ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, April 4, 2022

ಸೂಕ್ಷ್ಮಜೀವಿಗಳ ವೃದ್ಧಿಯ ಮರ್ಮ

ಸೂಕ್ಷ್ಮಜೀವಿಗಳ ವೃದ್ಧಿಯ ಮರ್ಮ

ಡಾ.ಎಂ. ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗೂ ವಿಜ್ಞಾನ ಸಂವಹನಕಾರರು


ವಿಜ್ಞಾನದಲ್ಲಿ ‘ಸೆರೆಪಿಂಡಿಟಿ’ ಯ ಮಹತ್ವವನ್ನು ತಿಳಿಸುವ ಡಾ. ಸುಂದರರಾಮ್ ಅವರ ಲೇಖನವೊಂದನ್ನು ‘ಸವಿಜ್ಞಾನ’ದ ಹಿಂದಿನ ಸಂಚಿಕೆಯೊಂದರಲ್ಲಿ ಓದಿದ್ದು ನಿಮಗೆ ನೆನಪಿರಬಹುದು. ಅದರ ಮುಂದುವರೆದ ಭಾಗವಾಗಿ, ಈ ಲೇಖನದಲ್ಲಿ ಸುಂದರರಾಮ್ ಅವರು ಸ್ಪಲಾಂಜನಿ ಎಂಬ ವಿಜ್ಞಾನಿ ಸೂಕ್ಷ್ಮಜೀವಿಗಳಲ್ಲಿ ನಡೆಸಿದ ಕುತೂಲಕರ ಪ್ರಯೋಗವೊಂದನ್ನು ಆಕರ್ಷಣೀಯವಾಗಿ ವಿವರಿಸಿದ್ದಾರೆ.



ಇಟಲಿಯಲ್ಲಿ ಲಾಝಾರೊ ಸ್ಪಲಾಂಜನಿ (Lazzaro Spallanzani) ಎಂಬ ವಿಜ್ಞಾನಿ ಇದ್ದರು. ಅವರು ಸೂಕ್ಷ್ಮಜೀವಿಗಳು ಸ್ವಯಂಜನನವಾಗಿ ಉಂಟಾಗಲಾರವೆಂಬ ತಮ್ಮ ವಾದವನ್ನು ಪ್ರಯೋಗಗಳ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದರು. ಈ ರೀತಿ ಪ್ರಯೋಗಗಳನ್ನು ಯೋಜಿಸುತ್ತಿದ್ದ ಅವರು ಸ್ವಯಂಜನನ ವಾದವನ್ನು ತಿರಸ್ಕರಿಸುವ ಪ್ರಯೋಗಕ್ಕಿಂತಲೂ ಅತ್ಯದ್ಭುತ ಪ್ರಯೋಗವೊಂದನ್ನು ಒಮ್ಮೆ ನಡೆಸಿದರು. ಸೂಕ್ಷ್ಮಜೀವಿಗಳು ಹೇಗೆ ವೃದ್ಧಿಯಾಗುತ್ತವೆ ಎಂಬ ನಿಗೂಢ ಮರ್ಮವನ್ನು ಮೊದಲಿಗೆ ಜಗತ್ತಿಗೆ ತೋರಿಸಿಕೊಡಲು ಅವರು ಪ್ರಯೋಗವೊಂದನ್ನು ಯೋಜಿಸಿದರು. ಅದು ಹೀಗಿತ್ತು:

ಅವರು ಎರಡು ಕಿರು ಸೀಸೆಗಳನ್ನು ತಂದರು. ಒಂದರಲ್ಲಿ ಕುದಿಸಿದ ಶುದ್ಧನೀರು ಮತ್ತು ಇನ್ನೊಂದರಲ್ಲಿ ಸೂಕ್ಷ್ಮಜೀವಿಗಳಿರುವ ನೀರು ತೆಗೆದುಕೊಂಡರು. ಒಂದು ಗಾಜಿನ ಪಟ್ಟಿಯನ್ನು (glass slideತಂದು, ಕುಂಚದ ಮೂಲಕ ಶುದ್ಧ ನೀರಿನ ಒಂದು ಹನಿಯನ್ನು ಅದರ ಮೇಲಿಟ್ಟರು. ಬಳಿಕ, ಸೂಕ್ಷ್ಮಜೀವಿಗಳಿದ್ದ ಕಿರುಸೀಸೆಯಿಂದ ಮತ್ತೊಂದು ಹನಿ ನೀರನ್ನು ಕುಂಚದ ಮೂಲಕ ತೆಗೆದು ಅದನ್ನೂ ಗಾಜಿನ ಪಟ್ಟಿಯ ಮೇಲೆ ತಿಳಿನೀರಿನ ಹನಿಯ ಪಕ್ಕದಲ್ಲೇ, ಆದರೆ ಅದಕ್ಕೆ ಸೋಕದಂತೆ ಇಟ್ಟರು. ಹೀಗೆ ತಯಾರಿಸಿದ ಗಾಜಿನ ಪಟ್ಟಿಯನ್ನು ಸೂಕ್ಷ್ಮ ದರ್ಶಕದ ಕೆಳಗಿಟ್ಟು ವೀಕ್ಷಿಸಿದಾಗ ಅವರಿಗೆ ನೀರಿನ ಎರಡು ಸಣ್ಣ ಕೊಳಗಳು” ಗೋಚರಿಸಿದವು. ತಿಳಿನೀರಿನ ಕೊಳದಲ್ಲಿ ಸೂಕ್ಷ್ಮಜೀವಿಗಳಾವುವೂ ಇರಲಿಲ್ಲ. ಪಕ್ಕದಲ್ಲಿದ್ದ ಎರಡನೆಯ ಕೊಳದಲ್ಲಿ ಅನೇಕ ಸೂಕ್ಷ್ಮಜೀವಿಗಳು ಓಡಾಡಿಕೊಂಡಿದ್ದವು. ಸೂಕ್ಷ್ಮಜೀವಿಗಳಿರುವ ಕೊಳದಿಂದ ಒಂದೇ ಒಂದು ಸೂಕ್ಷ್ಮಜೀವಿಯನ್ನು ಹೇಗಾದರೂ ಮಾಡಿ ಪಕ್ಕದಲ್ಲಿದ್ದ ತಿಳಿನೀರಿನ ಕೊಳಕ್ಕೆ ಅಟ್ಟ್ಳಿ, ಅದು ಹೇಗೆ ವರ್ತಿಸುತ್ತದೆ ಎಂದು ತಿಳಿಯಬೇಕೆಂಬುದೇ ಸ್ಪಲಾಂಜನಿಯ ಉದ್ದೇಶವಾಗಿತ್ತು.

ತಮ್ಮ ಉದ್ದೇಶವನ್ನು ಪೂರೈಸಲು ಅವರು ಒಂದು ಉಪಾಯ ಹೂಡಿದರು. ಒಂದು ಸೂಜಿಯನ್ನು ತೆಗೆದುಕೊಂಡು ಅದರ ತುದಿಯನ್ನು ಸೂಕ್ಷ್ಮಜೀವಿಗಳಿರುವ ಕೊಳದ ನೀರಿನಲ್ಲಿ ಅದ್ದಿ, ನಿಧಾನವಾಗಿ ಅಲ್ಲಿಂದ ನೀರಿನ ಗೆರೆಯೊಂದನ್ನು ಎಳೆದು, ಅದನ್ನು ಪಕ್ಕದ ತಿಳಿನೀರಿನ ಕೊಳಕ್ಕೆ ಸೇರಿಸಿದರು. ಇದರಿಂದ, ಅಕ್ಕಪಕ್ಕದ ಎರಡೂ ಕೊಳಗಳ ನಡುವೆ ನೀರಿನ ಸೇತುವೆಯೊಂದು ನಿರ್ಮಾಣವಾಯಿತು. ನೀರಿನ ಸೇತುವೆ ಎರಡು ಕೊಳಗಳನ್ನೂ ಸೇರಿಸಿದ್ದೇ  ತಡ, ಸೂಕ್ಷ್ಮಜೀವಿಗಳಿದ್ದ ಕೊಳದಿಂದ ಅನೇಕ ಸೂಕ್ಷ್ಮಜೀವಿಗಳು ನೀರಿನ ಸೇತುವೆಯ ಮೂಲಕ ತಿಳಿನೀರಿನ ಕೊಳದ ಕಡೆಗೆ ರಭಸದಿಂದ ಧಾವಿಸತೊಡಗಿದವು. ಸೂಕ್ಷ್ಮದರ್ಶಕದ ಮೂಲಕ ಇದನ್ನೇ ಏಕಾಗ್ರತೆಯಿಂದ ಕಾದುನೋಡುತ್ತ ಕುಳಿತಿದ್ದ ಸ್ಪಲಾಂಜನಿ, ಒಂದೇ ಒಂದು ಸೂಕ್ಷ್ಮಜೀವಿ ತಿಳಿನೀರಿನ ಕೊಳವನ್ನು ಪ್ರವೇಶಿಸಿದ ಕೂಡಲೇ ಕುಂಚದ ಸಹಾಯದಿಂದ ನೀರಿನ ಸೇತುವೆಯನ್ನು ಕಡಿದುಬಿಟ್ಟರು ! ಮುನ್ನುಗ್ಗುತ್ತಿದ್ದ ಉಳಿದ ಸೂಕ್ಷ್ಮಜೀವಿಗಳು ತಿಳಿನೀರಿನ ಕೊಳವನ್ನು ಸೇರಲಾರದೆ ಅಲ್ಲೇ ಉಳಿದುಬಿಟ್ಟವು. ತಿಳಿನೀರಿನ ಕೊಳದಲ್ಲಿ ಈಗ ಒಂದೇ ಒಂದು ಸೂಕ್ಷ್ಮಜೀವಿಯು ಸೆರೆ ಸಿಕ್ಕಿಬಿಟ್ಟಿತ್ತು. ತಮ್ಮ ಇಚ್ಛೆಯಂತೆ ಒಂದು ಸೂಕ್ಷ್ಮಜೀವಿಯನ್ನು ಸೆರೆಹಿಡಿವಲ್ಲಿ ಯಶಸ್ವಿಯಾಗಿದ್ದಕ್ಕೆ ಸ್ಪಲಾಂಜನಿಗೆ ಮಹದಾನಂದವಾಯಿತು.

ಅತಿ ಚಾಣಾಕ್ಷತನದಿಂದ ಸೆರೆಹಿಡಿದಿದ್ದ ಆ ಸೂಕ್ಷ್ಮಜೀವಿಯ ಗತಿ ಏನಾಗುವುದೊ ಎಂದು ತಿಳಿಯಲು ಸ್ಪಲಾಂಜನಿ  ಸೂಕ್ಷ್ಮದರ್ಶಕದ ಮೂಲಕ ಕಣ್ಣಲ್ಲಿ ಕಣ್ಣಿಟ್ಟು ಅದನ್ನೇ ಕುತೂಹಲದಿಂದ ನೋಡುತ್ತ ಕುಳಿತರು. ಆ ಸೂಕ್ಷ್ಮಜೀವಿ ಕೋಲಿನಾಕಾರದಲ್ಲಿತ್ತು. ಕೆಲವು ನಿಮಿಷಗಳಲ್ಲಿ ಅದು ಚುರುಕಾಯಿತು. ಅದು ಉದ್ದವಾಗಿ ಬೆಳೆಯಲಾರಂಭಿಸಿತು. ಅದರ ನಡುಭಾಗ ಕಡಿದಾಗಲಾರಂಭಿಸಿತು. ಹೀಗೇ ಅದು ಮುಂದುವರಿದು, ಬಳಿಕ ಅದರ ಇತ್ತುದಿಗಳೂ ಬಿರುಸಾಗಿ ಸಿಡಿದು, ಕಡಿದಾದ ನಡುಭಾಗದಲ್ಲಿ ಮುರಿದುಕೊಂಡು ಎರಡು ತುಂಡಾಯಿತು. ಒಂಟಿಯಾಗಿದ್ದ ಆ ಜೀವಿ ಸುಮಾರು ೨೦ ನಿಮಿಷಗಳಲ್ಲಿ ವಿಭಜನೆಯಾಗಿ ಎರಡಾಗಿತ್ತು!!!.


ಸ್ಪಲಾಂಜನಿ  ಸೂಕ್ಷ್ಮದರ್ಶಕದ ಮೂಲಕ ಮತ್ತೆ ಆ ಎರಡು ಸೂಕ್ಷ್ಮಜೀವಿಗಳನ್ನೂ ವೀಕ್ಷಿಸುತ್ತ ಕುಳಿತರು. ಸುಮಾರು ೨೦ ನಿಮಿಷಗಳ ನಂತರ ಆ ಎರಡು ಜೀವಿಗಳೂ ಮೊದಲಿನಷ್ಟೇ ಉದ್ದವಾಗಿ ಬೆಳೆದವು. ನಂತರ ಅವುಗಳ ನಡುಭಾಗವು ಕಡಿದಾಗತೊಡಗಿ, ಒಂದೊಂದೂ ಎರಡಾಗಿ ಒಡೆದು ನಾಲ್ಕಾದವು. ಮತ್ತೆ ೨೦ ನಿಮಿಷಗಳಲ್ಲಿ ಅವು ಪುನಃ ಒಡೆದು ಎಂಟಾದವು. ಪ್ರತಿ ೨೦ ನಿಮಿಷಗಳಿಗೊಮ್ಮೆ ಇದೇ ರೀತಿ ಆ ಸೂಕ್ಷ್ಮಜೀವಿಗಳು ವೃದ್ಧಿಸುತ್ತಾ ಹೋದವು. ಒಂದು ಗಂಟೆಯಲ್ಲಿ ಒಂದು ಸೂಕ್ಷ್ಮಾಣು ಒಡೆದು ಎಂಟಾಗಿ ವೃದ್ಧಿಯಾಗಿತ್ತು. ಬೆಳೆಯುವುದು, ವಿಭಜನೆಯಾವುದು,ಇವೇ ಈ ಸೂಕ್ಷ್ಮಜೀವಿಗಳ ವೃದ್ಧಿಯ ಮರ್ಮವಾಗಿತ್ತು. ಇದೇ ವೇಗದಲ್ಲಿ ವೃದ್ಧಿಯಾಗುತ್ತ ಹೋದರೆ ಎಂಟುಗಂಟೆಗಳಲ್ಲಿ ಒಂದು ಸೂಕ್ಷ್ಮಜೀವಿ ಕೋಟ್ಯಂತರ ಜೀವಿಗಳಾಗಿ ವೃದ್ಧಿಯಾಗಬಲ್ಲವೆಂದು ಸ್ಪಲಾಂಜನಿ ಲೆಕ್ಕ ಹಾಕಿದರು. ಒಂದು ಕ್ಷಣ ಈ ಮರ್ಮವನ್ನು ನೆನೆಸಿಕೊಂಡರು. ಅಬ್ಬ! ಅವರ ಮೈ ಝುಂ ಎಂದಿತು. ಹೀಗಾಗಲು ಸಾಧ್ಯವೇ ಎಂದೆನಿಸಿತು. ತಮ್ಮ ಸಂಶೋಧನೆಯನ್ನು ಖಚಿತಪಡಿಸಿ ಕೊಳ್ಳಲು ಸ್ಪಲಾಂಜನಿ ಆ ಪ್ರಯೋಗವನ್ನು ಮತ್ತೊಮ್ಮೆ ನಡೆಸಿದರು. ಈ ಸಲವೂ ಅರಿಗೆ ಅದೇ ಫಲಿತಾಂಶ ದೊರಕಿತು.


ಒಬ್ಬ ವ್ಯಕ್ತಿ ರಾತ್ರಿ ೧೦ ಗಂಟೆಗೆ ಮಲಗುವಾಗ ತನ್ನ ದೇಹದೊಳಗೆ ಒಂದೇ ಒಂದು ಸೂಕ್ಷ್ಮಜೀವಿಯ ಪ್ರವೇಶವಾದರೆ ಅವನು ಬೆಳಿಗ್ಗೆ ೬ ಗಂಟೆ ಸಮಯಕ್ಕೆ ಎದ್ದಾಗ ಅವನ ದೇಹದಲ್ಲಿ ಆ ಒಂದು ಸೂಕ್ಷ್ಮಜೀವಿ ಮತ್ತೆ, ಮತ್ತೆ ವಿಭಜನೆಯಾಗಿ ಒಂದು ಕೋಟಿ, ಅರವತ್ತೇಳು ಲಕ್ಷದ, ಎಪ್ಪತ್ತೇಳು ಸಾವಿರದ ಇನ್ನೂರ ಹದಿನಾರು ಸೂಕ್ಷ್ಮಜೀವಿಗಳಾಗಿ ವೃದ್ಧಿಸುತ್ತವೆಂದು ಸ್ಪಲಾಂಜನಿ ಲೆಕ್ಕ ಹಾಕಿದರು. ಹೀಗಾದಾಗ, ಆ ವ್ಯಕ್ತಿ ರೋಗಗ್ರಸ್ಥನಾಗುವುದರಲ್ಲಿ ಆಶ್ಚರ್ಯವೇನಿಲ್ಲ. ತಾವು ನಡೆಸಿದ ಪ್ರಯೋಗವನ್ನೂ ಅದರ ಫಲಿತಾಂಶವನ್ನೂ ಸ್ಪಲಾಂಜನಿ ಪ್ರಕಟಿಸಿದಾಗ ಅದನ್ನು ಓದಿದ ವಿಜ್ಞಾನಿಗಳು ನಿಬ್ಬೆರಗಾದರು. ವಿಜ್ಞಾನವೆಂದರೇನು ಎಂದು ಆಗ ಜನರಿಗೆ ಅರಿವಾಗತೊಡಗಿತು. ಆದರೆ, ಯಥಾಪ್ರಕಾರ ಅಸೂಯೆಪಡುತ್ತಿದ್ದ ಸ್ಪಲಾಂಜನಿಯ ಕಡುವಿರೋಧಿ ಇತರ ವಿಜ್ಞಾನಿಗಳು ಈ ಪ್ರಯೋಗವನ್ನೊಪ್ಪಲಿಲ್ಲ. ಸ್ಪಲಾಂಜನಿಯ ಪ್ರಯೋಗ ಸುಳ್ಳೆಂದೂ ಅದರ ಫಲಿತಾಂಶಗಳು ನಂಬಲರ್ಹವಲ್ಲವೆಂದೂ ಅಪಪ್ರಚಾರ ಮಾಡಲಾರಂಭಿಸಿದರು. ಸ್ಪಲಾಂಜನಿ ಅವರಿಗೆ ಕೊಟ್ಟ ಉತ್ತರ ಮಾರ್ಮಿಕವಾಗಿತ್ತು - ನನ್ನಪ್ರಯೋಗದಲ್ಲಿ ನಿಮಗೆ ನಂಬಿಕೆಯಿಲ್ಲದಿದ್ದರೆ ಪ್ರಯೋಗಗಳನ್ನು ನೀವೇ ಮಾಡಿ ನೋಡಿ!

 


2 comments:

  1. ಒಬ್ಬ ವ್ಯಕ್ತಿ ರಾತ್ರಿ ೧೦ ಗಂಟೆಗೆ ಮಲಗುವಾಗ ತನ್ನ ದೇಹದೊಳಗೆ ಒಂದೇ ಒಂದು ಸೂಕ್ಷ್ಮಜೀವಿಯ ಪ್ರವೇಶವಾದರೆ ಅವನು ಬೆಳಿಗ್ಗೆ ೬ ಗಂಟೆ ಸಮಯಕ್ಕೆ ಎದ್ದಾಗ ಅವನ ದೇಹದಲ್ಲಿ ಆ ಒಂದು ಸೂಕ್ಷ್ಮಜೀವಿ ಮತ್ತೆ, ಮತ್ತೆ ವಿಭಜನೆಯಾಗಿ ಒಂದು ಕೋಟಿ, ಅರವತ್ತೇಳು ಲಕ್ಷದ, ಎಪ್ಪತ್ತೇಳು ಸಾವಿರದ ಇನ್ನೂರ ಹದಿನಾರು ಸೂಕ್ಷ್ಮಜೀವಿಗಳಾಗಿ ವೃದ್ಧಿಸುತ್ತವೆಂ... thrilling experience for readers. great efforts of scientist explained in simple words by our master.. thank you sir..

    ReplyDelete
  2. ತುಂಬಾ ಚನ್ನಾಗಿದೆ ಸರ್‌ ಲೇಖನ, ಧನ್ಯವಾದಗಳು, ವಿವರಣೆ ಆಕರ್ಷಕವೂ, ಮಾಹಿತಿಪೂರ್ಣವೂ ಆಗಿದೆ.

    ReplyDelete