ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, May 4, 2021

ಚಾರ್ಲ್ಸ್ ಡಾರ್ವಿನ್ - ಮನುಕುಲದ ಅರಿವನ್ನು ವಿಸ್ತರಿಸಿದ ಮಹಾಚೇತನ

ಚಾರ್ಲ್ಸ್ ಡಾರ್ವಿನ್ - ಮನುಕುಲದ ಅರಿವನ್ನು ವಿಸ್ತರಿಸಿದ ಮಹಾಚೇತನ

ಲೇಖಕರು: ರಾಘವೇಂದ್ರ ಮಯ್ಯ ಎಂ.ಎನ್. 

ಸ.ಶಿ.  ಸರ್ಕಾರಿ ಪ್ರೌಢಶಾಲೆ ,

ಬೈರಾಪಟ್ಟಣ. ಚನ್ನಪಟ್ಟಣ. 

ರಾಮನಗರ ಜಿಲ್ಲೆ . 




ಅದು 1860ನೇ ಇಸವಿಯ ಒಂದು ದಿನ, ಆಕ್ಸ್ಫರ್ಡ್ ಸಭಾಂಗಣದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ವೇದಿಕೆಯ ಮೇಲೆ ಬಿಷಪ್ ಸಾಮ್ಯುಯಲ್ ವಿಲ್‌ಬರ್‌ಫೋರ್ಸ್ ಮತ್ತು ವಿಜ್ಞಾನಿಗಳಾದ ಹಕ್ಸ್ಲೀ ಮತ್ತು ಹೂಕರ್ ಇದ್ದರು. ನೆರೆದಿದ್ದವರಲ್ಲಿ ಬಹುಪಾಲು ಕ್ರೈಸ್ತ ಆಸ್ತಿಕರು. ಕೆಲವೇ ದಿನಗಳ ಹಿಂದೆ ಅವರು ಗ್ರಂಥವೊಂದನ್ನು ಸುಡಲು ಯೋಜಿಸಿದ್ದರು. ಆ ಗ್ರಂಥ ಅವರ ಧಾರ್ಮಿಕ ಭಾವನೆಯ ಮೇಲೆ ಗಧಾ ಪ್ರಹಾರ ಮಾಡಿತ್ತು. ಕ್ರೈಸ್ತ  ಗುರುಗಳು ತತ್ತರಿಸಿ ಹೋಗಿದ್ದರು. ಆ ಗ್ರಂಥದಲ್ಲಿನ ಸಿದ್ಧಾಂತ ಸುಳ್ಳೆಂದು ಸಾಬೀತು ಮಾಡುವುದಕ್ಕೆಂದೇ ಬ್ರಿಟಿಷ್ ಅಸೋಸಿಯೇಷನ್‌ನ ಆ ಸಭೆಯನ್ನು ಆಕ್ಸ್‌ಫರ್ಡ್  ಸಭಾಂಗಣದಲ್ಲಿ ಸೇರಿಸಲಾಗಿತ್ತು. ಗ್ರಂಥದ ಲೇಖಕನಿಗೆ ಇವರನ್ನು ಎದುರಿಸುವ ಚೈತನ್ಯವಿರಲಿಲ್ಲ. ಜೊತೆಗೆ, ತೀವ್ರತರವಾದ ಖಾಯಿಲೆ. ಹೀಗಾಗಿ ಅವನ ಗೆಳೆಯರಾದ ಡಾ|| ಹಕ್ಸ್ಲೀ ಮತ್ತು ಪ್ರೊ|| ಹೂಕರ್ ಬಂದಿದ್ದರು. ಬಿಷಪ್ ಎದ್ದು ನಿಂತರು. ಗಿಜಿಗುಡುತ್ತಿದ್ದ ಸಭಾಂಗಣ ಶಾಂತವಾಯಿತು. ಅತ್ಯುತ್ತಮ ವಾಗ್ಮಿ ಎಂದು ಹೆಸರು ಮಾಡಿದ್ದ ಬಿಷಪ್ ಸ್ವತಃ ಪುಸ್ತಕ ಓದಿರಲಿಲ್ಲ. ಸಹಾಯಕರು ಹೇಳಿದ ಸಾರಾಂಶ ಅವರ ತಲೆಯಲ್ಲಿತ್ತು. ಸತತ ಒಂದು ಗಂಟೆಯ ಕಾಲ ಗ್ರಂಥವನ್ನು ಟೀಕಿಸಿ ಅವರು ಮಾತನಾಡಿದರು. ನಂತರ ಹಕ್ಸ್ಲೀ ಕಡೆಗೆ ತಿರುಗಿ ವ್ಯಂಗ್ಯವಾಗಿ ಕೇಳಿದರು. “ನೀವು ಯಾವ ಕಡೆಯ ಮಂಗನಿಂದ ಇಳಿದು ಬಂದಿರೋದು? ಅಜ್ಜನ ಕಡೆಯ ಮಂಗನಿಂದಲೋ? ಅಜ್ಜಿ ಕಡೆಯ ಮಂಗನಿಂದಲೋ? ವಾತಾವರಣ ಕೂಡಲೇ ತಿಳಿಯಾಗಿ ಹೋಯ್ತು. ಗ್ರಂಥ ವಿರೋಧಿಗಳು ಚಪ್ಪಾಳೆ ತಟ್ಟಿದರು. ಅಣಕಿಸುವ ಧ್ವನಿ ಹೊರಡಿಸಿದರು. ಇದೆಲ್ಲವನ್ನೂ ಸಹಿಸಿದ ಡಾ|| ಹಕ್ಸ್ಲೀ ಭಾಷಣಕ್ಕೆ ಎದ್ದು ನಿಂತರು. ನಿಧಾನವಾಗಿ ಭಾಷಣ ಪ್ರಾರಂಭಿಸಿದ ಅವರು ಬಿಷಪ್‌ರ ಆಕ್ಷೇಪಣೆಗಳಿಗೆಲ್ಲ ಉತ್ತರ ನೀಡಿ ಗ್ರಂಥಕರ್ತನ ನಿಲುವನ್ನು ಸಮರ್ಥಿಸಿದರು. ಕೊನೆಗೆ ಬಿಷಪ್‌ರ ಕಡೆ ತಿರುಗಿ ಗಂಭೀರವಾಗಿಯೇ ನುಡಿದರು . “ನಾನು ಯಾವ ಕಡೆಯ ಕಪಿಯಿಂದ ಇಳಿದು ಬಂದರೇನು? ಸತ್ಯವನ್ನು ಮರೆಮಾಚಲು ತನ್ನೆಲ್ಲಾ ಮಾತಿನ ಕೌಶಲವನ್ನು ಬಳಸುವ ಮನುಷ್ಯನ ಮೂಲಕ ಭೂಮಿಗೆ ಬರುವುದಕ್ಕಿಂತ ಕಪಿಯಿಂದ ವಿಕಾಸವಾಗುವುದೇ ಉತ್ತಮ ಎಂದು ನಾನು ಭಾವಿಸುತ್ತೇನೆ”. ‘ಸೋಪಿ ಸ್ಯಾಂ’ ಎಂದೇ ಹೆಸರಾಗಿದ್ದ ಬಿಷಪ್ ವಿಲ್ಬರ್ ಫೋರ್ಸ್ರ ಮುಖ ಕಪ್ಪಿಟ್ಟಿತು. ಅವರು ತಲೆ ತಗ್ಗಿಸಿದರು. ಹೂಕರ್‌ಗೆ ಅತ್ಯಂತ ಸಂತಸವಾಗಿತ್ತು. ಧಾರ್ಮಿಕ ಪ್ರತಿನಿಧಿಗಳ ತಂಡವೊಂದು ಘೋಷಣೆ ಕೂಗಿ ಪ್ರತಿಭಟಿಸಿದರು. ಅಂತಿಮವಾಗಿ ‘ಬ್ರಿಟಿಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ನ  ಆ ಸಭೆ ಗ್ರಂಥದ ಸಿದ್ಧಾಂತವನ್ನು ಒಪ್ಪಿಕೊಂಡಿತು. ಆ ಗ್ರಂಥವೇ ... 
ದಿ ಆರಿಜನ್ ಆಫ್ ಸ್ಪೀಷೀಸ್ ಬೈ ಮೀನ್ಸ್ ಆಫ್ ನ್ಯಾಚುರಲ್ ಸೆಲೆಕ್ಷನ್’.            
ಅದರ ಲೇಖಕ ಚಾರ್ಲ್ಸ್ ರಾಬರ್ಟ್ ಡಾರ್ವಿನ್. ನಿಜಕ್ಕೂ ಆ ಪುಸ್ತಕದಲ್ಲಿ ಏನಿದೆ? ಅದೊಂದು ರೋಮಾಂಚಕ ಗಾಥೆ. ಬನ್ನಿ ತಿಳಿಯೋಣ.

  ಚಾರ್ಲ್ಸ್ ಡಾರ್ವಿನ್ ಫೆಬ್ರವರಿ 12, 1809ರಂದು ಇಂಗ್ಲೆಂಡಿನ ಷ್ರೂಸ್‌ಬರಿಯಲ್ಲಿ ಜನಿಸಿದರು. ತಂದೆ ರಾಬರ್ಟ್ ಡಾರ್ವಿನ್ ಹೆಸರಾಂತ ವೈದ್ಯರು. ತಾಯಿ ಸೂಸಾನ್ಹ. ಬಾಲಕ ಡಾರ್ವಿನ್‌ಗೆ ಜೀವವಿಜ್ಞಾನದಲ್ಲಿ ಅಪರಿಮಿತ ಆಸಕ್ತಿ. ಅವನ ಮೆಚ್ಚಿನ ಹವ್ಯಾಸವೆಂದರೆ ವಸ್ತುಗಳ ಸಂಗ್ರಹಣೆ. ಅವು ಇಂಥ ವಸ್ತುಗಳೇ ಆಗಬೇಕೆಂದಿಲ್ಲ. ಕಲ್ಲುಗಳು, ಚಿಟ್ಟೆಗಳು, ವಿವಿಧ ಹೂಗಳು, ದುಂಬಿಗಳು, ಹೀಗೆ ವೈವಿದ್ಯಮಯ ವಸ್ತುಗಳನ್ನು ಅವನು ಸಂಗ್ರಹಿಸುತ್ತಿದ್ದ. ರಾಬರ್ಟ್ ಡಾರ್ವಿನ್‌ಗೆ ತನ್ನ ಮಗ ವೈದ್ಯನಾಗಬೇಕೆಂಬ ಹಂಬಲ. ಅದರಂತೆಯೇ 16ನೇ ವಯಸ್ಸಿಗೆ ವೈದ್ಯಕೀಯ ವ್ಯಾಸಂಗಕ್ಕೆಂದು ಅವನನ್ನು ಎಡಿನ್‌ಬರೋ ಯೂನಿವರ್ಸಿಟಿಗೆ ಕಳಿಸಿದರು. ಡಾರ್ವಿನ್ ಸ್ವತಂತ್ರ ವಾತಾವರಣದಲ್ಲಿ ಎಲ್ಲಿ ಬೇಕೋ ಅಲ್ಲಿ ತಿರುಗಾಡಿದ. ಸಮುದ್ರ ತೀರದಲ್ಲಿ ಅಲೆದು ಅಲ್ಲಿನ ವಿಚಿತ್ರ ಜೀವಿಗಳನ್ನು ಸಂಗ್ರಹಿಸಿದ. ತನ್ನದೇ ಹವ್ಯಾಸವಿದ್ದ ಇತರರ ಗೆಳೆತನ ಮಾಡಿಕೊಂಡ. ಆದರೆ, ಅವನೆಂದೂ ವೈದ್ಯಕೀಯವನ್ನು ಇಷ್ಟಪಡಲೇ ಇಲ್ಲ. ಆಪರೇಷನ್ ಕೊಠಡಿಯಲ್ಲಿನ ವಿಶಿಷ್ಟ ವಾಸನೆ, ರಕ್ತ, ರೋಗಿಗಳ ನರಳಾಟ, ಕರ್ಣಭೇದಕ ಕೂಗನ್ನು ಸಹಿಸಲಾಗದೇ ಎರಡು ಬಾರಿ ಪ್ರಜ್ಞೆ ಕಳೆದುಕೊಂಡ ಡಾರ್ವಿನ್ ಕೊನೆಗೊಮ್ಮೆ ವೈದ್ಯಕೀಯ ವ್ಯಾಸಂಗ ತ್ಯಜಿಸಿ ಮನೆಗೆ ಹಿಂದಿರುಗಿದ.
ಡಾ||ರಾಬರ್ಟ್ ಡಾರ್ವಿನ್‌ಗೆ ತೀರಾ ನಿರಾಸೆಯಾಯಿತು. ಅವರು ಒಲ್ಲದ ಮನದಿಂದ ಮಗನನ್ನು ಧಾರ್ಮಿಕ ಶಿಕ್ಷಣ ಪಡೆಯಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಕಳಿಸಿದರು. ಸಂತಸದಿಂದ ಹೋದ ಡಾರ್ವಿನ್ ಅಲ್ಲೂ ತಮ್ಮ ಹಳೆಯ ಅಭ್ಯಾಸಗಳನ್ನು ಬಿಡಲಿಲ್ಲ. ರಾತ್ರಿಯಿಡೀ ಗೆಳೆಯರೊಂದಿಗೆ ಕುಡಿತ ಮತ್ತು ಇಸ್ಪೀಟು ಆಟಗಳಲ್ಲಿ ಕಳೆದರೆ, ಬೆಳಿಗ್ಗೆಯೆಲ್ಲ ಶಿಕಾರಿ ಮತ್ತು ಜೀರುಂಡೆಗಳ ಸಂಗ್ರಹಕ್ಕೆ ತೆರಳುತ್ತಿದ್ದರು. ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳೆಲ್ಲ ಇವನ ಈ ಕೃತ್ಯಕ್ಕೆ ಬೇಸರಗೊಂಡಿದ್ದರು . ಆದರೆ ಇಬ್ಬರು ಪ್ರೊಫೆಸರ್‌ಗಳು ಮಾತ್ರ ಡಾರ್ವಿನ್‌ನ ಚಟುವಟಿಕೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಒಬ್ಬರು ಸಸ್ಯಶಾಸ್ತ್ರಜ್ಞರಾದ ಜಾನ್ ಸ್ಟೀವನ್ಸ್ ಹೆನ್ಸ್ಲೋ ಮತ್ತೊಬ್ಬರು ಭೂವಿಜ್ಞಾನಿ ಆಡಂ ಸೆಡ್ಜ್ವಿಕ್. ಇವರಿಬ್ಬರೂ ಡಾರ್ವಿನ್‌ರ ಗೆಳೆಯರಾದರು. ಈ ಇಬ್ಬರು ಪ್ರೊಫೆಸರ್‌ಗಳ ಪ್ರಭಾವಕ್ಕೆ ಒಳಗಾದ ಡಾರ್ವಿನ್ ಸಸ್ಯಶಾಸ್ತ್ರಗಳಲ್ಲಿ ಮತ್ತು ಭೂಗರ್ಭ ಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು. ಈ ವೇಳೆಗಾಗಲೇ ಡಾರ್ವಿನ್ ಜೀವಿಗಳ ದೇಹರಚನೆ ಮತ್ತು ಅವುಗಳಲ್ಲಿ ಕಂಡುಬರುತ್ತಿದ್ದ ವೈವಿಧ್ಯತೆಗಳ ಬಗ್ಗೆ ಚಿಂತಿಸಲಾರಂಭಿಸಿದರು. ದೇವರು ಎಲ್ಲಾ ಜೀವಿಗಳನ್ನು ರೂಪಿಸಿದ ಎಂಬ ಕ್ರೈಸ್ತ  ಆಸ್ತಿಕವಾದಿಗಳ ವಿಚಾರದಲ್ಲಿ ಅವರಿಗೆ ನಂಬಿಕೆ ಹೊರಟುಹೋಗಿತ್ತು. ಬಹುಷಃ ಎಲ್ಲಾ ಜೀವಿಗಳೂ ಒಂದರಿಂದ ಒಂದು ವಿಕಾಸ ಹೊಂದಿರಬಹುದು ಎಂದವರು ಯೋಚಿಸಲಾರಂಭಿಸಿದ್ದರು. ಅವರ ಆಲೋಚನೆಗೆ ಆಧಾರ ಬೇಕಿತ್ತು. ಭೂಗರ್ಭವಿಜ್ಞಾನದಲ್ಲಿ ಅವರು ಬೆಳೆಸಿಕೊಂಡ ಆಸಕ್ತಿ ಅವರ ಈ ಆಲೋಚನೆಗೆ ಆಧಾರ ಒದಗಿಸಲು ಮುಂದೊಮ್ಮೆ ನೆರವಾಯಿತು. ಈಗ ಡಾರ್ವಿನ್‌ರ ಸಂಗ್ರಹಣಾ ಹವ್ಯಾಸಕ್ಕೆ ನಿಶ್ಚಿತ ರೂಪವೊಂದು ದೊರಕಿತ್ತು. ಅವರು ವಿಕಾಸವಾದಕ್ಕೆ ಪೂರಕವಾಗಬಲ್ಲ ವಸ್ತುಗಳನ್ನು ಮಾದರಿಗಳನ್ನು ಮಾತ್ರ ಸಂಗ್ರಹಿಸತೊಡಗಿದರು. ಹೀಗೆ ಅವರ ಆಸಕ್ತಿಯ ಕ್ಷೇತ್ರ ಬೇರೆಯಾದರೂ ಧಾರ್ಮಿಕ ವಿಷಯದಲ್ಲಿ ಪದವಿ ಪಡೆಯುವುದು ಅವರಿಗೆ ಕಷ್ಟವಾಗಲಿಲ್ಲ. ಪದವಿ ಮುಗಿಸಿದ ಡಾರ್ವಿನ್ ಭೂವಿಜ್ಞಾನಿ ಸೆಡ್ಜ್ವಿಕ್‌ರೊಂದಿಗೆ ಪಳೆಯುಳಿಕೆ ಸಂಗ್ರಹ ಕಾರ್ಯದಲ್ಲಿ ತೊಡಗಿದರು. ಈ ಅನುಭವ ಅವರಿಗೆ ಅತೀ ಅವಶ್ಯವಾಗಿತ್ತು.
ಮನೆಗೆ ಹಿಂದಿರುಗಿ ಬಂದ ಡಾರ್ವಿನ್‌ಗೆ ಮನೆಯಲ್ಲಿ ಪತ್ರವೊಂದು ಕಾದಿತ್ತು . “ದಕ್ಷಿಣ ಅಮೇರಿಕದ ಕರಾವಳಿ ಮತ್ತು ಫೆಸಿಫೆಕ್ ದ್ವೀಪಗಳ ಸಮೀಕ್ಷೆ ಮಾಡಲು ಬ್ರಿಟೀಷ್ ಸರ್ಕಾರ ಬಯಸಿದೆ. ಸಮೀಕ್ಷಾ ತಂಡದಲ್ಲಿ ಜೀವವಿಜ್ಞಾನಿಯೊಬ್ಬರ ಅವಶ್ಯಕತೆ ಇದ್ದು ನಿಮ್ಮ ಹೆಸರನ್ನು ಸೂಚಿಸಲಾಗಿದೆ. ಹೋಗುವ ಇಚ್ಚೆಯಿದ್ದರೆ ಕೂಡಲೇ ಡಾ|| ಹೆನ್ಸ್ಲೋರನ್ನು ಭೇಟಿ ಮಾಡಿ” ಎಂದು ಕೇಂಬ್ರಿಡ್ಜ್ ವಿಜ್ಞಾನಿ ಜಾನ್ ಪೀಕಾಕ್ ಬರೆದಿದ್ದರು. ಡಾರ್ವಿನ್ ಪಾಲಿಗೆ ಇದೊಂದು ಅಚ್ಚರಿಯ ಸಂಗತಿ, ಕೂಡಲೇ ಅವರು ಹೆನ್ಸ್ಲೋರನ್ನು ಕಂಡರು. ಅವರು ಡಾರ್ವಿನ್‌ರನ್ನು ಒಬ್ಬ ನಿಸರ್ಗ ತಜ್ಞ ಎಂದು ಶಿಫಾರಸ್ಸು ಮಾಡಿ ತಂಡಕ್ಕೆ ಸೇರಿಸಿದರು. ಆದರೆ ಡಾ|| ರಾಬರ್ಟ್ ಡಾರ್ವಿನ್ ಒಪ್ಪಲಿಲ್ಲ. ಮುನಿದ ಅವರನ್ನು ಒಪ್ಪಿಸಲು ಸೋದರ ಮಾವ ಜೋಸಿಯಾ ವೆಡ್ಜ್ವುಡ್ ಬರಬೇಕಾಯಿತು.
ಸಮೀಕ್ಷಾ ತಂಡವಿದ್ದ ಹಡಗು ಹೆಚ್.ಎಂ.ಎಸ್ ಬೀಗಲ್ 1821 ಡಿಸೆಂಬರ್ 31 ರಂದು ‘ಪ್ಲೇಮೌತ್’ ಬಂದರನ್ನು ಬಿಟ್ಟು ದಕ್ಷಿಣ ಅಮೇರಿಕಾದೆಡೆಗೆ ಚಲಿಸಿತು. ಡಾರ್ವಿನ್ ಉನ್ಮತ್ತ ಸ್ಥಿತಿಯಲ್ಲಿದ್ದರು. ಮೊದಲಿನಿಂದಲೂ ಅವರಿಗೆ ಪ್ರಪಂಚ ಸುತ್ತಿ ಜೀವವಿಕಾಸಕ್ಕೆ ಆಧಾರಗಳನ್ನು ಹುಡುಕುವ ಹಂಬಲ. ಅದೀಗ ಕೈಗೂಡುವ ಅವಕಾಶ ಲಭಿಸಿತ್ತು.  63 7ದಿನಗಳ ಸಮುದ್ರ ಯಾನದ ನಂತರ ಅವರು ದಕ್ಷಿಣ ಅಮೇರಿಕ ತಲುಪಿದರು. ಉಷ್ಣ ವಲಯದ ಹಸಿರು ಕಾಡಿನೊಳಗೆ ಮನಸ್ವೀ ಅಲೆದ ಡಾರ್ವಿನ್ ಕಣ್ಣಿಗೆ ಕುತೂಹಲ ಮೂಡಿಸಿದ ಜೀವಿ ಮಾದರಿಗಳನ್ನು ಸಂಗ್ರಹಿಸಿ ಇಂಗ್ಲೆಂಡಿಗೆ ರವಾನಿಸಿದರು. ಆಗಿನ್ನೂ ಫೋಟೋಗ್ರಫಿಯ ಆವಿಷ್ಕಾರವಾಗಿರಲಿಲ್ಲ. ಹೀಗಾಗಿ ಪ್ರಾಣಿ ಅಥವಾ ಪಕ್ಷಿಗಳನ್ನು ಕೊಂದು ಅವುಗಳ ದೇಹದ ಮಾಂಸ ತೆಗೆದು ಒಳಗೆ ಹುಲ್ಲು ತುಂಬಿಸಿ ಸಂರಕ್ಷಿಸಿ ಸುರಕ್ಷಿತವಾಗಿ ರವಾನಿಸಬೇಕಿತ್ತು. ಸಾಲ್ವಡಾರ್‌ನ ಉಷ್ಣವಲಯದ ಕಾಡಿನ ಸಮೀಕ್ಷೆಯ ನಂತರ ಹೆಚ್.ಎಂ.ಎಸ್ ಬೀಗಲ್ ಬ್ರೆಜಿಲ್‌ನ ಕರಾವಳಿಯುದ್ದಕ್ಕೂ ಪ್ರಯಾಣ ಬೆಳೆಸಿತು. ರಿಯೋಡಿ ಜನೈರೋ, ಬ್ಯೂನಸ್ ಐರಿಸ್, ಟಿಯೆರಾ ಡೆಲ್‌ಫ್ಯೂಗೋ, ಕೇಪ್‌ಹಾರ್ನ್ ಹೀಗೆ ಎಲ್ಲಾ ದ್ವೀಪಗಳನ್ನೂ ಡಾರ್ವಿನ್ ಶ್ರದ್ಧೆಯಿಂದ ಪರಿಶೋಧಿಸಿದರು. ಅರ್ಜೆಂಟೀನಾದ ವಿಸ್ತಾರ ಬಯಲಿನಲ್ಲಿ ಮೆಗಾಥೀರಿಯಂ, ಮೆಗಾಲೋನಿಕ್ಸ್ ಮುಂತಾದ ರಾಕ್ಷಸಾಕಾರದ ಪ್ರಾಣಿಗಳ ಅಸ್ಥಿಪಂಜರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ಈ ಪಳೆಯುಳಿಕೆ ಜೀವಿಗಳು ಆಧುನಿಕ ಕಾಲದ ಅವುಗಳ ಸಣ್ಣ ರೂಪಿನ ಜೀವಿಗಳನ್ನು ಹೋಲುತ್ತಿದ್ದವು. ಈ ಜೀವಿಗಳ ನಡುವಿನ ಸಂಬಂಧವೇನು? ರಾಕ್ಷಸಾಕಾರದ ಜೀವಿಗಳು ಏಕೆ ಅಳಿದವು? ಎಂದವರು ಚಿಂತಿಸಲಾರಂಭಿಸಿದರು. ಅವರ ಮನದಲ್ಲಿ ‘ಉಳಿವಿಗಾಗಿ ಹೋರಾಟ’ದ ಪರಿಕಲ್ಪನೆ ಮೂಡತೊಡಗಿತ್ತು. ಮುಂದೆ ಮಾಲ್ಥಸ್‌ನ ಜನಸಂಖ್ಯಾ ಲೇಖನ ಓದುತ್ತಿದ್ದಾಗ ಆ ಪರಿಕಲ್ಪನೆಗೊಂದು ಸ್ಪಷ್ಟ ರೂಪು ಸಿಕ್ಕಿತು.
ಚಿಂತನೆಯಲ್ಲಿ ತೊಡಗಿದ್ದ ಡಾರ್ವಿನ್‌ರನ್ನು ಹೊತ್ತ ಹಡಗು ಫೆಸಿಫಿಕ್ ಮಹಾಸಾಗರವನ್ನು ಪ್ರವೇಶಿಸಿ ಪೆರುವಿನ ಕರಾವಳಿ ತೀರದೆಡೆಗೆ ಸಾಗಿ , ಭೂಮಧ್ಯೆ ರೇಖೆ ದಾಟಿ ಗ್ಯಾಲಪಾಗೋಸ್ ದ್ವೀಪ ಸಮೂಹದ ಕಡೆಗೆ ತೇಲಿತು. 1835 ಸೆಪ್ಟೆಂಬರ್ 15ರಂದು ಹೆಚ್.ಎಂ.ಎಸ್ ಬೀಗಲ್ ಗ್ಯಾಲಪಾಗೋಸ್ ದ್ವೀಪಸ್ತೋಮದ ದ್ವೀಪವೊಂದರಲ್ಲಿ ಲಂಗರು ಹಾಕಿತು. ಗ್ಯಾಲಪಾಗೋಸ್ ದ್ವೀಪಗಳು ದಕ್ಷಿಣ ಅಮೇರಿಕಾದ ಭೂ ಖಂಡದಿಂದ ಐದುನೂರು ಮೈಲಿಗಳಷ್ಟು ದೂರದಲ್ಲಿವೆ. ಈ ದ್ವೀಪದ ಪರಿಶೋಧೆನೆಯಿಂದಲೇ ಡಾರ್ವಿನ್‌ರ ವಿಕಾಸವಾದಕ್ಕೆ ಒಂದು ನಿರ್ದಿಷ್ಟ ರೂಪು ಬಂತು. ಡಾರ್ವಿನ್ ಈ ದ್ವೀಪ ಸಮೂಹಗಳಿಂದ ವಿಶೇಷವಾಗಿ ಪ್ರಭಾವಿತರಾದರು. ಈ ದ್ವೀಪದಲ್ಲಿ ಕಂಡುಬಂದ ಜೀವಿಸಮುದಾಯಕ್ಕೂ ದಕ್ಷಿಣ ಅಮೇರಿಕಾದ ಭೂಖಂಡದಲ್ಲಿ ಕಂಡುಬಂದ ಜೀವಿಸಮುದಾಯಕ್ಕೂ ಹೊರನೋಟದಲ್ಲಿ ಅನೇಕ ಸಾದೃಶ್ಯಗಳು ಕಂಡುಬಂದವು. ಆದರೆ, ಈ ದ್ವೀಪದ ಜೀವಿಗಳನ್ನು ಅಧ್ಯಯನ ಮಾಡಿದಾಗ ಅನೇಕ ಭಿನ್ನ ರಚನೆಗಳು ಕಂಡು ಬಂದವು. ದಕ್ಷಿಣ ಅಮೇರಿಕಾದಲ್ಲಿ ಕಂಡುಬಂದ ಹಕ್ಕಿಗಳೇ ಇಲ್ಲಿ ಕಂಡರೂ ಅವುಗಳು ತೀರಾ ಚಿಕ್ಕದಾಗಿದ್ದು ಹಾರುವುದನ್ನೇ ಕಲಿತಿರಲಿಲ್ಲ. ಓತಿಕ್ಯಾತಗಳೂ, ಹಲ್ಲಿಗಳೂ ಅಷ್ಟೆ. ದಕ್ಷಿಣ ಅಮೇರಿಕಾದಲ್ಲಿ ಇವು ಮರ ಹತ್ತಿ ಹುಳುಹುಪ್ಪಟೆಗಳನ್ನು ತಿನ್ನುತ್ತಿದ್ದರೆ, ಗ್ಯಾಲಪಾಗೋಸ್ ದ್ವೀಪಗಳಲ್ಲಿದ್ದ ಓತಿಕ್ಯಾತಗಳು ನೀರಿನಲ್ಲಿ ಮುಳುಗಿ ಜಲಸಸ್ಯಗಳನ್ನು ತಿನ್ನುತ್ತಿದ್ದವು. ಇವುಗಳ ದೇಹ ಮತ್ತು ಕಾಲಿನ ರಚನೆಯೂ ನೀರಿನ ಜೀವನಕ್ಕೆ ತಕ್ಕಂತೆಯೇ ಇದ್ದವು. ಗ್ಯಾಲಪಾಗೋಸ್‌ನ ವಿವಿಧ ದ್ವೀಪಗಳಲ್ಲೂ ಬೇರೆ ಬೇರೆ ದೇಹ ರಚನೆ ಹೊಂದಿದ ಒಂದೇ ಜಾತಿಯ ಜೀವಿಗಳಿದ್ದವು. ಇಂಥ 13 ವಿವಿಧ ಫಿನ್ಷ್ ಹಕ್ಕಿ ಸಂಕುಲವನ್ನು ಡಾರ್ವಿನ್ ಸಂಗ್ರಹಿಸಿದರು.
“ಈ ಎರಡೂ ಸ್ಥಳಗಳಲ್ಲಿ ಬೇರೆ ಬೇರೆಯಾಗಿ ಜೀವಿಗಳ ಸೃಷ್ಟಿ ನಡೆದಿರಲಿಕ್ಕಿಲ್ಲ. ಸಾವಿರಾರು ವರ್ಷಗಳ ಹಿಂದೆ ತೇಲುವ ಮರದ ತುಂಡಿನ ಮೇಲೇರಿಯೋ. ಹಾರಿಯೋ ಅಥವಾ ಈಜಿಯೋ ದಕ್ಷಿಣ ಅಮೇರಿಕಾದಿಂದ ಗ್ಯಾಲಪಾಗೊಸ್ ದ್ವೀಪಕ್ಕೆ ವಲಸೆ ಬಂದ ಪ್ರಾಣಿಗಳು ಇಲ್ಲಿನ ಪರಿಸರಕ್ಕೆ ತಕ್ಕಂತೆ ತಮ್ಮ ದೇಹದ ರಚನೆಯನ್ನು ಮಾರ್ಪಡಿಸಿಕೊಂಡು ಸಾವಿರಾರು ವರ್ಷಗಳ ಅವಧಿಯಲ್ಲಿ ಸಂಪೂರ್ಣ ಬೇರೆ ರೀತಿಯ ಜೀವಿಗಳಾಗಿ ಅಭಿವೃದ್ಧಿ ಹೊಂದಿರುವಂತೆ ಕಾಣುತ್ತದೆ. ಅಂದರೆ, ಒಮ್ಮೆ ಹುಟ್ಟಿದ ಜೀವಿಗಳೇ ಪರಿಸರದ ಪ್ರಚೋದನೆಯಿಂದ ಬೇರೆ ಬೇರೆ ಸ್ಥಳಗಳಲ್ಲಿ ಹರಡಿ ಹೋಗಿ ಅಲ್ಲಿನ ಪರಿಸರಕ್ಕೆ ತಕ್ಕಂತೆ ನಿರಂತರವಾಗಿ ತಮ್ಮ ರೂಪ , ಆಕಾರ, ದೇಹದ ರಚನೆಯನ್ನು ಮಾರ್ಪಡಿಸಿಕೊಳ್ಳುತ್ತ ವಿಭಿನ್ನ ಬಗೆಯ ಜೀವಿಯಾಗಿ ಜೀವವಿಕಾಸಕ್ಕೆ ಕಾರಣವಾಗಿರಬಹುದು ಎಂಬುದು ಇದರಿಂದಾಗಿ ನಾನು ಕಂಡುಕೊಂಡಿರುವ ವಿಚಾರ” ಎಂದು ಒಂದೆಡೆ ಡಾರ್ವಿನ್ ಬರೆದುಕೊಂಡಿದ್ದಾರೆ. 
ಐದು ವರ್ಷಗಳ ಕಾಲ ಫೆಸಿಫಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಉತ್ತರ ಅಟ್ಲಾಂಟಿಕ್ ವರೆಗೆ ಪರಿಶೋಧನೆ ನಡೆಸಿದ ಹೆಚ್.ಎಂ.ಎಸ್ ಬೀಗಲ್ 1836ರ ಅಕ್ಟೋಬರ್ ತಿಂಗಳಿನಲ್ಲಿ ಇಂಗ್ಲೆಂಡಿಗೆ ಮರಳಿತು. ತಮ್ಮ ಸಂಶೋಧನೆಯ ವಿಶಿಷ್ಟತೆಯಿಂದಾಗಿ ಡಾರ್ವಿನ್ ಆಗಲೇ ಇಂಗ್ಲೆಂಡಿನ ಮನೆ ಮಾತಾಗಿದ್ದರು. ಡಾರ್ವಿನ್‌ರ ಮುಂದಿನ ಕಾರ್ಯಗಳು ಸರಳವಾಗಿರಲಿಲ್ಲ. ಪರ್ಯಟನ ಕಾಲದಲ್ಲಿ ಅವರು ಸಂಗ್ರಹಿಸಿ ಕಳುಹಿಸಿದ್ದ ಮಾದರಿಗಳು ಹೆನ್ಸ್ಲೋರ ಬಳಿ ಭದ್ರವಾಗಿದ್ದವು. ಕೆಲ ದಿನಗಳ ನಂತರ ಡಾರ್ವಿನ್ ಷ್ರೂಸ್‌ಬರಿ ಬಿಟ್ಟು ಲಂಡನ್‌ಗೆ ನೆಲೆಸಲು ಬಂದರು. ಎರಡು ಮೂರು ವರ್ಷಗಳ ಅವಧಿಯಲ್ಲಿ ಅವರು ಸಂಗ್ರಹಿಸಿದ ಮಾದರಿಗಳನ್ನು ಇತರೆ ವೈಜ್ಞಾನಿಕ ತಜ್ಞರ ಸಹಾಯದಿಂದ ವಿಂಗಡಿಸಿದರು. ಈ ಅವಧಿಯಲ್ಲೇ ಅಂದರೆ 1836ರಿಂದ 1838ರ ವರೆಗೆ ಅವರು ಬರೆದ ‘ವಾಯೆಜ್ ಆಫ್ ಬೀಗಲ್’ ಲೇಖನಗಳು ‘ಜರ್ನಲ್ ಆಫ್ ರೀಸರ್ಚಸ್’ ನಲ್ಲಿ ಪ್ರಕಟವಾದವು. ಈ ರೀತಿಯ ಕೆಲಸದ ಏಕತಾನತೆಯಿಂದ ರೋಸಿದ ಡಾರ್ವಿನ್ ಮದುವೆಯಾಗಲು ಮನಸ್ಸು ಮಾಡಿದರು. ಸೋದರಮಾವ ಜೋಸಿಯಾ ವೆಡ್ಜ್ವುಡ್‌ರ ಕಿರಿಯ ಮಗಳು ಎಮ್ಮಾ ವೆಡ್ಜ್ವುಡ್ 1839 ಜನವರಿ 29ರಂದು ಅವರ ಬಾಳಿನಲ್ಲಿ ಪಾದಾರ್ಪಣೆ ಮಾಡಿದಳು. ಬದುಕು ಬಂಗಾರವಾಯಿತು ಎಂದು ಭಾವಿಸುತ್ತಿದ್ದಾಗಲೇ ಅವರ ಆರೋಗ್ಯ ಕುಸಿಯತೊಡಗಿತು. ವೈದ್ಯರ ಬಳಿ ಹೋದಾಗ ಲಂಡನ್ ತೊರೆಯಲು ಸೂಚಿಸಿದರು. ಅದರಂತೆ 1842ರಲ್ಲಿ ಅವರು ಸಂಸಾರ ಸಮೇತ ಇಂಗ್ಲೆಂಡಿನ ಆಗ್ನೇಯ ದಿಕ್ಕಿನಲ್ಲಿರುವ ಡೌನ್‌ಹೌಸ್‌ಗೆ ಹೋಗಿ ನೆಲೆಸಿದರು. 1842ರಲ್ಲಿಯೇ ಅವರು ತಮ್ಮ ಬೃಹತ್ ಗ್ರಂಥದ ಕರಡುಪ್ರತಿ ರಚಿಸಿದರು. ಏಕೋ ಅವರಿಗೆ ಸಿದ್ಧಾಂತ ಪ್ರತಿಪಾದಿಸಲು ಆಧಾರ ಸಾಲದು ಎನ್ನಿಸತೊಡಗಿತು. ಒಡನೆಯೇ ವ್ಯಾಪಕವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಮಿತ್ರರಾದ ಪ್ರಖ್ಯಾತ ಭೂವಿಜ್ಞಾನಿ ಚಾರ್ಲ್ಸ್ ಲಯಲ್, ಸಸ್ಯ ಶಾಸ್ತ್ರಜ್ಞ ಜೋಸೆಫ್ ಹೂಕರ್ ಮತ್ತು ಮಹಾನ್ ಮೇಧಾವಿ, ಚಿಂತಕ, ಬರಹಗಾರ ಥಾಮಸ್ ಹಕ್ಸ್ಲೀ ಗ್ರಂಥ ರಚಿಸುವಂತೆ ಎಷ್ಟೇ ಒತ್ತಡ ತಂದರೂ ಡಾರ್ವಿನ್ ಅದರೆಡೆಗೆ ಗಮನ ಕೊಡದೆ ಇನ್ನೂ ಸಾಕ್ಷಿ ಆಧಾರಗಳ ಸಂಗ್ರಹಣೆಗೆ ತೊಡಗಿದರು. ಈ ಬಗೆಯ ಪ್ರವಾಸ, ಅಧ್ಯಯನ ಎಂದು ಸುಮಾರು ಇಪ್ಪತ್ತು ವರ್ಷಗಳೇ ಕಳೆದುಹೋದವು.
ಅದು 1858ನೇ ಇಸವಿ ಈ ಅವಧಿಯಲ್ಲಿ ಅವರಿಗೆ ಬಂದ ಒಂದು ಪತ್ರ ಅವರನ್ನು ನಿರಾಶೆಯ ಕಡಲಲ್ಲಿ ನೂಕಿ ಅಗಾಧ ಚಿಂತೆಯಲ್ಲಿ ಮುಳುಗುವಂತೆ ಮಾಡಿತು. ಆ ಪತ್ರ ಈಸ್ಟ್ ಇಂಡೀಸ್‌ನ ಮೊಲುಕ್ಯಾಸ್‌ನಿಂದ ಬಂದಿತ್ತು. ವಿಜ್ಞಾನಿ ಮಿತ್ರ ಆಲ್‌ಫ್ರೆಡ್ ರಸೆಲ್ ವ್ಯಾಲೆಸ್ ತುಂಬ ಸಂತಸದಿಂದ ಬರೆದಿದ್ದರು. ಇಂಡೋನೇಷಿಯಾದ ಟಾರ್‌ನೆಟ್ ದ್ವೀಪವನ್ನು ಪರಿಶೋಧಿಸಿದ್ದ ವ್ಯಾಲೆಸ್ ಹೆಚ್ಚು ಕಡಿಮೆ ಡಾರ್ವಿನ್ ತಲುಪಿದ ನಿರ್ಣಯವನ್ನೇ ತಲುಪಿದ್ದರು. ವ್ಯಾಲೆಸ್‌ಗೆ ಜೀವವಿಕಾಸದ ಪರಿಕಲ್ಪನೆ ಹೊಳೆದಿದ್ದು ತೀರ ಇತ್ತೀಚೆಗೆ. ಅಂದರೆ, 1858ರಲ್ಲಿ. ಆದರೆ, 1830ರಿಂದಲೇ ಅದು ಡಾರ್ವಿನ್‌ರ ಉಸಿರಾಗಿತ್ತು. ಡಾರ್ವಿನ್‌ರಿಗೆ ಜೀವನವೇ ಬೇಸರವೆನಿಸಿತು. ತಾವು ನಿರ್ಣಯ ಮಂಡಿಸಲು ತಡಮಾಡಿದ್ದು ಎಂಥ ಪ್ರಮಾದವಾಯಿತೆಂದು ಅವರು ಹಪಹಪಿಸಿದರು. ಆದರೆ ಕಾಲ ಮಿಂಚಿತ್ತು ಭಾರವಾದ ಮನದಿಂದ ತಮ್ಮ ಸಂಶೋಧನೆಯ ಯಶಸ್ಸನ್ನು ವ್ಯಾಲೆಸ್‌ಗೆ ಬಿಟ್ಟು ಕೊಡಲು ತೀರ್ಮಾನಿಸಿದರು. ಆದರೆ ಸೂಕ್ತ ಸಮಯದಲ್ಲಿ ಬಂದ ಗೆಳೆಯರಾದ ಚಾರ್ಲ್ಸ್ ಲಯಲ್ ಮತ್ತು ಹೂಕರ್, ಡಾರ್ವಿನ್‌ರ ಈ ನಿರ್ಧಾರವನ್ನು ಬದಲಿಸಿದರು. ಲಯಲ್ ಬಹು ಹಿಂದೆಯೇ ‘ಪ್ರಕೃತಿಯ ಸ್ವಾಭಾವಿಕ ಆಯ್ಕೆ’ ಎಂಬ ಹೆಸರಿನಲ್ಲಿ ಜೀವವಿಕಾಸದ ಅಧ್ಯಯನ ನಡೆಸಿದ್ದರೂ ಅದನ್ನು ಪ್ರಕಟಪಡಿಸದೇ ಡಾರ್ವಿನ್‌ಗೆ ತಮ್ಮ ಸಂಶೋಧನೆಯ ವಿವರಗಳನ್ನು ಅಡಿಟಿಪ್ಪಣಿಯಾಗಿ ಬಳಸಿಕೊಳ್ಳಲು ನೀಡಿದ್ದರು. ಈಗ ಮತ್ತೊಮ್ಮೆ ಡಾರ್ವಿನ್‌ಗೆ ಅವರು ನೆರವಾದರು . ಲೀನಿಯನ್ ಸೊಸೈಟಿಯಲ್ಲಿ ಉನ್ನತ ಮಟ್ಟದ ವಿಜ್ಞಾನಿಗಳ ಸಭೆ ವ್ಯವಸ್ಥೆ ಮಾಡಿ ಅಲ್ಲಿ ವ್ಯಾಲೆಸ್ ಮತ್ತು ಡಾರ್ವಿನ್‌ರ ಲೇಖನಗಳನ್ನು ಓದಿಸಿದರು. ಅಂತಿಮವಾಗಿ ವ್ಯಾಲೆಸ್ ಸಂಶೋಧನೆಯಿಂದ ಹಿಂದೆ ಸರಿದು ಭಾರವಾದ ಮನದಿಂದ ಡಾರ್ವಿನ್‌ರ ಕೈ ಕುಲುಕಿದರು. ಈಗ ಡಾರ್ವಿನ್ ಅವಸರಿಸಿದರು. ಹಿಂದೆ ಬರೆಯಲು ಯೋಜಿಸಿದ್ದ ಬೃಹತ್ ಗ್ರಂಥದ ಸಂಕ್ಷಿಪ್ತ ರೂಪವನ್ನು ಬರೆಯಲು ಪ್ರಾರಂಭಿಸಿದರು. ಮಿಂಚಿನ ವೇಗದಲ್ಲಿ ಬರೆದರೂ ಗ್ರಂಥ ಪೂರ್ಣವಾಗಲು ಒಂದು ವರ್ಷ ಹಿಡಿಯಿತು. ಅಂತೂ ಕೊನೆಗೆ 1859 ನವೆಂಬರ್ 24 ರಂದು ‘ದಿ ಆರಿಜನ್ ಆಫ್ ಸ್ಪೀಷೀಸ್ ಬೈ ಮೀನ್ಸ್ ಆಫ್ ನ್ಯಾಚುರಲ್ ಸೆಲೆಕ್ಷನ್’ ಎಂಬ ಗ್ರಂಥ ಪ್ರಕಾಶಿತವಾಯಿತು. ಆರು ನೂರು ಪುಟಗಳ ಆ ಗ್ರಂಥದ 1250 ಪ್ರತಿಗಳು ಬಿಡುಗಡೆಯಾದ ದಿನವೇ ಮಾರಾಟವಾದವು.
ಡಾರ್ವಿನ್ ತಮ್ಮ ವಿಕಾಸವಾದವನ್ನು ‘ನಿಸರ್ಗದ ಆಯ್ಕೆ ಸಿದ್ಧಾಂತ’ ಎಂದು ಕರೆದಿದ್ದರು. ಸಂಕ್ಷಿಪ್ತವಾಗಿ ಅದನ್ನು ಹೀಗೆ ಹೇಳಬಹುದು ಜೀವಿಗಳು ನಿಸರ್ಗದಲ್ಲಿ ಮಿತಿಮೀರಿ ಸಂತಾನೋತ್ಪತ್ತಿ ಮಾಡುತ್ತವೆ. ಈ ಸಂತಾನಗಳ ನಡುವೆ ಆಹಾರ, ನೀರು, ವಸತಿಗಾಗಿ ಪೈಪೋಟಿ ನಡೆಯುತ್ತದೆ. ಈ ಪೈಪೋಟಿಯಲ್ಲಿ ಅಶಕ್ತ ಜೀವಿಗಳು ನಾಶವಾಗಿ ಕೇವಲ ಸಮರ್ಥ ಜೀವಿಗಳು ಉಳಿದು ತಮ್ಮ ಪೀಳಿಗೆಯನ್ನು ಮುಂದುವರೆಸುತ್ತವೆ. ಡಾರ್ವಿನ್ ತಮ್ಮ ಈ ಉಳಿವಿಗಾಗಿ ಹೋರಾಟದ ಪರಿಕಲ್ಪನೆಗೆ ಸಾಕಷ್ಟು ಆಧಾರ ಒದಗಿಸಿದ್ದರು. ಆ ಗ್ರಂಥದ ಕೊನೆಯಲ್ಲಿ ಬಹುಮುಖ್ಯವಾದ ಮಾತೊಂದಿತ್ತು ಅದರಲ್ಲಿ “ಪ್ರಾಣಿಗಳು ಕನಿಷ್ಟ ನಾಲ್ಕು ಅಥವಾ ಐದು ಮೂಲ ರೂಪಿಯಿಂದ, ಸಸ್ಯಗಳು ಅದಕ್ಕಿಂತಲೂ ಕಡಿಮೆ ಮೂಲರೂಪಿಯಿಂದ ಇಳಿದು ಬಂದಿರಬೇಕೆಂದು ಭಾವಿಸುತ್ತೇನೆ” ಎಂದು ಬರೆದು ಮುಂದಿನ ಭಾಗದಲ್ಲಿ “ಎಲ್ಲಾ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಅಂತಿಮವಾಗಿ ಒಂದೇ ಮೂಲರೂಪಿಯಿಂದ ವಿಕಾಸವಾಗಿರುವ ಸಾಧ್ಯತೆ ಇದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಪುಸ್ತಕ ಪ್ರಕಟವಾದಾಗ ಸಹಜವಾಗಿಯೇ ಅದಕ್ಕೆ ವ್ಯಾಪಕವಾದ ಮತ್ತು ತೀವ್ರವಾದ ಪ್ರತಿಭಟನೆ ವ್ಯಕ್ತವಾಯಿತು. ಕ್ರೈಸ್ತ  ಆಸ್ತಿಕರು ಪುಸ್ತಕವನ್ನು ನಿಷೇಧಿಸಿ ಎಂದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಎಲ್ಲ ವಿರೋಧಗಳನ್ನು ಡಾರ್ವಿನ್‌ರ ಗೆಳೆಯ ಥಾಮಸ್ ಹಕ್ಸ್ಲೀ ಯಶಸ್ವಿಯಾಗಿ ಎದುರಿಸಿದರು. ಬಿಷಪ್ ವಿಲ್ಬರ್‌ಫೋರ್ಸ್ರಂಥವರ ಬಾಯಿ ಮುಚ್ಚಿಸಿದರು. ಅವರು ಉದ್ದಕ್ಕೂ ಡಾರ್ವಿನ್‌ರಿಗೆ ಬೆಂಬಲವಾಗಿ ನಿಂತರು. ಇದರ ಫಲವಾಗಿ ಗ್ರಂಥ ಬಹುಬೇಗನೇ ವಿಜ್ಞಾನಿಗಳ, ವಿಚಾರವಂತರ, ಜನಸಾಮಾನ್ಯರ ಮನೋವಲಯದಲ್ಲಿ ಬದಲಾವಣೆ ಮೂಡಿಸಿ ಅವರ ಚಿಂತನೆಯ ದಿಕ್ಕನ್ನು ಬದಲಿಸಿತು. ಅಂತಿಮವಾಗಿ ಒಂದು ಕಾಲದಲ್ಲಿ ಅಪಾಯಕಾರಿಯೆಂದು ಪರಿಗಣಿತವಾಗಿದ್ದ ಡಾರ್ವಿನ್ ಸಿದ್ಧಾಂತ ಹತ್ತೊಂಬತ್ತನೇ ಶತಮಾನದ ಮನೋಭಾವವಾಗಿ ರೂಪುಗೊಂಡಿತು. ತಮ್ಮ ಜೀವಿತಾವಧಿಯಲ್ಲಿ ಡಾರ್ವಿನ್ ಅನೇಕ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ 
ಆರ್ಕಿಡ್ ಪಾಲಿನೇಷನ್, 
ದಿ ಡೀಸೆಂಟ್ ಆಫ್ ಮ್ಯಾನ್, 
ಎಕ್ಸ್ಪ್ರೆಶನ್ ಆಫ್ ದಿ ಎಮೋಷನ್ಸ್ ಇನ್ ಮ್ಯಾನ್ ಅಂಡ್ ಅನಿಮಲ್ಸ್ ಪ್ರಮುಖವಾದವುಗಳು.
ಇಷ್ಟೆಲ್ಲ ದುಡಿದ ಡಾರ್ವಿನ್ ಬಳಲಿದ್ದರು. ಅವರಿಗಿದ್ದ ಒಂದು ಸಮಾಧಾನವೆಂದರೆ ತಮ್ಮ ಜೀವಿತಾವಧಿಯಲ್ಲೇ ತಮ್ಮ ಸಿದ್ಧಾಂತಕ್ಕೆ ಮನ್ನಣೆ ದೊರಕಿತಲ್ಲ ಎಂಬುದು. ಅವರು ತಮ್ಮ ಬದುಕಿನ ಕೊನೆಯ ವರ್ಷಗಳನ್ನು ‘ಡೌನ್ ಹೌಸ್’ ನಲ್ಲಿಯೇ ಆನಂದವಾಗಿ ಕಳೆದರು. 1882 ಏಪ್ರಿಲ್ 19ರಂದು ತಮ್ಮ ಗೆಳೆಯನ ಮನೆಗೆಂದು ಲಂಡನ್‌ಗೆ ತೆರಳಿದ ಡಾರ್ವಿನ್ ಹೃದಯಾಘಾತದಿಂದ ಮರಣಿಸಿದರು. ಇಡೀ ಜಗತ್ತಿನ ಅರಿವನ್ನು ವಿಸ್ತರಿಸಿದ ಮಹಾಚೇತನ ಕಣ್ಮರೆಯಾಯಿತು. ಲಂಡನ್‌ನ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಏಪ್ರಿಲ್ 26 ರಂದು ರಾಷ್ಟ್ರೀಯ ಗೌರವದೊಂದಿಗೆ ಡಾರ್ವಿನ್‌ರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಸಲಾಯಿತು.

5 comments:

  1. ಆಸಕ್ತಿಯುತ ಪ್ರಸ್ತುತಿ. ಉತ್ತಮ ಲೇಖನ

    ReplyDelete
  2. ಲೇಖನ ಚೆನ್ನಾಗಿ ಮೂಡಿಬಂದಿದೆ.

    ReplyDelete
  3. ವಿಷಯ ಸಂಗ್ರಹಣೆ ಮತ್ತು ಪ್ರಸ್ತುತಿ ಚೆನ್ನಾಗಿ ಇದೆ ಸರ್.

    ReplyDelete
  4. ಉತ್ತಮವಾದ ಲೇಖನ

    ReplyDelete