ಜೇನ್ ಎಂಬ ಚಿಂಪಾಂಜಿಗಳ ಪಾಲಿನ ದೇವತೆ !!!
ಲೇಖಕರು :
ರಾಮಚಂದ್ರ ಭಟ್ ಬಿ.ಜಿ.
ವಿಜ್ಞಾನ ಶಿಕ್ಷಕರು
ಅದು ಅಂತಿಂಥ ಕದನವಲ್ಲ
! ಬರೋಬ್ಬರಿ ೪ ವರ್ಷಗಳ ಕಾಲ ನಡೆದ ಯುದ್ಧ!! ಅಲ್ಲಿ ಎರಡು ಚಿಂಪಾಂಜಿ ಗುಂಪುಗಳ ನಡುವೆ ಒಂದು ಸಮುದಾಯ
ಸಂಪೂರ್ಣ ನಾಶವಾಗುವವರೆಗೂ ನಡೆದ ಘನಘೋರ ಕದನ!!! ಬಹುಶಃ ಮಾನವರಂತೆ, ಇವುಗಳೂ ಇತಿಹಾಸ ಬರೆಯಲು ಕಲಿತಿದ್ದರೆ
ಅದೂ ದಾಖಲಾಗಬಹುದಾದ ಕದನ !!! ಇದಕ್ಕೆ ಸಾಕ್ಷಿಯಾಗಿದ್ದು ಗೊಂಬೆ ಸ್ಟ್ರೀಮ್ ರಾಷ್ಟ್ರೀಯ ಉದ್ಯಾನ.
ಇದೇನು ಯಾವುದೋ ವಿಜ್ಞಾನದ fiction ಕಥೆಯನ್ನು ಹೇಳ ಹೊರಟಿದ್ದೇನೆ ಎಂದುಕೊಂಡಿರಾ? ಅಂದು ಜೇನ್ ಅದೆಷ್ಟೇ ಹೇಳಿದರೂ ವಿಜ್ಞಾನಿಗಳೂ ನಂಬಲು ಸಿದ್ಧರಿರಲಿಲ್ಲ!!!
ಜೇನ್ ಪದವಿಯನ್ನೇ ಪಡೆಯದ ಸಂಶೋಧಕಿ ಹಾಗಾಗಿ ಒಂದು ಬಗೆಯ ತಾತ್ಸಾರ ಜನರಲ್ಲಿತ್ತು. ಆದರೆ ಇಂತಹ ಜೇನ್‌ರ
ಸಾಧನೆ ಮಾನವಕುಲವೇ ಬೆರಗುಗಣ್ಣುಗಳಿಂದ ನೋಡುವಂತದ್ದು.
ಚಿಂಪಾಂಜಿಗಳ
ಸಮುದಾಯಗಳೂ ಮಾನವರಂತೆ ಕೆಲವೊಮ್ಮೆ
ಹಿಂಸಾತ್ಮಕ ಹಾಗೂ ದೀರ್ಘಕಾಲದ ಸಂಘರ್ಷಗಳಲ್ಲಿ ತೊಡಗುತ್ತವೆ. ಇದರಲ್ಲೇ ಅತ್ಯಂತ ಪ್ರಸಿದ್ಧವಾದ
ಉದಾಹರಣೆ ಗೊಂಬೆ ಚಿಂಪಾಂಜಿ ಯುದ್ಧ (ನೆನಪಿರಲಿ -ಗೊಂಬೆ ಎನ್ನುವುದೊಂದು ಸ್ಥಳ!!),
ಇದು 1974 ರಿಂದ 1978ರ ತನಕ
ಟಾಂಜಾನಿಯಾ(Gombe Stream National Park, Tanzania)ದಲ್ಲಿ ನಡೆದ ನಾಲ್ಕು ವರ್ಷದ ಭೂಪ್ರದೇಶ
ಸಂಬಂಧಿ ಸಂಘರ್ಷವಾಗಿತ್ತು. ಈ ಸಂಘರ್ಷದಲ್ಲಿ ಒಂದು ಸಮುದಾಯವೇ ಸಂಪೂರ್ಣವಾಗಿ ನಾಶವಾಯಿತು
ಎಂದರೆ ನೀವು ನಂಬಲೇ ಬೇಕು. ಇಂತಹ “ಯುದ್ಧಗಳು” ಸಾಮಾನ್ಯವಾಗಿ ಗಂಡು
ಚಿಂಪಾಂಜಿಗಳ ಮಾರಕ ಆಕ್ರಮಣವನ್ನು ಒಳಗೊಂಡಿರುತ್ತವೆ. ಅಧಿಕಾರ, ಸಂಪನ್ಮೂಲಗಳು
ಮತ್ತು ಪ್ರದೇಶದ ಸ್ವಾಮಿತ್ವಕ್ಕಾಗಿ ನಡೆಯುವ ಈ ಹೋರಾಟಗಳಲ್ಲಿ, ತಮ್ಮದೇ
ಗುಂಪಿನ ಸದಸ್ಯರು ಹಾಗು ಬೇರೆ ಗುಂಪಿನ ಸದಸ್ಯರ ಹತ್ಯೆಗಳು ಸಂಭವಿಸುತ್ತವೆ. ಇಂತಹ
ಅಪೂರ್ವವೆನಿಸಿದ ಚಿಂಪಾಂಜಿಗಳ ಯುದ್ಧದ ಸಂಶೋಧಕಿಯೇ 2025ರ ಅಕ್ಟೋಬರ್ 1
ರಂದು ಕ್ಯಾಲಿಫೋರ್ನಿಯಾದಲ್ಲಿ ತಮ್ಮ 91ನೇ
ವಯಸ್ಸಿನಲ್ಲಿ ನಿಧನರಾದ ಬ್ರಿಟಿಷ್
ಪ್ರೈಮ್ಯಾಟಾಲಜಿಸ್ಟ್ ಡೇಮ್ ಜೇನ್ ಗುಡಾಲ್ (1934–2025). ಇದನ್ನು ಮೊದಲು ಕೇಳುತ್ತಿದ್ದಂತೆ ನಮ್ಮ ನೆಲದ
ವಿಜ್ಞಾನಿ ಕೆ.ಎನ್ ಗಣೇಶಯ್ಯನವರು ಸಸ್ಯಗಳಲ್ಲೂ ದಾಯಾದಿ ಮತ್ಸರ ಅದರ ಫಲಶೃತಿಯಾಗಿ ತಮ್ಮ ಜೊತೆಗೆ
ಹುಟ್ಟಿದವರನ್ನೇ ನಾಶಗೈಯಲೆತ್ನಿಸುವುದನ್ನು ಸಂಶೋಧಿಸಿರುವುದು ನೆನಪಾಯಿತು. ಕುತೂಹಲ ಕೆರಳಿದರೆ
“ಸಸ್ಯ ಸಗ್ಗ” ವನ್ನು ಓದಿ. ಹಾಗೆಯೇ ನನ್ನ
ಒರಾಂಗುಟಾನ್ ಲೇಖನವನ್ನೂ ಓದಬಹುದು.
ಡಾ. ಬೆನ್ ಗಾರೋಡ್‌ರಂತಹ ವಿಜ್ಞಾನಿಗಳು ಹೇಳುವಂತೆ, "ಐನ್‌ಸ್ಟೈನ್ ಭೌತಶಾಸ್ತ್ರಕ್ಕೆ ಏನು ಮಾಡಿದರೋ, ಜೇನ್ ಜೀವಶಾಸ್ತ್ರಕ್ಕೆ ಅದನ್ನೇ ಮಾಡಿದಳು!" ಇದೊಂದು ವಾಕ್ಯ ಆಕೆಯ ಸಾಧನೆಯನ್ನು ಸಾರಿ ಹೇಳುತ್ತದೆ. ಒಮ್ಮೆ, ಜೇನ್ ಒಂದು ವೈದ್ಯಕೀಯ ಸಂಶೋಧನಾ ಲ್ಯಾಬ್‌ಗೆ ಭೇಟಿ ನೀಡಿದಾಗ, ಒಂಟಿಯಾಗಿ 15 ವರ್ಷಗಳ ಕಾಲ ಪಂಜರದಲ್ಲಿ ಬಂಧಿಯಾಗಿ ಸರಿಯಾದ ಆಹಾರವಿಲ್ಲದೆ ಮೂಳೆ ಚಕ್ಕಳವಾಗಿದ್ದ ಚಿಂಪಾಂಜಿ ಜೋ-ಜೋ ತನ್ನ ಕಣ್ಣೀರನ್ನು ಒರೆಸಿತಂತೆ! "ಇದು ಕೇವಲ ವಾನರನಲ್ಲ, ಇದೂ ಒಂದು ಮಿಡಿವ ಹೃದಯ!" ಎಂದು ಜೇನ್ ತೋರಿಸಿದರು.
ಜೇನ್‌ರ ಕತೆ ಆರಂಭವಾಗುವುದು ಇಂಗ್ಲೆಂಡ್‌ನ ನಗರ ಲಂಡನ್‌ನಲ್ಲಿ. ತಂದೆ ವ್ಯಾಪಾರೋದ್ಯಮಿ, ತಾಯಿ ಲೇಖಕಿ. ಕೇವಲ ಐದು ವರ್ಷದವಳಿದ್ದಾಗ, ಕೋಳಿಗೂಡಿನಲ್ಲಿ ಗಂಟೆಗಟ್ಟಲೆ ಕುಳಿತು ಕೋಳಿಗಳು ಮೊಟ್ಟೆ ಇಡುವುದನ್ನು ಗಮನಿಸುತ್ತಿದ್ದಳು!
“ಇದೆಂತಹ ಕುತೂಹಲ!” ಎಂದು ತಾಯಿ ಆಶ್ಚರ್ಯಪಟ್ಟರೂ, ಜೇನ್‌ರ ಕನಸು
ದೊಡ್ಡದಿತ್ತು. ಜೇನ್
ಪುಟ್ಟ ಬಾಲಕಿಯಾಗಿದ್ದಾಗ, ತಂದೆ ಮಾರ್ಟಿಮರ್ ಗುಡಾಲ್‌ಗೆ ಅದೇ ಸ್ಫುರಣೆಯಾಯ್ತೋ ಗೊತ್ತಿಲ್ಲ . ಆತ ಮಗಳಿಗೆ ಟೆಡ್ಡಿ
ಬೇರ್ ಗೊಂಬೆ ತಂದುಕೊಡುವ ಬದಲು ಜುಬಿಲಿ ಎಂಬ ಚಿಂಪಾಂಜಿ ಆಟಿಕೆಯನ್ನು
ಕೊಟ್ಟರು!. ಇದು ಆಕೆಗೆ ಪ್ರಾಣಿಗಳ ಮೇಲೆ ಪ್ರೀತಿಯನ್ನು ಹುಟ್ಟುಹಾಕಿತು ಎಂದು ಅವರು ಹೇಳುತ್ತಾ, "ನನ್ನ ತಾಯಿಯ
ಸ್ನೇಹಿತರು ಈ ಆಟಿಕೆಯನ್ನು ನೋಡಿ ಗಾಬರಿಗೊಂಡರು, ಅದು ಪುಟ್ಟಬಾಲೆಯಾದ ನನ್ನನ್ನು ಹೆದರಿಸುತ್ತದೆ
ಮತ್ತು ನನಗೆ ದುಃಸ್ವಪ್ನಗಳನ್ನು ಉಂಟುಮಾಡುತ್ತದೆ ಎಂದು
ಭಾವಿಸಿದರು" ಎಂದು ಹೇಳಿದರು. 2000ನೇ ಇಸವಿಯವರೆಗೂ ಜುಬಿಲಿ ಜೇನ್‌ರವರ ಜೊತೆಯಲ್ಲೇ ಇತ್ತು.
ಬೆಳೆಯುತ್ತಾ ಟಾರ್ಜನ್ ಆಫ್ ದಿ ಏಪ್ಸ್ ಮತ್ತು ಡಾಕ್ಟರ್
ಡೂಲಿಟಲ್ ಪುಸ್ತಕಗಳು ಎಳೆಯ ಜೇನ್‌ಳ ಕಲ್ಪನೆಗೆ ರೆಕ್ಕೆ ಕಟ್ಟಿದವು.
“ನಾನು ಆಫ್ರಿಕಾದ ಕಾಡಿನಲ್ಲಿ ಪ್ರಾಣಿಗಳೊಂದಿಗೆ ಬದುಕುವೆ!” ಎಂದು ಆಕೆ ಕನಸು ಕಂಡಳು.
ತಮಾಷೆಯಾಗಿ ಅವಳು ಹೇಳುತ್ತಿದ್ದಳು, “ಟಾರ್ಜನ್ ತಪ್ಪು ಜೇನ್ಳನ್ನು ಮದುವೆಯಾದ! ನಾನೇ ಆತನಿಗೆ ತಕ್ಕ ಜೇನ್!” ಜೇನ್‌ಳ
ಪ್ರಾಣಿಗಳ ಮೇಲಿನ ಆಸಕ್ತಿ ಗಮನಿಸಿದ ತಾಯಿ ಪ್ರೋತ್ಸಾಹಿಸಿದರು. “ನಿನಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಶ್ರಮಪಡು, ಎಂದಿಗೂ ಕೈಬಿಡಬೇಡ!”
1957ರಲ್ಲಿ, ಕೀನ್ಯಾದಲ್ಲಿ
ಪುರಾತತ್ವಶಾಸ್ತ್ರಜ್ಞ ಡಾ. ಲೂಯಿಸ್ ಲೀಕಿಯವರ ಭೇಟಿ ಬದುಕಿಗೆ ತಿರುವು ನೀಡಿತು. ಯಾದಾಗ, ಜೇನ್‌ರ ಕನಸು ರೂಪ ಪಡೆಯಿತು. ಲೀಕಿ, “ಮಾನವನ ಮೂಲವನ್ನು ತಿಳಿಯಲು ಚಿಂಪಾಂಜಿಗಳ ಅಧ್ಯಯನ ಅಗತ್ಯ” ಎಂದು ನಂಬಿದವರು, ಜೇನ್‌ಗೆ ತಾಂಜಾನಿಯಾದ ಗೊಂಬೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಶೋಧನೆಗೆ ಅವಕಾಶ
ನೀಡಿದರು. ಅಷ್ಟೇ ಅಲ್ಲದೇ ಲೀಕಿ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿದರು ಮತ್ತು 1962 ರಲ್ಲಿ ಅವರು ಯಾವುದೇ ಪದವಿ ಪಡೆಯದ ಗುಡಾಲ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ
ಕಳುಹಿಸಿದರು. ಪದವಿ ಪಡೆಯದೆ ಕೇಂಬ್ರಿಡ್ಜ್‌ನಲ್ಲಿ ಪಿಎಚ್‌ಡಿ ಅಧ್ಯಯನ ಮಾಡಲು ಅವಕಾಶ ಪಡೆದ
ಎಂಟನೇ ವ್ಯಕ್ತಿ ಜೇನ್ !! ಇದಕ್ಕಾಗಿ ಕೇಂಬ್ರಿಡ್ಜ್‌ನ
ನ್ಯೂನ್‌ಹ್ಯಾಮ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಗೊಂಬೆ ರಿಸರ್ವ್‌ನಲ್ಲಿ, ತಮ್ಮ ಮೊದಲ ಐದು ವರ್ಷಗಳ ಅಧ್ಯಯನವನ್ನು ಚಿಂಪಾಂಜಿಗಳ ನಡವಳಿಕೆಯ (Behaviour of
free-living chimpanzees) ಕುರಿತು ರಾಬರ್ಟ್ ಹಿಂಡೆ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿ PhD ಪಡೆದರು.
1960 ರಲ್ಲಿ ಟಾಂಜಾನಿಯಾದ ಗೊಂಬೆ ಸ್ಟ್ರೀಮ್ ರಾಷ್ಟ್ರೀಯ ಉದ್ಯಾನವನದಲ್ಲಿ
ಕಸಾಕೆಲಾ ಚಿಂಪಾಂಜಿ ಸಮುದಾಯದ ಬಗ್ಗೆ ಚಿಂಪಾಂಜಿಗಳ ಸಾಮಾಜಿಕ ಮತ್ತು
ಕುಟುಂಬ ಜೀವನವನ್ನು ಅವರು ಅಧ್ಯಯನ ಮಾಡಿದರು. ಮಾನವರಷ್ಟೇ
ಅಲ್ಲದೇ ಚಿಂಪಾಂಜಿಗಳೂ ಸಂತೋಷ ಮತ್ತು ದುಃಖದಂತಹ ತರ್ಕಬದ್ಧ ಚಿಂತನೆ, ಭಾವನೆಗಳನ್ನು ವ್ಯಕ್ತಪಡಿಸಬಲ್ಲವು ಎಂಬುದನ್ನು
ಡಾ|| ಜೇನ್ ಕಂಡುಕೊಂಡರು. ಅಪ್ಪುಗೆಗಳು, ಚುಂಬನಗಳು, ಬೆನ್ನು ತಟ್ಟುವುದು ಮತ್ತು ಕಚಗುಳಿ ಇಡುವುದು
ಮುಂತಾದ ನಡವಳಿಕೆಗಳನ್ನು ಸಹ ಅವರು ಗಮನಿಸಿದರು. ಇವುಗಳನ್ನು ನಾವು
"ಮಾನವ" ಕ್ರಿಯೆಗಳು ಎಂದು ಪರಿಗಣಿಸುತ್ತೇವೆ. ಈ ಸಂಕೇತಗಳು
"ಕುಟುಂಬ ಮತ್ತು ಸಮುದಾಯದೊಳಗಿನ ಸದಸ್ಯರ ನಡುವೆ ಬೆಳೆಯುವ ನಿಕಟ ಬಂಧ ಜೀವನಪೂರ್ತಿ
ಇರುತ್ತವೆ ಎನ್ನುವುದರ ಸಾಕ್ಷಿಯಾಗಿವೆ ಎನ್ನುವುದನ್ನು ಅವರು ಕಂಡುಕೊಂಡರು.
ಗೆದ್ದಲುಗಳ
ದಿಬ್ಬದಲ್ಲಿ ಚಿಂಪಾಂಜಿಯೊಂದು ಪದೇ ಪದೇ ಹುಲ್ಲಿನ ಕಡ್ಡಿಗಳನ್ನು ತೂರಿಸಿ ಅದರ ಮೇಲೆ ಹತ್ತುವ ಗೆದ್ದಲುಗಳನ್ನು ಹಿಡಿದು ತಿನ್ನುತ್ತಿರುವುದನ್ನು ಅವರು ಗಮನಿಸಿದರು. ಗಾಳಹಾಕಿ
ಮೀನು ಹಿಡಿದಂತೆ ಚಿಂಪಾಂಜಿ ಗೆದ್ದಲು ಹಿಡಿಯುತ್ತಿತ್ತು. ಕೆಲವೊಮ್ಮೆ ಚಿಂಪಾಂಜಿಗಳು
ಮರಗಳಿಂದ ಕೊಂಬೆಗಳನ್ನು ತೆಗೆದುಕೊಂಡು ಎಲೆಗಳನ್ನು ತೆಗೆದು ಕೊಂಬೆಯನ್ನು
ಹೆಚ್ಚು ಪರಿಣಾಮಕಾರಿಯಾದ ಉಪಕರಣವಾಗಿಸುತ್ತಿತ್ತು. ನಾವು ಬಹಳ ಹಿಂದೆಯೇ "ಉಪಕರಣ ತಯಾರಕ ಮನುಷ್ಯ" ಎಂದು ಉಳಿದ ಪ್ರಾಣಿ
ಸಾಮ್ರಾಜ್ಯದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದೇವೆ. ಜೇನ್‌ರವರ
ಕ್ರಾಂತಿಕಾರಿ ಸಂಶೋಧನೆಗಳು ಮಾನವರು ಮಾತ್ರ ಉಪಕರಣಗಳನ್ನು ನಿರ್ಮಿಸಿ ಬಳಸಬಲ್ಲರು ಮತ್ತು ಚಿಂಪಾಂಜಿಗಳು ಸಸ್ಯಾಹಾರಿಗಳು
ಎನ್ನುವ ನಂಬಿಕೆ ಸುಳ್ಳಾಗಿಸಿತು. ಈ ಸಂಶೋಧನೆಗಳಿಗೆ ಪ್ರತಿಕ್ರಿಯೆಯಾಗಿ,
ಲೂಯಿಸ್ ಲೀಕಿ, "ನಾವು ಈಗ ಮನುಷ್ಯನನ್ನು ಮತ್ತು
ಉಪಕರಣವನ್ನು ಮರು ವ್ಯಾಖ್ಯಾನಿಸಬೇಕು ಅಥವಾ ಚಿಂಪಾಂಜಿಗಳನ್ನು ಮನುಷ್ಯ ಎಂದು
ಸ್ವೀಕರಿಸಬೇಕು!" ಎಂದರು!!
ಚಿಂಪಾಂಜಿಗಳು
ಸಾತ್ವಿಕ ಪ್ರಾಣಿಗಳು ಎಂದುಕೊಂಡಿದ್ದ ಜೇನ್‌ರವರಿಗೆ ಚಿಂಪಾಂಜಿಗಳು ತಮ್ಮ ಕ್ರೂರತೆಯ ಕರಾಳ ಪ್ರದರ್ಶನ ನೀಡಿ ಆಘಾತ ನೀಡಿದವು!!. ಚಿಂಪಾಂಜಿ ಗುಂಪುಗಳಲ್ಲಿಯೂ ಮಾನವರಲ್ಲಿದ್ದಂತೆ ಆಕ್ರಮಣಶೀಲತೆ ಮತ್ತು
ಹಿಂಸಾಚಾರದ ಪ್ರವೃತ್ತಿಗಳಿದ್ದು, ಕೆಲವು ಪ್ರಬಲ ಹೆಣ್ಣು ಚಿಂಪಾಂಜಿಗಳು
ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಗುಂಪಿನ ಇತರ ಹೆಣ್ಣು
ಚಿಂಪಾಂಜಿಗಳ ಮರಿಗಳನ್ನು ಉದ್ದೇಶಪೂರ್ವಕವಾಗಿ ಕೊಲ್ಲುವುದನ್ನು ಅವರು ಗಮನಿಸಿದರು. ಕೆಲವೊಮ್ಮೆ ನರಭಕ್ಷಕರಂತೆ, ಭಕ್ಷಿಸುವ
ಕ್ರೂರ ಮಟ್ಟಕ್ಕೂ ಹೋಗುತ್ತಿದ್ದವು.
ಗೊಂಬೆ
ಸ್ಟ್ರೀಮ್‌ನ ಚಿಂಪಾಂಜಿಗಳು ಕೊಲೊಬಸ್ ಮಂಗಗಳಂತಹ ಸಣ್ಣ ಪ್ರೈಮೇಟ್‌ಗಳನ್ನು ವ್ಯವಸ್ಥಿತವಾಗಿ
ಬೇಟೆಯಾಡಿ ತಿನ್ನುತ್ತವೆ ಎನ್ನುವುದನ್ನು ಅವರು ಕಂಡುಹಿಡಿದರು. ಬೇಟೆಯಾಡುವ ಗುಂಪು, ಕೊಲೊಬಸ್
ಮಂಗವನ್ನು ಪ್ರತ್ಯೇಕಿಸಿ ಅದರ ಎಲ್ಲಾ ಸಂಭಾವ್ಯ ದಾರಿಗಳನ್ನು
ತಡೆಯುತ್ತವೆ. ನಂತರ ಒಂದು ಚಿಂಪಾಂಜಿ ಮರದ ಮೇಲಕ್ಕೆ
ಹತ್ತಿ ಕೊಲೊಬಸ್ ಮಂಗವನ್ನು ಸೆರೆಹಿಡಿದು
ಬಲಿಹಾಕುತ್ತವೆ. ನಂತರ ತಂಡದ ಉಳಿದ ಸದಸ್ಯರು
ತಮ್ಮ ತಮ್ಮ ಪಾಲನ್ನು ತಮ್ಮ ಯೋಗ್ಯತೆಯ ಅನುಸಾರ ಪಡೆದುಕೊಳ್ಳುತ್ತವೆ. ಇದು ಚಿಂಪಾಂಜಿಗಳ ಆಹಾರ ಮತ್ತು ನಡವಳಿಕೆಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ವೈಜ್ಞಾನಿಕ
ಸಂಶೋಧನೆ ಎನಿಸಿದೆ.
ಇತರ ಸಂಶೋಧಕರಿಗಿಂತ ಜೇನ್ ಚಿಂಪಾಂಜಿಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಲು ಮಾನವರಿಗೆ ಹೆಸರಿಡುವಂತೆ ಅವುಗಳಿಗೆ ನಾಮಕರಣ ಮಾಡುತ್ತಿದ್ದರು. ಅವರಲ್ಲಿ ಕೆಲವು ಹೆಸರುಗಳು ಹೇಗಿವೆ. ಬೂದು ಗಲ್ಲದ ಗಂಡು ಡೇವಿಡ್ ಗ್ರೇಬಿಯರ್ಡ್ ಜೇನ್‌ರ ಗಮನ ಸೆಳೆದ ಮೊದಲಿಗ. ಗುಂಪಿನ ನಾಯಕನಾಗಿದ್ದ ಆತನ ಸ್ನೇಹಿತ ಗೋಲಿಯಾತ್, ಈತ ಭಾರೀ ಧೈರ್ಯಶಾಲಿ ಮತ್ತು ಬಲಶಾಲಿ. ತನ್ನ ದಿಟ್ಟ ಸ್ವಭಾವಕ್ಕಾಗಿ ಈ ಹೆಸರಿಡಲಾಯಿತು. ತನ್ನ ಕುತಂತ್ರ ಮತ್ತು ಸಮಯಸಾಧಕತನದಿಂದ ಗೋಲಿಯಾತ್‌ನಿಂದ ನಾಯಕತ್ವ ಕಿತ್ತುಕೊಂಡ ಮೈಕ್, ಬಲಿಷ್ಟ ಹಾಗೂ ಭಯಹುಟ್ಟಿಸುವ ರಾಕ್ಷಸ ರೂಪಿ - ಹಂಫ್ರಿ, ಯಾವುದೇ ಯುವ ಚಿಂಪಾಂಜಿಗಳ ಅಥವಾ ಮಾನವರಿಗೆ "ಅತ್ತೆ" ಎಂದು ಕರೆಸಿಕೊಂಡು ಸಂತೋಷಪಡುವ ಬೃಹತ್ ದೇಹಿ ಬಂಜೆ ಹೆಣ್ಣು ಗಿಗಿ!!! ಮಿಸ್ಟರ್ ಮೆಕ್‌ಗ್ರೆಗರ್ ಎಂಬ ಜಗಳಗಂಟ ಮುದುಕ, ಉಬ್ಬಿರುವ ಮೂಗು ಮತ್ತು ಹರಿದ ಕಿವಿಗಳನ್ನು ಹೊಂದಿರುವ ತಾಯಿಯಂತಹ, ಗುಂಪಿನಲ್ಲಿ ಉನ್ನತ ಶ್ರೇಣಿಯ ಹೆಣ್ಣು - ಫ್ಲೋ ಮತ್ತು ಆಕೆಯ ಮರಿಗಳಾದ; ಫಿಗನ್, ಫ್ಯಾಬೆನ್, ಫ್ರಾಯ್ಡ್, ಫಿಫಿ ಮತ್ತು ಫ್ಲಿಂಟ್ರವರು. ಫ್ರೋಡೊ- ಫಿಫಿಯ ಎರಡನೇ ಮರಿ. ಈತ ಶೀಘ್ರ ಕೋಪಿ. ಡಾ. ಜೇನ್ ಸೇರಿದಂತೆ ಮನುಷ್ಯರ ಮೇಲೂ ದಾಳಿ ಮಾಡಿದ ಆಕ್ರಮಣಕಾರಿ ಗಂಡು. ಡಾ. ಜೇನ್ ಕೇವಲ ಚಿಂಪಾಂಜಿಗಳನ್ನು ಅಧ್ಯಯನ ಮಾಡಲಿಲ್ಲ; “ಪ್ರಾಣಿಗಳಿಗೆ ಭಾವನೆಗಳಿಲ್ಲ, ಸಂಸ್ಕೃತಿಯಿಲ್ಲ” ಎಂಬ ಕಿರಿದಾದ ಚಿಂತನೆಯನ್ನು ಒಡೆದು, ಚಿಂಪಾಂಜಿಗಳಿಗೆ ದಯೆ, ಪ್ರೀತಿ, ಮತ್ತು ಸಮುದಾಯದ ಬದುಕಿದೆ ಎಂದು ತೋರಿಸಿದರು.
1986ರ ಒಂದು ಸಮ್ಮೇಳನದಲ್ಲಿ ಚಿಂಪಾಂಜಿಗಳ
ಜನಸಂಖ್ಯೆ 20
ಲಕ್ಷದಿಂದ ಕೇವಲ ಎರಡು ಲಕ್ಷಕ್ಕೆ ಕುಸಿದಿರುವುದು ತಿಳಿದು ಜೇನ್ ದಿಗ್ಭ್ರಮೆಗೊಂಡರು. ಕಾಡುಗಳು ಕಾಣೆಯಾಗುತ್ತಿದ್ದವು, ಮನುಷ್ಯರು ಚಿಂಪಾಂಜಿಗಳ ಆವಾಸಸ್ಥಾನವನ್ನು ಒತ್ತುವರಿಮಾಡಿಕೊಳ್ಳುತ್ತಿದ್ದರು, ಮತ್ತು ಮರಿಗಳಿಗಾಗಿ ತಾಯಿಗಳನ್ನು ಕೊಲ್ಲಲಾಗುತ್ತಿತ್ತು.
“ನಾನು ಕೇವಲ ಗೊಂಬೆಯ ಕಾಡಿನಲ್ಲಿ ಕುಳಿತು ಇದನ್ನು ನೋಡಲಾರೆ. ಈ
ಪ್ರಾಣಿಗಳ ಧ್ವನಿಯಾಗಬೇಕು!” ಎಂದು ಜೇನ್ ನಿರ್ಧರಿಸಿದರು.
ಆಕೆ ವಿಜ್ಞಾನಿಯಿಂದ ಕಾರ್ಯಕರ್ತೆಯಾದರು. 1977ರಲ್ಲಿ
ಸ್ಥಾಪಿಸಿದ ಜೇನ್ ಗೂಡಾಲ್ ಇನ್‌ಸ್ಟಿಟ್ಯೂಟ್ (JGI) ವನ್ಯಜೀವಿ
ಸಂರಕ್ಷಣೆ, ಮಾನವ ಕಲ್ಯಾಣ, ಮತ್ತು ಪರಿಸರ
ರಕ್ಷಣೆಗೆ ಒಂದು ದಿಕ್ಸೂಚಿಯಾಯಿತು. 1991ರಲ್ಲಿ ಆರಂಭವಾದ ರೂಟ್ಸ್
ಆಂಡ್ ಶೂಟ್ಸ್ ಕಾರ್ಯಕ್ರಮವು ಯುವಕರಿಗೆ ಪರಿಸರ ಕಾಳಜಿಯ ಬೀಜ ಬಿತ್ತಿತು. ಇಂದು,
100ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಯುವಕರು ಈ ಚಳವಳಿಯ ಭಾಗವಾಗಿದ್ದಾರೆ. ಇದಕ್ಕಾಗಿ
ಕೊನೊಕೊದಂತಹ ವ್ಯಾಪಾರಿ
ಸಂಸ್ಥೆಗಳ ಮನವೊಲಿಸಿ ಪರಿಸರ ರಕ್ಷಣೆಗೆ ಟೊಂಕಕಟ್ಟಿ ನಿಂತರು. ಜೇನ್‌ರ ತರ್ಕ
ಸರಳವಾಗಿತ್ತು. “ಬದಲಾವಣೆ ಬೇಕಾದರೆ, ಕೆಟ್ಟವರನ್ನೇ
ಒಳ್ಳೆಯ ಕಾರ್ಯಕ್ಕೆ ಒಡಗೂಡಿಸಬೇಕು!” ಚಿಂಪಾಂಜಿಗಳನ್ನು ಏರ್‌ಲಿಫ್ಟ್
ಮಾಡಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಯಿತು.
ಸ್ಥಳೀಯ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ, ಮತ್ತು ಸುಸ್ಥಿರ ಜೀವನೋಪಾಯದ ಮೂಲಕ, ಜೇನ್ ಕಾಡುಗಳನ್ನು ರಕ್ಷಿಸಿದರು. ಉಪಗ್ರಹ ಚಿತ್ರಗಳನ್ನು ಬಳಸಿ, ಗ್ರಾಮಸ್ಥರು ಕಾಡಿನ ರಕ್ಷಣೆಗೆ ಸ್ವಯಂಸೇವಕರಾದರು. “ಕಾಡು ರಕ್ಷಣೆಯಿಂದ ನಮ್ಮ ಭವಿಷ್ಯವೂ ಉಳಿಯುತ್ತದೆ!” ಎಂದು ಗ್ರಾಮಸ್ಥರು ಒಪ್ಪಿಕೊಂಡರು. ಈ ಕಾರ್ಯಕ್ರಮವು ಇತರ ಸಂಸ್ಥೆಗಳಿಗೂ ಮಾದರಿಯಾಯಿತು.
ಜೇನ್ ಹಲವಾರು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಜೇನ್‌ರ ಸಾಧನೆಯನ್ನು ಕುರಿತಂತೆ ಅನೇಕ ೪೦ಕ್ಕೂ ಹೆಚ್ಚು ಸಿನಿಮಾಗಳಾಗಿವೆ!!! ಅನೇಕ ದೇಶ ವಿದೇಶಗಳ ಪ್ರತಿಷ್ಟಿತ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದ ಜೇನ್ ಮಹಾನ್ ಮಾನವತಾವಾದಿ ದಿಟ್ಟ ಹೆಣ್ಣು ಮಗಳು. ೫೦ಕ್ಕೂ ಹೆಚ್ಚು ವರ್ಷಗಳ ಕಾಲ ಚಿಂಪಾಂಜಿಗಳ ಪಾಲಿನ ದೇವತೆಯಾಗಿ, ಸಂಶೋಧನೆಗಾಗಿ ತನ್ನ ಜೀವನವನ್ನು ಮುಡಿಪಿಟ್ಟ ಮಾಹಾಮಾತೆ ಡಾ. ಜೇನ್ ಭಾಷಣಗಳಿಗಾಗಿ ಅಮೇರಿಕಾ ಪ್ರವಾಸದಲ್ಲಿದ್ದಾಗ ಕೊನೆಯಸಿರೆಳೆದರು. ೯೧ ರ ಹರೆಯದಲ್ಲೂ ಯುವಕರು ನಾಚುವಂತೆ ಕಾರ್ಯ ನಿರ್ವಹಿಸಿ, ಯುವ ಪೀಳಿಗೆಗೆ ನಿಜವಾದ ರೋಲ್ ಮಾಡೆಲ್ ಆಗಿದ್ದಾರೆ. ಅವರು ತೋರಿದ ದಾರಿಯಲ್ಲಿ ನಡೆಯುವುದು ನಾವು ಅವರಿಗೆ ನೀಡಬಹುದಾದ ಅತಿ ದೊಡ್ಡ ಗೌರವವೇ ಸರಿ.
ಚಿಕಾಗೋದ ಫೀಲ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಹೊರಗೆ ಜೇನ್ ಗುಡಾಲ್ ಮತ್ತು ಡೇವಿಡ್ ಗ್ರೇಬಿಯರ್ಡ್ ಅವರ ಶಿಲ್ಪ.
No comments:
Post a Comment