ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, August 4, 2024

ನಮ್ಮ ಇಸ್ರೋದ ಕೇಂದ್ರ ಕಛೇರಿಯಲ್ಲೊಂದು ದಿನ

ನಮ್ಮ ಇಸ್ರೋದ ಕೇಂದ್ರ ಕಛೇರಿಯಲ್ಲೊಂದು ದಿನ

ಲೇ :  ರಾಮಚಂದ್ರ ಭಟ್ ಬಿ.ಜಿ.

ಅದು ಆಗಸ್ಟ್‌  23 !! ಭಾರತೀಯರನ್ನು ಮಾತ್ರವಲ್ಲದೇ ವಿಶ್ವದಾದ್ಯಂತ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ದಿನ. ಎದೆಯಲ್ಲೇನೋ ತಳಮಳ. ಕೋಟ್ಯಂತರ ಹೃದಯ ದೇಗುಲಗಳು ಅದೊಂದು ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದವು.  ಅಂತೂ ಪ್ರತೀ ಭಾರತೀಯನ ಪ್ರಾರ್ಥನೆ ಫಲಿಸಿತ್ತು. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 14 ಜುಲೈ 2023 ರಂದು ಉಡಾವಣೆಗೊಂಡ ಬಾಹ್ಯಾಕಾಶ ನೌಕೆ ವಿಕ್ರಂ ಲ್ಯಾಂಡರ್‌ ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿ ಆಗಸ್ಟ್ 23 ರಂದು 18:03ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಮೊದಲ ಲ್ಯಾಂಡರ್ ಎನಿಸಿತು.  ಒಂದು 
ಹಾಲಿವುಡ್ ಸಿನಿಮ ತಯಾರಿಸಲು ಖರ್ಚು ಮಾಡುವ ಹಣಕ್ದಕಿಂತ ಕಡಿಮೆ ಖರ್ಚಿನಲ್ಲಿ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನವನ್ನು ಯಶಸ್ವಿಗೊಳಿಸುತ್ತಾರೆ ಎಂದರೆ ಅದೇನು ಸಾಮಾನ್ಯ ಸಾಧನೆಯೇ? ಚಂದ್ರಯಾನ 3 ಕ್ಕೆ ತಗಲಿದ ವೆಚ್ಚ ಸುಮಾರು 65 ಮಿಲಿಯನ್ ಡಾಲರ್  (615 ಕೋಟಿ)ಗಳು. ಇದು ಇಂಟರ್‌ಸ್ಟೆಲ್ಲಾರ್ ($165 ಮಿಲಿಯನ್), ಪ್ಯಾಸೆಂಜರ್ಸ್ ($110 ಮಿಲಿಯನ್), ದಿ ಮಾರ್ಟಿಯನ್ ($108 ಮಿಲಿಯನ್), ಗ್ರಾವಿಟಿ ($100 ಮಿಲಿಯನ್), ಓಪನ್‌ಹೈಮರ್ ($100 ಮಿಲಿಯನ್) ಮೊದಲಾದ ಅನೇಕ ಹಾಲಿವುಡ್ ಚಿತ್ರಗಳ ಬಜೆಟ್‌ಗಿಂತ ಬಹಳ ಕಡಿಮೆ!!!  

    ಚಂದ್ರಯಾನ-3 ಯೋಜನೆಯು ಇಸ್ರೋದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಯೋಜನೆಯ  ಮೂಲಕ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನಿಂದ ಪ್ರೇರಿತಗೊಂಡ ಪ್ರಧಾನಿ ನರೇಂದ್ರ ಮೋದಿಯವರು ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದೂ ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ತಿರಂಗ ಪಾಯಿಂಟ್​ ಎಂದೂ ಹೆಸರಿಟ್ಟರು. 
"ಈ ತಿರಂಗ ಪಾಯಿಂಟ್​​​ ಭವಿಷ್ಯದಲ್ಲಿ ಭಾರತೀಯರ ಸಾಧನೆಗಳಿಗೆ ಪ್ರೇರಣೆ ನೀಡಲಿದೆ. ಹಾಗಾಗಿ ಈ ಅದ್ಭುತ ಯಶಸ್ಸನ್ನು ಪ್ರತಿ ವರ್ಷವೂ ಆಚರಿಸೋಣ. ಹಾಗಾಗಿ  ಆಗಸ್ಟ್‌ ೨೫ನ್ನು ಇನ್ನು ಮುಂದೆ ರಾಷ್ಟ್ರೀಯ ಅಂತರಿಕ್ಷ ದಿನವನ್ನಾಗಿ ಆಚರಿಸೋಣ , ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ " ಎಂದು ಖುಷಿಯಿಂದ ಮುಕ್ತಕಂಠದಿಂದ ಪ್ರಧಾನಿಯವರು ಇಸ್ರೊ ವಿಜ್ಞಾನಿಗಳನ್ನು ಶ್ಲಾಘಿಸಿದ್ದು ಮನದಲ್ಲಿ ಇನ್ನೂ ಹಸಿರಾಗಿದೆ.


    ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟವನ್ನು 1975ರಲ್ಲಿ ಸೋವಿಯೆಟ್ ಯೂನಿಯನ್‌ನ ಕೊಸ್ಮೋಸ್-3M ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವುದರೊಂದಿಗೆ ವಿಕ್ರಂ ಸಾರಾಭಾಯಿಯವರ ಕನಸು ನನಸಾಯಿತು. ಇದಾದ ನಂತರ ಭಾರತವು ಹಲವಾರು ಉಪಗ್ರಹಗಳನ್ನು ಉಡಾವಣೆ ಮಾಡಿತು. ಭಾರತದ ಮೊದಲ ಚಂದ್ರಯಾನ ಮಿಷನ್ ಅನ್ನು 2008ರಲ್ಲಿ ಉಡಾವಣೆ ಮಾಡಲಾಯಿತು. ಈ ಮಿಷನ್ ಚಂದ್ರನ ಕಕ್ಷೆಯನ್ನು ತಲುಪಿ ಚಂದ್ರನ ಮೇಲ್ಮೈಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಸಂಗ್ರಹಿಸಿತು.

2013ರಲ್ಲಿ ಭಾರತವು ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಈ ಮಿಷನ್‌ನ ಮೂಲಕ ಭಾರತವು ಮೊದಲ ಪ್ರಯತ್ನದಲ್ಲಿಯೇ ಮಂಗಳ ಗ್ರಹದ ಕಕ್ಷೆಯನ್ನು ತಲುಪಿದ ಕೆಲವೇ ದೇಶಗಳಲ್ಲಿ ಒಂದಾಯಿತು.

ಚಂದ್ರಯಾನ-3 ಮಿಷನ್ ಭಾರತದ ಅತ್ಯಂತ ಮಹತ್ವದ ಅಂತರಿಕ್ಷ ಮಿಷನ್‌ಗಳಲ್ಲಿ ಒಂದಾಗಿದೆ. ಈ ಮಿಷನ್‌ನ ಮುಖ್ಯ ಗುರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಮತ್ತು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವುದು.

         ಚಂದ್ರಯಾನ-3 ಮಿಷನ್‌ನಲ್ಲಿ ವಿಕ್ರಮ್ ಎಂಬ ಲ್ಯಾಂಡರ್ ಮತ್ತು ಪ್ರಗ್ಯಾನ್ ಎಂಬ ರೋವರ್ ಇದ್ದವು. ಈ ಲ್ಯಾಂಡರ್ ಮತ್ತು ರೋವರ್‌ಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲು ವಿವಿಧ ವೈಜ್ಞಾನಿಕ ಸಾಧನಗಳನ್ನು ಹೊಂದಿದ್ದವು. ಚಂದ್ರಯಾನ-3 ಮಿಷನ್‌ನ ಯಶಸ್ಸು ಭಾರತದ ಅಂತರಿಕ್ಷ ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನು ನೀಡಿದೆ. ಈ ಮಿಷನ್‌ನ ಮೂಲಕ ಭಾರತವು ಚಂದ್ರನ ಅನ್ವೇಷಣೆಯಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.

ಉಪಗ್ರಹ ಪ್ರಯೋಗಗಳು: ಭಾರತವು ವಿವಿಧ ಉದ್ದೇಶಗಳಿಗಾಗಿ ಹಲವು ಉಪಗ್ರಹಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಇವುಗಳಲ್ಲಿ ಸಂವಹನ, ದೂರಸಂವೇದಿ , ಹವಾಮಾನ ಮುನ್ಸೂಚನೆ ಮತ್ತು ನೌಕಾಪಡೆಗೆ ಸಂಬಂಧಿಸಿದ ಉಪಗ್ರಹಗಳು ಸೇರಿವೆ.

ಮಂಗಳಯಾನ: ಭಾರತವು ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ಯಾನ ಕಳುಹಿಸಿದ ಕೆಲವೇ ದೇಶಗಳಲ್ಲಿ ಒಂದಾಗಿದೆ. ಮಂಗಳಯಾನ ಯೋಜನೆಯು ಭಾರತದ ಬಾಹ್ಯಾಕಾಶ ಸಂಶೋಧನಾ ಸಾಮರ್ಥ್ಯವನ್ನು ವಿಶ್ವಕ್ಕೆ  ಶ್ಪ್ರತೋರಿಸಿದೆ.

ನಾವಿಗೇಷನ್ ಸಿಸ್ಟಮ್: ಭಾರತದ ಸ್ವಂತ ನಾವಿಗೇಷನ್ ಸಿಸ್ಟಮ್, ನಾವಿಕ, ಅಭಿವೃದ್ಧಿಗೊಂಡಿದೆ. ಇದು ಸದ್ಯೋ ಭವಿಷ್ಯದಲ್ಲಿ GPS ನಂತಹ ವಿದೇಶಿ ವ್ಯವಸ್ಥೆಗಳಿಗೆ ಪರ್ಯಾಯವಾಗಿದೆ.

  ಕಳೆದ ವರ್ಷದ ಐತಿಹಾಸಿಕ ಸಾಧನೆಯ ಅರ್ಥಪೂರ್ಣ ಆಚರಣೆಗಾಗಿ ಇಸ್ರೋ ವರ್ಷ ಪೂರ್ತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಜುಲೈ ೨೬ ರಂದು ಇಸ್ರೋದ ಪ್ರಧಾನ ಕಛೇರಿ ಮಾನವಸಹಿತ ಬಾಹ್ಯಾಕಾಶ ಉಡಾವಣಾ ಕೇಂದ್ರ(HSFC-human Space Flight centre ) ದಲ್ಲಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಜಿಲ್ಲೆಯಿಂದ ಇಬ್ಬರಂತೆ ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರನ್ನು ಆಹ್ವಾನಿಸಲಾಗಿತ್ತು. ಶಿಕ್ಷಕರ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ ಶಿಕ್ಷಕರು ಮತ್ತು ಉಪನ್ಯಾಸಕರುಗಳು ‌BEL ಬಳಿಯ ಅಂತರಿಕ್ಷ ಭವನವನ್ನು ಬೆಳಗಿನ ಜಾವ ೯ ಗಂಟೆಗೆ ತಲುಪಿದೆವು. ಒಳಬರುತ್ತಿದ್ದಂತೆ ಸುರಕ್ಷಾ ಪ್ರಕ್ರಿಯೆಗಳನ್ನು ಪೂರೈಸಲಾಯಿತು. ಬಹುಶಃ ಎಲ್ಲರೂ ಮೊಬೈಲ್‌ನಲ್ಲಿ ಇಸ್ರೋದ ನೆನಪುಗಳನ್ನು ಸೆರೆ ಹಿಡಿಯುವ ಆಸೆಯನ್ನು ಹೊಂದಿದ್ದೆವು. ಸುರಕ್ಷತಾ ದೃಷ್ಟಿಯಿಂದ ಎಲ್ಲರ ಮೊಬೈಲ್‌ಗಳನ್ನು ಭದ್ತಾ ಸಿಬ್ಬಂದಿಗೆ ಹಸ್ತಾಂತರಿಸಿ ಪೆಚ್ಚಾದೆವು. ಬೆಳಗ್ಗಿನಿಂದ ಸಾಯಂಕಾಲದವರೆಗೂ ಮೊಬೈಲ್‌ ಮರೆತೇ ಬಿಟ್ಟಿದ್ದೆವು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಗೊಂಡಿತು. ಪ್ರಾರ್ಥನೆ ಮತ್ತು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಚ್‌ಎಸ್‌ಎಫ್‌ಸಿಯ ಸಹ ನಿರ್ದೇಶಕರಾದ ಶ್ರೀ ಕೆ ಕುಮಾರ್ ಎಲ್ಲರನ್ನು ಸ್ವಾಗತಿಸಿದರು.HSFC ನಿರ್ದೇಶಕರಾದ ಶ್ರೀ ದಿನೇಶ್‌ ಕುಮಾರ್‌ ಸಿಂಗ್ ಅವರಿಂದ ಉದ್ಘಾಟನಾ ಭಾಷಣದಲ್ಲಿ  ಶಿಕ್ಷಕರಿಗಾಗಿ ಏರ್ಪಡಿಸಿದ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶ್ರೀ ಶಾಂತನು ಭಟವ್ಡೇಕರ್ ಇಸ್ರೋದ ಸಾಧನೆಗಳ ಪರಿಚಯ ಮಾಡಿದರು. ಶ್ರೀ ಎನ್ ಎಸ್ ಗೋವಿಂದರಾಜು ಐಎಎಸ್, ನಿಯಂತ್ರಕರು, HFSC ತಾವು ತುಮಕೂರಿನ ಹಳ್ಳಿಯಂದರಿಂದ ಬಂದು IAS ಅಧಿಕಾರಿಯಾಗಲು ಪ್ರೇರಣೆ ನೀಡಿದ ಶಿಕ್ಷಕರನ್ನು ನೆನೆದರು.

ಸ್ಥಳೀಯ ಸಂಘಟನಾ ಸಮಿತಿ ವಲಯ-4ರ ಅಧ್ಯಕ್ಷರಾದ ಶ್ರೀ ಆರ್ ವಿ ನಾಡಗೌಡರವರು ಕನ್ನಡದಲ್ಲೇ ಇಸ್ರೋದ ಸಾಧನೆಯನ್ನು ಮೆಲುಕು ಹಾಕಿದರು. ಇಸ್ರೋ ಸಾಧನೆಗಳು ಹೇಗೆ ಜನೋಪಯೋಗಿಯಾಗಿವೆ ಎನ್ನುವುದನ್ನು ವಿವರಿಸಿದರು. ಚಂದ್ರಯಾನ-3 ರ ಮಿಷನ್‌ ಡೈರೆಕ್ಟರ್‌ ಆಗಿದ್ದ ಎಂ. ಶ್ರೀಕಾಂತ್‌ರವರು ಆ ಯೋಜನೆಯ ರೋಮಾಂಚಕಾರಿ ಆತಂಕ, ಸಂಭ್ರಮಗಳಿಂದ ಕೂಡಿದ ಕ್ಷಣಗಳನ್ನು ನಮ್ಮ ಮುಂದೆ ತೆರೆದಿಟ್ಟರು. 

ಇವೆಲ್ಲವೂ ಸಾಕಷ್ಟು ಕುತೂಹಲಗಳಿಂದ ಕೂಡಿದ ಮರೆಯಲಾಗದ ಅನುಭವಗಳು. ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಉಪಸಮಿತಿ ವಲಯ-4ರ ಅಧ್ಯಕ್ಷರಾದ ಶ್ರೀ ಕೆ ಜಿ ವಿನೋದ್ ವಂದನಾರ್ಪಣೆ ನಡೆಸಿಕೊಟ್ಟರು.

Teachers with ISRO scientists @ ISRO HQ

    ಅಪರಾಹ್ನದ ಅಧಿವೇಷನದಲ್ಲಿ ಚಂದ್ರಯಾನ -3 ರ ಪ್ರಮುಖ ರೂವಾರಿಗಳನೆನಿಸಿದ ಹಲವಾರು ವಿಜ್ಞಾನಿಗಳು ನಮ್ಮೊಂದಿಗೆ ನೇರವಾಗಿ ಸಂವಾದ ನಡೆಸಿದರು. ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ವೈವಿಧ್ಯಮಯ ಅನುಭವಗಳನ್ನು ಹಂಚಿಕೊಂಡರು. ಭಾರತೀಯ ಅಂತರಿಕ್ಷ ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿ ವಿಶೇಷವಾಗಿ ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಇದರೊಂದಿಗೆ ಇಸ್ರೋ ಬೆಳೆದು ಬಂದ ಹಾದಿ, ಚಂದ್ರಯಾನ, ಭಾರತದ ಬಾಹ್ಯಾಕಾಶ ಸಂಶೋಧನೆಯ ಕುರಿತಂತೆ 3 ಕಿರು ಚಿತ್ರಗಳನ್ನು  ವಿಶಾಲ ಪರದೆಯ ಮೇಲೆ ವೀಕ್ಷಿಸಿದೆವು. ಸಂಜೆ ಚಹ ಸೇವನೆಯ ನಂತರ ನಮ್ಮೆಲ್ಲರಿಗೂ ಇಸ್ರೋದ ವಸ್ತು ಪ್ರದರ್ಶನ ವೀಕ್ಷಿಸುವ ಅವಕಾಶ. ಇಸ್ರೋ ಬೆಳೆದು ಬಂದ ದಾರಿ, ವಿವಿಧ ರಾಕೆಟ್‌ಗಳ ಹಂತ ಹಂತದ ವಿಕಾಸ, ಮಾನವ ಸಹಿತ ಗಗನಯಾನ ಯೋಜನೆ, ಅದಕ್ಕಾಗಿ ಸಿದ್ಧ ಪಡಿಸಲಾದ ಕ್ರೂ ಮಾಡ್ಯೂಲ್‌, ಮಾನವ ಸಹಿತ ಯಾನದಲ್ಲಿ  ರಷ್ಯಾದವರು ಬಳಸಿದ ಕ್ರೂ ಮಾಡ್ಯೂಲ್‌ ಎಲ್ಲವೂ ಅದ್ಭುತಗಳೇ!!!. 


ನಾವೆಲ್ಲರೂ ಭಾರತದ ಕ್ರೂ ಮಾಡ್ಯೂಲ್‌ ಮಾದರಿಯಲ್ಲಿ ಪವಡಿಸಿ ಕೆಲವು ಕ್ಷಣಗಳವರೆಗೆ ಗಗನಯಾನಿಗಳಾದೆವು!!. 

https://pixabay.com/photos/space-capsule-apollo-program-lander-516048/

    ಈ ಬಾಹ್ಯಾಕಾಶ‌ ಕ್ಯಾಪ್ಸೂಲನ್ನು ಅಪೋಲೋ ದಲ್ಲಿ ಬಳಸಲಾಗಿತ್ತು . ಇದೇ ಬಗೆಯ ಕ್ಯಾಪ್ಸೂಲಿನಲ್ಲಿ  ಗಗನಯಾತ್ರಿಗಳು ಯಾನ ಕೈಗೊಳ್ಳುತ್ತಾರೆ. ಗಂಟೆಗಟ್ಟಲೆ, ದಿನಗಟ್ಟಲೆ ಅದೇ ಸ್ಥಿತಿಯಲ್ಲಿರಲು ಯಾನಿಗಳಿಗೆ ನೀಡುವ ತರಬೇತಿ ಎಂಬ ವೃತಾಚರಣೆ ಭೀಷಣವಾದದ್ದು. ಅಳ್ಳೆದೆಯವರಿಗೆ ಅಸಾಧ್ಯವಾದ ತರಬೇತಿ ಅದು!!! ನಭಕ್ಕೇರಿದ ಭಾರತದ ಮೊದಲ ಗಗನಯಾನಿ ಸ್ಕ್ವಾಡ್ರನ್‌ ಲೀಡರ್‌ ರಾಕೇಶ್‌ಶರ್ಮರವರು ತೊಟ್ಟ ಉಡುಪನ್ನು ಸ್ಪರ್ಷಿಸಿದೆವು. ಮೈಯಲ್ಲಿ ಪುಳಕ ! ಅದೇನೋ ಅನಿರ್ವಚನೀಯ ಆನಂದ. ಭಾವುಕ ಕ್ಷಣಗಳು!!!

                              

                      https://upload.wikimedia.org/wikipedia/commons/5/5d/Nehru_Planetarium_costume_of_Rakesh_Sharma.jpg

 ‌೧೯೮೪ ರ ಏಪ್ರಿಲ್‌ 2 ರಂದು ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ನಿಮಗೆ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತಿದೆ ಎಂದಾಗ ಬಂದ ಉತ್ತರ ಎಂತಹ ಅದ್ಭುತ “ಸಾರೇ  ಜಹಾಂ ಸೆ ಅಚ್ಛಾ ” ಭಾರತೀಯರ ಮೈನವಿರೇಳಿಸುವ ಕ್ಷಣಗಳು. ಅಲ್ಲಿನ ಯುವ ವಿಜ್ಞಾನಿಗಳು ನಮಗೆ ಹಲವಾರು ಮಾಹಿತಿ ನೀಡಿದರು. ನಾವೂ ಇಸ್ರೋದ ಫೋಟೊಗ್ರಾಫರ್‌ಗೆ ಫೋಸ್‌ ನೀಡಿದ್ದೇ ನೀಡಿದ್ದು. ಎಲ್ಲಾ ವೀಕ್ಷಿಸಿ ನಾವೂ ನಮ್ಮ ಇಸ್ರೋದ ಕೇಂದ್ರ ಕಛೇರಿಗೆ ಭೇಟಿದ ಹೆಮ್ಮೆಯೊಂದಿಗೆ, ಸಮಾಜ ವಿಜ್ಞಾನದಿಂದ ದೂರ ಸರಿಯುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದೆಡೆಗೆ ಸೆಳೆದು ಹೊಸ ಹುರುಪನ್ನು ತುಂಬುವ ಕನಸಿನೊಂದಿಗೆ ಹೊರಬಂದೆವು. ಈ ಭೇಟಿಯು ನಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಮುದ್ರೆಯೊತ್ತಿ ಬದುಕಿನ ವಿಸ್ಮರಣೀಯ ಕ್ಷಣವಾಯಿತು. 

    ಆಗಸ್ಟ್‌ 9ರಂದು ಗದಗದಲ್ಲಿ ಇಂತಹ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿನ  ಪ್ರೌಢಶಾಲಾ ಶಿಕ್ಷಕರು , ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ  ಸಂಶೋಧನೆಗೆ ಸಂಬಂಧಿಸಿದಂತೆ ಕೊಲಾಜ್‌ , ಚಿತ್ರಕಲಾ ಸ್ಪರ್ಧೆಗಳು, ವಿದ್ಯಾರ್ಥಿ - ವಿಜ್ಞಾನಿ ಸಂವಾದ, ಇಸ್ರೋ ಸಾಧನೆಯನ್ನು ಪ್ರದರ್ಶಿಸುವ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.  ಸಮೀಪದ ಶಾಲೆ ಕಾಲೇಜುಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಇಸ್ರೋದ ಭವಿಷ್ಯದ ಯೋಜನೆಗಳು

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಭವಿಷ್ಯದಲ್ಲಿ ಹಲವಾರು ಅಂತರಿಕ್ಷ ಮಿಷನ್‌ಗಳನ್ನು ರೂಪಿಸಿ ಉಡಾವಣೆ ಮಾಡಲು ಯೋಜಿಸಿದೆ. ಇದರಲ್ಲಿ ಗಗನಯಾನ ಮಿಷನ್, ಸೂರ್ಯಯಾನ ಮಿಷನ್ ಮತ್ತು ಇತರ ಗ್ರಹಗಳ ಅನ್ವೇಷಣೆ ಮಿಷನ್‌ಗಳು ಸೇರಿವೆ. ಇವು ಹಲವು ಹಂತಗಳಲ್ಲಿ ಪ್ರಗತಿಯಲ್ಲಿವೆ. ಗಗನಯಾನ ಮಿಷನ್‌ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಇದಕ್ಕೆ ಸಾಕಷ್ಟು ಸಿದ್ಧತೆ ಭರದಿಂದ ಸಾಗಿದೆ. ಆದಿತ್ಯ L-1  (Aditya-L1) ಮಿಷನ್‌ ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಕ್ಷ – ಕಿರಣ ಖಗೋಳ ವಿಜ್ಞಾನ ಅಧ್ಯಯನಕ್ಕಾಗಿ ಎಕ್ಸ್ಪೋ ಸ್ಯಾಟ್‌ (X-ray Astronomy XPoSat ) ಅನ್ನು  PSLV-C58 ಬಳಸಿ ಉಡಾವಣೆ ಮಾಡಲಾಗಿದೆ.

 ಚಂದ್ರಯಾನ-3 ಮಿಷನ್‌ನ ಮಹಾ ಯಶಸ್ಸು ಭಾರತದ ಅಂತರಿಕ್ಷ ಕಾರ್ಯಕ್ರಮದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ. ಈ ಮಿಷನ್‌ನ ಮೂಲಕ ಭಾರತವು ವಿಶ್ವದ ಅತ್ಯಂತ ಪ್ರಮುಖ ಅಂತರಿಕ್ಷ ತಂತ್ರಜ್ಞಾನವುಳ್ಳ ರಾಷ್ಟ್ರವಾಗಿದೆ.  ಅಂದು ಜನಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲದ ಈ ಬಾಹ್ಯಾಕಾಶ ಯೋಜನಗಳಿಗೇಕೆ ಹಣ ವ್ಯರ್ಥ ಮಾಡಬೇಕು ಎಂದು ಹೀಗಳೆಯುತ್ತಿದ್ದವರೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಇಸ್ರೋ ಈಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಬದಲಾಗಿರುವುದು ಇಸ್ರೋದ ವಿಜ್ಞಾನಿಗಳ ಅಸಾಧಾರಣ ಕೃತುಶಕ್ತಿ ಸೈದ್ಧಾಂತಿಕ ಗೆಲುವಿನ ದ್ಯೋತಕವಾಗಿದೆ.

ಇಸ್ರೋ ನಮ್ಮ ಜೀವನಕ್ಕೆ ಒದಗಿಸಿದ ಅನುಕೂಲತೆಗಳು ಒಂದೇ ಎರಡೇ?

ಸಂವಹನ : ಇಸ್ರೋದ ಉಪಗ್ರಹಗಳಿಂದಾಗಿಯೇ ನಾವು ದೂರದರ್ಶನ ನೋಡಬಹುದು, ಮೊಬೈಲ್‌ನ ಮೂಲಕ ಬಂಧುಮಿತ್ರರನ್ನು ಸಂಪರ್ಕಿಸಬಹುದು ಮತ್ತು ಇಂಟರ್ನೆಟ್ ಬಳಸಬಹುದು. ಈ ಎಲ್ಲಾ ಸಂವಹನ ವ್ಯವಸ್ಥೆಗಳು ಇಸ್ರೋದ ಉಪಗ್ರಹಗಳನ್ನು ಅವಲಂಬಿಸಿದೆ.

ಹವಾಮಾನ ಮುನ್ಸೂಚನೆ: ಇಸ್ರೋದ ಉಪಗ್ರಹಗಳು ಹವಾಮಾನವನ್ನು ನಿಖರವಾಗಿ ಮುನ್ಸೂಚಿಸಲು ಸಹಾಯ ಮಾಡುತ್ತವೆ. ಇದರಿಂದ ಕೃಷಿಕರು ಬೆಳೆಗಳನ್ನು ಬೆಳೆಸಲು ಮತ್ತು ಪ್ರಕೃತಿ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಕೇರಳದ ವೈನಾಡಿನ ಜಲಪ್ರಳಯ, ಕರ್ನಾಟಕದಲ್ಲಿನ ಮಹಾಮಳೆ, ಉತ್ತರ ಭಾರತದಲ್ಲಿನ ಮೇಘಸ್ಫೋಟ ಇತ್ಯಾದಿಗಳ ಸಂದರ್ಭದಲ್ಲಿ ಉಪಗ್ರಹಗಳು ನೀಡಿದ ಹವಾಮಾನ ಮುನ್ಸೂಚನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭೂಮಿಯ ಅಧ್ಯಯನ : ಇಸ್ರೋದ ಉಪಗ್ರಹಗಳು ಭೂಮಿಯ ಮೇಲ್ಮೈಯನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಇದರಿಂದ ನಾವು ನಮ್ಮ ನೈಸರ್ಗಿಕ ಸಂಪತ್ತುಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ತಿಳಿಯಬಹುದು.

 ಸಮೀಕ್ಷೆ: ಇಸ್ರೋದ ಕಾರ್ಟೋಸ್ಯಾಟ್ನಂತಹ ಉಪಗ್ರಹಗಳನ್ನು ಭೂ ಸಮೀಕ್ಷೆ ಮಾಡಲು ಬಳಸಲಾಗುತ್ತದೆ. ಇದರಿಂದ ನಾವು ನಕ್ಷೆಗಳನ್ನು ರಚಿಸಬಹುದು ಮತ್ತು ನಮ್ಮ ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬಹುದು.

      ಸಂಪರ್ಕ: ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಂಪರ್ಕ ಕಲ್ಪಿಸಲು ಇಸ್ರೋದ ಉಪಗ್ರಹಗಳು ಸಹಾಯ ಮಾಡುತ್ತವೆ.

       ವಿಪತ್ತು ನಿರ್ವಹಣೆ: ಭೂಕಂಪ, ಸುನಾಮಿ ಇತ್ಯಾದಿ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಇಸ್ರೋದ ಉಪಗ್ರಹಗಳು ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತವೆ.

ಇಸ್ರೋ ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಮ್ಮೆಯ ಸಂಸ್ಥೆಯಾಗಿದೆ. ಭಾರತೀಯ ಬಾಹ್ಯಾಕಾಶ ದಿನವು ನಮ್ಮ ದೇಶದ ಬಾಹ್ಯಾಕಾಶ ಸಾಧನೆಗಳನ್ನು ಸ್ಮರಿಸುವ ದಿನವಾಗಿದೆ. ಈ ದಿನವು ಯುವ ಪೀಳಿಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ. ಇಸ್ರೋದ ಯಶಸ್ಸು ನಮ್ಮ ದೇಶದ ಬೌದ್ಧಿಕ, ಆರ್ಥಿಕ ಸಾಮರ್ಥ್ಯಗಳ ದ್ಯೋತಕವಾಗಿದೆ.   

ಎಲ್ಲರಿಗೂ ಭಾರತೀಯ ಅಂತರಿಕ್ಷ ದಿನದ ಶುಭಾಶಯಗಳು. ಆಗಸ್ಟ್‌ 23 ರಂದು ಆಚರಿಸಲಾಗುವ ರಾಷ್ಟ್ರೀಯ ಅಂತರಿಕ್ಷ ದಿನದ ಅರ್ಥಪೂರ್ಣ ಆಚರಣೆಯನ್ನು ಯಶಸ್ವಿಯಾಗಿಸೋಣ.


2 comments: