ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, March 4, 2022

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಕಳೆದ ವಾರವಷ್ಟೇ ರಾಜ್ಯದ ಹಾಗೂ ರಾಷ್ಟ್ರದ ಎಲ್ಲೆಡೆ ‘ರಾಷ್ಟ್ರೀಯ ವಿಜ್ಞಾನ ದಿನ’ ದ ಆಚರಣೆಯ ಸಂಭ್ರಮವನ್ನು ಕಂಡಿದ್ದೇವೆ. ಅದರಲ್ಲಿಯೂ ಈ ವರ್ಷ ನಮ್ಮ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ವಿಜ್ಞಾನ ದಿನದ ಆಚರಣೆಗೆ ವಿಶೇಷ ಕಳೆ ಕಟ್ಟಿದ್ದನ್ನು ಗಮನಿಸಿದ್ದೇವೆ. ‘ವಿಜ್ಞಾನಮ್ ಸರ್ವತ್ರ ಪೂಜ್ಯತೆ” ಎಂಬ ಘೋಷ ವಾಕ್ಯದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಗುರುತಿಸಲಾದ 75 ಕೇಂದ್ರಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಸ್ಪರ್ಧೆಗಳು, ಪ್ರವಚನಗಳು, ಪ್ರದರ್ಶನಗಳು ಹಾಗೂ ಸಂವಾದಗಳನ್ನು ನಡೆಸಲಾಗಿತ್ತು. ಕಳೆದ ತಿಂಗಳ ಕೊನೆಯ ವಾರ ಪೂರ್ತಿ, ಇಡೀ ದೇಶದಲ್ಲಿ ವಿಜ್ಞಾನದ ಹಬ್ಬದ ವಾತಾವರಣವಿತ್ತು. ರಾಜ್ಯದ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ತಮ್ಮ, ತಮ್ಮ ನೆಲೆಯಲ್ಲಿ ಆಚರಿಸಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯ.

2022ರ ಮಾರ್ಚ್ ತಿಂಗಳ ‘ಸವಿಜ್ಞಾನ’ ಸಂಚಿಕೆ ಈ ಸಡಗರದ ಮಧ್ಯೆ ಪ್ರಕಟವಾಗುತ್ತಿದೆ. ನಿಮ್ಮ ಆಸಕ್ತಿ ಹಾಗೂ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಸಾಂದರ್ಭಿಕ ಹಾಗೂ ವೈವಿಧ್ಯಮಯ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ಖ್ಯಾತ ಭೌತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಬಗ್ಗೆ ರಾಮಚಂದ್ರ ಭಟ್ ಬರೆದ ಲೇಖನವಿದೆ. ಹಾಗೆಯೇ ಇಂದು ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಡೀಸಲ್ ಇಂಜಿನ್‍ಗಳ ಆವಿಷ್ಕಾರ ಮಾಡಿದ ವಿಜ್ಞಾನಿ ಡೀಸಲ್ ಅವರ ಜನ್ಮದಿನದ ಸ್ಮರಣೆಯಲ್ಲಿ ಅವರ ಬಗ್ಗೆ ನಿವೃತ್ತ ಮುಖ್ಯ ಶಿಕ್ಷಕ ಸುರೇಶ್ ಬರೆದಿರುವ ಲೇಖನವಿದೆ. ವಿಶ್ವ ಅರಣ್ಯ ದಿನದ ಸಂದರ್ಭಕ್ಕೆಂದು ಶಿಕ್ಷಕ ಹಾಗೂ ವನ್ಯ ಜೀವಿ ತಜ್ಞ ಕೃಷ್ಣ ಚೈತನ್ಯ ಬರೆದಿರುವ ‘ಕಾಡಿನ ಸಂರಕ್ಷಣೆಯ ಹೊಣೆ ಯಾರ ಕೈಯಲ್ಲಿದೆ?’ ಎಂಬ ವಿಚಾರ ಪ್ರಚೋದಕ ಲೇಖನವಿದೆ. ನಮ್ಮ ನಿತ್ಯ ಜೀವನದಲ್ಲಿ ಕೇಳುವ ಬಗೆ ಬಗೆಯ ಶಬ್ಧಗಳ ಹಿಂದಿರುವ ವಿಜ್ಞಾನವನ್ನು ಕುತೂಹಲಕಾರಿಯಾಗಿ ವಿವರಿಸುವ ಲೇಖನವೊಂದನ್ನು ಭೌತ ವಿಜ್ಞಾನ‌ ಉಪನ್ಯಾಸಕ ರೋಹಿತ್ ಬರೆದಿದ್ದಾರೆ. ಬೊಂಬೆಗಳನ್ನು ಬಳಸಿ ವಿಜ್ಞಾನ ಬೋಧಿಸುವ ಶಿಕ್ಷಕ ಸಿದ್ದು ಬಿರಾದಾರ್ ತಮ್ಮ ಸರಣಿ ಲೇಖನದಲ್ಲಿ ಈ ಬಾರಿ ಕಿರೀಟ ಗೊಂಬೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿಜ್ಞಾನ ಶಿಕ್ಷಕ ಡಾ.ಶಶಿಧರ್ ಕುಂಬಾರ್ ಅವರನ್ನು ಈ ಬಾರಿಯ ‘ಸಾಧಕ ಶಿಕ್ಷಕ’ರನ್ನಾಗಿ ಪರಿಚಯಿಸಲಾಗಿದೆ. ಜೊತೆಗೆ, ನಮ್ಮ ಖಾಯಂ ಅಂಕಣಗಳಾದ ಒಗಟುಗಳು, ವ್ಯಂಗ್ಯ ಚಿತ್ರಗಳು ಹಾಗೂ ಪದಬಂಧ ನಿಮ್ಮ ಮಿದುಳಿಗೆ ಕಸರತ್ತು ನೀಡಲಿವೆ.

ಇನ್ನೇಕೆ ತಡ? ಸಂಚಿಕೆಯ ಲೇಖನಗಳನ್ನು ಓದಿ. ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ. ಸಲಹೆಗಳೇನಾದರೂ ಇದ್ದರೆ, ನಮಗೆ ತಿಳಿಸಿ. ನಮ್ಮ ಪ್ರಯತ್ನ ನಿಮಗೆ ಮೆಚ್ಚುಗೆಯಾಗಿದ್ದರೆ, ನಿಮ್ಮ ಸಹೋದ್ಯೋಗಿಗಳಿಗೆ, ಹಿತೈಶಿಗಳಿಗೆ ‘ಸವಿಜ್ಞಾನ’ದ ಬಗ್ಗೆ ತಿಳಿಸಿ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


No comments:

Post a Comment