ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, December 4, 2023

 ಔಷಧೀಯ ಸಸ್ಯಗಳನ್ನು ನಮ್ಮ ಹಾಸುಹೊಕ್ಕಾಗಿಸೋಣ 

                  ಲೇಖನ: ಸಿದ್ದಪ್ಪ ಟಿ ಕಾಟೀಹಳ್ಳಿ

 ವಸುಂಧರೆಯ ಮಡಿಲು ನಮ್ಮೆಲ್ಲರ ಬದುಕಿಗೂ ಆಸರೆ. ಹಸುರು ನಮ್ಮ ಉಸಿರು. ಇಂತಹ ಹಸುರ ಕಣಕಣದಲ್ಲೂ ಜೀವಿಗಾಸರೆಯ ಜೀವದ್ರವ್ಯ. ಈ ಔಷಧೀಯ ಸಸ್ಯಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ಷಣೆಯ ಜವಾಬ್ದಾರಿ ನಮ್ಮದಾಗಿದೆ.   ಶಾಲೆಯ ಪುಟ್ಟ ಪ್ರಾಂಗಣವೂ ಸಾಕು. ಹಲವು ಶಾಲೆಗಳಲ್ಲಿ ಈ ಬಗೆಯ ಸಸ್ಯ ಬೆಳೆಸಿ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕ ಬಂಧುಗಳು ಮಾಡಿರುವುದನ್ನು ಗಮನಿಸಿದ್ದೇವೆ.

ಹಲವು ಪ್ರಮುಖ ಔಷಧೀಯ ಸಸ್ಯಗಳ ಕೃಷಿ ವಿಧಾನ ಮತ್ತು ಮಾರುಕಟ್ಟೆ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ವಿಶ್ವ ಆರೋಗ್ಯ ಸಂಘಟನೆ  ದಾಖಲೆಗಳ ಆಧಾರದಲ್ಲಿ ಕೈಗೊಂಡ ಅಧ್ಯಯನದಲ್ಲಿ ಸುಮಾರು 21,000 ಔಷಧೀಯ ಸಸ್ಯಗಳನ್ನು ಗುರುತಿಸಿದ್ದು, ಇವುಗಳ ಪೈಕಿ 250 ಸಸ್ಯಗಳ ಬಳಕೆ ವಿಶ್ವದಾದ್ಯಂತ ಪಸರಿಸಿದೆ. ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ಹಲವು ರಾಷ್ಟ್ರಗಳು ಅಗಾಧ ಜ್ಞಾನವನ್ನು ಹೊಂದಿದ್ದು , ಇವುಗಳಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಮಾತ್ರ ಈ ಬಗ್ಗೆ ದಾಖಲೆಗಳನ್ನು ಹೊಂದಿವೆ. ಈ ದಾಖಲೆಗಳು ಕೆಲವೇ ಕೆಲವು ಸಸ್ಯಗಳ ಔಷಧೀಯ ಗುಣಗಳನ್ನು ಮಾತ್ರ ಹೆಸರಿಸುತ್ತಿವೆ. ನಮ್ಮ ದೇಶದ ಹಲವು ಸಸ್ಯಗಳ ಔಷಧೀಯ ಮಹತ್ವವನ್ನರಿತ ವಿದೇಶಿಯರು ಇಂದು ಅವುಗಳ ಮೇಲೆ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ದೇಶದ ಅಭಿವೃದ್ಧಿಗೆ ಅಗಾಧ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸಿಕೊಡಬಲ್ಲ ಔಷಧೀಯ ಸಸ್ಯಗಳ ಬಗ್ಗೆ ನಾವಿನ್ನಾದರೂ ಗಮನಹರಿಸಬೇಕು. ನಮ್ಮ ದೇಶದಲ್ಲಿ ಕೃಷಿ ಕ್ರಾಂತಿಯಾಗಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲ ಕ್ರಾಂತಿ, ಬಂಗಾರದ ಕ್ರಾಂತಿ ಇತ್ಯಾದಿಗಳು ಆಗಿವೆ ಮತ್ತು ಆಗುತ್ತಲಿವೆ. ಆದರೆ ಸ್ವಾಭಾವಿಕವಾಗಿ ಆರೋಗ್ಯ ಕ್ರಾಂತಿಯನ್ನು ಮಾಡುವ ಪ್ರಯತ್ನ ಹೆಚ್ಚಾಗಬೇಕಿದೆ. ಭಾರತ ಸರಕಾರದ ಆರೋಗ್ಯ ಮತ್ತು ಅರಣ್ಯ ಇಲಾಖೆಯ ಮಂತ್ರಾಲಯವು ಎಚ್ಚೆತ್ತುಗೊಂಡು, ಇದೀಗ ವಿನಾಶದಂಚಿಗೆ ತಲುಪಿರುವ 32 ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಒತ್ತು ಕೊಡಲಾರಂಭಿಸಿದೆ.

ಈ 32 ಗಿಡಮೂಲಿಕೆಗಳಲ್ಲಿ ಬಹುಪಾಲು ಸಸ್ಯಗಳು ನಮ್ಮ ಸುತ್ತಮುತ್ತ ನಮಗರಿವಿಲ್ಲದೆ ಬೆಳೆದು ನಿಂತಿವೆ. ನಾವಿನ್ನಾದರೂ ಇವುಗಳ ಕೃಷಿ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಔಷಧೀಯ ಸಸ್ಯಗಳಿಗಿರುವ ಮಹತ್ವ, ವಿವಿಧ ರೀತಿಯ ಸಸ್ಯಗಳ ಕೃಷಿ ಮತ್ತು ಮಾರುಕಟ್ಟೆ, ಉಪಯೋಗ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗಿದೆ. ಇದರೊಂದಿಗೆ ಇವುಗಳಿಗೆ ಇರುವ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಅಲ್ಲದೆ ಇಲ್ಲಿರುವ, ಬರಬಹುದಾದ ಸಮಸ್ಯೆಗಳು ಮತ್ತವುಗಳಿಗೆ ಆಗಬೇಕಾದ ಪರಿಹಾರಗಳ ಬಗ್ಗೆ ಸೂಕ್ಷ್ಮ ದೃಷ್ಟಿಹರಿಸಲಾಗಿದೆ. ಔಷಧೀಯ ಸಸ್ಯಗಳ ರಾಷ್ಟ್ರೀಯ ಗಿಡಮೂಲಿಕಾ ಸಸ್ಯಗಳ ನಿಗಮ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಪರಿಚಯವನ್ನು  ಕೃಷಿಕರಿಗೆ, ಸಂಶೋಧಕರಿಗೆ, ಸರಕಾರಿ ಸರಕಾರೇತರ ಸಂಘ ಸಂಸ್ಥೆಗಳಿಗೆ, ಆಡಳಿತಗಾರರಿಗೆ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದೆಂಬ ಅನಿಸಿಕೆ ನನ್ನದು.


ಔಷಧೀಯ ಸಸ್ಯಗಳಿಗಿರುವ ಮಹತ್ವ

ಆರೋಗ್ಯದ ಬಗ್ಗೆ ಕಾಳಜಿ ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದು ಸಸ್ಯಗಳನ್ನು ಬಳಸಿ ‘ಮಂತ್ರ’ ಮಾಡಿ ರೋಗಗಳನ್ನು ವಾಸಿಮಾಡುತ್ತಿರುವುದು ಗ್ರಾಮೀಣ ಜನತೆಗೆ ತಿಳಿದ ವಿಚಾರ. ಕ್ರಮೇಣ ಅನುಭವ ವೈದ್ಯ ಇಲ್ಲವೇ ಅಳಲೆಕಾಯಿ ವೈದ್ಯ ಪದ್ಧತಿಯ ಮೂಲಕ ರೋಗಗಳ ನಿವಾರಣೆಗೆ ಮಹತ್ವ ಬಂತು. ಈ ಪದ್ಧತಿಯಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳ ಬಳಕೆ ಆರಂಭಗೊಂಡಿತು.

ಔಷಧೀಯ ಸಸ್ಯಗಳ ಬಗ್ಗೆ ಪ್ರಾಚೀನ ಮತ್ತು ಆಧುನಿಕ ಜಗತ್ತಿನಲ್ಲಿ ಹಲವು ದಾಖಲೆಗಳಾಗಿದ್ದವು. ಈ ರೀತಿ ಭಾರತದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಕ್ರಿ.ಪೂ. 3500 ರಿಂದ 1500ರ ವರೆಗಿನ ಅವಧಿಯ ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ ವಿವರಿಸಲ್ಪಟ್ಟಿವೆ. ಪುರಾತನ ಗ್ರಂಥಗಳು, ಶುಶ್ರುತನ ಚರಕ ಸಂಹಿತ ಇತ್ಯಾದಿಗಳು ಆಯುರ್ವೇದ ಔಷಧಿ ತಯಾರಿಕಾ ಕ್ರಮದಿಂದ ಹಿಡಿದು ಶಸ್ತ್ರ ಚಿಕಿತ್ಸೆಯವರೆಗೆ ಉಲ್ಲೇಖಿಸಿವೆ. ವೇದ ಕಾಲಕ್ಕಿಂತಲೂ ಮೊದಲಿನ ಸಸ್ಯ ಮೂಲದ ಔಷಧಿಯ ಬಗ್ಗೆ ಯಾವುದೇ ಗ್ರಂಥಗಳಿಲ್ಲದಿದ್ದರೂ ಆ ಕಾಲದ ಶಾಸನಗಳಿಂದ ಇವುಗಳ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ. ಪ್ರೊ.ಪಿ.ವಿ. ಶರ್ಮಾರವರ “‘ಆಯುರ್ವೇದ ವೈಜ್ಞಾನಿಕ ಇತಿಹಾಸ’ದಲ್ಲಿ ಹೆಸರಿಸಿದ ಪ್ರಕಾರ ಋಗ್ವೇದದಲ್ಲಿ 67, ಯಜುವೇದದಲ್ಲಿ 82, ಅಥರ್ವವೇದದಲ್ಲಿ 289, ಬ್ರಾಹ್ಮಣಗಳಲ್ಲಿ 129, ಮತ್ತು ಉಪನಿಷದ್‌ನಲ್ಲಿ 31 ಔಷಧೀಯ ಸಸ್ಯಗಳ ಬಗ್ಗೆ ಉಲ್ಲೇಖವಿದೆ.

ಉತ್ತರ ವೇದಕಾಲದಲ್ಲಿ ಮತ್ತು ನಿಘಂಟುಗಳಿಂದಾಗಿ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಿತ್ತು. ಸಂಹಿತ ಅವಧಿಯಲ್ಲಿ ಚರಕ ಸಂಹಿತ, ಶುಶ್ರೂತ ಸಂಹಿತ, ಅಷ್ಟಾಂಗ ಸಂಹಿತ ಮತ್ತು ಅಷ್ಟಾಂಗ ಹೃದಯಂ ಆಯುರ್ವೇದದ ಬಗ್ಗೆ ಸಾಕಷ್ಟು ಮಾಹಿತಿಗಳೊದಗಿಸಿದವು. ಶುಶ್ರೂತ ಸಂಹಿತದಲ್ಲಿ ಸುಮಾರು 1270 ಗಿಡ ಮೂಲಿಕೆಗಳ ಬಗ್ಗೆ ಹೆಸರಿಸಲಾಗಿದೆ. ಅದೇ ರೀತಿ ಚರಕ ಸಂಹಿತದಲ್ಲಿ 1100 ಸಸ್ಯಗಳ ಬಗ್ಗೆ ಮಾಹಿತಿ ಕೊಡಲಾಗಿದೆ. 

ಎರಡನೇ ಮಹಾ ಯುದ್ಧದ ಬಳಿಕ ಆಧುನಿಕ ಔಷಧಗಳ ಪ್ರವೇಶವಾಯಿತು. ಇದೇ ಸಮಯದಲ್ಲಿ ನೋವು ನಿವಾರಕಗಳ ಪ್ರವೇಶಗಳೂ ಆಯಿತು. 1960 ರ ನಂತರ ವಿಶ್ವದಾದ್ಯಂತ ಆಧುನಿಕ ಔಷಧಗಳು ಸಂಯೋಗ ಮೂಲದಿಂದ ಬರಲಾರಂಭಿಸಿದವು. ಇದರಿಂದಾಗಿ ಔಷಧೀಯ ಸಸ್ಯಗಳ ಮಹತ್ವ ಕ್ಷೀಣಿಸಿತು. ಆದರೆ ಇದೇ ಸಮಯದಲ್ಲಿ ಹಲವು ರಾಷ್ಟ್ರಗಳು ಎಚ್ಚೆತ್ತು ಸಾಂಪ್ರದಾಯಿಕ ಪದ್ಧತಿಯತ್ತ ಒಲವನ್ನು  ತೋರಿದವು. ಈ ನಿಟ್ಟಿನಲ್ಲಿ USSR (ರಶ್ಯಾ) ಮೊದಲ ಹೆಜ್ಜೆಯಿಟ್ಟಿತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರವೇಶ

1977ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಾ ಸಂಘಟನೆಯ 30ನೇ ಸಮ್ಮೇಳನದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳೊಳಗೆ ಒಂದು ಒಪ್ಪಂದವಾಯಿತು. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಔಷಧೀಯ ಸಸ್ಯಗಳು ಮತ್ತು ಮೂಲಿಕೆಗಳ ಔಷಧಿ ಪದ್ಧತಿಗೆ ಒಲವು ಬರಲು ಕೆಲವು ಕಾರಣಗಳಿದ್ದು ಅವುಗಳೆಂದರೆ:

1) ಆಧುನಿಕ ಚಿಕಿತ್ಸೆ, ಚಿಕಿತ್ಸಾ ವಿಧಾನ, ಔಷಧಿಗಳಿಗೆ ಮತ್ತು ಚಿಕಿತ್ಸಾ ಕೇಂದ್ರಗಳಿಗೆ ವಿನಿಯೋಗಿಸಬೇಕಾದ ವೆಚ್ಚ ಅಧಿಕವಾಗುತ್ತಿರುವುದು.

2) ಸರಕಾರ, ಸಮೂಹ, ಸಂಘಟನೆ ಮತ್ತು ವೈಯಕ್ತಿಕ ನೆಲೆಯಲ್ಲಿ ಆರೋಗ್ಯದಲ್ಲಿ ಸ್ವಾವಲಂಬನೆ ಕಂಡು ಕೊಳ್ಳುವ ಉದ್ದೇಶ.

3) ಸಂಘಟನೆ ಮತ್ತು ಸರಕಾರಗಳಿಗೆ ಸ್ಥಳೀಯ ಮತ್ತು ರಾಷ್ಟ್ರೀಯ ಸಾವಯವ ಮೂಲದ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಮೂಡಿರುವ ಆಸಕ್ತಿ.

4) ಮೂಲಿಕಾ ವಿಧಾನದ ಚಿಕಿತ್ಸೆಯ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ಅಸಕ್ತಿ ಮತ್ತು ಗಳಿಸಿಕೊಂಡ ಯಶಸ್ಸು.

5) ಗಿಡಮೂಲಿಕೆಗಳಾಧರಿತ ಉದ್ದಿಮೆಗಳ ಬಗ್ಗೆ ಇರುವ ಕಾನೂನುಗಳಲ್ಲಿನ ಬದಲಾವಣೆ ಮತ್ತು ತೋರಿಸುತ್ತಿರುವ ಮಹತ್ವ.

6) ವಿವಿಧ ರೀತಿಯ ಔಷಧಿಯ ತಯಾರಕ ಸಂಸ್ಥೆಗಳು ಸಸ್ಯ ಮೂಲದ ಔಷಧಿಯನ್ನು ಉತ್ಪಾದಿಸಲು ಆಸಕ್ತಿ ತೋರಿಸುತ್ತಿರುವುದು.

7) ವಿವಿಧ ರೀತಿಯ ಸಸ್ಯಮೂಲದ ಹೊಸ ಔಷಧಿಗಳನ್ನು ತೀವ್ರತರನಾದ ಅನಾರೋಗ್ಯಗಳ ನಿವರಣೆಗಾಗಿ ತಯಾರಿಸಲು ಸಂಶೋಧನೆಗಳಾಗುತ್ತಿರುವುದು.

8) ಔಷದ ತಯಾರಿಕಾ ಸಂಸ್ಥೆಗಳು ಗಿಡಮೂಲಿಕೆಗಳ ಮಾರಾಟಕ್ಕಾಗಿ ಅಳವಡಿಸಿಕೊಳ್ಳುತ್ತಿರುವ ತಂತ್ರಜ್ಞಾನ.

9) ಮಾರುಕಟ್ಟೆ ನಿಯಮಗಳು ಸರಳಗೊಳಿಸಿ ರಫ್ತು ವಹಿವಾಟು ಉತ್ತೇಜಿಸಿರುವುದು.

ಈ ಎಲ್ಲಾ ಉದ್ದೇಶಗಳಿಂದ ಔಷಧೀಯ ಸಸ್ಯಗಳಿಗಿಂದು ವಿಶ್ವದಾದ್ಯಂತ ಮಹತ್ವ ಬರಲಾರಂಭಿಸಿದೆ. ವಿಶ್ವ ಆರೋಗ್ಯ ಸಂಘಟನೆಯು ನೀಡುವ ಮಾಹಿತಿ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ  ರಾಷ್ಟ್ರಗಳಲ್ಲಿರುವ ಜನಸಂಖ್ಯೆಯ ಶೇಕಡ 80 ಪಾಲು ಇಂದಿಗೂ ಗಿಡ ಮೂಲಿಕೆಗಳನ್ನಾಧರಿಸಿರುವ ಸಾಂಪ್ರದಾಯಿಕ ಔಷಧಿಯನ್ನು ಬಳಸುತ್ತಿದ್ದು, ಇದರೊಂದಿಗೆ ಆಧುನಿಕ ಪದ್ಧತಿಯ ಔಷಧಿಗಳಲ್ಲಿ ಶೇಕಡಾ 25 ರಷ್ಟು ಗಿಡಮೂಲಿಕೆಗಳನ್ನು ಹೊಂದಿವೆ. ಒಟ್ಟಾರೆಯಾಗಿ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳಲ್ಲೀಗ ಔಷಧೀಯ ಸಸ್ಯಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದಕ್ಕಿರುವ ಕಾರಣಗಳೆಂದರೆ ಇವು ಸ್ವಾಭಾವಿಕ ಉತ್ಪನ್ನಗಳು, ಅಮಲುರಹಿತರ ಗುಣವನ್ನು ಹೊಂದಿರುವವು, ಸೇವನೆಯಿಂದ ಯಾವುದೇ ಅಡ್ಡ ತೊಂದರೆಗಳಿಲ್ಲದಿರುವುದು, ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತವು ಮತ್ತು ಬಡವರ ಆರೋಗ್ಯದ ದೃಷ್ಟಿಯಿಂದ ಲಭ್ಯವಿರುವ ಸುಲಭ ಸಂಪನ್ಮೂಲ ಆಗಿರುವುದು.

ಭಾರತದ ಔಷಧೀಯ ಸಸ್ಯಗಳ ಸಸ್ಯಶಾಸ್ತ್ರೀಯ ವಿಶ್ಲೇಷಣೆ

FRLHT ಕೈಗೊಂಡ 7126 ಔಷಧೀಯ ಸಸ್ಯಗಳ ಅಧ್ಯಯನದ ಪ್ರಕಾರ ಇವು 386 ಕುಟುಂಬ ಮತ್ತು 2220 ಜಾತಿಇದೆ. ಇವುಗಳಲ್ಲಿ ಅಸ್ಥರೇಸಿಯಾ ವರ್ಗದವುಗಳ ಸಂಖ್ಯೆ 452, ಯುಪೋರಬಿಯೇಸಿಯಾ 214, ಲ್ಯಾಮಿಯೇಸಿಯಾ 214, ಫಾಬೇಸಿಯಾ 214, ರುಬಯೇಸಿಯಾ 208, ಪೋಯೆಸಿಯಾ 168, ಪಾಪಿಲಿಯೋನೆಸಿಯಾ 166, ಅಸಂತೇಸಿಯಾ 142, ರೋಸೇಸಿಯಾ 129 ಮತ್ತು ಎಪಿಯೇಸಿಯಾ 118 ಆಗಿರುತ್ತದೆ. ಈ ವಿಶ್ಲೇಷಣೆಯ ಪ್ರಕಾರ ಇದರಲ್ಲಿ ಮರಗಳು, ಪೊದೆಗಳು ಮತ್ತು ಬೇರುಗಳು ಸೇರಿವೆ.

ಆದ್ಯತೆಯ ಆಧಾರದಲ್ಲಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮದ ಆದ್ಯತೆಯಲ್ಲಿ ಬರುವ 32 ಔಷಧೀಯ ಸಸ್ಯಗಳೆಂದರೆ, ನೆಲ್ಲಿ, ಅಶೋಕ, ಅಶ್ವಗಂಧ, ಅತಿವಿಷ, ಬಿಲ್ವ, ನೆಲನೆಕ್ಕಿ ಒಂದೆಲಗ, ಗಂಧ, ಚಿರಾತ, ಅಮೃತಬಳ್ಳಿ, ಮಧುನಾಶಿನಿ, ಗುಗ್ಗುಲ, ಇಸಾಬುಗೋಲು, ಜಟಮಾಂಶಿ, ಅಗ್ನಿಶಿಖಾ, ಕಿರಾತಕಡ್ಡಿ, ಮುರುಗಲು, ಕೋಷ್ಟ, ಕಡುಗರೋಹಿಣಿ, ಗಣಿಕೆ, ಮುಲೇತಿ, ಸಪೇದ್‌ ಮಸ್ಲಿ, ಸಾಂಬ್ರಾಣಿ, ಹಿಪ್ಪಲಿ, ಮರದರಸಿನ, ಕೇಸರಿ, ಗರುಡಪಾತಾಳ, ನೆಲವರಿಕೆ, ಶತಾವರಿ, ತುಳಸಿ, ವಾಯುವಿಳಂಗ ಮತ್ತು ವತ್ಸನಾಭಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ನಮ್ಮ ಸುತ್ತ ಮುತ್ತ ಕಂಡು ಬರುತ್ತಿವೆ. ಇನ್ನು ಕೆಲವು ಈ ಮೊದಲು ನಮ್ಮಲ್ಲಿ ಬೆಳಯುತ್ತಿದ್ದು ಇದೀಗ ನಶಿಸಿಹೋಗಿವೆ.

ಕೃಷಿ ಮತ್ತು ಅಭಿವೃದ್ಧಿಗಾಗಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಹೆಸರು ಕುಟುಂಬ ಸಸ್ಯಶಾಸ್ತ್ರೀಯ ಹೆಸರು

೧. ವಾರ್ಷಿಕ ಬೆಳೆ

ಅ). ಇಸಾಬುಗೋಲು ಪ್ಲಾಂಟಗಿನೇಶಿಯಾ ಪ್ಲಾಟಗೊ ಓವಾಟ

ಆ). ಅಶ್ವಗಂಧ ಸೋಲನೇಶಿಯಾ ವಿದಾನಿಯ ಸೊಮ್ನಿಫೆರಾ

ಇ.) ಕಿರಾತಕಡ್ಡಿ ಅಸಂಥೇಸಿಯಾ ಅನ್‌ಡ್ರೊಗ್ರಾಫಿಸೇ ಪನಿಕ್ಯುಲಾಟ

ಈ). ನೆಲನೆಲ್ಲಿ ಯುಫೋರ್ಬಿಯಾಸಿಯಾ ಪೈಲಂಥಸ್‌ ನಿರುರಿ

ಉ.) ಸಪೇದ್‌ ಮಸ್ಲಿ ಲಿಲ್ಲಿ ಯೇಸಿಯಾ ಕ್ಲೋರೋಪೈಥಮ್‌ ಅರುಡಿನೇಸಿಯಂ

ಊ). ಸೋನಾಮುಖಿ ಕೆಯಿಸಲ್ಪಿನಿಯೇಸಿಯಾ ಕ್ಯಾಸಿಯಾ ಅಂಗುಸ್ಟಿಪೋಲಿಯಾ

ಎ). ಹಿಪ್ಪಲಿ ಪೈಪರೇಸಿಯಾ ಪೈಪರ್ ಲೋಂಗಮ್‌

ಏ). ಲಿಕ್ವೋರೈಸ್‌ ಪೆಬೇಸಿಯಾ ಗ್ಲೈಸೈರಿಹಿಜ್ಜಾ ಗ್ಲಾಬ್ರಾ

2. ಬಹುಕಾಲ ಬಾಳುವವು

ಅ). ಅಶೋಕ ಸೆಯಿಸಲ್ಪಿನೇಸಿಯಾ ಸರಾಕ ಅಸೋಕ

ಆ). ಗುಗ್ಗುಲ ಬರ್ ಸರೇಸಿಯಾ ಕಾಮಿಪೋರರಿಟ್ಟಿ

ಇ). ನೆಲ್ಲಿ ಯುಪೋಬಿಯೇಸಿಯಾ ಎಂಬ್ಲಿಕಾ ಒಫಿಸಿನಾಲಿಸ್‌

ಈ).ಮುರುಗಲು ಗುಟ್ಟಿಪೆರ್ಯೆ ಗಾರ್ಸಿನಿಯಾಇಂಡಿಕಾ

ಉ). ಬಿಲ್ವ ರುಟ್ಟೇಸಿಯಾ ಎಗಲ್‌ಮರ್ಮಿಲೋಸ್‌

ಊ). ಗಂಧ ಸಾಂಟಲೇಸಿಯಾ ಸಾಂಟಲಮ್‌ ಆಲ್ಬಮ್‌

3. ಹಬ್ಬುವ ಬಳ್ಳಿಗಳು

ಅ). ಅಮೃತಬಳ್ಳಿ ಮೆನಿಸ್ಪಜರ್ಮೇಸಿಯಾ ಟಿನೋಸ್ಪೋರ ಕಾರ್ಡಿಫ ಓಲಿಲಯಾ

ಆ). ಮಧುನಾಶಿನಿ ಅಸಕ್ಲೆಪಿಯಾಡೇಸಿಯಾ ಗೈಮ್‌ನೇಮ ಸಿಲವೈಸ್ಟ್ರಿ

ಇ). ಶತಾವರಿ ಲಿಲ್ಲಿಯೇಸಿಯಾ ಅಸ್ಪರಾಗಸ್‌ ರೆಸಿಮೋಸಸ್‌

ಈ). ಗ್ಲೋರಿ ಲಿಲ್ಲಿ ಲಿಲ್ಲಿಯೇಸಿಯಾ ಗ್ಲೋರಿಬಿಸಾಸುರ್ಪಬ

4. ಎತ್ತರದ ಪ್ರದೇಶದ ಸಸ್ಯಗಳು

ಅ). ಅತಿಸ್‌ ರಾಮನ್‌ಕ್ಯುಲೇಸಿಯಾ ಅಕೋನಿಟಮಂ ಹೆಟ್ರೋಪೈಲಮ್‌

ಆ). ಚಿರಾಕ ಗೆಂಟಿಯಾನೇಸಿಯಾ ಸ್ಪೆರ್ಟಿಯಾ ಚಿರಾಯಿಕ

ಇ). ಜಟಮಾಂಸಿ ಪೊಲಿಯನೇಸಿಯಾ ನಾರ್ ಡೋಸ್ಟಾಚಿಸ್‌ ಜಟಮಾಂಸಿ

ಈ). ಕಡುಗರೋಹಿಣಿ ಸ್ಕೋರೋಪುಲರೇಸಿಯಾ ಪೈಕ್ರೊಹಿಜ್‌ ಕುರಾವೊ

ಉ). ಕೋಷ್ಠ ಅಸ್ಥರೇಸಿಯಾ ಸೌಸುರೇ ಲಾಪ್ಪಾ

ಊ). ಇಂಡಿಯನ್‌ಬಾರ್ ಬರಿ ಬರ್ ಬರಿಡೇಸಿಯಾ ಬರ್ ಬರಿಸ್‌ ಅರಿಸ್ಟಾಟ

5.  ಗಮನ ಕೊಡಬೇಕಾದ ಸಸ್ಯಗಳು

ಅ). ತುಳಸಿ ಲ್ಯಾಮಿಯೇಸಿಯಾ ಓಸಿಮಮ್‌ ಸಾಂಕ್ಟಮ್‌

ಆ). ಸರ್ಪಗಂಧಾ ಅಪೊಸ್ಯೆನೇಸಿಯಾ ರಾವಲ್ಫಿಯಾ ಸರ್ಪೆಂಟೈನಾ.

ಹೀಗೆ ವಿವಿಧ ರೀತಿಯಲ್ಲಿ ಸಸ್ಯಗಳನ್ನು ಪಟ್ಟಿ ಮಾಡಬಹುದು.

ನಮ್ಮ ಗಮನಕ್ಕೆ ಬಾರದ ಅದೆಷ್ಟು ಅಮೃತ ಸಸ್ಯಗಳಿವೆಯೋ 

SIDDAPPA T KATIHALLI

HEAD MASTER

GOVT HIGH SCHOOL GUTTUR, HARIHARA TQ

No comments:

Post a Comment