ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, February 4, 2022

ಅತ್ಯಂತ ಹಗುರಲೋಹ - ಲಿಥಿಯಂ

ಅತ್ಯಂತ ಹಗುರಲೋಹ - ಲಿಥಿಯಂ

ಶ್ರೀನಿವಾಸ್

ಸರ್ಕಾರಿ ಪ್ರೌಢ ಶಾಲೆ,

ಮುತ್ತೂರು

ಶಿಡ್ಲಘಟ್ಟ ತಾಲೂಕು 

ಚಿಕ್ಕಬಳ್ಳಾಪುರ ಜಿಲ್ಲೆ  

ಅತ್ಯಂತ ಹಗುರ ಲೋಹ ಎಂದು ಪರಿಗಣಿಸಲಾಗಿರುವ ಲಿಥಿಯಂ ಲೋಹದ ಅನ್ವೇಷಣೆ ಹಾಗೂ ಉಪಯುಕ್ತತೆಗಳ ಬಗ್ಗೆ ಬೆಳಕು ಚೆಲ್ಲುವ ಈ ಮಾಹಿತಿಪೂರ್ಣ ಲೇಖನವನ್ನು ’ಸವಿಜ್ಞಾನ ’ ತಂಡದ ವಿಜ್ಞಾನ ಶಿಕ್ಷಕರಾದ ಶ್ರೀ ಶ್ರೀನಿವಾಸ್ ಅವರು ಬರೆದಿದ್ದಾರೆ.

ಪ್ರಚಲಿತ ಜಾಗತಿಕ ವಿದ್ಯಮಾನವನ್ನು ಗಮನಿಸಿದಾಗ, ಆಫ್ಘಾನಿಸ್ಥಾನ್ (ಮಹಾಭಾರತದ ಗಾಂಧಾರ) ದೇಶವನ್ನು ಅಮೇರಿಕದ ಸೈನ್ಯ ತೆರವುಗೊಳಿಸಿರುವುದು, ಅದರಿಂದಾಗಿ ಉಲ್ಬಣಗೊಂಡಿರುವ ಪರಿಸ್ಥಿತಿ ಇಡೀ ವಿಶ್ವದ ಗಮನವನ್ನು ಸೆಳೆದಿದೆ. ಇದರ ಜೊತೆಗೆ, ಇನ್ನೊಂದು ಸುದ್ದಿ, ಟ್ರಿಲಿಯನ್‌ಗಟ್ಟಲೆ ಬೆಲೆಬಾಳುವ ಲಿಥಿಯಂ ಸಂಪನ್ಮೂಲ ಅಲ್ಲಿನ ಕಂದಹಾರದ ಭೂಗರ್ಭದಲ್ಲಿ ಅಡಗಿದೆ ಎಂಬುದು. ಲಿಥಿಯಂಅನ್ನು ಬ್ಯಾಟರಿಗಳಲ್ಲಿ ಉಪಯೋಗಿಸುತ್ತಿರುವ ವಿಷಯ ನಮಗೆಲ್ಲ ಗೊತ್ತಿದ್ದರೂ, ಮೇಲಿನ ಹಿನ್ನೆಲೆಯಲ್ಲಿ ಈ ಲೋಹ ಮತ್ತೊಮ್ಮೆ ನನ್ನ ಗಮನ ಸೆಳೆಯಿತು.

೧೮೧೭ರಲ್ಲಿ ಸ್ವೀಡನ್ ದೇಶದ ಜಾನ್ ಆಗಸ್ಟ್ ಅರ್ಫ್ವೆಡ್‌ಸನ್ (Johan August Arfvedson), ಸ್ಟಾಕ್‌ಹೋಮ್‌ನ ಉಟೊಗಣೆ  ಎಂಬಲ್ಲಿ ದೊರಕಿದ ಪೆಟಲೈಟ್ ಅದುರಿನಿಂದ ಲಿಥಿಯಂ ಅನ್ನು ಕಂಡುಹಿಡಿಯಲು ಸಾಧ್ಯವಾಯಿತು. ಅದರ ಆವಿಷ್ಕಾರವು ಬಹಳ ಅಕಸ್ಮಿಕವಾಗಿ ಆಯಿತು. ಹಲವು ದಿನಗಳ ಕಾಲ ಪೆಟಲೈಟ್ ಅದುರಿನ ಘಟಕಾಂಶಗಳನ್ನು ಕಂಡುಹಿಡಿಯುವ ಕಾರ್ಯದಲ್ಲಿ ಜಾನ್ ಮಗ್ನರಾಗಿದ್ದಾಗ, ಎಲ್ಲಾ ಘಟಕಾಂಶಗಳ ಮೊತ್ತವು ೯೬% ಆಗಿತ್ತು, ಆದರೆ, ಉಳಿದ ೪% ರಾಶಿಯ ಘಟಕಾಂಶ ಯಾವುದೆಂದು ಪತ್ತೆಯಾಗಲಿಲ್ಲ. ಅದು, ತಿಳಿಯದ ಹೊಸಧಾತು ಇರಬೇಕೆಂದು ಆತ ಊಹಿಸಿದ. ಸತತ ಪ್ರಯತ್ನದ ನಂತರ, ಕೊನೆಗೂ, ಹೊಸ ಕ್ಷಾರೀಯ ಲೋಹ ಲಿಥಿಯಂನ ಆವಿಷ್ಕಾರದ ಹಿರಿಮೆ ಆತನಿಗೆ ಸಂದಿತು. ಲಿಥಿಯಂನ ಹತ್ತಿರದ ಸಂಬಂಧಿಗಳಾದ ಸೋಡಿಯಂ ಮತ್ತು ಪೊಟಾಸಿಯಂಗಳನ್ನು ಜೈವಿಕವಸ್ತುಗಳಿಂದ ಈ ಮೊದಲೇ ಆವಿಷ್ಕರಿಸಲಾಗಿತ್ತು ಆದರೆ, ಲಿಥಿಯಂ ಖನಿಜದಲ್ಲಿ ಮೊದಲ ಬಾರಿಗೆ ದೊರೆಯಿತು. ಆದ್ದರಿಂದ, ಲಿಥಿಯಂ (ಗ್ರೀಕ್ “ಲಿಥೋಸ್” ಅಂದರೆ ಕಲ್ಲು) ಎಂದು ಹೆಸರಿಸಲಾಯಿತು. ಬರ್ಜೀಲಿಯಸ್ ಸಹ ಖನಿಜಯುಕ್ತ ನೀರಿನಲ್ಲಿ ಈ ಹಗುರ ಲೋಹವನ್ನು ಗುರುತಿಸಿದರು. ಫ್ರಾನ್ಸ್ ದೇಶದಲ್ಲಿ ಖನಿಜಯುಕ್ತ ನೀರಿನಲ್ಲಿ ಅಭ್ಯಂಜನ ಮಾಡಿದರೆ ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವ ವಾಡಿಕೆ ಇಂದಿಗೂ ಜಾರಿಯಲ್ಲಿ ಇದೆ, ನಮ್ಮಲ್ಲಿ ಜಲ ಚಿಕಿತ್ಸೆ ಇಲ್ಲವೆ, ಹಾಗೆ!!!.


ಇಷ್ಟಾದರೂ, ಲಿಥಿಯಂ ಅನ್ನು ಶುದ್ಧರೂಪದಲ್ಲಿ ಪಡೆಯಲಾಗಿರಲಿಲ್ಲ, ೧೮೫೫ರಲ್ಲಿ ಜರ್ಮನ್ ದೇಶದ ರಸಾಯನಶಾಸ್ತ್ರಜ್ಞ  ಬನ್ಸನ್ ಎಂಬಾತ ದ್ರವಿತ ಲಿಥಿಯಂ ಕ್ಲೋರೈಡ್‌ನಿಂದ ವಿದ್ಯುದ್ವಿಭಜನೆ ಕ್ರಿಯೆಯ ಮೂಲಕ ಲಿಥಿಯಂ ಅನ್ನು ಬೇರ್ಪಡಿಸಿದರು. ಇದು ಮೃದು ಹಗುರ ಬೆಳ್ಳಿ ಬಿಳುಪಿನ ಲೋಹವಾಗಿದೆ. ಲಿಥಿಯಂನಷ್ಟು ಹಗುರವಾದ ಲೋಹ ಮತ್ತೊಂದಿಲ್ಲ, ನಾವು ಹಗುರ ಲೋಹವೆಂದು ಪರಿಗಣಿಸಿರುವ ಅಲ್ಯೂಮಿನಿಯಂಗಿಂತ ಲಿಥಿಯಂ ೫ಪಟ್ಟು ಹಗುರವಾಗಿದೆ. ಕೊಠಡಿಯ ತಾಪಮಾನದಲ್ಲಿಯೂ ಸಹ ಜಡ ರಾಸಾಯನಿಕ ಗುಣ ಹೊಂದಿರುವ ಇದು, ಗಾಳಿಯಲ್ಲಿರುವ ನೈಟ್ರೋಜನ್‌ನೊಂದಿಗೆ ಕ್ಷಿಪ್ರವಾಗಿ ವರ್ತಿಸುತ್ತದೆ. ಸೋಡಿಯಂ ಲೋಹವನ್ನು ಸೀಮೆಎಣ್ಣೆಯಲ್ಲಿಯೇ ಶೇಖರಿಸಿಡಲು ಕಾರಣ ನಿಮಗೆ ಗೊತ್ತು, ಆದರೆ, ಲಿಥಿಯಂನ ಶೇಖರಣೆ ತುಂಬಾ ಕಷ್ಟ. ಅದು ಸೀಮೆಎಣ್ಣೆಯೊಂದಿಗೆ ಸಹ ಶೀಘ್ರವಾಗಿ ವರ್ತಿಸುತ್ತದೆ. ಹೀಗಾಗಿ, ಲಿಥಿಯಂಅನ್ನು ಸಾಮಾನ್ಯವಾಗಿ,  ಪ್ಯಾರಾಫಿನ್ ಲೇಪಿಸಿ ಶೇಖರಿಸಿಡಲಾಗುತ್ತದೆ. ಇದು, ಹೈಡ್ರೋಜನ್‌ನೊಂದಿಗೆ ಇನ್ನೂ ಶರವೇಗದಲ್ಲಿ ಸಂಯೋಗಗೊಳ್ಳುತ್ತದೆ. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಅಮೇರಿಕಾದ ವಿಮಾನ ಚಾಲಕರು ಲಿಥಿಯಂ ಹೈಡ್ರೈಟ್‌ನ ಉಂಡೆಗಳನ್ನು ಬಳಸಿ, ಸಮದ್ರದ ಮೇಲೆ ಹಾರುವಾಗ ಅಪಘಾತ ಉಂಟಾದರೆ ರಬ್ಬರ್ ದೋಣಿಗಳಿಗೆ ಅನಿಲ ತುಂಬಿಸುತ್ತಿದ್ದರು. ಈ ಉಂಡೆಗಳು ನೀರಿನಲ್ಲಿ ಕರಗಿ ಶೀಘ್ರವಾಗಿ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಲಿಥಿಯಂನ ಈ ವಿಶಿಷ್ಟ ಸಾಮರ್ಥ್ಯವನ್ನು ಜಲಾಂರ್ತಗಾಮಿಗಳಲ್ಲಿ, ವಿಮಾನಗಳಲ್ಲಿ ಗಾಳಿಯನ್ನು ಶುದ್ಧಗೊಳಿಸಲು ಬಳಸಿಕೊಳ್ಳುತ್ತಾರೆ. ಯೂರಿಕ್ ಆಮ್ಲದ ಚಯಾಪಚಯ ಕ್ರಿಯೆಯ ದೋಷದಿಂದ ಗೌಟ್ ಕಾಯಿಲೆಯಿಂದ ನರಳುತ್ತಿರುವವರಿಗೆ ಇದೊಂದು ದಿವ್ಯ ಔಷದ. ಲಿಥಿಯಂ ಇತರ ಲೋಹಗಳೊಂದಿಗೆ ಬೆರೆತು ಮಿಶ್ರಲೋಹವಾಗಿ ಅದ್ಭುತಗುಣಗಳನ್ನು ಪಡೆಯುತ್ತದೆ, ಆದರೆ,  ಲಿಥಿಯಂನ ಮಿಶ್ರ ಲೋಹಗಳು ಗರಿಷ್ಟ ಅಸ್ಥಿರತೆ ಹೊಂದಿದ್ದು ಉತ್ಕರ್ಷಣೆಗೊಳ್ಳುತ್ತವೆ. ಆದರೆ, ಲಿಥಿಯಂ ರಸಾಯನಿಕಪಟುತ್ವ ಗುಣ ಕಬ್ಬಿಣದ ಹಾಗೂ ಇನ್ನಿತರ ಲೋಹಗಳ ಉದ್ದರಣೆಯಲ್ಲಿ ಮಾರ್ಪಡಕವಾಗಿ (modifier) ಬಳಸಲಾಗುತ್ತದೆ. ಅಲ್ಯೂಮಿನಿಯಂನ ಉತ್ಪಾದನೆಯಲ್ಲಿ ಇದನ್ನು ವೇಗವರ್ದಕವಾಗಿ ಬಳಸುತ್ತಾರೆ.  ವಿದ್ಯುತ್ ಬ್ಯಾಟರಿಗಳಲ್ಲಿ ಲಿಥಿಯಂ ಅದ್ಬುತವಾಗಿ ಕಾರ್ಯನಿವರ್ಹಿಸುತ್ತದೆ.




ಭಾರತದ ಯೋಗಿಗಳು ಗಾಜನ್ನು ಜೀರ್ಣಿಸಿಕೊಳ್ಳುವ ಪವಾಡ ಶಕ್ತಿಯನ್ನು ಹೊಂದಿದ್ದರಂತೆ. ನೀವು ಎಂದಾದರೂ ಗಾಜನ್ನು ತಿನ್ನುವ ದುಸ್ಸಾಹಸಕ್ಕೆ ಕೈ ಅಲ್ಲ ಬಾಯಿ ಹಾಕಿದ್ದೀರೇನು ?? ಆದರೆ, ಸಾಮಾನ್ಯ ಸೋಡಾ ಗಾಜು ನೀರಿನಲ್ಲಿ ಕರಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತಿದೆಯೆ? ಹೌದು, ಗ್ರಾಂ ನ ೧೦೦೦೦ದ ಭಾಗ ಮಾತ್ರ ಕರಗುತ್ತದೆ. ಅಷ್ಟೇನಾ? ಅಂತ ನಿಮಗೆ ಅನ್ನಿಸಬಹುದು, ಆದರೆ, ಕೆಲವೊಮ್ಮೆ ಅಷ್ಟು ಪ್ರಮಾಣದ ವಿಲೀನತೆ ಪ್ರಯೋಗಾಲಯದಲ್ಲಿ ತೊಂದರೆ ಉಂಟು ಮಾಡಬಹುದು. ಲಿಥಿಯಂ ಮತ್ತು ಲ್ಯಾಥನಂ ಮಿಶ್ರಿತ ಗಾಜು ಯಾವ ರಸಾಯನಿಕದೊಂದಿಗೂ ವಿಲೀನಗೊಳ್ಳುವುದಿಲ್ಲ. ಆದರೆ, ಜೊತೆಗೆ ಸುಲೋಚನ ಗುಣ, ಉಷ್ಣ ನಿರೋದಕ ಲಕ್ಷಣ ಮತ್ತು ವಿದ್ಯುತ್ ನಿರೋದಕ ಗುಣವನ್ನು ಪಡೆದುಕೊಳ್ಳುತ್ತದೆ. ಲಿಥಿಯಂ ಫ್ಲೋರೈಡ್‌ನಿಂದ ತಯಾರಿಸಿದ ಮಸೂರಗಳನ್ನು ಖಗೋಳ ದೂರದರ್ಶಕಗಳಲ್ಲಿ ಬಳಸಲಾಗುತ್ತದೆ. ನೀವು ಧರಿಸಿರುವ ಬಟ್ಟೆ ಮಿರಿಮಿರಿ ಮಿಂಚುತ್ತ ಕಣ್ಣುಕುಕ್ಕುತ್ತಿದೆಯೇ? ಹಾಗಾದರೆ, ಆ ಬಟ್ಟೆ ತಯಾರಿಸುವಾಗ ಲಿಥಿಯಂ ಸಂಯುಕ್ತಗಳನ್ನು ಬಳಸಲಾಗಿರುತ್ತದೆ. ಲಿಥಿಯಂ ಉಷ್ಣಜಲ್ವನಗುಣ (pyrotechnical) ಹಲವು ಉಪಯೋಗಗಳನ್ನು ಪಡೆದಿದೆ. ಇದೆಲ್ಲವೂ, ಒತ್ತಟ್ಟಿಗಿರಲಿ, ಲಿಥಿಯಂನ ಇನ್ನಷ್ಟು ಅಧ್ಬುತ ಗುಣಗಳನ್ನು ಇನ್ನೂ ತಿಳಿಯಬೇಕಿದೆ.

ಲಿಥಿಯಂ-೬ ಸಮಸ್ಥಾನಿಯು ಒಂದು ನ್ಯೂಟ್ರಾನ್ ಪಡೆದುಕೊಂಡು ಅಸ್ಥಿರಗೊಳ್ಳುತ್ತದೆ, ಹಾಗೂ ಕ್ಷೀಣಿಸಿ, ಹಗುರ ಹೀಲಿಯಂ ಹಾಗೂ ಟ್ರೀಷಿಯಂ (ಅತಿಭಾರ ಹೈಡ್ರೋಜನ್‌ನ ಸಮಸ್ಥಾನಿ) ಅಥವಾ ಡ್ಯುಟೀರಿಯಂ ಎಂಬ ಎರಡು ಧಾತುಗಳಾಗುತ್ತದೆ, ಇವುಗಳನ್ನು ಉಷ್ಣಬೈಜಿಕ ಸಮ್ಮಿಲನ ಕ್ರಿಯೆಯಲ್ಲಿ ಬಳಸಬಹುದೆ ಎಂಬ ಬಗ್ಗೆ  ಸಂಶೋಧನೆ ನಡೆಯುತ್ತಿದೆ. ವ್ಯೋಮ ನೌಕೆಗಳಲ್ಲಿ ಲಿಥಿಯಂನಂಥ ಲೋಹೀಯ ಇಂಧನಗಳನ್ನು ಬಳಸುವ ಯೋಚನೆ, ಯೋಜನೆಯನ್ನು ವಿಜ್ಞಾನಿಗಳು ಈಗ ಕೈಗೊಳ್ಳುತ್ತಿದ್ದಾರೆ. ಕಾರಣ, ಒಂದು mg ಲಿಥಿಯಂಅನ್ನು ದಹಿಸಿದಾಗ ೧೦೨೭೦ ಞ.ಛಿಚಿಟ ಶಕ್ತಿ ಬಿಡುಗಡೆಮಾಡುತ್ತದೆ.

ಸಂಶ್ಲೇಷಿತ ವಸ್ತುಗಳು ಲೋಹಗಳಿಗೆ ಅತ್ಯುತ್ತಮ ಪರ್ಯಾಯವಾಗಿ ಕಂಡುಬಂದರೂ,  ಪ್ಲಾಸ್ಟಿಕ್‌ನಂಥ ತ್ಯಾಜ್ಯಗಳ ನಿರ್ವಹಣೆ ಒಂದು ಪೀಡೆಯಾಗಿ ಪರಿಣಮಿಸಿದೆ. ಇದಕ್ಕೆ ಯಾವಾಗ ಪರಿಹಾರ ಸಿಗುತ್ತದೆಯೋ ತಿಳಿದಿಲ್ಲ.  ಟೆಫ್ಲಾನ್‌ನಂತಹ ಸಂಶ್ಲೇಷಿತಗಳನ್ನು ಲೋಹಗಳಿಗೆ ಅಂಟಿಸುವುದು ಕಷ್ಟಕರ. ಆದರೆ, ಲಿಥಿಯಂ ಅಥವಾ ಬೋರಾನ್ ಸಂಯುಕ್ತಗಳನ್ನು ಬಳಸಿ ಅಂಟಿಸಬಹುದಾಗಿದೆ.

ಲಿಥಿಯಂನ ಲಭ್ಯತೆ

ಆವರ್ತಕೋಷ್ಟಕದ ನಿಯಮದಂತೆ, ಎಡ ಮೇಲುಭಾಗದ ಧಾತುಗಳು(ಸೋಡಿಯಂ, ಪೊಟಾಸಿಯಂ, ಮೆಗ್ನೀಷಿಯಂ ಮುಂತಾದವು) ಯಥೇಚ್ಛವಾಗಿ ದೊರೆಯುತ್ತದೆ, ಅದಕ್ಕೆ,  ಅಪವಾದ ಎನ್ನುವಂತೆ ಭೂತೊಗಟೆಯಲ್ಲಿ, ಲಿಥಿಯಂನ ಲಭ್ಯತೆ ಕೇವಲ ಶೇಖಡ ೦.೦೦೬೫ರಷ್ಟು ಮಾತ್ರ.  ಸುಮಾರು ೨೦ ಲಿಥಿಯಂ ಯುಕ್ತ ಖನಿಜಗಳನ್ನು ಗುರುತಿಸಲಾಗಿದೆ. ಹಾಗಾದರೆ, ಅಮೇರಿಕ ೨೦ವರ್ಷಗಳ ಕಾಲ ಆಫ್‌ಘಾನಿಸ್ಥಾನದಲ್ಲಿ ಶಾಂತಿ ಕಾಪಾಡುವ ನೆಪದಲ್ಲಿ ಲಿಥಿಯಂನ ಶೋಧ ನಡೆಸುತ್ತಿತ್ತೆ? ಆ ದೇಶಕ್ಕೇ ಗೊತ್ತು ! ಭಾರತದಲ್ಲಿ, ಲಿಥಿಯಂನ ನಿಕ್ಷೇಪಗಳಿಲ್ಲವೆ? ಕುಂತಿಮಕ್ಕಳು (ಭಾರತ) ಗಾಂದಾರ ದೇಶವನ್ನೇ ಅವಲಂಬಿಸಬೇಕೆ? ಅಗ್ನಿಶಿಲೆಗಳಲ್ಲಿ ಅಪಾರ ಪ್ರಮಾಣದ ಲಿಥಿಯಂ ಇರುತ್ತದೆ, ಆದರೆ ಸಂಸ್ಕರಿಸುವುದು ಕಷ್ಟ.

ಕೊನೆಯಮಾತು, ಹೋಟೆಲಿನಲ್ಲಿ ಕೊಡುವ ಬಿಸಿಬಿಸಿ ತಿಂಡಿ ನೆನ್ನೆಯ ತಂಗಳು ತಿಂಡಿಯಾಗಿದ್ದರೆ? ಈ ಕುರಿತು ಹಲವು ಜೋಕ್‌ ಗಳನ್ನು ನೀವು ಕೇಳಿರಬಹುದು. ಈಗ  ಈ ಅನುಮಾನ  ಯಾಕೆ ಅನ್ನುತ್ತೀರ ? ಹಾರ್ವಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರಾರ್ಬಟ್ ವುಡ್‌ಗೆ ತಾನಿರುವ ವಿದ್ಯಾರ್ಥಿ ನಿಲಯದ ಬಾಣಸಿಗನ ಮೇಲೆ ಒಂದು ಅನುಮಾನ ಬಂತು, ತಟ್ಟೆಯಲ್ಲಿ ಉಳಿದ ಆಹಾರವನ್ನೇ ಮರುದಿನ ಬಿಸಿಮಾಡಿ ನೀಡುತ್ತಿದ್ದಾರೆ ಎಂಬ ಗುಮಾನಿ ಅವನದು. ರಾರ್ಬಟ್, ರಾತ್ರಿ ಬೋಜನಾಲಯದಲ್ಲಿ ಊಟ ಮಾಡಿದ. ಆದರೆ, ಒಂದಷ್ಟು ಆಹಾರ ತಟ್ಟೆಯಲ್ಲಿ ಹಾಗೇ ಬಿಟ್ಟ, ಅದೇ ರೀತಿ, ಎಲ್ಲರಿಗೂ ಮಾಡಲು ತಿಳಿಸಿದ. ಎಲ್ಲರ ತಟ್ಟೆಯಲ್ಲಿ ಉಳಿದಿದ್ದ ಆಹಾರದ ಮೇಲೆ ಲಿಥಿಯಂ ಕ್ಲೋರೈಡ್‌ಅನ್ನು ಸಿಂಪಡಿಸಿದ. ಮರುದಿನ, ಬಾಣಸಿಗ ಹಿಂದಿನ ದಿನದ ಆಹಾರ(ಮಾಂಸ)ವನ್ನೇ ಬಿಸಿ ಮಾಡಿ ನೀಡಿದ್ದ! ಇದು ಹೇಗೆ ತಿಳಿದಿರಬಹುದೆಂಬ ಅಚ್ಚರಿಯೇ?  ಲಿಥಿಯಂ ಕ್ಲೋರೈಡ್‌ಅನ್ನು ಸಿಂಪಡಿಸಿದ್ದ‌ ಮಾಂಸದ ತುಂಡೊಂದನ್ನು ರಾಬರ್ಟ್ ಪ್ರಯೋಗಾಲಯದಲ್ಲಿ ರೋಹಿತದರ್ಶಕದಲ್ಲಿ ವೀಕ್ಷಿಸಿದಾಗ ನಿಜ ಬಣ್ಣ ಬಯಲಾಯಿತು, ಲಿಥಿಯಂ ಕೆಂಪು ರೋಹಿತ ಉಂಟು ಮಾಡುತ್ತದೆ.!! ವೈಜ್ಞಾನಿಕ ಪತ್ತೆದಾರನ ಕೈಗೆ ಸಾಕ್ಷಿ ಸಮೇತ ವಂಚಕ ಖದೀಮ ಸಿಕ್ಕಿಬಿದ್ದ!!  ಅಯ್ಯೋ, ಇದಕ್ಕೆ ಇಷ್ಟು ದೊಡ್ಡ ಕಥೆಯೇ? ವಾಸನೆ ನೋಡಿದರೆ ಗೊತ್ತಾಗುತ್ತಿರಲಿಲ್ಲವೆ ? ಅಂತ ಹೇಳುತ್ತೀರಾ.? ವಿಜ್ಞಾನ ದೀವಿಗೆ ಪತ್ತೆದಾರಿಕೆಯ ಮೂಲಕ  ಇಂತಹ ಅದೆಷ್ಟು ರೋಚಕ ಘಟನೆಗಳನ್ನು ‌ಬೆಳಕಿಗೆ ತಂದಿದೆಯೋ?  ನಿಮಗೆ ಗೊತ್ತಿರುವ ರೋಚಕ ಕತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

27 comments:

  1. ಅರ್ಥಗರ್ಭಿತವಾಗಿದೆ.

    ReplyDelete
  2. ಭರಪೂರ ಮಾಹಿತಿ. ಆಕರ್ಷಕವಾಗಿದೆ. ಕುತೂಹಲ ಮೂಡಿಸುವಂತೆಯೂ ಇದೆ. ಧನ್ಯವಾದಗಳು ಸರ್.‌ ಲಿಥಿಯಂನ ಒಂದೊಂದು ಉಪಯೋಗದ ಮೇಲೂ ಒಂದೊಂದು ವಿಸ್ತೃತ ಲೇಖನ ಬರೆಯಬಹುದು ಅನ್ನಿಸಿತು. ನಿರೀಕ್ಷಿಸಬಹುದೇ?

    ReplyDelete
  3. ಲಿಥಿಯಂ ಲೋಹದ ನಂಟಿನ ಜಾಡನ್ನು ಜಾಲಾಡಿ "ದಿನನಿತ್ಯ ಬಳಸುವ ಬ್ಯಾಟರಿಯಿಂದ ಹಿಡಿದು ಧರಿಸುವ ಉಡುಪುಗಳ ವರೆಗೆ",'ಪವಾಡ ಶಕ್ತಿಯಿಂದ ವೈಜ್ಞಾನಿಕ ತರ್ಕದ ವರೆಗೆ'ಬಹುಉಯುಕ್ತತೆಗಳ ಬಗ್ಗೆ ಬೆಳಕು ಚೆಲ್ಲುವ ಈ ಮಾಹಿತಿ ಪೂರ್ಣ ಲೇಖನ ತಮ್ಮ ಪ್ರಬುದ್ಧ ಬರವಣಿಗೆಯ ಮೂಲಕ ಓದುಗ ಸಹೃದಯರ ಕುತೂಹಲ ಕೆರಳಿಸುವಂತಿದೆ ಶ್ರೀ ನಿವಾಸ ಸರ್ ಧನ್ಯವಾದಗಳು ತಮಗೆ 🙏

    ReplyDelete
  4. ನಿಮ್ಮ ಅದ್ಭುತ ಪ್ರಯತ್ನಕ್ಕೆ ಧನ್ಯವಾದಗಳು 🙏🙏🙏

    ReplyDelete
    Replies
    1. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಸರ್

      Delete
  5. ಅದ್ಭತವಾಗಿದೆ sir.

    ReplyDelete
  6. ಅತ್ಯುತ್ತಮ ನವಿರಾದ ಲೇಖನ ಸರ್‌.

    ReplyDelete
  7. ಅದ್ಭತವಾಗಿದೆ sir

    ReplyDelete
  8. ಹಾಸ್ಯ ಮಿಶ್ರಿತ ಅದ್ಭುತ ಕಥನ

    ReplyDelete
  9. ಶ್ರೀನಿವಾಸ್ ಸರ್ ನಿಮ್ಮ ಲೇಖನ ಅತ್ಯದ್ಭುತವಾಗಿದೆ ಲೀಥಿಯಂ ಧಾತುವಿನ ಇತಿಹಾಸವನ್ನು ಬಹಳ ಚೆನ್ನಾಗಿ ಬಿಂಬಿಸಿದ್ದೀರಿ. ನಿಮ್ಮ ಪ್ರಯತ್ನ ಉತ್ತಮವಾಗಿದೆ ಇನ್ನು ಹೆಚ್ಚು ಲೇಖನಗಳು ನಿಮ್ಮಿಂದ ಹೊರಹೊಮ್ಮಲಿ ಎಂದು ಹಾರೈಸುವೆ

    ReplyDelete
  10. ಅದ್ಭುತವಾದ ಬರವಣಿಗೆ

    ReplyDelete