ಸಿಕಾಡ ಎಂಬ ವಿಶಿಷ್ಟ ಕೀಟ
ಶ್ರೀ ಕೃಷ್ಣಚೈತನ್ಯ
ಶಿಕ್ಷಕ ಹಾಗೂ ವನ್ಯಜೀವಿತಜ್ಞರು
ಜೀಜಿಂಬೆ ಅಥವಾ ಜಿರ್ಜಿಂಬೆ ಎಂಬಿತ್ಯಾದಿ ಹೆಸರುಗಳಿಂದ
ಕರೆಯಲಾಗುವ ಸಿಕಾಡ ಎಂಬ ವಿಶಿಷ್ಟ ಕೀಟವನ್ನು ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದ್ದಾರೆ, ಶಿಕ್ಷಕ ಹಾಗೂ ವನ್ಯಜೀವಿತಜ್ಞ ಶ್ರೀ ಕೃಷ್ಣಚೈತನ್ಯ
ಅವರು
ʼಮನಸೆಲ್ಲಾ ನೀನೆʼ ಎಂಬ ಸಿನೆಮಾದ ಜೀಜಿಂಬೆ ಜೀಜಿಂಬೆ, ಹಾಡೋಣ ಜೊತೆಗೆ, ಹಾಡು
ನನ್ನ ಹಾಗೆ…. ಎಂಬ ಪ್ರಸಿದ್ದ ಪ್ರಕೃತಿ ಹಾಡನ್ನು ತಾವೆಲ್ಲಾ
ಕೇಳಿದ್ದೀರಿ. ಇದರಲ್ಲಿ ಬರುವ ಜೀಜಿಂಬೆ ಅಥವಾ ಜಿರ್ ಜಿಂಬೆ ಎಂಬ ಕೀಟದ ಬಗ್ಗೆ ನಮಗೆಷ್ಟು ಗೊತ್ತು? ಆ ಕೀಟದ ಶಬ್ಧವನ್ನಾದರೂ ಕೇಳಿಯೇ ಇರುತ್ತೇವೆ. ಯಾರಾದರೂ
ಈ ಕೀಟವನ್ನು ಅರಸಿ ಹೋಗಿರುವ ಸಾದ್ಯತೆ ಉಂಟೆ? ಇಲ್ಲ.
ಅದೇನೊ ಕೂಗುತ್ತಿರುತ್ತೆ ಎಂದು ಅದರ ಗೊಡವೆಗೇ ಹೋಗಿರುವುದಿಲ್ಲ. ಬೇಸಿಗೆ ಬಂತೆಂದರೆ ಬಯಲು ಸೀಮೆಯಲ್ಲಿ ಮರಗಳೆಡೆಯಿಂದ
ಕಿರ್..ರ್... ಎನ್ನುವ ಶಬ್ದವನ್ನು ಎಲ್ಲರೂ
ಕೇಳಿರುತ್ತೇವೆ. ಕುತೂಹಲದಿಂದ ನಾವೇನಾದರು ಅದನ್ನು ಅರಸುತ್ತಾ ಹೋದರೆ, ನಮ್ಮ ಆಗಮನವನ್ನು ಗುರುತಿಸಿ
ನಿಶ್ಯಬ್ಧವಾಗಿಬಿಡುತ್ತದೆ. ಮುಂದುವರಿದು ನೀವು ಹೋದರೆ, ಒಂದು ದುಂಬಿ ಮರದಿಂದ ದೂರಕ್ಕೆ ಹಾರಿಹೋಗುವುದನ್ನು
ಕಾಣುತ್ತೇವೆ. ತಕ್ಷಣಕ್ಕೆ ಅದು ಕಾಣದಿದ್ದರೂ ಬಹು ಎಚ್ಚರಿಕೆಯಿಂದ ನಿಶ್ಯಬ್ಧವಾಗಿ ಹೆಜ್ಜೆ ಹಾಕುತ್ತಾ
ಹೋದರೆ ಮರದ ತೊಗಟೆಯ ಬಣ್ಣಕ್ಕೆ ಬೆರೆತು ಹೋಗುವ ಮೈಬಣ್ಣವನ್ನು ಹೊಂದಿರುವ ಸಣ್ಣ ದುಂಬಿಯೊAದು ಕಣ್ಣಿಗೆ
ಬೀಳುತ್ತದೆ. ಅದೇ ಸಿಕಾಡ. ಆರ್ಥಾತ್ ಜೀರುಂಡೆ!.
ಬಯಲು ಸೀಮೆಯಲ್ಲಿ ಕಂಡುಬರುವ ಸಿಕಾಡ ಮಲೆನಾಡಿನಲ್ಲೂ ಕಂಡುಬಂದರೂ ಅದರ ಜತೆಗೆ ವಿಶಿಷ್ಟವಾಗಿರುವ
ಹಲವು ಬಗೆ ಸಿಕಾಡಗಳು ಕಾಣಸಿಗುತ್ತವೆ. ಕರ್ಕ್, ಕರ್ಕ್ ಎಂದು ಮದ್ಯ ಮದ್ಯ ನಿಲ್ಲಿಸಿ ನಂತರ ಒಂದೇ
ಸಮನೆ ಬೀ..ಬೀ..ಬೀ..ಬೀ.. ಎಂದು ತಾರಕ ಸ್ಥಾಯಿಯಲ್ಲಿ ಕೂಗುತ್ತಾ, ಕ್ರಮೇಣ ಸ್ವರ ಅವರೋಹಣ ಕ್ರಮದಲ್ಲಿ
ಕಡಿಮೆಯಾಗುತ್ತಾ ಕೊನೆಗೆ ನಿಲ್ಲಿಸುತ್ತದೆ. ಚೀ ಚೀನ್ ಚೀ, ಚೀ ಚೀನ್ ಚೀ ಎಂದು ಕೂಗುವ, ಪತಂಗದಂತೆ
ಕಾಣುವ ಮತ್ತೊಂದು ಬಗೆಯ ಸಿಕಾಡವು ಇದೆ.
ಪೊರೆ ಕಳಚುವಾಗ, ಅವುಗಳ ಕಾಲುಗಳ ತುದಿಯಲ್ಲಿರುವ
ಕೊಕ್ಕೆಯಂಥ ರಚನೆಗಳಿಂದ ಎಲೆ ಅಥವಾ ಕಾಂಡದ ಒಂದು ಬದಿಗೆ ಚುಚ್ಚಿ ಹಿಡಿದುಕೊಳ್ಳುತ್ತದೆ. ಆ ಸ್ಥಿತಿಯಲ್ಲೇ
ಸ್ಥಿರವಾಗಿದ್ದು ಒಂದೆರಡು ದಿನಗಳಲ್ಲೆ ಪೊರೆ ಕಳಚುತ್ತವೆ. ಪೊರೆ ಕಳಚಿದಾಗ ದುಂಬಿಯು ಹೆಚ್ಚು ಪಾರದರ್ಶಕವಾದ
ರೆಕ್ಕೆಗಳನ್ನು ಹೊಂದಿದ್ದು, ದೇಹ ವರ್ಣರಹಿತವಾಗಿರುತ್ತದೆ. ಸ್ವಲ್ಪ ಸಮಯದಲ್ಲೆ ಸೂರ್ಯನ ಬೆಳಕು ಮತ್ತು
ವಾತಾವರಣದ ಅನಿಲಗಳ ಪ್ರಭಾವದಿಂದ ದುಂಬಿ ತನ್ನ ನಿಜವಾದ ಬಣ್ಣ ಹೊಂದುತ್ತದೆ. ಸಾಮಾನ್ಯವಾಗಿ ನಾನಾ ರೀತಿಯಲ್ಲಿ
ಕೂಗುವ ದುಂಬಿಗಳೆಲ್ಲವೂ ಗಂಡುಗಳಾಗಿರುತ್ತವೆ. ಈ ಕೂಗಿಗೆ ಪ್ರತಿಕ್ರಿಯಿಸುವ ಹೆಣ್ಣುಗಳು ತಮ್ಮ ದೇಹದ
ಹಿಂಭಾಗವನ್ನು ಮರದ ರೆಂಬೆ ಅಥವಾ ಕೊಂಬೆಗೆ ಟಪ್..ಟಪ್ ಎಂದು ಬಡಿದು ಶಬ್ಧ ಮಾಡುತ್ತದೆ. ಗಂಡು ಹೆಣ್ಣಿನ
ಮಿಲನದ ನಂತರ ಹೆಣ್ಣು ಮರದ ತೊಗಟೆ ಸಂದುಗಳಲ್ಲಿ ಮೊಟ್ಟೆ ಇಟ್ಟು ಮತ್ತೆ ಜೀವನ ಚಕ್ರ ಮುಂದುವರಿಸುತ್ತವೆ.
ಇವುಗಳಿಗೆ ಬಹುದೊಡ್ಡ ಶತ್ರಗಳೆಂದರೆ ಪಕ್ಷಿಗಳು. ಜೀವಜಾಲದಲ್ಲಿ ಆಹಾರಕ್ಕಾಗಿ ಒಂದನ್ನೊಂದು
ಅವಲಂಬಿಸಿರುವುದರಿಂದ ಪಕ್ಷಿಗಳಾದ ಮಿನಿವೆಟ್, ಮರಿಗಳ ಪೋಷಣೆಯ ಸಮಯದಲ್ಲಿ ಕುಟ್ರು ಪಕ್ಷಿ, ನೊಣಹಿಡುಕಗಳು,
ಬುಲ್-ಬುಲ್ಗಳು, ಕೆಲವೊಮ್ಮೆ ಬೆಳ್ಳಕ್ಕಿಗಳೂ ಸಹ ಬೇಟೆಯಾಡಿ
ತಿನ್ನುವುದುಂಟು. ಅವುಗಳ ಸಂತತಿಯನ್ನೂ ನಿಯಂತ್ರಿಸಬೇಕಲ್ಲವೆ?
No comments:
Post a Comment