ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, May 4, 2025

ಕೆನ್ನಾಯಿಗಳ ನಾಯಿಪಾಡು

 ಕೆನ್ನಾಯಿಗಳ ನಾಯಿಪಾಡು

ಕೆನ್ನಾಯಿಗಳು, ಭಾರತದ ಅರಣ್ಯಗಳಲ್ಲಿರುವ ವಿಚಿತ್ರ ಬಗೆಯ ಮಾಂಸಹಾರಿಗಳು. ಅದರಲ್ಲೂ ದಕ್ಷಿಣ ಭಾರತದ ಅರಣ್ಯಗಳಲ್ಲಿರುವ, ಅಳಿವಿನಂಚಿನಲ್ಲಿರುವ ವಿಶಿಷ್ಟ ಪ್ರಾಣಿವರ್ಗ. ಹುಲಿ ಮತ್ತು ಚಿರತೆಗಳು ಏಕಾಂಗಿಯಾಗಿ ಬೇಟೆಯಾಡಿದರೆ ಸಿಂಹ ಮತ್ತು ಕಾಡುನಾಯಿಗಳು ಗುಂಪಿನಲ್ಲಿ ಬೇಟೆಯಾಡುತ್ತವೆ. ಕೆನ್ನಾಯಿಗಳಿಗೆ ಸಿಳ್ಳುನಾಯಿಗಳು ಎಂಬ ಉಪನಾಮವೂ ಇರಲು ಕಾರಣ ಅವು ಸಂಜ್ಞೆಗಳನ್ನು ಕೊಡುವಾಗ ಮನುಷ್ರು ಸಿಳ್ಳೆ ಹಾಕಿದಂತೆ ಕೂಗುವುದು. ಇವುಗಳು ಬಲಿಪ್ರಾಣಿಯನ್ನು ಹಿಡಿದೆಳೆದು ಸೀಳಿ ತಿನ್ನುವುದರಿಂದಲೂ ಸೀಳುನಾಯಿ ಎಂತಲೂ ಕರೆಯುವರು. ಇವುಗಳ ಹಿಂಡನ್ನು ಪ್ಯಾಕ್‌ ಎಂದು ಕರೆಯುವರು.

ಭಾರತದ ಅರಣ್ಯಗಳಲ್ಲಿರುವ ಕೆನ್ನಾಯಿಗಳು ಕೆಂಚು ಅಂದರೆ ಕಿತ್ತಳೆ ಬಣ್ಣವನ್ನು ಪ್ರಮುಖವಾಗಿ ಹೊಂದಿವೆಯಾದ್ದರಿಂದ ಮತ್ತು ಬೇರೆ ಬ‍ಣಬಣ್ಣವನ್ನು ಹೊಂದಿಲ್ಲದಿರುವುದರಿಂದ ಕೆನ್ನಾಯಿಗಳು ಎಂಬ ಹೆಸರು ಇದೆ. ಆಫ್ರಿಕದ ಕಾಡುಗಳಲ್ಲಿರುವ ಕಾಡುನಾಯಿಗಳು ಬಿಳಿ, ಕಂದು ಮತ್ತು ಕಪ್ಪು ಬಣ್ಣದ ಮಚ್ಚೆಗಳನ್ನು ಹೊಂದಿವೆ. ಹೀಗೆ ಪ್ರಪಂಚದಲ್ಲಿ ಎರಡು ಬಗೆಯ ಕಾಡುನಾಯಿಗಳನ್ನು ನೋಡಬಹುದು. ಕೆನ್ನಾಯಿಗಳು ಶುದ್ಧ ಮಾಸಹಾರಿಗಳು. ಊರಿನ ಸಾಕುನಾಯಿಗಳು ಮಾಂಸಹಾರಿಗಳಾದರೂ ಮನುಷ್ಯನ ಜೊತೆಯ ಸಹಬಾಳ್ವೆಯಿಂದ ಮಿಶ್ರಹಾರಿಗಳಾಗಿಬಿಟ್ಟಿವೆ! ಕೆನ್ನಾಯಿಗಳ ಗುಂಪಿನಲ್ಲಿ ಸಾಮಾನ್ಯವಾಗಿ ೬ ರಿಂದ ೮ ಅಥವಾ ೧೦ ನಾಯಿಗಳು ಇರುತ್ತವೆ.

ಇವುಗಳ ಬೇಟೆಯ ಕ್ರಮ ಮಾತ್ರ ಇತರ ಮಾಂಸಹಾರಿಗಳಿಗಿಂತ ವಿಭಿನ್ನ! ಬೇರೆ ಮಾಂಸಹಾರಿಗಳು ಬಗ್ಗಿಕೊಂಡು, ತೆವಳುತ್ತಾ, ಹೊಂಚುಹಾಕಿಯೋ ಬೇಟೆ ಆಡಿದರೆ ಇವು ಬಲಿಪ್ರಾಣಿಯನ್ನು ಅಟ್ಟಿಸಿಕೊಂಡು ಸುಸ್ತುಮಾಡಿ ಹಿಡಿಯುತ್ತವೆ. ಒಮ್ಮೆ ಅಟ್ಟಿಸಿಕೊಂಡು ಹೊರಟರೆ ಮುಗಿಯಿತು. ಬಲಿಪ್ರಾಣಿಯ ಕಥೆ ಮುಗಿಯಿತು ಎಂತಲೇ ಅರ್ಥ. ಬಲಿಪ್ರಾಣಿ ಕಂಡೊಡನೆ ಇವು ಅಷ್ಟಷ್ಟು ದೂರಕ್ಕೆ ವಿಭಜನೆಯಾಗಿ ಬೇಟೆಗಾಗಿ ಕಾಯುತ್ತವೆ. ಮನುಷ್ಯರ ರಿಲೇ ಓಟದಂತೆ ಒಂದಾದ ಮೇಲೆ ಒಂದರಂತೆಯೊ ಎರಡರಂತೆಯೋ ಓಡಿ ಬಲಿಪ್ರಾಣಿಯನ್ನು ಸುಸ್ತುಮಾಡಿಬಿಡುತ್ತವೆ. ಅದರ ಓಟ ಕ್ಷೀಣಿಸಿದಾಗ ಅದರ ಕಾಲುಗಳನ್ನು, ಮೂತಿಯನ್ನು ಹಿಡಿದುಬಿಡುತ್ತವೆ. ಬಲಿಪ್ರಾಣಿ ಏನಾದರೂ ನೀರಿನಲ್ಲಿ ಹೋಗಿ ನಿಂತರೂ ಬಿಡದೆ ನೀರಿನ ಆವಾರದ ಸುತ್ತಲೂ ಅತ್ತಕಡೆಯಿಂದ ಇತ್ತಕಡೆಗೆ ಮತ್ತು ಇತ್ತಕಡೆಯಿಂದ ಅತ್ತಕಡೆಗೆ ಓಡಾಡಿಕೊಂಡು ಪ್ರಾಣಿ ತಪ್ಪಿಸಿಕೊಳ್ಳದಂತೆ ಕೋಟೆ ಕಟ್ಟಿಬಿಡುತ್ತವೆ. ಆಗ ಯಾವುದಾದರೊಂದು ನಾಯಿ ನೀರಿಗೆ ದುಮುಕಿ ಬಲಿಪ್ರಾಣಿಯನ್ನು ಸಮೀಪಿಸುತ್ತಾ ಅದನ್ನು ನೀರಿನಿಂದ ಹೊರತರಲು ಪ್ರಯತ್ನಿಸುತ್ತದೆ. ಬಲಿಪ್ರಾಣಿ ದಡಕ್ಕೆ ಸಮೀಪಿಸಿದಂತೆ ಉಳಿದ ಕೆಲವು ಕಾಡುನಾಯಿಗಳು ನೀರಿಗೆ ದುಮುಕಿ ಅದನ್ನು ಸುತ್ತುವರಿದು ಕಚ್ಚಿ ದಡದ ಮೇಲಕ್ಕೆ ಎಳೆದು ತರುತ್ತವೆ.

ಸಾಮಾನ್ಯವಾಗಿ ಇವುಗಳು ಚುಕ್ಕಿಜಿಂಕೆ, ಕಾಡುಕುರಿ, ಕಡವೆ ಮುಸುವ, ಮೊಲ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಇತರ ಮಾಂಸಹಾರಿಗಳು ಬಲಿಪ್ರಾಣಿಯನ್ನು ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ ಸಾಯಿಸಿ ತದನಂತರ ಮಂಸವನ್ನು ಭಕ್ಷಿಸಿದರೆ ಕಾಡುನಾಯಿಗಳು ಜೀವಂತ ಇರುವಾಗಲೇ ಮಾಂಸವನ್ನು ಹರಿದು ತಿನ್ನುತ್ತಾ ಸಾಯಿಸಿಬಿಡುತ್ತವೆ! ಹುಲಿ ಮತ್ತು ಚಿರತೆಗಳು ಪ್ರಾಣಿಯನ್ನು ಕೊಂದು ಎರಡು-ಮೂರು ದಿನ ತಿಂದರೆ ಕಾಡುನಾಯಿಗಳು ಕೊಂದ ಗಂಟೆಯೊಳಗೆ ಮುಕ್ಕಿಬಿಡುತ್ತವೆ. ಒಂದೊಂದು ನಾಯಿಗೂ ಮೂರು-ನಾಲ್ಕು ಕೆ.ಜಿ ಎಂದರೂ ಉಳಿಯುವುದಾದರೂ ಎಲ್ಲಿ! ಕೇವಲ ದಪ್ಪ ದಪ್ಪ ಮೂಳೆ ಮಾತ್ರ! ಚರ್ಮವನ್ನೂ ಬಿಡದಂತೆ ತಿಂದು ಮುಗಿಸಿಬಿಡುತ್ತವೆ.

ಇನ್ನು ಸಂತಾನೋತ್ಪತ್ತಿ ವಿಷಯಕ್ಕೆ ಬರುವುದಾದರೆ ಫ್ಯಾಮಿಲಿ ಪ್ಲ್ಯಾನಿಂಗ್‌ ಬಹಳ ಕಟ್ಟುನಿಟ್ಟು. ಒಂದು ಪ್ಯಾಕ್‌ ನಲ್ಲಿ ಕೇವಲ ಒಂದು ಹೆಣ್ಣು ಮತ್ತು ಒಂದು ಗಂಡಿಗೆ ಮಾತ್ರ ಅವಕಾಶ. ಅವುಗಳನ್ನು ಆಲ್ಫಾ ಫೀಮೇಲ್‌ ಮತ್ತು ಆಲ್ಫಾ ಮೇಲ್‌ ಎಂದು ಕರೆಸಿಕೊಳ್ಳುವ ಇವು ಮಾತ್ರ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಉಳಿದವುಗಳಿಗೆ ನಿಷಿದ್ಧ! ಅವು ಕೂಡಿದ ನಂತರ ಆರೇಳು ಮರಿಗಳಿಗೆ, ಬಂಡೆಗಳ ನಡುವೆ ಅಥವಾ ಗುಹೆಯಂತಹ ಜಾಗದಲ್ಲಿ ಜನ್ಮನೀಡುತ್ತದೆ. ಆ ಮರಿಗಳೋ ಹುಟ್ಟಿದ ತಕ್ಷಣ ಕಣ್ಣುಬಿಟ್ಟಿರುವುದಿಲ್ಲ. ಎರಡು ಮೂರು ದಿನಗಳ ನಂತರ ಕಣ್ಣುಬಿಟ್ಟು ಓಡಾಡಲು ಆರಂಭಿಸುತ್ತವೆ. ಮರಿಗಳು ಬೆಳೆಯುವವರೆಗೂ ಎಚ್ಚರಿಕೆಯಿಂದ ಕಾಪಾಡುವ ಜವಾ‍ಬ್ದಾರಿ ಇತರ ಸದಸ್ಯರದ್ದು. ಬೇಟೆಯಾಡಲು ತೆರಳಿದಾಗ ಅನತಿ ದೂರದಲ್ಲಿ ತಾಯಿ ಅಥವಾ ಇನ್ನೊಂದು ಕಾದು ಕುಳಿತುಕೊಳ್ಳುತ್ತದೆ. ಏಕೆಂದರೆ ನರಿಯೋ, ಚಿರತೆಯೋ ಅವುಗಳನ್ನು ತಿಂದುಬಿಡಬಹುದು. ಚಿಕ್ಕ ಮರಿಗಳಾಗಿದ್ದಾಗ ತಾಯಿಯ ಹಾಲು ಕುಡಿದು ಬೆಳೆಯುವ ಇವು ಕ್ರಮೇಣ ಮಾಂಸದ ಚೂರುಗಳನ್ನು ತಿಂದು ಬೆಳೆಯುತ್ತವೆ. ನಾಯಿಗಳು ಬೇಟೆಯಾಡಿ ತಿಂದು ಜೀರ್ಣವಾಗುವ ಮೊದಲೇ ಓಡಿಬಂದು ಮಾಂಸವನ್ನು ಮರಿಗಳ ಮುಂದೆ ಕಕ್ಕುತ್ತವೆ. ಇದನ್ನು ತಿಂದು ಬೆಳೆದು ನಂತರ ಪ್ಯಾಕ್‌ನ ಒಂದು ಭಾಗವಾಗುತ್ತವೆ ಇಲ್ಲದಿದ್ದರೆ ಬೇರೆ ಪ್ಯಾಕ್‌ಗೆ ಸೇರಿಕೊಳ್ಳುತ್ತವೆ. ಅದರೆ ಅದು ಅಷ್ಟು ಸುಲಭವಲ್ಲ. ಪ್ಯಾಕ್‌ನಲ್ಲಿ ನಾಯಿಗಳ ಸಂಖ್ಯೆ ಕಡಿಮೆ ಇರಬೇಕು ಅಥವಾ ಬೇಟಯಾಡುವ ಕ್ಷಮತೆ ಕಡಿಮೆ ಇರಬೇಕು. ಹಾಗಿದ್ದಾಗ ಮಾತ್ರ ಇತರ ನಾಯಿಗಳು ಬೇರೆ ನಾಯಿಗಳನ್ನು ಸೇರಿಸಿಕೊಳ್ಳುತ್ತವೆ.

ಭಾರತದಲ್ಲಿ ಇವುಗಳ ಸಂಖ್ಯೆ ತೀರಾ ಕಡಿಮೆಯಾಗಲು ಪ್ರಮುಖ ಕಾರಣ ಆವಾಸದ ಕುಗ್ಗುವಿಕೆ. ಇದರಿಂದ ಬಲಿಪ್ರಾಣಿಗಳು ಕಡಿಮೆಯಾಗುವುದರಿಂದ ಇವುಗಳು ಅಳಿವಿನಂಚಿನಲ್ಲಿ ಬಂದು ನಿಂತಿವೆ. ಈಗ ಕಾಡಿನ ಮದ್ಯದಲ್ಲಿರುವ ಹಢ್ಲುಗಳನ್ನು ಸರ್ವೆ ಮಾಡಿ ಆದಿವಾಸಿಗಳಿಗೆ ಹಂಚಿದರೆ ಮತ್ತಷ್ಟು ಸಂಕಷ್ಟ ಒದಗುವುದರಿಂದ ಮುಂದೆ ಕಾಡುಪ್ರಾಣಿಗಳನ್ನು ಚಿತ್ರಪಟದಲ್ಲಿ ಮಾತ್ರ ನೋಡಬಹುದು ಅಷ್ಟೆ. ಯಾರೊಬ್ಬರೂ ಕಾಡಿನ ಆರ್ತನಾದವನ್ನು ಕೇಳಿಸಿಕೊಳ್ಳದೇ ಇರುವುದು, ಕಾಡಿನ ಸಂರಕ್ಷಣೆಗೆ ಒತ್ತು ಕೊಡುವುದಕ್ಕಿಂತ ಹಣಮಾಡಿಕೊಳ್ಳುವ ಮಾರ್ಗಗಳಿಗೆ ಚಿಂತಿಸುತ್ತಿರುವುದು ದುರ್ದೈವದ ಸಂಗತಿ.


ಲೇಖಕರು ಶ್ರೀ ಕೃಷ್ಣ ಚೈತನ್ಯ 

ವಿಜ್ಙಾನ ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು 





No comments:

Post a Comment