ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, March 4, 2023

ಪ್ರಕೃತಿ ಸೌಂದರ್ಯದ ಸೊಬಗು : ‘ಕಾಡಿನ ಬೆಂಕಿ’

ಪ್ರಕೃತಿ ಸೌಂದರ್ಯದ ಸೊಬಗು : ‘ಕಾಡಿನ ಬೆಂಕಿ’

ಲೇಖಕರು : ರಮೇಶವಿಬಳ್ಳಾ

                                                                                                    ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

                                                                   9739022186

“ಫ್ಲೇಮ್‌ ಆಫ್‌ ದಿ ಫಾರೆಸ್ಟ್‌ʼ ಎಂದೇ ಜನಪ್ರಿಯವಾಗಿರುವ ಮುತ್ತುಗದ ಹೂಗಳ ಸೊಬಗನ್ನು ಮೆಚ್ಚದೇ ಇರಲು ಸಾಧ್ಯವೇ ? ಶಿವರಾತ್ರಿಯ ಆಗಮನದೊಂದಿಗೆ ತನ್ನ ಕೆಂಬಣ್ಣದ ಹೂಗಳೊಂದಿಗೆ ಆಕರ್ಷಿಸುವ ಮುತ್ತುಗದ ಮರ, ಹಲವು ರೀತಿಯಲ್ಲಿ ನಮ್ಮ ಸಂಪ್ರದಾಯದೊಂದಿಗೆ ಬೆರೆತು ಹೋಗಿದೆ.  ಈ ಮರಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದಾರೆ, ಶಿಕ್ಷಕ ರಮೇಶ್‌ ಬಳ್ಳಾ ಅವರು.

 

ನಿಸರ್ಗ ನಿಜಕ್ಕೂ ಸೋಜಿಗದ ಆಗರ. ಅದನ್ನು ಅರಿತುಕೊಳ್ಳುವುದೇ ಒಂದು ಅದ್ಭುತ ಅನುಭವ. ಪ್ರಕೃತಿ ಕಲ್ಲು, ಮುಳ್ಳು, ಹೂ, ಹಣು,್ಣ ಕಾಯಿ, ನೆಲ,ಜಲ, ಕಾಡು,ಕಣಿವೆ, ಹಚ್ಚ ಹಸಿರು ಗಿಡಮರಗಳನ್ನು ಹಾಸಿ ಜಗವೆಲ್ಲಾ ರಮಣೀಯವಾಗುವಂತೆ ಮಾಡಿದೆ. ಇಂತಹ ಶೃಂಗಾರಮಯ ಸೃಷ್ಠಿಯ ಸೊಬಗಿನಲ್ಲಿ ಬೆಂಕಿಯ ಬೆರಗು ಎದ್ದು ಕಾಣುತ್ತದೆ. ಹಾಂ ! ಇದೇನು ಬೆಂಕಿ ಸೌಂದರ್ಯ ಸೃಷ್ಠಿಸುವುದೇ ಎಂದು ಆಶ್ಚರ್ಯವಾಗಬಹುದು. ಆದರೆ ನಾ ಹೇಳ ಹೊರಟಿರೋ ಬೆಂಕಿ ನೀವಂದುಕೊಂಡಂತೆ ಉರಿಯುವ ಮತ್ತು ಕೆನ್ನಾಲಿಗೆ ಚಾಚುವ ಸುಡುವಗ್ನಿ ಅಲ್ಲ. ಇದು ನಮ್ಮ ಪ್ರಕೃತಿಯಲ್ಲಿ ಚೆಲುವು ತುಂಬುವ ʼಕಾಡಿನ ಬೆಂಕಿʼ. ಅದೇ ಸುಂದರ ಹೂ “ಫ್ಲೇಮ್ ಆಫ್ ದಿ ಫಾರೆಸ್ಟ್.”

ಫೆಬ್ರುವರಿ ತಿಂಗಳು ಬಂತೆಂದರೆ ಚಳಿಗಾಲ ಮುಗಿದು ಇನ್ನೇನು ಬೇಸಿಗೆಯ ಬಿಸಲಿಗೆ ಬೆವರುವುದು ಪ್ರಾರಂಭವಾಗುವ ಸಮಯ. ಹಸಿರೆಲ್ಲ ಕಳೆಗುಂದಿ ಬೋಳು ಬೋಳಾಗುವ ಹೊತ್ತು. ಹಾಗೇ ಇದೇ ತಿಂಗಳಲ್ಲಿ ಪ್ರಕೃತಿ ಒಂದು ರೀತಿಯಲ್ಲಿ ಬದಲಾವಣೆಗೆ ಅಣಿಯಾಗುವ ಕಾಲವನ್ನು ಎದುರು ನೋಡುತ್ತಿರುತ್ತದೆ. ನಮಗೆಲ್ಲಾ ಗೊತ್ತಿರುವ ಹಾಗೇ ಈ ಸಮಯಯದಲ್ಲೇ ಶಿವರಾತ್ರಿಯ ಜಪ ತಪಗಳು ಜೋರಾಗಿ ಜಗದೊಡೆಯ ಶಿವನ ಆರಾಧನೆ ಮುನ್ನಲೆಗೆ ಬರುತ್ತದೆ. ಆ ಶಿವನ ನೆಚ್ಚಿನ ಹೂವೆಂದೇ ಹೆಸರಾದ, ಮುತ್ತುಗದ ಮರದ ಈ ತಿಳಿ ಕೆಂಪು, ಕೇಸರಿ ವರ್ಣದ ಹೂಗಳು ಗೊಂಚಲು ಗೊಂಚಲಾಗಿ ಪ್ರಕೃತಿಯಲ್ಲಿ ಅರಳಲು ಪ್ರಾರಂಭಿಸುತ್ತವೆ. ಒಂದು ರೀತಿಯಲ್ಲಿ ಇವು ಸೃಷ್ಠಿಸುವ ಸೊಬಗು ಎಂತಹವರನ್ನು ಬೆರಗುಗೊಳಿಸದೇ ಇರಲಾರವು.

ಸಾಮಾನ್ಯವಾಗಿ ಮುತ್ತುಗದ ಮರ ಹೆಚ್ಚು ಪರಿಚಿತ. ಆದರೆ ಅದರ ಹೂ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಡುಮೇಡುಗಳಲ್ಲಿ ಸಾಮಾನ್ಯವಾಗಿ ಹುಲುಸಾಗಿ ಬೆಳೆಯುವ ಈ ಮರಗಳು ನಿಸರ್ಗ ತೊಟ್ಟ ಕೇಸರಿ ರುಮಾಲಿನಂತೆ ಹೂಗಳನ್ನು ಚಾಚಿ ಹಬ್ಬಿಸುತ್ತವೆ. ನೈಸರ್ಗಿಕವಾಗಿ ಎಲ್ಲೆಂದರಲ್ಲಿ ಬೆಳೆಯಬಹುದಾದ ಈ ಮರಗಳು ಕುರುಚಲು ಪ್ರದೇಶವನ್ನೂ ಸಹ ವಿಶಿಷ್ಟವಾಗಿ ಶೃಂಗಾರಗೊಳಿಸುತ್ತವೆ.


ಮುತ್ತುಗದ ಈ ಕಾಡಿನ ಹೂ
, ಬೆಂಕಿಯ ಕೆನ್ನಾಲಿಗೆ ಚಾಚಿದಂತೆ ಕಂಗೊಳಿಸಿದ ಕಾರಣವೇನೋ ʼಪ್ಲೇಮ್ ಆಫ್ ದಿ ಫಾರೆಸ್ಟ್ʼ ಎನಿಸಿಕೊಂಡಿರಬಹುದು. ಇದರ ವೈಜ್ಞಾನಿಕ ಹೆಸರು ಬ್ಯುಟಿಯಾ ಮೊನೊಸ್ಪರ್ಮಾ (Butea monosperma). ಫ್ಯಾಬೇಸಿ ಕುಟುಂಬದ ಈ ಸುಂದರ ಹೂವಿನ ಮುತ್ತುಗದ ಮೂಲ ದಕ್ಷಿಣ ಏಷ್ಯಾದ ಉಷ್ಣ, ಸಮಶಿತೋಷ್ಣ ವಲಯ ಪ್ರದೇಶ. ಹಾಗೂ ಏಷ್ಯಾದ ಇತರ ಕೆಲ ಭಾಗಗಳಲ್ಲಿ ಇದು ಹೆಚ್ಚು ಕಂಡುಬರುವAತಹದ್ದು. ಇದರ ವ್ಯಾಪ್ತಿಯನ್ನು ಗುರುತಿಸುವುದಾದರೆ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್, ಥೈಲ್ಯಾಂಡ್, ಕಾಂಬೋಡಿಯಾ, ಮಲೇಷಿಯಾ ಮುಂತಾದೆಡೆ ಪಸರಿಸಿದೆ. ಪಾಲಾಶ(ಸಂಸ್ಕೃತದಲ್ಲಿ), ಧಕ್ ಮರ, ಮುತ್ತಲ ಮರ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಇದನ್ನು ತೆಲುಗಿನಲ್ಲಿ ಮೋದುಗವೆಂದು, ತಮಿಳಿನಲ್ಲಿ ಕತ್ತುಮುರುಗವೆಂತಲೂ ಕರೆಯಲಾಗುತ್ತದೆ.

ಈ ಮಧ್ಯಮ ಗಾತ್ರದ ಮರ ನಮ್ಮ ಕಾಡಿನ ಭಾಗಗಳಲ್ಲಿ ಸಾಮಾನ್ಯವಾಗಿದ್ದರೂ, ಇತೀಚಿಗೆ ಕಾಡು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಎಲ್ಲೆಂದರಲ್ಲಿ ಉದ್ಯಾನ, ರಸ್ತೆ ಬದಿ, ದೇವಸ್ಥಾನ, ಶಾಲೆ ಕಾಲೇಜು ಮೈದಾನಗಳಲ್ಲಿ ಈ ಮರಗಳನ್ನು ಬೆಳೆಸುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಹೊಲಗಳ ಬದುಗುಂಟ, ಕೆರೆ ಕಟ್ಟೆ ಹತ್ತಿರ, ಈ ಮರ 10 ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು. ಇದರ ತ್ರಿದಳಗಳ ಬಟ್ಟಲಾಕಾರದ ಸ್ವಲ್ಪ ದೊಡ್ಡ ಎಲೆಗಳು ಮರದಲ್ಲಿ ತುಂಬಿಕೊAಡಿರುತ್ತವೆ. ಜನವರಿ ತಿಂಗಳ ಹೊತ್ತಿಗೆ ಹೂ ಅರಳಲು ಪ್ರಾರಂಭಿಸುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಎಲೆ ಉದುರಿಸಿ ಕಿತ್ತಳೆ ಕೆಂಪು ಬಣ್ಣದ 10 ರಿಂದ 12 ಸೆಂ ಮೀ ಉದ್ದದ ಹೂಗಳು ಗುಚ್ಛವಾಗಿ ರಾರಾಜಿಸುತ್ತವೆ. ಹೂಗಳು ಕೆಂಪುಕಿತ್ತಳೆ ಅಲ್ಲದೇ ಬಿಳಿ ಹಾಗೂ ಹಳದಿ ಹೂ ಬಿಡುವ ಮರಗಳೂ ಇವೆ. ಆದರೆ ಅವು ತುಂಬಾ ಅಪರೂಪ. ಎಪ್ರೀಲ್ ಜೂನ್‌ವರೆಗೆ ಕಾಯಿಗಳು ಹಣ್ಣಾಗಿ ಬಿರಿಯುತ್ತವೆ. ಬೀಜದಲ್ಲಿನ ಎಣ್ಣೆಯ ಅಂಶವು ಉಪಯುಕ್ತ ತೈಲವಸ್ತುವಾಗಿ ವಾಣಿಜ್ಯಕ ಮಹತ್ವ ಹೊಂದಿದೆ.

ಧಾರ್ಮಿಕವಾಗಿ ಮನ್ನಣೆ ಪಡೆದ ಈ ಮರದ ಭಾಗಗಳು ಪಾರಂಪರಿಕವಾಗಿ ಬಳಕೆಯಾಗುತ್ತಿವೆ. ಎಲೆಗಳು ಹೋಮ ಹವನದಲ್ಲಿ, ಪೂಜೆ ಆರಾಧನೆಯಲ್ಲಿ, ಬಹುಕಾಲ ನಮ್ಮಲ್ಲಿ ಬೆರೆತಿರುವುದು ಗೊತ್ತಿರುವ ಸಂಗತಿ. ಶಿವರಾತ್ರಿ ಶಿವನ ಆರಾಧಕರಿಗೆ ಈ ಹೂಗಳು ಬೇಕೆ ಬೇಕು. ಅವುಗಳಿಂದಲೇ ಅಂದಿನ ಶಿವನ ಅಲಂಕಾರ. ಈ ಮರದ ಪೌರಾಣಿಕ ಮಹತ್ವದ ಕಾರಣದಿಂದಲೇನೋ ಇದಕ್ಕೆ ಬ್ರಹ್ಮವೃಕ್ಷ, ದೇವಮರ ಎಂದೂ ಹೆಸರಿದೆ. ಸುಗ್ಗಿಕಾಲಕ್ಕೆ ಸಜ್ಜಾಗಿ ನಿಲ್ಲುವ ಈ ಹೂಗಳು ದವಸ ಧಾನ್ಯಗಳ ರಾಶಿ ಪೂಜೆಗೆ ಈ ಹೂ ಶ್ರೇಷ್ಠ ಎಂಬ ಭಾವನೆ ನಮ್ಮ ಹಳ್ಳಿ ಜನರಲ್ಲಿ ಮನೆ ಮಾಡಿದೆ. ಅದರೊಟ್ಟಿಗೆ ಹೂ ಬಿಡುವಿಕೆ ಆಧರಿಸಿ ಮುಂದಿನ ಮಳೆ ಬೆಳೆ ನಿರ್ಧರಿಸುವ ಪರಿಪಾಠವೂ ಚಾಲ್ತಿಯಲ್ಲಿದೆ.

ಬಾಳೆ ಎಲೆಯಂತೆ ಊಟದ ಎಲೆಗಳಾಗಿ ನಮ್ಮ ಹಿರಿಯರು ಬಹು ಹಿಂದಿನಿಂದ ಮುತ್ತುಗದ ಎಲೆಗಳನ್ನು ಬಳಸುತ್ತಾ ಬಂದಿರುವುದನ್ನು ನಾವು ನಿನ್ನೆ ಮೊನ್ನೆವರೆಗೂ ಕಂಡಿದ್ದೇವೆ. ಅಗಲ ಎಲೆಗಳನ್ನು ಒಂದೊಂದಾಗಿ ಜೋಡಿಸಿ ಸಣ್ಣ ಸಣ್ಣ ಕಡ್ಡಿಗಳಿಂದ ಚುಚ್ಚಿ ಹೆಣೆದು ಮಾಡುವ ಪತ್ರೋಳಿಗಳು ಪರಿಸರಸ್ನೇಹಿ ಹಾಗೂ ಆರೋಗ್ಯಕರ ಊಟವನ್ನು ಆಸ್ವಾದಿಸುವಂತೆ ಮಾಡುತ್ತಿದ್ದುದು ಸುಳ್ಳಲ್ಲ. ಬದಲಾದ ಜೀವನ ಶೈಲಿ ಹಾಗೂ ನಮ್ಮ ಈ ಅವಸರದ ಬದುಕು ಎಲ್ಲವನ್ನು ಮರೆಸಿದೆ. ಆದರೂ ಅಲ್ಲಲ್ಲಿ ದೇವಸ್ಥಾನ, ಕೆಲ ಹೊಟೇಲ್‌ಗಳಲ್ಲಿ ಪ್ರಸಾದ ಹಾಗೂ ತಿಂಡಿಗಾಗಿ ಈಗಲೂ ಇವುಗಳ ಚಿಕ್ಕ ಚಿಕ್ಕ ಎಲೆ, ತಟ್ಟೆಗಳನ್ನು ಬಳಕೆ ಮಾಡುತ್ತಿರುವುದು ಕಂಡು ಬರುತ್ತದೆ.

ಹೂ, ತೊಗಟೆ, ಅಂಟು, ಬೀಜಗಳೆಲ್ಲವೂ ಒಂದೊಂದು ಮಹತ್ವ ಹೊಂದಿದ್ದು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲ್ಪಡುತ್ತವೆ. ಮುತ್ತುಗದ ಹೂಗಳನ್ನು ಒಣಗಿಸಿ ಪುಡಿ ಮಾಡಿ ಚರ್ಮದ ಆರೋಗ್ಯಕ್ಕೆ ಹಾಗೂ ರಕ್ಷಣೆಗೆ ಶಿಫಾರಸ್ಸು ಮಾಡಲಾಗುತ್ತದೆ. ಬೀಜಗಳಿಂದ ತಯಾರಿಸಲಾದ ಔಷಧಿಯಿಂದ ಹೊಟ್ಟೆಯಲ್ಲಿನ ಜಂತುಹುಳುಗಳನ್ನು ನಾಶ ಮಾಡಬಹುದು. ದೇಹದ ಗಾಯಕ್ಕೆ ಈ ಮರದ ಯಾವುದೇ ಭಾಗಗಳನ್ನು ಕುಟ್ಟಿ ಅರಿದು ಲೇಪನ ಮಾಡುವುದರಿಂದ ಗುಣಪಡಿಸಬಹುದು. ವಾತ ಪಿತ್ತ, ಕಫ, ತ್ರಿವಿಧ ಕಾಯಿಲೆಗಳನ್ನು ಸಹ ಮುತ್ತುಗದ ಮರದ ಸಹಾಯದಿಂದ ಗುಣಪಡಿಸಲು ಸಾಧ್ಯ ಎಂದು ಆಯುರ್ವೇದ ಹೇಳಿದೆ.

ಮಲೆನಾಡು ಭಾಗದ ಸೌಂದರ್ಯವನ್ನು ಹೆಚ್ಚಿಸಿದ್ದ ಈ ಮುತ್ತುಗದ ಮರ ಹೂ ಈಗ ಬಯಲು ಸೀಮೆಗೂ ವ್ಯಾಪಿಸಿದ ಪರಿ ನೋಡಿದರೆ ಆಶ್ಚರ್ಯವೆನಿಸುತ್ತದೆ. ಕರ್ನಾಟಕದ ಬೀದರ್ ಕಲಬುರ್ಗಿಯಿಂದ ಹಿಡಿದು ಎಲ್ಲೆಂದರಲ್ಲಿ ನಿಸರ್ಗವನ್ನು ಅಂದಗೊಳಿಸಿದೆ. ಬದಲಾದ ಸನ್ನಿವೇಶದಲ್ಲಿ ಜನರ ಆಸಕ್ತಿ ಅಭಿರುಚಿಗಳು ಕೂಡ ಸಸ್ಯಪಾಲನೆ, ಹಸಿರು ಅಲಂಕಾರದತ್ತ ವಾಲಿದ ಪ್ರಯುಕ್ತ ಈ ಹೂ ವಿಜೃಂಭಿಸುತ್ತಿದೆ. ಪ್ರಕೃತಿ ಇದರಿಂದಾಗಿ ಅಂದವಾಗಿ ಸಿಂಗಾರಗೊಂಡಿದೆ.











2 comments: