ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, December 4, 2023

"ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ"

 "ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ"

ಲೇಖನ:  ಬಸವರಾಜ ಎಮ್ ಯರಗುಪ್ಪಿ ಬಿ ಆರ್ ಪಿ ಶಿರಹಟ್ಟಿ,

ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ, 

ಜಿಲ್ಲಾ ಗದಗ 582116,  

ಮಿಂಚಂಚೆ basu.ygp@gmail.com



ಅಂಗವೈಕಲ್ಯ ಶಾಪವಲ್ಲ;ಅವರು ಸಮಸ್ಯೆಗಳಿಗೆ ಸವಾಲೊಡ್ಡಿ ಜಯ ಸಾಧಿಸುವ ಛಲಗಾರರು.

 ಡಿಸೆಂಬರ್ 03-ವಿಶ್ವ ಅಂಗವಿಕಲರ ದಿನವನ್ನಾಗಿ ಆಚರಿಸಲಾಗುತ್ತಿದೆ; ತನ್ನಿಮಿತ್ತ ವಿಶೇಷ ಲೇಖನ

"ನನ್ನ ಕೈ ಹಿಡಿದು ನನ್ನ ಜೊತೆ ನಡೆ.ನಾವು ಸಾಮಾಜಿಕ ಅಸಮಾನತೆಯ ಪಿಡುಗುಗಳ ಬೆನ್ನು ಮುರಿಯಬೇಕು;ಎಲ್ಲರನ್ನೂ ಒಳಗೊಳ್ಳುವ ಸಮಾಜದಲ್ಲಿ ಘನತೆಯಿಂದ ಬದುಕಲು ಅಂಗವೈಕಲ್ಯ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ನಾವು ಸಬಲೀಕರಣಗೊಳಿಸಬೇಕು" ಎಂದು ವಿಲಿಯಂ ಲೈಟ್ಬೋರ್ನ್ ಹೇಳಿದ್ದು ಅಕ್ಷರಶಃ ಸತ್ಯವಾದ ಮಾತು.

ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಕೊಟ್ಟು ಅವರನ್ನು ಸಾಮಾಜಿಕವಾಗಿ ಬದುಕಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಭವಿಷ್ಯಕ್ಕೆ ಬೆಳಕಾಗಬೇಕು.ಹಾಗಾಗಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ ಮತ್ತು ಮನೊರಂಜನೆ ಇನ್ನೂ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು ಹಾಗು ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ಪ್ರತಿ ವರ್ಷ ಜಗತ್ತಿನೆಲ್ಲೆಡೆ ಡಿಸೆಂಬರ್ 03 ರಂದು "ವಿಶ್ವ ವಿಕಲಚೇತನರ" ದಿನವನ್ನಾಗಿ ಆಚರಿಸಲಾಗುತ್ತದೆ.

#ಉದ್ದೇಶ:

ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು.ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

#ಹಿನ್ನಲೆ:

ಮೊದಲು ಈ ದಿನವನ್ನು 1992 ರಲ್ಲಿ ವಿಶ್ವಸಂಸ್ಥೆಯು ಆರಂಭಿಸಿತು. ಈಗೂ ಸಹ ಈ ದಿನಾಚರಣೆ  ನಡೆದುಕೊಂಡು ಬರುತ್ತಿದೆ. ಈ ದಿನದಂದು ಜಗತ್ತಿನಲ್ಲಿರುವ ಅನೇಕ ಅಂಗವಿಕಲ ಯಶೋಗಾಥೆಗಳನ್ನು  ಸ್ಮರಿಸಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ.

#ಅಂಗವೈಕಲ್ಯ ಎಂದರೆ ಏನು..?

ದೀರ್ಘಾವಧಿಯ ದೈಹಿಕ, ಮಾನಸಿಕ, ಬೌದ್ಧಿಕ ಅಥವಾ ಸಂವೇದನಾದ ದುರ್ಬಲತೆಗಳು ವಿವಿಧ ಅಡೆತಡೆಗಳೊಂದಿಗಿನ ಪರಸ್ಪರ ಕ್ರಿಯೆಯಲ್ಲಿ ಇತರರೊಂದಿಗೆ ಸಮಾನ ಆಧಾರದ ಮೇಲೆ ಸಮಾಜದಲ್ಲಿ ಪೂರ್ಣ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಗೆ ಅಡ್ಡಿಯಾಗಬಹುದು. ಎಂದು  ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ವಿಶ್ವಸಂಸ್ಥೆಯ ಸಮಾವೇಶವು" ಅಂಗವೈಕಲ್ಯವನ್ನು ಹೀಗೆ ವ್ಯಾಖ್ಯಾನೆಸಿದೆ. 

#ವಿಕಲಾಂಗತೆ  ಮೆಟ್ಟಿನಿಂತ  ಪ್ರಸಿದ್ಧ ಭಾರತೀಯರು:

"ಅಂಗವೈಕಲ್ಯವು ಮನಸ್ಸಿನ ಸ್ಥಿತಿ" ಹೌದು. ಆದರೆ ಅನೇಕರು ತಮ್ಮ ವಿಕಲತೆಯನ್ನು ಮೆಟ್ಟಿ ನಿಂತು ಅನೇಕ ಸಾಧನೆಗಳನ್ನು ಮಾಡಿ  ಸಾಬೀತುಪಡಿಸಿದ್ದಾರೆ.ತನ್ನ ಸಂಪೂರ್ಣ ದೇಹವನ್ನು ನಿಜವಾಗಿ ಬಳಸಲಾಗದ ಅಥವಾ ಇತರರಿಗೆ ನಿಯಮಿತವಾದ ಕೆಲಸಗಳನ್ನು ಮಾಡಲು ಸಾಧ್ಯವಾಗದ ವ್ಯಕ್ತಿಯ ಸಂಕಟವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಇತರರಿಗಿಂತ ಹೆಚ್ಚು ಹೋರಾಟದೊಂದಿಗೆ ಪ್ರತಿದಿನ ಬದುಕುವ ಈ ಜನರನ್ನು ನಿರಂತರವಾಗಿ ಕೀಳಾಗಿ ಕಾಣುವ ಜನರಿದ್ದಾರೆ. ಆದರೆ ದೇವರು ಎಲ್ಲರಿಗೂ ಒಂದು ವಿಶೇಷ ಸಾಮರ್ಥ್ಯವನ್ನು ಅನುಗ್ರಹಿಸಿರುತ್ತಾನೆ. ಅದರಂತೆ ಭಾರತೀಯರು ತಮ್ಮ ಸವಾಲುಗಳನ್ನು ಮೀರಿ, ಯಶಸ್ಸು ಕಂಡಿದ್ದಾರೆ. ಅವರು ಎಲ್ಲರಿಗೂ ನಿಜವಾಗಿಯೂ ಸ್ಪೂರ್ತಿದಾಯಕರಾಗಿದ್ದಾರೆ.

ಅವರಲ್ಲಿ ಶೇಖರ್ ನಾಯ್ಕ್, ಸುಧಾ ಚಂದ್ರನ್, ರವೀಂದ್ರ ಜೈನ್,ಗಿರೀಶ್ ಶರ್ಮಾ,ಎಚ್.ರಾಮಕೃಷ್ಣನ್,ಪ್ರೀತಿ ಶ್ರೀನಿವಾಸನ್,ಸಾಯಿ ಪ್ರಸಾದ್ ವಿಶ್ವನಾಥನ್,ಅರುಣಿಮಾ ಸಿನ್ಹಾ, ಸುರೇಶ್ ಅಡ್ವಾಣಿ,ಸಾಧನಾ ಧಂಡ್, ಮಾಲತಿ ಕೃಷ್ಣಮೂರ್ತಿ ಹೊಳ್ಳ,ಹ್ಯಾರಿ ಬೋನಿಫೇಸ್ ಪ್ರಭು, ಜಾವೇದ್ ಅಬಿದಿ, ಪವಿತ್ರ ವೈ. ಎಸ್. ಮತ್ತು ಅಚಲಾ ಪಾಣಿ.

ಹೀಗೆ ತಮ್ಮ ಕಠಿಣ ಪರಿಶ್ರಮ, ಪ್ರತಿಭೆಯಿಂದ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಅಂಗವಿಕಲರ ಅನೇಕ ಉದಾಹರಣೆಗಳಿವೆ.ಅದರಲ್ಲಿ ಈ ಕೆಳಗಿನ ಸಾಧಕರು, ಅವರ ಅಂಗವಿಕಲತೆ ಮೆಟ್ಟಿ ನಿಂತು ಬೇರೆಯವರಿಗೆ ಸ್ಪೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ. 

#ವಿಕಲಾಂಗತೆ  ಮೆಟ್ಟಿನಿಂತ  ಪ್ರಸಿದ್ದ ವಿದೇಶಿ ವ್ಯಕ್ತಿಗಳು:

ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್, ಆಲ್ಬರ್ಟ್ ಐನ್‍ಸ್ಟೀನ್. 

ಹೀಗೆ ತಮ್ಮ ಕಠಿಣ ಪರಿಶ್ರಮ, ಪ್ರತಿಭೆಯಿಂದ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಅಂಗವಿಕಲರ ಅನೇಕ ಉದಾಹರಣೆಗಳಿವೆ.ಅದರಲ್ಲಿ ಈ ಮೇಲಿನ ಸಾಧಕರು, ಅವರ ಅಂಗವಿಕಲತೆ ಮೆಟ್ಟಿ ನಿಂತು ಬೇರೆಯವರಿಗೆ ಸ್ಪೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ.

ಒಟ್ಟಾರೆಯಾಗಿ ನಮ್ಮ ಸಮಾಜದಲ್ಲಿ ಇಂದಿಗೂ ಅಂಗವಿಕಲರ ವಿರುದ್ಧ ತಾರತಮ್ಯ, ಅನುಕಂಪ, ಅಪಹಾಸ್ಯ ಮಾಡುತ್ತಿರುವುದು ದುರಾದೃಷ್ಟಕರ. ಆದರೆ, ಅವರೂ ನಮ್ಮ ಸಮಾಜದ ಭಾಗವಾಗಿದ್ದಾರೆ.ಅವರನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ವಿಫಲರಾಗುತ್ತೇವೆ. ವಿಶೇಷ ಸಾಮರ್ಥ್ಯವುಳ್ಳ ಜನರು ಇತರರ ಮೇಲೆ ಅವಲಂಬಿತರಾಗಿರುವುದಿಲ್ಲ. ಆರಂಭದಲ್ಲಿ ಅವರಿಗೆ ಸಹಾಯದ ಅಗತ್ಯವಿರುತ್ತದೆ, ಆದರೆ ಕ್ರಮೇಣ, ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ತಾವಾಗಿಯೇ ನಿರ್ವಹಿಸಲು ಕಲಿಯುತ್ತಾರೆ.ಅಂಗವಿಕಲರು ಬದುಕಿದ್ದರೂ ಪ್ರಯೋಜನವಿಲ್ಲ ಎಂಬಂತೆ ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು.ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲರು ಹೆಚ್ಚಿದ್ದು, ಅವರನ್ನು ಪತ್ತೆ ಮಾಡುವ ಮತ್ತು ಅವರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಗಳು ಸರ್ಕಾರದಿಂದ ನಡೆಯುವಂತಾಗಬೇಕು. ಅಂಗವಿಕಲರಿಗೆ ಉಪಯುಕ್ತವಾಗಬಲ್ಲ ಯಾವ್ಯಾವ ಸರ್ಕಾರಿ ಯೋಜನೆಗಳಿವೆ ಮತ್ತು ಅವುಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಮರ್ಪಕವಾಗಿ ಮಾಹಿತಿಯನ್ನು ಸಂಬಂಧಿಸಿದವರು ನೀಡಿದಾಗ ಮಾತ್ರ ಈ ದಿನಕ್ಕೆ ಮಹತ್ವ ಬರಲು ಸಾಧ್ಯ.

ಕೊನೆಯ ಮಾತು:

ನನ್ನ ಸಾಮರ್ಥ್ಯದಲ್ಲಿ "DIS" ಅನ್ನು ತೆಗೆದು  "ABILITY" ಯನ್ನು ಮಾತ್ರ ನಾನು ಆಯ್ಕೆ ಮಾಡುತ್ತೇನೆ ಎಂದು ರಾಬರ್ಟ್ ಎಂ. ಹೆನ್ಸೆಲ್ ಹೇಳಿದ ಮಾತುಗಳನ್ನು ಇಲ್ಲಿ ಸ್ಮರಿಸಬಹುದು.



No comments:

Post a Comment