ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, June 5, 2022

ಇದು ಬರಿ ಮಣ್ಣಲ್ಲ.......... !

 ಇದು ಬರಿ ಮಣ್ಣಲ್ಲ.......... ! 

ಲೇಖಕರು : ಬಿ.ಜಿ.ರಾಮಚಂದ್ರ ಭಟ್

ವಿಶ್ವ ಪರಿಸರ ದಿನ’ದ ಹಿನ್ನೆಲೆಯಲ್ಲಿ ಮಣ್ಣಿನ ಪ್ರಾಮುಖ್ಯತೆಯ ಬಗ್ಗೆ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಈ ಲೇಖನವನ್ನು ‘ಸವಿಜ್ಞಾನ’ ತಂಡದ ಶಿಕ್ಷಕ ಬಿ.ಜಿ.ರಾಮಚಂದ್ರ ಭಟ್ ಬರೆದಿದ್ದಾರೆ.

“Land is not merely soil; it is a fountain of energy flowing through a circuit of soils, plants, and animals. ….” - Aldo Leopold,

ಅಮೆರಿಕದ ಖ್ಯಾತ ಜೀವಿಪರಿಸರತಜ್ಞ ಹೇಳಿದ ಮಾತು ಎಷ್ಟು ಅರ್ಥಪೂರ್ಣ ಅಲ್ಲವೇ? ಮಣ್ಣು ಸಕಲ ಜೀವಜಾತರಿಗೂ ಚೈತನ್ಯವನ್ನೀವ ಹಿರಣ್ಯಗರ್ಭ. ಮಣ್ಣು ಸಮಸ್ತ ಜೀವಸಂಕುಲದ ಉಳಿವಿಗೆ ಬೇಕಾದ ಪೋಷಕಾಂಶಗಳ ಅಕ್ಷಯ ಪಾತ್ರೆ.. ಸಹಸ್ರಾರು ಜೀವಿಗಳಿಗೆ ಅದು ಆವಾಸ ತಾಣ. ಜೀವವೈವಿಧ್ಯತೆಯ ಆಗರ. ವಸುಂದರೆಯ ಒಡಲಾಗ್ನಿಯನ್ನು ತಣಿಸುವ ವಿಶಿಷ್ಟ ಘಟಕ. ಇಂಥ ಮಣ್ಣನ್ನು ಅಭಿವೃದ್ಧಿಯ ಹೆಸರಿನಲ್ಲಿ ಗಣಿಗಾರಿಕೆ, ಕೈಗಾರಿಕೆಗಳು, ವಸತಿ ಸಮುಚ್ಛಯಗಳ ನಿರ್ಮಾಣ, ರಸ್ತೆಗಳ ನಿರ್ಮಾಣ ಮೊದಲಾದ ಮಾನವಜನ್ಯ ಚಟುವಟಿಕೆಗಳಿಗೆ ಬಲಿ ನೀಡುತ್ತಿದ್ದೇವೆ. ಮಣ್ಣು ನಮ್ಮೆಲ್ಲಾ ಆಸೆಗಳನ್ನು ಪೂರೈಸೀತು. ಆದರೆ ದುರಾಸೆಗಳ ಒತ್ತಡವನ್ನು ತಾಳದು. ಇದನ್ನು ಅರಿತುಕೊಂಡು, ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಮಣ್ಣಿನ ಸುಸ್ಥಿರ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವು, ವಿಶೇಷವಾಗಿ ಶಿಕ್ಷಕರು, ಮಣ್ಣಿನ ಬಗ್ಗೆ ಹಾಗೂ ಅದರ ಸಂರಕ್ಷಣೆಯ ಅವಶ್ಯಕತೆಯ ಬಗ್ಗೆ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಉಂಟುಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಒಂದು ಪ್ರಮುಖ ನೈಸರ್ಗಿಕ ಸಂಪನ್ಮೂಲವಾದ ಮಣ್ಣು, ಪ್ರಕೃತಿಯ ಜೈವಿಕ ಪದಾರ್ಥಗಳಿಂದ ಕೂಡಿದ ಶಿಲಾಗೋಳದ ಮೇಲ್ಪದರ. ಮಣ್ಣಿನಲ್ಲಿ ವಿಘಟನೆಗೊಳಗಾದ ಶಿಲಾಕಣಗಳು, ಜೈವಿಕ ಪದಾರ್ಥಗಳು, ನೀರು, ಹಾಗೂ ಗಾಳಿ ಇರುತ್ತದೆ. ಭೂಮಿಯ ಮೇಲ್ಭಾಗದ ಗಟ್ಟಿಯಾದ ಶಿಲಾಪದರವು ಗಾಳಿ, ಮಳೆ, ಒತ್ತಡ, ಬಿಸಿಲು ಪ್ರವಾಹದ ಪ್ರಭಾವ ಹಾಗೂ ಜೈವಿಕ ಪ್ರಕ್ರಿಯೆಗಳಿಗೆ ಒಳಗಾಗಿ ಶಿಥೀಲೀಕರಣಗೊಂಡು ಸಣ್ಣ, ಸಣ್ಣ ಮಣ್ಣಿನ ಕಣಗಳಾಗುತ್ತದೆ. ಮಣ್ಣು ವಿವಿಧ ಜೀವಭೂ ರಾಸಾಯನಿಕ ಚಕ್ರಗಳ ಕೇಂದ್ರ.. ಅದು ಅನೇಕ ಪೋಷಕಾಂಶಗಳ ಸಂಗ್ರಹಮೂಲ. ನೀರಿನ ಹೀರಿಕೆ, ಸಂಗ್ರಹ ಹಾಗೂ ಸಾಗಾಣಿಕೆಗೆ ಮಣ್ಣು ಒಂದು ಮಾಧ್ಯಮ. ಹಾಗೆಯೇ, ಅಪಾರ ಸಂಖ್ಯೆಯ ಸೂಕ್ಷ್ಮಜೀವಿಗಳ ಹಾಗೂ ಇತರ ಜೀವಿಗಳ ಆವಾಸಸ್ಥಾನ. 

ಮಣ್ಣು ಒಂದು ಪರಿಸರ ವ್ಯವಸ್ಥೆ !

ಯಾವುದೇ ಪ್ರದೇಶದ ಮಣ್ಣಿನಲ್ಲಿ ಬಗೆ ಬಗೆಯ ಜೀವಿಗಳು ಹಾಗೂ ಅಜೈವಿಕ ಘಟಕಗಳು ಕಂಡುಬರುವುದರಿಂದ ಹಾಗೂ ಅವುಗಳ ನಡುವೆ ಪರಸ್ಪರ ಪ್ರತಿವರ್ತನೆಗಳು ನಡೆಯುತ್ತಲೇ ಇರುವುದರಿಂದ, ಮಣ್ಣನ್ನು ಒಂದು ‘ಶ್ರೀಮಂತ ಪರಿಸರ ವ್ಯವಸ್ಥೆ’ ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಎಲ್ಲ ಜೀವಭೂರಾಸಾಯನಿಕ ಚಕ್ರಗಳಲ್ಲಿ ಮಣ್ಣು ಪೋಷಕಾಂಶಗಳ ಮರುಚಕ್ರೀಕರಣ ಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸಸ್ಯಗಳಿಗೆ ನೀರು ಮತ್ತು ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ಆಧಾರವನ್ನೂ ಒದಗಿಸುತ್ತವೆ. ಸಹಸ್ರಾರು ಬಗೆಯ ಸೂಕ್ಷ್ಮಜೀವಿಗಳಲ್ಲದೆ, ಅನೇಕ ಬಗೆಯ ಪ್ರಾಣಿಗಳು ಮಣ್ಣಿನಲ್ಲಿ ವಾಸಿಸುತ್ತವೆ. ಒಂದು ಅಂದಾಜಿನ ಪ್ರಕಾರ, ಒಂದು ಹಿಡಿ ಮಣ್ಣಿನಲ್ಲಿ ಸುಮಾರು 10,000 ಪ್ರಭೇದಗಳಿಗೆ ಸೇರಿದ ಒಂದು ಬಿಲಿಯನ್‍ಗೂ ಹೆಚ್ಚು ಸೂಕ್ಷ್ಮಜೀವಿಗಳು ಕಂಡುಬರಬಹುದು. ಈ ಸೂಕ್ಷ್ಮಜೀವಿಗಳ ವೈವಿಧ್ಯ ನೆಲ ಪರಿಸರವ್ಯವಸ್ಥೆಯ ಎಲ್ಲ ಜೀವಿಗಳ ಉಳಿವಿಗೆ ಅತ್ಯಗತ್ಯ ! ಜೊತೆಗೆ, ಘನತ್ಯಾಜ್ಯ ನಿರ್ವಹಣೆಯಲ್ಲಿ ಮತ್ತು ನೀರಿನ ಶುದ್ಧೀಕರಣ ಕ್ರಿಯೆಯಲ್ಲೂ ಸಹ ಪಾಲ್ಗೊಳ್ಳುತ್ತದೆ. ಮಾನವನ ಜೀವನಕ್ಕೆ ಅವಶ್ಯಕವಾದ ಅನೇಕ ವಸ್ತುಗಳನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಒದಗಿಸುವುದು ಮಣ್ಣಿನ ಪರಿಸರವ್ಯವಸ್ಥೆಯ ಸೇವೆಗಳಲ್ಲಿ ಒಂದು.

ಮಣ್ಣಿನಲ್ಲಿ ಮೂರು ಪದರಗಳನ್ನು ಗುರುತಿಸಲಾಗುತ್ತದೆ :

ಮೇಲ್ಮಣ್ಣು : ಈ ಪದರ ಸುಮಾರು ರಿಂದ 8 ಇಂಚು ದಪ್ಪ ಇರುತ್ತದೆ. ಇದರಲ್ಲಿ ಸಾವಯವ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಕೆಳಮಣ್ಣು : ಈ ಪದರ ಮೇಲ್ಮಣ್ಣಿನ ಕೆಳಗೆ ಸುಮಾರು 10ರಿಂದ 12 ಇಂಚುಗಳಷ್ಟು ದಪ್ಪ ಇರುತ್ತದೆ. ಇದರಲ್ಲಿ ದೊಡ್ಡ ಗಾತ್ರದ ಶಿಲಾಕಣಗಳು, ಸಣ್ಣ ಮರಳು ಮತ್ತು ಜೇಡಿ ಮಣ್ಣಿನ ಕಣಗಳೂ ಇದ್ದು, ಸಾವಯವ ವಸ್ತುಗಳ ಪ್ರಮಾಣ ಕಡಿಮೆ ಇರುತ್ತದೆ. ಮೂಲಬಂಡೆ : ಮಣ್ಣಿನ ಅತ್ಯಂತ ಕೆಳ ಪದರವಾದ ಇದರಲ್ಲಿ ಬಂಡೆಗಳಿರುತ್ತವೆ.

ಮೇಲ್ಮಣ್ಣು ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯ. ಈ ಪದರದಲ್ಲಿರುವ ಸೂಕ್ಷ್ಮಜೀವಿಗಳು ತಮ್ಮ ಜೈವಿಕ ಚಟುವಟಿಕೆಗಳಿಂದ ಒಣಗಿದ ಉದುರೆಲೆ ಮತ್ತು ಸತ್ತ ಜೀವಿಗಳ ದೇಹದ ಉಳಿಕೆ ವಸ್ತುಗಳನ್ನು ಕೊಳೆಯಿಸಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ಈ ಒಂದು ಪ್ರಕ್ರಿಯೆಗೆ ಎರೆಹುಳುಗಳೂ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತವೆ.

ಮಣ್ಣುಗಳಲ್ಲಿರುವ ವಿವಿಧ ಬಗೆಯ ಕಣಗಳನ್ನಾಧರಿಸಿ ಮಣ್ಣಿನ ವರ್ಗೀಕರಣ ಮಾಡಲಾಗುತ್ತದೆ. ಮರಳು ಮಿಶ್ರಿತ ಮಣ್ಣು ದೊಡ್ಡ ಮರಳ ಕಣಗಳಿಂದಾಗಿ ರಂಧ್ರಯುಕ್ತವಾಗಿದ್ದು ನೀರನ್ನು ಹಿಡಿದಿಟ್ಟುಕೊಳ್ಳಲಾರದು. ಜೇಡಿ ಮಣ್ಣಿನಲ್ಲಿ ಮರಳಿನ ಅಂಶ ಕಡಿಮೆ ಇದ್ದು, ಕಣಗಳು ಸೂಕ್ಷ್ಮ ಗಾತ್ರ ಹೊಂದಿರುವುದರಿಂದ ರಂಧ್ರಗಳು ಹೆಚ್ಚಿರುವುದಿಲ್ಲ. ಈ ಮಣ್ಣಿನಲ್ಲಿ ನೀರು ಬೇಗ ಇಂಗುವುದಿಲ್ಲ. ಹಾಗಾಗಿ, ಸಸ್ಯದ ಬೇರುಗಳಿಗೆ ಸಾಕಷ್ಟು ಗಾಳಿ ದೊರೆಯದೆ, ಅವು ಬೇಗ ಕೊಳೆತುಹೋಗುತ್ತವೆ.

ಮಣ್ಣಿನ ಕಣಗಳು ತಾವು ರೂಪುಗೊಂಡ ತಾಣದಿಂದ ಮತ್ತೊಂದೆಡೆಗೆ ವರ್ಗಾವಣೆಯಾಗುವ ಪ್ರಕ್ರಿಯೆಗೆ ಮಣ್ಣಿನ ಸವಕಳಿ ಎನ್ನಲಾಗುತ್ತದೆ. ವಿಶೇಷವಾಗಿ, ಮೇಲ್ಮಣ್ಣು ಗಾಳಿ ಮತ್ತು ಮಳೆಯ ಪ್ರಭಾವಕ್ಕೆ ಒಳಗಾಗಿ ನಾಶವಾಗುವ ಪ್ರಕ್ರಿಯೆ ಈಗ ವೇಗವನ್ನು ಪಡೆದುಕೊಂಡಿದೆ.  ಮಣ್ಣಿನ ಸವಕಳಿಯಲ್ಲಿ ಈ ಕೆಳಗಿನ ವಿಧಗಳನ್ನು ಗುರುತಿಸಬಹುದು.

ಹನಿ ಸವಕಳಿ : ರಭಸವಾಗಿ ಬೀಳುವ ಮಳೆ ಹನಿಗಳು ಮಣ್ಣಿನ ಕಣಗಳನ್ನು ಚದುರಿಸುತ್ತವೆ. ಹೀಗೆ ಸಡಿಲಗೊಂಡ ಮಣ್ಣು ಸವೆತಕ್ಕೆ ಒಳಗಾಗುತ್ತದೆ.

ಹಾಳೆ ಸವಕಳಿ : ಮಳೆ ಹನಿಗಳಿಂದಾಗಿ ಸಡಿಲಗೊಂಡ ಮಣ್ಣಿನ ಕಣಗಳು ಹರಿಯುತ್ತಿರುವ ನೀರಿನೊಂದಿಗೆ ಸೇರಿ, ಹಾಳೆಯ ರೀತಿಯಲ್ಲಿ ಕೊಚ್ಚಿ ಹೋಗುತ್ತವೆ.

ಕೊರಕಲು ಸವಕಳಿ : ತಗ್ಗು ಪ್ರದೇಶದಲ್ಲಿ ಹರಿಯುವ ನೀರು ಅಲ್ಲಿನ ಮಣ್ಣನ್ನು ಕೊರೆದು, ಕೊರಕಲುಗಳನ್ನು ಉಂಟು ಮಾಡಿ ಭೂಸವೆತ ಹಾಗೂ ಭೂ ಕುಸಿತಕ್ಕೆ ಕಾರಣವಾಗಬಹುದು.

 



ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದಾಗ ಮಣ್ಣಿನ ಸವಕಳಿಯನ್ನು ತಡೆದು, ಮಣ್ಣಿನ ಸಂರಕ್ಷಣೆಯನ್ನು ಮಾಡಬೇಕಾದ ಅವಶ್ಯಕತೆ ಇಂದು ಎಂದಿಗಿಂದ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕಿದೆ. ಬೀಳು ಭೂಮಿಯ ಮೇಲೆ ಹಾಗೂ ಬೆಟ್ಟಗುಡ್ಡಗಳ ಇಳಿಜಾರುಗಳಲ್ಲಿ ಸಸ್ಯಗಳನ್ನು ಬೆಳೆಸುವುದು, ಇಳಿಜಾರು ಬೇಸಾಯ ಕ್ರಮ ಅನುಸರಿಸುವುದು, ನೀರು ಹೆಚ್ಚು ಹರಿಯುವ ಪ್ರದೇಶಗಳಲ್ಲಿ ಬದು ಹಾಗೂ ಒಡ್ಡುಗಳನ್ನು ನಿರ್ಮಿಸುವುದು, ಇವು ಪ್ರಮುಖ ಮಾರ್ಗೋಪಾಯಗಳು. ಜೊತೆಗೆ, ಖಾಲಿ ಭೂಮಿಯನ್ನು ಅರಣ್ಯೀಕರಣಕ್ಕೆ ಒಳಪಡಿಸುವುದು, ಸಾಮಾಜಿಕ ಅರಣ್ಯಗಳನ್ನು ಬೆಳೆಸುವುದು ಹಾಗೂ ಸವಕಳಿಗೆ ಕಾರಣವಾಗುವ ಮಾನವಜನ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಈ ಕೂಡಲೇ ಜಾರಿಗೆ ಬರಬೇಕಾದ ಕ್ರಮಗಳು.

ಭೂಮಿಯಲ್ಲಿ ನಮ್ಮ ಬಳಕೆಗೆ ಲಭ್ಯವಿರುವ ಮಣ್ಣಿನ ಪ್ರಮಾಣವನ್ನು ಒಂದು ಸೇಬಿನ ಹಣ್ಣನ್ನು ಬಳಸಿ ಹೀಗೆ ಕಲಿಯಬಹುದು.

ಒಂದು ದೊಡ್ಡ ಸೇಬಿನ ಹಣ್ಣನ್ನೇ ಭೂಮಿ ಎಂದು ಪರಿಗಣಿಸೋಣ. ಅದನ್ನು ನಾಲ್ಕು ಸಮಭಾಗಗಳಾಗಿ ಕತ್ತರಿಸಿ. ಇದರಲ್ಲಿ ಒಂದು ಭಾಗ ಮಾತ್ರ ಭೂಭಾಗ. ಉಳಿದ ಮೂರು ಭಾಗ ನೀರಿನ ಅಂಶ ! ಭೂಭಾಗವನ್ನು ಪ್ರತಿನಿಧಿಸುವ ತುಂಡನ್ನು ಮತ್ತೆ ಎರಡು ಭಾಗವಾಗಿ ಕತ್ತರಿಸಿ.ಅದರಲ್ಲಿ ಒಂದು ಭಾಗ, ಪರ್ವತ, ಮರಳುಗಾಡು ಮತ್ತು ಹಿಮಾವೃತ ಪ್ರದೇಶಗಳನ್ನು ಪ್ರತಿನಿಧಿಸುತ್ತದೆ. ಉಳಿದ ಮತ್ತೊಂದು ಭಾಗ, ಜೀವಿಗಳಿರುವ ಭೂಭಾಗ. ಇದನ್ನು ನಾಲ್ಕು ಸಮಭಾಗಗಳಾಗಿ ಕತ್ತರಿಸಿ. ಮೂರು ಭಾಗಗಳು ಒಟ್ಟಾರೆ ನಗರ, ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿಯನ್ನು ಪ್ರತಿನಿಧಿಸಿದರೆ, ಉಳಿದ ಒಂದು ಸಣ್ಣ ಭಾಗವೇ ಕೃಷಿಯೋಗ್ಯ ಭೂಮಿ ! ಇದರ ಸಿಪ್ಪೆಯೇ ಎಲ್ಲ ಕೃಷಿ ಚಟುವಟಿಕೆಗಳಿಗೆ ಬಳಸಬಹುದಾದ ಮೇಲ್ಮಣ್ಣು ! ಇಲ್ಲಿಯೇ ನಮ್ಮ ಎಲ್ಲಾ ಆಟಾಟೋಪಗಳು !! ಇಡೀ ವಸುಂದರೆಯ ಒಡಲಲ್ಲಿರುವ ಜೀವಿಗಳಿಗೆ ಅಗತ್ಯವಿರುವ ಆಹಾರ ಉತ್ಪಾದನೆ ನಡೆಯುವುದು ಇಲ್ಲಿಯೇ ! ಅಚ್ಚರಿಯಾಗುತ್ತದೆಯೇ ?



ಮಣ್ಣಿನ ವಿವಿಧ ಘಟಕಾಂಶಗಳ ಪರಿಚಯಕ್ಕೊಂದು ಸರಳ ಪ್ರಯೋಗ ಮಾಡೋಣ. ಇದಕ್ಕೆ ಬೇಕಾಗುವುದು ವಿವಿಧ ಸ್ಥಳಗಳಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳು, ಭೂತ ಕನ್ನಡಿ ಮತ್ತು ಟೂಥ್‍ಪಿಕ್ ಕಡ್ಡಿಗಳು ಮಾತ್ರ. ಮಣ್ಣು ಸಂಗ್ರಹಿಸಿದ ಸ್ಥಳದ ವಿವರ, ಕಾಲ, ಮಣ್ಣಿನ ಪದರದ ಆಳ, ಮೊದಲಾದ ವಿವರಗಳನ್ನು ದಾಖಲಿಸಿಕೊಳ್ಳಿ. ಸಂಗ್ವಿರಹಿಸಿದ ವಿಧ ಮಣ್ಣಿನ ಮಾದರಿಗಳನ್ನು ಪರೀಕ್ಷಿಸಿ. ಮಣ್ಣಿನ ವಿಧ, ಕಣಗಳ ಗಾತ್ರ, ಸ್ಪರ್ಶಾನುಭವಬಣ್ಣ, ವಾಸನೆ, ತೇವಾಂಶಗಳಂತಹ ಅಜೈವಿಕ ಘಟಕಗಳು,, ಜೈವಿಕ ಘಟಕಗಳು,  ಇವೆಲ್ಲವನ್ನೂ ದಾಖಲಿಸಿ. ಸಾಧ್ಯವಾದರೆ, ಆ ಸ್ಥಳದಲ್ಲಿ ಕಂಡುಬರುವ ಆಹಾರ ಸರಪಳಿಗಳನ್ನೂ ಪಟ್ಟಿ ಮಾಡಿ. ತುಲನಾತ್ಮಕವಾದ ವರದಿಯೊಂದನ್ನು ಸಿದ್ಧಪಡಿಸಿ.

ಮೊದಲ ಬಾರಿಗೆ ಇಂಥ ಪ್ರಯತ್ನವನ್ನು ಗುರುಚೇತನ ಶಿಕ್ಷಕರ ವೃತ್ತಿಪರ ತರಬೇತಿಯ ‘ಪರಿಸರ ಪ್ರಜ್ಞೆ’ ಮಾಡ್ಯೂಲಿನಲ್ಲಿಸಿಕೊಂಡಿದ್ದೆವು. ಶಿಬಿರಾರ್ಥಿ ಶಿಕ್ಷಕರು ಅಚ್ಚರಿಯಿಂದ, ಆನಂದದಿಂದ ಇಂಥ ಪ್ರಯೋಗಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನಮ್ಮ ವಿದ್ಯಾರ್ಥಿಗಳನ್ನೂ ಇಂಥ ಸರಳ ಪ್ರಯೋಗಗಳಲ್ಲಿ ತೊಡಗಿಸಿಕೊಂಡು, ಅವರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನ ವಿಜ್ಞಾನ ಶಿಕ್ಷಕರಿಂದ ನಡೆಯಬಹುದಲ್ಲವೇ?

10 comments:

  1. Informative..and nice sir..👌

    ReplyDelete
  2. ಮಣ್ಣಿನ ಕುರಿತಾದ ಜ್ಞಾನವು ನಮ್ಮ ವಿಜ್ಞಾನದ ಹರಿವು ಹಾಗೂ ಅದರ ಮಹತ್ವವನ್ನು ಉತ್ತಮವಾಗಿ ವಿವರಿಸಲ್ಪಟ್ಟಿದೆ ಹಾಗೂ ವಿವರಣೆಯು ಹೆಚ್ಚು ಪ್ರಯೋಗಾತ್ಮಕ ವಾಗಿದೆ.🙏🌿.ಉತ್ತಮವಾಗಿದೆ..

    ReplyDelete
  3. ಲೇಖನಗಳು ತುಂಬಾ ಚೆನ್ನಾಗಿವೆ ಸಾರ್... ಧನ್ಯವಾದಗಳು

    ReplyDelete
  4. ಉಪಯುಕ್ತವಾದ ಮಾಹಿತಿ. ಗುರುಗಳೆ ಅಭಿನಂದನೆಗಳು

    ReplyDelete
  5. ಮಣ್ಣಿನ ಸಂರಕ್ಷಣೆಯಲ್ಲಿ ನಿಮ್ಮ ಕಾಳಜಿಯೇ ಹೆಚ್ಚಾಗಿ ಕಾಣುತ್ತಿದೆ. ಗುರುಗಳೇ.... ನೈಸ್ ಸರ್

    ReplyDelete
  6. Well written and thought provoking. Save Soil global movement launched by Sadhguru, to address the soil crisis by bringing together people from around the world to stand up for Soil Health needs to be remembered here

    ReplyDelete