ವಿಶ್ವ ಝೋನೋಸಿಸ್ ದಿನ ....
ಸಾಕು ಪ್ರಾಣಿಗಳಿಂದ ಬರುವ ರೋಗಗಳಿಂದ ದೂರವಿರೋಣ
ಗಜಾನನ ಭಟ್ಟ
ವಿಜ್ಞಾನ ಶಿಕ್ಷಕರು ಹಾಗೂ ಹವ್ಯಾಸಿ ವಿಜ್ಞಾನ ಲೇಖನ ಬರಹಗಾರರು,
ಸ.ಪ್ರೌಡಶಾಲೆ, ಉಮ್ಮಚಗಿ,
ಶಿರಸಿ ಶೈ ಜಿಲ್ಲೆ
ಆಧುನಿಕತೆಗೆ ತಕ್ಕ ಹಾಗೆ ಮಾನವನ ಜೀವನ ಶೈಲಿ ಕೂಡಾ ಅಗಾಧವಾದ ಬದಲಾವಣೆ ಕಂಡಿದೆ. ಮೊದಲೆಲ್ಲಾ ಹೆಚ್ಚಿನ ಜನ ಹಳ್ಳಿಗಾಡಿನಲ್ಲಿ ಜೀವನ ಕಟ್ಟಿಕೊಂಡಿದ್ದರು. ಜಾನುವಾರುಗಳು ಮಾತ್ರ ಪ್ರಮುಖವಾಗಿ ಅವರ ಜೋತೆಗಾರ ಪ್ರಾಣಿಗಳಾದ್ದವು. ಕಾಲಕ್ರಮೇಣ ನಾಗರಿಕತೆ ಬೆಳದಂತೆ ಮಾನವನು ಶೋಕಿಗಾಗಿ ಬೆಕ್ಕು, ನಾಯಿ, ಮೊಲ, ಕುದುರೆ, ಕತ್ತೆ, ಹಂದಿ, ಕೋಳಿ, ಆಡು ಮುಂತಾದ ಪ್ರಾಣಿಗಳನ್ನು ಸಾಕುವುದನ್ನು ರೂಢಿಗತಮಾಡಿಕೊಂಡ.ಅಲ್ಲದೇ ಅವುಗಳಲ್ಲಿ ಕೆಲ ಪ್ರಾಣಿಗಳಿಗೆ ಮನೆಯೊಳಗೆ ಮುಕ್ತ ಸ್ವಾತಂತ್ರ್ಯ ನೀಡುತ್ತಾ ಬಂದ. ಇಷ್ಟೊಂದು ಮುಕ್ತ ಅವಕಾಶ ಪ್ರಾಣಿಗಳಿಗೆ ನೀಡಿದಾಗ ಅವುಗಳಿಂದ ನಮಗೆ ಕೆಲವು ಸಾಂಕ್ರಾಮಿಕ, ಮಾರಣಾಂತಿಕ ರೋಗಗಳು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ .
ಸಾಮಾನ್ಯವಾಗಿ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಬರುವ ರೋಗಗಳಿಗೆ 'ಝೋನೋಸಿಸ್' ರೋಗಗಳು ಎನ್ನುವರು. ಈ ರೋಗಗಳು ವೈರಸ್, ಬ್ಯಾಕ್ಟೀರಿಯ, ಏಕಕೋಶ ಜೀವಿಗಳಿಂದ ಬರುವಂತದ್ದಾಗಿದೆ. ಪ್ರಾಣಿಗಳ ಸಂಪರ್ಕಕ್ಕೆ ಬಂದ ಆಹಾರ ಸೇವನೆ, ಪ್ರಾಣಿಗಳ ಸ್ಪರ್ಶ, ರೋಗಪೀಡಿತ ಪ್ರಾಣಿಗಳ ಸಂಪರ್ಕಕ್ಕೆ ಬಂದ ನೀರು ಬಳಕೆ ಹಾಗೂ ಪ್ರಾಣಿಗಳು ವಾಸ ಮಾಡುವ ಪರಿಸರದಿಂದ ಸುಲಭವಾಗಿ ವೈರಾಣುಗಳು ಮನುಷ್ಯನ ದೇಹವನ್ನು ಪ್ರವೇಶ ಪಡೆದು ರೋಗದ ಲಕ್ಷಣಗಳಿಗೆ ಕಾರಣವಾಗುತ್ತದೆ.
1885 ಜುಲೈ 6 ರಂದು ವಿಜ್ಞಾನಿ ಲೂಯೀ ಪಾಶ್ಚರವರು ರೇಬೀಸ್ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿದರು. ಈ ದಿನದ ನೆನಪಿಗಾಗಿ ಪ್ರತಿವರ್ಷ ಜುಲೈ 6ನ್ನು ವಿಶ್ವ ಝೋನೋಸಿಸ್ ದಿನವಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಪ್ರಾಣಿಜನ್ಯ ರೋಗಗಳ ಕುರಿತಾಗಿ ಜನಸಾಮಾನ್ಯರಲ್ಲಿ ತಿಳುವಳಿಕೆ ನೀಡಲು ಶ್ರಮಿಸಲಾಗುತ್ತದೆ. ಝೋನೋಸಿಸ್ ದಿನದ ಅಂಗವಾಗಿ ವಿಶೇಷವಾದ ಘೋಷವಾಕ್ಯ ಹೊರಡಿಸಲಾಗುತ್ತದೆ.
2021ರಲ್ಲಿ 'ಝೋನೋಟಿಕ್ ಕಾಯಿಲೆಗಳ ಸರಪಳಿಯನ್ನು ಮುರಿಯೋಣ 'ಎನ್ನುವ ಥೀಮ್ ನ ಅಡಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದರೆ, 2023ರಲ್ಲಿ 'ಒಂದು ಜಗತ್ತು ಒಂದು ಆರೋಗ್ಯ , ಝೋನೋಸಿಸ್ ನ್ನು ತಡೆಯಿರಿ ಅದರ ಹರಡುವಿಕೆಯನ್ನು ನಿಲ್ಲಿಸಿ. ಪ್ರಾಣಿ ಸಂಕುಲವನ್ನು ರಕ್ಷಿಸಿ.' ಎನ್ನುವ ಘೋಷವಾಕ್ಯದೊಂದಿಗೆ ಝೋನೋಸಿಸ್ ದಿನಾಚರಣೆ ಆಚರಿಸಲಾಯಿತು.
ಯೋನೋಸಿಸ್ ಹರಡುವಿಕೆ....
ಸಾಕು ಪ್ರಾಣಿಗಳು ವಿವಿಧ ಕಾಯಿಲೆಗಳನ್ನು ಮನುಷ್ಯನಿಗೆ ತರುತ್ತವಾದರೂ , ಇವು ಕಾಯಿಲೆ ಹರಡುವಲ್ಲಿ ಮಧ್ಯವರ್ತಿಗಳಂತೆ ವರ್ತಿಸುತ್ತವೆ. ಕಾಯಿಲೆಯನ್ನು ಉಂಟುಮಾಡುವಲ್ಲಿ ಸೂಕ್ಷ್ಮಾಣು ಜೀವಿಗಳಾದ ವೈರಸ್, ಬ್ಯಾಕ್ಟೀರಿಯಾ, ಏಕಕೋಶ ಜೀವಿ ಮತ್ತು ಶೀಲಿಂದ್ರಗಳು ಪ್ರಮುಖ ಪಾತ್ರ ವಹಿಸುತ್ತದೆ.
1) ವೈರಸ್ ನಿಂದ ಬರುವ ಝೋನೊಸಿಸ್: ಸಾಕು ಪ್ರಾಣಿಗಳ ಮುಖಾಂತರ ವೈರಸ್ ನಿಂದ ಬರುವ ಪ್ರಮುಖ ರೋಗಗಳಲ್ಲಿ ರೇಬೀಸ್, ಏಡ್ಸ, ಇನ್ಪ್ಲೂಯೆಂಜಾ, ಇಬೋಲಾ ಪ್ರಮುಖವಾದವು. ಇವುಗಳಲ್ಲಿ ರೇಬೀಸ್, ಏಡ್ಸ ಮಾರಣಾಂತಿಕ ರೋಗಗಳಾಗಿವೆ.
2) ಬ್ಯಾಕ್ಟೀರಿಯದಿಂದ ಬರುವ ಝೋನೋಸಿಸ್: ಅಂಥ್ರಾಕ್ಸ, ಸಾಲ್ಮೋನೆಲ್ಲಾಸಿಸ್, ಟ್ಯೂಬರ್ ಕ್ಯೂಲೋಸಿಸ್, ಪ್ಲೇಗ್ ಇವು ಸಾಮಾನ್ಯವಾಗಿ ಪ್ರಾಣಿಗಳಿಂದ ಹರಡುವ ಬ್ಯಾಕ್ಟೀರಿಯ ದಿಂದ ಬರುವ ರೋಗವಾಗಿದೆ.
3) ಪರಾವಲಂಬಿ ಏಕಕೋಶ ಜೀವಿಗಳಿಂದ ಬರುವ ಝೋನೋಸಿಸ್: ಟ್ರೈಕೀನೋಸಿಸ್, ಟಾಕ್ಸೊಪ್ಲಾಸ್ಮಾಸಿಸ್ ಗಳು ಪರಾವಲಂಬಿ ಏಕಕೋಶ ಜೀವಿಗಳಿಂದ ಬರುವ ರೋಗಗಳಾಗಿವೆ.
ಝೋನೋಸಿಸ್ ಹೇಗೆ ನಿಯಂತ್ರಿಸಬಹುದು...?
ಝೋನೋಸಿಸ್ ನ್ನು ನಿಯಂತ್ರಿಸಲು ಪ್ರತಿವರ್ಷ ಜುಲೈ 6 ರಂದು ವಿಶ್ವ ಝೋನೋಸಿಸ್ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಕು ಪ್ರಾಣಿಗಳಿಂದ ಬರುವ ರೋಗ ನಿಯಂತ್ರಣ ಮತ್ತು ಉಪಕ್ರಮಗಳ ಕುರಿತಾಗಿ ಜಾಗೃತಿ ಮೂಡಿಸುವುದೆ ಈ ದಿನದ ಆಚರಣೆಯ ಪ್ರಮುಖ ದ್ಯೇಯವಾಗಿದೆ.ಸಂಪೂರ್ಣ ಝೋನೋಸಿಸ್ ನಿಯಂತ್ರಣಕ್ಕಾಗಿ ಈ ಕೆಲವು ಸೂಚಿತ ಕ್ರಮಗಳನ್ನು ತೆಗೆದುಕೊಳ್ಳಬಹುದು.
1) ಪ್ರಾಣಿ ಸಾಕಾಣಿಕೆಯ ಅಗತ್ಯ ಮತ್ತು ನಿರ್ವಹಣೆಯ ಸಾದ್ಯತೆಗಳಿದ್ದರೆ ಮಾತ್ರ ಪ್ರಾಣಿ ಸಾಕಾಣಿಕೆ ಕೈಗೊಳ್ಳುವುದು. ನಿರ್ವಹಣೆ ಸರಿಯಾಗಿರದಿದ್ದಲ್ಲಿ ಅವುಗಳಿಂದ ನಮಗೆ ರೋಗಗಳು ಹರಡುವಿಕೆಯ ಸಂದರ್ಭಗಳು ಹೆಚ್ಚು.
2) ಹವ್ಯಾಸಕ್ಕಾಗಿ ಸಾಕುವವರು ಪ್ರಾಣಿಗಳ ಸ್ವಚ್ಚತೆ ಕಡೆಗೆ ವಿಶೇಷ ಗಮನ ಕೊಡಬೇಕು. ಅವುಗಳಿಗೆ ಪ್ರತ್ಯೇಕ ಗೂಡು ಅಥವಾ ಕಟ್ಟಡ ನಿರ್ಮಾಣ ಮಾಡಿರಬೇಕು.
3) ಮನೆಯ ಒಳಗೆ ಯಾವುದೇ ಕಾರಣಕ್ಕೂ ಸಾಕು ಪ್ರಾಣಿಗಳನ್ನು ಬಿಟ್ಟು ಕೊಡಬಾರದು.
4)ಸಾಕು ಪ್ರಾಣಿಗಳಿಗೆ ಉತ್ತಮ ಪೋಷಕಾಂಶಯುಕ್ತ ಆಹಾರ ನೀಡಿ ಅವುಗಳ ಆರೋಗ್ಯದ ಕಡೆಗೆ ಗಮನ ಹರಿಸುವುದು.
5) ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಸೂಕ್ತ ಔಷದೋಪಚಾರ ವ್ಯವಸ್ಥೆ ಮಾಡುವುದು.
6)ರೋಗ ಪೀಡಿತ ಪ್ರಾಣಿಗಳನ್ನು ಆರೋಗ್ಯವಂತ ಪ್ರಾಣಿಗಳ ಜೋತೆಗೆ ಸೇರಿಸದೆ, ಪ್ರತ್ಯೇಕವಾಗಿಡುವುದು.
7) ಪ್ರಾಣಿಗಳಿಗೆ ಆಹಾರ ನೀಡುವುದು ಮತ್ತು ಔಷಧೋಪಚಾರ ಮಾಡುವ ಸಂದರ್ಭದಲ್ಲಿ ವಿಶೇಷ ರಕ್ಷಣಾ ಕವಚ ಧರಿಸುವುದು ಹಾಗೂ ಸ್ಯಾನಿಟೈಸರ್ ಮತ್ತು ಸೋಪ್ ಬಳಸಿ ದೇಹವನ್ನು ಸ್ವಚ್ಚಗೊಳಿಸಿಕೊಳ್ಳುವುದು.
ಜನಸಾಮಾನ್ಯರು ಪ್ರಾಣಿಗಳನ್ನು ಸಾಮಾನ್ಯವಾಗಿ ಹವ್ಯಾಸಕ್ಕಾಗಿ, ಆಹಾರಕ್ಕಾಗಿ, ಕೃಷಿಗಾಗಿ ,ರಕ್ಷಣೆಗಾಗಿ ಅಥವಾ ಪ್ರತಿಷ್ಠೆ ಗಾಗಿ ಸಾಕುತ್ತಾರೆ. ಯಾವುದೆ ನಿರ್ದಿಷ್ಟ ಉದ್ದೇಶಗಳಿಗಾಗಿ ಪ್ರಾಣಿಗಳನ್ನು ಸಾಕಿದರೂ ಕೂಡಾ ಸ್ಚಚ್ಚತೆ , ಮತ್ತು ಅರೋಗ್ಯ ಸೂತ್ರ ಅಳವಡಿಸಿಕೊಂಡಾಗ ಅವುಗಳಿಂದ ಬರುವ ಎಷ್ಟೂ ರೋಗಗಳಿಂದ ಮುಕ್ತಿ ಪಡೆಯಬಹುದು. ಝೋನೋಸಿಸ್ ದಿನದ ಅಂಗವಾಗಿ ಸಾಕು ಪ್ರಾಣಿಗಳಿಂದ ಬರುವ ರೋಗಗಳಿಂದ ರಕ್ಷಣೆ ಪಡೆದು ಆರೋಗ್ಯಯುತ ಜೀವನ ನಡೆಸುವ ಪ್ರತಿಜ್ಞೆ ಕೈಗೊಳ್ಳೊಣ.
No comments:
Post a Comment