ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, September 4, 2025

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಧುಸೂದನ್ ಕೆ. ಎಸ್.

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಧುಸೂದನ್ ಕೆ. ಎಸ್ - ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಕೊಡುವ ಶಿಕ್ಷಕ                                                 ಲೇಖನ : ರಂಗನಾಥ್ ಜಿ

 ರಾಜ್ಯ ಪ್ರಶಸ್ತಿ ವಿಜೇತರು, GHPS ಚಂದಾಪುರ



ಮೈಸೂರು ಜಿಲ್ಲೆಯ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕರಾದ ಆತ್ಮೀಯ ಸ್ನೇಹಿತರಾದ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀಯುತ ಮಧುಸೂದನ್ ಕೆ. ಎಸ್. ಅವರಿಗೆ ಈ ಬಾರಿಯ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ದೊರೆತಿದೆ. ಕರ್ನಾಟಕದಿಂದ ಒಬ್ಬನೇ ಶಿಕ್ಷಕರಾಗಿ ಈ ಗೌರವವನ್ನು ಗಳಿಸಿರುವುದು ಹಾಗೂ ಹಿಂದಿನ ವರ್ಷ ನಾನೂ ಅವರೊಂದಿಗೆ ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಶಿಕ್ಷಕ ವೃತ್ತಿಯತ್ತ ಪಯಣ

ಬಾಲ್ಯದಿಂದಲೇ ಬೋಧನೆಗೆ ಆಸಕ್ತಿ ಹೊಂದಿದ್ದ ಮಧುಸೂದನ್ ಅವರು, “ವಿದ್ಯಾರ್ಥಿಗಳೊಂದಿಗೆ ಕಲಿಯುತ್ತಾ, ಬದುಕುತ್ತಾ ಅವರಿಗೆ ಜ್ಞಾನ ಹಂಚುವುದು ನನ್ನ ಕನಸಾಗಿತ್ತು. ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಸಂಕಲ್ಪವೇ ನನ್ನನ್ನು ಶಿಕ್ಷಕನನ್ನಾಗಿ ಮಾಡಿತು” ಎಂದು ಹೇಳುತ್ತಾರೆ.

ವೃತ್ತಿಯ ಪರಿಕಲ್ಪನೆ

ಅವರ ದೃಷ್ಟಿಯಲ್ಲಿ ಶಿಕ್ಷಕ ವೃತ್ತಿ ಎಂದರೆ ಕೇವಲ ಪಾಠ ಹೇಳಿಕೊಡುವುದಲ್ಲ. ಬದಲಾಗಿ ಮೌಲ್ಯಗಳು, ಜೀವನ ಕೌಶಲ್ಯಗಳು ಮತ್ತು ಆತ್ಮವಿಶ್ವಾಸ ತುಂಬುವ ಜವಾಬ್ದಾರಿಯುತ ಧರ್ಮ. “ಶಿಕ್ಷಕನು ಸಮಾಜದ ಭವಿಷ್ಯ ನಿರ್ಮಾಣ ಮಾಡುವ ಶಿಲ್ಪಿ” ಎಂಬುದೇ ಅವರ ನಂಬಿಕೆ.

ನವೀನ ಪ್ರಯೋಗಗಳ ಹಾದಿ

ಸಾಂಪ್ರದಾಯಿಕ ಪಾಠದ ಗಡಿಯನ್ನು ದಾಟಿ ಅವರು ಶಾಲೆಯಲ್ಲಿ ಐಒಟಿ ಲ್ಯಾಬ್ ಅನ್ನು ನಿರ್ಮಿಸಿದ್ದಾರೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್, ಡ್ರೋನ್‌ಗಳು, ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ ಮೊದಲಾದ ತಂತ್ರಜ್ಞಾನಗಳಲ್ಲಿ ಅನುಭವಾತ್ಮಕ ಕಲಿಕೆಯ ಅವಕಾಶ ಒದಗಿಸಿದ್ದಾರೆ.
ಟ್ಯಾಬ್ಲೆಟ್ ಆಧಾರಿತ ಕಲಿಕೆ, ಕೈಯಾರೆ ಮಾಡುವ ಪ್ರಯೋಗಗಳು ಮತ್ತು STEM ಶಿಕ್ಷಣವನ್ನು ಮಕ್ಕಳಿಗೆ ಹತ್ತಿರ ಮಾಡುವ ಕಾರ್ಯದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

ಪವಿತ್ರ ವೃತ್ತಿಯ ಪ್ರಾಮುಖ್ಯತೆ

“ಬೋಧನೆ ಒಂದು ತಪಸ್ಸು. ವಿದ್ಯಾರ್ಥಿಯ ಜೀವನವನ್ನು ಬದಲಾಯಿಸುವ ಶಕ್ತಿ ಶಿಕ್ಷಕರಲ್ಲಿ ಅಡಗಿದೆ. ಆ ಶಕ್ತಿಯನ್ನು ಸದುಪಯೋಗಪಡಿಸಿಕೊಂಡಾಗ ಶಿಕ್ಷಕ ವೃತ್ತಿಯ ಪಾವಿತ್ರ್ಯ ಅರಳುತ್ತದೆ” ಎಂದು ಮಧುಸೂದನ್ ಹೇಳಿದ್ದಾರೆ.

ಶಿಕ್ಷಕರು ಎದುರಿಸುತ್ತಿರುವ ಸವಾಲುಗಳು

ಆಡಳಿತಾತ್ಮಕವಾಗಿ ದಾಖಲೆ ಕೆಲಸದ ಒತ್ತಡ, ನೈತಿಕವಾಗಿ ಸಮಾಜದ ನಿರೀಕ್ಷೆಗಳು, ಆರ್ಥಿಕವಾಗಿ ಅಸಮಾನತೆ, ಸಾಮಾಜಿಕವಾಗಿ ಪ್ರತಿಷ್ಠೆಗೆ ಧಕ್ಕೆಯಾದ ಘಟನೆಗಳು – ಇವೆಲ್ಲವೂ ಇಂದಿನ ಶಿಕ್ಷಕರ ಸವಾಲುಗಳು ಎಂದು ಅವರು ವಿವರಿಸುತ್ತಾರೆ.

ಸವಾಲುಗಳ ಮಧ್ಯೆಯೂ ಉತ್ತಮ ಶಿಕ್ಷಕರಾಗುವುದು ಹೇಗೆ?

“ಸಮಸ್ಯೆಗಳನ್ನು ಮೀರಿ ನವೀನತೆ ತಂದು, ತಂತ್ರಜ್ಞಾನವನ್ನು ಬಳಸಿಕೊಂಡು, ಮಕ್ಕಳ ಅಗತ್ಯಗಳಿಗೆ ತಕ್ಕಂತೆ ಬೋಧನೆ ಮಾಡಿದಾಗ ಮಾತ್ರ ನಾವು ಉತ್ತಮ ಶಿಕ್ಷಕರಾಗಬಹುದು. ತಾಳ್ಮೆ, ನೈತಿಕತೆ, ಪ್ರಾಮಾಣಿಕತೆ – ಇವೆಲ್ಲವೂ ಶಿಕ್ಷಕರ ಬಲ” ಎಂದು ಅವರು ಅಭಿಪ್ರಾಯಪಡುತ್ತಾರೆ.

ಧನ್ಯತೆಯ ಕ್ಷಣ

“ವಿದ್ಯಾರ್ಥಿ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗುವುದೇ ಶಿಕ್ಷಕನಿಗೆ ಸಿಗುವ ದೊಡ್ಡ ಧನ್ಯತೆ. ರಾಷ್ಟ್ರಮಟ್ಟದ ಪ್ರಶಸ್ತಿ ನನಗೆ ದೊರೆತ ಕ್ಷಣ, ನನ್ನ ವಿದ್ಯಾರ್ಥಿಗಳ ಸಾಧನೆಗೆ, ನನ್ನ ಪ್ರಯೋಗಗಳಿಗೆ ದೊರೆತ ಮಾನ್ಯತೆ ಎನ್ನುವ ಭಾವನೆ ತುಂಬಿತು. ಇದೇ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ” ಎಂದು ಮಧುಸೂದನ್ ಹಂಚಿಕೊಂಡರು.


ಸವಿಜ್ಞಾನ ತಂಡ ಈ ಬಾರಿಯ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಮಧುಸೂದನ್‌ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. 


No comments:

Post a Comment