ಮಕ್ಕಳ ನೆಚ್ಚಿನ ಸರಳ ವ್ಯಕ್ತಿತ್ವದ ಸಂಪನ್ಮೂಲ ಕಣಜ ಮಯ್ಯ ಸರ್
ನಾನು ಪ್ರೌಢಶಾಲಾಶಿಕ್ಷಕನಾಗಿ ಸೇವೆಗೆ ಸೇರಿದ ಪ್ರಾರಂಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯವಾಗುವ ಪುಸ್ತಕ ಯಾವುದೆಂದು ನನ್ನ ಶಿಕ್ಷಕ ಮಿತ್ರರಲ್ಲಿ ಕೇಳಿದಾಗ ಅವರೆಲ್ಲ ಹೇಳಿದ ಒಂದು ಪುಸ್ತಕ ದಾವಣಗೆರೆ ಜಿಲ್ಲೆಯ ಶಿಕ್ಷಕರಾದ ಶ್ರೀಧರಮಯ್ಯರವರು ಬರೆದ “ಕಣಜ” ಪುಸ್ತಕ, ಹೇಗೋ ಮಾಡಿ ಅವರನ್ನು ಸಂಪರ್ಕಿಸಿ ಆ ಪುಸ್ತಕವನ್ನು ತರಿಸಿಕೊಂಡೆ. ಅದರಿಂದ ನಮ್ಮ ಶಾಲೆಯಲ್ಲಿ ಕೂಡ ಉತ್ತಮ ಫಲಿತಾಂಶ ಬಂದಿತ್ತು. ಆದರೆ ಆ ವ್ಯಕ್ತಿಯನ್ನು ಭೇಟಿಯಾಗುವ ಸುಸಂದರ್ಭ ನನಗೆ ಸಿಕ್ಕಿದ್ದು 2015 ರಲ್ಲಿ ಎನ್.ಸಿ.ಇ.ಆರ್.ಟಿ. ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಮಾಡುವ ಹಾಗೂ ಶಿಕ್ಷಕ ತರಬೇತಿ ಸಾಹಿತ್ಯವನ್ನು ರಚಿಸುವ ಸಂದರ್ಭದಲ್ಲಿ. ಆ ದಿನಗಳಲ್ಲಿ ಅವರೊಡನೆ ಕಳೆದ ಕ್ಷಣಗಳಲ್ಲಿ ವಿಜ್ಞಾನ ವಿಷಯದಲ್ಲಿನ ಅವರ ಪಾಂಡಿತ್ಯ, ವಾಕ್ಚಾತುರ‍್ಯ, ಸರಳ ವ್ಯಕ್ತಿತ್ವ, ಉತ್ತಮ ಹಾಸ್ಯಪ್ರಜ್ಞೆ ನನ್ನ ಮನಸೂರೆಗೊಂಡಿತು. ಅವರಿಂದ ಅನೇಕ ವಿಷಯಗಳನ್ನು ನಾನು ಕಲಿಯುವಂತಾಯಿತು. ಇಂತಹ ಸರಳ ವ್ಯಕ್ತಿತ್ವದ ಶಿಕ್ಷಕರಿರಿಗೆ ಸಾಧನೆಯ ಹಾದಿಯಲ್ಲಿ ಸ್ಫೂರ್ತಿನೀಡುತ್ತಿರುವ ಸಂಪನ್ಮೂಲ ಕಣಜ ಆತ್ಮೀಯ ಸ್ನೇಹಿತ ಶ್ರೀಧರಮಯ್ಯ ಎಂ. ಎನ್. ರವರನ್ನು ಸವಿಜ್ಞಾನದ ಮೂಲಕ ನಿಮ್ಮೆಲ್ಲರಿಗೂ ಪರಿಚಯಿಸಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ.
ಸ್ನೇಹಿತರ ಜೊತೆಗೂಡಿ ವಿಜ್ಞಾನಕಿರಣ, ಬೆಳಕು, ಎನ್.ಎಸ್.ಆರ್. ಪ್ಯಾಕೇಜ್, ಸಾಧನೆಯತ್ತ ಹೆಜ್ಜೆಗಳು, ವಿಜ್ಞಾನ ನಿಧಿ ಹಲವು ಪುಸ್ತಕಗಳ ರಚನಾ ಕಾರ‍್ಯದಲ್ಲಿ ಭಾಗಿಯಾಗಿದ್ದಾರೆ . ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ನಡೆಯುವ ವಿಜ್ಞಾನ ಯೋಜನಾ ವರದಿಯಲ್ಲಿ 12 ಬಾರಿ ರಾಜ್ಯಮಟ್ಟಕ್ಕೆ, 2 ಬಾರಿ ರಾಷ್ಟ್ರಮಟ್ಟಕ್ಕೆ ಮಕ್ಕಳು ಆಯ್ಕೆಯಾಗಿರುತ್ತಾರೆ. ಜಿಲ್ಲಾ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು 10 ಜಿಲ್ಲೆಗಳ ಕಾರ‍್ಯಾಗಾರದಲ್ಲಿ ಉಪನ್ಯಾಸ ನೀಡಿರುತ್ತಾರೆ. ಇಲಾಖೆಯ ಹಲವು ಶಿಕ್ಷಕರ ಕೈಪಿಡಿಗಳ, ಕಲಿಕಾ ಸಾಮಗ್ರಿಗಳ ರಚನೆಗಳಲ್ಲಿ ತಮ್ಮ ಅಮೂಲ್ಯ ಅನುಭವಗಳನ್ನು ಧಾರೆ ಎರೆದಿದ್ದಾರೆ.
ಕಿರಿಯರಿಗೆ ಮಾರ್ಗ ದರ್ಶನ ನೀಡಿದ್ದಾರೆ. 100 ಕ್ಕೂ ಹೆಚ್ಚು ಯೂಟ್ಯೂಬ್ ವೀಡಿಯೋಗಳನ್ನು ತಯಾರಿಸಿ ಉಚಿತವಾಗಿ ಹಂಚಿದ್ದಾರೆ. ರಾಜ್ಯಾದ್ಯಂತ ವಾಟ್ಸಪ್ ಗುಂಪುಗಳ ಮೂಲಕ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಾವು ತಯಾರಿಸಿದ ವಿಜ್ಞಾನದ ರಸಪ್ರಶ್ನೆ , ಪವರ್ ಪಾಯಿಂಟ್ ಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಬಂದಿದ್ದಾರೆ.
ಶ್ರೀಧರ ಮಯ್ಯರವರ ಶಿಕ್ಷಣ ಸೇವೆಗೆ ಸಂದ ಪ್ರಶಸ್ತಿಗಳು ಹಲವಾರು ಅವುಗಳಲ್ಲಿ ಪ್ರಮುಖವಾದವು 2013 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2016 ರಲ್ಲಿ ರಾಜ್ಯಮಟ್ಟದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ, 2021 ರಲ್ಲಿ ವಿಶ್ವ ಶರಣು ವಚನ ಫೌಂಡೇಶನ್ ವತಿಯಿಂದ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ, 2022 ರ ಕಾಯಕ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಶ್ರೀಮಯ್ಯ ಸರ್ ಒಬ್ಬ ಅತ್ಯಂತ ಸರಳ ಸಜ್ಜನಿಕೆಯ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿದ್ದು ವಿಜ್ಞಾನದ ಕಲಿಕೆಯನ್ನು ಸುಲಭೀಕರಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಪ್ರಯತ್ನ ಇತರರಿಗೆ ಮಾದರಿಯಾಗಿದೆ. ಅವರೊಂದಿಗೆ ನಾನು ಕೂಡ ಮೊನ್ನೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ದಿ ಅನಿತಾ ಕೌಲ್ ಪ್ರಶಸ್ತಿ ಹಂಚಿಕೊಂಡದ್ದು ಖುಷಿ ಅನ್ನಿಸುತ್ತದೆ
ReplyDelete