ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, June 4, 2025

"ಜೀವಾಮೃತ ಆಹಾರದ ಸುರಕ್ಷತೆಯೇ ನಮ್ಮೆಲ್ಲರ ಹೊಣೆ"

"ಜೀವಾಮೃತ ಆಹಾರದ ಸುರಕ್ಷತೆಯೇ ನಮ್ಮೆಲ್ಲರ ಹೊಣೆ" 

✍️ಲೇಖನ: ಬಸವರಾಜ ಎಮ್ ಯರಗುಪ್ಪಿ

ಸಾ.ಪೊ ರಾಮಗೇರಿ ತಾ|| ಲಕ್ಷ್ಮೇಶ್ವರ ಜಿಲ್ಲಾ ಗದಗ

ದೂರವಾಣಿ: 9742193758

ಮಿಂಚಂಚೆ basu.ygp@gmail.com. 

ಜೂನ್ 07-ವಿಶ್ವ ಆಹಾರ ಸುರಕ್ಷತಾ ದಿನ ತನ್ನಿಮಿತ್ತ ವಿಶೇಷ ಲೇಖನ

“ಜಗತ್ತಿನಲ್ಲಿ ತುಂಬಾ ಹಸಿದಿರುವ ಜನರಿದ್ದಾರೆ, ದೇವರು ಅವರಿಗೆ ರೊಟ್ಟಿಯ ರೂಪದಲ್ಲಿ ಕಾಣಿಸುವುದಿಲ್ಲ.”ಎಂದು ಮಹಾತ್ಮ ಗಾಂಧಿ ಹೇಳಿದ ನುಡಿ ಅಕ್ಷರಶಃ ಸತ್ಯ ಹಾಗೂ ಇಂದಿಗೂ ಪ್ರಸ್ತುತವಾಗಿದೆ.ಏಕೆಂದರೆ ಹಸಿವು ನೀಗಿಸಲು ಮುಖ್ಯವಾಗಿ ಆಹಾರದ ಅವಶ್ಯಕತೆ ಇರುತ್ತದೆ. ಅದನ್ನು ಪಡೆದುಕೊಳ್ಳುವ ಮುನ್ನ ಸಾಕಷ್ಟು ಪರಿಶ್ರಮಪಟ್ಟು ದುಡಿಯಬೇಕು.ಆಗ ಮಾತ್ರ ರೊಟ್ಟಿ ಸಿಗಲು ಸಾಧ್ಯ. ಉತ್ತಮ ನಾಳೆಗಾಗಿ ಸುರಕ್ಷಿತ ಆಹಾರ ಸೇವನೆ ಎನ್ನುವುದು ನಮ್ಮ ಆಶಯವಾಗಬೇಕಾಗಿದೆ.

ಆಹಾರವು ನಮ್ಮ ದೇಹದಲ್ಲಿನ ಶಕ್ತಿಯ ವೇಗವರ್ಧಕವಾಗಿ ಬೆಳವಣಿಗೆಯನ್ನು ಉಳಿಸಿಕೊಳ್ಳಲು ನಮ್ಮ ದೇಹದಲ್ಲಿನ ಎಲ್ಲಾ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್ ಅನ್ನು ನೀಡುತ್ತದೆ. ಆ ಮೂಲಕ ನಾವು ಹೆಚ್ಚು ಹುಮ್ಮಸ್ಸಿನಿಂದ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ. ಆಹಾರ ಸೇವನೆಯ ಬಗೆಗಿನ ಸುರಕ್ಷತೆ, ಆಹಾರ ಭದ್ರತೆ, ಆರೋಗ್ಯ ಮತ್ತು ಉತ್ತಮ ಆಹಾರ ಸೇವನೆಗೆ ಪ್ರೇರೇಪಿಸುವ ಸಲುವಾಗಿ ಪ್ರತಿವರ್ಷ ಜೂನ್ 07 ರಂದು "ವಿಶ್ವ ಆಹಾರ ಸುರಕ್ಷತಾ" ದಿನವನ್ನು ಆಚರಿಸಲಾಗುತ್ತದೆ.

ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಿ, ಆಹಾರದ ಕೊರತೆ ಪತ್ತೆ ಹಚ್ಚಿ  ಪರಿಹಾರ ಕಂಡುಕೊಂಡು ಮಾನವನ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಆರ್ಥಿಕವಾಗಿ ಗಮನ ಸೆಳೆಯುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. 

#ಇತಿಹಾಸ:

ವಿಶ್ವ ಆರೋಗ್ಯ ಸಂಸ್ಥೆಯು ಐದು ವರ್ಷದೊಳಗಿನ ಮಕ್ಕಳು ಮತ್ತು ಕಡಿಮೆ ಆದಾಯವನ್ನು ಹೊಂದಿರುವ ದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಕಂಡುಬರುತ್ತಿರುವ ಆಹಾರ ಸಮಸ್ಯೆಗಳನ್ನು ಗುರುತಿಸಿ, 2018ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವೆಂದು ಘೋಷಿಸಿತು. ವಿಶ್ವ ಆರೋಗ್ಯ ಸಂಸ್ಥೆಯು ಆಹಾರದ ಕೊರತೆಯಿಂದ ಹರಡುವ ರೋಗದ ಹೊರೆ ಕಡಿಮೆ ಮಾಡಲು ಆಹಾರ ಸುರಕ್ಷತೆಗಾಗಿ ಜಾಗತಿಕ ಪ್ರಯತ್ನಗಳನ್ನು ಬಲಪಡಿಸುವ ನಿರ್ಣಯವನ್ನು ಅಂದು ಅಂಗೀಕರಿಸಿತು.

#ಆಚರಣೆಯ ಹಿಂದಿನ ಮಹತ್ವವೇನು..?:

ವಿಶ್ವ ಆಹಾರ ಸುರಕ್ಷತಾ ದಿನವು ಆಹಾರದ ಕೊರತೆ ಮತ್ತು ಅದರ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಆಹಾರದ ಅಭಾವ ಪತ್ತೆಹಚ್ಚಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.ಆಹಾರ ಸುರಕ್ಷತೆ, ಮಾನವನ ಆರೋಗ್ಯ, ಆರ್ಥಿಕ ಯೋಗಕ್ಷೇಮ, ಕೃಷಿ, ಮಾರುಕಟ್ಟೆ ಪ್ರವೇಶ, ಪ್ರವಾಸೋದ್ಯಮ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದು. ಮತ್ತೊಂದೆಡೆ, ವಿಶ್ವ ಆಹಾರ ಸುರಕ್ಷತಾ ದಿನದ ಚಟುವಟಿಕೆಗಳು

ಕ್ರಿಯಾಶೀಲ-ಆಧಾರಿತವಾಗಿದ್ದು, ಜಾಗತಿಕ ಆಹಾರ ಸುರಕ್ಷತೆಯ ಜಾಗೃತಿಯನ್ನು ಉತ್ತೇಜಿಸಲಾಗುತ್ತದೆ. ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುವ ಸಲುವಾಗಿ ಎಲ್ಲಾ ಜನರ ಆರೋಗ್ಯಕರ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರಕ್ಕಾಗಿ ಆಹಾರ ಸುರಕ್ಷತೆಯು ಮೂರು ಆಯಾಮ ಹೊಂದಿದ್ದು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಿದೆ. ಅವುಗಳೆಂದರೆ ಆಹಾರ ಲಭ್ಯತೆ, ಆಹಾರದ ಗುಣಮಟ್ಟ ಮತ್ತು ಸುರಕ್ಷತೆ. ಆಹಾರ ಸುರಕ್ಷತೆಯಲ್ಲಿ ಹಣಕಾಸು ಪ್ಕ್ಕಾರಮುಖ ಪಾತ್ರವಹಿಸುತ್ತದೆ. ಇದರಲ್ಲಿ ಸಾಕಷ್ಟು ಸುರಕ್ಷಿತ ಮತ್ತು ಆರೋಗ್ಯಕರ ಆಹಾರಕ್ಕೆ ಸುಲಭವಾಗಿ ಸುಸ್ಥಿರ ಪ್ರವೇಶವನ್ನು ಹೊಂದುವ ಹಕ್ಕು ಎಲ್ಲರಿಗೂ ಇದೆ. ಆದಾಗ್ಯೂ,  ಆಹಾರವನ್ನು ಮಾನವನ ಆರೋಗ್ಯಕ್ಕೆ ಧಕ್ಕೆ ತರದ ರೀತಿಯಲ್ಲಿ ರಕ್ಷಿಸಬೇಕು. ಆಹಾರ ಸುರಕ್ಷತೆಯು ಭೌತಿಕ, ರಾಸಾಯನಿಕ ಮತ್ತು ಜೈವಿಕಹಾನಿಗಳಿಂದ ಮುಕ್ತವಾಗಿರಬೇಕು ಎಂಬುದು ನಮ್ಮ ಗುರಿ ಉದ್ದೇಶವಾಗಬೇಕು.

ಒಟ್ಟಾರೆಯಾಗಿ “ನಿಮ್ಮ ಆಹಾರವು ನಿಮ್ಮ ಔಷಧಿಯಾಗಲಿ ಮತ್ತು ನಿಮ್ಮ ಔಷಧವು ನಿಮ್ಮ ಆಹಾರವಾಗಲಿ.” ಎಂದು ಹಿಪ್ಪೊಕ್ರೇಟ್ಸ್ ಹೇಳಿದ ಹಾಗೆ ಜನರ ಸೇವಿಸುವ ಆಹಾರದ ಪೌಷ್ಠಿಕಾಂಶದ ಬಗ್ಗೆ ಕಾಳಜಿಯಿಂದ ಇರಲು ಮತ್ತು ಸುರಕ್ಷಿತ ಆಹಾರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವ ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಮನುಷ್ಯನೂ ಭೂಮಿಯ ಮೇಲೆ ತನ್ನ ಅಸ್ತಿತ್ವಕ್ಕಾಗಿ ಆಹಾರ, ನೀರು, ಗಾಳಿ ಮತ್ತು ಬಟ್ಟೆಯ ಮೇಲೆ ಅವಲಂಬನೆಯನ್ನು ಹೊಂದಿರುತ್ತಾನೆ. ಹಾಗೆಯೆ ಆಹಾರವು ನಮ್ಮ ದೇಹದಲ್ಲಿನ ಶಕ್ತಿಯ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಆಹಾರವು ನಮ್ಮ ದೇಹದ ಬೆಳವಣಿಗೆಗೆ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಪೂರೈಸುವ ಮೂಲಭೂತ ಘಟಕವಾಗಿ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.

No comments:

Post a Comment