ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

ಜನವರಿ ತಿಂಗಳಿನ ದಿನಾಚರಣೆಗಳು

SAVIJNANA

Tuesday, January 4, 2022

ಕುಟ್ರ ಹಕ್ಕಿ (ಬಾರ್ಬೆಟ್)

ಕುಟ್ರ ಹಕ್ಕಿ (ಬಾರ್ಬೆಟ್)

ಕೆ. ಸುರೇಶ

ಕಾಲೇಜು ರಸ್ತೆ, ಹೊಸಕೋಟೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ

 

ಕುಟ್ರ ಹಕ್ಕಿ ಎಂದೇ ಸಾಮಾನ್ಯವಾಗಿ ಕರೆಯಾಗುವ ಬಾರ್ಬೆಟ್ ಪಕ್ಷಿ ವೀಕ್ಷಕರಿಗೆ ಒಂದು ಚಿರ ಪರಿಚಿತ ಹಕ್ಕಿ. ಹವ್ಯಾಸಿ ಲೇಖಕರಾದ ಶ್ರೀ ಸುರೇಶ ಅವರು ಈ ಲೇಖನದಲ್ಲಿ ಕುಟ್ರ ಹಕ್ಕಿಯ ಜೀವನ ಕ್ರಮವನ್ನು ಸುಂದರವಾಗಿ ಚಿತ್ರಿಸಿಕೊಟ್ಟಿದ್ದಾರೆ. 

ಬೇಸಿಗೆಯ ಆರಂಭದ ದಿನಗಳಲ್ಲಿ ಬೆಂಗಳೂರು ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಎಲ್ಲಿ ಹೋದರೂ ಗಿಡ ಮರಗಳಿಂದ ಕೇಳಿಬರುವ ಒಂದು ಚಿರ ಪರಿಚಿತ ಹಕ್ಕಿಯ ಹಾಡು ಕುಟ್ರರ್ ಕುಟ್ರರ್ಕುಟ್ರು ಎನ್ನುವ ಕುಟ್ರ ಹಕ್ಕಿಯ ಕೂಗು. ಈ ಹಕ್ಕಿಗೆ ಕನ್ನಡದಲ್ಲಿ ರಾಟವಾಳ ಎಂದೂ  ಕರೆಯುತ್ತಾರೆ. ಇದೇ ವೈಟ್‌ಚೀಕ್‌ಡ್ ಬಾರ್ಬೆಟ್ (Psilopogon  iridis). ಈ ಹಕ್ಕಿಯ ಮೈಬಣ್ಣ ಹಸಿರು. ಹೀಗಾಗಿ, ಹಸುರೆಲೆಗಳ ಮಧ್ಯೆ ಅದು ಇದ್ದಾಗ ಪತ್ತೆ ಹಚ್ಚುವುದು ಸುಲಭ ಸಾಧ್ಯವಲ್ಲ. ತಿಳಿ ಕಂದು ಬಣ್ಣದ ಅರೆ ನೆರೆತಂತೆ ಕಾಣುವ ಮಸ್ತಕ, ಕೇಸರಿ ಬಣ್ಣದ ಕಣ್ಣಾಲಿಗಳು, ಅವುಗಳ ಮೇಲೆ ಕೂದಲಿನಿಂದ ಕೂಡಿದ ಕಣ್ಣಿನ ಉಬ್ಬು ಮತ್ತು ಕೊಕ್ಕಿನಿಂದ ಆರಂಭಿಸಿ ಕಣ್ಣಿನ ಕೆಳಗಡೆ ಇರುವ ಕಿವಿಯನ್ನು ಒಳಗೊಂಡು ಹಿಂದಕ್ಕೆ ತೀಡಿದಂತೆ ಕಾಣುವ ಬಿಳಿಯ ಮಚ್ಚೆ - ಇದರ ವೈಶಿಷ್ಟ್ಯ. ತಿಳಿಯಾದ ನೇರಳೆ ಬಣ್ಣದ ಕೊಕ್ಕು, ಗಾತ್ರದಲ್ಲಿ ಸುಮಾರು ಅರ್ಧ ಅಡಿ. ನೋಡಲು ಮೀನಾಕ್ಷಿಯನ್ನು ನೆನಪಿಸುವ ನಯನ ಮನೋಹರಿ.

ಇದರ ಹತ್ತಿರದ ಸಂಬಂಧಿ ಕಾಪರ್‌ಸ್ಮಿತ್ ಬಾರ್ಬೆಟ್ ಅಥವಾ ಚಂಬು ಕುಟುಕಿ (Megalaima

haemacephala) ಕುಟ್ರಕ್ಕಿಗಿಂತ ಗಾತ್ರದಲ್ಲಿ ಚಿಕ್ಕದಾದರೂ ಬಣ್ಣಗಳ ಸಂಯೋಜನೆಯಲ್ಲಿ ಮತ್ತಷ್ಟು ಆಕರ್ಷಕ. ದಪ್ಪನಾದ ಲೋಹದ ಕೊಳವೆಯನ್ನು ಕುಟ್ಟಿದಂತೆ ಪೋಪ್.. ಪೋಪ್ ಪಪ್ ಪಪ್ ಎನ್ನುವ ಸದ್ದು ಮರದಿಂದ ಬರುತ್ತಿದೆ ಎಂದರೆ ಅದು ಕಾಪರ್‌ಸ್ಮಿತ್ ಬಾರ್ಬೆಟ್ಟಿನದೇ ಗಾಯನ ಆಗಿರುತ್ತದೆ.

ಬಾರ್ಬೆಟ್‌ಗಳು ರೆಂಬೆಯ ಮೇಲೆ ನೇರವಾಗಿ ಕೂರುವುದಾದರೂ ಅಗತ್ಯವೆನಿಸಿದರೆ, ವಿಶೇಷವಾಗಿ ಆಹಾರ ಅರಸುವಾಗ, ಗೂಡು ನಿರ್ಮಿಸುವಾಗ ತಲೆಕೆಳಗಾಗಿ ತೂಗಬಲ್ಲದು. ವಸಂತದ ಆಗಮನದಲ್ಲಿ ಕುಟ್ರೂ ಕುಟ್ರೂ ಗಾಯನ ಸಾಮಾನ್ಯ. ತಮ್ಮ ಕುತ್ತಿಗೆ ಮತ್ತು ಶ್ವಾಸಕೋಶಗಳನ್ನು ಚಿನಿವಾರರ ತಿದಿಯಂತೆ ಹಿಗ್ಗಿಸುತ್ತಾ, ಕುಗ್ಗಿಸುತ್ತಾ ಈ ಶಬ್ದ ಮಾಡುತ್ತವೆ.. ಬೇಸಿಗೆಯ ಧಗೆ ಹೆಚ್ಚಾಯಿತು ಎಂತಲೋ ಏನೋ ಒಮ್ಮೊಮ್ಮೆ ಅಕಟಕಟಅಕಟಾಕಟಕಟಾ..ರಟರಟರಟಾ ಎಂದು ಕೂಗುವುದೂ ಉಂಟು. ಇದು ಗಂಡು ಹೆಣ್ಣುಗಳ ಪ್ರೇಮ ನಿವೇದನೆಯ ಪರಿ. ಗಂಡು ಹಕ್ಕಿ ಪ್ರೇಮದ ಕಾಣಿಕೆಯಾಗಿ ಹೆಣ್ಣಿಗೆ ಹಣ್ಣನ್ನು ನೀಡಿ ಪ್ರೇಮ ನಿವೇದಿಸುವುದು ಸಾಮಾನ್ಯ ನqವಳಿಕೆ. ಹೀಗೆ ಕುದುರಿದ ಸಂಬಂಧ ಅದು ಕೇವಲ ಒಂದು ಸಂತಾನಾವಧಿಗೆ ಮಾತ್ರ ಮೀಸಲಾಗಿರದೆ ಬಹು ದೀರ್ಘ ಅನುಬಂಧವಾಗಿ ಉಳಿದು ಬಿಡುತ್ತದೆ.

ಗಂಡು, ಹೆಣ್ಣು ಎರಡೂ ಕೂಡಿಯೇ ತಮ್ಮ ಸೂರನ್ನು ನಿರ್ಮಿಸುತ್ತವೆ. ಸೂರು ಎಂದರೆ ಆಕಾಶಕ್ಕೆ ಏರಿ ನಿಂತ ಒಣಗಿದ ಮರದರೆಂಬೆಯಲ್ಲಿ ಇದರ ಬಿಲ. ಸ್ಪೆತೋಡಿಯ (ಉಚ್ಚೆಕಾಯಿ ಮರ), ಗುಲ್ಮೊಹರ್, ಮಾವು ಮುಂತಾದ ಮೆದುವಾದ ಮರದ ಒಣಗಿದ ರೆಂಬೆಯಲ್ಲಿ ತಮ್ಮ ಕೊಕ್ಕಿನಿಂದ ಕುಕ್ಕಿ, ಕುಕ್ಕಿ ಮಾಡುವ ಬಿಲ. ಈ ಬಿಲಕ್ಕೆ ಎರಡು ದ್ವಾರಗಳು. ಒಂದು ಮುಖ್ಯದ್ವಾರವಾದರೆ ಮತ್ತೊಂದು ಎಮರ್ಜೆನ್ಸಿ ಎಕ್ಸಿಟ್.!!! (ಕಾಪರ್ ಸ್ಮಿತ್ ಬಾರ್ಬೆಟ್ ಒಂದು ಬಿಲವನ್ನು ಮಾತ್ರ ಮಾಡುತ್ತದೆ.) ಒಂದು ಸಲಕ್ಕೆ ಎರಡು ಅಥವಾ ಮೂರು ಮೊಟ್ಟೆಗಳನ್ನು ಇಡುತ್ತದೆ. ಹಗಲಿನಲ್ಲಿ ಮೊಟ್ಟೆಗೆ ಕಾವು ಕೊಡುವ ಜವಾಬ್ದಾರಿಯನ್ನು ಹೆಣ್ಣು ಮತ್ತು ಗಂಡು ಎರಡೂ ಸರತಿಯಂತೆ ನಿರ್ವಹಿಸುತ್ತವೆ. ರಾತ್ರಿ ಹೊತ್ತು ಹೆಣ್ಣು ಹಕ್ಕಿ ಮಾತ್ರ ಕಾವು ಕೊಡುತ್ತದೆ. ಸುಮಾರು ಎರಡು ವಾರಗಳಲ್ಲಿ ಮೊಟ್ಟೆ ಒಡೆದು ಬರುವ ಮರಿಗಳಿಗೆ ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಗುಟುಕನ್ನು ತಂದು ಕೊಡುತ್ತವೆ. ಸಾಮಾನ್ಯವಾಗಿ ಫಲಹಾರಿಯಾದ ಕುಟ್ರು ಹಕ್ಕಿಗಳು ಮರಿಗಳನ್ನು ಪೋಷಿಸಲು ಸಣ್ಣ ಕೀಟಗಳನ್ನು ಹಿಡಿದು ತಂದು ಗುಟುಕು ಕೊಡುತ್ತವೆ. ಹಣ್ಣುಗಳಿಗೆ ಕೊರತೆ ಬಂದಂತಹ ಅನಿವಾರ್ಯ ಸಂದರ್ಭಗಳಲ್ಲಿ ತಾವೂ ಆಹಾರವಾಗಿ ಕೀಟಗಳನ್ನೇ ಭಕ್ಷಿಸುತ್ತವೆ. ತಮ್ಮ ಬಿಲವನ್ನು ಎಚ್ಚರಿಕೆಯಿಂದ ಇವು ಕಾಯುತ್ತವೆ. ತಮ್ಮ ಬಿಲದ ಬಳಿಗೆ ಬರಲು ಯತ್ನಿಸುವ ಗೊರವಂಕ ಮುಂತಾದ ಪಕ್ಷಿಗಳು, ಅಳಿಲುಗಳನ್ನು ಅಟ್ಟಾಡಿಸಿ ಓಡಿಸುತ್ತವೆ. ಕುಟ್ರಕ್ಕಿ ತೊರೆದ ಬಿಲವೊಂದನ್ನು ತನ್ನ ವಸತಿಗಾಗಿ ಸಿದ್ಧಗೊಳಿಸಿಕೊಳ್ಳುತ್ತಿದ್ದ ಒಂದು ಗೊರವಂಕದ ಜೋಡಿಯೊಂದನ್ನು ಇತ್ತೀಚೆಗೆ ನಾನು ಕಂಡೆ. ಮರಿಗಳು ಬೆಳೆಯುತ್ತ ಹೋದಂತೆ ಕುಟ್ರ ಹಕ್ಕಿಯ ಕೂಗಾಟವೂ ಕಡಿಮೆಯಾಗುತ್ತಾ ಹೋಗುತ್ತದೆ. ಹತ್ತಿರ, ಹತ್ತಿರ ೪೦ ದಿನಗಳಲ್ಲಿ ಮರಿಗಳು ತಮ್ಮ ಬಾಳ ಪ್ರಯಾಣಕ್ಕೆ ಪೂರ್ಣ ಪ್ರಮಾಣಕ್ಕೆ ಬೆಳೆದು ನಿಲ್ಲುತ್ತವೆ.  

ಕುಟ್ರ ಹಕ್ಕಿಯ ಕೂಗನ್ನು ಕೇಳಬೇಕೆನಿಸಿದೆಯೇ? ಈ ಕೆಳಗಿನ ವೀಡಿಯೋ ಲಿಂಕನ್ನು ಕ್ಲಿಕ್ ಮಾಡಿ :

https://youtu.be/koomjgL0rho


2 comments:

  1. ರಾಟವಾಳ da badalu kutra pakshi irbekitthu 3rd line nali. eradu dvaragalu iruvudilla, mostly eradu separate gooduglaagirabeku.40 days for growth illa 20 days olage irutthe. ulidanthe lekhana chennagide.

    ReplyDelete
  2. ನಿಮ್ಮ ಅಭಿಪ್ರಾಯ ಸರಿ. ಧನ್ಯವಾದಗಳು. ಅಧ್ಯಯನಗಳ ಪ್ರಕಾರ ವೈಟ್ ಚೀಕಡ್ ಬಾರ್ಬೆಟ್ಟ್ ಗಳು ತಮ್ಮ ಗೂಡನ್ನು ನಿರ್ಮಿಸಲು ಮೆದುವಾದ ಮರದ ಒಣಗಿದ ರೆಂಬೆಯಲ್ಲಿ ತಮ್ಮ ಗೂಡನ್ನು ಸಿದ್ಧಪಡಿಸಿಕೊಳ್ಳುತ್ತವೆ. ವಿಶ್ರಾಂತಿಗಾಗಿ ರೆಂಬೆಯ ತುದಿಯಲ್ಲಿ ನಿರ್ಮಿಸುವ ಗೂಡು Roosting nest. ರೆಂಬೆಯಲ್ಲಿ ಅದಕ್ಕಿಂತ ಕೆಳಗೆ ಮೊಟ್ಟಯಿಟ್ಟು ಮರಿ ಮಾಡಲು ಪ್ರತ್ಯೇಕವಾಗಿಯೇ Breeding nest ನಿರ್ಮಿಸುತ್ತವೆ. Breeding nest ನ್ನು ಸಂದರ್ಭೋಚಿತವಾಗಿ Roosting nestನ್ನುಆಗಿ ಬಳಸುತ್ತವೆ. ಆದರೆ Roosting nestನ್ನುಯಾವುದೇ ಕಾರಣಕ್ಕೂ Breeding nestನ್ನು ಆಗಿ ಬಳಸುವುದಿಲ್ಲ. ಇದೊಂದು ವಿಶಿಷ್ಟಗುಣ. ನಾನು ಗಮನಿಸಿದ ಈ ಪಕ್ಷಿಗಳ ಕೂಡಿನಲ್ಲಿ ಹೇಗೋ ಈ ಗೂಡುಗಳ ನಡುವೆ ಆಂತರಿಗಕವಾಗಿ ಸಂಪರ್ಕ ಏರ್ಪಟ್ಟಿರಬೇಕು. ಗೂಡಿನಲ್ಲಿ ಮೊಟ್ಟೆಯೊಡೆದು ಮರಿಗಳಾಗಲು 17-19 ದಿನಗಳು ಬೇಕಾಗುತ್ತವೆ. ಅದರ ನಂತರದ Nestling period ಸೇರಿದರೆ ಸರಾಸರಿ 40 ದಿನಗಳು ಬೇಕು ಮರಿಗಳು ಬೆಳೆದು ಗೂಡನ್ನು ತೊರೆಯಲು. ರಾಟವಾಳವೆಂದರೆ ಮುನಿಯ ಇದು ತಿದ್ದುಪಡಿಯಾಗಬೇಕು.

    ReplyDelete