ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, May 4, 2023

ಪ್ರಯೋಗಕ್ಕೆ ತಾನೇ ಮಿಕವಾಗಿ ಗೆದ್ದ ವೈದ್ಯ-ರಿಪ್ಲಿ ಬಲ್ಲೊ !!

ಪ್ರಯೋಗಕ್ಕೆ ತಾನೇ ಮಿಕವಾಗಿ ಗೆದ್ದ ವೈದ್ಯ-ರಿಪ್ಲಿ ಬಲ್ಲೊ !!

ಲೇಖಕರು : ರಾಮಚಂದ್ರಭಟ್‌ ಬಿ.ಜಿ.

    ಇಡೀ ವಿಶ್ವವನ್ನು ನಡುಗಿಸಿದ್ದ ಮಲೇರಿಯಾ ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದಿದ್ದೇ ಅಲ್ಲದೆ, ಅದರ ಪರಿಣಾಮವನ್ನು ಕಂಡು ಹಿಡಿಯಲು ತನ್ನನ್ನೇ ಲಸಿಕೆಯ ಪ್ರಯೋಗಕ್ಕೆ ಒಡ್ಡಿಕೊಂಡು, ಕೊನೆಗೂ ಯಶಸ್ವಿಯಾದ  ವೈದ್ಯ ರಿಪ್ಲಿಯ ರೋಚಕ ಕಥೆಯನ್ನು ನಿಮಗಾಗಿ ತಂದಿದ್ದಾರೆ, ಶಿಕ್ಷಕ ಶ್ರೀ ರಾಮಚಂದ್ರ ಭಟ್‌ ಅವರು


“The scientist only imposes two things, namely truth and sincerity, imposes them upon himself and upon other scientists.”                        Erwin Schrödinger

ಹಿಂದಿನ ತಿಂಗಳ ಲೇಖನದಲ್ಲಿ ನೊಬಲ್‌ಪ್ರಶಸ್ತಿ ವಿಜೇತ ರೊನಾಲ್ಡ್‌ ರಾಸ್‌ಅವರ ಬದುಕು, ಸಾಧನೆಗಳನ್ನುಓದಿದ್ದೀರಿ. ಸ್ಕ್ರೋಡಿಂಜರ್‌ ಹೇಳಿರುವ ಮೇಲಿನ ಮಾತು ಸಾಧಕನ ಬದುಕನ್ನು ಪ್ರತಿಫಲಿಸುತ್ತದೆ. ಮಲೇರಿಯ ರೋಗದ ಹಿಂದೆ ಬಿದ್ದು ಈ ರೋಗಕ್ಕೆ ಲಸಿಕೆ ಕಂಡುಹಿಡಿಯಲು ಹೊರಟು ತನ್ನ ಜೀವವನ್ನು ಪಣಕ್ಕಿಟ್ಟ ಮತ್ತೊಬ್ಬ ಸೇನಾ ವೈದ್ಯ ರಿಪ್ಲಿ ಬಲ್ಲೋ(Ripley Ballou)  ಅವರ ಸಂಶೋಧನೆಯ  ರೋಚಕ ಕಥನವನ್ನು ಈಗ ಓದಲಿದ್ದೀರಿ.

ಮಲೇರಿಯ ಅತಿ ಭಯಾನಕ ರೋಗ. ಅಂಕಿ ಅಂಶಗಳ ಪ್ರಕಾರ ಪ್ರಪಂಚದಲ್ಲಿ ಇತರ ರೋಗಗಳು, ಕ್ಷಾಮ-ಡಾಮರಗಳು, ಭೀಕರ ಮಹಾಯುದ್ಧಗಳು ಇವೆಲ್ಲವುಗಳಿಂದ ಸತ್ತಿರಬಹುದಾದ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು  ಮಲೇರಿಯಾ ರೋಗವೊಂದೇ   ಆಹುತಿ ತೆಗೆದುಕೊಂಡಿದೆ. ವಿಶ್ವದಾದ್ಯಂತ ಪ್ರತಿವರ್ಷ ಸುಮಾರು ೬,೦೦,000 ಜನ, ಮಲೇರಿಯಾಕ್ಕೆ ಬಲಿಯಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಂಕಿಅಂಶಗಳ ಪ್ರಕಾರ, 2021ರಲ್ಲಿ 6,19,000 ಜನ ಮಲೇರಿಯಾಗೆ ಬಲಿಯಾಗಿದ್ದಾರೆ. ಇದು ಮಲೇರಿಯ ರೋಗದ ಭೀಕರತೆಯನ್ನು ತೋರಿಸುತ್ತದೆ. ಶೇಕಡಾ ೮೦ ಕ್ಕೂ ಹೆಚ್ಚಿನ ಪ್ರಮಾಣದ ಸಾವು ಆಫ್ರಿಕಾ ಖಂಡದ ದೇಶಗಳಲ್ಲೇ ಉಂಟಾಗುತ್ತಿದೆ. . ಇಂತಹ ಭೀಕರ ರೋಗ ನಿಯಂತ್ರಣಕ್ಕೆ ಹಲವಾರು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಲಸಿಕೆಯೂ ಅವುಗಳಲ್ಲೊಂದು. ಮಲೇರಿಯವನ್ನು ನಿಯಂತ್ರಿಸಲು ಶ್ರಮವಹಿಸಿದ ವಿಜ್ಞಾನಿಗಳಲ್ಲಿ ಅಮೆರಿಕ ಸೈನ್ಯಾಧಿಕಾರಿ ವೈದ್ಯ ರಿಪ್ಲೇ ಬಲ್ಲೊ ಅವರೂ ಕೂಡಾ ಒಬ್ಬರು.

ಒಮ್ಮೆರಿಪ್‌ಲೇ ಆಫ್ರಿಕಾ ದೇಶಗಳಲ್ಲಿ ರೋಗದ ಬಗ್ಗೆ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ತಾಯಿಯೊಬ್ಬಳು ತನ್ನ ಎಳೆಯ ಕಂದನನ್ನು ಮಲೇರಿಯದಿಂದ ಕಳೆದುಕೊಂಡು, ತೀವ್ರ ದುಃಖದಿಂದ ಗೋಳಾಡುತ್ತಿದ್ದ ಘಟನೆಯೊಂದು ಅವರ ಮನ ಕಲಕಿತ್ತು. ಇದು ಅಲ್ಲಿನ ದೈನಂದಿನ ಗೋಳಾಟವಾಗಿತ್ತು. ಪ್ರತಿದಿನದ ಈ ಭೀಕರ ಗೋಳಾಟ ಎಂತಹವರ ಮನಸ್ಸನ್ನೂ ಕಲಕದೆಇರದು. ಅಂದೇ ಮನಸ್ಸಿನಲ್ಲಿ ಈ ಮಲೇರಿಯ ರೋಗಕ್ಕೆ ಲಸಿಕೆ ಕಂಡು ಹಿಡಿದೇ ಹಿಡಿಯುವೆ ಎಂಬ ಪ್ರತಿಜ್ಞೆ ಮಾಡಿದ ರಿಪ್ಲೇ ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದರು.

ಹೆಣ್ಣು ಅನಾಫಿಲೀಸ್‌ ಸೊಳ್ಳೆ, ಮೊಟ್ಟೆ ಇಡುವ ಸಂದರ್ಭದಲ್ಲಿ ಪೋಷಕಾಂಶಗಳಿಗಾಗಿ ಮಾನವರಕ್ತವನ್ನು ಹೀರುತ್ತದೆ. ಮಲೇರಿಯ ರೋಗಿಯ ರಕ್ತವನ್ನು ಹೀರಿದಾಗ ಅನೇಕ ಪ್ಲಾಸ್ಮೋಡಿಯಂ (Plasmodium) ರೋಗಾಣುಗಳೂ ರಕ್ತದೊಡನೆ ಸೊಳ್ಳೆಯ ಜಠರವನ್ನು ಸೇರುತ್ತವೆ. ಸೊಳ್ಳೆಯ ಕರುಳಿನಲ್ಲಿ ಕೆಲವು ಬದಲಾವಣೆಗಳಿಗೆ ಒಳಗಾಗಿ ಅಲ್ಲಿಂದ ಸೊಳ್ಳೆಯ ಜೊಲ್ಲು ಗ್ರಂಥಿಗಳಲ್ಲಿ ಬಂದು ನೆಲೆಸುತ್ತವೆ.ಮಲೇರಿಯ ಪರೋಪಜೀವಿಗಳ ಜೀವನ ಚಕ್ರದಲ್ಲಿ ಗ್ಯಾಮಿಟೋಸೈಟ್‌ಗಳು, ಸ್ಪೋರೋಜೋಯಿಟ್‌ಗಳು, ಮೀರೋಜೋಯಿಟ್‌ಗಳು, ಮೊದಲಾದ ಹಲವು ಹಂತಗಳಿವೆ.  ಇದೇ ಲಸಿಕೆ ತಯಾರಿಕೆಗೆ ತಲೆನೋವಾಗುವ ಸಂಗತಿ. ಈ ಹಂತದಲ್ಲಿ ಅವು ಮನುಷ್ಯರಲ್ಲಿ ಮಲೇರಿಯವನ್ನು ಉಂಟುಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಮಲೇರಿಯ ಪೀಡಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಆರೋಗ್ಯವಂತ ಒಬ್ಬನನ್ನು ಕಚ್ಚಿದಾಗ, ಸ್ಪೋರೋಜೋಯಿಟ್‌ಗಳು ಆತನ ರಕ್ತವನ್ನು ಸೇರುತ್ತವೆ. ಸೊಳ್ಳೆಯ ಲಾಲಾರಸದಲ್ಲಿ ಹೆಪ್ಪುನಿರೋಧಕ(anticoagulant) ಅಂಶವಿದ್ದು,ಅದು ರಕ್ತ ಹೆಪ್ಪುಗಟ್ಟಲು ಬಿಡುವುದಿಲ್ಲ. ಆ ಜೊಲ್ಲಿನೊಡನೆ ಸಾವಿರಾರು ಪ್ಲಾಸ್ಮೋಡಿಯಂ ಸ್ಪೋರೋಜೋಯಿಟ್‌ಗಳು ಆರೋಗ್ಯವಂತನ ದೇಹವನ್ನು ಹೊಕ್ಕು,ನಡುಕ-ಚಳಿಜ್ವರ ರೋಗವನ್ನು ಉಂಟುಮಾಡುತ್ತವೆ.

This Photo by Unknown Author is licensed under CC BY-NC-ND

ರಿಪ್ಲಿ ತಮ್ಮ ಸಂಶೋಧನೆಗಳ ಮೂಲಕ ಮಲೇರಿಯ ರೋಗಕಾರಕ ಪ್ಲಾಸ್ಮೋಡಿಯಂನ ವಿರುದ್ಧ ಲಸಿಕೆ ತಯಾರಿಸುವುದರಲ್ಲಿ ಯಶಸ್ಸನ್ನೇನೋ ಕಂಡರು. ಆದರೆ, ಈ ಲಸಿಕೆ ಪರಿಣಾಮಕಾರಿಯೇ? ಎಂದು ತಿಳಿಯುವುದು ಹೇಗೆ?

ಲಸಿಕೆ ತಯಾರಿಕೆಯ ಪ್ರಯೋಗದಲ್ಲಿ ಹಲವಾರು ಹಂತಗಳಿವೆ. ಅವೆಲ್ಲವನ್ನು ದಾಟಿ ಮಾನವ ಬಳಕೆಗೆ ತಲುಪುವ ವೇಳೆ ಅದೆಷ್ಟೋ ಲೀಟರ್‌ಗಳಷ್ಟು ಬೆವರು ಬಸಿದು ಹೋಗಿರುತ್ತದೆ. ಈ ಹಂತಗಳನ್ನು ಹೀಗೆ ಕ್ರೋಢೀಕರಿಸಬಹುದು.

ಹಾಗಾಗಿ, ತಾವು ತಯಾರಿಸಿದ ಲಸಿಕೆಯನ್ನುಇತರರ ಮೇಲೆ ಪ್ರಯೋಗಿಸುವ ಬದಲು ಅದನ್ನು ಮೊದಲು ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳಲು ನಿರ್ಧರಿಸಿದರು. ಹಾಗಾಗಿ, ರಿಪ್ಲೀ ತಮ್ಮನ್ನೂ ಸೇರಿ ನಾಲ್ಕು ಸ್ನೇಹಿತರ ತಂಡವನ್ನು ರಚಿಸಿ, ಲಸಿಕೆಯನ್ನು ತಮ್ಮ ತಂಡದ ಸದಸ್ಯರ ಮೇಲೆ ಪ್ರಯೋಗಿಸಿಕೊಂಡರು. ಕೆಲವು ದಿನಗಳು ಕಳೆದವು. ಈ ಲಸಿಕೆ, ರಕ್ತದಲ್ಲಿ ಪ್ರತಿಕಾಯಗಳನ್ನು(antibodies) ಉತ್ಪತ್ತಿಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ, ಈ  ನಿರೀಕ್ಷೆಯನ್ನು ಸಾಧಿಸಿ ತೋರಿಸುವುದು ಹೇಗೆ? ಪ್ರತಿಫಲ ಸಿಗದೆ ಲಸಿಕೆ ಯಶಸ್ವಿಯಾಗುವುದು ಹೇಗೆ? ಆಗ, ಈಗಿನಂತೆ ಅತ್ಯಾಧುನಿಕ ತಂತ್ರಜ್ಞಾನವಿರಲಿಲ್ಲ. ಈ ಸಂದರ್ಭದಲ್ಲಿ ಅನಾಹುತಕಾರಿ ಆಲೋಚನೆಯೊಂದು ಅವರಿಗೆ ಹೊಳೆಯಿತು!!. ಅದನ್ನು ಜಾರಿಗೆ ತರದೆ ಯಶಸ್ಸು ಕನ್ನಡಿಯ ಗಂಟಷ್ಟೇ. ರಿಪ್ಲೀ ಕೆಲವು ದಿನಗಳ ನಂತರ , ಮಲೇರಿಯ ರೋಗಿಯನ್ನು ಕಚ್ಚಿದ, ಅಂದರೆ ಪ್ಲಾಸ್ಮೋಡಿಯಂ ರೋಗಕಾರಕಗಳನ್ನು ಹೊಂದಿದ ಸೊಳ್ಳೆಗಳನ್ನು ಪ್ರಯೋಗಾಲಯಕ್ಕೆ ತಂದರು. ಆ ಹಸಿದ ಸೊಳ್ಳೆಗಳಿಗೆ ತಮ್ಮ ರಕ್ತವನ್ನೇ ನೈವೇದ್ಯವಾಗಿ ಉಣಿಸಿದರು.ಸೊಳ್ಳೆಗಳು ಅವರಚರ್ಮವನ್ನು ಕೊರೆದು, ರಕ್ತವನ್ನು ಹೀರಿ ಪ್ಲಾಸ್ಮೋಡಿಯಂ ಬೀಜಾಣುಗಳನ್ನು ಅವರ ರಕ್ತದಲ್ಲಿ ಬಿತ್ತಿದವು. ರಕ್ತದೊಡನೆ ರೋಗಕಾರಕ ಪ್ಲಾಸ್ಮೋಡಿಯಂಗಳು ಅವರ ದೇಹಗಳನ್ನು ಹೊಕ್ಕವು.

(Malaria hero Dr. Ripley Ballou was one of six WRAIR scientists that extended their arms to mosquitoes to test an early version of the vaccine candidate RTS,S. The vaccine prevented malaria for one, not Dr. Ballou. Photo: WRAIR.)

ಸೊಳ್ಳೆ ಕಚ್ಚಿದ ಕೆಲವು ದಿನಗಳಲ್ಲೇ ಒಬ್ಬರನ್ನು ಹೊರತುಪಡಿಸಿ,  ಉಳಿದವರಿಗೆ ಮಲೇರಿಯ ರೋಗದ ಚಿಹ್ನೆಗಳು ಕಂಡುಬಂದವು. ಉಸಿರಾಟ ಸಮಸ್ಯೆ,ತಲೆಸಿಡಿತ ಕೀಲುನೋವು, ಜ್ವರ ಮೊದಲಾದ ಲಕ್ಷಣಗಳು ಸೋಂಕಿತ ಎಲ್ಲರನ್ನೂ ನಿಶ್ಯಕ್ತರನ್ನಾಗಿಸಿದವು. ಚಳಿ ಜ್ವರದಿಂದ ದೇಹ ಗಡಗಡ ನಡುಗಲಾರಂಭಿಸಿತು. ಸತ್ತೇಹೋದೆವೋ ಎಂಬ ಭಾವನೆ ಬಂದು ಯಾಕಾಗಿ ಪ್ರಯೋಗಕ್ಕೆ ಒಡ್ಡಿಕೊಂಡೆವೋ ಎಂದು ಯೋಚಿಸುವಂತಾಯಿತು. ಬೆವರು ಕಿತ್ತುಬಂತು. ಬದುಕುಳಿಯುವುದೇ ಕಷ್ಟ ಎಂದೆನ್ನಿಸತೊಡಗಿತು. ಇನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬಂತೆ ಅನಿಸುತ್ತಿದ್ದಾಗ ನಿಧಾನಕ್ಕೆ ಜೀವ ಮರಳಿ ಬಂದಂತಾಯ್ತು. ಅದೃಷ್ಟವಶಾತ್‌ ಯಾರೂ ಅಸುನೀಗಲಿಲ್ಲ!!!. ಬದುಕಿದೆಯಾ, ಬಡಜೀವ ಎಂದಂತಾಯ್ತು. ಚೇತರಿಸಿಕೊಂಡು, ಎಲ್ಲರೂ ಜೀವಂತವಾಗಿ ಬದುಕಿ ಉಳಿದರು. ಅಂತೂ ದೇಹದಲ್ಲಿ ಸ್ವಲ್ಪಮಟ್ಟಿಗೆ ಪ್ರತಿರೋಧಕ ಶಕ್ತಿ ಬೆಳೆದಿರುವುದು ಇದರಿಂದ ಖಾತ್ರಿಯಾಯ್ತು. ಆದರೆ, ಯಮಯಾತನೆ ಮಾತ್ರ ಹಾಗೇ ಉಳಿದಿತ್ತು. ಆದ್ದರಿಂದ, ಈ ಲಸಿಕೆಯನ್ನು ಇನ್ನಷ್ಟು ಸುಧಾರಿಸಲೇಬೇಕೆಂಬ ಆಲೋಚನೆ ಉಳಿದಿತ್ತು. ಸಂಶೋಧನಾ ಕಾರ್ಯ ನಿರಂತರವಾಗಿ ಮುಂದುವರೆದು, ಕೊನೆಗೂ 1987ರಲ್ಲಿ ಧನಾತ್ಮಕ ಫಲಿತಾಂಶ ದೊರೆಯಿತು. ಈ  ಲಸಿಕೆಯನ್ನು ಕೆಲವು ಮಂದಿ ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದರು.ಹಿಂದಿನಂತೆ, ಎಲ್ಲರಿಗೂ ಸೊಳ್ಳೆ ಕಚ್ಚಿಸಿದರು. ಭಯ ಆತಂಕಗಳಿಂದ ಫಲಿತಾಂಶಕ್ಕೆ ಚಾತಕ ಪಕ್ಷಿಯಂತೆ ಕಾಯುತೊಡಗಿದರು. ಈ ಬಾರಿ ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಬೆಳೆದಿತ್ತು. ಅಂತೂ ಮಲೇರಿಯ ರೋಗಕ್ಕೆ ಅತ್ಯಂತ ಪರಿಣಾಮಕಾರಿ ಲಸಿಕೆಯ ಆವಿಷ್ಕಾರವಾಗಿತ್ತು!. ಲಸಿಕೆ ಕಂಡುಹಿಡಿಯುವ ಸಂಶೋಧನೆಗೆ ತಮ್ಮನ್ನೇ ಸಮಿತ್ತಾಗಿಸಿ, ಬಲಿಪಶುವಾಗಿ ಕೊನೆಗೂ ತಮ್ಮ ಜೀವವನ್ನೂ ಉಳಿಸಿಕೊಳ್ಳುವುದರ ಜೊತೆಗೆ, ಲಕ್ಷಾಂತರ ಮಲೇರಿಯ ರೋಗಿಗಳ ಜೀವ ಉಳಿಸುವಲ್ಲಿ ರಿಪ್ಲಿ ಯಶಸ್ವಿಯಾದರು.

ಮುಂದೆ, ರಿಪ್ಲೆ ಬಲ್ಲೋ("ರಿಪ್") ಅವರು ಆಂತರಿಕ ಔಷಧ ಮತ್ತು ಸಾಂಕ್ರಾಮಿಕ ರೋಗಗಳಲ್ಲಿ ತರಬೇತಿ ಪಡೆದರು. ವಾಲ್ಟರ್ರೀಡ್ ಆರ್ಮಿ ಇನ್‌ಸ್ಟಿಟ್ಯೂಟ್ಆಫ್‌ ರೀಸರ್ಚ್‌ನಲ್ಲಿ ಲಸಿಕೆಗಳ ಕುರಿತು ತಮ್ಮ ಸಂಶೋಧನಾ ಯಾನವನ್ನುಮುಂದುವರೆಸಿದರು. ಅವರು GSKಯೊಂದಿಗೆ ವಿಶ್ವದ ಅತ್ಯಾಧುನಿಕ ಮಲೇರಿಯಾ ಲಸಿಕೆಯಾದ RTS,S ಅನ್ನು ಅಭಿವೃದ್ಧಿ ಪಡಿಸಿದ ತಂಡವನ್ನು ಈಗ ಮುನ್ನಡೆಸುತ್ತಿದ್ದಾರೆ. ಅಮೇರಿಕದ ಉನ್ನತ ಔಷಧೀಯ ಸಂಶೋಧನಾ ಸಂಸ್ಥೆಯ ADVANCE  ಉಪಕ್ರಮದ ಹಿರಿಯ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ.  ಜೊತೆಗೆ,  HIV ತಡೆಗಟ್ಟುವಿಕೆಗಾಗಿ ವ್ಯಾಪಕವಾಗಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವ IAVI ಯ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ರಿಪ್ಲೀ ಈ ಹಿಂದೆ ಮೇರಿಲ್ಯಾಂಡ್‌ನ ರಾಕ್‌ವಿಲ್ಲೆಯಲ್ಲಿರುವ GSK ಗ್ಲೋಬಲ್‌ ವ್ಯಾಕ್ಸಿನ್ಸ್ US R&D ಕೇಂದ್ರದ‌ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾಗಿದ್ದರು. ಅವರು ಬಿಲ್‌ ಗೇಟ್ಸ ಮತ್ತು ಮಿಲಿಂಡಾ ಗೇಟ್ಸ ಫೌಂಡೇಶನ್‌ನಲ್ಲಿ ಜಾಗತಿಕ ಆರೋಗ್ಯ ವಿಭಾಗದ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಇಂತಹ ಪ್ರಯತ್ನಗಳು ಕೋವಿಡ್‌ನಂತಹ ಭಯಾನಕ ಮಾರಕ ರೋಗಗಳ ವಿರುದ್ಧ ಲಸಿಕೆ ತಯಾರಿಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ.

ರಿಪ್ಲೀ, ಬಿಡುವಿಲ್ಲದ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡು ಮನುಕುಲದ ಕಲ್ಯಾಣಕ್ಕಾಗಿ ತಮ್ಮ ಕೊಡುಗೆಯನ್ನು ನೀಡುತ್ತಲೇ ಇದ್ದಾರೆ. ೧೯೭ಕ್ಕೂ ಹೆಚ್ಚಿನ ಸಂಶೋಧನಾ ಕೃತಿಗಳು, ೧೬,೧೨೯ರಷ್ಟು ಸಂಶೋಧನಾ ಸೈಟೇಷನ್‌ಗಳು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿವೆ.

 

2 comments:

  1. ಮಾಹಿತಿ ಬಹಳ ಆಸಕ್ತಿಯುತ ಮತ್ತು ಅನೂಹ್ಯ. ನಿಮ್ಮ ಬರಹವನ್ನು ಕುವೈತ್ ಕನ್ನಡ ಕೂಟದ "ಮರಳ ಮಲ್ಲಿಗೆ" ಸಂಚಿಕೆಯಲ್ಲಿ ಬಳಸಿಕೊಳ್ಳುತ್ತೇನೆ. ಲೇಖನ :ರಾಮಚಂದ್ರಭಟ್‌ ಬಿ.ಜಿ. ಎಂದು ನಮೂದಿಸಿ

    ReplyDelete
  2. ಸರ್‌, ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು. ಬಳಸಿಕೊಳ್ಳಿ ಸರ್‌ . ವಿಜ್ಞಾನಿಗಳಾದ ನಿಮ್ಮ ಅನುಭವಗಳೂ ನಮಗೆ ಸಿಗಲಿ.

    ReplyDelete