ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, April 4, 2022

ಬಿಸಿಲ ಬೇಗೆಯ ಧರೆಗೆ ಹಳದಿ ಬಣ್ಣದ ಶೃಂಗಾರ

ಬಿಸಿಲ ಬೇಗೆಯ ಧರೆಗೆ ಹಳದಿ ಬಣ್ಣದ ಶೃಂಗಾರ

ರಮೇಶ.ವಿ.ಬಳ್ಳಾ  

ಅಧ್ಯಾಪಕರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು                     

ಗುಳೇದಗುಡ್ಡ. ಬಾಗಲಕೋಟ ಜಿಲ್ಲೆ

 

ಸುಡು ಬೇಸಗೆಯಲ್ಲೂ ತಮ್ಮ ಹಳದಿ ಬಣ್ಣದ ಹೂಗಳಿಂದ ನಮ್ಮ ಗಮನ ಸೆಳೆಯುವ 'ಅಮಲ್ತಾಸ್’ ಮರಗಳು ಔಷದೀಯ ಗುಣಗಳಿಂದಾಗಿ ನಮಗೆ ಉಪಯುಕ್ತವಾಗಿವೆ. ಈ ಮರದ ಹೂವಿನ ಬಗ್ಗೆ ಒಂದು ಪರಿಚಯಾತ್ಮಕ ಲೇಖನವನ್ನು ಬರೆದವರು ‘ಸವಿಜ್ಞಾನ’ ಲೇಖಕರ ಬಳಗಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಶಿಕ್ಷಕ ರಮೇಶ್.ವಿ ಬಳ್ಳಾ ಅವರು.

ಉರಿ ಬಿಸಿಲಿಗೆ ಹೊರಬರದೆ ಮನೆಯಲ್ಲೇ ಕುಳಿತುಕೊಳ್ಳಬೇಕೆಂದರೆ ಕೆಲ ಅನಿವಾರ್ಯ ಕೆಲಸಗಳು ನಮ್ಮನ್ನು ಒಳಗಡೆ ಕೂರಲು ಬಿಡುವುದಿಲ್ಲ. ಹಾಗಂತ, ಹೊರ ಬಿದ್ದಾಗ ನೆತ್ತಿ ಸುಡುವ ಬಿಸಿಲು ನಮ್ಮ ಮೈಯಲ್ಲಾ ಬೆವರಿಳಿಸಿ ಕೆಲವೇ ಕ್ಷಣಗಳಲ್ಲಿ ಬಟ್ಟೆ ತೊಯ್ದು ದೇಹ ನೀರು ನೀರಾಗುವಂತೆ ಮಾಡುತ್ತದೆ. ಎಪ್ರೀಲ್-ಮೇ ತಿಂಗಳು ಕಳೆಯುವುದೇ ದುಸ್ತರವೆಂಬಂತೆ ಪರಿಸ್ಥಿತಿ ಇಂದು ಬದಲಾಗಿದೆ. ಗಿಡಮರಗಳು ದಿನೆ ದಿನೇ ನೆಲಕ್ಕುರುಳುತ್ತಿವೆ. ಗಾಳಿ, ನೆರಳು, ತಂಪು ಇಲ್ಲದೇ ಬರೀ ಬಣಗುಡುವ ಬಯಲು ಒಂದು ಕಡೆಯಾದರೆ, ಅದೇ ಧರೆಯು ಉರಿ ಬಿಸಿಲಲ್ಲೂ ಹಳದಿ ಹೂಗಳಿಂದ ಶೃಂಗಾರಗೊಂಡು ನಿಸರ್ಗ ನಿರ್ಮಿತ ಚೆಲುವು ಪಡೆದದ್ದನ್ನು ನೋಡಿದರೆ ಅದು ನಿಜಕ್ಕೂ ಬೆರಗು ಎನಿಸುತ್ತದೆ. ಸೃಷ್ಠಿಯ ಸೊಬಗನ್ನು ಹೆಚ್ಚಿಸುವ ಈ ‘ಅಮಲ್ತಾಸ್’ ಹಳದಿ ಹೂಗಳು ಎಲ್ಲರ ಕಣ್ಮನ ಸೆಳೆಯುತ್ತವೆ.

ರಸ್ತೆಗಳ ಉದ್ದಕ್ಕೂ ಹೋಗುತ್ತಿದ್ದರೆ ಅಲ್ಲಲ್ಲಿ ಹಳದಿ ಹೂಗಳಿಂದ ತುಂಬಿದ ಅಮಲ್ತಾಸ್ ಮರಗಳು ನೋಡುಗರನ್ನು ಆಕರ್ಷಿಸುತ್ತವೆ. ನೋಡಲು ಗೊಂಚಲು ಗೊಂಚಲಾಗಿ ಜೋತು ಬಿದ್ದು ಕಂಗೊಳಿಸುವ ಈ ಹೂಗಳು ಅಲ್ಪ ಸ್ವಲ್ಪವೇ ಉದುರದೇ ಉಳಿದ ಎಲೆಗಳ ಮಧ್ಯೆ ಇಡೀ ಮರಕ್ಕೆ  ಛತ್ರಿಯ ರೂಪ ಕೊಡುತ್ತವೆ. ಅಲ್ಲಲ್ಲಿ ತೂಗುವ ಉದ್ದನೆಯ ಕೊಡೆ ಆಕಾರದ ಚಿಕ್ಕ ಕಂದು ಕಾಯಿಗಳು ನೇತಾಡುತ್ತಿರುತ್ತವೆ. ಬೇಸಿಗೆಯ ಸಮಯದಲ್ಲಿ ಬರದ ಛಾಯೆಯಿಂದ ಗಿಡಮರಗಳೆಲ್ಲ ಒಣಗಿ ಕೃಶವಾಗಿ, ಕಳಾಹೀನವಾದಾಗಲೂ ವಿಶಿಷ್ಟ ಚೆಲುವು ಬೀರುವ ಅಮಲ್ತಾಸ್ ಹಳದಿಯಿಂದ ಶೃಂಗಾರಗೊಂಡು ಕಂಗೊಳಿಸುತ್ತವೆ.

ಅಮಲ್ತಾಸ್ ‘ಗೋಲ್ಡನ್ ವರ್ ಟ್ರೀ’ ಎಂಬ ಸಾಮಾನ್ಯ ಹೆಸರಿನಿಂದ ಚಿರಪರಿಚಿತ. ಇದರ ವೈಜ್ಞಾನಿಕ ನಾಮಧೇಯ ‘ಕ್ಯಾಸಿಯಾ ಫಿಸ್ತುಲಾ’ (Cassia fistula). ಫ್ಯಾಬೇಸಿ (ಬಟಾಣಿ) ಕುಟುಂಬದ ಈ ಮರಕ್ಕೆ ಪರ್ಜಿಂಗ್ ಕ್ಯಾಸಿಯಾ, ಗೋಲ್ಡನ್ ಚೈನ್ ಟ್ರೀ, ಇಂಡಿಯನ್ ಲುಬರ್‌ನಮ್ ಎಂಬ ಇತರ ಹೆಸರುಗಳೂ ಇವೆ. ಆಗ್ನೇಯ ಏಶಿಯಾದಿಂದ ಪ್ರವೇಶಿಸಿದ ಈ ಮರ ಭಾರತ, ಶ್ರೀಲಂಕಾ, ಪಾಕಿಸ್ತಾನ್, ಥೈಲಾಂಡ್, ಕೆನಡಾ, ಈಜಿಪ್ಟ್,ಆಸ್ಟ್ರೇಲಿಯ ಮುಂತಾದ ಕಡೆ ತನ್ನ ನೆಲೆ ಕಂಡುಕೊಂಡಿದೆ. ಹತ್ತಾರು ದೇಶಗಳಲ್ಲದೇ ಹಿಮಾಲಯದ ೧೨೦೦ ಮೀಟರ್ ವ್ಯಾಪ್ತಿಯ ಮೇಲ್ಮೈ ಪ್ರದೇಶದಲ್ಲೂ ಇದು ತನ್ನ ಅಸ್ತಿತ್ವ  ಉಳಿಸಿಕೊಂಡಿದೆ. ಫ್ಯಾಬೇಸಿ ಕುಟುಂಬದ ಬಹುತೇಕ  ಮರಗಳು ಬರ ಸಹಿಷ್ಣುವಾಗಿದ್ದು, ನೀರಿಲ್ಲದ ಬರಗಾಲದಲ್ಲೂ ಒಣ ಮಣ್ಣಿನ ವಾಸನೆಯಲ್ಲಿ ಬಣ್ಣದ ಹೂ ಬಿಟ್ಟು ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ. ಇದೇ ಕುಟುಂಬದ ಬಹು ಚಿರಪರಿಚಿತ ಮೇ ಪ್ಲವರ್ ನಮಗೆಲ್ಲಾ ಗೊತ್ತು. ಅದು ಕೆಂಪು ಹೂಗಳಿಂದ ತುಂಬಿಕೊಂಡರೆ, ಇದು ಅರಿಶಿನ  ಬಂಗಾರ ಬಣ್ಣದ ಹೂಗಳಿಂದ ಬೇಸಿಗೆಯಲ್ಲೂ ನಳನಳಿಸುತ್ತದೆ.

ಸುಮಾರು ೫ ರಿಂದ ೧೫ ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರ ತನ್ನ ಹಳದಿ ಹೂಗಳ ಗೊಂಚಲುಗಳ ಮೂಲಕ ಎಲ್ಲರ ಮನ ಸೂರೆಗೊಳ್ಳುತ್ತದೆ. ಮಾರ್ಚನಲ್ಲಿ ಹೂ ಮೊಗ್ಗು ಮೂಡಿ, ಎಪ್ರಿಲ್, ಮೇನಲ್ಲಿ ಭರ್ಜರಿ ಹೂಗಳಿಂದ ತುಂಬಿ ತುಳುಕುತ್ತದೆ. ಇದು ಹಾಗೇ ಮುಂದುವರೆದು ಜುಲೈವರೆಗೂ ನಿರಂತರವಾಗಿ ಹಳದಿಯ ಛತ್ರಿ ಚಾಮರವಾಗಿ ಬೆರಗುಗೊಳಿಸುತ್ತದೆ. ಅಂದಾಜು ೨೦ ರಿಂದ ೪೦ ಸೆ,ಮೀ ಉದ್ದನೆಯ ಹೂ ಗೊಂಚಲಲ್ಲಿ ಸಮ ಅಳತೆಯ ಐದು ದಳದ ಹೂಗಳು ನವಿರಾಗಿ ಗೊಂಚಲನ್ನು ಆವರಿಸಿರುತ್ತವೆ. ಮೃದುವಾದ ಹಸಿರು ಎಲೆಗಳು ಅಂಡಾಕಾರವಾಗಿದ್ದು, ಪರ್ಯಾಯ, ಎರಡು ಕಡೆ ಶಾಖೆಗಳಾಗಿ ಒಂದೇ ಪತ್ರ ಕಾಂಡದ ಮೇಲೆ ಕವಲೊಡೆದಿರುತ್ತವೆ. ಹೂ ಬಿಡುವ ವೇಳೆಯಲ್ಲಿ ಎಲೆಗಳು ಉದುರಿ ಹೋಗುತ್ತವೆ. ಕಡು ಕಂದು ಬಣ್ಣದ ಉದ್ದನೆಯ ಚಿಕ್ಕ ಕಾಯಿಗಳು ವಾಣಿಜ್ಯಕ ಮಹತ್ವ ಹೊಂದಿವೆ.

ಇದು ಥೈಲ್ಯಾಂಡ್ ದೇಶದ ‘ರಾಷ್ಟ್ರೀಯ ಮರ’ವಾಗಿದ್ದುಈ ಮರದ ಹೂಗಳು ಆ ದೇಶದ ‘ರಾಷ್ಟ್ರೀಯ ಹೂ’ ಎಂಬ ಖ್ಯಾತಿಯನ್ನೂ ಪಡೆದಿವೆ. ಅಲ್ಲದೆ, ಭಾರತದಲ್ಲಿ ಕೇರಳದ ’ರಾಜ್ಯ ಹೂ’ವಾಗಿಯೂ ಮನ್ನಣೆ ಗಳಿಸಿದೆ. ಅಲ್ಲದೇ ಬಹುಸಂಖ್ಯಾತ ಮಲಯಾಳಿಗಳಿಗೆ ಮಹತ್ವದ ಹೂವಾಗಿ ಅಪಾರ ಬಳಕೆಯಲ್ಲಿದೆ. ದೈವಿಕ ಹಿನ್ನಲೆ ಹಾಗೂ ಅವರ ಸಂಸ್ಕಾರ ಸಂಸ್ಕೃತಿಗಳ ಭಾಗವಾಗಿ ಕೇರಳದ ‘ವಿಶು’ ಉತ್ಸವಕ್ಕೆ ಇದು ಬೇಕೆ ಬೇಕು. ಇನ್ನೊಂದು ರೀತಿಯಲ್ಲಿ ಇದರ ಪ್ರಾಮುಖ್ಯತೆ ನೋಡುವುದಾದರೆ, ಹಲವಾರು ದೇಶಗಳ ಅಂಚೆ ಸ್ಟಾಂಪ್‌ನಲ್ಲಿಯೂ ತನ್ನ ಗುರುತು ಮೂಡಿಸಿದೆ. ಭಾರತದ ೨೦ ರೂಪಾಯಿಯ ಸ್ಟಾಂಪ್‌ನಲ್ಲಿ ಈ ಮರದ ಹೂ ಚಿತ್ರಿತವಾಗಿದೆ. ಕೆನಡಾ ಹಾಗೂ ಥೈಲ್ಯಾಂಡ್ ದೇಶಗಳ ಸಂಯುಕ್ತ ಅಂಚೆ ಚೀಟಿಯಲ್ಲಿ ತನ್ನ ಮುದ್ರೆ ಒತ್ತಿದೆ. ಹಾಗೇ ಹಲವು ದೇಶಗಳ ರಾಷ್ಟ್ರೀಯ ಲಾಂಛನಗಳ ರೂಪದಲ್ಲಿ ವಿಶ್ವ ಮಟ್ಟದಲ್ಲಿ ಜನಪ್ರಿಯವಾಗಿದೆ.

ಈ ಮರದ ಪ್ರತಿ ಭಾಗವೂ ಔಷಧೀಯ ಗುಣವನ್ನು ಹೊಂದಿದ್ದು, ಆಯುರ್ವೇದ ವೈದ್ಯಕೀಯ ಮಹತ್ವ ಗಳಿಸಿದೆ ಆಯುರ್ವೇದದಲ್ಲಿ ಈ ಮರವನ್ನು ‘ಅರ್ಗವಧ’ ಎಂದು ಕರೆಯಲಾಗಿದೆ. ಇದರರ್ಥ ‘ರೋಗ ನಾಶಕ’ ಎಂಬುದಾಗಿದೆ. ಎಲೆಗಳು ಚರ್ಮರೋಗ ಚಿಕಿತ್ಸೆಯಲ್ಲಿ ಬಳಕೆಯಾದರೆ, ಬೇರು ಬೇಧಿ ವಿರೇಚನವಾಗಿ ಬಳಕೆಯಾಗುತ್ತದೆ. ಅಂದರೆ,  ಬೇರಿನಲ್ಲಿ ಹೇರಳವಾಗಿರುವ ಡೈ ಹೈಡ್ರಾಕ್ಷಿ ಅಂತರಾಕ್ವಿನೈನ್ ಎಂಬ ರಾಸಾಯನಿಕ ಅತೀ ಮಹತ್ವದ್ದಾಗಿದೆ. ಫ್ಯಾಬೇಸಿ ಕುಟುಂಬದ ಈ ಮರ ಅಮೂಲ್ಯ ಔಷಧಿಗಳ ಆಗರವಾಗಿದ್ದು ಮೆದುಳು ಸಂಬಂಧಿ ಕಾಯಿಲೆಗಳು, ಮಾನಸಿಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.       

ಇಷ್ಟೆಲ್ಲಾ ವೈದ್ಯಕೀಯ ಮಹತ್ವ ಪಡೆದ ಈ ಹಳದಿ ಹೂ ಗೊಂಚಲಿನ ಸೊಬಗಿನ ಮರ, ಬಿರು ಬೇಸಿಗೆಯಲ್ಲಿ ಪ್ರಕೃತಿಯನ್ನು ಅಂದಗೊಳಿಸಿ, ನೋಡುಗರ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಓಣಿ, ಕೇರಿ, ಗಲ್ಲಿ ಗಲ್ಲಿಗಳಲ್ಲಿ ಅರಳಿ ನಿಂತಿರುವ ಈ ಮರಗಳ ಹೂ ಶೃಂಗಾರ ಸೊಬಗನ್ನು ನಾವೆಲ್ಲಾ ಮನಸಾರೆ ಸವಿಯೋಣ, ಅಲ್ಲವೇ?.





2 comments:

  1. Thanks to Adiga sir and team.for publishing my first article in savijnana.

    ReplyDelete
  2. ಸರಳ, ಸುಂದರ ಲೇಖನ, ಧನ್ಯವಾದಗಳು ಸರ್.

    ReplyDelete