ಸಂವೇದನಾಶೀಲ, ಮಾತೃಹೃದಯಿ ವಿಜ್ಞಾನಿ - ಲೂಯಿ ಪಾಶ್ಚರ್
ವಿಜ್ಞಾನ ಶಿಕ್ಷಕರು
ಅದು 1885ನೇ ಇಸವಿಯ ಘಟನೆ. ತೀವ್ರರೋಗದಿಂದ ಬಳಲುತ್ತಿರುವ ಬಾಲಕನೊಬ್ಬನನ್ನು ಆತನ ತಂದೆ, ತಾಯಿ ಕಂಡ, ಕಂಡ ವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು. ಎಲ್ಲಾ ವೈದ್ಯರು ಅಸಹಾಯಕರಾಗಿ ಕೈ ಚೆಲ್ಲಿ ನಿಮ್ಮ ಮಗನನ್ನು ‘ದೇವರೇ ಕಾಪಾಡಬೇಕು’ ಎಂದರು. ತಂದೆ, ತಾಯಿ ದೇವರಿಗೆ ಇನ್ನಿಲ್ಲದ ಸೇವೆ ಮಾಡಿದರು. ಆಗ ಯಾರೋ ಈ ವ್ಯಕ್ತಿಯ ಬಗ್ಗೆ ತಿಳಿಸಿದರು. ಈತನೇನೂ ವೈದ್ಯನೂ ಅಲ್ಲ ಮಂತ್ರವಾದಿಯೂ ಅಲ್ಲ.. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ ಅಲ್ಲವೇ? ಯಾರಿಂದಲೋ ಈತನ ಬಗ್ಗೆ ಕೇಳಿ, ಕೊನೆಯ ಪ್ರಯತ್ನವಾಗಿ ಮರಣಶಯ್ಯೆಯಲ್ಲಿದ್ದ ಮಗುವನ್ನು ಈತನ ಬಳಿಗೆ ಕರೆತಂದರು. ಬೇರೆ ಯಾವುದೇ ಆಯ್ಕೆ ಇಲ್ಲದ ಕಾರಣ ಆದದ್ದಾಗಲಿ ದೈವೇಚ್ಛೆ ಎಂದುಕೊಂಡು ಆಗ ತಾನೆ ತಾನು ಕಂಡುಹಿಡಿದಿದ್ದ ಚುಚ್ಚುಮದ್ದನ್ನು ಪ್ರಾಯೋಗಿಕವಾಗಿ ನೀಡಿದ! ಅಚ್ಚರಿ ಎನ್ನುವಂತೆ ಈತನ ಈ ಚಿಕಿತ್ಸೆಯಿಂದ ಬಾಲಕ ಎದ್ದು ಕುಳಿತ! ಅಂದು ಸಾವೊಂದೇ ಪರಿಹಾರವಾಗಿದ್ದ ರೇಬಿಸ್ ಎಂಬ ಕಾಯಿಲೆಯಿಂದ ನರಳುತ್ತಿದ್ದ ಈ ಬಾಲಕ ಪವಾಡ ಸದೃಶವಾಗಿ ಬದುಕುಳಿದ. ಹೀಗೆ, ರೇಬಿಸ್ ಕಾಯಿಲೆಗೆ ಚುಚ್ಚುಮದ್ದನ್ನು ಕಂಡು ಹಿಡಿದು ಮನುಕುಲವನ್ನು ರೇಬಿಸ್ ರೋಗದಿಂದ ಪಾರುಮಾಡಿದ ಆ ಮಹಾನ್ ವ್ಯಕ್ತಿಯೇ ಲೂಯಿ ಪಾಶ್ಚರ್.
ಲೂಯಿ ಪಾಶ್ಚರ್ 1822ರ ಡಿಸೆಂಬರ್ 27 ರಂದು ಸಾರ್ಜೆಂಟ್ ಜೋಸೆಫ್ ಪಾಶ್ಚರ್ ದಂಪತಿಗಳ ಮಗನಾಗಿ ಜನಿಸಿದರು.
ಬಾಲ್ಯದಲ್ಲಿ ಈ ಬಾಲಕ ಚಿತ್ರಕಲೆಯಲ್ಲಿ ಅತ್ಯಂತ ಪ್ರತಿಭಾಶಾಲಿ ಬಾಲಕನಾಗಿದ್ದ. ಬಾಲಕ ಪ್ಯಾಶ್ಚರ್ ಗೆ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ. ಆತನ ಕುಂಚದಲ್ಲಿ ಅದ್ಭುತ ಚಿತ್ರಗಳೇ ಮೂಡಿ ಬರುತ್ತಿದ್ದವು. ತನ್ನ ತಂದೆ ತಾಯಿಗಳು,ಮಿತ್ರರು, ಶಾಲಾ ಗುರುಗಳು, ಪರಿಸರ ಹೀಗೆ ಅನೇಕ ಚಿತ್ರಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿ ಎಲ್ಲರನ್ನೂ ತನ್ನ ಅಭಿಜಾತ ಕಲೆಯಿಂದ ವಿಸ್ಮಯಗೊಳಿಸುತ್ತಿದ್ದ. ಬೆಳೆಯುವ ಪೈರಿನ ತಾಕತ್ತು ಮೊಳಕೆಯಲ್ಲೇ ತಿಳಿಯುವುದಲ್ವೇ? ಹೀಗೆಯೇ ಸೃಜನಶೀಲತೆ, ತನ್ಮಯತೆ, ನಿಸರ್ಗದ ಮೇಲಿನ ಅತೀವ ಪ್ರೀತಿ, ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಅಭಿಜಾತ ಪ್ರವೃತ್ತಿ, ದಿನಗಟ್ಟಲೇ ಬೇಸರವಿಲ್ಲದೆ ಕೆಲಸ ಮಾಡುವ ಛಲ, ತಾಳ್ಮೆ ಮೊದಲಾದ ಗುಣಗಳು ಸಂಶೋಧಕನಿಗೆ ಅತ್ಯಂತ ಅವಶ್ಯಕ. ಈ ಗುಣಗಳೇ ಮುಂದೆ ಸಾಧಾರಣ ವಿದ್ಯಾರ್ಥಿಯಾಗಿದ್ದ ಲೂಯಿ ಪಾಶ್ಚರ್ ರವರನ್ನು ವಿಶ್ವವಿಖ್ಯಾತ ವಿಜ್ಞಾನಿಯನ್ನಾಗಿಸಿದವು. ವಿದ್ಯಾರ್ಥಿಗಳಲ್ಲಿರುವ ಇಂತಹ ಅತಿಶಯ ಗುಣಗಳನ್ನು ಗುರುತಿಸಿ ಎಳವೆಯಲ್ಲೇ ವೃದ್ಧಿಸುವುದು - ನಮ್ಮ ಆದ್ಯ ಕರ್ತವ್ಯವಾಗಬೇಕು.
ಲೂಯಿಸ್ ಪಾಶ್ಚರ್ ಗೆ ಮೊದಲಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಯಾಗಿತ್ತು. ತಲೆತಗ್ಗಿಸಿ ಓದುವಂತೆ ಮಾಡುವ ಈ ಪುಸ್ತಕಗಳು ಭವಿಷ್ಯದಲ್ಲಿ ವ್ಯಕ್ತಿಯನ್ನು ಹೆಮ್ಮೆಯಿಂದ ತಲೆಯೆತ್ತಿ ನೋಡುವಂತೆ ಮಾಡುತ್ತವೆ ಎಂಬ ಮಾತು ಸುಳ್ಳಲ್ಲ. ಜೋಸೆಫ್ ಡ್ರೋಜ್ ಬರೆದ “The Art of Being Happy” ಲಮಾರ್ಟಿನ್ನನ “Poetical Meditations” ಮೊದಲಾದ ಪುಸ್ತಕಗಳು ಪಾಶ್ಚರ್ ಮೇಲೆ ಸಾಕಷ್ಟು ಪ್ರಭಾವ ಬೀರಿದವು. ಪ್ರೀತಿ ವಾತ್ಸಲ್ಯ ಹಾಗೂ ಕರುಣೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ಅವರು ನಂಬಿದ್ದರು. ಹಾಗೆಯೇ ಭವಿಷ್ಯದಲ್ಲಿ ತಮ್ಮ ನಂಬಿಕೆಯಂತೆ ನಡೆದುಕೊಂಡರು. ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ತತ್ವಶಾಸ್ತ್ರ, ಮಾನವಿಕ ಶಾಸ್ತ್ರ ಮತ್ತು ಸಾಹಿತ್ಯಗಳ ಅಧ್ಯಯನದಿಂದ ಪಾಶ್ಚರ್ ಅವರ ಮನಸ್ಸು ಪರಿಪಕ್ವಗೊಂಡಿತ್ತು.
1808 ರಲ್ಲಿ ನೆಪೋಲಿಯನ್ ಸ್ಥಾಪಿಸಿದ್ದ ಪ್ರಸಿದ್ಧ ವಿದ್ಯಾಸಂಸ್ಥೆಯಾದ ನಾರ್ಮಲ್
ನಲ್ಲಿ ಪ್ರವೇಶ ಪಡೆದುಕೊಂಡರು.1846 ರಲ್ಲಿ ಪ್ರಾಧ್ಯಾಪಕ ಪರೀಕ್ಷೆಯಲ್ಲಿ
ಮೂರನೇ ಸ್ಥಾನದೊಂದಿಗೆ ಉತ್ತೀರ್ಣರಾದರು. ಭೌತಶಾಸ್ತ್ರ, ಗಣಿತ
, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರ, ಸೂಕ್ಷ್ಮಾಣುಜೀವಿಶಾಸ್ತ್ರಗಳ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು!!!
ಒಬ್ಬ ವ್ಯಕ್ತಿ ಇಷ್ಟೆಲ್ಲ ವಿಷಯಗಳ ಪ್ರಾಧ್ಯಾಪಕರಾಗುವುದು ಎಂದರೇನು? ಇದು ಅವರ ಅಗಾಧ ಅಧ್ಯಯನಶೀಲತೆ,
ಕೃತುಶಕ್ತಿ ಧಾರಣಶಕ್ತಿಗಳ ದ್ಯೋತಕ. ಪಾಶ್ಚರ್‌ರವರಿಗೆ ಪಾಶ್ಚರ್‌ರವರೇ ಸಾಟಿ .
ಸಂಶೋಧನಾ ಮಹಾಯಾನದಲ್ಲಿ ಲೂಯಿ ಪಾಶ್ಚರ್ ತಂಗಿದ ಮೊದಲ ಬಂದರು ಸ್ಟೀರಿಯೋ ಕೆಮಿಸ್ಟ್ರಿ. ಇದು ರಸಾಯನ ವಿಜ್ಞಾನದ ಮತ್ತೊಂದು ಶಾಖೆಗೆ ಮೊದಲ ಬಾರಿಗೆ ಭದ್ರಬುನಾದಿ ಹಾಕಿಕೊಟ್ಟಿತು. 1848ರಲ್ಲಿ ಟಾರ್ಟಾರಿಕ್ ಆಮ್ಲ ಮತ್ತು ರೆಸಿಮಿಕ್ ಆಮ್ಲ ಲವಣಗಳ ಕುರಿತು ಅಧ್ಯಯನ ನಡೆಸಿ ಅಣುಗಳ ಅಸಮಮಿತಿ (molecular asymmetry) ಸಿದ್ಧಾಂತವನ್ನು ಮಂಡಿಸಿದರು. ಇದೊಂದು ಕ್ರಾಂತಿಕಾರಕ ಸಂಶೋಧನೆಯಾಗಿತ್ತು. ಇದನ್ನು ಗಮನಿಸಿದ ಫ್ರಾನ್ಸ್ ಸರ್ಕಾರ ವಿಶೇಷ ಸನ್ಮಾನವನ್ನು ಮಾಡಿ ಗೌರವಿಸಿತು. 1849 ರಲ್ಲಿ ಪಾಶ್ಚರ್ ರವರು ಸ್ಟ್ರಾಸ್ಬರ್ಗ್ ನಲ್ಲಿ ಅಧ್ಯಾಪಕರಾದರು. ಅದೇ ವರ್ಷ ಮೇ 29ರಂದು, ಮೇರಿ ಲೋರೆಂಟ್ ಎಂಬಾಕೆಯನ್ನು ವಿವಾಹವಾದರು. ಅನುರೂಪ ಸತಿಯಾದ ಶ್ರೀಮತಿ ಮೇರಿ ಪಾಶ್ಚರ್, ಸಾಕಷ್ಟು ಸಂಶೋಧನೆಗಳಲ್ಲಿ ಪತಿಗೆ ಸಹಾಯಕಿಯಾಗಿ ಅನನ್ಯ ಕಾರ್ಯ ನಿರ್ವಹಿಸಿದರು..
By https://wellcomeimages.org/indexplus/obf_images/44/40/c357e2c6eb37a6602c28587217e2.jpgGallery: https://wellcomeimages.org/indexplus/image/V0026987.htmlWellcome Collection gallery (2018-03-31): https://wellcomecollection.org/works/tehwn8y7 CC-BY-4.0, CC BY 4.0, https://commons.wikimedia.org/w/index.php?curid=36582271
ಅದುವರೆಗೂ ರಾಸಾಯನಿಕ ಉದ್ಯಮರಂಗಕ್ಕೆ ಅತಿ ಅವಶ್ಯಕ ಎನಿಸಿದ್ದ ರೆಸಿಮಿಕ್ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ವಿಧಾನವನ್ನು ಪಾಶ್ಚರ್ ಕಂಡುಹಿಡಿದರು. 1865 ರ ಹೊತ್ತಿಗೆ ವಿನಾಶದತ್ತ ಸಾಗುತ್ತಿದ್ದ ಫ್ರಾನ್ಸಿನ ವೈನ್ ಉದ್ಯಮಕ್ಕೆ ನವಚೇತನವನ್ನು ನೀಡಿದ್ದು ಲೂಯಿ ಪಾಶ್ಚರ್ ಅವರ ಹೆಗ್ಗಳಿಕೆ. ಹಾಲು ಮತ್ತು ವೈನ್ ಕೆಡದಂತೆ ಸಂರಕ್ಷಿಸುವ ವಿಧಾನವನ್ನು ಕೂಡ ಅವರು ಕಂಡುಹಿಡಿದರು. ಅದನ್ನೇ ಈಗ ಪ್ಯಾಶ್ಚರೀಕರಣ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.
ಅರಿಸ್ಟಾಟಲ್ ರವರ ಕಾಲದಿಂದಲೂ ಸ್ವಯಂ ಜನನ ಸಿದ್ಧಾಂತ
ವಿಜ್ಞಾನಿಗಳಲ್ಲಿ ಪರ-ವಿರೋಧ ವಾದವನ್ನು ಹುಟ್ಟು ಹಾಕಿತು. ಪ್ಯಾಶ್ಚರ್ ಅವರು ತಮ್ಮ ವಿಶೇಷ ಹಂಸಕತ್ತಿನ ಫ್ಲಾಸ್ಕ್ ಪ್ರಯೋಗದಿಂದ
ಸ್ವಯಂ ಜನನ ಸಿದ್ಧಾಂತವನ್ನು ಅಲ್ಲಗಳೆದು ಜೀವದಿಂದಲೇ ಜೀವೋತ್ಪತ್ತಿ ಸಿದ್ಧಾಂತವನ್ನು
ಪ್ರಮಾಣೀಕರಿಸಿದರು. ಇಂದಿಗೂ ಪಾಶ್ಚರ್ ಇನ್ಸ್ಟಿಟ್ಯೂಟ್ನಲ್ಲಿ ಇಡಲಾದ
ಪ್ಯಾಶ್ಚರ್ರವರ ಹಂಸಕತ್ತಿನ
ಫ್ಲಾಸ್ಕ್‌ನಲ್ಲಿರುವ ನೀರಿನಲ್ಲಿ ಯಾವ ಜೀವಿಯೂ ಇದ್ದಕ್ಕಿದ್ದಂತೆ ಹುಟ್ಟಿದ್ದು ಕಂಡುಬಂದಿಲ್ಲ.
1868ರಲ್ಲಿ ಪಾಶ್ಚರ್ ಪಾರ್ಶ್ವವಾಯುವಿಗೆ ತುತ್ತಾದರು. ಆದರೆ ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ ಪಾರ್ಶ್ವವಾಯು ಪೀಡಿತರಾಗಿದ್ದಾಗಲೂ ತಮ್ಮ ಹುಟ್ಟು ಗುಣವಾದ ಸಂಶೋಧನೆಯ ಗೀಳಿನಿಂದ ಹೊರಬರಲಿಲ್ಲ. ಸೂಕ್ಷ್ಮಜೀವಿಗಳು ಮಾನವರಿಗೆ ಹಾಗೂ ಸಾಕುಪ್ರಾಣಿಗಳಿಗೆ ವಿವಿಧ ರೋಗಗಳನ್ನು ತರುತ್ತವೆ ಎಂಬುದನ್ನು ಕಂಡುಹಿಡಿದರು. ಮೂಢನಂಬಿಕೆಗಳಿಂದ ಬಳಲುತ್ತಿದ್ದ ಆಗಿನ ಕಾಲದ ಸಮಾಜಕ್ಕೆ ಹೊಸ ಚಿಂತನೆಯ ಆಯಾಮವನ್ನು ಒದಗಿಸಿದ್ದರು. ರೋಗಗಳಿಗೆ ಕಾರಣ ಹಾಗೂ ನಿವಾರಣೋಪಾಯಗಳನ್ನು ಕಂಡುಹಿಡಿದರು.
ನಿರಂತರ ಸಂಶೋಧನಾ ಪ್ರವೃತ್ತಿಯನ್ನು ಹಾಸುಹೊಕ್ಕಾಗಿಸಿದ ಕ್ರಿಯಾಶೀಲವ್ಯಕ್ತಿಗೆ ಎಲ್ಲಿಯ ನಿವೃತ್ತಿ ? 1874 ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ ಸಂಶೋಧನೆಗಳು ಅವಿರತವಾಗಿ ಮುಂದುವರೆದವು. ಆಂಥ್ರಾಕ್ಸ್, ಕೋಳಿ ಕಾಲರಗಳಿಗೆ ವ್ಯಾಕ್ಸಿನ್ , ನಂಜು ಅಥವಾ ಸೆಪ್ಟಿಕ್‌ಗೆ ಕಾರಣವಾದ ಸೂಕ್ಷ್ಮಾಣು ಜೀವಿಗಳ ಪತ್ತೆ, ರೇಬಿಸ್ ರೋಗಕ್ಕೆ ವ್ಯಾಕ್ಸಿನ್ ಇವೆಲ್ಲವೂ ನಿವೃತ್ತಿಯ ನಂತರದ ಮಹಾನ್ ಸಂಶೋಧನೆಗಳು!!!
ಇಂತಹ ಧೀಮಂತ ವ್ಯಕ್ತಿತ್ವದ ಲೂಯಿ ಪಾಶ್ಚರ್ ಅವರನ್ನೂ ವಿವಾದಗಳು ಬಿ ಲಿಲ್ಲ. ಅವರು ತಮ್ಮ ಸಂಶೋಧನೆಗಳ ಸಂಪರ್ಣ ವಿವರಗಳನ್ನು ಹೊರಪ್ರಪಂಚಕ್ಕೆ ನೀಡುತ್ತಿರಲಿಲ್ಲ. ಲಸಿಕೆ ಪ್ರಯೋಗಿಸುವ ಮೊದಲು ಯಾವ ರೀತಿ ಲಸಿಕೆ ಕೆಲಸ ಮಾಡಿದೆ ಎನ್ನುವ ಮಾಹಿತಿ ನೀಡುತ್ತಿರಲಿಲ್ಲ ಎಂಬ ಆರೋಪ ಅವರ ಮೇಲೆ ಇತ್ತು. ತಮ್ಮ ಸಂಶೋಧನಾ ನೋಟ್ ಪುಸ್ತಕವನ್ನು ಯಾರಿಗೂ ತೋರಿಸದಂತೆ ತಮ್ಮ ಕುಟುಂಬ ವರ್ಗಕ್ಕೆ ಕಟ್ಟಪ್ಪಣೆ ಮಾಡಿದ್ದರು. ಹಾಗೆಯೇ, ಅದು ಲಸಿಕೆಯ ಗುಣಮಟ್ಟ ಕಾಪಾಡಲು ಅವಶ್ಯ ಎಂದು ಹೇಳುತ್ತಿದ್ದರು. 1964ರಲ್ಲಿ ಪಾಶ್ಚರ್ ರವರ ಮೊಮ್ಮಗ ಈ ಮಾಹಿತಿಗಳನ್ನು ಬಹಿರಂಗಪಡಿಸಿದರು. ಪಾಶ್ಚರ್ ಲಸಿಕೆಯನ್ನು ಮಾನವರಿಗೆ ನೀಡುವ ಮೊದಲು 50 ಹುಚ್ಚುನಾಯಿಗಳ ಮೇಲೆ ಪ್ರಯೋಗಿಸಿದ್ದೇನೆ ಎಂದು ತಿಳಿಸಿದರೂ ಕೇವಲ 11 ಹುಚ್ಚುನಾಯಿಗಳ ಮೇಲೆ ಪ್ರಯೋಗಿಸಿದ ಮಾಹಿತಿಗಳು ಲಭ್ಯವಿದ್ದವು. ಅವರು ವೃತ್ತಿಪರ ವೈದ್ಯರಲ್ಲದಿರುವುದು, ವೈದ್ಯರಿಂದ ಅವರಿಗೆ ಸೂಕ್ತ ಸಹಕಾರ ದೊರೆಯದಿರುವುದು ಹಾಗೂ ಆಗಿನ ಕಾಲದ ಸಾಮಾಜಿಕ ಸನ್ನಿವೇಶ, ಇವೆಲ್ಲಾ ಇದಕ್ಕೆ ಕಾರಣವಿರಬಹುದು. ವಿವಾದಗಳೇನೇ ಇರಲಿ, ಮನುಕುಲ ಅವರ ಸಾಧನೆಗಳಿಗೆ ಆಭಾರಿಯಾಗಿದೆ. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಅವರ ಹೆಸರಿನ ಆಸ್ಪತ್ರೆಗಳಿವೆ. ಸಂಶೋಧನಾ ಕೇಂದ್ರಗಳಿವೆ. ಅನೇಕ ನಗರಗಳ ರಸ್ತೆಗಳಿಗೆ ಪಾಶ್ಚರ್ ಅವರ ಹೆಸರನ್ನು ಇಟ್ಟು ಅವರ ನೆನಪು ಸದಾ ಹಚ್ಚ ಹಸಿರಾಗಿರುವಂತೆ ಮಾಡಲಾಗಿದೆ.
ಒಮ್ಮೆ ಫ್ರಾನ್ಸಿನ ಸರ್ವಾಧಿಕಾರಿ ಮೂರನೇ ನೆಪೋಲಿಯನ್ ಅವರನ್ನು “ನೀವು ಸೂಕ್ಷ್ಮಜೀವಿಗಳ ಬಗ್ಗೆ ನಡೆಸಿದ ಅಧ್ಯಯನದಿಂದ ಉದ್ದಿಮೆಗೆ ಹೊಸಜೀವ ಬಂತು. ನೀವೇಕೆ ಒಂದು ಉದ್ಯಮವನ್ನು ಸ್ಥಾಪಿಸಿ, ಗಳಿಸಬಾರದು? ” ಎಂದು ಕೇಳಿದ್ದನಂತೆ. ಆಗ ಪಾಶ್ಚರ್ ಅವರ ಉತ್ತರ ಮಾರ್ಮಿಕವಾಗಿತ್ತು. “ಸ್ವಾಮಿ, ನಾನೊಬ್ಬ ವಿಜ್ಞಾನಿ. ವೈನ್ ಉದ್ಯಮ ಆರಂಭಿಸಿದರೆ ಹಣ ಸಂಪಾದಿಸುವಲ್ಲೇ ನನ್ನ ಕಾಲ ನಷ್ಟವಾಗುತ್ತಿತ್ತು. ಆಗ ರೇಷ್ಮೆಹುಳು ರೋಗ ನಿವಾರಿಸಲು ಸಮಯವೆಲ್ಲಿರುತ್ತಿತ್ತು? ನಾನು ಮಾಡುತ್ತಿದ್ದ ಕೆಲಸದಲ್ಲಿ ನನಗೆ ತೃಪ್ತಿ ಸಂತೋಷಗಳಿವೆ. ಹಣದಾಹ ನನಗಿಲ್ಲ.” ಇಂತಹ ನುಡಿಗಳು ಪಾಶ್ಚರ್‌ರಂತಹ ನಿರ್ಮೋಹಿಗೇ ಮೀಸಲು!!! ಮಹಾನ್ ಮಾನವತಾವಾದಿಯ ಹೃದಯಾಂತರಾಳದಿಂದ ಹೊರಹೊಮ್ಮಿದ ಈ ನುಡಿಗಳು ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತವೆ. ಇಂತಹ ಮಹಾನ್ ಕರ್ಮಯೋಗಿ ತನ್ನ ಎಲ್ಲ ಕರ್ತವ್ಯಗಳನ್ನು ಪೂರೈಸಿ 1865ರ ಸೆಪ್ಟೆಂಬರ್ 28 ರಂದು ಇಹಲೋಕವನ್ನು ತ್ಯಜಿಸಿತು. ಅವರ ಬದುಕು- ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯ ದಾರಿದೀಪವಾಗಿದೆ.
ಒಳ್ಳೆಯ ಮಾಹಿತಿ ನೀಡುವ ಲೇಖನ ಇದಾಗಿದ್ದು ತಮಗೆ ಅನಂತ ಅನಂತ ಅಭಿನಂದನೆಗಳು ಹಾಗೂ ಧನ್ಯವಾದಗಳು ಇದನ್ನು ಹಂಚಿಕೊಂಡಿದ್ದಕ್ಕಾಗಿ ಸರ್
ReplyDeleteನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.
Deleteಈಗ ಇನ್ನೊಂದಷ್ಟು ಮಾಹಿತಿ ಸೇರಿಸಿದ್ದೇನೆ.
ಲೂಯಿ ಪಾಶ್ಚರ್ ಅವರ ಜೀವನ ಚರಿತ್ರೆಯೊಂದಿಗೆ ಅವರಲ್ಲಿ ಹುದುಗಿರುವ ಮಾನವೀಯ ಮೌಲ್ಯಗಳನ್ನು ಪರಿಚಯಿಸಿದ ಪರಿ ಅದ್ಭುತ. ಅವರ ಸಂಶೋಧನೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಒಂದು ಉತ್ತಮ ಲೇಖನ ಇದಾಗಿದೆ ಸರ್. ಅಭಿನಂದನೆಗಳು
ReplyDeleteGood information sir. Thanks
ReplyDeleteThank you
DeleteSuper
ReplyDeleteತುಂಬಾ ಚೆನ್ನಾಗಿದೆ ಇನ್ನು ಮುಂದೆ ಇಂತಹ ಕಾರ್ಯಗಳನ್ನು ಮುಂದುವರಿಸಿ
ReplyDeleteThank you Madam
DeleteSuper sir
ReplyDeleteಲೂಯಿ ಪಾಶ್ಚರ್ ಬಗ್ಗೆ ತಿಳಿಯದೆ ಇದಂತಹ ಅನೇಕ ಆಂಶಗಳು ಹಾಗೂ ಮನೂಕಲಕಾಗಿ ಅವರ ಅನಾರೋಗ್ಯ ಕಾಲದಲ್ಲಿಯೂ ಅವರ ಸಂಶೋಧನಾ ಗೀಳು ನಿಜಕ್ಕೂ ಶ್ಲಾಘನೀಯ..
ReplyDeleteಇಂತಹ ಇನ್ನೂ ಹಲವಾರು ಲೇಖನಗಳು ಬರಲಿ
ಧನ್ಯವಾದಗಳು 🙏🙏
Thank you sir
Deleteಇದೊಂದು ಅತ್ಯುತ್ತಮ ಹಾಗೂ ಲೂಯಿ ಪಾಶ್ಚರ್ ಬಗ್ಗೆ ತಿಳಿಯದ ಅನೇಕ ಅಂಶಗಳನ್ನು ಒಳಗೊಂಡ ಅದ್ಭುತ
ReplyDeleteಲೇಖನವಾಗಿದೆ. ಅಭಿನಂದನೆಗಳು ಹಾಗೂ ಧನ್ಯವಾದಗಳು sir 🙏
Thank you madam
Deleteಉತ್ತಮ ಲೇಖನ ನಿಮ್ಮ ಲೇಖನದ ನಿರೂಪಣೆ ಸೂಪರ್ ಆಗಿದೆ ಸಾರ್
ReplyDelete