ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, October 7, 2024

ರಾಜ್ಯ ಪ್ರಶಸ್ತಿ ಪುರಸ್ಕೃತ ಗಣಿತ-ವಿಜ್ಞಾನ ಶಿಕ್ಷಕ ರಂಗನಾಥ್‌ ಜಿ

ರಾಜ್ಯಪ್ರಶಸ್ತಿ ಪುರಸ್ಕೃತ ಗಣಿತ-ವಿಜ್ಞಾನ ಶಿಕ್ಷಕ ರಂಗನಾಥ್ ಜಿ

                                               ಲೇ:     ಶ್ರೀ.ರಾಮಚಂದ್ರ ಭಟ್‌ ಬಿ.ಜಿ. 


ಗಣಿತ, ವಿಜ್ಞಾನ ವಿಷಯಗಳು ಅನಾದಿ ಕಾಲದಿಂದಲೂ ಮನುಷ್ಯನಲ್ಲಿ ಆಲೋಚನಾ ಶಕ್ತಿ ಉದ್ದೀಪಿಸುವ, ತರ್ಕ-ವಿಶ್ಲೇಷಣೆ ಹಾಗೂ ಅಂತರ್‌ ದೃಷ್ಟಿಗಳನ್ನು ಬಯಸುವ ಅಧ್ಯಯನ ಶಿಸ್ತು ಎನಿಸಿವೆ. ಬಹಳಷ್ಟು ಜನರಿಗೆ ಗಣಿತ ಅನೇಕ ಬಾರಿ ಗಗನ ಕುಸುಮ ಎಂದೆನಿಸಬಹುದು. ಮಕ್ಕಳಿಗೆ ಇಂತಹ ತರ್ಕಬದ್ಧ ವಿಷಯ ಬೋಧನೆಯೂ ಅಷ್ಟೇ ಸವಾಲಿನದ್ದಾಗಿದೆ. ಹೊಸ ವಿಧಾನಗಳ ನಿರಂತರ ಅನ್ವೇಷಣೆಯ ಅಗತ್ಯತೆ ಶಿಕ್ಷಕರಿಗಿದೆ. 
ನವ್ಯ ಬೊಧನಾ ವಿಧಾನಗಳನ್ನು ಮೈಗೂಡಿಸಿ ಅಳವಡಿಸಿಕೊಂಡರೆ, ವಿಷಯ ಬೋಧನೆ ಸಲೀಸಾಗಿ ಮಗು ತನ್ನದೇ ವೇಗದಲ್ಲಿ ಕಲಿಕೆಯನ್ನು ಕಟ್ಟಿಕೊಳ್ಳಲು ನಡೆಸಬೇಕಾದ ಸುಗಮಗಾರಿಕೆಯೂ ಸರಾಗವೆನಿಸುತ್ತದೆ. ಇದಕ್ಕೆ ಸಾಕಷ್ಟು ಮಾನಸಿಕ ಸಿದ್ಧತೆಯೂ ಬೇಕು. ಇಂತಹ ಅಪರೂಪದ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಮೇಳೈಸಿದ ಗಾರುಡಿಗ ಶಿಕ್ಷಕ ಬಂಧುವೇ ೨೦೨೪ ನೇ ಸಾಲಿನ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ರಂಗನಾಥ್‌ ಜಿ. 
                                                                                            
ಶ್ರೀಯುತ ರಂಗನಾಥ್ ಜಿ ಯವರಿಗೆ ವ್ಯಾಸಂಗದ ಅವಧಿಯಿಂದಲೂ ಗಣಿತ ವಿಜ್ಞಾನಗಳು ಕುತೂಹಲ ಕೆರಳಿಸುವ ವಿಷಯಗಳು. ನಾಡಿನ ಹೆಮ್ಮೆಯ ಶಿಕ್ಷಣ ತಜ್ಞ , ಭೌತಶಾಸ್ತ್ರಜ್ಞ, ಲೇಖಕ, ಉಪಕುಲಪತಿ ಎಂಬೆಲ್ಲ ಸ್ಫೂರ್ತಿಯ ಸ್ರೋತ ಮಾನ್ಯ ಶ್ರೀ ನರಸಿಂಹಯ್ಯನವರ ಶಿಷ್ಯತ್ವ ಅಂದ ಮೇಲೆ ಕೇಳ ಬೇಕೆ ? ಅವರ ಚುಂಬಕ ವ್ಯಕ್ತಿತ್ವದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದುಂಟೇ?

ನ್ಯಾಷನಲ್‌ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲೇ ವೈಜ್ಞಾನಿಕ ಮನೋಭಾವದ ಕಿಡಿ ಹೊತ್ತಿತು. ಶಿಕ್ಷಕ ಹುದ್ದೆಗೆ ಬಂದ ಮೇಲಂತೂ ಪ್ರಾಯೋಗಿಕವಾಗಿ ಮಕ್ಕಳಲ್ಲಿ ಈ ಗುಣವನ್ನು ಮೂಡಿಸುವ ಕಾರ್ಯ ನಡೆಯುತ್ತಲೇ ಬಂತು.
೧೬ ವರ್ಷಗಳ ಸೇವೆಯಲ್ಲಿ ಸಾಧನೆಯ ಹರವಿನ ಮಜಲುಗಳು ಹಲವಾರು.  ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಛತ್ರಖಾನೆ ಚಂದಾಪುರ ಆನೇಕಲ್ ತಾಲ್ಲೂಕುಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶ್ರದ್ಧಾವಾನ್ ಲಭತೇ ಜ್ಞಾನಂ ಎನ್ನುವುದನ್ನೇ ಮೂಲ ಮಂತ್ರವನ್ನಾಗಿಸಿ ಕೊಂಡಿದ್ದಾರೆ. ಎಳೆಯ ಮಕ್ಕಳ ಕೂತೂಹಲವನ್ನೇ ಬಂಡವಾಳವಾಗಿಸಿ ಅದರ ಮೇಲೆ ವಿಜ್ಞಾನದ ಮಹಲನ್ನು ಕಟ್ಟುವಾಸೆ ಅವರದ್ದು. ನೈಸರ್ಗಿಕ ವಿಸ್ಮಯಗಳ ಹಿಂದಿನ ತರ್ಕವನ್ನು ಮಕ್ಕಳಿಗೆ ಅರಿವಾಗುವಂತೆ ಮನಸ್ಸಿನಲ್ಲೊಂದು ಚಿತ್ರವನ್ನು ಮೂಡಿಸುವ ವಿನೂತನ ಕಲಿಕೆಯ ವಿಧಾನಗಳನ್ನು ಅವರು ರೂಢಿಸಿಕೊಂಡಿದ್ದಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಿಕ್ಷಕರಾಗಿ, ಮೂಢನಂಬಿಕೆಗಳ ವಿರುದ್ಧ ತೊಡೆ ತಟ್ಟಿ, ಸಾಮಾಜಿಕ ಕಳಕಳಿಯ ಹೋರಾಟಗಾರರಾದ ಶ್ರೀ ನರೇಂದ್ರ ನಾಯಕ್ಶ್ರೀ ಹುಲಿಕಲ್ ನಟರಾಜ್ ರವರಿಂದ ಶಿಷ್ಯದೀಕ್ಷೆ ಪಡೆದು  ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಷ್ಟೇ ಅಲ್ಲದೇ ಪೋಷಕರು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ ಧನಾತ್ಮಕ ಸಾಮಾಜಿಕ ಚಿಂತನೆಗಳನ್ನು ಮೂಡಿಸುವ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

 
     ಕಳೆದೊಂದು ದಶಕದಿಂದ ನಾನವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ರಾಜ್ಯ ಮಟ್ಟದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ   ಶಿಕ್ಷಕರಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ. ಪ್ರತಿ ವರ್ಷ ವಿಜ್ಞಾನ ದಿನಾಚರಣೆ , ಗಣಿತ ದಿನಾಚರಣೆಗಳಲ್ಲಿ ಮಕ್ಕಳಿಂದಲೇ ಮಾಡಿದ TLM ಗಳನ್ನು ಬಳಸಿ ವಸ್ತುಪ್ರದರ್ಶನಗಳನ್ನು ಮಾಡುತ್ತಾ ಮಕ್ಕಳಿಗೆ ಪ್ರಾಯೋಗಿಕವಾಗಿ ಮಾಡಿ ಕಲಿ ತತ್ವವನ್ನು ಬೋಧಿಸುತ್ತಿದ್ದಾರೆ. ಇದರ ಜೊತೆಗೆ ನವ್ಯ ವಿಧಾನಗಳಾದ ICT ಬಳಕೆ,  ಒರಿಗಾಮಿ ಹಾಗೂ ಕಿರಿಗಾಮಿಗಳನ್ನು ಬಳಸಿ ಗಣಿತದ ಅನೇಕ ಮಾದರಿಗಳನ್ನು ತಯಾರಿಸಿ ಕ್ಲಿಷ್ಟವೆನಿಸುವ ಕಲಿಕಾಂಶಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಬೋಧಿಸುತ್ತಿದ್ದಾರೆ.

        ಶ್ರೀಯುತರು ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಹಲವಾರು ಸಂಘ ಸಂಸ್ಥೆಗಳ ವೈಜ್ಞಾನಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರೀಯುತರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಂಟಿ ಕಾರ್ಯದರ್ಶಿಯಾಗಿ, ಭಾರತ ಜ್ಞಾನವಿಜ್ಞಾನ ಸಮಿತಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿ, ವಿಜ್ಞಾನ ಬಿಂದು, NATIONAL COUNCIL OF TEACHERS SCIENTIST'S ಬೆಂಗಳೂರು ದಕ್ಷಿಣ ಜಿಲ್ಲೆಯ ನಿರ್ದೇಶಕರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ವಿಜ್ಞಾನ ಜಾಥಾ, ಕರ್ನಾಟಕ ವಿಜ್ಞಾನ ಪ್ರಚಾರ ಆಂದೋಲನ, ಚಿಣ್ಣರ ವಿಜ್ಞಾನ ಮೇಳಗಳು, ಖಗೋಳ ದರ್ಶನ, ಸೂರ್ಯೋತ್ಸವ, ಶುಕ್ರ ಸಂಕ್ರಮಣ, ವಿಜ್ಞಾನ ಶಿಬಿರಗಳು, ಇನ್ಸ್ಪೈರ್‌ ಅವಾರ್ಡ್. NNMS ಪರೀಕ್ಷೆಗಳು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ತಮ್ಮ ವಿದ್ಯಾರ್ಥಿಗಳೊಂದಿಗೆ ಭಾಗಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ ಮತ್ತು DSERTಲ್ಲಿ ಹಲವು ವರ್ಷಗಳಿಂದ ಪಠ್ಯ ಪುಸ್ತಕಗಳ ಪರಿಷ್ಕರಣೆ, ಶಿಕ್ಷಕರ ವೃತ್ತಿಪರ ಅಭಿವೃದ್ಧಿ (TPD) ಯೋಜನೆಯ ಗುರುಚೇತನ ತರಬೇತಿ ಸಾಹಿತ್ಯ ರಚನೆಯಲ್ಲಿ ಪಾಲ್ಗೊಂಡು,  ರಾಜ್ಯವ್ಯಾಪಿ ಅನೇಕ ತರಬೇತಿಗಳನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿಕೊಟ್ಟಿದ್ದಾರೆ.

ಬಾಲವಿಜ್ಞಾನ, ವಿಜ್ಞಾನಶಿಲ್ಪಿ, ಟೀಚರ್ ಮುಂತಾದ ವಿಜ್ಞಾನ ಮಾಸಪತ್ರಿಕೆಗಳಿಗೆ ವೈಜ್ಞಾನಿಕ ಚಿಂತನೆಯ ಹಲವಾರು ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ISRO, INDIAN INSTITUTE OF ASTROPHYSICS, NATIONAL CHILDRENS SCIENCE CONGRESS, EPISTOMY OF INFOSYSYS, IISC OPEN DAY ಮೊದಲಾದ ಕಾರ್ಯಕ್ರಮಗಳಿಗೆ ತಮ್ಮ ಶಾಲಾ ಮಕ್ಕಳನ್ನು ಕರೆದೊಯ್ದು ವಿಜ್ಞಾನ ಪ್ರಪಂಚದ ಅರಿವನ್ನು ಮಕ್ಕಳಲ್ಲಿ ಮೂಡಿಸಿದ್ದಾರೆ. ಯುನೈಟೆಡ್ ಕೌನ್ಸಿಲ್, ಪುಟಾಣಿ ವಿಜ್ಞಾನ, ವಿಜ್ಞಾನ ರಸಪ್ರಶ್ನೆಗಳು, ರೇಡಿಯೋ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕರ್ನಾಟಕ ಜ್ಞಾನ ಆಯೋಗ, ಪ್ರತಿಷ್ಠಿತ ಖಾನ್ ಅಕಾಡೆಮಿಯಲ್ಲೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ

ಶ್ರೀಯುತರ ಅಪಾರ ಸಾಮಾಜಿಕ, ಶೈಕ್ಷಣಿಕ ಸೇವೆಗಳು ಎಲ್ಲ ಶಿಕ್ಷಕರಿಗೆ ಮಾದರಿ ಎನಿಸಿವೆ. ರಂಗನಾಥ್‌.ಜಿಯವರ ಸೇವೆಗಳನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಪ್ರಶಸ್ತಿಏಷ್ಯಾ ಬುಕ್ ಆಪ್ ರೆಕಾಡ್ ಪ್ರಶಸ್ತಿಡಾ.ಪುನೀತ್ ರಾಜ್ ಕುಮಾರ್ ಸ್ಮಾರಕ ಪುನೀತ ಪ್ರಶಸ್ತಿಕನ್ನಡ ರತ್ನ ಪ್ರಶಸ್ತಿಗಳು ಅವರ ಮುಡಿಗೇರಿವೆ. ಈಗ ಇವೆಲ್ಲಕ್ಕೂ ಕಲಶವಿಟ್ಟಂತೆ ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿಗೆ ಭಾಜನರಾದ ಸ್ನೇಹಿತ ಶ್ರೀರಂಗನಾಥ್‌.ಜಿಯವರ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿ ರಾಜ್ಯದ ಶಿಕ್ಷಣ ರಂಗಕ್ಕೆ ಇನ್ನಷ್ಟು ಉತ್ತಮ ಕೊಡುಗೆ ನೀಡುವಂತೆ ಪ್ರೇರೇಪಿಸಲಿ ಎಂದು ಹಾರೈಸೋಣ.

 

1 comment: