ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, May 4, 2021

ಅರಣ್ಯದ ರೋಚಕತೆಗಳು

ಅರಣ್ಯದ ರೋಚಕತೆಗಳು

ಲೇಖಕರು: ಡಿ.ಕೃಷ್ಣ ಚೈತನ್ಯ.

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹಾಯ್ ಗೆಳೆಯರೆ, ಕಳೆದ ಸಂಚಿಕೆಯಲ್ಲಿ ʼವನ್ಯಜೀವಿಗಳು : ನಮ್ಮಹಿತೈಷಿಗಳುʼ ಎಂಬ ಲೇಖನವನ್ನು ತಮ್ಮ ಮುಂದಿಟ್ಟಿದ್ದೆ ಅಲ್ಲವೇ? ಅಂತದ್ದೇ ಒಂದು ಲೇಖನ, ಆದರೆ ಭಿನ್ನವಾದ ಸಂಗತಿಗಳುಳ್ಳ ರೋಚಕತೆಯಿಂದ ಕೂಡಿರುವ, ರೋಮಾಂಚನವನ್ನುಂಟುಮಾಡುವ ಅಂಶಗಳುಳ್ಳ ಸಂಗತಿ ಇದ್ದರೆ ಚೆನ್ನ, ಅಲ್ಲವೇ? ಮಾರ್ಚ್ 21, ವಿಶ್ವ ಅರಣ್ಯ ದಿನ ಆಚರಿಸಿದೆವು. ಅದರ ಹಿನ್ನೆಲೆಯಲ್ಲಿ ಅರಣ್ಯದ ಕೆಲವು ರೋಚಕ ಅಂಶಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.


 

ಕಾಡು ವಿಭಿನ್ನ ಹಾಗೂ ವಿಶಿಷ್ಟ ಜೀವಿಗಳನ್ನು ಹೊಂದಿರುವ ಒಂದು ಅದ್ಭುತ ತಾಣ. ನೀವೇನಾದರು ಅಲ್ಲಿಗೆ ಭೇಟಿ ನೀಡಿದರೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ನಿಗದಿತ ಹಣ ಕೊಟ್ಟು, ಸಂಚಾರದ ಮಾರ್ಗದಲ್ಲಿ ಕಾಣಿಸುವ ಜೀವಿಗಳನ್ನು ಮಾತ್ರ ನೋಡಿ ಹಿಂದಿರುಗಬೇಕು. ಆದರೆ, ನೇಚರ್ ಕ್ಯಾಂಪ್‌ಗೆ ತೆರಳಿದರೆ, ಅಬ್ಬಾ ! ನಡೆದೇ ನಿಸರ್ಗದ ರಮಣೀಯತೆಯನ್ನು ಆಸ್ವಾದಿಸುತ್ತಾ ಸಾಗುವುದು ಮನಸ್ಸಿಗೆ ಎಷ್ಟೊಂದು ಮುದನೀಡುವ ವಿಚಾರವಲ್ಲವೇ ? ಅದು, 2002ರ ವರ್ಷ!!! ಹುಲಿ ಸಂರಕ್ಷಿತ ವನ್ಯಧಾಮದಲ್ಲಿ ನಡೆದುಕೊಂಡು ಹೋಗಬೇಕು, ಅದರಲ್ಲೂ ವಿದ್ಯಾರ್ಥಿಗಳೊಂದಿಗೆ, ಎನ್ನುವುದನ್ನು ನೆನೆಸಿಕೊಂಡಾಗಲೆಲ್ಲ ಮೈಯಲ್ಲಿ ಅನಿರ್ವಚನೀಯ ರೋಮಾಂಚನ. ನನಗೇ ಹಾಗೆ ಅನ್ನಿಸಿರಬೇಕಾದರೆ ಇನ್ನು ಮಕ್ಕಳಿಗೆ ???! ಕಾಡಿನಲ್ಲಿರುವ ಸಂಗತಿಗಳನ್ನು ಒಂದೊಂದಾಗಿ ವಿವರಿಸಿಕೊಂಡು ಮುಂದೆ ಸಾಗುತ್ತಿರಬೇಕಾದರೆ ಕಾಡಿನ ಪ್ರಾಣಿಗಳು ನಮ್ಮನ್ನು ಕಂಡು ಓಡಿಹೋಗುತ್ತಿದ್ದವು. ಎಷ್ಟೋ ಜನ ಕಾಡಿನಲ್ಲಿ ತಿರುಗಾಡುವಾಗ ಕಾಡು ಪ್ರಾಣಿಗಳು ನಮ್ಮ ಮೇಲೆ ಮುಗಿಬೀಳುತ್ತವೆ ಎಂದು ಹೇಳುತ್ತಿದ್ದರೆ, ಇವು ನಮಗೆ ಹೆದರಿ ಓಡಿಹೋಗುತ್ತಿವೆಯಲ್ಲಾ ಎಂದು ಆಶ್ಚರ್ಯವಾಗುತ್ತಿತ್ತು. ಕಾಡಿನ ಜಾಡಿನಲ್ಲಿ ನಡೆದಾಡುತ್ತಾ ಹೋಗುವಾಗ ಇಕ್ಕೆಲಗಳಲ್ಲಿ ಇರುತ್ತಿದ್ದ ಪೊದೆಗಳ ಹಿಂದೆ ಹುಲಿ, ಚಿರತೆಗಳು ನಮ್ಮನ್ನು ಗಮನಿಸುತ್ತಿರುತ್ತವೆ ಎಂದು ಖ್ಯಾತ ಪರಿಸರತಜ್ಞ ಕೆ. ಎಂ. ಚಿಣ್ಣಪ್ಪನವರು ಹೇಳಿದಾಗ ಬೆರಗಾಗುವ ಸರದಿ ನಮ್ಮದಾಗಿತ್ತು.

ಒಮ್ಮೆ ಹೀಗೆ ಕ್ಯಾಂಪ್‌ಗೆ ಹೋಗಿದ್ದಾಗ ಮಳೆ ಬಂತು. ಮಕ್ಕಳನ್ನು ಬಿಟ್ಟು ನಮ್ಮನ್ನು ಒಂದು ಜೀಪ್‌ನಲ್ಲಿ ಚಿಣ್ಣಪ್ಪನವರು ದೊಡ್ಡ ಮರದ ಬಳಿಗೆ ಕರೆದುಕೊಂಡು ಹೋದರು. ನಾಗರಹೊಳೆಯಲ್ಲಿ ದೊಡ್ಡ ಮರ ಎಂದರೆ ಅಂತಿಂಥ ಮರವಲ್ಲ! ಕೋಟಿ ಬೆಲೆ ಬಾಳುವ ದಪ್ಪ ತೇಗದ ಮರ. ಎಷ್ಟು ದಪ್ಪ ಅಂತೀರಾ? ಸಾಧಾರಣ ವ್ಯಕ್ತಿ ಅಂದರೆ ಸುಮಾರು ಐದು ಮುಕ್ಕಾಲು ಅಡಿ ಎತ್ತರವಿರುವ ನಾಲ್ಕು ಜನ ಎದೆಯ ಮಟ್ಟದಲ್ಲಿ ತಬ್ಬಿ ಹಿಡಿದರೂ ಒಂದು ಅಡಿ ಉಳಿಯುತ್ತಿತ್ತು! ಅದನ್ನು ನೋಡಿ ವಾಪಸ್ಸು ಬರಬೇಕಾದರೆ ಚಿಣ್ಣಪ್ಪನವರು ‘ರೀ, ಅಲ್ನೋಡ್ರಿ’ ಎಂದು ತೊಡೆಗೆ ತಿವಿದರು. ನಾನು ಅವರು ತೋರಿಸಿದ ಕಡೆ ನೋಡಿದರೆ ಅಲ್ಲೊಂದು ತಮಾಷೆ ನಡೆಯುತ್ತಿತ್ತು. ಏನು ಅಂತೀರಾ? ಒಂದು ಚಿರತೆ ಮರವನ್ನು ಅರ್ಧ ಹತ್ತುವುದು ಮತ್ತೆ ಇಳಿಯುವುದು, ಹೀಗೆ ಪುನರಾವರ್ತನೆ ಆಗುತ್ತಿತ್ತು. ಇದು ಏಕೆ ಸರ್ ಎಂದೆ. ‘ಸುಮ್ನೆ ಮೇಲ್ನೋಡ್ರಿ’ ಅಂತ ತೋರಿಸಿದರು. ಕಾಡಿನ ಅನುಭವಗಳು ನನಗೆ ಅಂದಿನ ವರ್ಷಗಳಿಗೆ ಕಡಿಮೆಯೇ. ತಲೆ ಬಗ್ಗಿಸಿ ಜೀಪಿನ ಗಾಜಿನಿಂದ ಮೇಲಕ್ಕೆ ಇಣುಕಿದೆ.

         


 

ಅಲ್ಲಿ ನೋಡಿದರೆ ಐದಾರು ಮುಸುವ (ಕಪ್ಪು ಮುಖದ ಕೋತಿ)ಗಳು ಆ ಕೊಂಬೆಯಿಂದ ಈ ಕೊಂಬೆಗೆ, ಈ ಕೊಂಬೆಯಿಂದ ಮತ್ತೊಂದು ಕೊಂಬೆಗೆ ನೆಗೆದು ಓಡಾಡುತ್ತಿದ್ದವು ಮತ್ತೆ ಸುಮ್ಮನಾಗುತ್ತಿದ್ದವು!!! ‘ಏನು ಸರ್ ಇದು? ನನಗೆ ಏನೂ ಅರ್ಥವಾಗುತ್ತಿಲ್ಲ’ ಎಂದೆ.

ಈ ಕಡೆ ನೋಡ್ರಿ’ ಅಂತ ಎಡಗಡೆ, ಕೆಳಕ್ಕೆ ಅಂದರೆ ಸುಮಾರು 50 ಮೀ ದೂರದತ್ತ ಕೈ ತೋರಿಸಿದರು. ನಾಲ್ಕೈದು ಕಾಡು ನಾಯಿಗಳು ಮುಸುವಗಳಿರುವ ಮರದ ಕಡೆಗೆ ನೆಗೆದುಕೊಂಡು ಬರುತ್ತಿದ್ದವು. ಮತ್ತೆ ಹಿಂದಕ್ಕೆ ಓಡಿಹೋಗುತ್ತಿದ್ದವು. ಮತ್ತೆ ನನಗೋ ಹೊಸ ಅನುಭವ. ‘ಇದೇನು ಕತೆ ಸರ್ ?’ ಎಂದು ಕೇಳಿದೆ. ಆಗ ಅವರು ಕೊಟ್ಟ ಉತ್ತರ ಅರ್ಥಾತ್ ವಿವರಣೆ ಬೆರಗು ಮೂಡಿಸಿತು.

ಮುಸುವಗಳು ಏಕೆ ಅತ್ತಿಂದಿತ್ತ ಓಡಾಡುತ್ತಿವೆ ಎಂದರೆ ಚಿರತೆ ಮರಹತ್ತಿ ಬಂದು ನಮ್ಮನ್ನು ಹಿಡಿದುಬಿಡುತ್ತದೆ ಎಂಬ ಹೆದರಿಕೆಯಿಂದ. ಚಿರತೆ ವಾಪಸ್ಸು ನೆಲಕ್ಕೆ ಜಿಗಿದಾಗ ಸುಮ್ಮನಾಗುತ್ತಿವೆ. ಮತ್ತೆ ಕಾಡುನಾಯಿಗಳದ್ದು ಏನು ಸಮಾಚಾರ ಸರ್ ಎಂದರೆ, ಚಿರತೆ ಮರ ಹತ್ತಿದಾಗ ಗಾಬರಿಯಿಂದ ಏನಾದರು ಮುಸುವ ಕೆಳಗೆ ಬಿದ್ದರೇ ನಮಗೆ ಊಟ ಸಿಗಬಹುದೆಂದು ಹತ್ತಿರಕ್ಕೆ ನೆಗೆದು ಬರುತ್ತಿವೆ ಎಂದರು. ಮತ್ತೆ ನಾಯಿಗಳು ವಾಪಸ್ಸು ಓಡುವುದೇಕೆ ಎಂದೆ. ಏಕೆಂದರೆ ಮರದಿಂದ ಚಿರತೆ ವಾಪಸ್ಸು ನೆಗೆದು ನಮ್ಮನ್ನೇ ಹಿಡಿದರೆ ಅಂತ ವಾಪಸ್ಸು ಓಡುತ್ತಿವೆ ಎಂದಾಗ ಇದೆಂಥ ಅದ್ಭುತ ಸನ್ನಿವೇಶ ಎಂದುಕೊಂಡೆ.

2005ರಲ್ಲಿ ಬಂಡೀಪುರದಲ್ಲಿ ʼಟೀಚರ್ ಫಾರ್ ಟೈಗರ್ಸ್ʼ ಎಂಬ ಕಾರ್ಯಾಗಾರಕ್ಕೆ ತೆರಳಿದ್ದಾಗ ನಡೆದ ಒಂದು ಘಟನೆ ನೆನಪಾಯಿತು. ಸಫಾರಿ ವಾಹನದಲ್ಲಿ ತೆರಳಿದ್ದಾಗ ಮೊದಲಿಗೆ ಒಂದು ಆನೆ, ಮೂವತ್ತೈದು-ನಲ್ವತ್ತು ಅಡಿ ದೂರದಲ್ಲಿ ಕಾಣಸಿಕ್ಕಿತು. ಚಾಲಕ ವಾಹನ ನಿಲ್ಲಿಸದೆ ಮುಂದೆ ಚಲಾಯಿಸಿಕೊಂಡು ಹೋದ. ನೋಡಿದರೆ, ಆನೆಹಿಂಡು! ತಕ್ಷಣ ವಾಹನ ನಿಲ್ಲಿಸಿದ. ಎಂಥ ಅದ್ಭುತ ಘಟನೆ, ಅಬ್ಬಾ! ನಾನು ಬೇರೆ ಕಿಟಕಿಯ ಬಳಿಯೇ ಕುಳಿತಿದ್ದೆ, ಕೈಯಲ್ಲಿ ಪುಟ್ಟ ಕ್ಯಾಮರ. ಮೊದಲು ನೋಡಿದ ಆನೆ ಘೀಳಿಡುತ್ತಾ ನಮ್ಮ ನೇರದಲ್ಲಿ ಪೊದೆ ಮತ್ತು ಮರಗಳ ನಡುವೆ ನುಗ್ಗಿ ಲಟಪಟ ಅಂತ ರೆಂಬೆಗಳನ್ನು ಮುರಿದುಕೊಂಡು ಹೋಗಿ, ಕಾಡಿನಿಂದ ಅಷ್ಟೇ ವೇಗದಲ್ಲಿ ಹೊರಬಂದು ನಮ್ಮ ಕಡೆಗೆ ನುಗ್ಗಿಬಂತು. ನಾವೆಲ್ಲ ಹೆದರಿ ಮುದುರಿಕೊಂಡಿದ್ದೆವು. ಅಷ್ಟರಲ್ಲಿ ಚಾಲಕ ಯಾರೂ ಕಿರುಚಬೇಡಿ ಎಂದು ಸೂಚನೆ ಕೊಟ್ಟ. ಆನೆ ಎಷ್ಟು ರಭಸದಿಂದ ಬಂತೆಂದರೆ ನಮ್ಮ ವಾಹನವನ್ನು ಗುದ್ದಿ ಬೀಳಿಸುತ್ತದೇನೋ ಎನ್ನುವಂತಿತ್ತು. ಆದರೆ ಇದ್ದಕ್ಕಿದ್ದಂತೆ ಸುಮಾರು ಐದಡಿ ದೂರದಲ್ಲಿ ನಿಂತುಬಿಟ್ಟಿತು. ಆಶ್ಚರ್ಯ, ಉದ್ವೇಗದಿಂದ ಕೂಡಿದ್ದ ಮನಸ್ಸು ಮತ್ತು ಕಂಗಳು, ನರನಾಡಿಗಳು ನಖಶಿಖಾಂತ ಅದುರುತ್ತಿದ್ದರೂ, ಗಪ್ಪೆಂದು ಅವುಗಳನ್ನು ಅನಿವಾರ್ಯವಾಗಿ ಹಿಡಿದಿಡಬೇಕಿತ್ತು.

ಸುಮಾರು ಹತ್ತು ನಿಮಿಷ ಅಲ್ಲೆ ಠಿಕಾಣಿ ಹೂಡಿದ್ದ ಆನೆ ನಂತರ ಅಲ್ಲೇ ಹುಲ್ಲನ್ನು ಕಿತ್ತು ತಿನ್ನುತ್ತಾ ನಿಂತುಬಿಟ್ಟಿತು. ಅರ್ಧ ಗಂಟೆ ಅಲುಗಾಡಲಿಲ್ಲ. ವಾಹನವು ಮುಂದೆ ಹೋಗುವಂತಿರಲಿಲ್ಲ. ನಂತರವಷ್ಟೆ ಆನೆ ಹಿಂದಕ್ಕೆ ತೆರಳಿತು. ಆಮೇಲೆ ವಾಹನ ಮುಂದಕ್ಕೆ ಸಾಗುತ್ತಿದ್ದಂತೆ ಆನೆ ಅಟ್ಟಿಸಿಕೊಂಡು ಬರಲಾರಂಭಿಸಿತು. ವಾಹನ ದೂರ ಸಾಗುತ್ತಿದ್ದಂತೆ ಆನೆ ದೂರದಲ್ಲೆಲ್ಲೋ ಕಣ್ಮರೆಯಾಯಿತು.

 

ಇಂಥಹ ಅದೆಷ್ಟೋ ರೋಚಕ ಕ್ಷಣಗಳನ್ನು ಒಡಲೊಳಗೆ ಅಡಗಿಸಿಟ್ಟುಕೊಂಡಿರುವ ಅರಣ್ಯ ನಮ್ಮನ್ನು ಪೋಷಿಸುತ್ತಿರುವುದೂ ಅಷ್ಟೇ ರೋಚಕವಾಗಿದೆ. ವನ್ಯಜೀವಿಗಳಿಗೆ ನೆಲೆಯಾಗಿದ್ದ ಅರಣ್ಯ 1900ರಲ್ಲಿ 55%ರಷ್ಟಿದ್ದು ಇಂದು ಕೇವಲ 4%ಗೆ ಇಳಿದಿದೆ ಎಂದರೆ ಅದಕ್ಕೆ ಒದಗಿರುವ ದುಃಸ್ಥಿತಿಗೆ ನಾವೇ ಕಾರಣರಾಗಿರುವುದು ದುರದೃಷ್ಟವಲ್ಲದೇ ಮತ್ತಿನ್ನೇನು? ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ವಿಸ್ತರಿಸುತ್ತಿರುವ ಕೃಷಿಭೂಮಿ, ಹೆಚ್ಚುತ್ತಿರುವ ರಾಜ್ಯ ಮತ್ತು ರಾಷ್ತ್ರೀಯ ಹೆದ್ದಾರಿಗಳು, ತುಂಬದಿದ್ದರೂ ಅಸ್ಥಿಪಂಜರದಂತಿರುವ ಕೆಲವು ಅಣೆಕಟ್ಟೆಗಳು, ತುಂಬಿದರೂ ಅಪಾರ ಕೃಷಿಭೂಮಿ ಮತ್ತು ಅರಣ್ಯವನ್ನು ಆಪೋಷನ ತೆಗೆದುಕೊಂಡ ನೀರು, ವಿವೇಕವಿಲ್ಲದ ಆಡಳಿತ ಯಂತ್ರ, ಇವುಗಳಿಂದಾಗಿ ತುಂಡು ತುಂಡಾದ ಅರಣ್ಯಗಳು ಒಡೆದ ಹಾಲಿನಂತಾಗಿವೆ. ತುಂಗಭದ್ರಾ ಅಣೆಕಟ್ಟೆಯು ಸುಮಾರು ಹಳ್ಳಿಗಳ ಕೃಷಿಭೂಮಿ ಮತ್ತು ಅರಣ್ಯ ಪ್ರದೇಶಗಳನ್ನು ಮುಳುಗಿಸಿತು. ಬೆಂಗಳೂರಿಗೆ ಕುಡಿಯುವ ನೀರಿಗೆಂದು ಮೇಕೆದಾಟು ಯೋಜನೆ ಈಗ ಹೂಳು ತುಂಬಿದೆ ಎಂದು ತುಂಗಭದ್ರಕ್ಕೆ ಮತ್ತೊಂದು ಪರ್ಯಾಯ ಅಣೆಕಟ್ಟು ಕಟ್ಟುವ ಯೋಜನೆಯೊಂದು ಸಿದ್ಧವಾಗುತ್ತಿದೆ! ಉಳಿದಿರುವ ಅರಣ್ಯ ಯಾವಾಗ ಮತ್ತು ಯಾರಿಗೆ ಆಪೋಷನವಾಗುತ್ತದೆಯೋ ತಿಳಿದವರು ಯಾರು?

ಹೀಗೆ, ಮನುಷ್ಯನಿಂದ ವನ್ಯಜೀವಿಗಳು ಮತ್ತು ವನಸಂಪತ್ತಿನ ಹನನ ಅನಿಯಂತ್ರಿತವಾಗಿ ಸಾಗುತ್ತಲೇ ಇದೆ. ಕೊನೆಗೆ ನಮ್ಮನ್ನೇ ಕೇಳಬೇಕಾದ ಪ್ರಶ್ನೆ ಮನಷ್ಯನ ಅಂತ್ಯದವರೆಗೂ ಇದು ಅವ್ಯಾಹತವೇ? ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಿದೆಯೇ? ನಾವು ನೀವು ಸೇರಿ ಏನಾದರೂ ಮಾಡಬಹುದೇ? ಏನಂತೀರಿ?

ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು 

ಇಲ್ಲಿ ಕ್ಲಿಕ್ ಮಾಡಿ 👉 ಅರಣ್ಯದ ರೋಚಕತೆಗಳು



11 comments:

  1. ಅರಣ್ಯಗಳು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಅರಣ್ಯಗಳ ಬಗೆಗಿನ ಲೇಖನ ಉತ್ತಮವಾಗಿತ್ತು.

    ReplyDelete
  2. alarming!!!!
    time to think about our contribution.....

    ReplyDelete
  3. ಸ್ವಾನುಭವ, ಉತ್ತಮವಾಗಿ ಪ್ರಸ್ತುತಪಡಿಸಿದ್ದೀರಿ.ಅಭಿನಂದನೆಗಳು,ಸರ್.

    ReplyDelete
  4. ನಿಮ್ಮ ಲೇಖನವನ್ನು ಓದಿದಾಗ ನಾನೇ ಅರಣ್ಯ ಪ್ರವೇಶಿಸಿದ ಅನುಭವವಾಯಿತು. ತಮ್ಮ ಲೇಖನವು, ಅರಣ್ಯ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಗಿದೆ. ಅಭಿನಂದನೆಗಳು ಸರ್🌺

    ReplyDelete
  5. when I read yr article sir I felt a realistic experience .very nice

    ReplyDelete
  6. So beautiful article sir.
    Forest inbuilt amazing things.

    ReplyDelete
  7. ಧನ್ಯವಾದಗಳು.... ಚೈತನ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ....ನಿನ್ನ ಬೆಳವಣಿಗೆಯನ್ನು ನೋಡಿ ಮನಸ್ಸು ತುಂಬಿ ಬಂದಿದೆ.. Keep doing good
    things.......

    ReplyDelete