ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, March 4, 2022

ಸಹಸ್ರಮಾನದ ವಿಜ್ಞಾನಿ, ಮಹಾನ್‌ ಮಾನವತಾವಾದಿ ಐನ್‌ಸ್ಟೀನ್‌


ಸಹಸ್ರಮಾನದ ವಿಜ್ಞಾನಿ, ಮಹಾನ್‌ ಮಾನವತಾವಾದಿ ಐನ್‌ಸ್ಟೀನ್‌

ಲೇಖಕರು:    ರಾಮಚಂದ್ರ ಭಟ್ ಬಿ.ಜಿ. 

                ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆಬ್ಯಾಟರಾಯನಪುರ,

ಮೈಸೂರು  ರಸ್ತೆಬೆಂಗಳೂರು


ಜಗತ್ತು ಕಂಡ ಅತ್ಯಂತ ಮೇಧಾವಿ ವಿಜ್ಞಾನಿಗಳಲ್ಲಿ ಒಬ್ಬರು, ಸಾಪೇಕ್ಷ ಸಿದ್ಧಾಂತದ ರೂವಾರಿ, ಆಲ್ಬರ್ಟ್ ಐನ್ ಸ್ಟೀನ್. ಅವರ ಜನ್ಮದಿನದ ಸ್ಮರಣೆಯಲ್ಲಿ ಅವರ ವ್ಯಕ್ತಿತ್ವದ ಪರಿಚಯವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ,  ಶಿಕ್ಷಕ ರಾಮಚಂದ್ರ ಭಟ್.

ನಿಮ್ಮ ಕೈಯನ್ನು ಬಿಸಿಯಾದ ಸ್ಟವ್ ಮೇಲಿಡಿ, ಒಂದು ನಿಮಿಷ ಎರಡು ಗಂಟೆಯಂತೆ ಭಾಸವಾಗುತ್ತದೆ. ಹಾಗೆಯೇ ಸುಂದರ ಹುಡುಗಿಯ ಪಕ್ಕದಲ್ಲಿ ಕುಳಿತುಕೊಳ್ಳಿ, ಎರಡು ಗಂಟೆ ಸಮಯವೂ ಒಂದು ನಿಮಿಷದಂತೆ ತೋರುತ್ತದೆ. ಇದೇ ಸಾಪೇಕ್ಷ ಸಿದ್ಧಾಂತ!!! ”

ಐನ್‌ಸ್ಟೀನ್‌ ತಮ್ಮ ಸಾಪೇಕ್ಷ ಸಿದ್ಧಾಂತದ ಕುರಿತು ಹೇಳಿದ್ದನ್ನಲಾದ ತಮಾಷೆಯ ಸರಳ ವಿವರಣೆ 1929 ರ ಮಾರ್ಚ್‌ ತಿಂಗಳ “The New York Times” ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಹೇಗೂ ಇರಲಿ. ಎಂತಹ ಅದ್ಭುತ ವಿವರಣೆಯಲ್ವೇ? ಎಂತಹವರಿಗೂ ಅರ್ಥವಾಗಬೇಕು!!!!. ಆದರೂ, ಐನ್‌ಸ್ಟೀನ್‌ರವರ ಅಂದಿನ ಸಂಶೋಧನೆಗಳನ್ನು ಅರಿಯುವುದು ಇಂದಿಗೂ ಕಠಿಣವಾಗಿದೆ ಎಂದರೆ ಅವರು ಅದೆಷ್ಟು  ಪ್ರತಿಭಾನ್ವಿತ ವಿಜ್ಞಾನಿ ಇರಬೇಕು. ಅವರಿಗೆ ನೋಬಲ್‌ ಪ್ರಶಸ್ತಿ ದೊರೆತದ್ದು ದ್ಯುತಿ ವಿದ್ಯುತ್‌ ಪರಿಣಾಮದ ಆವಿಷ್ಕಾರಕ್ಕೆ !!!  ಬಹುಷಃ ಸಾಪೇಕ್ಷ ಸಿದ್ಧಾಂತಕ್ಕೆ ಸಲ್ಲುವ ಉಪಾಧಿ, ಪುರಸ್ಕಾರಗಳು ಇನ್ನೂ ಜಗತ್ತಿನಲ್ಲೀ ಸ್ಥಾಪಿಸಿಯೇ ಇಲ್ಲವೇನೋ!!!    

    ಫೆಬ್ರವರಿ 2016 ರಲ್ಲಿ , ಗುರುತ್ವಾಕರ್ಷಣೆಯ ಅಲೆಗಳು (GWs) ಮೊದಲ ಬಾರಿಗೆ ಪತ್ತೆಯಾದವು. ಈ ಆವಿಷ್ಕಾರವು ಒಂದು ಶತಮಾನದ ಹಿಂದೆ ಆಲ್ಬರ್ಟ್ ಐನ್‌ಸ್ಟೀನ್‌ ರ  ಭವಿಷ್ಯವನ್ನು ದೃಢಪಡಿಸಿತು ಮತ್ತು ಖಗೋಳಶಾಸ್ತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿತು. ಅಂದಿನ ಅವರ ಸಿದ್ಧಾಂತವನ್ನು ಆಧರಿಸಿ ಇಂದಿಗೂ ಸಂಶೋಧನೆಗಳು ನಡೆಯುತ್ತಲೇ ಇವೆ ಎನ್ನುವುದಕ್ಕೆ ಸಾಕ್ಷಿ ಇದು. ಐನ್‌ಸ್ಟೀನ್‌ ತಮ್ಮ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಬಳಸಿ ಇದನ್ನು ವಿವರಿಸಿದ್ದರು. ಎರಡು ಅಥವಾ ಹೆಚ್ಚಿನ ಬೃಹತ್ ವಸ್ತುಗಳು (ಕಪ್ಪು ರಂಧ್ರಗಳು, ನ್ಯೂಟ್ರಾನ್ ನಕ್ಷತ್ರಗಳು, ಇತ್ಯಾದಿ) ವಿಲೀನಗೊಂಡಾಗ ಗುರುತ್ವಾಕರ್ಷಣೆಯ ಅಲೆಗಳು ಉತ್ಪತ್ತಿಯಾಗುತ್ತವೆ. ಇವು ಅನೇಕ ಬೆಳಕಿನ ವರ್ಷಗಳ ದೂರದಲ್ಲಿ ಪತ್ತೆಹಚ್ಚಬಹುದಾದ ತರಂಗಗಳನ್ನು ಉಂಟುಮಾಡುತ್ತವೆ. ಇದು ಆಲ್ಬರ್ಟ್ ಐನ್‌ಸ್ಟೀನ್‌ ಜ್ಞಾನದ ಆಳಕ್ಕೆ, ಅವರ ಸಂಶೋಧನಾ ವಿಶ್ಲೇಷಣಾ ಸಾಮರ್ಥ್ಯಗಳಿಗೆ ಹಿಡಿದ ಕೈಗನ್ನಡಿ.

    ಇಂತಹ ಪ್ರಗಲ್ಭ ವಿಜ್ಞಾನಿ ಐನ್‌ಸ್ಟೀನ್‌ 1879 ಮಾರ್ಚ್ 14ರಂದು ಜರ್ಮನಿಯ ಉಲ್ಮ್ ನಲ್ಲಿ ಜನಿಸಿದರು. ತಂದೆ- ಹರ್ಮನ್ ಐನ್‌ಸ್ಟೀನ್‌. ತಾಯಿ- ಪೌಲಿನ್ ಐನ್‌ಸ್ಟೀನ್‌. ಬಾಲ್ಯದಲ್ಲಿ ಅವರನ್ನು ಕಾಡಿದ ಸಮಸ್ಯೆಯೆಂದರೆ ತೊದಲುವಿಕೆ. ಮನೆ ಮಂದಿಗೆಲ್ಲಾ ಇದು ನೋವಿನ ವಿಚಾರವಾಗಿತ್ತು.  ಹೀಗಾಗಿ ಆರಂಭದಲ್ಲಿ ಐನ್‌ಸ್ಟೀನ್‌ ಕೆಲವು ವರ್ಷಗಳವರೆಗೆ ಮಾತನಾಡುತ್ತಿರಲಿಲ್ಲವಂತೆ!!!. ಬಾಲಕ ನಿಧಾನವಾಗಿ ಮಾತು ಆರಂಭಿಸಿದ. ಆರಂಭದಲ್ಲಿ  ಐನ್‌ಸ್ಟೀನ್‌ ಈ ಕಾರಣದಿಂದಲೇ ಹೆಚ್ಚು ಮೌನಿಯಾಗಿರುತ್ತಿದ್ದರಂತೆ. ಇದೇ ಅಂತರ್ಮುಖಿ ವ್ಯಕ್ತಿತ್ವ ಆಲೋಚನೆ ಮಾಡುವ ಅಭ್ಯಾಸ ರೂಢಿಸಿರಬಹುದು. ಇದು ವಿಜ್ಞಾನ ಕ್ಷೇತ್ರಕ್ಕಂತೂ ಅದ್ಭುತ ಲಾಭ ನೀಡುತ್ತಲೇ ಇರುವುದನ್ನು ನಾವು ನೋಡುತ್ತಿದ್ದೇವೆ.

Albert Einstein ಎಂಬ ಹೆಸರಿನಲ್ಲಿರುವ ಅಕ್ಷರಗಳನ್ನು ಬಳಸಿದರೆ Ten elite brains ಎಂಬ ಪದ ಪುಂಜ ರೂಪುಗೊಳ್ಳುತ್ತದೆ. ಬಹುಶಃ, ಇದೇ ಅವರ ಮಿದುಳಿನ ಸಾಮರ್ಥ್ಯವನ್ನು ಸೂಚಿಸುತ್ತದೆಯೇನೋ!!!!  

1900 ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದ ಇವರು ಶಿಕ್ಷಕರಾಗುವ ಆಸೆಯಿಂದ ಕಂಡಕಂಡಲ್ಲಿ ಅರ್ಜಿಹಾಕಿ 2 ವರ್ಷ ಅಲೆದಲೆದು ಸೋತು ಸುಣ್ಣವಾದರು. ನೌಕರಿಯಂತೂ ಸಿಗಲಿಲ್ಲ. ಕೊನೆಗೂ 'ಬರ್ನ್' ನಗರದ "ಪೇಟೆಂಟ್ ಆಫೀಸ್"ನಲ್ಲಿ ಕಾರಕೂನನಾಗಿ ಕೆಲಸ ಮಾಡಿ ಹೊಟ್ಟೆ ಹೊರೆಯಬೇಕಾಯಿತು. ಹುಟ್ಟು ಗುಣ ಸುಟ್ಟರೂ ಹೋಗದು !! ಐನ್‌ಸ್ಟೀನ್‌ ಅಧ್ಯಯನಶೀಲತೆಯೇ ಅಂಥದ್ದು!! ಅದಕ್ಕೆ ತಡೆ ಎಲ್ಲಿಯದು?  ಡಾಕ್ಟರೇಟ್‌ ಪಡೆದುಕೊಂಡು, ಜೂರಿಚ್‌ ವಿಶ್ವವಿದ್ಯಾಲಯದಲ್ಲಿ ಸಹ-ಪ್ರಾಧ್ಯಾಪಕ ವೃತ್ತಿಯೊಂದಿಗೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು.

ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೀನ್‌ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ‘ಬೋಸ್-ಐನ್‌ಸ್ಟೀನ್‌ ಸ್ಟಾಟಿಸ್ಟಿಕ್ಸ್' ನೀಡಿದ್ದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರವೇ ಸರಿ. ಇವರೀರ್ವರ ಸಂಶೋಧನೆಯಾದ ದ್ರವ್ಯದ ೫ನೇ ಸ್ಥಿತಿಗೆ ಬೋಸ್‘-ಐನ್‌ಸ್ಟೀನ್‌ ಕಾಂಡನ್ಸೇಟ್‌ (BEC) ಎಂದೇ ಹೆಸರು. ‘ಐನ್‌ಸ್ಟೀನ್‌ ರೆಫ್ರಿಜರೇಟರ್', ‘ಐನ್‌ಸ್ಟೀನ್‌-ಕಾರ್ಟನ್ ಸಿದ್ಧಾಂತ', ‘ಐನ್‌ಸ್ಟೀನ್‌-ಇನ್ಫೆಲ್ಡ್-ಹಾಫ್ಮನ್ ಸಮೀಕರಣಗಳು ', ‘ಐನ್‌ಸ್ಟೀನ್‌-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್' ಮೊದಲಾದವು ಇವರ ಪ್ರಖ್ಯಾತ ಸಾಧನೆಗಳಾಗಿವೆ. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ (ಕಾಸ್ಮಾಲಜಿ) ಕ್ಷೇತ್ರಗಳಿಗೂ ಕೂಡ ಮಹತ್ತರವಾದ ಕೊಡುಗೆ ನೀಡಿದ್ದಾರೆ. ದ್ಯುತಿವಿದ್ಯುತ್ ಪರಿಣಾಮದ ಮೇಲಿನ ಸಂಶೋಧನೆ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಇವರು ಸಲ್ಲಿಸಿದ ಸೇವೆಗಾಗಿ 1921 ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ವಿಶ್ವವಿಖ್ಯಾತ ಸಮೀಕರಣ E= mc2   ರಾಶಿ ಮತ್ತು ಶಕ್ತಿಯ ಅಂತರ್ಪರಿವರ್ತನೆಗಳನ್ನು ವಿವರಿಸುತ್ತದೆ.  ಇದೇ ಸೂತ್ರ ಪರಮಾಣು ಬಾಂಬ್ತಯಾರಿಕೆಗೆ  ಕಾರಣವಾಗಿದ್ದು ದುರ್ದೈವವೇ ಸರಿ.

ಗಾಡ್​​ ಲೆಟರ್ಎಂದೇ ಪ್ರಖ್ಯಾತಿ ಪಡೆದ ಪತ್ರದಲ್ಲಿ, ಐನ್‌ಸ್ಟೀನ್ ದೇವರ ಬಗ್ಗೆ ತಮ್ಮ ಅಭಿಪ್ರಾಯ ಹೀಗೆ ಹೇಳುತ್ತಾರೆ.  "ದೇವರು"  ಎನ್ನುವ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನ.  ಅವರ ಈ ಪತ್ರವು 2.9 ಮಿಲಿಯನ್ ಡಾಲರ್ಗಳಿಗೆ ಹರಾಜಾಗಿ ವಿಜ್ಞಾನ ಕ್ಷೇತ್ರದಲ್ಲಿ  ಹೊಸ ಸಂಚಲನವನ್ನು ಉಂಟುಮಾಡಿತು.

2000 ದಲ್ಲಿ ವಿಶ್ವದಾದ್ಯಂತದ ಒಂದು ಸಮೀಕ್ಷೆ ನಡೆಸಲಾಯಿತು. ಪ್ರಖ್ಯಾತ "ಟೈಮ್ಸ್ ಪತ್ರಿಕೆ"ಯ 20 ನೆಯ ಶತಮಾನದ ಅತ್ಯಂತ ಪ್ರಖ್ಯಾತ ವ್ಯಕ್ತಿಯನ್ನು ಆಯ್ಕೆ ಮಾಡಲು  ನಡೆಸಿದ ‌ ಈ ಸಮೀಕ್ಷೆಯಲ್ಲಿ 'ಐನ್‌ಸ್ಟೀನ್‌ ' ಅವರು ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಇದು ಅವರ ಸಾಧನೆಗೆ ಅಳಿವಿಲ್ಲ. ಅದು ಮುಗಿಲೆತ್ತರದ್ದೆನ್ನಲು ಸಾಕ್ಷಿಯಾಗಿದೆ. ಐನ್ಸ್ಟೀನ್‌ ರವರ ಬದುಕು, ಸಂಘರ್ಷ, ಹಾಗೂ ಸಾಧನೆಗಳು ಸಹಸ್ರಾರು ತಲೆಮಾರುಗಳವರೆಗೂ ಅಳಿಯದೇ ಜನಮಾನಸದಲ್ಲಿ ಉಳಿದು ಸ್ಫೂರ್ತಿ ಉಂಟು ಮಾಡುವಂತದ್ದು.

ಕೊನೆಯದಾಗಿ ಈ ಘಟನೆಯ ಜೊತೆಗೆ ಲೇಖನವನ್ನು ಮುಕ್ತಾಯ ಮಾಡ ಬಯಸುತ್ತೇನೆ. ಬಾಲಕ ಐನ್‌ಸ್ಟೀನ್‌ ತಮ್ಮ 5ನೇ ವರ್ಷದಲ್ಲಿ ಮೊದಲ ಬಾರಿಗೆ ಅಚ್ಚರಿಯ ವಸ್ತುವೊಂದನ್ನು ಅವರ ತಂದೆಯವರ ಬಳಿ ನೋಡಿದರು. ಅದೇ ಪುಟ್ಟ ಪಾಕೆಟ್ ದಿಕ್ಸೂಚಿ. ಈ ಪಾಕೆಟ್ ದಿಕ್ಸೂಚಿಯನ್ನು ಯಾವ ದಿಕ್ಕಿಗೆ ಹಿಡಿದರೂ ಅದು ದಕ್ಷಿಣೋತ್ತರವಾಗಿಯೇ ನಿಲ್ಲುತ್ತಿತ್ತು . ಬಾಲಕನಿಗೆ ಇದೇ ಮಹದಾಶ್ಚರ್ಯ ಕುತೂಹಲ ಉಂಟುಮಾಡಿತು.  ಆಗ ಮೂಡಿದ ಕುತೂಹಲ ಗರಿಗೆದರಿ ವಿಜ್ಞಾನದಾಗಸದಲ್ಲಿ ಧ್ರುವ ನಕ್ಷತ್ರದಂತೆ ಮಿನುಗುವಂತೆ ಮಾಡಿತು. ಅಳಿವಿರದ ಕೀರ್ತಿ ಶಿಖರಕ್ಕೇರಿಸಿತು. ನಮ್ಮ ತರಗತಿಗಳಲ್ಲೂ ಇಂತಹ ಪುಟಾಣಿ ಐನ್‌ಸ್ಟೀನ್‌ ಗಳು ಬಹಳಷ್ಟಿಬಹುದು !!! ಅವರಲ್ಲೂ ಉಗ್ಗುವ, ತೊದಲುವ ಅಥವಾ ಇನ್ಯಾವುದೇ ಸಮಸ್ಯೆಗಳು ಇರಬಹುದು. ಅವನ್ನು ಗಮನಿಸಿ ಆತ್ಮ ವಿಶ್ವಾಸ ಮೂಡುವಂತೆ ಮಾಡುವ, ಸೂಕ್ತ ಚಟುವಟಿಕೆ ಆಧಾರಿತ, ಜ್ಞಾನವನ್ನು ಕಟ್ಟಿಕೊಳ್ಳುವಂತಹ ಸುಗಮಗಾರಿಕೆಯನ್ನು ಮಾಡುವ  ಜಾವಾಬ್ದಾರಿ ನಮ್ಮದೇ. ಈ ಮೂಲಕ ಶ್ರೇಷ್ಠ ಮಾನವತಾವಾದಿಗೆ ಗೌರವ ಸಲ್ಲಿಸೋಣ.

ಹ್ಯಾಪಿ ಬರ್ಥ್‌ ಡೇ ಜೀನಿಯಸ್‌ !!!.

ಸಾಧನೆಗೆ ಸಾವಿಲ್ಲ ಗುಣಕೆ ಮತ್ಸರವಿಲ್ಲ

ಮಹಾನ್ ಮಾನವತಾವಾದಿಗೆ ಎಣೆ ಇಲ್ಲ

ಮೌನ ಬಂಗಾರವಾಯ್ತು ರಾಶಿ ಶಕ್ತಿಯಾಯ್ತು

ಹತ್ತು ಮಿದುಳುಗಳುಳ್ಳ ಮೇಧಾವಿಯ ಆವಿರ್ಭಾವವಾಯ್ತು



20 comments:

  1. Nice Article Sir. Albert Einstein was one of the Genius Scientist of the World. But his greatest Contribution are used for Creating Nuclear Weapons.That is Black face of Science,Albert Einstein always remembered as a wonderful Scientist as well as Kind hearted Human being.

    ReplyDelete
    Replies
    1. ರಾಮಚಂದ್ರ ಭಟ್ ಆಲ್ಬರ್ಟ್ ಐನ್ ಸ್ಟೀನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ತಾವು ಬರೆದ ಆರ್ಟಿಕಲ್ ಚೆನ್ನಾಗಿದೆ ವಿಜ್ಞಾನ ಕ್ಷೇತ್ರಕ್ಕೆ ಹಾಗೂ ವಿಜ್ಞಾನ ಬೋಧಕರಿಗೆ ಮಾರ್ಗದರ್ಶಿ ಆಗಿದೆ ಧನ್ಯವಾದಗಳೊಂದಿಗೆ ಶ್ರೀರಂಗನಾಥ .

      Delete
    2. ಅತಿ ಉಪಯುಕ್ತ ಮಾಹಿತಿ.
      ಎಲ್ಲ ರೀತಿಯ ಮಾಹಿತಿ ಒಳಗೊಂಡಿದೆ. ಧನ್ಯವಾದಗಳು ಸರ್

      Delete
    3. ಸರ್ ಉತ್ತಮ ಲೇಖನ ಐನ್ ಸ್ಟೀನ್ ರ ಜನ್ಮ ದಿನಕ್ಕೆ ಉತ್ತಮ ಕೊಡುಗೆ ನೀಡಿದ್ದೀರ.

      Delete
  2. Nice article bhat.congratulations.

    ReplyDelete
  3. The Hot analogy given by in the beginning made me to read it fully.. :)

    ReplyDelete
  4. ಎಲ್ಲಾ ಓದುಗ ಬಂಧುಗಳಿಗೆ ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು

    ReplyDelete
  5. ವಿಜ್ಞಾನ ಶಿಕ್ಷಕರು ಓದಲೆ ಬೇಕಾದ ಅತ್ಯಂತ ಮಹತ್ವದ ವಿಚಯ ಧನ್ಯವಾದಗಳು ಸರ್

    ReplyDelete
  6. Very nice sir .Thanks for the wonderful article

    ReplyDelete
  7. ಚಿಕ್ಕದಾಗಿ ಚೊಕ್ಕವಾಗಿ ಅರ್ಥಪೂರ್ಣವಾಗಿ ಮೂಡಿಬಂದಿದೆ

    ReplyDelete
  8. THANK YOU ALL FOR GREAT SUPPORT AND APPRECIATION.

    ReplyDelete
  9. ಸರ್ಆ,ಲ್ಬರ್ಟ್ ಐನ್ಸ್ಟೈನ್ ಸರ್ ರವರು ನಮ್ಮ ಕಣ್ಮುಂದೆ ಬಂದು ಹೋದಂಗ್ ಆಯ್ತು ಸರ್ ನಿಮ್ ಲೇಖನ.... ಶುಭಾಶಯಗಳು ಸರ್

    ReplyDelete
  10. ತುಂಬಾ ಅದ್ಬುತವಾದ ಲೇಖನ sir.👍🤝🤝💐💐🙏🙏

    ReplyDelete