ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, April 4, 2022

ಮರಕುಟಿಗ ಹಕ್ಕಿಗಳು

ಮರಕುಟಿಗ ಹಕ್ಕಿಗಳು

ಡಿ. ಕೃಷ್ಣಚೈತನ್ಯ
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ವನ್ಯಜೀವಿ ತಜ್ಞರೂ, ಶಿಕ್ಷಕರೂ ಆಗಿರುವ ಕೃಷ್ಣ ಚೈತನ್ಯ ಅವರು ಈ ಬಾರಿಯ ಲೇಖನದಲ್ಲಿ ನಮ್ಮ ದೇಶದಲ್ಲಿ ಕಂಡುಬರುವ ಮರಕುಟಿಗ ಹಕ್ಕಿಗಳ ವಿವಿಧ ಬಗೆಗಳನ್ನು ಹಾಗೂ ಅವುಗಳ ಜೀವನ ಶೈಲಿಯನ್ನು ಸೊಗಸಾಗಿ ನಿರೂಪಿಸಿದ್ದಾರೆ.


ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ, ಭಾರತದ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುವ ಮರಕುಟಿಗ ಹಕ್ಕಿಗಳು (Woodpecker) ಮೈನಾ ಹಕ್ಕಿಗಿಂತ ತುಸು ಸಣ್ಣ ಮತ್ತು ದೊಡ್ಡ ಗಾತ್ರದಲ್ಲಿವೆ. ಕರ್ನಾಟಕದಲ್ಲಿ ೧೨ ಪ್ರಭೇದಗಳು ಕಂಡುಬಂದರೂ, ಅವುಗಳಲ್ಲಿ ಪ್ರಮುಖವಾಗಿ ೪ ಪ್ರಭೇದಗಳು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಉಳಿದವು, ಆಯಾಯ ಪ್ರದೇಶಗಳಿಗೆ ಅಂದರೆ ಘಟ್ಟ ಪ್ರದೇಶ, ಕರಾವಳಿ ಅಥವಾ ಅವೆರಡಕ್ಕೂ ಸೀಮಿತವಾಗಿವೆ. ಸಾಮಾನ್ಯವಾಗಿ ಕಂಡುಬರುವ ನಾಲ್ಕು ಪ್ರಬೇಧಗಳೆಂದರೆ,  ಬಿಳಿ ಅಥವಾ ಕಪ್ಪು ಬೆನ್ನಿನ ಮರಕುಟಿಗ, ಚಿಕ್ಕ ಹೊಂಬೆನ್ನಿನ ಮರಕುಟಿಗ, ಹಳದಿ ನೆತ್ತಿಯ ಮರಕುಟಿಗ ಮತ್ತು ಕಂದು ಟೊಪ್ಪಿಯ ಮರಕುಟಿಗ.


 ಚಿತ್ರ: ಬಿಳಿ(ಕಪ್ಪು) ಬೆನ್ನಿನ ಮರಕುಟಿಗ (White-naped W P)

ಹಿಂಗತ್ತಿನಲ್ಲಿ ಕಂಡು ಬರುವ ಬಿಳಿ ಬಣ್ಣದ ಪುಕ್ಕಗಳು, ಆಂಗ್ಲಬಾಷೆಯ ವಿ ಆಕಾರದ ಕಪ್ಪು ಪುಕ್ಕಗಳು, ಇದರ ಪ್ರಮುಖ ಲಕ್ಷಣ. ಗಂಡು ಹಕ್ಕಿಯ ತಲೆಯ ಮೇಲೆ ಕೆಂಪು ತುರಾಯಿ ಇದ್ದರೆ ಹೆಣ್ಣಿನಲ್ಲಿ ಹಳದಿ ತುರಾಯಿ ಇರುತ್ತದೆ. ಈ ತುರಾಯಿಗಳು, ಹೊಂಬೆನ್ನಿನ ಮರಕುಟಿಗಗಳ ಗಂಡಿನಲ್ಲಿ ಕೆಂಪಗಿದ್ದು, ಹೆಣ್ಣಿನಲ್ಲಿ ಕಪ್ಪು ತುರಾಯಿಯಲ್ಲಿ ಬಿಳಿ ಚುಕ್ಕೆಗಳು ಇರುತ್ತವೆ. ಕಣ್ಣಿನ ಬಳಿ ಕಪ್ಪು ಪಟ್ಟಿ ಕಾಣಸಿಗುತ್ತದೆ.

ಚಿತ್ರ: ಸಣ್ಣ ಹೊಂಬೆನ್ನಿನ ಮರಕುಟಿಗ (Lesser golden-backed WP)

ಸಣ್ಣ ಹೊಂಬೆನ್ನಿನ ಮರಕುಟಿಗದಲ್ಲಿ ರೆಕ್ಕೆಯ ಅಂಚಿನಲ್ಲಿ ಬಿಳಿ ಚುಕ್ಕೆಗಳ ೨ ಸಾಲುಗಳಿದ್ದರೆ, ದೊಡ್ಡ ಹೊಂಬೆನ್ನಿನ ಮರಕುಟಿಗಗಳಲ್ಲಿ ಚುಕ್ಕೆಗಳು ಕಾಣಸಿಗುವುದಿಲ್ಲ. ತಲೆಯ ಮೇಲಿನ ತುರಾಯಿಯಲ್ಲಿ ಗಂಡಿಗೆ ದೀರ್ಘವಾದ ಕೆಂಪು ತುರಾಯಿ ಇದ್ದರೆ ಹೆಣ್ಣಿಗೆ ಅರ್ಧ ಕೆಂಪು, ಮತ್ತರ್ಧ ಕಪ್ಪು ತುರಾಯಿ ಇದ್ದು ಅದರಲ್ಲಿ ಬಿಳಿ ಚುಕ್ಕೆ ಇರುತ್ತವೆ.

 

ಚಿತ್ರ: ಕಂದು ಟೊಪ್ಪಿಯ ಮರಕುಟಿಗ (Brown-caped WP)

ಇವು ಗುಬ್ಬಚ್ಚಿ ಗಾತ್ರದಲ್ಲಿದ್ದು, ಬೂದು ಮತ್ತು ಕಪ್ಪು ಬಣ್ಣದಲ್ಲಿವೆ. ತಲೆಯ ಮೇಲೆ ಗಂಡು ಹಕ್ಕಿಗೆ ಕಂದು ಬಣ್ಣದ ಪುಕ್ಕಗಳಿದ್ದರೆ ಹೆಣ್ಣಿಗೆ ಆ ಪುಕ್ಕಗಳ ಬದಲಿಗೆ ಕಡು ಬಣ್ಣದಲ್ಲಿರುತ್ತವೆ ಎರಡಕ್ಕೂ  ತಲೆಯ ಆಕಡೆ ಮತ್ತು ಈ ಕಡೆ ಎರಡು ಕೆಂಪು ಮಚ್ಚೆಯ ರೀತಿಯ ಪುಕ್ಕಗಳಿವೆ.

 

ಚಿತ್ರ: ಕಂದು ಮರಕುಟಿಗ (Roufous WP)

ಇವು ಪ್ರಧಾನವಾಗಿ ಕಂದು ಬಣ್ಣವನ್ನು ಹೊಂದಿದ್ದು, ಗರಿಗಳು ಕಪ್ಪು ಅಂಚನ್ನು ಹೊಂದಿವೆ. ಇವು ಮರದ ಮೇಲೆ ಎಲೆಗಳನ್ನು ಪದರದ ಮೇಲೆ ಪದರದಂತೆ ಜೋಡಿಸಿ ಗೂಡು ಕಟ್ಟುವ ಇರುವೆ ಗೂಡಿನಲ್ಲಿ ತಮ್ಮ ಗೂಡು ನಿರ್ಮಿಸಿ ಮರಿಮಾಡುವುದು ವಿಶೇಷ. ಗೂಡು ಕಟ್ಟುವ ಸಮಯದಲ್ಲಿ ಆ ಗೂಡಿನ ಮೇಲ್ಭಾಗದಲ್ಲಿ ರಂದ್ರ ಕೊರೆದು, ಕಾಲು ಭಾಗದಷ್ಟು ಇರುವೆಗಳನ್ನು ಭಕ್ಷಿಸುತ್ತವೆ. ನಂತರ ಅಲ್ಲಿ ಒಂದಷ್ಟು ಎಲೆಗಳನ್ನು ಕತ್ತರಿಸಿ ಹೊರಹಾಕಿ ಮೊಟ್ಟೆ ಇಡುತ್ತವೆ. ಕಾವು ಕೊಟ್ಟು ಮರಿಗಳಾದ ನಂತರ ಆ ಮರಿಗಳಿಗೆ ಉಳಿದ ಮುಕ್ಕಾಲು ಗೂಡಿನ ಇರುವೆಗಳೇ ಆಹಾರ. ಈ ರೀತಿ, ಒಂದು ಪಕ್ಕಿಯ ಸಂಸಾರದ ಅಭಿವೃದ್ಧಿಗೆ ಒಂದು ಇರುವೆ ಗೂಡಿನ ಆಹುತಿಯಾಗುತ್ತದೆ. ಇದೊಂದು ವಿಸ್ಮಯ!

 

ಚಿತ್ರ: ದೊಡ್ಡ ಹೊಂಬೆನ್ನಿ ಮರಕುಟಿಗ (Greater golden-backed WP)

ಇವು ಕೀಟಹಾರಿ ಪಕ್ಷಿಗಳಾಗಿದ್ದು ಒಣ ಮರಗಳ ಕೊಂಬೆಗಳನ್ನು ಕುಟ್ಟಿ ತೂತು ಮಾಡಿ ಒಳಗಿರುವ ಹುಳುಗಳನ್ನು ಭಕ್ಷಿಸುತ್ತದೆ. ಕೆಲವು ಪಕ್ಷಿ ತಜ್ಞರು ಒಣಮರಗಳಲ್ಲೂ ಜೀವವಿದೆ ಎಂದು ವಾದಿಸುವುದರಲ್ಲಿ ಅರ್ಥವಿದೆ ಎಂದು ಹೇಳುವುದು ಇದಕ್ಕಾಗಿಯೇ. ಗೊರವಂಕ, ಕಂಚುಕುಟಿಗ, ಕಾಮಳ್ಳಿ, ಗಿಳಿ ಮುಂತಾದ ಎಷ್ಟೋ ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಗಾಗಿ ಒಣ ಮರಗಳನ್ನೆ ಆಶ್ರಯಿಸಿವೆ. ನೆಲದ ಮೇಲೆ ಬೀಳುವ ಒಣಮರಗಳು, ಮತ್ತು ಅವುಗಳ ಕೊಂಬೆ, ರೆಂಬೆ, ಎಲೆಗಳನ್ನು ಗೆದ್ದಲು ಆಶ್ರಯಿಸಿರುವುದು, ಆ ಮೂಲಕ ಆಹಾರ ಸರಪಳಿ ತುಂಡಾಗದಂತೆ ಕಾಪಾಡಿಕೊಂಡಿರುವುದು ಇದರ ಮಹತ್ವೆ.

ಇವುಗಳ ಕೊಕ್ಕು ಮತ್ತು ಕಾಲು ವಿಶಿಷ್ಟ ರೀತಿಯಲ್ಲಿ ವಿನ್ಯಾಸ ಹೊಂದಿವೆ. ಕೊಕ್ಕು ಬಲಿಷ್ಟವಾಗಿದ್ದು ಕೀಟಗಳು ಮತ್ತು ಹುಳುಗಳಿರುವ ಜಾಗದಲ್ಲಿ ಮರವನ್ನು ಕುಟ್ಟಿ ಕುಟ್ಟಿ ರಂದ್ರ ಮಾಡಲು, ಒಣ ಚಕ್ಕೆಗಳನ್ನು ಕಿತ್ತು ಬಿಸಾಡಿ ಹುಳುಗಳನ್ನು ಅರಸಲು ಸಹಾಯಕವಾಗಿದೆ. ಅವು ಹುಳುಗಳಿರುವ ಜಾಗ ಪತ್ತೆಹಚ್ಚುವುದನ್ನು ನೋಡುವುದೇ ಒಂದು ಅಚ್ಚರಿ. ಮೊದಲು ಒಣಗಿರುವ ಮರ ಅಥವಾ ಜೀವಂತ ಮರದ ಒಣಗಿರುವ ಕೊಂಬೆಗಳನ್ನೇ ಆರಸಿ ಪತ್ತೆಹಚ್ಚುತ್ತವೆ. ನಂತರ, ಆ ಒಣಮರದ ಭಾಗವನ್ನು ಕುಟ್ಟಿ ಕುಟ್ಟಿ ಕೊಂಬೆಯ ಮೇಲೆ-ಕೆಳಗೆ, ಆಕಡೆ-ಈಕಡೆ ಜಿಗಿದು ಜಿಗಿದು ಹುಡುಕುತ್ತವೆ. ಕೊಂಬೆಯನ್ನು ಕುಟ್ಟಿದ ಭಾಗದಲ್ಲಿ ಹುಳುವಿದ್ದರೆ, ಇದರ ಕುಟ್ಟುವಿಕೆಗೆ ಇರುಸು ಮುರುಸಾಗಿ ಚೀ-ಕೀ ಅಂತ ಶಬ್ಧ ಬಂದರೆ ಅಲ್ಲಿಯೇ ಕುಟ್ಟುವುದನ್ನು ಮುಂದುವರಿಸುತ್ತವೆ. ಇಲ್ಲದಿದ್ದಲ್ಲಿ ಹುಡುಕುವುದನ್ನು ಮುಂದುವರಿಸುತ್ತವೆ. ಇವುಗಳ ಕುಟ್ಟುವಿಕೆಯ ಶಬ್ಧ ಕೆಲವು ವೇಳೆ ಅರ್ಧ ಕಿಮೀ. ನಿಂದ ಮುಕ್ಕಾಲು ಕಿಮೀ. ವರೆಗೆ ಕೇಳಿಸುವುದುಂಟು.

ಕಾಲುಗಳಲ್ಲಿ ಎರಡು ಬೆರಳು ಮುಂದಕ್ಕೂ ಮತ್ತೆರಡು ಬೆರಳು ಹಿಂದಕ್ಕೂ ಇದ್ದು ಮರವನ್ನು ಹತ್ತಲು ಮತ್ತು ಇಳಿಯಲು ನೆರವಾಗುತ್ತವೆ. ಕೊಕ್ಕು ಕಪ್ಪಾಗಿದ್ದು, ಅದರಲ್ಲಿರುವ ನಾಲಿಗೆ ಚೂಪಾಗಿ ಮೀನಿನ ಗಾಳದಂತಿರುತ್ತದೆ. ಒಣಮರದಲ್ಲಿ ರಂದ್ರಮಾಡಿ ನಾಲಿಗೆಯಿಂದ ಚುಚ್ಚಿ, ಹುಳುಗಳನ್ನು ಹೊರಗೆಳೆದುಕೊಳ್ಳುತ್ತದೆ. ಕಣ್ಣು ಕಪ್ಪಗಿದ್ದು, ಅದರ ಮೇಲೆ ಬಿಳಿ ಮತ್ತು ಕಪ್ಪು ಪಟ್ಟೆಗಳಿವೆ. ಕೊಕ್ಕಿನ ಹಿಂಭಾಗಕ್ಕೆ ಚಾಚಿರುವ ಬಿಳಿ ಗೆರೆಯು ದೇಹದ ಉದ್ದಕ್ಕೂ ಚಾಚಿದೆ. ಬೆನ್ನಿನ ಮೇಲೆ ಚಿನ್ನದ ಬಣ್ಣದ, ಅದರ ಕೆಳಗೆ ಕಿತ್ತಳೆ ಬಣ್ಣದ ರೆಕ್ಕೆ ಗರಿಗಳು ಹಳದಿ ಬಣ್ಣದಲ್ಲಿವೆ. ರೆಕ್ಕೆಯ ಮೇಲೆ ಮತ್ತು ಅಂಚಿನ ಗರಿಗಳಲ್ಲಿ ಬಿಳಿ ಚುಕ್ಕೆಗಳಿವೆ. ಬಾಲದ ಗರಿಗಳು ಕಪ್ಪಗಿದ್ದು ವಿವಿಧ ಉದ್ದ ಮತ್ತು ಬಿಡಿಸಿದಾಗ ಗರಗಸದ ಅಂಚಿನAತೆ ಕಾಣಿಸುತ್ತವೆ. ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಮೀನಿನ ಶಲ್ಕದಂತೆ ಜೋಡಣೆಯಾಗಿರುವ ಬಿಳಿ ಪುಕ್ಕಗಳಿದ್ದು ಅದರ ತುದಿಗೆ ಕಪ್ಪು ಅಂಚಿದೆ.

 ವಿವಿಧ ಮರಕುಟಿಗಗಳ ಕೂಗು ವಿಭಿನ್ನವಾಗಿವೆ. ಚಿಕ್ಕ ಹೊಂಬೆನ್ನಿನ ಮರಕುಟಿಗ ಕೀ.. ಕೀ.. ಎಂದು ಉಚ್ಛ (ತಾರಕ) ಸ್ಥಾಯಿಯಿಂದ ಮಧ್ಯಮಸ್ಥಾಯಿಗೆ ಇಳಿಯುವಂತೆ ನಿರಂತರವಾಗಿ ಕೂಗುತ್ತದೆ. ದೊಡ್ಡ ಹೊಂಬೆನ್ನಿನ ಮರಕುಟಿಗ ಕಿರ್ರ್.. ಕಿರ್ರ್...ಎಂದು ಕೂಗುತ್ತದೆ.  ಮುಖ್ಯವಾಗಿ ಒಣಮರವನ್ನು ಕೊರೆಯುವ ಹುಳುಗಳು ಮತ್ತು ಶಿಥಿಲೀಯವಾಗುತ್ತಿರುವ ಮರಗಳಲ್ಲಿರುವ ಜೀರುಂಡೆಗಳು, ಮರಕುಟಿಗಗಳ ಪ್ರಮುಖ ಆಹಾರ.

ಹಾರುವಾಗ ನೀರಿನ ಅಲೆಯಂತೆ, ರೆಕ್ಕೆ ಬಡಿಯುವಾಗ ಮೇಲಕ್ಕೆ ಮತ್ತು ನಿಲ್ಲಿಸಿದಾಗ ಕೆಳಕ್ಕೂ ಬರುತ್ತದೆ. ಒಣಗಿರುವ ಮರದಲ್ಲಿ ರಂದ್ರ ಕೊರೆದು ಗೂಡು ಮಾಡಿಕೊಳ್ಳುವುದಲ್ಲದೆ, ಮೈನ ಹಾಗೂ ಬಾರ್ಬೆಟ್ ಉಪಯೋಗಿಸಿದ ಹಳೆಯ ಗೂಡುಗಳನ್ನು ಉಪಯೋಗಿಸುವುದೂ ಉಂಟು. ಮಾರ್ಚನಿಂದ ಆಗಸ್ಟ್ ಸಂತಾನೋತ್ಪತ್ತಿಯ ಅವಧಿಯಾಗಿದ್ದು  ಬಿಳಿಯಹೊಳಪಿನ ಮೂರು ಮೊಟ್ಟೆ ಇಟ್ಟು ಕಾವುಕೊಟ್ಟು, ಮರಿಮಾಡುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಮರಿಗಳ ಪಾಲನೆಯಲ್ಲಿ ಸಮನಾಗಿ ಪಾಲ್ಗೊಳ್ಳುತ್ತವೆ.

 

ರಾಜ್ಯದ ಇತರ ಕಡೆ ಕಂಡುಬರುವ ಮರಕುಟಿಗಗಳು

 

ಚಿತ್ರ: ಚುಕ್ಕೆ ಮರಕುಟಿಗ (Heart-spotted WP)  

 

ಚಿತ್ರ: ಹೆಮ್ಮರಕುಟಿಗ (White bellied WP)

 

ಚಿತ್ರ:ಹಳದಿ ಹಿಂಗತ್ತಿನ ಮರಕುಟಿಗ (Yellow-naped WP)

 


6 comments:

  1. Nice sir, informative. e chandramukuta (hoophy) wood pecker ಅಲ್ವಾ? ಅದರ ಬಗ್ಗೆ ಇರುತ್ತೆ ಅನ್ನೋ ನಿರೀಕ್ಷೆಯಿತ್ತು. ನಾವು ಅದನ್ನೂ ಮರಕುಟಿಗ ಅನ್ನುತ್ತಿದ್ದೆವು.

    ReplyDelete
    Replies
    1. Hoopoe ಮರಕುಟಿಗ ಅಲ್ಲ ಸರ್.

      Delete