ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, July 4, 2021

ತಳಿ ವಿಜ್ಞಾನಕ್ಕೆ ತಳಹದಿ ಒದಗಿಸಿದ ಗ್ರೆಗೊರ್ ಜೊಹಾನ್ ಮೆಂಡೆಲ್

ಜುಲೈ 22ರಂದು ಮೆಂಡೆಲ್‌ನ 199ನೇ ಜನ್ಮ ದಿನದ ಸ್ಮರಣೆಯ ಸಂದರ್ಭದಲ್ಲಿ ವಿಶೇಷ ಲೇಖನ

ತಳಿ ವಿಜ್ಞಾನಕ್ಕೆ ತಳಹದಿ ಒದಗಿಸಿದ ಗ್ರೆಗೊರ್ ಜೊಹಾನ್ ಮೆಂಡೆಲ್

ಡಾ. ಸಂಧ್ಯಾ ಡಿ.ಎನ್.

ಸಹ ಶಿಕ್ಷಕಿ, ಸರ್ಕಾರೀ ಪ್ರೌಢಶಾಲೆ,

ಟಿ.ದಾಸರಹಳ್ಳಿ, ಬೆಂಗಳೂರು.

ಆನುವಂಶೀಯ ಲಕ್ಷಣಗಳ ವರ್ಗಾವಣೆ ಹೇಗೆ ?

ಜೀವಿಗಳ ಪ್ರಮುಖ ಲಕ್ಷಣಗಳಲ್ಲಿ ಪ್ರಜನನವೂ ಒಂದು. ಈ ಪ್ರಕ್ರಿಯೆಯಿಂದ ಹುಟ್ಟುವ ಮರಿ ಜೀವಿಗಳು ತಮ್ಮ ಪೋಷಕ ಜೀವಿಗಳನ್ನು ಬಿಟ್ಟು, ಬೇರೆ ಜೀವಿಗಳನ್ನು ಹೋಲುವುದು ಸಾಧ್ಯವೇ? ಹುಣಿಸೇ ಬೀಜ ಬಿತ್ತಿ ಅದು ಬೆಳೆದು ಮಾವಿನ ಮರವಾಗಲು ಸಾಧ್ಯವೇ? ಯಾವುದೇ ಪ್ರಾಣಿಯ ಮರಿ ತನ್ನ ತಂದೆ-ತಾಯಂದಿರನ್ನು ಹೋಲದೆ, ಬೇರೊಂದು ಪ್ರಾಣಿಯನ್ನು ಹೋಲುತ್ತದೆಯೇ? ಇಲ್ಲ, ಎಂಬ ಉತ್ತರ ನಿರೀಕ್ಷಿತವೇ. ಆದರೆ, 19ನೇ ಶತಮಾನದ ಪ್ರಾರಂಭದವರೆಗೆ ಮರಿ ಜೀವಿಗಳ ಹುಟ್ಟು, ಹೋಲಿಕೆ ಹಾಗೂ ವ್ಯತ್ಯಾಸಗಳ ಬಗ್ಗೆ ಜನರಲ್ಲಿದ್ದ ಕಲ್ಪನೆಗಳೇ ಬೇರೆ. ಈ ಹೋಲಿಕೆ ಹಾಗೂ ವ್ಯತ್ಯಾಸಗಳ ನಡುವಿನ ಗುಟ್ಟೇ ‘ಆನುವಂಶೀಯತೆ’(Heredity)  ಅದರಲ್ಲಿಯೂ, ಮಾನವರಲ್ಲಿನ ಆನುವಂಶೀಯತೆಯ ಬಗ್ಗೆ ಚಿತ್ರ ವಿಚಿತ್ರ ಕಲ್ಪನೆಗಳು ಜನರಲ್ಲಿದ್ದುವು. ‘ಜೀವಶಾಸ್ತ್ರದ  ಪಿತಾಮಹ’ ಎಂದು ಪರಿಗಣಿಸಲಾಗುವ ಅರಿಸ್ಟಾಟಲ್(Aristotle, 384-322 B.C.) ಆನುವಂಶೀಯತೆಯ ಬಗ್ಗೆ ತನ್ನದೇ ಆದ ವಿವರಣೆಯನ್ನು ನೀಡಿದ್ದ. ಅವನ ಪ್ರಕಾರ, ಮಾನವರಲ್ಲಿ ಗಂಡು ಮತ್ತು ಹೆಣ್ಣಿನ ರಕ್ತದ ಅಂಶಗಳು ಮಿಶ್ರಿತವಾಗುವ ಮೂಲಕ, ಆನುವಂಶೀಯ ಲಕ್ಷಣಗಳು ಪ್ರಕಟವಾಗುತ್ತವೆ. ಅವನ ಈ ವಾದಕ್ಕೆ ‘ಮುಕ್ತ ಮಿಶ್ರಣ ಆನುವಂಶೀಯತಾ ಸಿದ್ಧಾಂತ’ (blending theory of inheritance) ಎಂದು ಹೆಸರು. ಇದು ಬರೀ ಊಹಾಪೋಹವಾದರೂ ಸುಮಾರು ಎರಡು ಸಾವಿರ ವರ್ಷಗಳವರೆಗೆ ವಿಶ್ವದ ಎಲ್ಲೆಡೆ ನಂಬಿಕೆಗೆ ಪಾತ್ರವಾಗಿತ್ತು !

ಈ ರೀತಿಯ ಹಲವು ವಿಚಿತ್ರ ಕಲ್ಪನೆಗಳ ಹಿನ್ನೆಲೆಯಲ್ಲಿ 19ನೇ ಶತಮಾನದ ಕೆಲವು ವಿಜ್ಞಾನಿಗಳು ಆನುವಂಶೀಯತೆಯ ಕುರಿತು ಪ್ರಯೋಗ, ವಿಮರ್ಶೆಗಳನ್ನು ಪ್ರಾರಂಭಿಸಿದರಾದರೂ, ಯಾವುದೇ ಸಮಂಜಸ ನಿರ್ಧಾರಕ್ಕೆ ಬರಲು ವಿಫಲರಾದರು. ಈ ದಿಕ್ಕಿನಲ್ಲಿ ಮೊದಲ ಬಾರಿಗೆ, ಸುಸಜ್ಜಿತವಾಗಿ, ವ್ಯವಸ್ಥಿತ ರೀತಿಯಲ್ಲಿ ಪ್ರಯೋಗಗಳನ್ನು ನಡೆಸಿ, ನಿರ್ದಿಷ್ಟ ಫಲಿತಾಂಶಗಳನ್ನು ಪಡೆದ ಕೀರ್ತಿ  ಗ್ರಗೊರ್ ಜೊಹಾನ್ ಮೆಂಡೆಲ್ (Gregor Johann Mendel) ಎಂಬ ವ್ಯಕ್ತಿಗೆ ಸೇರುತ್ತದೆ. ಮೆಂಡೆಲ್ ತನ್ನ ಪ್ರಯೋಗಗಳಿಂದ ಪತ್ತೆ ಹಚ್ಚಿದ ಅತಿ ಪ್ರಮುಖ ಸತ್ಯವೆಂದರೆ, ತಂದೆ-ತಾಯಂದಿರ ಗುಣಗಳು ಮಿಶ್ರಗೊಳ್ಳುವುದಿಲ್ಲ, ಬದಲಿಗೆ ಅವು ಕಣಗಳ ರೂಪದಲ್ಲಿ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳುತ್ತವೆ ಎಂಬ ವಿಷಯ. ಮುಂದೆ ಇದು, ‘ಕಣ ರೂಪೀ ಆನುವಂಶಿಯತಾ ಸಿದ್ಧಾಂತ’(particulate theory of inheritance) ಎಂಬ ಹೆಸರಿನಲ್ಲಿ ಜನಪ್ರಿಯವಾಯಿತು. ಅಷ್ಟೇ ಅಲ್ಲ, ಆನುವಂಶೀಯತೆಯನ್ನು ವಿವರಿಸುವ ‘ತಳಿಶಾಸ್ತ್ರ’ (Genetics) ಎಂಬ ಶಾಖೆಯ ಬೆಳವಣಿಗೆಗೆ ಭಧ್ರ ಬುನಾದಿಯಾಗಿ ನೆಲೆ ನಿಂತಿತು. ಈ ಕಾರಣಕ್ಕಾಗಿಯೇ “ ಆಧುನಿಕ ತಳಿಶಾಸ್ತ್ರ ಪಿತಾಮಹ “ ಎಂದು ಮೆಂಡೆಲನನ್ನು ಗೌರವಿಸಲಾಗುತ್ತದೆ.

ಶಿಕ್ಷಕನಾಗಬಯಸಿದ್ದ ಮೆಂಡೆಲ್ ಪಾದ್ರಿಯಾದ !

ಆಸ್ಟ್ರೀಯಾ ದೇಶದ ಸಿಲೇಸಿಯನ್ ಭಾಗದ ಒಂದು ಬಡ ರೈತ ಕುಟುಂಬದಲ್ಲಿ 1822, ಜುಲೈ 22ರಂದು ಮೆಂಡೆಲ್ ಜನಿಸಿದ. ತಂದೆ ಆಂಟನ್ ಮೆಂಡೆಲ್ ಹಾಗು ತಾಯಿ ರೋಸೈನ್ ಶ್ವೆರ್ಟ್ಲಿಜ್. ವ್ಯವಸಾಯವನ್ನೇ ಜೀವನಾಧಾರವಾಗಿಸಿಕೊಂಡಿದ್ದ ಕುಟುಂಬ ಮೆಂಡಲ್‌ರದ್ದು. ಬಾಲಕ ಮೆಂಡೆಲ್ ತೋಟಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ ಹೊಂದಿದ್ದ. ಇದು ಅನಿವಾರ್ಯವೂ ಆಗಿತ್ತು. ಬಾಲ್ಯದಲ್ಲಿ ತಂದೆಯ ಜೊತೆ ಜಮೀನ್ದಾರರ ಹೊಲದಲ್ಲಿ ಊಳಿಗ ಮಾಡಿದ ಮೆಂಡೆಲ್, ಜೇನು ಸಾಕಣೆಯಲ್ಲೂ ಆಸಕ್ತಿ ಮತ್ತು ಪರಿಣಿತಿಯನ್ನು ಹೊಂದಿದ್ದ. ಅಲ್ಲದೆ, ಜೇನು ನೊಣಗಳ ಸಂತಾನೋತ್ಪತ್ತಿ ಮತ್ತು ಸಂಕರಣದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದ ಹಲವಾರು ಬಗೆಯ ಜೇನುನೊಣಗಳ ಗುಣಲಕ್ಷಣಗಳನ್ನು ಅಧ್ಯಯನವನ್ನೂ ಸಹ ಮಾಡಿದ್ದ. ಆತನ ದಣಿವರಿಯದ ಈ ಕೆಲಸಗಳಿಂದಾಗಿ 1871ರಲ್ಲಿ ಬ್ರುನೋದ “ಜೇನು ಸಾಕಣೆ ಸಂಘದ ಅಧ್ಯಕ್ಷ”ನಾಗಿ ನೇಮಕವಾಗಿದ್ದ.                                    



ಒಪವಾ ಎಂಬಲ್ಲಿ ತಮ್ಮ ಶಾಲೆ, ಪದವಿಯನ್ನು ಪೂರೈಸಿದ ಮೆಂಡಲ್ ಒಲೋಮೊಕ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ, ಗಣಿತಶಾಸ್ತ್ರ, ತತ್ವಶಾಸ್ತ್ರ, ಇನ್ನಿತರ ವಿಷಯಗಳ ಅಧ್ಯಯನ ಮಾಡಿದ. 1842ರಲ್ಲಿ ಹೊಟ್ಟೆಪಾಡಿಗಾಗಿ ಬ್ರುನೋದ ಸೇಂಟ್ ಥಾಮ್ಸನ್ ಅಗಸ್ಟಿಯನ್ ಚರ್ಚ್ನಲ್ಲಿ ಪಾದ್ರಿಯಾಗಿ ಸೇರಿದ. ಈ ಸಂದರ್ಭದಲ್ಲೇ ಧಾರ್ಮಿಕ ಜೀವನದ ಸಂಕೇತವಾಗಿ ಮೆಂಡಲ್ ಹೆಸರಿನ ಹಿಂದೆ “ಗ್ರೆಗರ್” ಎಂಬ ಬಿರುದಾಂಕಿತವು ಸೇರಿ ‘ಗ್ರೆಗರ್ ಜೊಹಾನ್ ಮೆಂಡಲ್’ ಆದ. 1844 – 1848ರ ಅವಧಿಯಲ್ಲಿ ಬ್ರೈನ್ಸ್ಕಿ ಥಿಯೋಲಾಜಿಕಲ್ ಸಂಸ್ಥೆಯಲ್ಲಿ ಧಾರ್ಮಿಕ ತರಬೇತಿ ಪಡೆದ. 1849-1851ರವರೆಗೂ ಗಣಿತ, ಲಾಟಿನ್, ಗ್ರೀಕ್ ಭಾಷೆಗಳ ಶಿಕ್ಷಕನಾಗಿಯೂ ಕೆಲಸ ನಿರ್ವಹಿಸಿದ. 1851ರಲ್ಲಿ ಚರ್ಚ್ ಮೆಂಡೆಲ್‌ನನ್ನು ಹೆಚ್ಚಿನ ಅಧ್ಯಯನಕ್ಕೆ ವಿಯೆನ್ನಾ ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಟ್ಟಿತು. ಭೌತಶಾಸ್ತ್ರ ಅಧ್ಯಯನ ಮಾಡಿ ಬಂದ ಮೆಂಡಲ್ ಚರ್ಚ್ನಲ್ಲಿ ಶಿಕ್ಷಕನಾಗಲು ಬಯಸಿದ್ದ.  ಆದರೆ, ಅವನ ದುರಾದೃಷ್ಟ, ಜೀವಶಾಸ್ತ್ರದ ಸುದೈವ!!! ಹಲವಾರು ಬಾರಿ ಪ್ರಯತ್ನಿಸಿದರೂ ಮೌಖಿಕ ವಿಭಾಗದ ಪರೀPಯಲ್ಲಿ ಸಫಲನಾಗಲಿಲ್ಲ. ನಿರಾಸೆಗೊಂಡ ಮೆಂಡೆಲ್, ಈ ಸಮಯದಲ್ಲಿ ಸಸ್ಯಗಳ ಸಂಕರಣ (ಹೈಬ್ರಿಡೈಸೇಷನ್) ಪ್ರಕ್ರಿಯೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ. 1856ರಲ್ಲಿ ಚರ್ಚ್ನ ತೋಟದಲ್ಲಿ ಬಟಾಣಿ ಸಸ್ಯಗಳ ಆನುವಂಶೀಯತೆಯ ಮೇಲೆ ತಮ್ಮ ಪ್ರಯೋಗಗಳನ್ನು ಪ್ರಾರಂಭಿಸಿದ. ಸತತ ಎಂಟು ವರ್ಷಗಳ ಅಧ್ಯಯನದ ಅವಧಿಯಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಸಸ್ಯಗಳನ್ನು ಅಭ್ಯಸಿಸಿದ.

ಬಟಾಣಿ ಗಿಡವೇ ಏಕೆ ?

ತಮ್ಮ ಪ್ರಯೋಗಗಳಿಗೆ ಮೆಂಡೆಲ್ ಬಟಾಣಿ ಸಸ್ಯಗಳನ್ನೇ(Pisum sativum) ಆರಿಸಿಕೊಂಡದ್ದು ಆಕಸ್ಮಿಕವೇ ಆದರೂ, ಆನುವಂಶೀಯತೆಯ ಪ್ರಯೋಗಗಳಿಗೆ ಅನುಕೂಲಕರವಾದ ಕೆಲವು ಲಕ್ಷಣಗಳನ್ನು ಆ ಸಸ್ಯಗಳಲ್ಲಿ ಗುರುತಿಸಿದ್ದ. ಆ ಗುಣಗಳಲ್ಲಿ ಕೆಲವು ಹೀಗಿವೆ.

  • ಎರಡು ವಿರುದ್ಧ ಗುಣಗಳನ್ನು ತೋರಿಸುವ ಹಲವಾರು ಲಕ್ಷಣಗಳನ್ನು ಈ ಸಸ್ಯಗಳು ಹೊಂದಿವೆ; ಇಂತಹ ಏಳು ಲಕ್ಷಣಗಳನ್ನು ಮೆಂಡಲ್ರ್ ಬಟಾಣಿ ಸಸ್ಯಗಳಲ್ಲಿ ಗುರುತಿಸಿದ್ದ.
  • ಹಲವಾರು ಪೀಳಿಗೆಯ ನಂತರವೂ ಬಟಾಣಿ ಸಸ್ಯದಲ್ಲಿ ಕೆಲವು ಗುಣಗಳು ಬದಲಾವಣೆಗೆ ಒಳಪಡದೆ ಅಥವಾ ಬೇರೆ ಗುಣಗಳೊಂದಿಗೆ ಮಿಳಿತವಾಗದೆ ಇರುವುದನ್ನು ಮೆಂಡಲ್ ಗಮನಿಸಿದ್ದ.
  • ಈ ಲಕ್ಷಣಗಳು ಶುದ್ಧರೂಪಗಳಾಗಿದ್ದು, ಮುಂದಿನ ಸಂತತಿಗಳಲ್ಲಿ ಅದೇ ಲಕ್ಷಣಗಳನ್ನೇ ತೋರ್ಪಡಿಸುವ ಸಾಮರ್ಥ್ಯ ಹೊಂದಿದ್ದುವು.
  • ಬಟಾಣಿ ಸಸ್ಯಗಳು ದ್ವಿಲಿಂಗಿಗಳಾಗಿದ್ದು ಸ್ವಾಭಾವಿಕವಾಗಿ ಸ್ವಕೀಯ ಪರಾಗಸ್ಪರ್ಶಕ್ರಿಯೆಗೆ ಒಳಪಟ್ಟರೂ, ಕೃತಕವಾಗಿ ಪರಕೀಯ ಪರಾಗಸ್ಪರ್ಶಕ್ರಿಯೆಗೆ ಒಳಪಡಿಸಿದರೆ ಬೀಜಗಳನ್ನು ಉತ್ಪತ್ತಿಮಾಡುತ್ತಿದ್ದುವು ಎಂಬುದನ್ನು ಮೆಂಡೆಲ್ ಕಂಡುಕೊಂಡಿದ್ದ.
  • ಈ ಸಸ್ಯಗಳು ಸಂಕ್ಷಿಪ್ತ ಜೀವಿತಾವಧಿಯನ್ನು ಹೊಂದಿದ್ದು, ಒಂದೇ ವರ್ಷದಲ್ಲಿ ಅಧ್ಯಯನಕ್ಕೆ ಹೆಲವಾರು ಸಂತತಿಗ¼ನ್ನು ಪಡೆಯಲು ಸೂಕ್ತವಾಗಿದ್ದುವು.
  • ಈ ಸಸ್ಯಗಳು ಹೆಚ್ಚಿನ ಸಂಖ್ಯೆಯ ಬೀಜಗಳನ್ನು ಉತ್ಪತ್ತಿಮಾಡುತ್ತಿದ್ದುವು.

 

ಪಾದ್ರಿಯಾಗಿದ್ದ ಮೆಂಡೆಲ್ ಜೀವ ವಿಜ್ಞಾನಿಯಾದ !

ಮೆಂಡೆಲ್ ಬಟಾಣಿ ಗಿಡಗಳ ಮೇಲೆ ತಳೀಕರಣ ಪ್ರಯೋಗಗಳನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ್ದ. ಪಾದ್ರಿಯಾಗಿದ್ದರೂ ಅವನೊಳಗಿದ್ದ ವಿಜ್ಞಾನಿ ಅವನ ನೆರವಿಗೆ ಬಂದಿದ್ದ. ಪ್ರಯೋಗಗಳಿಗೆ ಅಗತ್ಯವಾಗಿದ್ದ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ, ಅತ್ಯಂತ ಯೋಜಿತ ರೀತಿಯಲ್ಲಿ ಪ್ರಯೋಗಗಳನ್ನು ನಡೆಸಿ, ಫಲಿತಾಂಶಗಳನ್ನು ದಾಖಲಿಸಿದ.

  • ಪರಕೀಯ ಪರಾಗಸ್ಪರ್ಶ ಕ್ರಿಯೆ ನಡೆಸಲು ಹೂವಿನ ಪುಂಕೇಸರಗಳನ್ನು ಹೂವು ಮೊಗ್ಗಾಗಿರುವಾಗಲೇ ಮೆಂಡೆಲ್ ತೆಗೆದು ಹಾಕುತ್ತಿದ್ದ.
  • ಪ್ರಯೋಗಕ್ಕೆ ಗಂಡು ಸಸ್ಯ ಎಂದು ಗುರುತಿಸಿದ ಸಸ್ಯದ ಪ್ರೌಢ ಪರಾಗರೇಣುಗಳನ್ನು ಹೆಣ್ಣು ಸಸ್ಯ ಎಂದು ಗುರುತಿಸಿದ ಸಸ್ಯದ ಶಲಾಕಾಗ್ರದ ಮೇಲೆ ಬ್ರಷ್‌ನ ಸಹಾಯದಿಂದ ಉದುರಿಸಿದ.
  • ಪ್ರತೀ ಏಳು ಲಕ್ಷಣಗಳ ಸಸ್ಯಗಳ ಒಂದು ಗುಣವನ್ನು ಹೆಣ್ಣು ಎಂದು, ಅದರ ವಿರುದ್ಧ ಗುಣವನ್ನು ಗಂಡು ಅಂಶವೆAದು ಪರಿಗಣಿಸಿದ.
  • ಈ ರೀತಿ ಸಂಕರಣದಿಂದ ಉಂಟಾದ ಮೊದಲ ಪೀಳಿಗೆಯ ಸಸ್ಯಗಳನ್ನು ಈ೧ಪೀಳಿಗೆಯ ಸಸ್ಯಗಳು ಎಂದು ಕರೆದ.
  • F1 ಪೀಳಿಗೆಯ ಸಸ್ಯಗಳು ಸ್ವಕೀಯ ಪರಾಗಸ್ಪರ್ಶ ಕ್ರಿಯೆ ಹೊಂದುವಂತೆ ಮಾಡಿ, ಪಡೆದ ಸಸ್ಯಗಳನ್ನು ಎರಡನೇ ತಳಿ ಪೀಳಿಗೆ ಅಥವಾ F2 ಪೀಳಿಗೆ ಎಂದು ಕರೆದ.

ಮೆಂಡೆಲ್ ತನ್ನ ಎಲ್ಲಾ ಪ್ರಯೋಗಗಳ ಫಲಿತಾಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಿ, ಅವುಗಳ ಆಧಾರದ ಮೆಲೆ ಈ ಕೆಳಗಿನ ತೀರ್ಮಾನಗಳಿಗೆ ಬಂದ.

  1. ಪ್ರಾಬಲ್ಯದ ಪರಿಕಲ್ಪನೆ (law of dominance) : ಒಂದು ಲಕ್ಷಣವು ಎರಡು ವಿಧವಾದ ಅಂಶಗಳಿಂದ ನಿಯಂತ್ರಿಸಲ್ಪಟ್ಟಿದೆ. ಅವುಗಳಲ್ಲಿ ಒಂದು ಪ್ರಬಲವಾಗಿದ್ದರೆ ಮತ್ತೊಂದು ಅಪ್ರಬಲ.
  2. ಪ್ರತ್ಯೇಕತೆಯ ನಿಯಮ (law of segregation): ಲಿಂಗಾಣುಗಳು ಉತ್ಪತ್ತಿಯಾಗುವಾಗ ಭಿನ್ನ ಅಂಶಗಳು ಪ್ರತ್ಯೇಕವಾಗುತ್ತವೆ, ಅಂದರೆ, ಒಂದು ಲಿಂಗಾಣುವು ಒಂದು ಲಕ್ಷಣದ ಒಂದೇ ಅಂಶವನ್ನು ಮಾತ್ರ ವರ್ಗಾಯಿಸುತ್ತದೆ. ಹೀಗಾಗಿ, ಇದನ್ನು ಲಿಂಗಾಣುಗಳ ಶುದ್ಧತೆಯ ನಿಯಮ(  ) ಎಂದೂ ಕರೆದ.*
  3. ಸ್ವತಂತ್ರ ವಿಂಗಡಣೆಯ ನಿಯಮ (law of independent assortment): ಎರಡು ವಿಭಿನ್ನ ಸಸ್ಯಗಳು  ಒಂದಕ್ಕಿAತ ಹೆಚ್ಚು ಅಂಶಗಳನ್ನು ಹೊಂದಿದ್ದರೆ, ಪ್ರತಿ ಜೊತೆ ಅಂಶವೂ ಇತರ ಅಂಶಗಳಿಂದ ಸಂಪೂರ್ಣ ಸ್ವತಂತ್ರವಾಗಿ ವಿಂಗಡನೆಗೆ ಒಳಗಾಗಿ ಪ್ರತ್ಯೇಕ ಲಿಂಗಾಣುಗಳಿಗೆ ವರ್ಗವಾಗುತ್ತವೆ.

ದೀರ್ಘ ಕಾಲ ನಡೆಸಿದ ಈ ಎಲ್ಲಾ ಸಂಶೋಧನೆಗಳನ್ನು ಮೆಂಡಲ್ 1866ರಲ್ಲಿ ಒಂದು ವಿಜ್ಞಾನ ನಿಯತಕಾಲಿಕ ಪತ್ರಿಕೆಯಲ್ಲಿ “ಸಸ್ಯ ಸಂಕರಗಳಲ್ಲಿ ಪ್ರಯೋಗಗಳು” ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದು ಪ್ರಕಟಿಸಿದ. ದುರದೃಷ್ಟವಶಾತ್ ಆ ಲೇಖನ ಯಾವ ಸಮಕಾಲೀನ ವಿಜ್ಞಾನಿಗಳ ಗಮನವನ್ನೂ ಸೆಳೆಯದೆ ಅನಾದರಣೀಯವಾಗೇ ಉಳಿಯಿತು. ಈ ಮಧ್ಯೆ, ಮೆಂಡೆಲ್ ಹವಾಮಾನ ತಜ್ಞನಾಗಿಯೂ ಸೇವೆ ಸಲ್ಲಿಸಿದ್ದ.. 1870ರಲ್ಲಿ ಬ್ರುನೋ ನಗರಕ್ಕೆ ಅಪಾರ ಹಾನಿಯನ್ನುಂಟುಮಾಡಿದ ಸುಂಟರಗಾಳಿಯ ವೈಜ್ಞಾನಿಕ ವಿವರಣೆಯನ್ನು ಆತ ನೀಡಿದ್ದ. ಹವಾಮಾನದ ಮುನ್ಸೂಚನೆಗಳನ್ನು ವೈಜ್ಞಾನಿಕ ವಿಧಾನದಿಂದ ತಿಳಿಸುತ್ತಿದ್ದ. 1871ರಲ್ಲಿ “ಆಸ್ಟ್ರಿಯನ್ ಮೀಟಿರಿಯೋಲಾಜಿಕಲ್ ಸೊಸೈಟಿ” ಯನ್ನೂ ಸ್ಥಾಪಿಸಿದ್ದ !

ಮೆಂಡಲ್ 1884ರ ಜನವರಿ 4 ರಂದು ವಿಧಿವಶನಾದ. ಮೆಂಡಲ್ ನಿಧನದ ನಂತರ ತನ್ನ ಪ್ರಯೋಗಗಳ ಫಲಿತಾಂಶಗಳನ್ನು ಆತ ಬರೆದಿಟ್ಟಿದ್ದ  ಹಲವಾರು ಕಡತಗಳನ್ನು ಸರ್ಕಾರ ಮತ್ತು ಚರ್ಚ್ಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸುಟ್ಟುಹಾಕಲಾಯಿತೆಂದು ಹೇಳಲಾಗುತ್ತದೆ. 1866ರಲ್ಲಿ ಮೆಂಡೆಲ್ ತನ್ನ ಸಂಶೋಧನೆಗಳನ್ನು  ಪ್ರಕಟಿಸಿದಾಗಿನಿಂದ 1900ರ ವರೆಗೂ ಸರಿ ಸುಮಾರು 34 ವರ್ಷಗಳ ಕಾಲ ಆತನ ಸಂಶೋಧನೆ ಅಜ್ಞಾತವಾಗಿಯೇ ಉಳಿಯಿತು. ಜರ್ಮನಿಯ ಕಾರೆನ್ಸ್(Correns) , ಹಾಲೆಂಡ್‌ನ ಹ್ಯೂಗೋ ಡಿ ವ್ರೀಸ್(Hugo De Vries), ಮತ್ತು ಆಸ್ಟ್ರಿಯಾದ ಶೆರ್‌ಮಾರ್ಕ್(Schermark) ಎಂಬ ತಳಿಶಾಸ್ತ್ರಜ್ಞರು ಮೆಂಡಲ್‌ನ ಪ್ರಯೋಗಗಳ ಅಧ್ಯಯನವನ್ನು ಪ್ರತ್ಯೇಕವಾಗಿ ಕೈಗೊಂಡು, ಸಂಶೋಧನೆಗಳನ್ನು ಮತ್ತೆ ನಡೆಸಿ, ಬಂದ ಅದೇ ರೀತಿಯ ಫಲಿತಾಂಶಗಳನ್ನು “ಮೆಂಡಲ್‌ನ ನಿಯಮಗಳು ಮತ್ತು ತತ್ವಗಳು” ಎಂಬ ಹೆಸರಿನಲ್ಲಿ ಪ್ರಕಟಿಸಿ, ಇತಿಹಾಸದ ಪುಟಗಳಲ್ಲಿ ಸೇರಿಹೋಗಿದ್ದ ಮೆಂಡಲ್ ಹೆಸರನ್ನು ಮತ್ತೆ ಮುನ್ನೆಲೆಗೆ ತಂದು, ತಾಳಿಶಾಸ್ತ್ರ ಕ್ಷೇತ್ರಕ್ಕೆ ಮಹದುಪಕಾರವನ್ನು ಮಾಡಿದರು.

ಮೆಂಡೆಲ್ಲನ ಯಶಸ್ಸಿಗೆ ಕಾರಣವೇನು ?

ಬಟಾಣಿ ಗಿಡದ ಲಕ್ಷಣಗಳ ಮೇಲೆ ಮೆಂಡೆಲ್ ನಡೆಸಿದ ಪ್ರಯೋಗಗಳು ಯಶಸ್ವಿಯಾಗಲು ಆತನಲ್ಲಡಗಿದ್ದ ಕೆಲವು ವಿಶೇಷ ಪ್ರತಿಭೆಗಳೂ ಕಾರಣ ಎನ್ನಬಹುದು. ವಿವಿಧ ವಿಷಯಗಳಲ್ಲಿದ್ದ ತನ್ನ ಜ್ಞಾನವನ್ನು, ಅದರಲ್ಲಿಯೂ ಜೀವವಿಜ್ಞಾನ ಹಾಗೂ ಗಣಿತದಲ್ಲಿನ ತನ್ನ ಆಳವಾದ ಜ್ಞಾನವನ್ನು ಪ್ರಯೋಗಗಳನ್ನು ರೂಪಿಸಲು ಹಾಗೂ ಬಂದ ಫಲಿತಾಂಶಗಳನ್ನು ತರ್ಕಬದ್ಧವಾಗಿ ವಿಶ್ಲೇ಼ಷಿಸಲು ಮೆಂಡೆಲ್ ಸೂಕ್ತವಾಗಿ ಬಳಸಿಕೊಂಡ. ಮೂರು ರೀತಿಯಲ್ಲಿ ಅವನ ಪ್ರಯೋಗಗಳು ಅಸಾದೃಶವಾಗಿದ್ದುವು.

  • ಮೆಂಡೆಲ್‌ಗಿಂತ ಮುಂಚೆ ಪ್ರಯೋಗಗಳನ್ನು ನಡೆಸಿದ್ದ ವಿಜ್ಞಾನಿಗಳು ಒಂದು ಜೊತೆ ಜೀವಿಗಳನ್ನು ಬಳಸಿಕೊಂಡು, ಅವುಗಳಿಂದ ಹುಟ್ಟಿದ ಕೆಲವೇ ಸಂತಾನಗಳ ಆಧಾರದ ಮೇಲೆ ದೊರೆತ ಫಲಿತಾಂಶವನ್ನು ಬಳಸಿಕೊಂಡು, ಕೆಲವು ತೀರ್ಮಾನಗಳಿಗೆ ಬಂದಿದ್ದರು. ಮೆಂಡೆಲ್ ವಿವಿಧ ಲಕ್ಷಣಗಳಿಗೆ ಒಂದೇ ರೀತಿಯ ಅನೇಕ ಸಂಕರಗಳನ್ನು ನಡೆಸಿ, ಅವುಗಳಿಂದ ಉಂಟಾದ ಸಂತಾನದ ಹಲವು ಪೀಳಿಗೆಗಳ ಮಾಹಿತಿಯನ್ನು ಸಂಗ್ರಹಿಸಿದ್ದ. ತನಗೆ ತಿಳಿದಿದ್ದ ಗಣಿತದ ಸಂಭವನೀಯತೆಯ (probability) ನಿಯಮಗಳನ್ನು ಬಳಸಿಕೊಂಡು ಮಾಹಿತಿಯನ್ನು ಕ್ರೋಡೀಕರಿಸಿ ತೀರ್ಮಾನಗಳಿಗೆ ಬರುತ್ತಿದ್ದ.
  • ಇತರ ವಿಜ್ಞಾನಿಗಳು ತಾವು ಆಯ್ಕೆ ಮಾಡಿಕೊಂಡಿದ್ದ ಜೀವಿಯ ಎಲ್ಲ ಲಕ್ಷಣಗಳನ್ನು ಒಟ್ಟಿಗೇ ಗಣನೆಗೆ ತೆಗೆದುಕೊಂಡು ಪ್ರಯೋಗಗಳನ್ನು ಮಾಡುತ್ತಿದ್ದರು. ಬರುತ್ತಿದ್ದ ಫಲಿತಾಂಶಗಳು ಗೊಂದಲಮಯವಾಗಿರುತ್ತಿದ್ದುವು.. ಹೀಗಾಗಿ, ನಿರ್ದಿಷ್ಟ ತೀರ್ಮಾನಗಳಿಗೆ ಬರಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಮೆಂಡೆಲ್ ಒಂದು ಬಾರಿಗೆ ಒಂದೇ ಲಕ್ಷಣವನ್ನು ಆಯ್ಕೆ ಮಾಡಿಕೊಂಡು ಅದರ ಅಂಶಗಳ ಬಗ್ಗೆ ಪ್ರಯೋಗ ನಡೆಸಿದ. ಇದರಿಂದ, ಅವನಿಗೆ ದೊರೆತ ಫಲಿತಾಂಶಗಳನ್ನು ಸಮರ್ಪಕವಾಗಿ, ತರ್ಕಬದ್ಧವಾಗಿ ವಿಶ್ಲೇಷಿಸಲು ಸುಲಭವಾಗುತ್ತಿತ್ತು.
  • ಪ್ರಯೋಗಗಳಿಗೆ ಮೆಂಡೆಲ್ ಬಟಾಣಿ ಗಿಡಗಳನ್ನು ಆಯ್ಕೆ ಮಾಡಿದ್ದು ಅವನಿಗೆ ವರದಾನವಾಗಿತ್ತು. ಅವನು ಬಟಾಣಿ ಗಿಡಗಳಲ್ಲಿ ಏಳು ಜೊತೆ ವಿರುದ್ಧ ಗುಣಗಳನ್ನು ಗುರುತಿಸಿದ್ದ. ಅವನ ಕಾಲದ ನಂತರ ದೊರೆತ ಮಾಹಿತಿಯಂತೆ ಬಟಾಣಿ ಗಿಡಗಳಲ್ಲಿ ಏಳು ಜೊತೆ ವರ್ಣತಂತುಗಳಿದ್ದು, ಒಂದೊಂದು ಜೊತೆ ವರ್ಣತಂತುಗಳ ಮೇಲೆ ಆತ ಗುರುತಿಸಿದ್ದ ಲಕ್ಷಣದ ಒಂದೊಂದು ಜೊತೆ ಅಂಶಗಳು(ಅಂದರೆ, ಜೀನ್‌ಗಳು) .ಹಂಚಿಕೆಯಾಗಿದ್ದುವು. ಒಂದು ವೇಳೆ, ಒಂದು ವರ್ಣತಂತುವಿನ ಮೇಲೆ ಒಂದಕ್ಕಿಂತ ಹೆಚ್ಚು ಜೀನ್ ಇದ್ದಿದ್ದರೆ, ಸ್ವತಂತ್ರ ವಿಂಗಡನೆ ಆಗುತ್ತಿರಲಿಲ್ಲ. ಹೀಗಾಗಿ, ಮೆಂಡೆಲನ ಅಧ್ಯಯನಗಳ ಜೊತೆಗೆ ಅವನ ಅದೃಷ್ಟವೂ ಸೇರಿಕೊಂಡಿತ್ತು !

ಮೆಂಡೆಲ್ಲನ ಪ್ರಯೋಗದ ಮಹತ್ವಗಳು

ಮೆಂಡೆಲ್ಲನ ಸಂಶೋಧನಾ ವಿಧಾನವು ಜೀವವಿಜ್ಞಾನದ ಆಧಾರಿತವಾಗಿದ್ದಾದರೂ, ಅದು ಭೌತವಿಜ್ಞಾನ, ಗಣಿತ ವಿಷಯಗಳನ್ನಷ್ಟೇ ಅಲ್ಲದೇ ಸಂಖ್ಯಾವಿಜ್ಞಾನದ ವಿಧಾನಗಳ ‘ಸಂಕರ’ವೂ ಆಗಿತ್ತು. ಆಧುನಿಕ ತಳಿವಿಜ್ಞಾನದ ಸಂಕರಣ (ಹೈಬ್ರಿಡೈಸೇಷನ್), ಬಾಹ್ಯನಮೂನೆ (ಫೀನೋಟೈಪ್), ವಂಶವಾಹಿ ನಮೂನೆ (ಜೀನೋಟೈಪ್), ಮುಂತಾದುವುಗಳನ್ನು ಅರ್ಥೈಸಿಕೊಳ್ಳಲು ಸೂಕ್ತ ಹಾಗೂ ಭದ್ರ‍್ರವಾದ ಬುನಾದಿಯನ್ನು ಆಗಲೇ ಮೆಂಡಲ್ ನಿರ್ಮಿಸಿದ್ದ. ಜೊತೆಗೆ, ಗಣಿತದಲ್ಲಿ ಬಳಸಲಾಗುವ ‘ತಾಳೆ ನೋಡುವ’ ಪದ್ಧತಿಯನ್ನು ಆಧಾರವಾಗಿಟ್ಟುಕೊಂಡು, ತನ್ನ ಪ್ರಯೋಗಗಳಲ್ಲಿ ಬಂದ ಫಲಿತಾಶಗಳನ್ನು ಒರೆ ಹಚ್ಚಿ ನೋಡುವ ಸಲುವಾಗಿ, ಪರೀಕ್ಷಾರ್ಥ ಪ್ರಯೋಗ (test cross) ಪದ್ಧತಿಯನ್ನೂ ರೂಪಿಸಿದ. ವಿವಿಧ ವಿಜ್ಞಾನದ ಶಾಖೆಗಳ ಬಗ್ಗೆ ತನಗಿದ್ದ ಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮೆಂಡೆಲ್ ಪ್ರಯೋಗಗಳನ್ನು ನಡೆಸಿ, ಬಂದ ಫಲಿತಾಂಶಗಳ ಆಧಾರದ ಮೇಲೆ ನಿಯಮಗಳನ್ನು ರೂಪಿಸಿದಾಗ ಆತನಿಗಿರಲಿ, ಜೀವ ವಿಜ್ಞಾನಿಗಳಿಗೇ ಕೋಶವಿಭಜನೆ, ಲಿಂಗಾಣುಜನನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಇರಲಿಲ್ಲ. ವರ್ಣತಂತುಗಳನ್ನು ಇನ್ನೂ ಕಂಡು ಹಿಡಿದಿರಲಿಲ್ಲ. ಜೀವಕೋಶಗಳಲ್ಲಿ ಏಕಗುಣಿತ(haploid) ಮತ್ತು ದ್ವಿಗುಣಿತ (diploid) ಸ್ಥಿತಿಯ ಪರಿಚಯವೂ ಇರಲಿಲ್ಲ. ಇಂತ ಒಂದು ಪರಿಸ್ಥಿತಯಲ್ಲಿ, ಮೆಂಡೆಲ್ ಸಸ್ಯಗಳ ಪ್ರತಿ ಲಕ್ಷಣಕ್ಕೆ ಕಾರಣವಾಗುವ ಅಂಶ, ಪಿತೃ ಸಸ್ಯಗಳಲ್ಲಿ ಜೋಡಿಯಾಗಿದ್ದರೆ, ಲಿಂಗಾಣುಗಳಲ್ಲಿ ಒಂದೇ ಇರುತ್ತದೆ ಎಂದು ಪ್ರತಿಪಾದಿಸಿದ್ದ. ಹಲವು ವರ್ಷಗಳ ನಂತರ, ಮಿಯಾಸಿಸ್ ಕೋಶ ವಿಭಜನೆಯನ್ನು ಕಂಡುಹಿಡಿದ ಮೇಲೆಯೇ ಇದರ ಸತ್ಯ ವಿಜ್ಞಾನ ಕ್ಷೇತ್ರಕ್ಕೆ ಪರಿಚಯವಾಗಿದ್ದು. ಮುಂದೆ, ವರ್ಣತಂತುಗಳನ್ನು ಕಂಡು ಹಿಡಿದ ಮೇಲೆಯೇ ಮೆಂಡೆಲ್  ಪ್ರತಿಪಾದಿಸಿದ್ದ ‘ಸ್ವತಂತ್ರ ವಿಂಗಡನೆಯ ನಿಯಮ’ದ ಮಹತ್ವ ತಿಳಿದು ಬಂದಿದ್ದು. ಅಷ್ಟೇ ಅಲ್ಲ, ಲಕ್ಷಣಗಳು ಪ್ರಕಟವಾಗಲು ಕಾರಣ ಎಂದು 1866ರಲ್ಲಿ ಮೆಂಡೆಲ್ ಗುರುತಿಸಿದ್ದ ‘ಅಂಶಗಳು’ ಅಥವಾ ‘ಕಣಗಳು’ ಸುಮಾರು ನೂರು ವರ್ಷಗಳ ನಂತರ, 1960ರ ದಶಕದಲ್ಲಿ ‘ಜೀನ್‌ಗಳು’(genes)ಎಂದು ಗುರುತಿಸಲ್ಪಟ್ಟುವು ! ಅಂದರೆ, ಮೆಂಡೆಲ್ ತನ್ನ ವಿಶ್ಲೇಷ಼ಣೆಗಳಲ್ಲಿ ಎಷ್ಟು ಮುಂದಕ್ಕೆ ಆಲೋಚಿಸಿದ್ದ ಎಂಬುದನ್ನು ಗಮನಿಸಿದರೆ, ಆತನ ಪ್ರತಿಭೆಯ ಬಗ್ಗೆ ಹೆಮ್ಮೆ ಮೂಡುತ್ತದೆ !

ಸಮಕಾಲೀನರಾಗಿದ್ದರೂ ಮೆಂಡೆಲ್ ಮತ್ತು ಡಾರ್ವಿನ್ ಭೇಟಿಯಾಗಿರಲಿಲ್ಲ ! 

ಆಧುನಿಕ ತಳಿಶಾಸ್ತ್ರದ ಪಿತಾಮಹ’ ಮೆಂಡೆಲ್ ಹಾಗೂ ‘ಜೀವ ವಿಕಾಸದ ಪಿತಾಮಹ’ ಡಾರ್ವಿನ್(Darwin) ಸಮಕಾಲೀನರು. ಆದರೆ ಪರಸ್ಪರರು ಭೇಟಿಯಾಗಲು ಸಾಧ್ಯವಾಗದಿದ್ದುದು ವಿಪರ್ಯಾಸವೇ ಸರಿ. ಡಾರ್ವಿನ್‌ರ ಜೀವವಿಕಾಸ, ನಿಸರ್ಗದ ಆಯ್ಕೆ, ಹಾಗೂ ಅವರ ಅಧ್ಯಯನಗಳ ಕುರಿತಾಗಿ ಮೆಂಡೆಲ್ ಓದಿಕೊಂಡಿದ್ದರು ಮತ್ತು ಪ್ರಭಾವಿತರಾಗಿದ್ದರು. 1865ರಲ್ಲಿ ಮೆಂಡೆಲ್ ಪ್ರಕಟಿಸಿದ ಲೇಖನದಲ್ಲೂ ಡಾರ್ವಿನ್‌ನ ಪ್ರಭಾವವನ್ನು ಕಾಣಬಹುದು. ಡಾರ್ವಿನ್ ನಿಸರ್ಗದ ಆಯ್ಕೆಯನ್ನು ವಿವರಿಸಿದರೆ, ಮೆಂಡಲ್ ತಮ್ಮ ಪ್ರಯೋಗಗಳಲ್ಲಿ ಕೃತಕ ಆಯ್ಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಡಾರ್ವಿನ್ ಜೀವಿಗಳ ಪ್ರಬೇಧಗಳಲ್ಲಿ ಭಿನ್ನತೆಗಳನ್ನು ಗುರುತಿಸಿದ್ದರಾದರೂ, ಅವು ಹೇಗೆ ಉಂಟಾಗುತ್ತದೆ ಎಂಬುದನ್ನು ವಿವರಿಸುವುದರಲ್ಲಿ ವಿಫಲರಾದರು. ಅವರೇನಾದರೂ ಮೆಂಡೆಲನ ಪ್ರಯೋಗಗಳ ಫಲಿತಾಂಶಗಳನ್ನು ಗಮನಿಸಿದ್ದರೆ, ಅವರ ಜೀವವಿಕಾಸದ ಸಿದ್ದಾಂತಕ್ಕೆ ಆಗಲೇ ಪುರಾವೆಗಳು ದೊರೆಯುತ್ತಿದ್ದುವೇನೋ? ಡಾರ್ವಿನ್‌ರಷ್ಟೇ ಪ್ರತಿಭಾಶಾಲಿಯಾಗಿದ್ದರೂ ಬದುಕಿದ್ದಾಗಲೇ,  ತಮ್ಮ ಜೀವಿತಾವಧಿಯಲ್ಲೇ ಮುಂದಿನ ಪೀಳೀಗೆಗೆ ಅತಿ ಅವಶ್ಯಕವಾದ,  ಅತ್ಯುತ್ಕೃಷ್ಟವಾದ ಸಂಶೋಧನೆಯನ್ನು ಮಾಡಿದಾಗ್ಯೂ, ಅತೀ ಪ್ರತಿಭಾವಂತರಾಗಿದ್ದರೂ, ಮೆಂಡಲ್‌ನ ಅಧ್ಯಯನವು ಜನಮನ್ನಣೆಯನ್ನು ಪಡೆಯದೇ ಹೋದದ್ದು ದುರಂತವೇ ಸರಿ. ಸರಿಸುಮಾರು ಮುವ್ವತ್ತನಾಲ್ಕು ವರ್ಷಗಳ ಕಾಲ ನೇಪಥ್ಯಕ್ಕೆ ಸರಿದರೂ, ನಂತರ ಮೆಂಡೆಲನ ಕೊಡುಗೆಗಳು ಇಡೀ ಜೀವ ವಿಜ್ಞಾನ ಜಗತ್ತು ನಿಬ್ಬೆರಾಗುವಂತೆ ಮಾಡಿದ್ದಂತೂ ಸುಳ್ಳಲ್ಲ.

ಆಧುನಿಕ ತಳಿಶಾಸ್ತ್ರಕ್ಕೊಂದು ಭದ್ರ ಬುನಾದಿ

ಮೆಂಡಲ್‌ನ ಅಧ್ಯಯನವು ತಳಿ ವಿಜ್ಞಾನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟದಷ್ಟೇ ಅಲ್ಲ, ಮುಂದಿನ ವರ್ಷಗಳಲ್ಲಿ ನಡೆಸಲಾದ ಹಲವಾರು ಆನುವಂಶಿಕ ಕಾಯಿಲೆಗಳ ಆವಿಷ್ಕಾರ, ಅಧ್ಯಯನ, ಕಾಯಿಲೆಗಳ ಚಿಕಿತ್ಸೆಗೆ ದಾರಿದೀಪವಾಗಿದೆ. ಸಿಕಲ್‌ಸೆಲ್ ಅನೀಮಿಯಾ, ಸಿಸ್ಟಿಕ್ ಫೈಬ್ರೋಸಿಸ್, ಹೀಮೋಫೀಲಿಯಾಗಳಂತಹ ಹಲವಾರು ಕಾಯಿಲೆಗಳ ಚಿಕಿತ್ಸೆಯ ಮಾರ್ಗ, ಅವುಗಳ ಫಲಿತಾಂಶಗಳನ್ನು ಇಂದು ಮೊದಲೇ ಊಹಿಸಬಹುದಾಗಿದೆ. ವೈವಾಹಿಕ ಆಪ್ತ ಸಮಾಲೋಚನೆಗಳಿಗೂ ತಳಿಶಾಸ್ತ್ರ ಮಾರ್ಗದರ್ಶಕವಾಗಿದ್ದು, ಮುಂದೆ ಜನಿಸುವ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಗಳ ಕುರಿತಾಗಿಯೂ ಅರಿಯಬಹುದಾಗಿದೆ. ಒಟ್ಟಿನಲ್ಲಿ ಆರೋಗ್ಯವಂತ, ಸಮೃದ್ಧ ಸಮಾಜದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ತಳಿಶಾಸ್ತ್ರ ನೀಡುತ್ತಿರುವುದರಲ್ಲಿ ಎರಡು ಮಾತಿಲ್ಲ.

ವಿಜ್ಞಾನ ಪ್ರಪಂಚ ಇದೇ ಜುಲೈ 22ಕ್ಕೆ ಮೆಂಡಲ್‌ರ ನೂರಾತೊಂಭತ್ತೊಂಭತ್ತನೇ (199) ಜಯಂತಿಯನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ ವಿಜ್ಞಾನ ಶಿಕ್ಷಕರು, ನಿರಂತರ ವಿದ್ಯಾರ್ಥಿಗಳೂ ಆದ ನಾವು, ಅವರನ್ನು ಕೃತಜ್ಞರಾಗಿ ಸ್ಮರಿಸುತ್ತಾ ಕೃತಾರ್ಥರಾಗೋಣವೇ?

ಈ ಲೇಖನದ ಪಿ. ಡಿ. ಎಫ್. ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ - 

ತಳಿ ವಿಜ್ಞಾನಕ್ಕೆ ತಳಹದಿ ಒದಗಿಸಿದ ಗ್ರೆಗೊರ್ ಜೊಹಾನ್ ಮೆಂಡೆಲ್


53 comments:

  1. ಉತ್ತಮ ಮಾಹಿತಿ.

    ReplyDelete
  2. This comment has been removed by the author.

    ReplyDelete
  3. Very nice interpretation on mendel theory and fundamental laws of inheritance👏👍

    ReplyDelete
  4. ಜೊಹಾನ್ ಮೆಂಡಲ್ ರವರ ಬಗ್ಗೆ,ಹಾಗೂ ಅವರ ಸಂಶೋಧನೆಯ ಬಗ್ಗೆ ವಿಸ್ತೃತ ಮಾಹಿತಿಯನ್ನು ಮನ ಮುಟ್ಟುವಂತೆ ವಿವರಿಸಿರುವ ಡಾ.ಸಂಧ್ಯಾ ಮೇಡಂ ರವರಿಗೆ ಹೃದಯಪೂರ್ವಕ ಅಭಿನಂದನೆಗಳು.

    ReplyDelete
  5. ಜೊಹಾನ್ ಮೆಂಡಲ್ ರವರ ಬಗ್ಗೆ,ಹಾಗೂ ಅವರ ಸಂಶೋಧನೆಯ ಬಗ್ಗೆ ವಿಸ್ತೃತ ಮಾಹಿತಿ ನೀವು ತಿಳಿಸಿದ ರೀತಿ ವಿದ್ಯಾರ್ಥಿಲೊಕಕ್ಕೆ ಒಂದುವರ.ಮತ್ತಷ್ಟು ವಿಷಯಗಳು ತಿಳಿಸಿ
    .ಸಂಧ್ಯಾ ಮೇಡಂ ರವರು ಕೀರ್ತಿ ಪಡಲೆಂದು ಭಾವಿಸುತ್ತಾ
    ಹೃದಯಪೂರ್ವಕ ಅಭಿನಂದನೆಗಳು.

    ReplyDelete
  6. This comment has been removed by the author.

    ReplyDelete
  7. Very nice and detail information with interesting captions

    ReplyDelete
  8. ಮಾಹಿತಿ ಬಹಳ ಉತ್ತಮವಾಗಿದೆ...
    ಮತ್ತೆ ಸಂಶೋಧನಾ ರೀತಿ ಚೆನಾಗಿದೆ...
    ತಿಳಿದುಕೊಳ್ಳುವವರಿಗೆ ಉತ್ತಮ ಮಾಹಿತಿ

    ReplyDelete
  9. ಬಹಳ ಉತ್ತಮವಾದ ಮಾಹಿತಿ..ಸೊಗಸಾದ ಲೇಖನ

    ReplyDelete
  10. ಓಹ್, ಎಷ್ಟೊಂದು ಮಾಹಿತಿಯನ್ನು ಅದೂ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದಂತೆ ಒಂದೇ ಗುಕ್ಕಿನಲ್ಲಿ ನಾನು ಓದಿ ಮುಗಿಸಿದೆನೆಂದು ನನ್ನ ಬಗ್ಗೆ ನನಗೇ ಆಶ್ಚರ್ಯವಾಯಿತು. ಬರವಣಿಗೆ ಸುಲಲಿತವಾಗಿ ಮೂಡಿಬಂದಿದೆ. ವಿಷಯದ ಬಗ್ಗೆ ಲೇಖಕರಿಗೆ ಇರುವ ಅಪಾರ ಮಾಹಿತಿ ಮತ್ತು ಪ್ರೀತಿಯ ಕಾರಣ ಇದು ಸಾಧ್ಯವಾಯಿತೆನಿಸುತ್ತದೆ. ಜೀನ್ಸ್ ಎನ್ನುವ ಪದ ಈಗೀಗ ಸಾಮಾಜಿಕ ಜೀವನದಲ್ಲಿ ಬಹಳವಾಗಿ ಬಳಸಲ್ಪಡುತ್ತಿದೆ. ಆದರೆ ಈ ಶಬ್ದದ ಹಿಂದೆ ಒಂದು ಶತಮಾನದ ಕತೆಯಿದೆಯೆಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಅಲ್ಲಲ್ಲಿ ಕಾಣಸಿಗುವ ಅಕ್ಷರ ದೋಷಗಳು ಕೊಂಚ ಕಿರಿಕಿರಿ. ಇದಕ್ಕೆ ತಂತ್ರಜ್ಞಾನದ ಕಾರಣವೂ ಇರಬಹುದು. ಲೇಖನ ಓದಿ ಮನಸ್ಸು ಪ್ರಫುಲ್ಲಗೊಂಡಿತು. ಮಾನವನ ಸೌಖ್ಯದ ಹಿಂದೆ ಎಷ್ಟೊಂದು ಚೇತನಗಳ ತ್ಯಾಗ ಮತ್ತು ಶ್ರಮವಿದೆ!ಹೀಗೆ ಚಿಂತನೆಗೆ ಹಚ್ಚಿದ ಲೇಖನಕ್ಕೆ, ನಾಯಕ ಜೊಹಾನ್ ಮೆಂಡಲ್ ಅವರಿಗೆ ಲೇಖಕಿಗೆ ಧನ್ಯವಾದಗಳು. ಶುಭಾಶಯಗಳು.🙏

    ReplyDelete
  11. ಆದರಣೀಯ ಗುರುಗಳಾದ ಅಡಿಗ ಸರ್ ಅವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಲೇಖನವಿದು. ಎಲ್ಲರ ಪ್ರೋತ್ಸಾಹದಾಯಕ ನುಡಿಗಳಿಗೆ ನಾನು ಮುಡಿ ಬಾಗಿ ನಮಿಸುತ್ತೇನೆ

    ReplyDelete
  12. Very good. Though not a student of bilology I still understood the information. Thanks to the student Sandhya of an excellent teacher Balakrishna.

    ReplyDelete
  13. ತುಂಬಾ ಉಪಯುಕ್ತವಾದ ಲೇಖನ

    ReplyDelete
  14. Miss it's very nice❤️👌👌💪

    ReplyDelete
  15. Miss it is very nice❤️👌❤️👌❤️

    ReplyDelete
  16. This comment has been removed by the author.

    ReplyDelete
  17. Mam it is supper and fantastic mam i liked this very much mam 👌👌👌👌👌

    ReplyDelete
  18. ಲೇಖನ ತುಂಬಾ ಚನ್ನಾಗಿ ಮೂಡಿ ಬಂದಿದೆ
    ತಮಗೆ ನನ್ನ ಧನ್ಯವಾದಗಳು. ಹೀಗೆ ಇನ್ನೂ ಒಳ್ಳೆಯ ಲೇಖನಗಳು ಬರಲಿ
    ಡಾ. ರಾಜೇಶ್ ಇ ಬೆಳ್ಳೆರ್

    ReplyDelete
  19. ಉತ್ತಮ ಲೇಖನ ಮೇಡಂ.

    ReplyDelete
  20. ಮಾಹಿತಿ ಚೆನ್ನಾಗಿದೆ. ನೆನಪಿಸಿದ್ದಕ್ಕೆ ಧನ್ಯವಾದಗಳು. ಉತ್ತಮ ಲೇಖನ ಮೇಡಮ್.

    ReplyDelete
  21. ಲೇಖನ ತುಂಬಾ ಚನ್ನಾಗಿ ಮೂಡಿ ಬಂದಿದೆ. ಜೊಹಾನ್ ಮೆಂಡಲ್ ರವರ ಬಗ್ಗೆ,ಅವರ ಸಂಶೋಧನೆಯ ಬಗ್ಗೆ ವಿಸ್ತೃತ ಮಾಹಿತಿ ಮನ ಮುಟ್ಟುವಂತೆ ವಿವರಿಸಿರುವ ಡಾ.ಸಂಧ್ಯಾ ಮೇಡಮ್ ಅವರಿಗೆ
    ಹೃದಯಪೂರ್ವಕ ಅಭಿನಂದನೆಗಳು.
    ಹೀಗೆ ಇನ್ನೂ ಒಳ್ಳೆಯ ಲೇಖನಗಳು ಬರಲಿ.

    ReplyDelete
  22. Very Useful Information Madam.

    ReplyDelete
  23. ಉಪಯುಕ್ತ ಮಾಹಿತಿ ಸರಳ ರೂಪದಲ್ಲಿ

    ReplyDelete
  24. A very good information about Mendel and his work. Thank you madam.... From - BK MAHADEV. HOD OF BIOLOGY. BHARATHI COLLEGE. KM DODDI. MANDYA DIST.

    ReplyDelete

  25. ಉತ್ತಮ ಮಾಹಿತಿ

    ReplyDelete
  26. ಧನ್ಯವಾದಗಳು ಗುರುಗಳೇ.

    ReplyDelete