ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, December 4, 2025

ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!

 

ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!

ಲೇಖಕರು : ರಾಮಚಂದ್ರಭಟ್‌ ಬಿ.ಜಿ.


ಇದೇನು ಸಸ್ಯಗಳಲ್ಲೂ ಅಂತರಜಾಲವೇ? ಇದೆಂತಹ ಒಗಟು? ಬಾಲ್ಯದಲ್ಲಿ  ಕಾಡುಮೇಡು ನನ್ನಂತೆಯೇ ನಿಮ್ಮನ್ನೂ ಬಹಳವಾಗಿ ಕಾಡಿರಬೇಕಲ್ಲ? ಅದೆಂತು ಅವು ಉಸಿರಾಡುತ್ತವೋ? ಹೇಗೆ ಬದುಕುತ್ತವೋ ನಮ್ಮಲ್ಲಿದ್ದಂತೆ ಅವೂ ಸಂವಹನ ನಡೆಸುತ್ತವೋ ಎನ್ನುವ ತಣಿಯದ ಕುತೂಹಲ. ಜೆ.ಸಿ. ಬೋಸರು ಸಸ್ಯಗಳಿಗೂ ಜೀವವಿದೆ ಎಂಬ ಸಂಶೋಧನೆ ಪಾಶ್ಚಾತ್ಯ ವೈಜ್ಞಾನಿಕ ಜಗತ್ತಿನಲ್ಲಿ ಬಿತ್ತಿದ ಕೋಲಾಹಲದ ಕಥೆ , ಜೊತೆಗೆ ಬಿಜಿಎಲ್‌ ಸ್ವಾಮಿಯವರ ಕಥಾನಕಗಳು ಮತ್ತಷ್ಟು ಕುತೂಹಲ ಹೆಚ್ಚಿಸಿದವು.  ಅದಷ್ಟೇ ಅಲ್ಲದೇ ನಮ್ಮ ಕನ್ನಡಿಗ ವಿಜ್ಞಾನಿ,‌ ಸಾಹಿತಿಗಳಾದ ಕೆ.ಎನ್‌. ಗಣೇಶಯ್ಯನವರ “ಸಸ್ಯ ಸಗ್ಗ” ಹೊಸದೊಂದು ಲೋಕವನ್ನು ಅನಾವರಣ ಮಾಡಿಸಿತು. ಪ್ರಾಣಿಗಳಲ್ಲಿ ಅದರಲ್ಲೂ ಮಾನವರಲ್ಲಿ ಇರುವಂತೆ ದಾಯಾದಿ ಮತ್ಸರ ಮತ್ತು ಕೂಟ ನೀತಿಗಳು ಸಸ್ಯಗಳಲ್ಲೂ ಇದೆ ಎನ್ನುವ ಕುರಿತಂತೆ ಅದ್ಭುತ ಸಂಶೋಧನೆ ನಡೆಸಿ ರೋಚಕ ಮಾಹಿತಿಗಳನ್ನು “ಸಸ್ಯ ಸಗ್ಗ” ದಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ. ಅವರೊಂದಿಗೆ ನಾವು ನಡೆಸಿದ ಸಂವಾದದ ವಿಡಿಯೋವನ್ನು ನೀವು ನೋಡಿರಬಹುದು ಲೇಖನವನ್ನು ಓದಿರಲೂಬಹುದು. ಈಗ ಈ ಲೇಖನದಲ್ಲಿ ಸಸ್ಯ ಜಗತ್ತಿನ ಇನ್ನಷ್ಟು ರೋಚಕ ಮಾಹಿತಿ ನಿಮಗಾಗಿ ನೀಡುತ್ತಿದ್ದೇನೆ.

ನಮ್ಮ ಸುತ್ತಲೂ ಮೌನವಾಗಿ, ನಿಶ್ಚಲವಾಗಿ ನಿಂತಿರುವ ಮರಗಳನ್ನು ನಾವು ಕೇವಲ ಏಕಾಂಗಿ ಸಸ್ಯಗಳೆಂದು ಭಾವಿಸಿದ್ದೇವೆ. ಸಾವಿರಾರು ವರ್ಷ ಬದುಕುವ ಅವು, ಹೊರನೋಟಕ್ಕೆ ಕೇವಲ ಸೂರ್ಯನ ಬೆಳಕು ಮತ್ತು ನೀರನ್ನು ಹೀರಿ, ಉಳಿದವುಗಳೊಂದಿಗೆ ಪೈಪೋಟಿ ನಡೆಸುತ್ತವೆ ಎಂದು ನಂಬಿದ್ದೇವೆ. ಆದರೆ, ಈ ವಿಶಾಲ ವಿಶ್ವದಲ್ಲಿ ಪ್ರತಿಯೊಂದು ಜೀವಿಯೂ ತನ್ನ ಸ್ವಾರ್ಥಕ್ಕಾಗಿ ಮಾತ್ರ ಬದುಕುತ್ತಿಲ್ಲ; ಬದಲಿಗೆ, ಪರಸ್ಪರ ಹಂಚಿಕೊಂಡು ಬದುಕುವುದೇ 'ಸೃಷ್ಟಿಯ ಮೂಲ ಸೂತ್ರ' ಎಂಬ ಸತ್ಯವನ್ನು ಆಧುನಿಕ ಪರಿಸರ ವಿಜ್ಞಾನವು ಬಯಲು ಮಾಡಿದೆ.

ನಾವು ರಸಾಯನ ವಿಜ್ಞಾನದಲ್ಲಿ ಪರಮಾಣುಗಳ ಆಕರ್ಷಣೆ ಮತ್ತು ಎಲೆಕ್ಟ್ರಾನ್‌ಗಳ ಹಂಚಿಕೆಯಿಂದ ಸ್ಥಿರತೆ ಪಡೆಯುವ ಪಾಠವನ್ನು ಕಲಿತಂತೆ, ಮರಗಳು ಸಹ ತಮ್ಮ ನಿಶ್ಯಬ್ದದ ಆಳದಲ್ಲಿ ಅತ್ಯಂತ ಉದಾತ್ತವಾದ ಜೀವನ ಮೌಲ್ಯಗಳ ರಸಾಯನವನ್ನು ನಿರಂತರವಾಗಿ ಉಣಬಡಿಸುತ್ತಿವೆ. ಈ ಮೌನ ಗೋಡೆಗಳ ಕೆಳಗೆ, ನಮ್ಮ ಕಣ್ಣಿಗೆ ಕಾಣದ ಒಂದು ಗುಪ್ತ ಸಂವಹನ ಕ್ರಾಂತಿ ಸದಾ ಸಕ್ರಿಯವಾಗಿದೆ. ಈ ಜಾಲಬಂಧದ ಮೂಲಕ ಮರಗಳು ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ, ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತವೆ, ಮತ್ತು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ವರ್ಗಾಯಿಸುತ್ತವೆ. ಅಂದರೆ, ಕಾಡು ಒಂದು ಏಕಾಂಗಿ ಸಮೂಹವಲ್ಲ, ಬದಲಿಗೆ 'ಒಂದೇ ಜೀವಿಯಾಗಿ ಉಸಿರಾಡುವ' ಸಂಕೀರ್ಣ, ಸಮನ್ವಯದ ಸಮುದಾಯವಾಗಿದೆ ಎಂದರೆ ನಿಮಗೆ ಅಚ್ಚರಿಯಾದೀತು.

ಭೂಗತ ಮಾಯಾಲೋಕ: ಮೈಕೋರೈಜಲ್ ಮೈತ್ರಿ ಮತ್ತು ಕೋವಲೆಂಟ್ ಬಂಧ - ಮರಗಳ ನಡುವಿನ ಈ ಗುಪ್ತ ಭಾಷೆ ಬೇರುಗಳು ಮತ್ತು ಶಿಲೀಂಧ್ರಗಳ (Fungi) ನಡುವಿನ ಅದ್ಭುತ ಮೈತ್ರಿಯಿಂದ ಹುಟ್ಟಿದೆ. ಇದನ್ನು ಮೈಕೋರೈಜಲ್ ನೆಟ್‌ವರ್ಕ್ (Mycorrhizal Network) ಅಥವಾ "ವುಡ್ ವೈಡ್ ವೆಬ್" (Wood Wide Web) ಎಂದು ಕರೆಯಲಾಗುತ್ತದೆ.

ಶಿಲೀಂಧ್ರಗಳು ಮಣ್ಣಿನ ಸೂಕ್ಷ್ಮ ರಂಧ್ರಗಳಿಂದ ಮರಕ್ಕೆ ಅತ್ಯಗತ್ಯವಾದ ನೀರು, ರಂಜಕ (Phosphorus) ಮತ್ತು ಸಾರಜನಕದಂತಹ (Nitrogen) ಖನಿಜಗಳನ್ನು ಹೀರಿ ಒದಗಿಸುತ್ತವೆ. ಇದಕ್ಕೆ ಪ್ರತಿಯಾಗಿ, ಮರವು ದ್ಯುತಿಸಂಶ್ಲೇಷಣೆಯಿಂದ ಉತ್ಪಾದಿಸಿದ ಸಕ್ಕರೆಯನ್ನು ಶಿಲೀಂಧ್ರಗಳಿಗೆ ನೀಡುತ್ತದೆ. ಇದು ಕೇವಲ ಎರಡು ಜೀವಿಗಳ ನಡುವಿನ ವಿನಿಮಯವಲ್ಲ. ಇದು 'ಸಹಬಾಳ್ವೆ'ಯ ಕೋವಲೆಂಟ್ ಬಂಧ.

ರೇಡಿಯೋ ವಿಕಿರಣದ ಪ್ರಯೋಗ: ಬ್ರಿಟಿಷ್ ಕೊಲಂಬಿಯಾದ ವಿಜ್ಞಾನಿ ಸುಝೇನ್ ಸಿಮ್ಮರ್ಡ್ ಅವರು ರೇಡಿಯೋ ವಿಕಿರಣಯುಕ್ತ ಇಂಗಾಲವನ್ನು ಬಳಸಿ, ಒಂದು ಜಾತಿಯ ಮರವು (ಬರ್ಚ್) ಕಷ್ಟದಲ್ಲಿದ್ದ ಇನ್ನೊಂದು ಜಾತಿಯ ಮರಕ್ಕೆ (ಫರ್) ತನ್ನಲ್ಲಿದ್ದ ಹೆಚ್ಚುವರಿ ಆಹಾರವನ್ನು ಭೂಗತ ಜಾಲದ ಮೂಲಕ ಕಳುಹಿಸುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದರು. ಇದು ಅಗತ್ಯವಿರುವವರಿಗೆ ಸಹಾಯ ಮಾಡುವ, ಹೆಚ್ಚುವರಿಯಾದದ್ದನ್ನು ಹಂಚುವ ಅಯಾನಿಕ ಬಂಧದ ಧರ್ಮಕ್ಕೆ ಸಮಾನವಾಗಿದೆ.

ವಿಚಿತ್ರ ಸತ್ಯ: ಸತ್ತ ಬುಡದ ಬದುಕು

ಈ ಜಾಲಬಂಧದ ಶಕ್ತಿಗೆ ರೋಚಕ ಉದಾಹರಣೆ ಎಂದರೆ, ಕಾಡಿನಲ್ಲಿ ಕತ್ತರಿಸಲ್ಪಟ್ಟ ಮರದ ಬುಡಗಳು (Stumps) ಸಹ ಸುತ್ತಮುತ್ತಲಿನ ಆರೋಗ್ಯಕರ ಮರಗಳ ಮೂಲಕ ಸಂಪರ್ಕ ಹೊಂದಿ, ಹಲವು ವರ್ಷಗಳ ಕಾಲ ಜೀವಂತವಾಗಿ ಉಳಿಯಬಲ್ಲವು!!. ಇದನ್ನು ನೋಡಿದಾಗ, ಒಂದು ಅರಣ್ಯದಲ್ಲಿ ಬಿದ್ದವರನ್ನೂ, ನಾಶವಾದವರನ್ನೂ ಸಲುಹುವ ಒಂದು ದೊಡ್ಡ "ಪರೋಪಕಾರದ ಪಾಠ" ಇಲ್ಲಿರುವುದು ಅಚ್ಚರಿ ತಾರದಿರದು.

ನೆರಳು ಮತ್ತು ನೆರವು: ಬಂಧುತ್ವ, ಎಚ್ಚರಿಕೆ ಮತ್ತು ಜೈವಿಕ ಸಮತೋಲನ

ವುಡ್ ವೈಡ್ ವೆಬ್ ಕೇವಲ ಸಂಪನ್ಮೂಲ ಹಂಚಿಕೆಗಷ್ಟೇ ಸೀಮಿತವಾಗಿಲ್ಲ. ಇದು ಸಂಕೀರ್ಣ ಮಟ್ಟದ ಬುದ್ಧಿಮತ್ತೆ ಮತ್ತು ರಕ್ಷಣೆಯನ್ನು ಒಳಗೊಂಡಿದೆ.

ತಾಯಿ ಮರಗಳು ಮತ್ತು ಬಂಧುತ್ವದ ಗುರುತಿಸುವಿಕೆ!!!

ಕಾಡಿನ ದೊಡ್ಡ, ಹಳೆಯ ಮರಗಳು, ಅಂದರೆ 'ತಾಯಿ ಮರಗಳು' (Mother Trees), ಈ ಸಂಪೂರ್ಣ ಜಾಲಬಂಧದ ಕೇಂದ್ರಬಿಂದುಗಳಾಗಿ (Hubs) ಕೆಲಸ ಮಾಡುತ್ತವೆ.

·        ತಾಯಿ ಮರಗಳು ತಮ್ಮ ಮೈಕೋರೈಜಲ್ ಜಾಲದ ಮೂಲಕ ತಮ್ಮ ಬಂಧುತ್ವವನ್ನು ಗುರುತಿಸುತ್ತವೆ (Kin Recognition). ಅವು ತಮ್ಮದೇ ಬೀಜದಿಂದ ಬೆಳೆದ ಸಸಿಗಳಿಗೆ (Offspring) ಇತರ ಸಸಿಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ನಿರ್ದೇಶಿಸಿ ಕಳುಹಿಸುತ್ತವೆ.

·                   ಒಂದು ತಾಯಿ ಮರವು ಹಾನಿಗೊಳಗಾದಾಗ, ಅದು ತನ್ನ ಕೊನೆಯ ಶಕ್ತಿಯನ್ನು ಮತ್ತು ರಕ್ಷಣಾ ಸಂಕೇತಗಳನ್ನು ತನ್ನ ಮರಿಸಸಿಗಳಿಗೆ ಕಳುಹಿಸಿ, ಮುಂದಿನ ಪೀಳಿಗೆಯನ್ನು ಉಳಿಸಲು ಪ್ರಯತ್ನಿಸುತ್ತದೆ. ಯಾವುದೇ ಒಂದು ಮರಕ್ಕೆ ಕೀಟಗಳ ದಾಳಿಯಾದಾಗ, ಅದು ರಾಸಾಯನಿಕ ಸಂಕೇತಗಳನ್ನು ತನ್ನ ಜಾಲದ ಮೂಲಕ ತಕ್ಷಣವೇ ರವಾನಿಸುತ್ತದೆ. ಈ ಸಂದೇಶ ಪಡೆದ ಮರಗಳು, ದಾಳಿ ತಮ್ಮನ್ನು ತಲುಪುವ ಮೊದಲೇ, ಕೀಟಗಳನ್ನು ತಿನ್ನಲು ಸಾಧ್ಯವಾಗದಂತಹ ವಿಷಕಾರಿ ಅಥವಾ ಕಹಿ ರುಚಿಯ ರಕ್ಷಣಾತ್ಮಕ ಟ್ಯಾನಿನ್‌ಗಳನ್ನು (Tannins) ಉತ್ಪಾದಿಸಿ ಅಪಾಯವನ್ನು ಎದುರಿಸಲು ಸಿದ್ಧವಾಗುತ್ತವೆ. ಮರಗಳು ಕೇವಲ ತಮ್ಮನ್ನು ರಕ್ಷಿಸಿಕೊಳ್ಳುವುದಷ್ಟೇ ಅಲ್ಲ, ದಾಳಿಕೋರ ಕೀಟಗಳ ಶತ್ರುಗಳನ್ನು (Predators) ಆಕರ್ಷಿಸಲು ಸಹ ರಾಸಾಯನಿಕಗಳನ್ನು ಗಾಳಿಯಲ್ಲಿ ಮತ್ತು ಜಾಲದಲ್ಲಿ ಹೊರಹಾಕುತ್ತವೆ. ಉದಾಹರಣೆಗೆ, ಒಂದು ಮರವನ್ನು ತಿಂದ ಕಂಬಳಿಹುಳುವಿನ ಶತ್ರುಗಳಾದ ಪರಾವಲಂಬಿ ಕಣಜಗಳನ್ನು ಆಕರ್ಷಿಸುವ ರಾಸಾಯನಿಕ ವಸ್ತುವನ್ನು ಹೊರಹಾಕಿ ಶತ್ರು ಸಂಹಾರಕ್ಕೆ ವೇದಿಕೆ ಸೃಷ್ಟಿ ಮಾಡುತ್ತವೆ. ಎಂತಹ ಅದ್ಭುತ ಜೈವಿಕ ಯುದ್ಧತಂತ್ರ (Biological Warfare) ಅಲ್ವಾ?

ಮರಗಳು ಕೇವಲ ರಾಸಾಯನಿಕವಾಗಿ ಮತ್ತು ಜೈವಿಕವಾಗಿ ಸಂವಹನ ನಡೆಸುವುದಲ್ಲ, ಬದಲಿಗೆ ಅವುಗಳ ಸ್ಥೂಲ ಶರೀರವು ಕೂಡ ಮೌಲ್ಯಗಳನ್ನು ಮತ್ತು ವಿಶಿಷ್ಟ ಗುಣಗಳನ್ನು ಪ್ರದರ್ಶಿಸುತ್ತದೆ. ಮರಗಳು ನಮಗೆ ಸಹನೆ (Patience) ಮತ್ತು ಸ್ಥಿರತೆ (Stability)ಯ ಪಾಠ ಕಲಿಸುತ್ತವೆ. ಮರದ ಕಾಂಡದಲ್ಲಿ ಕಾಣುವ ಪ್ರತಿ ವಾರ್ಷಿಕ ವಾರ್ಷಿಕ ಉಂಗುರಗಳು(Annual Rings) ಆ ಮರವು ಕಳೆದ ಹಾಗೂ ಅನುಭವಿಸಿದ ಒಂದು ವರ್ಷದ ಬದುಕಿನ ದಾಖಲೆ. ಬರಗಾಲ, ಮಳೆ, ಕಾಡ್ಗಿಚ್ಚಿನಂತಹ ಎಲ್ಲಾ ಇತಿಹಾಸವೂ ಈ ಪದರಗಳಲ್ಲಿ ಅಡಗಿರುತ್ತದೆ. ಈ ವಾರ್ಷಿಕ ಉಂಗುರಗಳ ವೈವಿಧ್ಯವು, ಕಷ್ಟದ ದಿನಗಳಲ್ಲೂ ಮರವು ತನ್ನ ಬೆಳವಣಿಗೆಯನ್ನು ನಿಲ್ಲಿಸದೆ, ನಿಧಾನವಾಗಿಯಾದರೂ ಮುಂದುವರಿಸಿದೆ ಎಂಬುದನ್ನು ತೋರಿಸುತ್ತದೆ. ಎಂತಹ ಬಿರುಗಾಳಿ ಬಂದರೂ ಮುರಿಯದೆ ನಿಲ್ಲುವ ಮರದ ಕಾಂಡವು, ಅದರೊಳಗಿನ ಸೆಲ್ಯುಲೋಸ್ ಮತ್ತು ಲಿಗ್ನಿನ್‌ನ ಅಣುಗಳ ಬಲವಾದ ಶಿಸ್ತಿನ ಜೋಡಣೆಯ (Solid State) ಫಲವಾಗಿದೆ. ಇದು, ಸಂಘಜೀವನ ಮತ್ತು ಶಿಸ್ತಿನ ಬಲದಿಂದ ಬಾಹ್ಯ ಒತ್ತಡಗಳನ್ನು ಎದುರಿಸುವ ಕಲೆಯನ್ನು ಕಲಿಸುತ್ತದೆ. ಮರಗಳು ತಮ್ಮ ಫ್ಲೋಯಂ (Phloem) ಅಂಗಾಂಶದ ಮೂಲಕ ಅಥವಾ ಶಿಲೀಂಧ್ರ ಜಾಲದ ಮೂಲಕ ವಿದ್ಯುತ್ ಸಂಕೇತಗಳನ್ನು (Electrical Impulses) ರವಾನಿಸುತ್ತವೆ. ಈ ಸಂಕೇತಗಳು ರಾಸಾಯನಿಕಗಳಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ, ಇದು ಅನಿವಾರ್ಯ ಪರಿಸ್ಥಿತಿಗಳಲ್ಲಿ ತಕ್ಷಣದ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ.

ಒಂದು ಕಾಡಿನ ಭಾಗದಲ್ಲಿ ಬರಗಾಲದ ಲಕ್ಷಣಗಳು ಕಂಡಾಗ, ಮೈಕೋರೈಜಲ್ ಜಾಲದ ಮೂಲಕ ಸಾಗುವ ಸಂಕೇತಗಳು ದೂರದಲ್ಲಿರುವ ಮರಗಳನ್ನೂ ತಲುಪುತ್ತವೆ. ಈ ಸಂದೇಶಗಳನ್ನು ಗ್ರಹಿಸಿದ ಮರಗಳು, ಬರಗಾಲ ಬರುವುದಕ್ಕಿಂತ ಮೊದಲೇ, ನೀರನ್ನು ಸಂರಕ್ಷಿಸಲು ತಮ್ಮ ಎಲೆಗಳಲ್ಲಿನ ಪತ್ರರಂಧ್ರಗಳನ್ನು (Stomata) ಮುಚ್ಚಲು ಪ್ರಾರಂಭಿಸುತ್ತವೆ. ಕಷ್ಟಕಾಲವನ್ನು ಊಹಿಸಿ ಅದಕ್ಕೆ ಹೇಗೆ ಸಿದ್ಧವಾಗಬೇಕೆಂದು ನಮಗೆ ಪಾಠ ಹೇಳುವಂತಿದೆ.

ಮರಗಳ ಗುಪ್ತ ಜೀವನದ ಸಾರಾಂಶ ಒಂದೇ: ಉಳಿದುಕೊಳ್ಳಲು ಪೈಪೋಟಿಗಿಂತ ಸಹಕಾರವೇ ಪ್ರಮುಖ ವಿಕಾಸದ ತಂತ್ರ. ಎಲೆಗಳನ್ನು ಉದುರಿಸುವ ಮೂಲಕ ಅಥವಾ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂಲಕ ಮರವು ಕಠಿಣ ದಿನಗಳಲ್ಲಿ ಶಕ್ತಿಯನ್ನು ವ್ಯರ್ಥ ಮಾಡದೆ ಇರುವುದು, 18ನೇ ಗುಂಪಿನ ಜಡಾನಿಲಗಳ (Inert Gases)  ರಾಜಗಾಂಭೀರ್ಯ ಗುಣವನ್ನು ನೆನಪಿಸುತ್ತದೆ. ಇದು 'ಜಿತೇಂದ್ರಿಯ'ರಂತೆ ಬದುಕುವ, ಆಂತರಿಕ ಸಮೃದ್ಧಿಯನ್ನು ಕಾಪಾಡಿಕೊಳ್ಳುವ ಮೌಲ್ಯವನ್ನು ಕಲಿಸುತ್ತದೆ. ಈ ಜಾಲಬಂಧದ ಕೇಂದ್ರಬಿಂದುಗಳಾದ ತಾಯಿ ಮರಗಳನ್ನು ಕತ್ತರಿಸಿದಾಗ, ನಾವು ಕತ್ತರಿಸುತ್ತಿರುವುದು ಮರವನ್ನಲ್ಲ, ಬದಲಿಗೆ ಮಿಲಿಯನ್‌ಗಟ್ಟಲೆ ವರ್ಷಗಳಿಂದ ನಿರ್ಮಾಣವಾದ ಒಂದು ಸೂಕ್ಷ್ಮ ಜಾಲಬಂಧವನ್ನು ಎನ್ನುವ ವಾಸ್ತವ ಪ್ರಜ್ಞೆ ನಮಗಿರಬೇಕು. ಈ ಸಂಪರ್ಕವನ್ನು ಉಳಿಸಿಕೊಂಡರೆ ಮಾತ್ರ, ಹೊಸ ಸಸಿಗಳು ಬೆಳೆದು ಹವಾಮಾನ ಬದಲಾವಣೆಯಂತಹ ಒತ್ತಡಗಳನ್ನು ಎದುರಿಸಲು ಸಾಧ್ಯ. ಮರಗಳಲ್ಲಿ ಸೃಜಿಸಿದ, ಗುಪ್ತಗಾಮಿನಿಯಾದ ಸಹಕಾರ ಜಾಲಬಂಧವನ್ನು (Cooperative Network) ಹೆಚ್ಚು ವಿಕಾಸಗೊಂಡ , ಅತಿ ಬುದ್ಧಿವಂತರೆನಿಸಿದ ಮನುಷ್ಯರಾದ ನಾವೂ ನಮ್ಮ ಸಮಾಜದಲ್ಲಿ, ನಮ್ಮ ಕುಟುಂಬದಲ್ಲಿ, ನಮ್ಮ ಸಂಬಂಧಗಳಲ್ಲೂ ಹಾಸುಹೊಕ್ಕಾಗಿಸಬೇಕಿದೆ. ಆಗಲೇ ನಮ್ಮ ಬದುಕು ಮರಗಳಂತೆ ಸದೃಢ ಮತ್ತು ಸುಸ್ಥಿರವಾಗಿರಲು ಸಾಧ್ಯ.

No comments:

Post a Comment