ವಿಶ್ವ ಮಣ್ಣು ದಿನ: 5-ಡಿಸೆಂಬರ್-2021
ಮಣ್ಣಿನ ಲವಣೀಕರಣ ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ
Halt salinization, boost soil productivityತಾಂಡವಮೂರ್ತಿ.ಎ.ಎನ್
ಸರ್ಕಾರಿ ಪ್ರೌಢಶಾಲೆ
ಕಾರಮಂಗಲ,
ಬಂಗಾರಪೇಟೆ (ತಾ.), ಕೋಲಾರ(ಜಿಲ್ಲೆ)
ಭೂಮಿಯ ಮೇಲೆ ಜೀವ ಸಂಕುಲವನ್ನು ಪೊರೆವ ಅಮೂಲ್ಯ ಸಂಪನ್ಮೂಲವಾದ ಮಣ್ಣು ನಿರವಯವ ಸಸ್ಯ ಪೋಷಕಗಳನ್ನು ಒದಗಿಸುವ ಅಕ್ಷಯ ಪಾತ್ರೆ. ವಿಘಟಕ ಸೂಕ್ಷ್ಮ ಜೀವಿಗಳನ್ನು ಪೋಷಿಸುವ ಅಪೂರ್ವ ಭಂಡಾರ. ಇದು ಜೀವಿಗಳ ವಿಕಾಸಕ್ಕೆ ಕಾರಣವಾದ ಸಾವಯವ-ನಿರವಯವ ವಸ್ತುಗಳ ಅಪೂರ್ವ ಸಂಗಮ. ಇಂತಿಪ್ಪ ಮಣ್ಣು ಮಾನವನೆಂಬ ವಿಲಕ್ಷಣ ಜೀವಿಯ ಉಪದ್ರವದಿಂದ ಇತರ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ ಮತ್ತು ನೀರುಗಳಂತೆ ನಲುಗಿದೆ. ಪಾತಾಳದಿಂದ ಬಾಹ್ಯಾಕಾಶದವರೆಗೂ ಚಾಚಿರುವ ತನ್ನ ಕಬಂಧ ಬಾಹುಗಳಿಂದ ಮಣ್ಣಿನ ಸಂರಚನೆಯನ್ನು ಹಾಳುಮಾಡಿದ ಮಾನವ ಅದರ ಫಲವತ್ತತೆ ನಿರಂತರವಾಗಿ ಕ್ಷೀಣಿಸಲು ಕಾರಣವಾಗಿದ್ದು ಸರ್ವವೇದ್ಯ.
ವಿಶ್ವ ಮಣ್ಣು ದಿನದ ಹಿನ್ನೆಲೆ.
ಪ್ರತಿ ವರ್ಷ ವಿಶ್ವ ಮಣ್ಣು ದಿನವನ್ನು ಡಿಸೆಂಬರ್-5 ರಂದು ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ನಿರ್ವಹಣೆಯ ಧ್ಯೇಯದೊಂದಿಗೆ ಆಚರಿಸಲಾಗುತ್ತದೆ.
2002 ರಲ್ಲಿ ಮಣ್ಣು ವಿಜ್ಞಾನದ ಅಂತರಾಷ್ಟ್ರೀಯ ಒಕ್ಕೂಟ (IUSS) ವಿಶ್ವ ಮಣ್ಣು ದಿನವನ್ನು ಆಚರಿಸಲು ಶಿಫಾರಸ್ಸು ಮಾಡಿತು. 2013 ರ ಜೂನ್ ನಲ್ಲಿ ನಡೆದ ವಿಶ್ವ ಆಹಾರ ಸಂಸ್ಥೆಯ(FAO) ಸಮಾವೇಶ ಸರ್ವಾನುಮತದಿಂದ ವಿಶ್ವ ಮಣ್ಣು ದಿನದ ಆಚರಣೆಯ ಕಾಯ್ದೆಯನ್ನು ಅಂಗೀಕರಿಸಿತು. ಔಪಚಾರಿಕವಾಗಿ 2013ರ ಡಿಸೆಂಬರ್ ನಲ್ಲಿ ನಡೆದ ವಿಶ್ವ ಸಂಸ್ಥೆಯ 68ನೇ ಸಾಮಾನ್ಯ ಸಭೆಯು ಪ್ರತಿವರ್ಷ ಡಿಸೆಬಂರ್-5 ರಂದು ವಿಶ್ವ ಆಹಾರ ಸಂಸ್ಥೆಯ ಮಾರ್ಗದರ್ಶನದಲ್ಲಿ 'ವಿಶ್ವ ಮಣ್ಣು ದಿನ' ಆಚರಿಸುವ ನಿರ್ಣಯವನ್ನು ಅಧಿಕೃತವಾಗಿ ಘೋಷಿಸಿತು.
ಈ ವರ್ಷದ ಧ್ಯೇಯ ವಾಕ್ಯ ಮತ್ತು ಅಭಿಯಾನದ ಉದ್ದೇಶಗಳು
ವಿಶ್ವ ಆಹಾರ ಸಂಸ್ಥೆ ವಿಶ್ವ ಮಣ್ಣು ದಿನವನ್ನು "ಮಣ್ಣಿನ ಲವಣೀಕರಣವನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುವುದಾಗಿ ಘೋಷಿಸಿದೆ.
ಬೃಹತ್ ಕಾಲುವೆ ಮತ್ತು ಜಲಾಶಯಗಳ ಅಚ್ಚುಕಟ್ಟಿಗೆ ಒಳಪಟ್ಟಿರುವ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಮಣ್ಣಿನ ಲವಣೀಕರಣವು ಕೃಷಿ ಉತ್ಪಾದಕತೆ, ಆಹಾರ ಸುರಕ್ಷತೆ ಮತ್ತು ಸುಸ್ಥಿರತೆಗೆ ಗಂಭೀರ ಸವಾಲೊಡ್ಡುವ ಜಾಗತಿಕ ವಿದ್ಯಮಾನವಾಗಿದೆ. ಈ ದಿಶೆಯಲ್ಲಿ ವಿಶ್ವ ಮಣ್ಣು ದಿನ-2021 ರ ಅಭಿಯಾನ ಮಣ್ಣಿನ ಲವಣೀಕರಣದಿಂದ ಉಂಟಾಗುವ ಸಮಸ್ಯೆಗಳ ಪರಿಹಾರ, ಜಾಗೃತಿ ಮತ್ತು ಒಟ್ಟಾರೆ ಮಣ್ಣಿನ ಆರೋಗ್ಯವನ್ನು ಸುಧಾರಿಸಿ, ಉತ್ಪಾದಕತೆಯನ್ನು ಹೆಚ್ಚಿಸಿ ಆಹಾರ ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ.
ಭೂಮಿಯ ಮೇಲೆ ಜೀವ ಪೋಷಣೆಯ ಪ್ರಮುಖ ಆಧಾರವಾದ ಮಣ್ಣು, ವಿವಿಧ ರೂಪದ ಶಿಥಿಲೀಕರಣ ಕ್ರಿಯೆಗಳಿಗೆ ಒಳಗಾಗುತ್ತದೆ. ಇವುಗಳಲ್ಲಿ ಪ್ರಮುಖವಾದುದು ಮಣ್ಣಿನ ಲವಣೀಕರಣದಿಂದ ಮಣ್ಣಿನಲ್ಲಿ ಲವಣಗಳ ಸಾಂದ್ರ ಪದರ ರೂಪುಗೊಳ್ಳುವುದು. ಇದರಿಂದ ಮಣ್ಣಿನ ಉತ್ಪಾದಕತೆ ಕುಂಠಿತಗೊಳ್ಳುವುದು. ಸಾಮಾನ್ಯವಾಗಿ ಈ ಕ್ರಿಯೆಯು ಶಿಲೆಗಳ ಛಿದ್ರೀಕರಣದಿಂದ ಲವಣಗಳ ಬಿಡುಗಡೆ, ಸಾಗರದ ಉಪ್ಪು ನೀರಿನ ಬಾಷ್ಪೀಕರಣ ಮತ್ತು ಸಮುದ್ರದ ಉಬ್ಬರ-ಇಳಿತಗಳಂತಹ ನೈಸರ್ಗಿಕ ವಿದ್ಯಮಾನಗಳಿಂದ ಘಟಿಸಬಹುದು. ನೈಸರ್ಗಿಕ ಉಪ್ಪುನೀರು ಭಾಧಿತ ಪ್ರದೇಶಗಳು ಸಮೃದ್ಧವಾದ ಪರಿಸರ ವ್ಯವಸ್ಥೆಗಳನ್ನು ಪೋಷಿಸುವುದರಿಂದ ಅವುಗಳ ಸಂರಕ್ಷಣೆ ಮತ್ತು ಪುನಶ್ಚೇತನ ಪ್ರಮುಖವಾಗಿದೆ.
ಮೇಲಿನ ನೈಸರ್ಗಿಕ ಕಾರಣಗಳಿಗಿಂತ ಮಣ್ಣಿನ ಲವಣೀಕರಣದ ವಿರಾಟ್ ಸ್ವರೂಪಕ್ಕೆ ಪ್ರಮುಖ ಕಾರಣಗಳೆಂದರೆ, ಮಾನವ ಜನ್ಯ ಚಟುವಟಿಕೆಗಳಾದ ಬೃಹತ್ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿನ ಅವೈಜ್ಞಾನಿಕ ನೀರಿನ ನಿರ್ವಹಣೆ, ಅರಣ್ಯನಾಶ, ರಸಗೊಬ್ಬರಗಳ ಅವ್ಯಾಹತ ಬಳಕೆ ಮತ್ತು ಅಂತರ್ಜಲದ ಅತಿಯಾದ ದುರ್ಬಳಕೆ. ಈ ಮಾನವಜನ್ಯ ಚಟುವಟಿಕೆಗಳು ಪರಿಸರ ವ್ಯವಸ್ಥೆಗೆ ಮಣ್ಣು ಒದಗಿಸುವ ಮಹತ್ವದ ಸೇವೆಗಳಾದ ಜೀವ ವೈವಿಧ್ಯತೆಯ ಪೋಷಣೆ, ಆಹಾರ ಉತ್ಪಾದಕತೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತವೆ. ಈ ಎಲ್ಲಾ ಕ್ರಿಯೆಗಳು ಮಣ್ಣಿನ ಸವೆತ, ಶೋಧನಾ ಸಾಮರ್ಥ್ಯ, ಫಲವತ್ತತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಲಭ್ಯತೆಯನ್ನು ನಾಶಮಾಡುತ್ತವೆ. ಲವಣ ಭಾಧಿತ ಮಣ್ಣಿನಲ್ಲಿರುವ ಲವಣಗಳು ಮತ್ತು ವಿನಿಮಯಗೊಳ್ಳಬಲ್ಲ ಸೋಡಿಯಂ ಅಯಾನ್ ಗಳ ಹೆಚ್ಚಳವು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಸ್ಯಗಳ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತವೆ.
ನಿಮಗೆ ಗೊತ್ತೆ?
- ಪ್ರತಿವರ್ಷ ಪ್ರಪಂಚದಾದ್ಯಂತ 1.5 ಮಿಲಿಯನ್ ಹೆಕ್ಟೇರ್ ಕೃಷಿಭೂಮಿ ಲವಣೀಕರಣದಿಂದ ಶಿಥಿಲಗೊಳ್ಳುತ್ತಿದೆ.
- ಪ್ರತಿವರ್ಷ ಮಣ್ಣಿನ ಲವಣೀಕರಣದಿಂದ ಕೃಷಿ ಉತ್ಪಾದನೆಯಲ್ಲಿ ಆಗುತ್ತಿರುವ ಅಂದಾಜು ನಷ್ಟ 31 ಮಿಲಿಯನ್ ಅಮೆರಿಕನ್ ಡಾಲರ್.
- ಪ್ರಪಂಚದಾದ್ಯಂತ 833 ಮಿಲಿಯನ್ ಹೆಕ್ಟೇರ್ ಗಿಂತಲೂ ಅಧಿಕ ಭೂಮಿ ಲವಣ ಭಾಧಿತ ಮಣ್ಣಿನಿಂದ ಆವೃತವಾಗಿದೆ.
ಲವಣೀಕರಣದಿಂದ ಮಣ್ಣಿನ ಪುನಶ್ಚೇತನ ಕಾರ್ಯವು ಜಾಗತಿಕವಾಗಿ ಪ್ರಮುಖ ಆದ್ಯತೆಯಾಗಬೇಕಾದ ತುರ್ತು ಅಗತ್ಯವಿದೆ. ಏಕೆಂದರೆ ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆಹಾರ ಸುರಕ್ಷತೆ ಮತ್ತು ಲಭ್ಯತೆ ನಮ್ಮ ಮುಂದಿರುವ ಅತಿದೊಡ್ಡ ಸವಾಲು. ಈ ಸವಾಲನ್ನು ದಿಟ್ಟವಾಗಿ ಎದುರಿಸಲು ಮಣ್ಣಿನ ಉತ್ಪಾದಕತೆಯನ್ನು ನಾವು ಹೆಚ್ಚಿಸಬೇಕಿದೆ. ಇದಕ್ಕೆ ಇರುವ ಏಕೈಕ ಪರಿಹಾರ ಎಂದರೆ ನಮ್ಮ ಕೃಷಿ ಭೂಮಿ ಲವಣೀಕರಣದಿಂದ ಶಿಥಿಲೀಕರಣಗೊಳ್ಳದಂತೆ ಸಾಧ್ಯವಿರುವ ಎಲ್ಲಾ ಅಗತ್ಯ ಪುನಶ್ಚೇತನ ಕ್ರಮಗಳನ್ನು ಅನುಸರಿಸಿ ಸುಸ್ಥಿರ ಕೃಷಿ ಉತ್ಪಾದಕತೆಯನ್ನು ಸಾಧಿಸುವುದು. ಈ ದಿಸೆಯಲ್ಲಿ ನಮ್ಮೆಲ್ಲರ ಪ್ರಯತ್ನ ಅತ್ಯಗತ್ಯ.
Nice article sir .. 🙏
ReplyDeleteಉತ್ತಮವಾದ ಲೇಖನ
ReplyDeleteವಿಶ್ವ ಮಣ್ಣು ದಿನಕ್ಕೆ ಅಭಿನಂದನೆಗಳು sir
very apt article. good.
ReplyDeleteನಾವೆಲ್ಲರೂ ಅರ್ಥ ಮಾಡಿಕೊಳ್ಳ ಬೇಕಾದ ಅತಿ ತುರ್ತುಸ್ಥಿತಿ 🙏🙏 ಉತ್ತಮ ಆಲೋಚನೆಗಾಗಿ ಧನ್ಯವಾದಗಳು
ReplyDeleteಮಣ್ಣನ್ನು ನಂಬಿ ಮಣ್ಣಿಂದ ಬದುಕೇನು ಮಣ್ಣೆ ಮುಂದೆ ಹೊನ್ನು ಅಣ್ಣಯ್ಯ ಮಣ್ಣೇ ಲೋಕದಲ್ಲಿ ಬೆಲೆಯದ್ದು, ಎಂಬ ಜನಪದರ ಉಕ್ತಿಯಂತೆ ಮಣ್ಣಿನ ಮಹತ್ವವನ್ನು ಸಾರಿದ ಉತ್ತಮ ಲೇಖನ.
ReplyDeleteತುಂಬಾ ಅರ್ಥಪೂರ್ಣವಾದ ಮತ್ತು ಉಪಯುಕ್ತ ಮಾಹಿತಿಯುಳ್ಳ ಲೇಖನ. ಸಮಸ್ಯಾತ್ಮಕ ಮಣ್ಣುಗಳು ಹಾಗೂ ಅವುಗಳ ನಿರ್ವಹಣೆ ಕುರಿತು ಉತ್ತಮ ಮಾಹಿತಿ ನೀಡಿದ್ದೀರಿ ಸಾರ್.
ReplyDeleteವಿಶ್ವ ಮಣ್ಣು ದಿನದ ಶುಭಾಶಯಗಳು.
Suhana misba
ReplyDeleteShruthi
ReplyDelete9591013431
ReplyDelete8971514221
ReplyDelete9581013431
ReplyDeleteNinganna pujre
ReplyDeleteThank you sir for letting us to know the importance of celebrating world soil day
ReplyDeleteಉತ್ತಮ ವಾದ ಲೇಖನ
ReplyDelete