ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, April 4, 2022

ನಾವೀನ್ಯತೆಗಳ ಆಗರ – ಅಡುಗೆಮನೆ !

ನಾವೀನ್ಯತೆಗಳ ಆಗರ – ಅಡುಗೆಮನೆ !

ಶ್ರೀಮತಿ ಹೆಚ್.ಎಸ್.ಶಾರದ

ಶಿಕ್ಷಕಿಸರ್ಕಾರಿ ಪ್ರೌಢಶಾಲೆ, 

ಎಂ.ಸಿ. ತಳಲು, 

ಸರಗೂರು ತಾಲ್ಲೂಕು, 

ಮೈಸೂರು

ನಮ್ಮ ನಿತ್ಯ ಜೀವನದ ಪ್ರತಿಯೊಂದು ಅಂಶದಲ್ಲಿ ವಿಜ್ಞಾನದ ಪ್ರಭಾವ ಎದ್ದು ಕಾಣುತ್ತದೆ. ವಿಜ್ಞಾನದ ವಿವಿಧ ಶಾಖೆಗಳಲ್ಲಿ ಆಗುತ್ತಿರುವ ಹೊಸ ಅನ್ವೇಷಣೆಗಳು ಹಾಗೂ ಸಂಶೋಧನೆಗಳು ಅನ್ವಯಗೊಂಡು ನಮ್ಮ ಜೀವನ ಶೈಲಿಯ ಅವಿಭಾಜ್ಯ ಅಂಗಳಾಗಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಗೃಹಿಣಿಯೊಬ್ಬಳ ದಿನ ನಿತ್ಯದ ಚಟುವಟಿಕೆಯಲ್ಲಿ ಎಷ್ಟೊಂದು ಹೊಸ ಆಲೋಚನೆಗಳು ಮೂಡಿ, ಕಾರ್ಯರೂಪಕ್ಕೆ ಇಳಿದು, ‘ನಾವೀನ್ಯತೆ’ಗೆ ಎಡೆಮಾಡಿಕೊಡುತ್ತವೆ ಎಂಬುದನ್ನು ನವಿರಾಗಿ ನಿರೂಪಿಸಿದ್ದಾರೆ ಒಬ್ಬ ಕ್ರಿಯಾಶೀಲ ಶಿಕ್ಷಕಿಯಾಗಿ ಈ ಹಿಂದೆ ‘ಸವಿಜ್ಞಾನ’ದಲ್ಲಿ ಪರಿಚಯಗೊಂಡಿದ್ದ ಶ್ರೀಮತಿ ಹೆಚ್,ಎಸ್.ಶಾರದ ಅವರು.

 

ದೀಪೂ..ದೀಪೂ ನಿನ್ ನೀರಿನ ಬಾಟಲ್ ಎಲ್ಲಿಟ್ಟಿದ್ಯೋ? ಟೈ,ಮ್ ಆಯ್ತು. ಈಗ ಆಟೋ ಬರುತ್ತೆ. ರೆಡಿ ಅಯ್ತಾ ನಿಂದು?’ ಅಂತ ಕೇಳ್ತಾನೇ ಡಬ್ಬಿಗೆ ವೆಜಿಟೆಬಲ್ ಪಲಾವ್ ತುಂಬಿಸಿ, ಸ್ಪೂನ್ ಹಾಕಿ ಮುಚ್ಚಿದ್ದಳು ದಿವ್ಯಾ. ‘ಅಮ್ಮಾ ತಗೋ ವಾಟರ್ ಬಾಟಲ್’ ಅಂತ ಬಾಟಲ್ ಕೊಟ್ಟ ಮಗ. ದಿವ್ಯಾ ಬಾಟಲ್ ನೋಡಿ, ‘ಅಯ್ಯೋ ಮತ್ತೆ ಅದೇ ಕಥೇನಾ? ಯಾಕೋ ದೀಪು, ನಾನು ಪ್ರತೀಸಲ ಮುಚ್ಚಳ ಸರಿಯಾಗಿ ಹಾಕ್ಕೊಟ್ರೂ ನೀನು ಬೇರೆ ಕಲರ್ ಮುಚ್ಚಳ ಹಾಕ್ಕೊತೀಯಾ? ನಂಗೂ ಪ್ರತಿದಿನ ಮುಚ್ಚಳ ಬದ್ಲಾಯ್ಸೀ, ಬದ್ಲಾಯ್ಸೀ ಸಾಕಾಗಿ ಹೋಗಿದೆ. ಅವತ್ತಿಂದ ಕೇಳ್ಬೇಕೂ ಅಂತಿದ್ದೆ; ಯಾಕೋ ಹೀಗ್ಮಾಡ್ತೀಯಾ?’ ಅಂತ ದಿವ್ಯ ಕೇಳ್ತಿದ್ದ ಹಾಗೇ, ‘ಅಮ್ಮಾ! ಅಷ್ಟೇನಾ? ನೋಡು ನಮ್ಮ ಕ್ಲಾಸಲ್ಲಿ ಒಂದಿಪ್ಪತ್ತು ಜನ ಈ ಥರ ಟಪ್ಪರ್ ವೇರ್‌ನ ಪಿಂಕ್ ಕಲರ್ ವಾಟರ್ ಬಾಟ್ಲಲ್ಲೇ ತರ್ತಾರೆ. ಗೇಮ್ಸ್ ಪಿರಿಯಡ್ ಇದ್ದಾಗ ಯಾರ್ದೋ ಬಾಟಲ್ ಯಾರ್ದೋ ಬ್ಯಾಗಿಗೆ ಹೋಗಿರುತ್ತೆ; ಅದಕ್ಕೇ ನನ್ನ ಬಾಟಲ್ ಅಂತ ಗೊತ್ತಾಗಲೀ ಅಂತ ಪಿಂಕ್ ಬಾಟಲ್‌ಗೆ ಪರ್ಪಲ್ ಕಲರ್ ಮುಚ್ಚಳ ಹಾಕ್ತೀನಮ್ಮ’ ಅಂತ ಸಮಜಾಯಿಷಿ ಕೊಟ್ಟ ೩ನೇ ತರಗತಿಯಲ್ಲಿ ಓದುತ್ತಿದ್ದ ದೀಪು.

ತಕ್ಷಣ, ದಿವ್ಯಾಳಿಗೆ ‘ನಾವೀನ್ಯತೆ’ ಅನ್ನೋ ಪದ ನೆನಪಾಯ್ತು. Necessity is the mother of all Inventions ಅನ್ನೋ ನುಡಿಗಟ್ಟೂ ಸಹ ಆ ಕ್ಷಣಕ್ಕೆ ಹೆಚ್ಚು ಆಪ್ತವಾಯ್ತು. ಹೌದಲ್ವಾ! ಮನುಷ್ಯ ತನ್ನ ಅವಶ್ಯಕತೆಗಳಿಗೆ ತಕ್ಕಂತೆ ಎಷ್ಟು ಹೊಸ ಹೊಸ ವಿಚಾರಗಳನ್ನು ಕಂಡುಹಿಡಿಯುತ್ತಾ ಹೋದ. ಆದಿ ಮಾನವನಿಂದ ಆಧುನಿಕ ಮಾನವನಾಗಿ ಬದಲಾಗಲು ಅಬ್ಬಾ ಎಷ್ಟೊಂದು ಸಂಶೋಧನೆಗಳು! ಎಷ್ಟು ಆವಿಷ್ಕಾರಗಳು! ಎಷ್ಟು ನಾವೀನ್ಯತೆಗಳು!

ನಮಗೆ ಅವಶ್ಯಕತೆಗಳು ಇವೆ ಎಂದಾಗ ಹೇಗೆ ಹೊಸ ಹೊಸ ಆಲೋಚನೆಗಳು ಹೊಳೆಯುತ್ತವೆ; ಇದೇ ಅಲ್ಲವೇ ನಾವೀನ್ಯತೆ? ನಮ್ಮ ಅಡುಗೆ ಮನೆಯಲ್ಲಂತೂ ಈ ರೀತಿಯ ನಾವೀನ್ಯತೆಗಳು ಎಷ್ಟಿವೆ ಅಲ್ವಾ? ಇವತ್ತು ಮಾಡಿದ ರವೆ ಬಾತ್ ಅನ್ನು ನೆನೆಸಿಕೊಂಡಳು ದಿವ್ಯಾ. ಹಿಂದಿನ ರಾತ್ರಿ ಉಳಿದ ತಿಳಿಸಾರನ್ನು ತರಕಾರಿ ಬಾತ್ ಮಾಡುವಾಗ ಸೇರಿಸಿ, ಸ್ವಲ್ಪ ವಾಂಗೀ ಬಾತ್ ಪುಡಿಯನ್ನು ಉದುರಿಸಿದ್ದಳು. ಮಾಮೂಲಿ ಉಪ್ಪಿಟ್ಟಿನ ರುಚಿಯೂ ಬದಲಾಗಿತ್ತು; ಸಾರೂ ಖಾಲಿಯಾಗಿತ್ತು. ಹೀಗೇ ದೋಸೆ ಹಿಟ್ಟು ಉಳಿದಾಗ, ಈರುಳ್ಳಿ ದೋಸೆ, ಚಪಾತಿ ಉಳಿದರೆ, ಚಪಾತಿ-ಪಲ್ಯ ರೋಲ್ಸ್, ಅನ್ನ ಉಳಿದಾಗ ಚಿತ್ರಾನ್ನ ಇವೆಲ್ಲವೂ ಅಡುಗೆ ಮನೆಯ ಸೀಕ್ರೆಟ್ಸ್; ಜೊತೆಗೇ ಹೊಸತನದ ಟ್ರೆಂಡ್ಸ್! ಒಮ್ಮೊಮ್ಮೆ ಆ ಕ್ಷಣಕ್ಕೆ ಹೊಳೆಯುವ ಇನ್ನೋವೇಷನ್ಸ್!

ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ಗೆಡ್ಡೆ-ಗೆಣಸುಗಳನ್ನು ಮತ್ತು ತಾವು ಬೇಟೆಯಾಡಿದ ಪ್ರಾಣಿಗಳನ್ನೇ ಆಹಾರವಾಗಿ ಬಳಸುತ್ತಿದ್ದ ಕಾಲಕ್ಕೂ ಇಂದಿನ ಕಾಲಕ್ಕೂ ಎಷ್ಟು ವ್ಯತ್ಯಾಸ! ಹಸಿ ಪದಾರ್ಥಗಳನ್ನು ಬೇಯಿಸಿದಾಗ ದೊರೆಯುವ ರುಚಿಯನ್ನು ಕಂಡುಕೊಂಡ ಮೇಲಂತೂ ಮನುಷ್ಯರ ಆಹಾರ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯೇ ಉಂಟಾಯಿತು. ಪದಾರ್ಥಗಳನ್ನು ಸಂಸ್ಕರಿಸಿ, ಅದನ್ನು ಬೇರೆ ಬೇರೆ ವಿಧಾನಗಳಲ್ಲಿ ಬಳಸುವ ಪದ್ಧತಿ ಬಂದಿತು. ಆಯಾ ಭೌಗೋಳಿಕ ಪ್ರದೇಶಕ್ಕನುಗುಣವಾಗಿ  ಅಲ್ಲಿ ಬೆಳೆಯುವ ತರಕಾರಿ, ಧಾನ್ಯಗಳು, ಹಣ್ಣುಗಳಿಗೆ ತಕ್ಕಂತೆ, ಆಹಾರ ಪದ್ಧತಿಯಲ್ಲೂ ವೈವಿಧ್ಯತೆ ಉಂಟಾಯಿತು. ಎಲ್ಲಕ್ಕಿಂತ ವಿಶೇಷವಾಗಿ ಹೊಸತಾಗಿ ಯೋಚಿಸುವ ಸಾಮರ್ಥ್ಯದಿಂದಲೇ ಬಗೆಬಗೆಯ ಪಾಕವಿಧಾನಗಳು ಹುಟ್ಟಿಕೊಂಡವು.

Aದು ಬಾರಿ ಯೋಚಿಸಿ. ಬೆಳಗಿನ ತಿಂಡಿಯಾದ ದೋಸೆಯನ್ನು ನೆನೆಸಿಕೊಳ್ಳಿ. ತರಹೇವಾರಿ ವಿಧಗಳು!! ಉದ್ದಿನ ದೋಸೆ, ಮಸಾಲೆ ದೋಸೆ, ಈರುಳ್ಳಿ ದೋಸೆ, ಹಿಟ್ಟು ಕದರಿದ ದೋಸೆ, ನೀರ್ ದೋಸೆ, ರವೆ ದೋಸೆ, ಪಾಲಾಕ್ ದೋಸೆ, ಹಲಸಿನ ಹಣ್ಣಿನ ದೋಸೆ, ಟೊಮೊಟೋ ದೋಸೆ, ಕಾಯ್ ದೋಸೆ, ಮೆಂತೆ ದೋಸೆ, ಹೀರೇಕಾಯಿ ಅಥವಾ ಬಾಳೆಕಾಯಿ ದೋಸೆ, ಅವರೇಕಾಳು ಸೀಸನ್‌ನಲ್ಲಿ ಅವರೇಕಾಳು ದೋಸೆ ಮತ್ತು ಈಗ ಕಾಲಕ್ಕೆ ತಕ್ಕಂತೆ, ಚೀಸ್ ದೋಸೆ, ಪನೀರ್ ದೋಸೆ, ಪಲ್ಯ ದೋಸೆ ಹಮ್.. ಬರೀತಾ ಹೋದ್ರೆ ಇನ್ನೂ ಅದೆಷ್ಟು ವಿಧ?? ಇದನ್ನೆಲ್ಲ ಹೆಂಗೆ ಕಂಡುಹಿಡಿದ್ವಿ? ಈರುಳ್ಳಿ ದೋಸೆ ಚೆನ್ನಾಗಿರುತ್ತೆ ಅಂತ ಹೀರೇಕಾಯಿನೂ ಗಾಲಿಯಂತೆ ಕೊರೆದು, ಅಕ್ಕಿಯ ಜೊತೆ ಕಡಲೇಬೇಳೆ, ಮೆಂತೆ, ಒಣಮೆಣಸಿನಕಾಯಿ, ದನಿಯಾ, ಜೀರಿಗೆ ಸೇರಿಸಿ ಅರೆದು ದೋಸೆ ಮಾಡಿದರೆ ಅದೂ ಒಂಥರಾ ರುಚಿ. ಇನ್ನು ಇದೇ ಹಿಟ್ಟನ್ನು ಕೆಸುವಿನ ಸೊಪ್ಪಿನ ಮೇಲೆ ಚೆನ್ನಾಗಿ ಹಚ್ಚಿ, ಆ ಎಲೆಗಳನ್ನು ಸುತ್ತಿ ಹಬೆಯಲ್ಲಿ ಬೇಯಿಸಿ, ಮತ್ತೆ ಅದನ್ನು ಪುಡಿ ಮಾಡಿ, ಒಗ್ಗರಣೆ ಮಾಡಿದರೆ ಪತ್ರೊಡೆ ಸಿದ್ಧ! ಅಥವಾ ಬೆಂದ ಹಿಟ್ಟನ್ನು ಮತ್ತೆ ಗಾಲಿಯಂತೆ ಕೊರೆದು ಕಾವಲಿಯಲ್ಲಿ ಅವುಗಳನ್ನು ಮತ್ತೆ ಗರಿಗರಿಯಾಗಿ ಕಾಯಿಸಿದರೆ, ಅದು ಇನ್ನೊಂಥರಾ ಪತ್ರೊಡೆ!

ಇನ್ನು ಒತ್ತು ಶಾವಿಗೆ ಮಾಡುವ ವಿಧಾನ ಹೇಗೆ ಚಾಲ್ತಿಗೆ ಬಂತೋ?? ಅಕ್ಕಿಯನ್ನು ನೆನೆಸಿ, ಅದನ್ನು ನುಣ್ಣಗೆ ಅರೆದು, ಒಲೆಯ ಮೇಲಿಟ್ಟು ಚೆನ್ನಾಗಿ ಮಗಚುತ್ತಾ ಅದು ಬೆಂದ ಮೇಲೆ ಅದನ್ನು ಉಂಡೆ ಮಾಡಿ, ಮತ್ತೆ ಹಬೆಯಲ್ಲಿ ಬೇಯಿಸಿ, ಆ ಉಂಡೆಗಳನ್ನು ಶಾವಿಗೆ ಒರಳಿನೊಳಗೆ ಹಾಕಿ ಒತ್ತುವುದು. ಇನ್ನು ಶಾವಿಗೆಯಲ್ಲೂ ಬಗೆಬಗೆ. ಶಾವಿಗೆಗೆ ಕಾಯಿಹಾಲು ಒಬ್ಬರಿಗೆ ರುಚಿ ಎನಿಸಿದರೆ, ಮತ್ತೊಬ್ಬರಿಗೆ ಗಸಗಸೆ, ಬೆಲ್ಲ, ಕಾಯಿಯ ಮಿಶ್ರಣದ ಜೊತೆ ಶಾವಿಗೆ ತಿಂದರೆ ಅದೇ ಸ್ವರ್ಗ, ಇನ್ನೂ ಕೆಲವರಿಗೆ ಶಾವಿಗೆಯ ಒಗ್ಗರಣೆ, ಪುಳಿಯೋಗರೆಯಂತೆ, ಚಿತ್ರಾನ್ನದಂತೆ ತಿನ್ನುವ ಚಪಲ, ಮತ್ತೂ ಹಲವರಿಗೆ ಬರೀ ಶಾವಿಗೆಗೆ ಮಾವಿನ ಮಿಡಿಯ ಉಪ್ಪಿನಕಾಯಿ ಮತ್ತು ಕೊಬ್ಬರಿ ಎಣ್ಣೆಯೇ ಅತ್ಯಂತ ರುಚಿ! ಆ ಶಾವಿಗೆ ಒರಳಿನ ಆವಿಷ್ಕಾರ ಹೇಗಾಯಿತೋ? ಅದರಲ್ಲೂ ಬಗೆ ಬಗೆ ಮರದ್ದು, ಲೋಹದ್ದು, ಹಿತ್ತಾಳೆಯದ್ದು

ಒಂದು ಭಾಗ ಉದ್ದು (ಪ್ರೋಟೀನ್), ಮೂರು ಭಾಗ ಅಕ್ಕಿಯನ್ನು (ಕಾರ್ಬೊಹೈಡ್ರೇಟ್) ನೆನೆಸಿ, ಅರೆದು, ಹುದುಗು ಬರೆಸಿ, ಮರುದಿನ ಅದನ್ನು ಹಬೆಯಲ್ಲಿ ಬೇಯಿಸಿ ಮಾಡುವ ಅಕ್ಕಿ ಇಡ್ಲಿ ಎಷ್ಟು ಆರೋಗ್ಯಕರ ಎಂದು ನಮಗೆ ಗೊತ್ತೇ ಇದೆ. ಆದರೆ  ರವೆಯಲ್ಲೂ ಇಡ್ಲಿ ಮಾಡಬಹುದು ಎಂದು ಎರಡನೇ ಮಹಾಯುದ್ಧದ ಕಾಲದಲ್ಲಿ ಕಂಡುಹಿಡಿಯಲಾಯಿತಂತೆ.  ಆ ಸಮಯದಲ್ಲಿ ಅಕ್ಕಿಯ ಕೊರತೆ ಇದ್ದು, ಮಾವಳ್ಳಿ ಟಿಫಿನ್ ರೂಮ್ ನವರು, ಗೋಧಿರವೆಯಲ್ಲಿ ಇಡ್ಲಿಯನ್ನು ಮಾಡುವ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದರು. ಈಗಂತೂ ರವೆಇಡ್ಲಿ ಮಿಕ್ಸ್ ನದ್ದೇ ಕಾಲ. ಈ ರವೆ ಇಡ್ಲಿಯಂತೆ ಗೋಧಿ ಶಾವಿಗೆಯಲ್ಲೂ ಇಡ್ಲಿ ಮಾಡಬಹುದು ಎಂಬುದು ನಾವೀನ್ಯತೆ ಅಲ್ಲವೇ?

ಕೃಷ್ಣನಿಗೆ ಪ್ರಿಯವಾದ ತಿಂಡಿಯಾದ ಅವಲಕ್ಕಿಯೇನೂ  ಕಡಿಮೆ ಅಲ್ಲ. ಅವಲಕ್ಕಿ ಉಪ್ಪಿಟ್ಟು, ಮೊಸರವಲಕ್ಕಿ, ಅವಲಕ್ಕಿ ಬಿಸಿಬೇಳೆಬಾತ್, ಅವಲಕ್ಕಿ ಪೊಂಗಲ್, ಕಾಯಿ, ಬೆಲ್ಲದೊಂದಿಗೆ ಸಿಹಿ ಅವಲಕ್ಕಿ, ಗೊಜ್ಜವಲಕ್ಕಿ, ಕಾಯಿಸಾಸಿವೆ ಹಾಕಿ ಒಗ್ಗರಣೆ ಮಾಡುವ ಅವಲಕ್ಕಿ, ತೆಳು ಅವಲಕ್ಕಿ ಆದರೆ, ಚೂಡಾ, ಉಪ್ಪುಕರಿ, ಅವಲಕ್ಕಿಯನ್ನೇ ಎಣ್ಣೆಗೆ ಹಾಕಿ ಕರಿದರೆ, ಅವಲಕ್ಕಿ ಪುರಿ. ಹೀಗೇ ಎಷ್ಟು ವಿಧಗಳು? ಆಯಾ ಸಂದರ್ಭಕ್ಕೆ ತಕ್ಕಂತೆ ನಾನಾ ಅವತಾರಗಳು. ಇವೆಲ್ಲವೂ ಉದರ ನಿಮಿತ್ತಂ, ಬಹುಕೃತ ವೇಷಂ!! ಜಿಹ್ವಾ ಚಪಲದಿಂದ ಈ ತಿಂಡಿಗಳಿಗೆಷ್ಟು ವೇಷ ಹಾಕಿಸಿದ್ದೇವೆ. ಈ ಉದರಂಬರಣಕ್ಕೆ ನಾಲಿಗೆ ಚಪಲ ಕಾರಣವಾದರೂ ಎಷ್ಟು ಪ್ರಯೋಗಗಳು ನಡೆದಿರಬೇಕು ಅಲ್ವಾ?

ಇನ್ನು ಅಕ್ಕಿಯಿಂದ ಮಾಡುವ ಅಡುಗೆಗಳ ವಿಧಗಳಂತೂ ಅನೇಕ. ಚಿತ್ರಾನ್ನ, ಬಿಸಿಬೇಳೆ ಬಾತ್, ವೆಜಿಟೇಬಲ್ ಪಲಾವ್, ಹಾಗೇ ಬಿರಿಯಾನಿ, ಅವರೇಕಾಳು ಹಾಕಿದರೆ, ಅವರೇಕಾಳು ಬಾತು, ಬಟಾಣಿ ಜೀರಿಗೆ ಹಾಕಿದರೆ ಪೀಸ್ ಪುಲಾವ್, ಮೆಂತೆಸೊಪ್ಪು ಹಾಕಿದರೆ, ಮೆಂತೆಬಾತ್, ಪುದೀನಾ ಹಾಕಿದರೆ ಪುದೀನಾ ಬಾತ್, ಟೊಮೆಟೊ ಹಾಕಿದರೆ, ಟೊಮೆಟೊ ಬಾತ್, ಹುಗ್ಗಿ, ಖಾರ ಪೊಂಗಲ್, ಕಾಯನ್ನ, ವಾಂಗಿಬಾತ್, ಪುಳಿಯೋಗರೆ, ಮೊಸರನ್ನ, ಘೀರೈಸ್, ಜೀರಾ ಪುಲಾವ್, ಹೀಗೆ ಉಪಯೋಗಿಸುವ ಪದಾರ್ಥಗಳಿಗೆ ತಕ್ಕಂತೆ ಹೆಸರೂ ಬದಲು, ರುಚಿಯೂ ಬದಲು. ಆದರೆ,  ಪ್ರಧಾನವಾಗಿ ಒಂದೇ ಪದಾರ್ಥವನ್ನಿಟ್ಟುಕೊಂಡು ಬೇರೆ ಬೇರೆ ವಸ್ತುಗಳನ್ನು ಸೇರಿಸುತ್ತಾ ಹೊಸ ಹೊಸ ರುಚಿಯನ್ನು ತಯಾರಿಸುವುದು ಪಾಕಕಲೆಯೂ ಹೌದು, ನಾವೀನ್ಯತೆಯೂ ಹೌದು ಎಂಬುದೇ ನನ್ನ ಅನಿಸಿಕೆ. ಇನ್ನೂ ಬೇರೆ ಬೇರೆ ತಿಂಡಿ ತಿನಿಸುಗಳ ಬಗ್ಗೆ ಬರೆಯುತ್ತಾ ಹೋದರೆ, ಅದೇ ಒಂದು ಮಹಾ ಪ್ರಬಂಧವಾದೀತು.

ಒಟ್ಟಾರೆಯಾಗಿ ಅಡುಗೆಮನೆಯನ್ನು ಪಾಕಶಾಲೆ ಎಂದು ಕರೆಯುವುದರ ಜೊತೆಗೆ ಅದನ್ನು ವಿಜ್ಞಾನ ಪ್ರಯೋಗಶಾಲೆ ಎಂದೂ ಕರೆಯಲು ಅಡ್ಡಿಯಿಲ್ಲ ಅಲ್ಲವೇ? ಏರ್ ಟೈಟ್ ಜಾರ್ ನಿಂದ ಹಿಡಿದು ಪ್ರೆಷರ್ ಕುಕ್ಕರ್ ವರೆಗೆ, ಸರಳ ಸನ್ನೆಗಳಿಂದ ಹಿಡಿದು ಮಿಕ್ಸಿ, ಗ್ರೈಂಡರ್ ಗಳ ವರೆಗೆ, ಪಾತ್ರೆಗಳಿಂದ ಹಿಡಿದು, ಬಳಸುವ ಸ್ಟೌವ್ ಗಳವರೆಗೆ ಎಲ್ಲದರಲ್ಲೂ ವಿಜ್ಞಾನ ಅಡಗಿದೆ ಅಲ್ಲವೇ?  ಎಷ್ಟೆಲ್ಲ ರಾಸಾಯನಿಕ ಕ್ರಿಯೆಗಳು, ಶಾಶ್ವತ ಬದಲಾವಣೆಗಳು, ಹೊಸ ವಿಧಾನಗಳು, ಆಹಾರವನ್ನು ಸಂರಕ್ಷಿಸುವ ವಿಧಗಳು, ಉಳಿದ ಆಹಾರವು ವ್ಯರ್ಥವಾಗದಂತೆ ಅದನ್ನು ಮರುಬಳಕೆ ಮಾಡುವ  ಜಾಣ್ಮೆ, ಆರೋಗ್ಯಕರ ಆಹಾರದ ಬಳಕೆ, ಇವೆಲ್ಲವೂ ನಮಗೇ ತಿಳಿಯದಂತೆ ಅಡುಗೆಮನೆಯಲ್ಲಿ ಮೇಳೈಸಿಬಿಟ್ಟಿವೆ. ಆಹಾರ ಮತ್ತು ಸಂಶೋಧನಾ ಸಂಸ್ಥೆ, ಆಹಾರೋದ್ಯಮ, ಆಹಾರ ಪದ್ಧತಿ ಮತ್ತು ಪೋಷಣೆ ಇವೆಲ್ಲವೂ ನಮ್ಮ ಅಡುಗೆಮನೆಯ ವರ್ಧಿಸಿದ ಪ್ರತಿಬಿಂಬಗಳೇ ಆಗಿವೆ ಎಂಬುದು ಸತ್ಯವಲ್ಲವೇ? ಅಡುಗೆಯಲ್ಲಿ ಹೊಸತನ ಅಥವಾ ನಾವೀನ್ಯತೆಗೆ ರುಚಿ ಬೇಡುವ ನಾಲಿಗೆಯೇ ಪ್ರೇರಕ ಶಕ್ತಿ; ತೃಪ್ತಿಯಾಗಿ ತುಂಬಿಕೊಳ್ಳುವ ಜಠರವೇ ಸ್ಫೂರ್ತಿ, ಅಂತಿಮವಾಗಿ ಬರುವ ತೇಗು, ಅದೇ ಪ್ರಶಸ್ತಿ!!

21 comments:

  1. Every kitchen is a bio-technology laboratory and all the dear mothers devotedly serving there are Bio-technological scientists. The eternal truth..well written article madam.

    ReplyDelete
  2. Really superb. All your experiments are becoming articles. Continue writing. All can be published as magazines. All d best.

    ReplyDelete
  3. Areey waah
    What a narration? The reading would be an absolute appetizer. Well written.😋😋

    ReplyDelete
  4. ಲೇಖನ ಚೆನ್ನಾಗಿ ಮೂಡಿ ಬಂದಿದೆ ಸುವಿಜ್ಞಾನದ ಜೊತೆಗೆ ರುಚಿಕರ ತಿನಿಸುಗಳ ಪಟ್ಟಿಯೇ ಇದೆ ಮನಸ್ಸಿಗೆ ಮುದ ಬಾಯಿಯಲ್ಲಿ ನೀರು!!!!!!

    ReplyDelete
  5. ಅಡುಗೆ ಮನೆ ಒಂದು ಪ್ರಯೋಗಾಲಯ ಎಂದು ನಿರೂಪಿಸಿದ್ದೀರಿ. ಅದ್ಭುತ, ಆದರೆ ತಿನ್ನುವವರು???????

    ReplyDelete
    Replies
    1. ಪ್ರಯೋಗ ಸಫಲವಾದರೆ, ತೇಗು! ಇಲ್ಲವಾದಲ್ಲಿ ಹುಳಿತೇಗು!!

      Delete
  6. Yes Sharada Madam.KITCHEN Is a Laboratory. As usual your narration, language,presentation style superb.Keep writing All the best Madam.

    ReplyDelete
  7. ಖಂಡಿತ ಅಡುಗೆಮನೆ ಒಂದು ನಾವಿನ್ಯತೆಯ ಕೋಣೆ, ನಮ್ಮ ಜೀವನವೇ ಒಂದು ಸುಂದರ ಸೃಷ್ಟಿ ಪೂರಕ.....

    ReplyDelete
    Replies
    1. ಹೌದು ಸರ್‌, ಧನ್ಯವಾದಗಳು

      Delete
  8. ಬರಹದಲ್ಲೂ ನಾವೀನ್ಯತೆ!!

    ReplyDelete
  9. ನಿಜವಾಗಲೂ ಅಡಿಗೆ ಮನೆ ಪಾಕಶಾಲೆಯು ಪ್ರಯೋಗಶಾಲೆ.
    ಅದು ತಕ್ಷಣ ಹೊಳೆದ ಹೊಸ ಹೊಸ ಆವಿಷ್ಕಾರಗಳ ಕೇಂದ್ರ ಅಲ್ಲವೇ? ಉತ್ತಮವಾದ ಲೇಖನ

    ReplyDelete
    Replies
    1. ಆ ಆವಿಷ್ಕಾರಗಳೇ ಹೊಸರುಚಿಗೆ ನಾಂದಿ! ಧನ್ಯವಾದಗಳು

      Delete
  10. This comment has been removed by the author.

    ReplyDelete
  11. ಬಹಳ ಚೆನ್ನಾಗಿ ಮೂಡಿ ಬಂದಿದೆ
    ಜೊತೆಗೆ ವಿವಿಧ ಬಗೆಯ ಅಡುಗಯನ್ನೂ ಪರಿಚಯ ಮಾಡಿದ್ದೀರಿ
    👌

    ReplyDelete
  12. Very well presented article Mam

    ReplyDelete
  13. Very nicely presented article Mam

    ReplyDelete
  14. ಲೇಖನ ತುಂಬಾ ಚೆನ್ನಾಗಿದೆ.ನೀವು ತಯಾರಿಸುವ ಒತ್ತು ಶ್ಯಾವಿಗೆ ನೆನಪಾಯಿತು.ಎಲ್ಲ ತಿಂಡಿಗಳ ಮೆರವಣಿಗೆನೂ‌ ಕಣ್ಣ ಮುಂದೆ ‌ಬಂದಂತಾಯ್ತು.ಹೀಗೇ ಲೇಖನಗಳನ್ನು ಬರೀತಾ ಇರಿ.ಆದಷ್ಟು ಬೇಗ ಪುಸ್ತಕವನ್ನು ಪ್ರಕಟಿಸುವಂತಾಗಲಿ.

    ReplyDelete