ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, February 4, 2022

ಅಭಿಜಾತ ಚಿತ್ರ ಕಲಾವಿದೆ, ಶ್ರೀಮತಿ ಜಯಶ್ರೀ ಶರ್ಮ

ಓದಿದ್ದು ಸೂಕ್ಷ್ಮಜೀವಿಗಳ ಬಗ್ಗೆ, ಓಗೊಟ್ಟಿದ್ದು ಚಿತ್ರಕಲೆಯ ಸೂಕ್ಷ್ಮದನಿಗೆ !

- ಅಭಿಜಾತ ಚಿತ್ರ ಕಲಾವಿದೆ, ಶ್ರೀಮತಿ ಜಯಶ್ರೀ ಶರ್ಮ 


ಸವಿಜ್ಞಾನ’ ಪತ್ರಿಕೆಯ ಜನಪ್ರಿಯ ಅಂಕಣಗಳಲ್ಲಿ ಒಂದು, ವಿಜ್ಞಾನಕ್ಕೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳು. ಮೊದಲ ಸಂಚಿಕೆಯಿಂದಲೂ ತಪ್ಪದೆ ಈ ಅಂಕಣಕ್ಕೆ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿರುವವರಲ್ಲಿ ಒಬ್ಬರಾದ ಶ್ರೀಮತಿ ಜಯಶ್ರೀ ಶರ್ಮ, ಮೂಲತಃ ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಅದೇ ವಿಷಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು ಈಗ ಚಿತ್ರಕಲೆಯತ್ತ ಹೊರಳಿ, ಅದರಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ. ಅವರ ಸಾಧನೆಯ ಒಂದು ಕಿರು ಪರಿಚಯವನ್ನು ಶಿಕ್ಷಕರಾದ ರಾಘವೇಂದ್ರ ಮಯ್ಯ ಮತ್ತು ಲಕ್ಷ್ಮಿ ಪ್ರಸಾದ್ ನಾಯಕ್ ಇಲ್ಲಿ ಮಾಡಿಕೊಟ್ಟಿದ್ದಾರೆ.

ಓದಿದ್ದು ಸೂಕ್ಷ್ಮಾಣುಜೀವವಿಜ್ಞಾನ, ಆದರೆ ಓಗೊಟ್ಟಿದ್ದು ಚಿತ್ರಕಲೆಯ ದನಿಗೆ. ಇದು ಕಲೆಯನ್ನೇ ಬದುಕಿನ ಧ್ಯಾನವಾಗಿಸಿಕೊಂಡ ಕಲಾವಿದೆ ಜಯಶ್ರೀ ಶರ್ಮರ ಕುರಿತು ಎರಡೇ ಮಾತುಗಳಲ್ಲಿ ಹೇಳಬಹುದಾದದ್ದು. ಚಿತ್ರಕಲೆ ಎಂಬುದು ಜಯಶ್ರೀಯವರಿಗೆ ಅನ್ನದ ದಾರಿಯಾಗಿ ಕಂಡಿದ್ದಲ್ಲ ಬದಲಾಗಿ ಜೀವಸೆಲೆಯಾಗಿ ಪರಿಣಮಿಸಿದೆ ಅವರೆಂದೂ ಚಿತ್ರ ಕಲೆಯನ್ನು ಶಾಸ್ತ್ರೀಯವಾಗಿ ಕಲಿತವರಲ್ಲ ಅದು ಅವರ ಬದುಕಿನಲ್ಲಿ, ಕುಟುಂಬದಲ್ಲಿ ಹಾಸುಹೊಕ್ಕಾಗಿ ಬಂದದ್ದು. ಅವರ ಸಹೋದರ ಆಯುರ್ವೇದ ವೈದ್ಯ ಡಾ. ಜಯಪ್ರಕಾಶ್ ಕೂಡ ಚಿತ್ರಕಲಾವಿದರೇ. ಅಷ್ಟೆ ಅಲ್ಲ ಜಯಶ್ರೀಯವರ ಇಬ್ಬರು ಮಕ್ಕಳಾದ ಅಖಿಲ್ ಶರ್ಮಾ ಮತ್ತ ಅಂಕಿತ್ ಶರ್ಮಾ ಸಹ ಚಿತ್ರಕಲೆಯ ಬನಿಯಲ್ಲಿ ಮುಳುಗಿದವರೇ. ಒಟ್ಟಿನಲ್ಲಿ ಹೇಳುವುದಾದರೆ ಅವರದು ಚಿತ್ರಕಲೆಯನ್ನು ಉಸಿರಾಡುವ ಕುಟುಂಬ.

ಮೂಲತಃ ಪುತ್ತೂರು ಬಳಿಯ ಕಡಬದವರಾದ ಜಯಶ್ರೀಯವರ ತಂದೆ ಡಾ. ಸಿ.ಎನ್. ಬಿ ನಾಯರ್ ಹಾಗೂ ತಾಯಿ ಶಾಂತಕುಮಾರಿ. ಜೀವನದ ಯಾವ ಘಟ್ಟದಲ್ಲಿ ಚಿತ್ರಕಲೆ ಎಂಬುದು ಅವರ ಉಸಿರಾಯಿತು ಎಂಬ ಪ್ರಶ್ನೆಗೆ, ಅವರ ತಂದೆ ತಾಯಿಯವರ ನಿರಂತರ ಪ್ರೋತ್ಸಾಹವೇ ಕಾರಣ ಎಂದು ಈಗಲೂ ಅವರು ನೆನೆಯುತ್ತಾರೆ. ಪ್ರೌಢಶಾಲೆಯಲ್ಲಿರುವಾಗ ಸಹೋದರನೊಂದಿಗೆ ಸೇರಿ ಧರ್ಮಾಧಿಕಾರಿ, ಶ್ರೀ ವಿರೇಂದ್ರ ಹೆಗ್ಗಡೆಯವರ ಭಾವಚಿತ್ರವನ್ನು ಬರೆದು ಚಿನ್ನದ ಪದಕ ಪಡೆದ ಜಯಶ್ರೀಯವರು ಅಲ್ಲಿಂದ ಮುಂದೆಂದೂ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆಯದೇ ಮರಳಿದವರಲ್ಲ.

ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶ್ರೀ ಜನಾರ್ಧನ್ ಮತ್ತು ಶ್ರೀ ಅನಂತರಾಮ್ ತಮ್ಮ ಚಿತ್ರಕಲೆಯನ್ನು ಕೊಂಡು ಪ್ರೋತ್ಸಾಹಿಸಿದ್ದನ್ನು ಅವರು ನೆನೆಯುತ್ತಾರಾದರೂ  ಅವರದು ಬಹುತೇಕ ಏಕಲವ್ಯ ಕಲಿಕೆಯೇ ಎಂದರೆ ತಪ್ಪಾಗಲಾರದು, ಮುಂದೆ ಶ್ರೀಪತಿರಾಯರ ಮಾರ್ಗದರ್ಶನದಲ್ಲಿ ಚಿತ್ರಗಳಿಗೆ ಸಂಬಂಧಿಸಿದ ಹಲವು ಹಂತದ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಸತತ ಅಭ್ಯಾಸದಿಂದ ತಮ್ಮದೇ ಶೈಲಿಯನ್ನು ರೂಢಿಸಿಕೊಂಡ ಜಯಶ್ರಿ, ಚಾರ್ ಕೋಲ್, ಇಂಡಿಯನ್ ಇಂಕ್, ತಂಜಾವೂರು ಶೈಲಿ, ಮಧುಬನಿ, ಜಲವರ್ಣ,  ಪೆನ್ಸಿಲ್ ಸ್ಕೆಚ್ ಹೀಗೆ ಚಿತ್ರಕಲೆಯ ಹಲವು ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಪಾರಂಪರಿಕ ಚಿತ್ರಕಲೆಯಲ್ಲಿ ಎರಡು ತಿಂಗಳ ತರಬೇತಿಯನ್ನು ಪಡೆದಿದ್ದಾರೆ. ಅಲ್ಲದೆ ಬಳೆ ಚೂರುಗಳನ್ನು ಅಂಟಿಸುವಿಕೆಯ ಮೂಲಕ ಕಲೆಯನ್ನು ಅರಳಿಸುವುದನ್ನೂ ಜಯಶ್ರೀ ಕರಗತ ಮಾಡಿಕೊಂಡಿದ್ದಾರೆ.

ತಂಜಾವೂರು ಶೈಲಿ

ಮಧುಬನಿ

ಜಲವರ್ಣ 

ಪೆನ್ಸಿಲ್ ಸ್ಕೆಚ್



ಚಾರ್ ಕೋಲ್ ಚಿತ್ರಗಳು 



ಗಾಜಿನ ಬಳೆಗಳಿಂದ ರಚಿಸಿದ ಚಿತ್ರ

ಮಂಗಳೂರು ವಿಶ್ವವಿದ್ಯಾನಿಲಯದಿಂದ ಸೂಕ್ಷ್ಮಾಣುಜೀವವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದ ನಂತರ ಜಯಶ್ರೀಯವರು ಅನೇಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಆದರೂ, ಅವರ ಒಲವು ಚಿತ್ರಕಲೆಯೇ ಆಗಿದ್ದು, ಈಗ ಚಿತ್ರಕಲೆಯಲ್ಲಿ ತಮ್ಮನ್ನು ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ತಮ್ಮ ಪತಿ ಶ್ರೀ ಮನೋಹರ ಶರ್ಮಾರೊಡನೆ ಮಂಗಳೂರಿನಲ್ಲಿ ನೆಲೆಸಿರುವ ಜಯಶ್ರೀ ಶರ್ಮಾ ‘ಕರಾವಳಿ ಚಿತ್ರಕಲಾ ಚಾವಡಿ’ಯ ಕ್ರಿಯಾಶೀಲ ಸದಸ್ಯೆಯಾಗಿದ್ದಾರೆ ಹಾಗೂ ಹಲವಾರು ಚಿತ್ರಕಲಾ ಪ್ರದರ್ಶನ ಮತ್ತು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನ  ಜೇಸಿ ಸಂಸ್ಥೆ ಅವರಿಂದ ಉತ್ತಮ ಕಲಾವಿದೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಚಿತ್ರಕಲೆಯಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಇವರು ೨೦೦೩ ರಲ್ಲಿ ಮಂಗಳೂರಿನಲ್ಲಿ ನಡೆದ ‘ಭಾವನಾ’ ಎಂಬ ಹೆಸರಿನ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ ಹಾಗೂ ೨೦೧೦ ರಲ್ಲಿ ಮೂಡಬಿದರೆಯ ಆಳ್ವಾಸ್ ನುಡಿಸಿರಿಯಲ್ಲಿ ‘ಸೃಜನಾ’ ಎಂಬ ಹೆಸರಿನ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ, ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ, ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಹಾಗೂ ಇತ್ತೀಚೆಗೆ ಮುಂಬೈನ ಪ್ರತಿಷ್ಟಿತ ನೆಹರು ಸರ್ಕ್ಯುಲರ್  ಆರ್ಟ್ ಗ್ಯಾಲರಿಯಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಮುಂಬೈನ ಪ್ರಸಿದ್ಧ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಮುಂದಿನ ವರ್ಷ ೨೦೨೩ರ ಅಕ್ಟೋಬರ್ ನಲ್ಲಿ ಚಿತ್ರಕಲಾ ಪ್ರದರ್ಶನ ನಡೆಸಲಿದ್ದಾರೆ.

 








ಇವರ ಕೆಲವು ಚಿತ್ರಗಳನ್ನು ಗಮನಿಸಿದರೆ ಛಾಯಾಚಿತ್ರಗಳನ್ನು ನೋಡುತ್ತಿದ್ದೇವೆ ಎಂಬ ಭಾವ ನಮ್ಮಲ್ಲಿ ತುಂಬುತ್ತದೆ. ಅಷ್ಟು ಸ್ಪಷ್ಟವಾಗಿ ಭಾವಾಭಿವ್ಯಕ್ತಿಯನ್ನು ಇವರ ರೇಖೆಗಳಲ್ಲಿ ನಾವು ಕಾಣಬಹುದು ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸುತ್ತಿರುವ ತಾಯಿ ಮಗಳು, ವಿವಿಧ ವೃತ್ತಿಗಳನ್ನು ಪ್ರತಿನಿಧಿಸುವ ಮಹಿಳೆಯರನ್ನು ಚಿತ್ರಿಸುತ್ತಿರುವ ಕಲಾವಿದೆ, ಬುಡಕಟ್ಟು ಯುವತಿ, ಬಹುರೂಪಿ ಕಲಾವಿದ, ಭರತನಾಟ್ಯ ಮಾಡುತ್ತಿರುವ ಜೋಡಿ, ಮುಂತಾದ ಚಿತ್ರಗಳಲ್ಲಿ ಕಂಡುಬರುವ ವರ್ಣಸಂಯೋಜನೆ ಹಾಗೂ  ನಿಖರತೆ, ಜಯಸ್ರೀ ಅವರಿಗೆ ಕುಂಚದ ಮೇಲಿರುವ ಹಿಡಿತವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಇವರ ಚಾರ್ ಕೋಲ್ ಕಲಾಕೃತಿಗಳು ಮತ್ತು ಪೆನ್ಸಿಲ್ ಸ್ಕೆಚ್ ಗಳನ್ನು ನೋಡಿದರೆ ಕಪ್ಪು ಬಿಳುಪು ಫೋಟೋಗಳನ್ನು ನೋಡಿದಂತೆ ಅನಿಸುತ್ತದೆ.

ಜಯಶ್ರೀ ಬರೆದಿರುವ ಕೆಲವು ಹನಿಗವನಗಳು

ಪರಿವರ್ತನೆೆ 

ಹೂವಿನ

ಸೊಬಗನು

ಮೊಗ್ಗಿನಲಿ

ಬಚ್ಚಿಟ್ಟಿತು ಭುವಿ;

ಮೊಗ್ಗಿನ

ಸೊಬಗನು

ಕವಿತೆಯಲ್ಲಿ

ಬಿಚ್ಚಿಟ್ಟನು

ಕವಿ.  


ಕಲೆ

ಕಲೆಯ ಹುಟ್ಟಿಗೆ ಬೇಕೇನು ಶೋಕಿಯ ಚಪಲ

ಕೆಸರಿನಲ್ಲಿ ಹುಟ್ಟುವುದಲ್ಲವೆ

ಕಮಲ?

ಹುಟ್ಟುವುದು ಕಲೆ

ಎಲ್ಲಿದ್ದರೂ ಅದರ ಸೆಲೆ;

ಪಡೆಯುವುದು ಶಾಶ್ವತ ನೆಲೆ

ಅದುವೇ

ಕಲೆ!  

 

ಮಾತು, ಮೌನ

ನುಡಿಯಲಾಗದೆ ಉಳಿದ

ಮಾತುಗಳು ಹಲವು

ವ್ಯಕ್ತಪಡಿಸದೆ ಅಳಿದ

ಭಾವಗಳೊಡಗೂಡಿ

ಮೌನ ತಾಳಿದೆ

ಮನಸು ಅಪರಂಜಿಯಾಗಿ

ಮೌನ ಮುರಿದು

ಬೆಳ್ಳಿಯಾಗುವ

ತವಕವಿದೆ ಇಲ್ಲಿ

ಮನಸಿನಾಳದ

ಬಯಕೆಗಳ

ಭಾವುಕತೆ ಚೆಲ್ಲಿ


ಪ್ರಶಸ್ತಿ ವಿಜೇತ ಚಿತ್ರಗಳು ಮತ್ತು ವಿವರಗಳು




   

ಹರ್ಯಾಣದ ಹಿಸಾರಿನ ಪ್ರಸಿದ್ಧ ಟ್ಯಾಲೆಂಟಿಲಾ ಫೌಂಡೇಶನ್ ದಿ.೨೯/೧೨/೨೦೨೧ ರಿಂದ ೧೫/೦೧/೨೦೨೨  ರವರೆಗೆ ಆಯೋಜಿಸಿದ್ದ “ರಂಗಾಕಾಶ್"” ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಮೊದಲ ಸ್ಥಾನ (೨೦೨೨).

ಕಲ್ಕೂರ ಪ್ರತಿಷ್ಠಾನ, ಮಂಗಳೂರು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಸಿದ ಗೋವರ್ಧನಧಾರಿ ಕೃಷ್ಣನ ಜಲವರ್ಣ ಚಿತ್ರಕಲಾ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ (೨೦೨೧).

"ನಮ್ಮ ಕುಡ್ಲ ವಾಹಿನಿ” ಮಂಗಳೂರು ನವರಾತ್ರಿ ಉತ್ಸವದ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ (೨೦೨೧).

@ಆರ್ಟ ಕಾಂಟೆಸ್ಟ್ ಇಂಡಿಯಾ ೨೦ ಆಯೋಜಿಸಿದ ರಾಷ್ಟçಮಟ್ಟದ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ (೨೦೨೦).

೨೩ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳದಲ್ಲೇ ಭಾವಚಿತ್ರ ಬಿಡಿಸುವ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ (೨೦೨೦).

ಕಾರ್ಟೂನ್ ಹಬ್ಬ” ಕುಂದಾಪುರ ನಡೆಸಿದ ಸ್ಪರ್ಧೆಯಲ್ಲಿ ರಚಿಸಿದ ಶ್ರೀ ಟಿ.ಎನ್.ಶೇಷನ್ ಅವರ ಕಾರ್ಟೂನ್‌ಗೆ ಅತ್ಯುತ್ತಮ ಕಾರ್ಟೂನ್ ಪ್ರಶಸ್ತಿ (೨೦೧೯)

ನಮ್ಮ ‘ಸವಿಜ್ಞಾನ’ ಪತ್ರಿಕೆಯ ಪ್ರತಿ ತಿಂಗಳ ಸಂಚಿಕೆಗೆ ವಿಜ್ಞಾನಕ್ಕೆ ಸಂಬAಧಿಸಿದ ವ್ಯಂಗ್ಯಚಿತ್ರಗಳನ್ನು ಬರೆದುಕೊಡುತ್ತಿರುವ ಹೆಮ್ಮೆಯ ಕಲಾವಿದೆಯಾಗಿರುವ ಶ್ರೀಮತಿ ಜಯಶ್ರೀ ಶರ್ಮರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ಕಲೆಯ ಜೀವಂತಿಕೆಯನ್ನು ಈ ಲೇಖನದಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೇನಿದ್ದರೂ ನೋಡಿ, ಅನುಭವಿಸಿ, ತಿಳಿಯಬೇಕಾದ ಸಂಗತಿ. ಇವರು ಹಲವು ಬಗೆಯ ಚಿತ್ರಕಲೆಯ ಜೊತೆಗೆ ಹನಿಗವನಗಳು, ಸಂಗೀತ, ಸಾಹಿತ್ಯ, ಕಿರು ಚಿತ್ರಗಳಲ್ಲಿ ನಟನೆ ಮುಂತಾದ ಹಲವಾರು ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಅರ್ಥಪೂರ್ಣ ಬದುಕು ನಡೆಸುತ್ತಿದ್ದಾರೆ. ಶ್ರೀಮತಿಯವರ ಭವಿಷ್ಯ ಉಜ್ವಲವಾಗಲಿ, ಚಿತ್ರಕಲೆಯ ಧ್ಯಾನದಲ್ಲಿ ಔನ್ನತ್ಯ ಸಾಧಿಸಲಿ ಎಂಬುದೇ ನಮ್ಮ ಹಾರೈಕೆ.. 


ಲೇಖನ 

ಶ್ರೀ ರಾಘವೇಂದ್ರ ಮಯ್ಯ

ಸರ್ಕಾರಿ ಪ್ರೌಢ ಶಾಲೆಬೈರಾಪಟ್ಟಣ

ಚೆನ್ನಪಟ್ಟಣ

ರಾಮನಗರ ಜಿಲ್ಲೆ.





ಶ್ರೀ ಲಕ್ಷ್ಮಿ ಪ್ರಸಾದ್ ನಾಯಕ್

ಸರ್ಕಾರಿ ಪ್ರೌಢ ಶಾಲೆಕೆಂಗೇರಿ

ಬೆಂಗಳೂರು ದಕ್ಷಿಣ ಜಿಲ್ಲೆ.

3 comments:

  1. ಪರಿಚಯಿಸಿದ್ದಕ್ಕೆ ಧನ್ಯವಾದಗಳು, ಮೇಡಂ ರ ಕಲೆ ತುಂಬಾ ಖುಷಿ ನೀಡಿತು. ಅವರಿಗೆ ಹಾರ್ದಿಕ ಅಭಿನಂದನೆಗಳು.

    ReplyDelete
  2. This article is very much motivating. Thanks for sharing about such personality.

    ReplyDelete
  3. ಅಭಿಜಾತ ಕಲಾವಿದೆಯ ಸ್ಫೂರ್ತಿದಾಯಕ ಸೊಗಸಾದ ಪರಿಚಯ

    ReplyDelete