ಪರಿಸರವ್ಯವಸ್ಥೆಗಳು ಹೇಗೆ
ವಿಕಾಸಗೊಳ್ಳುತ್ತವೆ?
ಸರ್ಕಾರಿ ಪದವಿಪೂರ್ವ ಕಾಲೇಜು
ನೆಲಮಂಗಲ
ಒಂದು
ಸುಸ್ಥಿರವಾದ ನಿತ್ಯಹರಿದ್ವರ್ಣ ಕಾಡು ಅದರ ಜೀವವೈವಿಧ್ಯತೆ, ರಮ್ಯ
ದೃಶ್ಯವೈಭವ, ಅಗಾಧ ಜಲಸಿರಿ ಮತ್ತು ಅಸೀಮ ಸೌಂದರ್ಯದಿಂದ ನಮ್ಮನ್ನು
ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹಾಗಾದರೆ, ಇಂತಹ ಸುಸ್ಥಿರ, ನಯನ ಮನೋಹರ ನೈಸರ್ಗಿಕ ಪರಿಸರವ್ಯವಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ?. ಈ ಸಂಕೀರ್ಣ ಪ್ರಕ್ರಿಯೆ ಪೃಕೃತಿಯ ಧ್ಯಾನ ಸ್ಥಸ್ಥಿತಿಯಲ್ಲಿ ಅತ್ಯಂತ ನಾಜೂಕಾಗಿ,
ಸುಧೀರ್ಘ ಕಾಲಾನುಕ್ರಮದಲ್ಲಿ ನಡೆಯುವ ವಿದ್ಯಮಾನ. ಪರಿಸರವ್ಯವಸ್ಥೆಯೊಂದು
ನಿರ್ಜೀವ ಪರಿಸರದಿಂದ ಪ್ರಾರಂಭವಾಗಿ, ಸುಸ್ಥಿರ ಸ್ಥಿರಪರಾಕಾಷ್ಠೆಯ
ಜೀವಿಸಮುದಾಯಗಳು ರೂಪುಗೊಳ್ಳುವ ಈ ಒಟ್ಟಾರೆ ಪ್ರಕ್ರಿಯೆಗೆ “ಪರಿಸರಅನುಕ್ರಮಣಿಕೆ” (Ecological
succession) ಎಂದು ಕರೆಯಲಾಗುತ್ತದೆ.
ಪರಿಸರ ಅನುಕ್ರಮಣಿಕೆಯ
ಒಟ್ಟಾರೆ ಪ್ರಕ್ರಿಯೆಯು ಐದು ಪ್ರಮುಖ ಹಂತಗಳನ್ನು ಒಳಗೊಂಡಿದ್ದು, ಈ
ಐದು ಹಂತಗಳು ಒಂದಕ್ಕೊಂದು ಪೂರಕವಾಗಿ ಜರುಗುತ್ತವೆ. ಪರಿಸರ ಅನುಕ್ರಮಣಿಕೆಯ 5 ಹಂತಗಳು ಹೀಗಿವೆ-1.ನಿರ್ಜೀವೀಕರಣ(Nudation) 2.ಆಕ್ರಮಣ(Invasion) 3.ಸ್ಪರ್ಧೆ ಮತ್ತು ಸಹಕಾರ (Competetion
and coaction) 4.ಪ್ರತಿವರ್ತನೆ (Reaction) ಮತ್ತು
5.ಸ್ಥಿರೀಕರಣ (Stabilisation-Climax community). ಈ ಐದು ಹಂತಗಳಲ್ಲಿ ಜರುಗುವ ಘಟನಾವಳಿಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
1.ನಿರ್ಜೀವೀಕರಣ (Nudation): ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜರುಗುವ ಜ್ವಾಲಾಮುಖಿ ಸ್ಫೋಟ, ಅಥವಾ
ಪ್ರವಾಹದಂತಹ ನೈಸರ್ಗಿಕ ಪ್ರಕೋಪಗಳು ಸಂಪೂರ್ಣವಾಗಿ ನಿರ್ಜೀವ, ಬರಡು
ಪ್ರದೇಶಗಳನ್ನು ರೂಪಿಸುವುದರೊಂದಿಗೆ ಪರಿಸರ ಅನುಕ್ರಮಣಿಕೆ ಪ್ರಾರಂಭವಾಗುತ್ತದೆ.
2.ಆಕ್ರಮಣ(Invasion): ಇಂತಹ ನಿರ್ಜೀವ ಪ್ರದೇಶಗಳಲ್ಲಿ ಮೊದಲಿಗೆ ತಮ್ಮ ವಸಾಹತುವನ್ನು ಸ್ಥಾಪಿಸುವುದು ಕಲ್ಲನ್ನು
ಅರಳಿಸಿ ಹೂವಾಗಿಸುವ ಕಲ್ಲುಹೂಗಳು()ಮತ್ತುಹಾವಸೆಗಳು(). ನಿರ್ಜೀವ, ನಿರವಯವ
ಪ್ರದೇಶಗಳಲ್ಲಿ ಮೊದಲಿಗೆ ತಮ್ಮ ವಸಾಹತುವನ್ನು ಸ್ಥಾಪಿಸುವ ಜೀವಿ ಪ್ರಭೇದಗಳಿಗೆ ಪ್ರವರ್ತಕ
ಪ್ರಭೇದಗಳು (Pioneer species) ಎನ್ನಲಾಗುತ್ತದೆ .ಪ್ರವರ್ತಕ
ಪ್ರಭೇದಗಳು ನಿಧಾನಗತಿಯಲ್ಲಿ ನಿರವಯವ ಪರಿಸರವನ್ನು ಸಾವಯವ ಪರಿಸರವಾಗಿ ರೂಪಿಸುವಲ್ಲಿ ನಿರ್ಣಾಯಕ
ಪಾತ್ರ ವಹಿಸುತ್ತವೆ. ಮಣ್ಣನ್ನು ರೂಪಿಸಿ, ಜಲನಿಧಿಯನ್ನು ಸ್ಥಾಪಿಸಿ
ಇತರ ಪ್ರಭೇದಗಳು ವಾಸಿಸಲು ಯೋಗ್ಯವಾದ ಪರಿಸರವನ್ನು ರೂಪಿಸುತ್ತವೆ.
3.ಸ್ಪರ್ಧೆ
ಮತ್ತು ಸಹಕಾರ (Competetion and coaction): ಜನಸಂಖ್ಯೆ ಹೆಚ್ಚಾದಂತೆ, ಸೀಮಿತ ಸಂಪನ್ಮೂಲಗಳಿಗಾಗಿ ಜೀವಿಗಳ ನಡುವೆ
ಪೈಪೋಟಿ ಪ್ರಾರಂಭವಾಗುತ್ತದೆ. ಪೈಪೋಟಿಯೊಂದಿಗೆ ಕೆಲವು ಪ್ರಭೇದಗಳು ಕೊಡು-ಕೊಳ್ಳುವ ಸಹ-ಜೀವನ
ವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಕೆಲವು ಪ್ರಭೇದಗಳು
ಸ್ಥಳಾಂತರಗೊಳ್ಳುತ್ತವೆ, ಕೆಲವು ತಮ್ಮ ನೆಲೆಯನ್ನು ಸ್ಥಾಪಿಸಲು
ಅಸಮರ್ಥವಾಗಿ ನಶಿಸಿಹೋಗುತ್ತವೆ. ಮತ್ತೆ ಕೆಲವು ತಮ್ಮ ವಸಾಹತುವನ್ನು ಭದ್ರವಾಗಿ
ರೂಪಿಸಿಕೊಳ್ಳುತ್ತವೆ.
4.ಪ್ರತಿವರ್ತನೆ (Reaction): ಈ ಹಂತದಲ್ಲಿ ಜೀವಿಗಳು ತಮ್ಮ ಪರಿಸರದಲ್ಲಿ ಬಹಳಷ್ಟು ರೂಪಾಂತರಗಳನ್ನು ಉಂಟುಮಾಡುತ್ತವೆ.
ಉದಾಹರಣೆಗೆ; ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು,
ಪೋಷಕಾಂಶ ಚಕ್ರಗಳಲ್ಲಿ ಬದಲಾವಣೆ, ನೆರಳಿನ ನಿರ್ಮಾಣ,
ಸೂಕ್ಷ್ಮ ಹವಾಮಾನ ಬದಲಾವಣೆ. ಈ ಎಲ್ಲಾ ಬದಲಾವಣೆಗಳು ಜೀವಿಗಳು ಮತ್ತು ಅವುಗಳ
ಪರಿಸರದೊಂದಿಗಿನ ಪ್ರತಿವರ್ತನೆಯಿಂದ ಸಾಧ್ಯವಾಗುತ್ತವೆ. ಸೂಕ್ಷ್ಮಪರಿಸರದಲ್ಲಾಗುವ ಈ ಬದಲಾವಣೆಗಳು
ಹೊಸ ಪ್ರಭೇದಗಳ ಆಗಮನ ಮತ್ತು ವಸಾಹತು ಸ್ಥಾಪನೆಗೆ ಭೂಮಿಕೆಯನ್ನು ಒದಗಿಸುತ್ತವೆ.
5.ಸ್ಥಿರೀಕರಣ (Stabilisation-Climax
community): ಪರಿಸರ ಅನುಕ್ರಮಣಿಕೆಯ
ಕೊನೆಯ ಹಂತವಾದ ಸ್ಥಿರೀಕರಣದಲ್ಲಿ ತುಲನಾತ್ಮಕವಾಗಿ ಸುಸ್ಥಿರವಾದ, ಸಂಕೀರ್ಣ
ಸ್ಥಿರಪರಾಕಾಷ್ಠೆಯ ಸಮುದಾಯ ರೂಪುಗೊಳ್ಳುತ್ತದೆ. ಸ್ಥಿರಪರಾಕಾಷ್ಠೆಯ ಸಮುದಾಯವು ಪರಿಸರ ಅನುಕ್ರಮಣಿಕೆಯ ಅಂತಿಮ, ಸುಸ್ಥಿರ ಹಂತವಾಗಿದ್ದು, ಅಲ್ಲಿ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ತಮ್ಮ ಪರಿಸರದೊಂದಿಗೆ ಸಮತೋಲನದ
ಸ್ಥಿತಿಯಲ್ಲಿರುತ್ತವೆ. ಈ ಪ್ರಬುದ್ಧ ಪರಿಸರ ವ್ಯವಸ್ಥೆಯು ಸ್ಥಿರವಾದ ಪ್ರಭೇದ ಸಂಯೋಜನೆ, ಸಂಕೀರ್ಣ
ಆಹಾರ ಜಾಲಗಳು ಮತ್ತು ಹೆಚ್ಚಿನ ಜೀವವೈವಿಧ್ಯತೆಯಿಂದ ರೂಪುಗೊಳ್ಳುತ್ತದೆ ಮತ್ತು ಕಾಡ್ಗಿಚ್ಚು ಅಥವಾ
ಮಾನವ ಹಸ್ತಕ್ಷೇಪದಂತಹ ಅಡಚಣೆ ಸಂಭವಿಸುವವರೆಗೆ ಅದು ತುಲನಾತ್ಮಕವಾಗಿ ಬದಲಾಗದೆ ಉಳಿಯುತ್ತದೆ. ಸ್ಥಿರಪರಾಕಾಷ್ಠೆಯ ಸಮುದಾಯದ ಪ್ರಮುಖ ಗುಣಲಕ್ಷಣಗಳು ಹೀಗಿವೆ:
· ಸ್ಥಿರತೆ ಮತ್ತು ಪ್ರಬುದ್ಧತೆ: ಸ್ಥಿರಪರಾಕಾಷ್ಠೆಯ ಸಮುದಾಯವು ಪರಿಸರ ಅನುಕ್ರಣಿಕೆಯ ಅಂತಿಮ ಹಂತವನ್ನು ಪ್ರತಿನಿಧಿಸುತ್ತದೆ, ಪ್ರಭೇದಗಳು ತಮ್ಮ ನಡುವೆ ಮತ್ತುತಮ್ಮ ಪರಿಸರದೊಂದಿಗೆ ಸಮತೋಲನವನ್ನು ಸಾಧಿಸುತ್ತವೆ.
· ಪ್ರಭೇದ ಸಂಯೋಜನೆ: ಸಸ್ಯ ಮತ್ತು ಪ್ರಾಣಿ
ಪ್ರಭೇದಗಳ ಸಂಯೋಜನೆಯು ಕಾಲಾನಂತರದಲ್ಲಿ
ತುಲನಾತ್ಮಕವಾಗಿ ಸ್ಥಿರವಾಗಿರುತ್ತದೆ.
· ಸಂಕೀರ್ಣ ರಚನೆ: ಸ್ಥಿರಪರಾಕಾಷ್ಠೆಯ ಸಮುದಾಯಗಳು ಸಂಕೀರ್ಣ ಆಹಾರ ಜಾಲಗಳು, ಉನ್ನತ ಪ್ರಭೇದ ವೈವಿಧ್ಯತೆ ಮತ್ತು ಅನೇಕ ವಿಶೇಷ ಜೀವನೆಲೆಗಳನ್ನು
ಒಳಗೊಂಡಿರುತ್ತವೆ.
· ಸ್ಥಿತಿಸ್ಥಾಪಕತ್ವ: ಸ್ಥಿರಪರಾಕಾಷ್ಠೆಯ ಅಥವಾ
ಸ್ಥಿರಪರಾಕಾಷ್ಠೆ ಸಮುದಾಯಗಳು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ, ಅಂದರೆ ಅವುಗಳ
ಸಂಕೀರ್ಣ ರಚನೆ ಮತ್ತು ಹೆಚ್ಚಿನ ಜೀವವೈವಿಧ್ಯತೆಯಿಂದಾಗಿ ಸಣ್ಣ
ಪ್ರಮಾಣದ ವಿಕೋಪಗಳಿಂದ ಬೇಗನೆ ಚೇತರಿಸಿಕೊಳ್ಳುತ್ತವೆ.
· ಸಮತೋಲನ: ಈ ಹಂತದಲ್ಲಿ ಪರಿಸರ ಸಮತೋಲನದ ಸ್ಥಿತಿಯನ್ನು ತಲುಪುವುದರೊಂದಿಗೆ,
ಸ್ಥಿರಪರಾಕಾಷ್ಠೆಯ ಸಮುದಾಯವು ಸ್ಥಳೀಯ ಹವಾಮಾನ ಮತ್ತು ಭೌಗೋಳಿಕತೆಗೆ ಅನುಗುಣವಾಗಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪುತ್ತದೆ.
· ಹೊಂದಾಣಿಕೆ: ಅಸ್ತಿತ್ವದಲ್ಲಿರುವ ಪ್ರಭೇದಗಳು ಸ್ಥಳೀಯ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ಸಂಪನ್ಮೂಲಗಳಿಗಾಗಿ ಪರಸ್ಪರ ಪೈಪೋಟಿ ನಡೆಸುತ್ತವೆ.
ಈ ರೀತಿ ರೂಪುಗೊಳ್ಳುವ
ಸ್ಥಿರಪರಾಕಾಷ್ಠೆಯ ಸಮುದಾಯವು ಎಲ್ಲಾ ಪರಿಸರಗಳಲ್ಲಿ ಏಕರೂಪವಾಗಿರುತ್ತದೆಯೇ?
ಖಂಡಿತವಾಗಿಯೂ
ಸಾಧ್ಯವಿಲ್ಲ, ಒಂದು ಪರಿಸರವ್ಯವಸ್ಥೆಯಲ್ಲಿ ರೂಪುಗೊಳ್ಳುವ
ಸ್ಥಿರಪರಾಕಾಷ್ಠೆಯ ಸಮುದಾಯವು ಸ್ಥಳೀಯ ಹವಾಮಾನ, ಭೌಗೋಳಿಕತೆ ಮತ್ತು
ಮಳೆಯ ಪ್ರಮಾಣವನ್ನು ಅವಲಂಬಿಸಿದೆ. ಉದಾಹರಣೆಗೆ, ಶುಷ್ಕ ಮತ್ತು
ಅರೆಶುಷ್ಕ ಹವಾಮಾನ ಹೊಂದಿರುವ ಪ್ರದೇಶಗಳಲ್ಲಿ ಮುಳ್ಳುಕಂಟಿ-ಕುರುಚಲು ಕಾಡುಗಳು
ರೂಪುಗೊಳ್ಳುತ್ತವೆ. ಮಧ್ಯಮ ಪ್ರಮಾಣದ ಮಳೆಬೀಳುವ ಪ್ರದೇಶಗಳಲ್ಲಿ ಎಲೆ ಉದುರುವ ಕಾಡುಗಳು,
ಹೆಚ್ಚು ಮಳೆ ಯಾಗುವ ಪಶ್ಚಿಮ ಘಟ್ಟದಂತಹ ಪ್ರದೇಶಗಳಲ್ಲಿ ನಿತ್ಯ ಹರಿದ್ವರ್ಣ
ಕಾಡುಗಳಲ್ಲಿ ಕಂಡುಬರುವ ಸ್ಥಿರಪರಾಕಾಷ್ಠೆಯ ಸಮುದಾಯಗಳು ರೂಪುಗೊಳ್ಳುತ್ತವೆ. ಪರಿಸರವ್ಯವಸ್ಥೆಗಳು
ರೂಪುಗೊಳ್ಳುವ ಈ ಪ್ರಕ್ರಿಯೆ ಅತ್ಯಂತ ಸಂಕೀರ್ಣ, ಹಾಗೂ ಅತ್ಯಂತ
ಕುತೂಹಲಕಾರಿಯಾಗಿದೆ. ಆಲ್ಲವೇ?
-

No comments:
Post a Comment