ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, October 7, 2024

ವಿಶ್ವ ಮಾನಸಿಕ ಆರೋಗ್ಯ ದಿನ

 ವಿಶ್ವ ಮಾನಸಿಕ ಆರೋಗ್ಯ ದಿನ

                                                                                                                      ಲೇಖಕರು -ಬಿ.ಎನ್.ರೂಪ,

                                  ಸಹ ಶಿಕ್ಷಕರು

                  ಕೆಪಿಎಸ್ ಜೀವನ್ ಬಿಮಾ ನಗರ 

                             ಬೆಂಗಳೂರು ದಕ್ಷಿಣ ವಲಯ -4                                


“ಆರೋಗ್ಯವೇ ಭಾಗ್ಯ” ಈ ಹೇಳಿಕೆ ಎಷ್ಟು ಅರ್ಥಪೂರ್ಣ ಹಾಗೂ ಸಮಂಜಸವಾಗಿದೆ ಅಲ್ಲವೇ.  ಆರೋಗ್ಯ ಅನ್ನುವುದು ದೇಹಕ್ಕೆ ಮಾತ್ರ ಸೀಮಿತವಲ್ಲ ಆರೋಗ್ಯ ಎನ್ನುವುದು  ದೈಹಿಕ ,ಸಾಮಾಜಿಕ, ಭಾವನಾತ್ಮಕ ಸ್ವಾಸ್ಥತೆಯನ್ನು ಪ್ರತಿನಿಧಿಸುತ್ತದೆ .ಆದರೆ ಆರೋಗ್ಯ ಎನ್ನುವ ವ್ಯಾಖ್ಯಾನದಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಕೆಲವೇ ದಶಕಗಳ ಹಿಂದೆ ಮಾನಸಿಕ ಸ್ವಾಸ್ಥತೆ ಬಗ್ಗೆ ಯಾರು ಮಾತನಾಡುತ್ತಿರಲಿಲ್ಲ ಬಹುಶಃ ಇದಕ್ಕೆ ಸಂಬಂಧಿಸಿದ ಸಾಮಾಜಿಕ ವಿಷಯಗಳುಕಾರಣ ಆಗಿರಬಹುದು.


ಮಾನಸಿಕ ಆರೋಗ್ಯವು ಇತರರೊಡನೆ ನಾವು ಮಾನಸಿಕವಾಗಿ ಭಾವನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಹೇಗೆ ಕಾರ್ಯವನ್ನು ನಿರ್ವಹಿಸುತ್ತೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಅರಿತ ನಂತರ,  1992 ರಲ್ಲಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (WFMH) ಪ್ರತಿ ವರ್ಷ  ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ವರ್ಷದ ಥೀಮ್ ಇದಾಗಿದೆ, “ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ “.ಇದು ಜನಸಮುದಾಯ ಸಂಸ್ಥೆಗಳು, ಸಮುದಾಯಗಳ ಪ್ರಯೋಜನಕ್ಕಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗ್ಯ ಕ್ಷೇಮವನ್ನು ಹೇಗೆ ಕಾಯ್ದಿರಿಸಿಕೊಳ್ಳಬೇಕು ಎನ್ನುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಮಾನಸಿಕ ಆರೋಗ್ಯಕ್ಕೆ ಏಕೆ ಪ್ರಾಮುಖ್ಯತೆಯನ್ನು ಕೊಡಬೇಕು ?

ವಿಶ್ವದ ಪ್ರತಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ COVID-19 ನಂತರ ಇದರ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ. ಮಾನಸಿಕ  ಅಸ್ವಸ್ಥತೆಗೆ  ಹಲವಾರು ಕಾರಣಗಳಿವೆ, 

1.ಬಾಲ್ಯದಲ್ಲಿ ನಿಂದನೆ :-ದೈಹಿಕ ಅಕ್ರಮಣ, ಲೈಂಗಿಕ ಹಿಂಸೆ ,ಭಾವನಾತ್ಮಕ ನಿಂದನೆ, ನಿರ್ಲಕ್ಷತೆ ಇದು ತೀವ್ರ ಮಾನಸಿಕ ಮತ್ತು ಭಾವನಾತ್ಮಕ ಯಾತನೆಗೆ ಕಾರಣವಾಗಬಹುದು.

2. ಜೀವನ ಶೈಲಿ:- ಧೂಮಪಾನ ಮಾಡುವುದು ಮಾದಕ ವಸ್ತುಗಳ ಸೇವನೆ ಆಲ್ಕೋಹಾಲ್ ಕೆಲವು ಮಾದಕ ವಸ್ತುಗಳ ಸೇವನೆಯಿಂದಾಗಿ ಮಾನಸಿಕ  ಅಸ್ವಸ್ಥತೆಗೆ ಮಾಡಿಕೊಡಬಹುದು ಇದರಿಂದ, ಭವಿಷ್ಯದಲ್ಲಿ ಅವರು ಮಧುಮೇಹ, ಪಾಶ್ವವಾಯು, ಆತ್ಮಹತ್ಯೆ, ನಕರಾತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ .

3. ಅನುವಂಶಿಯತೆ : ಕುಟುಂಬದ ಸದಸ್ಯರಲ್ಲಿ  ಹಲವು ರೀತಿಯ ಅಸ್ವಸ್ಥತೆಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯಬಹುದು.

4. ಆಹಾರ ಶೈಲಿಯಲ್ಲಿ ಬದಲಾವಣೆ : ಅತ್ಯಂತ ಕಡಿಮೆ ಆಹಾರ ಸೇವನೆ ಅಥವಾ ಹೆಚ್ಚು ಆಹಾರ ಸೇವನೆಯನ್ನು ಮಾಡುವುದು.

5. ದೈನಂದಿನ ಕಾರ್ಯ ಚಟುವಟಿಕೆಗಳನ್ನು ಅಸಮರ್ಪಕವಾಗಿ ನಿರ್ವಹಿಸುವುದು.

6. ಏಕಾಂತವಾಗಿರುವುದಕ್ಕೆ ಹೆಚ್ಚು ಪ್ರಾಶಸ್ತತೆಯನ್ನು ನೀಡುವುದು .

7.ನಿರಂತರ ಹತಾಶಯ ಭಾವನೆ ಗೊಂದಲ, ಕೋಪ, ಚಿಂತೆ, ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದು.

8. ಸ್ನೇಹಿತ ವರ್ಗ ಕುಟುಂಬ ವರ್ಗ ಹಾಗೂ ಸಹೋದ್ಯೋಗಿಗಳೊಂದಿಗೆ ಜಗಳವನ್ನು ಮಾಡುವುದು.

9. ಸ್ವಯಂ ಹಾನಿ ಅಥವಾ ಇತರರಿಗೆ  ಹಾನಿಯನ್ನು ಉಂಟು ಮಾಡುವುದು.

 

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಈ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ:-

1. ಜೀವನದಲ್ಲಿ ವಿವಿಧ ಒತ್ತಡವನ್ನು ನಿಭಾಯಿಸಲು ಸಾಮರ್ಥ್ಯವನ್ನು ಗಳಿಸುವುದು 

2. ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬಹುದು.

3. ಕುಟುಂಬ ವರ್ಗ ಸ್ನೇಹಿತ ಬಳಗ ಸೌದ್ಯೋಗಿಗಳೊಂದಿಗೆ ಆರೋಗ್ಯಕರ ಸಂಬಂಧವನ್ನು ಏರ್ಪಡಿಸಿಕೊಳ್ಳಬಹುದು.

4. ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ನಿರ್ವಹಿಸಬಹುದು.

5. ಆರೋಗ್ಯವನ್ನು ಕಾಪಾಡಲು ಇದು ಸಹಾಯಮಾಡುತ್ತದೆ.

6.  ಉತ್ತಮ ಕಾರ್ಯ ತತ್ಪರತೆಯನ್ನು ಮೆರೆದು ಉತ್ತಮ ಫಲಿತಾಂಶವನ್ನು ನೀಡಬಹುದಾಗಿದೆ.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? 

1. ನಿಯಮತವಾಗಿ ವ್ಯಾಯಾಮವನ್ನು ಅಭ್ಯಾಸ ಮಾಡುವುದು.

2. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು  ಹಾಗೂ ನಿರ್ದಿಷ್ಟ ಸಮಯದಲ್ಲಿ ನಿದ್ರೆಗೆ ಆದ್ಯತೆಯನ್ನು ನೀಡುವುದು .

3. ಧ್ಯಾನವನ್ನು ಮಾಡುವುದು.

4. ಜೀವನದ ಸವಾಲುಗಳನ್ನು ನಿಭಾಯಿಸಲು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.

5. ಪ್ರೀತಿ ಪಾತ್ರರ ಜೊತೆ ಸಂಪರ್ಕದಲ್ಲಿರುವುದು.

6. ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳಿಗೆ ದೃಷ್ಟಿ ಕೋನಗಳಿಗೆ ಪ್ರಾಮುಖ್ಯತೆಯನ್ನು ನೀಡುವುದು.

7. ಆತ್ಮೀಯರೊಂದಿಗೆ ತಾವು ಕೊಡುತ್ತಿರುವ ಯಾತನೆಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಳ್ಳುವುದು ಹಾಗೂ  ಹಂಚಿಕೊಳ್ಳುವುದು.

8. ಸೂಕ್ತ  ವೈದ್ಯಾಧಿಕಾರಿ ಗಳೊಂದಿಗೆ ಆಪ್ತ ಸಮಾಲೋಚನೆ ನಡೆಸುವುದು ಅವರನ್ನು ಭೇಟಿ ನೀಡಿ ಸಮಸ್ಯೆಗಳನ್ನು   ಹಂಚಿಕೊಂಡು ಪರಿಹಾರವನ್ನು ಕಂಡುಕೊಳ್ಳುವುದು.

 ಮಾನಸಿಕ ಅಸ್ವಸ್ಥತೆಯಲ್ಲಿ  ಸೌಮ್ಯತೆಯಿಂದ ಹಿಡಿದು ಆತಂಕದ ಅಸ್ವಸ್ಥತೆಗಳನ್ನು ನೋಡಬಹುದಾಗಿದೆ. ಸಾಮಾಜಿಕ ಆತಂಕದ ಅಸ್ವಸ್ಥತೆ, ಬೇರ್ಪಡಿಕೆ ಆತಂಕದ ಅಸ್ವಸ್ಥತೆ ಹಾಗೂ ಇತರೆ .

ಖಿನ್ನತೆ :- ಖಿನ್ನತೆಯು ಸಾಮಾನ್ಯ ಮನಸ್ಥಿತಿಯ ಏರಳಿತಗಳಿಗಿಂತ ಭಿನ್ನವಾಗಿದೆ. ಗುಣಲಕ್ಷಣಗಳು ಏಕಾಗ್ರತೆಯ ಕೊರತೆ ಅತಿಯಾದ ಅಪರಾಧ ಅಥವಾ ಕಡಿಮೆ ಸ್ವಾಭಿಮಾನದ ಭಾವನೆಗಳು. ಭವಿಷ್ಯದ ಬಗ್ಗೆ ಹತಾಶೆ, ಸಾಯು ಅಥವಾ ಆತ್ಮಹತ್ಯೆ ಬಗ್ಗೆ ಆಲೋಚನೆಗಳು, ನಿದ್ರೆ ಇಲ್ಲದಿರುವುದು, ಹಸಿವು ಅಥವಾ ತೂಕದಲ್ಲಿ ಬದಲಾವಣೆಗಳು, ಇತ್ಯಾದಿ. ವಯಸ್ಸು ಹಾಗೂ ತೀವ್ರತೆಯನ್ನು ಅವಲಂಬಿಸಿ ಔಷಧಿಗಳನ್ನು ಸಹ ಪರಿಗಣಿಸಬಹುದಾಗಿದೆ .

ಬೈ ಪೋಲಾರ್  ಡಿಸ್ಆರ್ಡರ್ :-ಅವಧಿಗಳೊಂದಿಗೆ ಖಿನ್ನತೆಯ ಕಂತುಗಳನ್ನು ಅನುಭವಿಸುತ್ತಾರೆ. ಕಿರಿಕಿರಿ ಹೆಚ್ಚಿದ ಚಟುವಟಿಕೆ ಅಥವಾ ಶಕ್ತಿ ಹೆಚ್ಚಿದ ಮಾತುಗಾರಿಕೆ ಓಟದ ಆಲೋಚನೆಗಳು, ಹೆಚ್ಚಿನ ಸ್ವಾಭಿಮಾನ ನಿದ್ರೆ ಅಗತ್ಯತೆ ಕಡಿಮೆಯಾಗುವುದು ಚಂಚಲ  ವರ್ತನೆ. ಇಂಥವರು ಆತ್ಮಹತ್ಯೆಯ ಅಪಾಯವನ್ನು  ಹೊಂದಿರುತ್ತಾರೆ.

ಪೋಸ್ಟ್ ಟ್ರಮಾಟಿಕ್  ಸ್ಟ್ರೆಸ್ ಡಿಸ್ಆರ್ಡರ್:-  ಆಘಾತಕಾರಿ ಘಟನೆಯನ್ನು ವರ್ತಮಾನದಲ್ಲಿ ಅನುಭವಿಸುವುದು, ನೆನಪುಗಳು, ದುರ್ಘಟನೆಯ ನಂತರ ಉಂಟಾಗುವ ಮಾನಸಿಕ ಅಸ್ವಸ್ಥತೆಯನ್ನು ಇದು ಪ್ರತಿನಿಧಿಸುತ್ತದೆ. ಆ ದುರ್ಘಟನೆಯನ್ನು ಪುನಃ ಪುನಃ ನೆನಪಿಸಿಕೊಳ್ಳುವುದರಿಂದ ಕಾರ್ಯ ನಿರ್ವಹಣೆಯಲ್ಲಿ ಗಮನಾರ್ಹವಾದ ಇಳಿಕೆ ಕಂಡು ಬರುತ್ತದೆ.

ಸ್ಕಿಜೋ ಪ್ರೇನಿಯ:- ಗ್ರಹಿಕೆಯಲ್ಲಿ ಗಮನದ ಇಳಿಕೆ, ನಡುವಳಿಕೆಯಲ್ಲಿ ಬದಲಾವಣೆ, ನಿರಂತರ ಭ್ರಮೆ, ಅಸ್ವಸ್ಥವಾಗಿರುವ ಚಿಂತನೆ, ನಡುವಳಿಕೆಗಳಲ್ಲಿ ತೀವ್ರ ಆಂದೋಲನವನ್ನು ಒಳಗೊಂಡಿರಬಹುದು.

 ಆಹಾರ ಸೇವನೆಯ ಅಸ್ವಸ್ಥತೆಗಳು:- ಸುಮಾರು 14 ಮಿಲಿಯನ್ ಜನರು ತಿನ್ನುವ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅನೋರೆಕ್ಸಿಯಾ ನರ್ವೋಸಾ, ಬುಲಿಮಿಯಾ ನರ್ವೋಸಾದಂತಹ ಆಹಾರದ ಅಸ್ವಸ್ಥತೆಗಳು, ಅಸಹಜವಾದ ಆಹಾರ ಸೇವನೆ, ಜೊತೆಗೆ ಪ್ರಮುಖ  ದೇಹದ ತೂಕದ ಬಗ್ಗೆ ಹಾಗೂ ಆಕಾರದ ಬಗ್ಗೆ ವಿಪರೀತ ಕಾಳಜಿ ಯನ್ನು ಒಳಗೊಂಡಿರುತ್ತದೆ . ಬುಲಿಮಿಯಾದಲ್ಲಿ ವಸ್ತುವಿನ ಬಳಕೆ, ಆತ್ಮಹತ್ಯೆ ಮತ್ತು ಆರೋಗ್ಯದ ತೊಂದರೆಯನ್ನು ಹೊಂದಿರುತ್ತಾರೆ.

  ನ್ಯುರೋ ಡೆವಲಪ್ಮೆಂಟಲ್ ಡಿಸ್ಆರ್ಡರ್ಸ್:- ಈ ಅಸ್ವಸ್ಥತೆಯಲ್ಲಿ ಭೌತಿಕ ಬೆಳವಣಿಗೆ ಅಸ್ವಸ್ಥತೆಗಳು, ಗಮನದ ಕೊರತೆ, ಆಟಿಸಂ ,ಹೈಪರ್ ಆಕ್ಟಿವ್ ಡಿಸ್ಆರ್ಡರ್ ಇವುಗಳನ್ನು ಒಳಗೊಂಡಿದೆ .

ಹೀಗೆ ಇನ್ನೂ ಹಲವಾರು ಬಗೆಯ ಮಾನಸಿಕ ಅಸ್ವಸ್ಥತೆಗಳಿಂದ ಹಲವಾರು ಜನರು ಜನಸಮುದಾಯಗಳು ಬಳಲುತ್ತಿವೆ.  ನಮಗೆ  ದೈಹಿಕ ಆರೋಗ್ಯದಲ್ಲಿ ಏರುಪೇರಾದರೆ ಆರೋಗ್ಯ ಸರಿ ಇಲ್ಲದಿದ್ದರೆ  ಸೂಕ್ತ ತಜ್ಞರಲ್ಲಿ ಹೋಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಿಕೊಂಡು ಔಷದೋಪಚಾರಗಳನ್ನು ಮಾಡಿಕೊಳ್ಳುತ್ತೇವೆ ಹಾಗೆ ಮಾನಸಿಕ ಅಸ್ವಸ್ಥತೆಯ ಗುಣಲಕ್ಷಣಗಳು ಕಾಣಿಸಿಕೊಂಡಾಗ ಯಾವುದೇ ಭಯ, ಆತಂಕ ,ಕೋಪ ಹಿಂಜರಿಕೆ, ಭಯ, ಸಾಮಾಜಿಕ, ಆರ್ಥಿಕ ಕಾರಣಗಳನ್ನು  ಬದಿಗಿಟ್ಟು ಸೂಕ್ತ ಮಾನಸಿಕ ವೈದ್ಯರಲ್ಲಿಗೆ ಹೋಗಿ ತಪಾಸಣೆಯನ್ನು ಮಾಡಿಸಿಕೊಂಡು ಚಿಕಿತ್ಸೆಗಳನ್ನು ಮಾಡಿಕೊಳ್ಳುವುದರಿಂದ ಈ ಮಾನಸಿಕ ಅಸ್ವಸ್ಥತೆಯಿಂದ ಮುಕ್ತಿಯನ್ನು ಪಡೆಯಬಹುದು. ಮಾನಸಿಕ ಸ್ವಸ್ಥತೆಯೇ ಆರೋಗ್ಯದ ಮೂಲ ಗುಟ್ಟು ಹಾಗೂ ಸಕಾರಾತ್ಮಕ ಸಮಾಜದ ಬೆಳವಣಿಗೆಯ ಮೈಲುಗಲ್ಲು ಎಂದು ಹೇಳಬಹುದಾಗಿದೆ.

 ಧನಾತ್ಮಕ ಸಕರಾತ್ಮಕ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಆರೋಗ್ಯಕರ ಮಾನಸಿಕ ಸ್ವಸ್ಥತೆಯನ್ನು ಉಳ್ಳ ಸಮುದಾಯವನ್ನು ನಾವು ಹೊಂದಿರಬೇಕು. ನಾವೆಲ್ಲರೂ ಸೇರಿ ಸ್ವಾಸ್ಥ ಸಮಾಜದ ಹರಿಕಾರರಾಗಬೇಕು. ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಲು ಈ ನಿಟ್ಟಿನಲ್ಲಿ ಅಗತ್ಯ ಚಟುವಟಿಕೆಗಳನ್ನು ಕೈಗೊಂಡು  ಕಾರ್ಯಪ್ರವೃತ್ತರಾಗಬೇಕು.


                  




No comments:

Post a Comment