ಮತ್ತೆ ಬರುತ್ತಿದ್ದಾಳೆಯೇ ದ್ರೌಪದಿ ?
ಲೇಖಕರು : ಸುರೇಶ ಸಂಕೃತಿ,
ಗಣಿತ, ವಿಜ್ಞಾನ ಬೋಧಕರು,
ನಂದಾಶ್ರೀ ಹತ್ತಿರ, ಹೊಸಕೋಟೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ನಮ್ಮ ಸೌರವ್ಯೂಹ ಇರುವ ಮಿಲ್ಕಿವೇ ಗೆಲಾಕ್ಷಿ ಮತ್ತು ದ್ರೌಪದಿ ಎಂಬ ಹೆಸರಿನಿಂದಲೂ ಕರೆಯಲಾಗುವ ಅಂಡ್ರೋಮೇಡ ಗೆಲಾಕ್ಷಿಗಳು ಮುಂದೊಂದು ದಿನ ಪರಸ್ಪರ ಅಪ್ಪಳಿಸಿ, ಕೊನೆಗೆ ಒಗ್ಗೂಡಲಿವೆ ಎಂಬ ಅಂದಾಜಿದೆ. ಹಾಗೊಂದು ವೇಳೆ ನಡೆದರೆ ಏನೇನಾಗಬಹುದು ಎಂಬುದನ್ನು ಈ ಲೇಖನದಲ್ಲಿ ಕುತೂಹಲಕಾರಿಯಾಗಿ ವಿವರಿಸಿದ್ದಾರೆ, ವಿಜ್ಞಾನ ಶಿಕ್ಷಕ ಸುರೇಶ್ ಅವರು.
ನಾವು ವಾಸಿಸುತ್ತಿರುವದು ಭೂಮಿ, ಸೌರವ್ಯೂಹದ ಎಂಟು ಗ್ರಹಗಳಲ್ಲಿ ಒಂದು. ಸೌರವ್ಯೂಹದ ಕೇಂದ್ರ ಸೂರ್ಯ. ಸೂರ್ಯ ಕೂಡ ಒಂದು ನಕ್ಷತ್ರ. ಇಂಥ ಸುಮಾರು ಒಂದು ನೂರು ಬಿಲಿಯನ್ ನಕ್ಷತ್ರಗಳ ಒಂದು ಸಮೂಹವೇ ಗೆಲಾಕ್ಷಿ ಅಥವಾ ನಕ್ಷತ್ರ ಮಂಡಲ. ನಮ್ಮ ಸೌರವ್ಯೂಹ ಇರುವ ಗೆಲಾಕ್ಷಿಯ ಹೆಸರು ಮಿಲ್ಕಿವೇ ಅಥವಾ ಕ್ಷೀರಪಥ. ಗೆಲಾಕ್ಷಿಯಲ್ಲಿರುವ ನಕ್ಷತ್ರಗಳು ಪರಸ್ಪರ ಗುರುತ್ವಾಕರ್ಷಣೆಯಿಂದ ಬಂಧಿಸಲ್ಪಟ್ಟು ಸಾಪೇಕ್ಷ ಚಲನೆಯಲ್ಲಿರುತ್ತವೆ. ಗೆಲಾಕ್ಷಿಗಳಲ್ಲಿ ಸುರುಳಿ ಗೆಲಾಕ್ಷಿ, ದೀರ್ಘವೃತ್ತಾಕಾರದ ಗೆಲಾಕ್ಷಿ ಹಾಗೂ ಅನಿಯತ ಗೆಲಾಕ್ಷಿ ಎಂಬ ಮೂರು ವಿಧಗಳನ್ನು ಗುರುತಿಸಲಾಗಿದೆ. ಮಿಲ್ಕಿವೇ ಗೆಲಾಕ್ಷಿಯು ಸುರುಳಿ ಗೆಲಾಕ್ಷಿಯ ಉದಾಹರಣೆಯಾಗಿದೆ. ಇದರಲ್ಲಿ ಸುಮಾರು ಒಂದು ನೂರು ಬಿಲಿಯನ್ ನಕ್ಷತ್ರಗಳಿರಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ವಿಶ್ವದಲ್ಲಿ ಬಿಲಿಯನ್‍ಗಟ್ಟಲೇ ನಕ್ಷತ್ರಗಳನ್ನು ಹೊಂದಿರುವ ಸಹಸ್ರಾರು ಗೆಲಾಕ್ಷಿಗಳಿವೆ ! ಮೆಗಲ್ಲಾನಿಕ್ ಮೋಡಗಳೆಂದು ಕರೆಯಲಾಗುವ ಎರಡು ಉಪಗೆಲಾಕ್ಷಿಗಳು ನಮ್ಮ ಮಿಲ್ಕಿವೇ ಗೆಲಾಕ್ಷಿಗೆ ಸೇರಿವೆ. ಇದಲ್ಲದೆ, ಟ್ರೈಯಾಂಗುಲಮ್ ಎಂಬ ಹೆಸರಿನ ಹಾಗೂ ಅಂಡ್ರೋಮೇಡಾ ಎಂಬ ಹೆಸರಿನ ಗೆಲಾಕ್ಷಿಗಳು ನಮ್ಮ ಗೆಲಾಕ್ಷಿಗೆ ಗುಂಪನ್ನು ಲೋಕಲ್ ಗ್ರೂಪ್ ಎಂದು ಕರೆಯಲಾಗುತ್ತದೆ. ಕನ್ಯಾ ಗೆಲಾಕ್ಷಿ ಗುಚ್ಛ ಎಂದು ಕರೆಯಲಾಗುವ ನೂರಾರು ಅನಿಯಾತಾಕಾರದ ಗೆಲಾಕ್ಷಿಗಳ ಸಮೂಹವಿದೆ. ಅದರ ಹೊರ ವಲಯದಲ್ಲಿ ಈ ನಮ್ಮ ಲೋಕಲ್ ಗ್ರೂಪ್ ಇದೆ.
ಮಿಲ್ಕಿವೇ ಗೆಲಾಕ್ಷಿಯಷ್ಟೇ ವ್ಯಾಪ್ತಿ ಹೊಂದಿರುವ ಆಂಡ್ರೋಮೇಡ ಗೆಲಾಕ್ಷಿಯಲ್ಲಿ
ಮಿಲ್ಕಿವೇಗಿಂತ ಹೆಚ್ಚು ನಕ್ಷತ್ರಗಳಿವೆ. ಈ ಹೆಸರಿಗೆ ಹಿನ್ನೆಲೆಯಾಗಿ ಒಂದು ಕಥೆ ಇದೆ. ಗ್ರೀಕ್
ಪುರಾಣಗಳಲ್ಲಿ ಕೇಳಿ ಬರುವ ಆಂಡ್ರೋಮೇಡ ಪ್ಯಾಲೆಸ್ತೇನಿನ ರಾಜಕುಮಾರಿ. ಆಕೆ ರಾಜ ಸಿಫಿಯನ್ ಮತ್ತು
ರಾಣಿ ಕ್ಯಾಸಿಯೋಪೆ ದಂಪತಿಗಳ ಮಗಳು. ಸಾಗರಕನ್ಯೆಯರಾದ
ನೆರಯಡರಿಗಿಂತಲೂ ತಮ್ಮ ಮಗಳು ಹೆಚ್ಚು ಸುಂದರಿ ಎಂದು ರಾಣಿ ಕ್ಯಾಸಿಯೋಪೆ ಒಮ್ಮೆ ಬಡಾಯಿ
ಕೊಚ್ಚಿದ್ದು, ಮುಂದೆ ಆಂಡ್ರೋಮೇಡ ಅನುಭವಿಸಿದ
ಕಷ್ಟಗಳಿಗೆ ಕಾರಣವಾಗುತ್ತದೆ. ರಾಣಿಯ ಮಾತು ಸಾಗರದ ದೇವತೆ ಪೊಸೀಡಾನನ ಕಿವಿಗೆ ಬಿದ್ದು, ಅವನು ಕೋಪದಿಂದ ಸಿಫಿಯನ್ ರಾಜ್ಯವನ್ನು ಧ್ವಂಸ ಮಾಡಲು ದೈತ್ಯನೊಬ್ಬನನ್ನು ಕಳಿಸುತ್ತಾನೆ.
ರಾಜ್ಯವನ್ನು ಉಳಿಸಿಕೊಳ್ಳಲು ಸಿಫಿಯನ್ ರಾಜನಿಗೆ ಇದ್ದ ಏಕೈಕ ಮಾರ್ಗವೆಂದರೆ, ಆ ಸಾಗರ ದೈತ್ಯನಿಗೆ ಅಂಡ್ರೋಮೇಡಳನ್ನು ಆಹಾರವಾಗಿ ಬಲಿ
ನೀಡಬೇಕಾಗಿರುತ್ತದೆ..ಇದಕ್ಕಾಗಿ ಆ ಬಾಲೆಯನ್ನು ವಿವಸ್ತ್ರಗೊಳಿಸಿ, ಸರಪಳಿಗಳಿಂದ ಬಂಧಿಸಿ ಸಾಗರ ತೀರದ ಬಂಡೆಗಳ ಮಧ್ಯೆ ಎಸೆಯುತ್ತಾರೆ !
ಅದೇನು ಅವಳ ಅದೃಷ್ಟವೋ? ಆಗಸದಲ್ಲಿ
ರೆಕ್ಕೆಗಳಿರುವ ಕುದುರೆ ಪೆಗಾಸಸ್ ಎಂಬ
ಕುದುರೆಯನ್ನೇರಿ ಹೊರಟಿದ್ದ ವೀರ ಪೆರ್ಸುಯಸ್ ನ ಕಣ್ಣಿಗೆ ಅವಳು ಕಾಣಿಸುತ್ತಾಳೆ.
ಪೆರ್ಸುಯಸ್ ಅವಳಲ್ಲಿ ಅನುರಕ್ತನಾಗುತ್ತಾನೆ. ಈಕೆಯ ವೃತ್ತಾಂತವನ್ನು ತಿಳಿದು, ಅವಳ ತಂದೆ ರಾಜ ಸಿಫಿಯಸ್‍ನ ಬಳಿ ಕರೆತಂದು ತನ್ನ ನಿವೇದನೆಯನ್ನು
ಸಲ್ಲಿಸುತ್ತಾನೆ. ರಾಜನ ಒಪ್ಪಿಗೆ ಪಡೆದು, ಸಾಗರ ದೈತ್ಯನೊಂದಿಗೆ
ಹೋರಾಡಿ, ಅವನನ್ನು ಸಂಹರಿಸಿ ಆಂಡ್ರೋಮೇಡಳ
ಕೈ ಹಿಡಿಯುತ್ತಾನೆ.
ಆಂಡ್ರೋಮೇಡ ಗೆಲಾಕ್ಷಿಯನ್ನು ದ್ರೌಪದಿ ಗೆಲಾಕ್ಷಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಸ್ತ್ರೀಶಕ್ತಿಯ ಮಹತ್ವವನ್ನು ಸಾರುವ ಮಹಾಭಾರತದ ದ್ರೌಪದಿಯ
ನೆನಪಿನಲ್ಲಿ ಈ ಹೆಸರಿಡಲಾಗಿದೆ.
ಚಿತ್ರದಲ್ಲಿ ಆಂಡ್ರೋಮೇಡಾದ ಆಸುಪಾಸಿನಲ್ಲಿ ಕಾಣುವ ನಕ್ಷತ್ರಗಳು ಅದರ ನಕ್ಷತ್ರಗಳಲ್ಲ. ಅವು ಮಿಲ್ಕಿವೇ ಗೆಲಾಕ್ಷಿಯ ನಕ್ಷತ್ರಗಳು. ರಾತ್ರಿ ಆಕಾಶದ ವೀಕ್ಷಣೆಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ, ನಮ್ಮ ಬರಿಗಣ್ಣಿಗೆ ಕಾಣುವ ಏಕೈಕ ಗೆಲಾಕ್ಷಿಯೆಂದರೆ, ಆಂಡ್ರೋಮೇಡ. ಇದಕ್ಕೆ ಅತ್ಯಂತ ಸೂಕ್ತಕಾಲವೆಂದರೆ ಸೆಪ್ಟೆಂಬರ್ ನಿಂದ ಜನವರಿಯವರೆಗೆ. ಪೆಗಾಸಸ್(ಹಾರುವಕುದುರೆ)ನ ದೊಡ್ಡ ಚೌಕದ ಪಶ್ಚಿಮೋತ್ತರ ನಕ್ಷತ್ರದಿಂದ ಪ್ರಾರಂಭಿಸಿದರೆ, ಕೊಂಬಿನಾಕೃತಿಯ ಆಂಡ್ರೋಮೇಡ ನಕ್ಷತ್ರಪುಂಜದಲ್ಲಿ ಈ ಗೆಲಾಕ್ಷಿ ಇದೆ. ಉತ್ತರ ದ್ರುವಕ್ಕೆ ಸಮೀಪ, ಎಳೆದಾಡಿದ W ಆಕಾರವ ಕ್ಯಾಸಿಯೋಪಿಯ ನಕ್ಷತ್ರಪುಂಜದ ಸಹಾಯದಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ನಕ್ಷತ್ರಗಳ ಚಾರ್ಟ್ ಬಳಸುವವರು ಕೆಂಪು ಫಿಲ್ಟರ್ ಇರುವ ಚಾರ್ಟ್ ಬಳಸಿ ಇದನ್ನು ನೋಡುವುದು ಸೂಕ್ತ. ನಮ್ಮ ಮೊಬೈಲ್ ಫೋನ್‍ಗೆ ಅಳವಡಿಕೊಳ್ಳಬಹುದಾದ ಕೆಲ ಆಪ್‍ಗಳ ಸಹಾಯದಿಂದ ನಕ್ಷತ್ರಗಳನ್ನು ಹಾಗೂ ನಕ್ಷತ್ರಪುಂಜಗಳನ್ನು ಈಗ ಸುಲಭವಾಗಿ ಗುರುತಿಸಬಹುದು. ವರ್ಷಕ್ಷಿಯ ಒಂದು ನಿರ್ದಿಷ್ಟ ಕಾಲದಲ್ಲಿ ಒಂದು ನಿರ್ದಿಷ್ಟ ನಕ್ಷತ್ರದ ಕಡೆ ಫೋನ್‍ನ ಕ್ಯಾಮರಾವನ್ನು ಗುರಿಯಿಟ್ಟು ಆಪ್ ನ ಸಹಾಯದಿಂದ ಆ ನಕ್ಷತ್ರದ ಎಲ್ಲ ವಿವರಗಳನ್ನು ಪಡೆಯಬಹುದು. (ಒಂದು ಎಚ್ಚರಿಕೆ : ಯಾವುದೇ ಕಾರಣಕ್ಕೂ , ಯಾವುದೇ ಸಮಯದಲ್ಲೂ, ಕ್ಯಾಮರಾ ಮೂಲಕ ಸೂರ್ಯನನ್ನು ನೇರವಾಗಿ ನೋಡಬೇಡಿ, ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ).
ನಕ್ಷತ್ರ ವೀಕ್ಷಣೆಗೆ ಕಲುಷಿತವಾಗಿರುವ ನಗರ ಪ್ರದೇಶದಿಂದ ದೂರ ಇರುವ, ವಾಹನ ದಟ್ಟಣೆ, ಧೂಳು ಇಲ್ಲದ ಪ್ರದೇಶ ಅತ್ಯಂತ ಸೂಕ್ತ. ಕಾಡು ಮೃಗಗಳು ಓಡಾಡುವ, ವಿಷಜಂತುಗಳಿರುವ, ಕಂದಕವಿರುವ, ವಿದ್ಯುತ್ ತಂತಿಗಳಿರುವ ಪ್ರದೇಶ, ರಕ್ಷಣಾ ಗೋಡೆ ಇಲ್ಲದ ಮೇಲ್ಛಾವಣಿ, ಮುಂತದ ಅಪಾಯಕಾರಿ ಸ್ಥಳಗಳನ್ನು ವೀಕ್ಷಣೆಗೆ ಆರಿಸಬಾರದು. ಕತ್ತಲಿನಲ್ಲಿ ಓಡಾಡಲು ಸೂಕ್ತ ಮುಂಜಾಗ್ರತೆ ವಹಿಸಬೇಕು. ಬರಿಗಣ್ಣಿನಿಂದ ನೋಡಬಯಸುವ ವ್ಯಕ್ತಿ ಇದರ ನೋಟದ ಗುರಿಯನ್ನು ಅದರ ಸುತ್ತಲೂ ಇರುವ ನಕ್ಷತ್ರಗಳ ಸಹಾಯದಿಂದ ಗುರುತಿಸಿಕೊಂಡಮೇಲೆ, ನೇರವಾಗಿ ದಿಟ್ಟಿಸುವ ಬದಲು ಆರಂಭದಲ್ಲಿ ಓರೆಯಾಗಿ ನೋಡುವುದು ಸೂಕ್ತ. 3.1 ಕಾಂತಿಮಾನ ಹೊಂದಿರುವ ಆಂಡ್ರೋಮೇಡ ಗೆಲಾಕ್ಷಿಯು ಬರಿಗಣ್ಣಿಗೆ ಬೂದು, ಬಿಳಿ ಮಚ್ಚೆಯಂತೆ ಗೋಚರಿಸುತ್ತದೆ. ದೂರದರ್ಶಕದಲ್ಲಿ (ಬೈನಾಕ್ಯುಲರ್) ವೀಕ್ಷಿಸಿದಾಗ ಸ್ಪಷ್ಟವಾಗಿ ಕಾಣುತ್ತದೆ. ಕಪ್ಪಾದ ಧೂಳಿನ ಮೋಡಗಳು, ಪ್ರಕಾಶಮಾನವಾದ ಬಿಳಿಯ, ಬಂಗಾರದ ವರ್ಣದ ಆಂತರಿಕ ತಿರುಳು, ಪ್ರಖರ ನೀಲ ನಕ್ಷತ್ರಗಳನ್ನು ಹೊರಚೆಲ್ಲುತ್ತಿರುವಂತೆ ಕಾಣುವ ಸುರುಳಿಯ ಎಸಳುಗಳು, ಹೀಗೆ ವೀಕ್ಷಣೆ ಚಿತ್ತಾಕರ್ಷಕ ಹಾಗೂ ನಯನಮನೋಹರ.
ಆಂಡ್ರೋಮೇಡವನ್ನು M31 (NGC224) ಎಂದು ಸೂಚಿಸಲಾಗುತ್ತದೆ. ದೂರದರ್ಶಕದ ಮೂಲಕ ವೀಕ್ಷಿಸಿದಾಗ ಆಂಡ್ರೋಮೇಡದ ಮೇಲೆ ಮತ್ತು ಕೆಳಗೆ ಮಬ್ಬಾಗಿ ಕಾಣುವ ಮತ್ತೆರಡು ಗೆಲಾಕ್ಷಿಗಳು ಗೋಚರಿಸುತ್ತವೆ. ಮೇಲಿನ ಗೆಲಾಕ್ಷಿಯನ್ನು M32 ಎಂದೂ ಕೆಳಗಿನ ಗೆಲಾಕ್ಷಿಯನ್ನು M110 ಎಂದೂ ಗುರುತಿಸಲಾಗುತ್ತದೆ. ಇಲ್ಲಿ M ಎಂಬುದು ಮೆಸ್ಸಿಯರ್ ಆಬ್ಜಕ್ಟ್ ಅನ್ನು ಸೂಚಿಸುತ್ತದೆ. ಮೆಸ್ಸಿಯರ್ ಕೋಷ್ಟಕದ ಕೊನೆಯ ಕಾಯವೇ M110. ಚಾಲ್ರ್ಸ್ ಮೆಸ್ಸಿಯರ್ ಎಂಬ 18ನೇ ಶತಮಾನದ ಖಗೋಳಶಾಸ್ತ್ರಜ್ಞ ತನ್ನ ದೀರ್ಘಕಾಲದ ಆಕಾಶ ವೀಕ್ಷಣೆಯ ಆಧಾರದ ಮೇಲೆ, ಆಕಾಶದಲ್ಲಿರುವ ವಿಶಿಷ್ಟ ಕಾಯಗಳ ಬಗ್ಗೆ ಕೋಷ್ಟಕವೊಂದನ್ನು ರೂಪಿಸಿದ್ದ. ಅವನ ಗೌರವಾರ್ಥ ಈ ಕಾಯಗಳನ್ನು ಮೆಸ್ಸಿಯರ್ ಆಬ್ಜಕ್ಟ್‍ಗಳು ಎಂದು ಕರೆಯಲಾಗುತ್ತದೆ. ತಾನು ರೂಪಿಸಿದ ಕೋಷ್ಟಕದಲ್ಲಿ ಮೆಸ್ಸಿಯರ್ ವಾಸ್ತವವಾಗಿ M104 ರವರೆಗೆ ಮಾತ್ರ ಕಾಯಗಳನ್ನು ನಮೂದಿಸಿದ್ದು, ಉಳಿದುವುಗಳನ್ನು ಕ್ರಮೇಣ ಸೇರಿಸಲಾಯಿತು. ಎನ್ನಲಾಗುತ್ತದೆ. ಅಲ್ಲಿಂದೀಚೆಗೆ ದೂರದ ಆಕಾಶದಲ್ಲಿ ನೀಹಾರಿಕೆ, ಗೆಲಾಕ್ಷಿ ಮುಂತಾದ ಕಾಯಗಳನ್ನು NGC (NEW GENERAL CATALoGUE of Nebulae and Clusters of Stars) ಎಂದು ಸೂಚಿಸಲಾಗುತ್ತದೆ. ವಿಲಿಯಮ್ ಹರ್ಷೆಲ್ ಎಂಬ ಖಗೋಳಶಾಸ್ತ್ರಜ್ಞ ತನ್ನ ವೀಕ್ಷಣೆಗಳ ಆಧಾರದ ಮೇಲೆ 1786ರಲ್ಲಿ Catalogue of Nebulae and Clusters of Stars (CN) ಎಂಬ ಕೋಷ್ಟಕವನ್ನು ರೂಪಿಸಿದನು. ನಂತರ ಅವನ ಮಗ ಜಾನ್ ಹರ್ಷೆಲ್ ಅದನ್ನು ಪರಿಷ್ಕರಿಸಿ General Catalogue of Nebulae and Clusters of Stars (GC) ಎಂಬ ಕೋಷ್ಟಕವನ್ನು ಬಿಡುಗಡೆ ಮಾಡಿದನು. ಇವೆರಡರ ಆಧಾರದ ಮೇಲೆ ಎಮಿಲ್ ಡ್ರೈಯರ್ 1888ರಲ್ಲಿ ಓಉಅ ಕೋಷ್ಟಕವನ್ನು ಬಿಡುಗಡೆ ಮಾಡಿದನು. NGC 2000 ಕೋಷ್ಟಕದ ಇತ್ತೀಚಿನ ಪರಿಷ್ಕøತ ಆವೃತ್ತಿ 2019ರಲ್ಲಿ ಪ್ರಕಟವಾಗಿದೆ.
ಚಿತ್ರ ಕೃಪೆ ನಾಸಾ
ಆಂಡ್ರೋಮೇಡ ಗೆಲಾಕ್ಷಿ ಭೂಮಿಯಿಂದ ಸುಮಾರು 2.48 ಮಿಲಿಯನ್
ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಅಂದರೆ,
ಅಲ್ಲಿಂದ
ಹೊರಟ ಬೆಳಕು ಭೂಮಿಯನ್ನು ತಲುಪಲು 2.48 ಮಿಲಿಯನ್
ವರ್ಷಗಳಾಗುತ್ತವೆ. ನಾವು ಒಂದೊಮ್ಮೆ ಬೆಳಕಿನ ವೇಗದಲ್ಲಿ ಪ್ರಯಾಣಿಸಿದರೂ, ಅಲ್ಲಿ ಹೋಗಿ ತಲುಪಲು ಅಷ್ಟೇ ವರ್ಷಗಳಾಗುತ್ತದೆ.
ಆಂಡ್ರೋಮೇಡ ಗೆಲಾಕ್ಷಿಯು ರಚನೆ ಮತ್ತು ಗಾತ್ರದಲ್ಲಿ ಸರಿ ಸುಮಾರು ಮಿಲ್ಕಿವೇ ಗೆಲಾಕ್ಷಿಯಂತೆಯೇ ಇದೆ. ನಮಗೆ ಹತ್ತಿರದ ಮತ್ತು ಭಾರೀ ಗಾತ್ರದ ಗೆಲಾಕ್ಷಿ ಇದಾಗಿದ್ದು, ಸಂಶೋಧನೆಗೆ ಸೂಕ್ತ ನಮೂನೆಯಾಗಿದೆ. ಪ್ರತಿ ವರ್ಷವೂ ಈ ಗೆಲಾಕ್ಷಿಯಲ್ಲಿ ಹೊಸ ನವ್ಯಗಳು () ಸಂಭವಿಸುತ್ತಲೇ ಇರುತ್ತವೆ. ದೂರದರ್ಶಕದ ಸಹಾಯದಿಂದ ಮೊದಲು ಈ ಗೆಲಾಕ್ಷಿಯನ್ನು ಕಂಡುಹಿಡಿದವನು ಸೈಮನ್ ಮೋರೀಸ್ ಎಂಬ ಖಗೋಳಶಾಸ್ತ್ರಜ್ಞ. ಮೊದಲಿಗೆ ಆತ ಇದನ್ನು ಆಂಡ್ರೋಮೇಡ ನಿಹಾರಿಕೆ ಎಂದು ಕರೆದಿದ್ದ. ವಾಸ್ತವವಾಗಿ ಇದೊಂದು ನಿಹಾರಿಕೆ ಆಗಿರದೆ, ಸುರುಳಿ ಗೆಲಾಕ್ಷಿಯಾಗಿದೆ ಎಂಬುದನ್ನು ತನ್ನ ಸತತ ವೀಕ್ಷಣೆಯಿಂದ 1920ರಲ್ಲಿ ನಿಖರವಾಗಿ ನಿರೂಪಿಸಿದವನು ಎಡ್ವಿನ ಹಬಲ್. ಜೊತೆಗೆ, ಈ ಗೆಲಾಕ್ಷಿಯು ಭೂಮಿಯ ಕಡೆಗೆ ಘಂಟೆಗೆ 2,50,000 ಮೈಲುಗಳ ವೇಗದಲ್ಲಿ ಧಾವಿಸುತ್ತದೆ ಎಂಬುದನ್ನೂ ಹಬಲ್ ಪತ್ತೆ ಮಾಡಿದ್ದನು. ಹಬಲ್ ಅಂತರಿಕ್ಷ ದೂರದರ್ಶಕದ (ಊSಖಿ) ಇತ್ತೀಚಿನ ವೀಕ್ಷಣೆಗಳ ಆಧಾರದ ಮೇಲೆ ಸುಮಾರು ನಾಲ್ಕು ಬಿಲಿಯನ್ ವರ್ಷಗಳಲ್ಲಿ ಇದು ನಮ್ಮ ಮಿಲ್ಕಿವೇಗೆ ಬಂದು ಅಪ್ಪಳಿಸಲಿದೆ. ಹೀಗೆ ಅಪ್ಪಳಿಸಿದ ನಂತರ ಈ ಎರಡೂ ಗೆಲಾಕ್ಷಿಗಳು ಪರಸ್ಪರ ಒಗ್ಗೂಡುತ್ತವೆ. ಈ ಮಿಲನ ಪೂರ್ಣಗೊಂಡ ನಂತರ, ಸೃಷ್ಟಿಯಾಗಲಿದೆ ಎಂದು ಹೇಳಲಾಗುವ ವೃತ್ತಾಕಾರದ ದೊಡ್ಡ ಗೆಲಾಕ್ಷಿಗೆ ‘ಮಿಲ್ಕಡ್ರಮೇಡ’ ಎಂಬ ಹೆಸರನ್ನೂ ಸೂಚಿಸಲಾಗಿದೆ ! ಇವು ಅಪ್ಪಳಿಸುತ್ತವೆ ಎಂದಾಗ ಇವುಗಳಲ್ಲಿರುವ ನಕ್ಷತ್ರಗಳು ಹಾಗೂ ಇತರೆ ಕಾಯಗಳೂ ಸಹ ಪರಸ್ಪರ ಅಪ್ಪಳಿಸುತ್ತವೆಯೇ ಎಂಬ ಪ್ರಶ್ನೆ ಏಳುವುದು ಸಹಜ. ಈಗ ತಿಳಿದಿರುವಂತೆ ಗೆಲಾಕ್ಷಿಗಳಲ್ಲಿರುವ ನಕ್ಷತ್ರಗಳ ಮಧ್ಯೆ ಅಪಾರವಾದ ಖಾಲಿ ಜಾಗವಿದೆ.ಹೀಗಾಗಿ, ಆಕಾಶಕಾಯಗಳು ಗೆಲಾಕ್ಷಿಯ ಒಗ್ಗೂಡುವಿಕೆಯ ಸಂದರ್ಭದಲ್ಲಿ ಪರಸ್ಪರ ಅಪ್ಪಳಿಸುವ ಸಂಭವ ಬಹಳಷ್ಟು ಕಡಿಮೆ. ಆದರೆ, ಬೃಹತ್ ಆಕಾಶಕಾಯಗಳ ನಡುವಿನ ಗುರುತ್ವಾಕರ್ಷಣೆಯ ಬಲ ಸೂರ್ಯನಂಥ ಸಾಧಾರಣ ನಕ್ಷತ್ರಗಳನ್ನು, ಅವುಗಳ ಗ್ರಹಗಳ ಪಥಗಳನ್ನು ಏರುಪೇರು ಮಾಡುವುದಂತೂ ನಿಶ್ಚಿತ. ಗುರುತ್ವದ ಬೃಹತ್ ಅಲೆಗಳು ಉಂಟುಮಾಡುವ ಉಬ್ಬರವಿಳಿತಗಳ ಹಗ್ಗಜಗ್ಗಾಟವು ಸಾಗರಗಳಲ್ಲಿ ಸುನಾಮಿ ಎಬ್ಬಿಸಿ, ಭೂಖಂಡಗಳನ್ನು ಮುಳುಗಿಸಿ ತೊಳೆದುಬಿಡಬಹುದು. ಅಲ್ಲದೆ, ಸೂರ್ಯನಿಗೆ ಸಮೀಪದಲ್ಲಿ ಹಾದುಹೋಗುವ ಯಾವುದಾದರೂ ದೊಡ್ಡ ನಕ್ಷತ್ರ ಅಥವಾ ಸೌರವ್ಯೂಹದ ಗ್ರಹಗಳನ್ನು ಸೆಳೆದುಕೊಂಡು ಹೋಗಬಹುದು. ಈ ಎಲ್ಲ ಘಟನೆಗಳು ಮುಗಿಯುವಷ್ಟರಲ್ಲಿ ಸನಿಹದ ಮತ್ತೊಂದು ಗೆಲಾಕ್ಷಿಯಾದ ಟ್ರೈಯಾಗಲಮ್ ಸಹ ಬಂದು ಅಪ್ಪಳಿಸುವ ಸಾಧ್ಯತೆ ಇದೆ. ಏನೇ ಆದರೂ ಈ ಪ್ರಕ್ರಿಯೆಗಳು ಒಬ್ಬ ಮನುಷ್ಯನ ಜೀವಿತಾವಧಿ ಇರಲಿ, ಇಡೀ ಮನುಕುಲದ ಕಾಲಾವಧಿಯಲ್ಲಿಯೇ ಮುಗಿಯುವ ಪ್ರಕ್ರಿಯೆಗಳಲ್ಲ. ಅತ್ಯಂತ ನಿಧಾನವಾಗಿ ನಡೆಯುವ ಈ ಪ್ರಕ್ರಿಯೆಗಳು ಅರಿವಿಗೆ ಬರುವ ಮುನ್ನವೇ ಮನುಕುಲ ನಾಶವಾಗಿ ಹೋಗಿರುತ್ತದೆ.
ವಿಶ್ವದಲ್ಲಿ ಇಂಥ ಮಿಲನದ ವಿವಿಧ ಹಂತಗಳಲ್ಲಿರುವ ಅನೇಕ ಗೆಲಾಕ್ಷಿ ಜೋಡಿಗಳ ಸ್ಪಷ್ಟ ಚಿತ್ರಗಳನ್ನು ಹಬಲ್ ದೂರದರ್ಶಕವು ಸೆರೆ ಹಿಡಿಯುತ್ತಲೇ ಇದೆ.
ಈ ಮಾಹಿತಿಗಳ ಆಧಾರದ ಮೇಲೆ ವಿಜ್ಞಾನಿಗಳ ಆಶಾವಾದ ಏನೆಂದರೆ, ಇದರಿಂದ ನಮ್ಮ ಸೌರವ್ಯೂಹಕ್ಕೆ ಯಾವ ಹಾನಿಯಾಗದಿದ್ದರೂ, ಅದು ಗೆಲಾಕ್ಷಿಯ ಹೊರ ಅಂಚಿಗೆ ಇನ್ನಷ್ಟು ತಳ್ಳಿ ಹೋಗಬಹುದು ಎಂಬ ಅಂದಾಜಿದೆ. ಈ ಪ್ರಕ್ರಿಯೆ
ಆರಂಭವಾಗಲು ಸುಮಾರು ನಾಲ್ಕು ಬಿಲಿಯನ್ ವರ್ಷಗಳು ತೆಗೆದುಕೊಳ್ಳಬಹುದು. ಅಷ್ಟೊತ್ತಿಗೆ, ನಮ್ಮ ಸೌರವ್ಯೂಹದ ಕೇಂದ್ರವಾದ ಸೂರ್ಯ ಮುದಿ ಅವಸ್ಥೆಯನ್ನು ತಲುಪಿ, ಕೆಂಪು ದೈತ್ಯವಾಗಿರುತ್ತದೆ ಮತ್ತು ಸೂರ್ಯನ ವ್ಯಾಸ ವಿಸ್ತಾರವಾಗಿ ಅದು
ನಾಲ್ಕನೇ ಗ್ರಹ ಮಂಗಳದ ಕಕ್ಷೆಯನ್ನು
ದಾಟಿರುತ್ತದೆ. ಅದರ ಒಳಗಿನ ಕಕ್ಷೆಗಳಲ್ಲಿ
ಭೂಮಿಯೂ ಸೇರಿ ಬುಧ, ಶುಕ್ರ ಹಾಗೂ ಮಂಗಳ-ಈ
ನಾಲ್ಕು ಗ್ರಹಗಳನ್ನು ಸೂರ್ಯ ನುಂಗಿ ಹಾಕಿರುತ್ತದೆ. ಇದೆಲ್ಲ ಆಗುವುದಕ್ಕೆ ಬಹು ಮುಂಚೆಯೇ ಭೂಮಿಯ
ಮೇಲಿನ ಜೀವಿಗಳು ಅವಸಾನವಾಗಿರುತ್ತವೆ. ಅದಕ್ಕೂ ಮುನ್ನ ಬಹುಷಃ ಮನುಕುಲದ ಬಲಾಢ್ಯರು ಭೂಮಿಗೆ ಟಾ
ಟಾ, ಬೈ ಬೈ ಹೇಳಿ, ವಿಶೇಷ ವ್ಯೋಮ ನೌಕೆಗಳಲ್ಲಿ ಬೇರೆ ಯಾವುದೇ ನಕ್ಷತ್ರದ ಬಳಿಯ ಅನುಕೂಲಕರ
ಗ್ರಹದಲ್ಲಿ ವಾಸ ಮಾಡಲು ಹೊರಟುಬಿಟ್ಟಿರುತ್ತಾರೆ. !
ಈ ಗೆಲಾಕ್ಷಿಗಳೆರಡರ ಸುತ್ತಲೂ ಧೂಳು, ವಿಸರಿತ ಅನಿಲಗಳು ಹಾಗೂ ವಿರಳವಾಗಿ ಹರಡಿರುವ ನಕ್ಷತ್ರಗಳು ಇರುವ ಒಂದು
ವಿಸ್ತಾರವಾದ ಪ್ರಭಾವಲಯ ಇದೆ. ಈಗಾಗಲೇ ಈ ಎರಡು ಗೆಲಾಕ್ಷಿಗಳ ಪ್ರಭಾವಲಯಗಳ ಮಿಲನ ಒಂದು ಅಂಚಿನಿಂದ
ಪ್ರಾರಂಭವಾಗಿದೆ ಎಂದು ಅಂದಾಜಿಸಲಾಗಿದೆ. ಆದರೂ,
ನಮ್ಮ
ಜೀವಿತಾವಧಿಯಲ್ಲಿ ಈ ಗೆಲಾಕ್ಷಿಗಳು ನೇರವಾಗಿ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವ ಘಟನೆ
ಸಂಭವಿಸುವುದಿಲ್ಲವಾದ್ದರಿಂದ ನಾವಂತೂ ನೆಮ್ಮದಿಯ ನಿಟ್ಟುಸಿರು ಬಿಡಬಹುದು !
ಮಿಲ್ಕಿವೇ ಮತ್ತು ಆಂಡ್ರೋಮೇಡ ಗೆಲಾಕ್ಷಿಗಳ ಮಿಲನದ ಅನಿಮೇಷನ್ ನೋಡಲು ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ:
ದ್ರೌಪತಿ ಸದ್ಯಕ್ಕೆ ಮಿಲನವಾಗುವುದಿಲ್ಲ!!!!ಲೇಖನ ಅದ್ಭುತವಾಗಿ ಮೂಡಿಬಂದಿದೆ. ವಿಷಯ ನಿರೂಪಣೆ ಶೈಲಿ ಆಕರ್ಷಕವಾಗಿದೆ, ಅಭಿನಂದನೆಗಳು ಸರ್.
ReplyDelete🙄!!!!
ReplyDeleteSuper...
ನಿರೂಪಣಾ ಶೈಲಿ ಸೊಗಸಾಗಿದೆ.
ReplyDeleteVery interesting and informative
ReplyDeleteದ್ರೌಪದಿಯ ಆಗಮನ ಕಾಕತಾಳೀಯ😊,ಸೊಗಸಾದ ನಿರೂಪಣೆ ಸರ್
ReplyDeleteVery nice .........
ReplyDelete