ್ನು ಅತಿ ಶೀಘ್ರವಾಗಿ ಮುಗಿಸುವಲ್ಲಿ ಹೆಸರುವಾಸಿಯಾಗಿದ್ದರು. ಮೂವತ್ತೇ ಸೆಕೆಂಡುಗಳಲ್ಲಿ ಕಾಲನ್ನು ಕತ್ತರಿಸುತ್ತಿದ್ದರಂತೆ! ರೋಗಿ ಭಯಭೀತನಾಗಿ ಚೀತ್ಕರಿಸುತ್ತಿದ್ದಂತೆ, ತಮ್ಮ ಎಡಗೈಯ ಸಹಾಯದಿಂದ ರಕ್ತನಾಳವನ್ನು ನಿರ್ಬಂಧಿಸಿ ರಕ್ತದ ಹರಿವನ್ನು ತಡೆಯುತ್ತಿದ್ದರಂತೆ!

ಹತ್ತೊಂಭತ್ತನೇ ಶತಮಾನದ ಮಧ್ಯಭಾಗದವರೆಗೆ ಅಮೆರಿಕ, ಇಂಗ್ಲೆಂಡ್, ಯೂರೋಪ್‌ಗಳಂತಹ ಮುಂದುವರಿದ ದೇಶಗಳಲ್ಲಿ ಆಸ್ಪತ್ರೆಗಳು ಈಗಿನಂತಿರಲಿಲ್ಲ. ಅವು ಕೊಳಚೆಯಿಂದ ತುಂಬಿ ತುಳುಕುತ್ತಿದ್ದು, ಅನಾರೋಗ್ಯದ ಕೊಂಪೆಗಳಾಗಿ, ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದವು. ಚಿಕಿತ್ಸೆಗಾಗಿ ಬಂದ ರೋಗಿಗಳು ಗುಣಮುಖರಾಗಿ ಮರಳುವುದಿರಲಿ, ಅವರನ್ನುಕರೆತರುತ್ತಿದ್ದ ಆರೋಗ್ಯವಂತ ಹಿತೈಷಿಗಳೂ ಮತ್ತು ಜೊತೆಗಾರರೂ ರೋಗಕ್ಕೆ ತುತ್ತಾಗಿ ನರಳಿ ಸಾಯುತ್ತಿದ್ದರಂತೆ. ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಚೊಕ್ಕಟವಾಗಿಡುತ್ತಿರಲಿಲ್ಲ. ತಮ್ಮ ಕೈಗಳನ್ನೂ ಶಸ್ತ್ರಗಳನ್ನೂ ತೊಳೆದು ಸ್ವಚ್ಛಮಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಶಸ್ತ್ರಚಿಕಿತ್ಸೆ ಮುಗಿದ ನಂತರ ಶಸ್ತ್ರಗಳನ್ನು ತೊಳೆಯದೆಯೇ ಹಾಗೇ ಇಟ್ಟುಬಿಡುತ್ತಿದ್ದರು. ಸ್ಕೂಟರ್, ಕಾರುಗಳ ಮೆಕ್ಯಾನಿಕ್‌ಗಳು ರಿಪೇರಿಗೆ ತೊಡಗುವ ಮುನ್ನ ತಮ್ಮ ಒಳ್ಳೆಯ ಶುಭ್ರಬಟ್ಟೆಗಳನ್ನು ಬಿಚ್ಚಿಟ್ಟು ಹಳೆಯ, ಕೊಳಕು ಬಟ್ಟೆಗಳನ್ನುಟ್ಟು ಬರುವಂತೆ, ಅಂದಿನ ವೈದ್ಯರೂ ತಮ್ಮ ಶುಭ್ರ ಬಟ್ಟೆಗಳನ್ನು ತೆಗೆದಿಟ್ಟು, ಹಳೆಯ ಕೊಳಕು ಬಟ್ಟೆಗಳನ್ನೇ ಹುಡುಕಿ, ಹಾಕಿಕೊಂಡು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ತಮ್ಮ ಶುಭ್ರವಾದ ಬಟ್ಟೆಗಳು ರಕ್ತ ಮತ್ತು ಇತರ ದ್ರವಗಳಿಂದ ಕೊಳೆಯಾಗಬಾರದೆಂಬ ಉದ್ದೇಶದಿಂದ ಈ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತಿದ್ದರಂತೆ! ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಹಳೆಯಮಾಸಿದ ತುಂಡು ಬಟ್ಟೆಗಳನ್ನೇ ಹುಡುಕಿತಂದು, ಅವನ್ನು ಹರಿದು, ಗಾಯಗಳಿಗೆ ಸುತ್ತಿ ಪಟ್ಟಿಕಟ್ಟುತ್ತಿದ್ದರಂತೆ! ತಮ್ಮ ಕೋಟಿನ ಗುಂಡಿಯ ಸುತ್ತ ಸುತ್ತಿಟ್ಟಿದ್ದ ಸಾಧಾರಣ ರೇಷ್ಮೆ ದಾರದಿಂದ ಗಾಯಗಳನ್ನು ಹೊಲಿಯುತ್ತಿದ್ದರಂತೆ! ಈ ದಾರಗಳಲ್ಲಿ ರೋಗಾಣುಗಳು ಬೀಡುಬಿಟ್ಟಿದ್ದು, ಸೋಂಕುಂಟುಮಾಡಬಹುದೆಂದು ಆಗ ವೈದ್ಯರಿಗೆ ಗೊತ್ತಿರಲಿಲ್ಲ. ಅರಿವಳಿಕೆಯ ಅರಿವಿಲ್ಲದಿದ್ದುದರಿಂದ ಶಸ್ತ್ರಚಿಕಿತ್ಸೆಯ ವೇಳೆ ರೋಗಿಗಳು ಎಚ್ಚರವಾಗಿಯೇ ಇರುತ್ತಿದ್ದರು. ಶಸ್ತ್ರಚಿಕಿತ್ಸೆಗಳು ಅತೀವ ನೋವನ್ನುಂಟುಮಾಡುತ್ತಿದ್ದವು. ಆದ್ದರಿಂದ, ಶಸ್ತ್ರಚಿಕಿತ್ಸೆಯನ್ನು ಆದಷ್ಟು ಬೇಗನೆ ಮುಗಿಸಲು ವೈದ್ಯರು ಪ್ರಯತ್ನಿಸುತ್ತಿದ್ದರು. ಅವಸರವಸರವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಕಡ್ಡಾಯವಿದ್ದುದರಿಂದ ಅನೇಕ ತಪ್ಪುಗಳು ನಡೆದು ಹೋಗುತ್ತಿದ್ದವು.

ಇಂತಹ ಅತ್ಯಂತ ಘೋರ, ಕೊಳಕು, ಅನಾರೋಗ್ಯಕರ ವಾತಾವರಣದಲ್ಲಿ ರೋಗಿಗಳಿಗೆ ನಂಜು ಸೋಂಕಿ, ಅವರು ನರಳುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ಆಸ್ಪತ್ರೆಗಳು ಅಂದು ಸಾವಿನ ಹೆಬ್ಬಾಗಿಲುಗಳೆಂದೇ ಕುಖ್ಯಾತವಾಗಿದ್ದವು! ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಗೆ ಬದಲು ಮನೆಗಳಲ್ಲೇ ನೆರವೇರಿಸಿದರೆ, ರೋಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಿದ್ದವೆಂದು ಜನ ನಂಬಿದ್ದರು! ಇಂತಹ ಸೋಂಕು ರೋಗಕ್ಕೆ ಆಸ್ಪತ್ರೆ ನಂಜು  ಎಂಬ ಹೆಸರಿತ್ತು. ಹೀಗೆ ನರಳುವ ರೋಗಿಗಳು ಸೋಂಕು ತಗುಲಿದ ಮೂರು ನಾಲ್ಕು ದಿನಗಳಲ್ಲಿ ಸಾಯುತ್ತಿದ್ದರು. ಆದರೆ, ಅಂದಿನ ವೈದ್ಯರಿಗೆ ಇದರ ಕಾರಣ ಗೊತ್ತಿರಲಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಚೇತರಿಸಿಕೊಳ್ಳುತ್ತಿದ್ದ ರೋಗಿಗಳು ಸಾಮಾನ್ಯವಾಗಿ ಆಸ್ಪತ್ರೆ ನಂಜಿಗೆ ತುತ್ತಾಗಿ ತಮ್ಮ ಕಣ್ಣ ಮುಂದೆಯೇ ಸಾಯುವ ಭೀಕರ ದೃಶ್ಯವನ್ನು ವೈದ್ಯರು ಅಸಹಾಯಕರಾಗಿ ನೋಡಿ ನಿಟ್ಟುಸಿರು ಬಿಡುತ್ತಿದ್ದರು.

ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸಿ, ಪಾಠ ಕಲಿಯಲು ವೈದ್ಯವಿದ್ಯಾರ್ಥಿಗಳು ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ತುಂಬಿರುತ್ತಿದ್ದರು. ಜೊತೆಗೆ, ಅನೇಕ ನಾಗರೀಕರು ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸಲು ಟಿಕೆಟ್‌ಕೊಂಡು, ತಮ್ಮೊಡನೆ ಬೀದಿಯ ಕೊಳಕನ್ನೂ ಹೊತ್ತು ಒಳಬರುತ್ತಿದ್ದರು. ಹೀಗಾಗಿಶಸ್ತ್ರಚಿಕಿತ್ಸಾ ಕೊಠಡಿಗಳು ಕೊಳಕು ಜನರಿಂದ ತುಂಬಿರುತ್ತಿದ್ದವು. ಆದರೆ, ಇದರ ಪರಿಣಾಮ ಯಾರಿಗೂ ಅರಿವಾಗಿರಲಿಲ್ಲ. ವೈದ್ಯರು ತಮ್ಮ ಕೈಗಳನ್ನು ತೊಳೆಯುತ್ತಿರಲಿಲ್ಲ. ಅವರು ತೊಡುತ್ತಿದ್ದ ಹಳೆಯ, ರಕ್ತದ ಕಲೆಗಳಿಂದ ತುಂಬಿದ ಏಪ್ರನ್‌ಗಳು ದುರ್ನಾತ ಸೂಸುತ್ತಿದ್ದವು. ಈ ದುರ್ನಾತವನ್ನು ವೈದ್ಯರು ‘ಆಸ್ಪತ್ರೆ ಗಬ್ಬು’ ಎಂದು ಆಡಿಕೊಳ್ಳುತ್ತಿದ್ದರು! ತಿಂದ ಆಹಾರ ಕೊಳೆತು, ಅದರಿಂದ ವಿವಿಧ ರಾಸಾಯನಿಕಗಳು ಉತ್ಪತ್ತಿಯಾಗುವುದರಿಂದ ರೋಗ ಉಂಟಾಗುತ್ತದೆ ಎಂದು ಅಂದಿನ ವೈದ್ಯರು ನಂಬಿದ್ದರು. ಸೂಕ್ಷ್ಮಜೀವಿಗಳ ವಿಷಯವೇ ಅವರಿಗೆ ಗೊತ್ತಿರಲಿಲ್ಲ. ಆಹಾರ, ಮಾಂಸ, ಹಾಲು ಮುಂತಾದ ವಸ್ತುಗಳು ಗಾಳಿಯಲ್ಲಿರುವ ಆಮ್ಲಜನಕದ ವರ್ತನೆಯಿಂದ ಕೆಡುತ್ತದೆಂದೂ, ಆಸ್ಪತ್ರೆ ನಂಜಿನಿಂದಾದ ಗಾಯಗಳು, ಹುಣ್ಣುಗಳು ಕೊಳೆಯಲು ಆಮ್ಲಜನಕವೇ ಕಾರಣವೆಂದೂ ಜನ ನಂಬಿದ್ದರು. 1846ರಲ್ಲಿ ಅರಿವಳಿಕೆಯ ಆಗಮನವಾಯಿತು. ಆದರೆ, ಇದರಿಂದ ಶಸ್ತ್ರಚಿಕಿತ್ಸೆ ಮತ್ತಷ್ಟು ಭೀಕರವಾಗಿ ಪರಿಣಮಿಸಿತು. ರೋಗಾಣುಗಳನ್ನರಿಯದ ವೈದ್ಯರು ಅರಿವಳಿಕೆಯ ಹಿನ್ನೆಲೆಯಲ್ಲಿ ಶಸ್ತ್ರಗಳನ್ನು ಅಂಗಗಳ ಆಳಕ್ಕೆ ತುರುಕಿ ಕೊರೆದು ತೀವ್ರ ಗಾಯಗಳನ್ನು ಉಂಟುಮಾಡುತ್ತಿದ್ದರು. ಇದರಿಂದ ಸೋಂಕಿನ ಪ್ರಮಾಣ ಹೆಚ್ಚುತ್ತಿತ್ತು! ಮೊದಮೊದಲು ಲಿಸ್ಟರ್ ಕೂಡ ಇತರ ವೈದ್ಯರುಗಳಂತೆ ರೋಗಗಳಿಗೆ ರಾಸಾಯನಿಕ ಹಿನ್ನೆಲೆ ಇದೆಯೆಂದೇ ನಂಬಿದ್ದರು. ಆದರೆ, ಕ್ರಮೇಣ ಅವರಿಗೆ ಇದು ಸರಿಯೆನಿಸಲಿಲ್ಲ. ತಮ್ಮ ಸಂಶಯವನ್ನು ತಮ್ಮ ಸಹೋದ್ಯೋಗಿ ಆ್ಯಂಡರ್‌ಸನ್ ಅವರೊಡನೆ ಹಂಚಿಕೊಂಡರು. ಆಗ ‘ನೀನು ಲೂಯಿಸ್ ಪಾಸ್ಚರ್ ಅವರ ಸಂಶೋಧನೆಗಳನ್ನು ಓದಿರುವೆಯಾ? ಅವನ್ನು ಓದಿದಾಗ ನಿನಗೇನೇನು ಅನಿಸಿತು?’ ಎಂದು ಆ್ಯಂಡರ್‌ಸನ್ ಲಿಸ್ಟ್ಟರ್ ಕಡೆ ನೋಡುತ್ತ ಪ್ರಶ್ನಿಸಿದರು. ‘ಪಾಶ್ಚರ್‌ಯಾರು? ಅವರ ಬಗ್ಗೆ ನನಗೇನೂ ತಿಳಿಯದಲ್ಲ?’ ಎಂದು ಲಿಸ್ಟರ್ ಉತ್ತರಿಸಿದರು. ‘ಪಾಶ್ಚರ್ ಒಬ್ಬ ಅತ್ಯಂತ ಪ್ರತಿಭಾವಂತ ಫ್ರೆಂಚ್ ವಿಜ್ಞಾನಿ. ಸೋಂಕಿನ ಬಗ್ಗೆ ಅವರು ಆಳವಾದ ಸಂಶೋಧನೆಗಳನ್ನು ನಡೆಸಿ ಅವನ್ನು ಪ್ರಕಟಿಸಿದ್ದಾರೆ. ನನ್ನ ಬಳಿ ಅವರ ಪ್ರಕಟಣೆಗಳಿವೆ. ನೀನು ಇಷ್ಟಪಟ್ಟರೆ ನಿನಗೆ ಕೊಡುತ್ತೇನೆ. ಅವನ್ನು ಮನಸ್ಸಿಟ್ಟು ಓದಿದರೆ, ಸೋಂಕಿನ ಬಗ್ಗೆ ನಿನಗೆ ಅನೇಕ ಹೊಸ ವಿಷಯಗಳು ಪರಿಚಯವಾಗುತ್ತವೆ’ ಎಂದು ಆ್ಯಂಡರ್‌ಸನ್ ಉತ್ತರಿಸಿದರು. ಲಿಸ್ಟರ್ ಕೂಡಲೇ ಪಾಶ್ಚರ್‌ರ ಪ್ರಕಟಣೆಗಳನ್ನು ಆ್ಯಂಡರ್‌ಸನ್‌ ಅವರಿಂದ ಪಡೆದುಕೊಂಡು ಅವನ್ನು ಆಳವಾಗಿ ಅಭ್ಯಾಸ ಮಾಡಿದರು. ರೋಗಾಣುಗಳು ಆಹಾರವನ್ನಷ್ಟೇ ಅಲ್ಲ, ನಂಜನ್ನೂ ಉಂಟುಮಾಡಿ ಗಾಯಗಳನ್ನೂ ಕೊಳೆಸುತ್ತವೆ ಎಂದು ಪಾಶ್ಚರ್ ಸ್ಪಷ್ಟವಾಗಿ ತಮ್ಮ ಸಂಶೋಧನೆಗಳಲ್ಲಿ ತಿಳಿಸಿದ್ದರು. ನಂಜುರೋಧಕಗಳಿಂದ ಇವನ್ನು ನಿಯಂತ್ರಿಸಬಹುದು ಎಂಬುದನ್ನು ಲಿಸ್ಟರ್ ಮನಗಂಡರು. ಕಾರ್ಬಾಲಿಕ್‌ ಆಮ್ಲವು (ಈಗ ಅದನ್ನು ಫಿನಾಲ್‌ ಎಂದು ಕರೆಯುತ್ತಾರೆ) ಒಂದು ಅತಿ ಒಳ್ಳೆಯ ನಂಜುರೋಧಕವಾದ್ದರಿಂದ ಅದರ ಮೂಲಕ ರೋಗಾಣುಗಳನ್ನು ಧ್ವಂಸಮಾಡಬಹುದು ಎಂದು ಅರಿತಿದ್ದರು.

ಕಾರ್ಬಾಲಿಕ್ ಆಮ್ಲದ ಮ್ಯಾಜಿಕ್!

1865ನೇ ಆಗಸ್ಟ್ ನ ಒಂದು ದಿನ ಸುಮಾರು 10-11 ವರ್ಷ ವಯಸ್ಸಿನ ಬಾಲಕನ ಕಾಲಮೇಲೆ ಕುದುರೆಗಾಡಿಯ ಚಕ್ರ ಹರಿದು ತೀವ್ರ ಗಾಯಗಳಾಗಿದ್ದವು. ನೋವು ತಾಳಲಾರದೆ ಚೀತ್ಕರಿಸುತ್ತಿದ್ದ ಆ ಬಾಲಕನನ್ನು ಚಿಕಿತ್ಸೆಗಾಗಿ ಲಿಸ್ಟರ್ ಇದ್ದ ಆಸ್ಪತ್ರೆಗೆ ಕರೆತಂದರು. ಆ ಬಾಲಕನನ್ನು ಲಿಸ್ಟರ್ ಚಿಕಿತ್ಸೆ ನೀಡುತ್ತಿದ್ದ ರೋಗಕೋಣೆಗೆ ಸೇರಿಸಲಾಯಿತು. ಗಾಯಗಳನ್ನು ಪರೀಕ್ಷಿಸಿದ ಲಿಸ್ಟರ್ ಅವನ್ನು ಕಾರ್ಬಾಲಿಕ್ ಆಮ್ಲದಿಂದ ತೊಳೆದು ಸ್ವಚ್ಛಮಾಡಿ, ಔಷಧ ಲೇಪಿಸಿ, ಹದವಾದ ಹತ್ತಿಯನ್ನು ಗಾಯದ ಮೇಲಿಟ್ಟು ಶುಭ್ರ ಬಟ್ಟೆಯನ್ನು ತಂದು ಕಟ್ಟುಪಟ್ಟಿಕಟ್ಟಿದರು. ದಿನವೂ ಗಾಯವನ್ನು ಇದೇ ರೀತಿ ಶುಭ್ರಗೊಳಿಸಿ ಔಷಧವನ್ನು ಲೇಪಿಸುತ್ತಬಂದರು. 6-7 ದಿನಗಳ ನಂತರ ಗಾಯವನ್ನು ಪರೀಕ್ಷಿಸಿದಾಗ ಗಾಯ ಸಂಪೂರ್ಣವಾಗಿ ವಾಸಿಯಾಗಿತ್ತು! ಕಾರ್ಬಾಲಿಕ್ ಆಮ್ಲ ಗಾಯದ  ಮೇಲೆ ಮೋಡಿ ಮಾಡಿದ್ದನ್ನು ನೋಡಿ ಲಿಸ್ಟರ್ ಆನಂದ ಪರವಶರಾದರು. ಆ ಬಾಲಕನನ್ನು ಸಾವಿನ ದವಡೆಯಿಂದ ಬಚಾವ್ ಮಾಡಿದೆನೆಂದು ಹೆಮ್ಮೆಪಟ್ಟುಕೊಂಡರು. ತಮ್ಮ ರೋಗ ಚಿಕಿತ್ಸಾ‌ ಕೊಠಡಿಯಲ್ಲಿದ್ದ ಇನ್ನೂಒಂಭತ್ತು ರೋಗಿಗಳಿಗೂ ಲಿಸ್ಟರ್ ಇದೇ ರೀತಿಯ ಚಿಕಿತ್ಸೆ ನೀಡಿದರು. ಅವರೆಲ್ಲರೂ ಬಲುಬೇಗ ಚೇತರಿಸಿಕೊಂಡು ಆರೋಗ್ಯವಂತರಾದರು. ಇದರಿಂದ ಉತ್ತೇಜಿತರಾದ ಲಿಸ್ಟರ್ ಶಸ್ತ್ರಚಿಕಿತ್ಸೆಗೂ ಈ ವಿಧಾನವನ್ನು ಅಳವಡಿಸಿಕೊಂಡರು. ಗಾಳಿಯಲ್ಲಿ ತೇಲುತ್ತಿರುವ ಜೀವಾಣುಗಳೇ ನಂಜುರೋಗಕ್ಕೆ ಕಾರಣವೆಂದು ಲಿಸ್ಟರ್‌ಗೆ ಅನಿಸಿದರೂ ವೈದ್ಯರು ಬಳಸುವ ಉಡುಪು, ಅವರ ಕೈಗಳು, ಅವರು ಬಳಸುವ ಶಸ್ತ್ರಗಳೂ ನಂಜುಕಾರಕವಾಗಿರಬಹುದು ಎಂದು ಲಿಸ್ಟರ್ ಅನುಮಾನಿಸಿದರು. ರೋಗಿಗಳು ಆಸ್ಪತ್ರೆ ನಂಜಿಗೆ ಬಲಿಯಾಗಲು ವೈದ್ಯರೇ ಮುಖ್ಯಕಾರಣವೆಂದು ತಿಳಿದಾಗ ಲಿಸ್ಟರ್‌ಗೆ ಅತ್ಯಂತ ಬೇಸರವಾಯಿತು. ಶಸ್ತ್ರಚಿಕಿತ್ಸಾ ಸಮಯದಲ್ಲಿ ಲಿಸ್ಟರ್ ವಿಶೇಷ ಆಸಕ್ತಿ ವಹಿಸಿ ತಮ್ಮ ಕೈಗಳನ್ನೂ, ತಾವು ಬಳಸುವ ಶಸ್ತ್ರಗಳನ್ನೂ ಕಾರ್ಬಾಲಿಕ್ ಆಮ್ಲದಿಂದ ಸಿಂಪಡಿಸಲು ಪ್ರಾರಂಭಿಸಿದರು. ಜೊತೆಗೆ, ಗಾಯಗಳ ಮೇಲೂ ಕಾರ್ಬಾಲಿಕ್‌ಆಮ್ಲವನ್ನು ಲೇಪಿಸುವ ಪರಿಪಾಠವನ್ನು ಪ್ರಾರಂಭಿಸಿದರು. ಇದರಿಂದ ಅವರಿಗೆ ದೊರೆತ ಫಲಿತಾಂಶ ನಂಬಲಾರದಷ್ಟು ಆಶ್ಚರ್ಯಕರವೂ, ಆಶಾದಾಯಕವೂ ಆಗಿತ್ತು. ಶಸ್ತ್ರಚಿಕಿತ್ಸಾ ಗಾಯಗಳು ಬಲುಬೇಗ ವಾಸಿಯಾಗತೊಡಗಿದವು. ನೂರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದ್ದ ಶಸ್ತ್ರಚಿಕಿತ್ಸಾ ಕ್ರಮವನ್ನು ಲಿಸ್ಟರ್ ತಮ್ಮ ಕ್ರಾಂತಿಕಾರಕ ಪ್ರಯೋಗದಿಂದ ಪಳಗಿಸಿ, ಹತೋಟಿಗೆ ತಂದಿದ್ದರು. ಇದರಿಂದ ಜನರಿಗೆ ಶಸ್ತ್ರಚಿಕಿತ್ಸೆಯಲ್ಲಿ ನಂಬಿಕೆ ಹಾಗೂ ವಿಶ್ವಾಸ ಮೂಡಲಾರಂಭಿಸಿ, ಅಳುಕದೆ, ಹೆದರದೆ, ಧೈರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಳ್ಳಲಾರಂಭಿಸಿದರು. ಲಿಸ್ಟರ್ ಅವರ ಜಾಗದಲ್ಲಿ ಹಿಂದೆ ಇದ್ದ ಲೋರಿ ಎಂಬ ವೈದ್ಯರು ಇಂಗ್ಲೆಂಡ್ ದೇಶದಲ್ಲಿ ಸುಮಾರು ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರೂ ಕೇವಲ ಮೂರೇ ಮೂರು ರೋಗಿಗಳು ಮಾತ್ರ ಬದುಕಿ, ಜೀವಂತವಾಗಿ ಹಿಂದಿರುಗಿದದಂತೆ! ಇದರಿಂದ, ಆಸ್ಪತ್ರೆ ನಂಜು ಸೋಂಕು ಎಷ್ಟು ಭೀಕರವಾಗಿತ್ತು ಎಂಬುದು ಗೊತ್ತಾಗುತ್ತದೆ. ಲಿಸ್ಟರ್‌ರ ಈ ಪ್ರಯೋಗದಿಂದ ನಂಜುರೋಧಕಗಳು ಬಳಕೆಗೆ ಬಂದವು. ನಂಜುರೋಧಕದ ಯಶಸ್ವೀ ಚಿಕಿತ್ಸೆಯನ್ನು ಲಿಸ್ಟರ್ ಪ್ರಚಾರ ಪಡಿಸಿದಾಗ ವೈದ್ಯ ಸಮುದಾಯ ಅದನ್ನು ತೀವ್ರವಾಗಿ ವಿರೋಧಿಸಿತು.ಕಣ್ಣಿಗೆ ಗೋಚರಿಸದ ಸೂಕ್ಷ್ಮಜೀವಿಗಳು ಮಾನವರನ್ನು ಈ ರೀತಿ ಕಾಡಿ ಆಹುತಿ ತೆಗೆದುಕೊಳ್ಳುತ್ತವೆ ಎಂಬ ವಿಚಾರವನ್ನು ಒಪ್ಪಲು ವೈದ್ಯರು ಸಿದ್ಧರಿರಲಿಲ್ಲ. ಇದಕ್ಕೆ ಹೊಸ ಪೀಳಿಗೆಯ ವೈದ್ಯರೇ ಬೇಕಾಯಿತು ೩-೪ ದಶಕಗಳೇ ಬೇಕಾಯಿತು. ರೋಗಾಣು ಸಿದ್ಧಾಂತವೇ ಅನೇಕ ರೋಗಗಳಿಗೆ ಮೂಲಕಾರಣ; ಹುದುಗುವಿಕೆ, ಮತ್ತು ಹಳಸುವಿಕೆಗಳಿಗೆ ಸೂಕ್ಷ್ಮಜೀವಿಗಳೇ ಕಾರಣವೆಂದು ಪಾಶ್ಚರ್ ತೋರಿಸಿಕೊಟ್ಟಿದ್ದರು. ಪಾಶ್ಚರ್‌ರ ಸಂಶೋಧನೆಗಳೇ ಆಧುನಿಕ ವೈದ್ಯಶಾಸ್ತ್ರದ ಬುನಾದಿಯಾಗಿ ವೈದ್ಯಶಾಸ್ತ್ರ ಕ್ರಾಂತಿಗೆ ಕಾರಣವಾಯಿತು. ಮೊಟ್ಟಮೊದಲಿಗೆ ಲಿಸ್ಟರ್ ವೈಜ್ಞಾನಿಕ ಸೂತ್ರವೊಂದನ್ನು ವೈದ್ಯಶಾಸ್ತ್ರಕ್ಕೆ ಅನ್ವಯಿಸಿದ್ದರು. ಲಿಸ್ಟರ್‌ರ ಪ್ರಯತ್ನಗಳು ವಿಜ್ಞಾನ ಮತ್ತು ವೈದ್ಯ ಶಾಸ್ತ್ರಗಳ ನಡುವೆ ನಡೆದ ಪರಸ್ಪರ ಪ್ರೇಮಕತೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇದರಿಂದ, ವೈದ್ಯ ಸಮುದಾಯ ಲಿಸ್ಟರನ್ನು ಆಧುನಿಕ ಶಸ್ತ್ರಚಿಕಿತ್ಸೆಯ ಪಿತ ಎಂದೇ ಪರಿಗಣಿಸುತ್ತದೆ.

ಇಂದಿನ ಆಸ್ಪತ್ರೆಗಳು ಮೊದಲಿನಂತಲ್ಲ. ಚಿಕಿತ್ಸೆಗಾಗಿ ದಾಖಲಾದ ರೋಗಿಗಳಲ್ಲಿ, ತಾವು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಜೀವಂತವಾಗಿ, ಆರೋಗ್ಯವಂತರಾಗಿ ಬದುಕಿ, ಮನೆಗೆ ಹಿಂದಿರುಗಬಲ್ಲೆವು ಎಂಬ ಆತ್ಮವಿಶ್ವಾಸ ಮೂಡಿದೆ. ಈ ಎಲ್ಲ ಕ್ರಾಂತಿಕಾರಕ ಹೆಜ್ಜೆಗಳಿಂದ ಲಿಸ್ಟರ್ ಜನಪ್ರಿಯರಾದರು. ಅವರ ಹೆಸರು  ಜಗತಪ್ರಸಿದ್ಧವಾಯಿತು.  ಇಂಗ್ಲೆಂಡ್ ದೇಶದ ವಿಕ್ಟೋರಿಯ ಮಹಾರಾಣಿ ಲಿಸ್ಟರ್ ಅವರನ್ನು ರಾಜ್ಯವೈದ್ಯರಾಗಿ ನೇಮಿಸಿಕೊಂಡರು. ಆದರೆ, ಲಿಸ್ಟರ್‌ಎಂದೂ ತಮ್ಮ ಸಾಧನೆಗಳನ್ನು ನೆನೆದು ಸ್ವಲ್ಪವೂ ಬೀಗಲಿಲ್ಲ. ತಮ್ಮ ಕೀರ್ತಿಗೆ ಲೂಯಿಪಾಶ್ಚರ್‌ರ ಸಂಶೋಧನೆಗಳೇ ಕಾರಣವೆಂದೂ, ತಾವು ಎಂದಿಗೂ ಪಾಶ್ಚರ್‌ ಗೆ ಆಭಾರಿಯಾಗಿರುವುದಾಗಿಯೂ ನಮ್ರತೆಯಿಂದ ಹೇಳಿಕೊಂಡರು.

1 comment:

  1. Good article. It remembers Joseph lister, a lesson what I taught around 2005.

    ReplyDelete