ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, May 4, 2022

ಹಾವು ಮತ್ತು ನಾವು

ಹಾವು ಮತ್ತು ನಾವು

ಡಿ. ಕೃಷ್ಣಚೈತನ್ಯ
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಶಿಕ್ಷಕ ಮತ್ತು ವನ್ಯಜೀವಿ ತಜ್ಞ ಶ್ರೀ ಕೃಷ್ಣ ಚೈತನ್ಯ ಅವರು ಈ ಬಾರಿಯ ತಮ್ಮ ಲೇಖನದಲ್ಲಿ ಹಾವುಗಳ ಬಗ್ಗೆ ನಮಗಿರುವ ಕೆಲವು ತಪ್ಪು ಕಲ್ಪನೆಗಳತ್ತ ಬೆಳಕು ಚೆಲ್ಲಿ, ಹಾವುಗಳನ್ನು ಸಂರಕ್ಷಿಸುವ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದ್ದಾರೆ.

ನಾಗರ ಹಾವೇ ಹಾವೊಳು ಹೂವೇ

ಬಾಗಿಲ ಬಿಲದಲಿ ನಿನ್ನಯ ಠಾವೇ...

ಈ ಒಂದು ಕವನವನ್ನು ಯಾರು ತಾನೇ ಕೇಳಿಲ್ಲ ? ಇಂಥ ಒಂದು ಸುಂದರ ಗೀತೆಯನ್ನು ಬರೆದ ಕವಿಗೆ ನಮಿಸಲೇ ಬೇಕು. ಹಾವಿನ ಬಗ್ಗೆ ವಿಭಿನ್ನ ಭಾವನೆಗಳಿರುವ ಹಿನ್ನೆಎಯಲ್ಲಿ ಈ ಲೇಖನದಲ್ಲಿ ಹಾವುಗಳ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳೋಣ. ನಮ್ಮ ಹಿಂದಿನವರು ಗಾಳಿ, ನೀರು, ಭೂಮಿ, ಸೂರ್ಯ(ಬೆಂಕಿ) ಮತ್ತು ಸಕಲ ಜೀವಿಗಳನ್ನು ಪೂಜಿಸುತ್ತಿದ್ದರು ಎಂಬುದನ್ನು  ಮರೆತಿರುವ ನಾವು ಹಲವಾರು ಅನಾಹುತಗಳನ್ನು ಮೇಲೆ ಎಳೆದುಕೊಳ್ಳುತ್ತಿದ್ದೇವೆ. ಜನರಿಂದ ಪೂಜಿಸಲಾಗುವ ಜೀವಿಗಳಲ್ಲಿ ಹಾವುಗಳು ಪ್ರಮುಖವಾಗಿದ್ದುವು. ಮುನಿಯಪ್ಪ(ಮುನೇಶ್ವರ)ನ ಹಬ್ಬ, ನಾಗರ ಪಂಚಮಿ ಮುಂತಾದ ಹೆಸರುಗಳಲ್ಲಿ ಹಾವುಗಳ ರಕ್ಷಣೆಯನ್ನು ಮಾಡಾಗುತ್ತಿತ್ತು. ಹಾಗೆಯೇ, ಹುತ್ತಗಳನ್ನು ಪೂಜಿಸುವ ಸಂಪ್ರದಾಯದ ಹಿಂದೆ ಇದ್ದುದೂ ಹಾವುಗಳನ್ನು ಉಇಸಬೇಕೆಂಬ ಕಾಳಜಿ. ಆದರೆ, ಹಾವುಗಳನ್ನು ಎದುರಿಗೆ ಕಂಡೊಡನೆ ನಮ್ಮ ನಿಲುವೇ ಬದಲಾಗುತ್ತದೆ, ಅಲ್ಲವೇ? ಬಸವಣ್ಣನವರ ‘ಕಲ್ಲ ನಾಗರ ಕಂಡರೆ ಹಾಲನೆರೆಯುವÀ ಜನ ದಿಟದ ನಾಗರ ಕಂಡರೆ ಕೊಲ್ಲು ಎಂಬುವರಯ್ಯ’ ಎಂಬ ವಚನ ನೆನಪಾಗುತ್ತಿದೆಯಲ್ಲವೇ?

 

ಚಿತ್ರ : ನಾಗರ ಹಾವು (Cobra)

ಹಾವು ಕಂಡರೆ ಹಡಗೇ ನಡುಗೀತು’ ಎಂಬುದೊಂದು ಪ್ರಸಿದ್ಧ ಗಾದೆ ಮಾತು. ಅದರಲ್ಲೂ ನಾಗರ ಹಾವನ್ನು ಕಂಡರೆ ಇನ್ನೂ ಹೆಚ್ಚಿನ ಹೆದರಿಕೆ. ಏಕೆಂದರೆ, ಅದು ಕಚ್ಚಿದರೆ ಸಾವು ಖಚಿತ ಎಂಬ ನಂಬಿಕೆ. ಆದರೆ, ಹಾವುಗಳಲ್ಲಿ ನಾವು ಹೆದರಬೇಕಿರುವುದು ನಾಗರ ಹಾವು (cobra), ಕಟ್ಟು ಹಾವು (krait), ಕೊಳಕು ಮಂಡಲ (Russel’s viper) ಮತ್ತು ಉರಿ ಮಂಡಲ (ssaw scaled viper)-ಈ ನಾಲ್ಕು ಜಾತಿಗಳಿಗೆ ಮಾತ್ರ.. ಇನ್ನುಳಿದ ಹಾವುಗಲ್ಲಿ ವಿಷದ ತೀವ್ರತೆ ಅಷ್ಟಿಲ್ಲದಿರುವುದರಿಂದ, ಅವು ಕಚ್ಚಿದರೂ ಸಾವು ನಿಶ್ಚಿತವಲ್ಲ. ಯಾವ ಹಾವು ಮೊದಲು ಕಚ್ಚಿದರೂ ಅದು ಶೇ.೯೦ರಷ್ಟು ಬರಿ ಕಡಿತ(ಜಡಿಥಿ bie)ವಾಗಿರುತ್ತದೆ. ಅಂದರೆ, ವಿಷವನ್ನು ಬಿಡುಗಡೆ ಮಾಡಿರುವುದಿಲ್ಲ. ಆಗಲೂ ಬಿಡಿಸದೇ ಇದ್ದರೆ ಮಾತ್ರ ಅದು ಪೆಟೈಟ್(ವಿಷ ಬಿಡುವ) ಕಡಿತಕ್ಕೇ ಮೊರೆಹೋಗುತ್ತದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದಲ್ಲಿ ಅಂಥ ವ್ಯಕ್ತಿಯನ್ನು ಉಳಿಸಿಕೊಳ್ಳುವ ಸಾಧ್ಯತೆ ಶೇ.೯೯ರಷ್ಟಿರುತ್ತದೆ. ನಾವೇನಾದರೂ ನಮಗೆ ಅರಿವಿಲ್ಲದಂತೆ ತುಳಿದರೆ ಅಥವಾ ಹಾನಿ ಮಾಡಿದರೆ, ಅವುಗಳಿಗೆ ಸ್ವಯಂ ರಕ್ಷಣೆಗೆ ಇರುವ ಏಕೈಕ ಮಾರ್ಗ ಕಚ್ಚುವುದು. ನಾವು ನೋಡದೇ ತುಳಿದು, ಹಾವಿನ ತಂಟೆಗೆ ಹೋಗಿ ಅದರಿಂದ ಕಚ್ಚಿಸಿಕೊಂಡು, ಅದೇ ಬಂದು ಕಚ್ಚಿತು ಎಂಬ ಸಿಟ್ಟಿನಿಂದ ಹಾವನ್ನು ಹೊಡೆದು ಸಾಯಿಸುವುದು ನಿಜಕ್ಕೂ ಒಂದು ವಿಪರ್ಯಾಸ ! ಹಾವುಗಳ ಬಗ್ಗೆ ಸರಿಯಾz ಮಾಹಿತಿ ಇಲ್ಲದಿರುವುದೇ ಇಂಥ ಅನರ್ಥಗಳಿಗೆ ಕಾರಣ.

ಚಿತ್ರ:  ಕೇರೇ ಹಾವು (rat snake)

ಕೇರೇ ಹಾವಗಳಂತೂ ವಿಷರಹಿತ ಮತ್ತು ಅತ್ಯಂತ ನಿರುಪದ್ರವಿ. ನೀಳವಾದ, ಭಾರೀ ಗಾತ್ರದ ದೇಹದ ಈ ಹಾವುUಳು ಮನುಷ್ಯರನ್ನು ನೋಡುತ್ತಿದ್ದಂತೆಯೇ ಹೆದರಿ ಓಡುತ್ತವೆ. ಕೇರೇ ಹಾವಿನಂತೆ ನೀರು ಹಾವೂ ಸಹ, ವಿಷರಹಿತ.

ಉಪದ್ರವ ಜೀವಿಯಾದ ಇಲಿಯು ದಿನಕ್ಕೆ ೩೦ಗ್ರಾಂನಷ್ಟು ಆಹಾರ ಧಾನ್ಯಗಳನ್ನು ಭಕ್ಷಿಸುತ್ತದೆ. ಇಲಿಗಳು ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತಿವೆ. ಇಲಿಗಳು ವಾಸಿಸುವ ಬಿಲಕ್ಕೇ ನುಗ್ಗಿ ಅವನ್ನು ಭಕ್ಷಿಸುವ ಸಾಮರ್ಥ್ಯ ಹಾವುಗಳಿಗೇ ಮಾತ್ರ ಇದೆ. ಇಂತ ಇಲಿಗಳನ್ನು ಭಕ್ಷಿಸಿ, ರೈತರಿಗೆ ಆಗುತ್ತಿರುವ ಧಾನ್ಯದ ನಷ್ಟವನ್ನು ತಪ್ಪಿಸುತ್ತಿರುವ ಹಾವುಗಳ ಉಪಯುಕ್ತತೆ ಬಗ್ಗೆ  ಜನಸಾಮಾನ್ಯರಿಗೆ ತಿಳುವಳಿಕೆ ಕೊಡದಿರುವುದು ಅರಣ್ಯ ಮತ್ತು ಕೃಷಿ ಇಲಾಖೆಗಳ ವೈಫಲ್ಯಕ್ಕೆ ನಿದರ್ಶನ.

ಸಾಮಾನ್ಯವಾಗಿ ಕೇರೇ ಹಾವು ಮತ್ತು ನಾಗರಹಾವು ಕೂಡುತ್ತವೆ ಎಂದು ಹಿರಿಯರಿಂದ ಕೇಳಿದ ಬಹು ಮಂದಿ ನಂಬಿದ್ದಾರೆ. ಆದರೆ, ಫ್ರೌಢ ಹಾವುಗಳು ತಮ್ಮದೇ ಜಾತಿಯ ಸಂಗಾತಿಗಳೊಡನೆ ಮಾತ್ರ ಎಣೆ(ಮಿಲನ)ಯಾಗುತ್ತವೆ. ಕೆಲ ಜಾತಿಯ ಹಾವುಗಳು ಎಣೆಯಾಗುವುದು, ತಲೆ ಎತ್ತಿ ಚಲಿಸುವುದು, ಹೊರಳಾಡುವುದು ಸಾಮಾನ್ಯವಾಗಿ ನೋಡಬಹುದಾದ ದೃಶ್ಯ. ಆಂತರಿಕ ನಿಶೇಚನದ ನಂತರ, ಹೆಣ್ಣು ಹಾವು ಪ್ರಶಸ್ತವಾದ ಜಾಗ ನೋಡಿ, ಮಣ್ಣಿನಲ್ಲಿ ಮೊಟ್ಟೆ ಇಡುತ್ತದೆ. ಭೂಮಿಯ ಶಾಖಕ್ಕೇ ಮೊಟ್ಟೆಯೊಡೆದು ಮರಿಗಳಾಗುತ್ತವೆ.

ಚಿತ್ರ: ಕಟ್ಟು ಹಾವು(krait)

ಕಟ್ಟು ಹಾವುಗಳು ರಾತ್ರಿಯ ಹೊತ್ತು ಮಾತ್ರ ಹರಿದಾಡುವ ನಿಶಾಚರಿಗಳು. ದೇಹದ ಮೇಲಿನ ಬಿಳಿಪಟ್ಟೆಗಳಿಂದ  ಸಲುಭವಾಗಿ ಗುರುತಿಸಬಹುದು. ವಿಷದ ಹಲ್ಲು ಚಿಕ್ಕದಾಗಿರುವುದರಿಂದ, ಇವು ಕಚ್ಚಿದಾಗ ಕೂಡಲೇ ತಿಳಿಯುವುದಿಲ್ಲ. ರಾತ್ರಿಯ ಹೊತ್ತು ಹೊರಗೆ ಮಲಗಿರುವ ಅದೆಷ್ಟೋ ಮಂದಿ ಸಾವನ್ನಪ್ಪುವುದು ಈ ಹಾವುಗಳ ಕಡಿತದಿಂದಲೇ.

ಚಿತ್ರ: ಕಾಳಿಂಗ ಸರ್ಪ(king cobra)

ಕಾಳಿಂಗ ಸರ್ಪಗಳು ಪ್ರಪಂಚದ ಅತ್ಯಂತ ವಿಷಪೂರಿತ ಹಾವುಗಳು. ಇವು ವಾಸಿಸುವುದು ಘಟ್ಟಪ್ರದೇಶದ ಬಿದಿರು ಬೆಳೆದಿರುವ ಸ್ಥಳಗಳಲ್ಲಿ. ಇವು ಗೂಡು ನಿರ್ಮಿಸಿ, ಅದರಲ್ಲಿ ಮೊಟ್ಟೆಗಳನ್ನಿಡುವ ಏಕೈಕ ಹಾವುಗಳು. ಬಿದ್ದಿರುವ ಬಿದಿರಿನ ಒಣ ಎಲೆಗಳನ್ನು ತನ್ನ ಶರೀರದಿಂದ ಸುತ್ತುವರೆಯುತ್ತಾ ಎರಡು ಅಡಿ ಎತ್ತರದ  ವೃತ್ತಾಕಾರದ ಗೂಡುಗಳನ್ನು ಕಟ್ಟುತ್ತವೆ. ಅದರಲ್ಲಿ ೪೦ರಿಂದ ೫೦ ಮೊಟ್ಟೆನ್ನಿಟ್ಟು ಮರಿಗಳು ಹೊರಬರುವವರೆಗೆ, ಸುಮಾರು ನೂರು ದಿನ ಕಾವಲು ಕಾಯುತ್ತವೆ.

ಕೊಂಚ ನಾಚಿಕೆ ಸ್ವಭಾವದ ಈ ಹಾವುಗಳ ವಿಷ ತೀಕ್ಷ÷್ಣವಾಗಿರುತ್ತದೆ. ನಾಗರ ಹಾವಿನ ಕಡಿತದಿಂದ ಹೊರಬರುವ ವಿಷ ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳಲು ಸಾಕಾಗುವಷ್ಟಿದ್ದರೆ, ಕಾಳಿಂಗ  ಸರ್ಪದ ಒಂದು ಕಡಿತದಿಂದ ಹೊರಬರುವ ವಿಷದ ಪ್ರಮಾಣ ಇಪ್ಪತ್ತು ಮಂದಿಯನ್ನು ಬಲಿ ತೆಗೆದುಕೊಳ್ಳುವಷ್ಟಿರುತ್ತದೆ. ಕಾಳಿಂಗ ಸರ್ಪದಿಂದ ಕಡಿಸಿಕೊಂಡ ವ್ಯಕ್ತಿ ಬದುಕುಳಿಯಲು ಸಾಧ್ಯವೇ ಇಲ್ಲ.

 ಮೇಲೆ ಹೆಸರಿಸಲಾದ ಈ ನಾಲ್ಕು ಬಗೆಯ ಹಾವಿನ ಮೊಟ್ಟೆಗಳಿಂದ ಹೊರಬರುವ ಮರಿಗಳೂ ಸಹ ವಿಷಪೂರಿತವಾಗಿರುತ್ತವೆ.  ವಿಷವು ನರಮಂಡಲದ ಮೇಲೆ ಪ್ರಭಾವ ಬೀರಿದಲ್ಲಿ ಅದನ್ನು ನ್ಯೂರೋಟಾಕ್ಸಿಕ್  ಎಂದೂ, ರಕ್ತ ಸಂಚಲನದ ಮೇಲೆ ಪ್ರಭಾವ ಬೀರಿದಲ್ಲಿ ಅದನ್ನು ಹೀಮೋಟಾಕ್ಸಿಕ್ ಎಂದೂ ವರ್ಗೀಕರಿಸಲಾಗುತ್ತದೆ. ನಾಗರ ಹಾವಿನ ವಿಷ ನ್ಯೂರೊಟಾಕ್ಸಿಕ್ ಆಗಿದೆ.

ಚಿತ್ರ: ಕೊಳಕುಮಂಡಲ (Russel’s viper)

ಕೊಳಕುಮಂ ಹಾವಿನ ವಿಷ ಹೀಮೋಟಾಕ್ಸಿಕ್ ಆಗಿರುವುದರಿಂದ, ಅದು ಕಚ್ಚಿದರೆ ದೇಹದ ಅಂಗಗಳು ಕೊಳೆತು ಗ್ಯಾಂಗ್ರೀನ್ ಆಗಿ ವ್ಯಕ್ತಿ ಸಾಯುತ್ತಾನೆ. ಉರಿಮಂಡಲ ಹಾವು ಕಚ್ಚಿದಾಗ ತೀವ್ರವಾದ ನೋವು ಮತ್ತು ಉರಿ ಉಂಟಾಗುತ್ತದೆ. ಮೂತ್ರಪಿಂಡದ ಕಾರ್ಯಸಾಮರ್ಥ್ಯ ಕುಸಿದು ಏಳು ದಿನಗಳ ಒಳಗೆ ಕಚ್ಚಿಸಿಕೊಂಡ ವ್ಯಕ್ತಿ ಸಾಯುತ್ತಾನೆ. ಈ ಎರಡೂ ಮಂಡಲದ ಹಾವುಗಳ ವಿಷ ನ್ಯೂರೋಟಾಕ್ಸಿಕ್ ಮತ್ತು ಹೀಮೋಟಾಕ್ಸಿಕ್ ಗುಣಗಳೆರಡನ್ನೂ ಹೊಂದಿವೆ.

ಹಾವಿನ ವಿಷ ಇತರ ಜೀವಿಗಳಿಗೆ ಪ್ರಾಣಾಂತಿಕವೇ ಹೊರತು, ಹಾವಿಗೆ ಅಲ್ಲ. ಜೀರ್ಣಕ್ರಿಯೆಗೆ ನೆರವಾಗುವ ಲಾಲಾರಸವೇ(ಜೊಲ್ಲು) ಇಂಥ ಹಾವುಗಳಲ್ಲಿ ವಿಷವಾಗಿರುತ್ತದೆ. ಇಲಿ, ಕಪ್ಪೆ ಮುಂತಾದ ಪ್ರಾಣಿಗಳನ್ನು ಭಕ್ಷಿಸುವಾಗ, ಅಲ್ಲಲ್ಲಿ ಈ ವಿಷಯುಕ್ತ ಲಾಲಾರಸವನು ಸ್ರವಿಸುತ್ತವೆ. ಆ ರಸ ಆಹಾರಪ್ರಾಣಿಯನ್ನು ಜೀರ್ಣೀಸಿಕೊಳ್ಳಲು ನೆರವಾಗುತ್ತದೆ.

ಇಲ್ಲಿ ವಿವರಿಸಲಾದ ಹಾವುಗಳನ್ನು ಹೊರತುಪಡಿಸಿ, ಬೇರೆ ಯಾವುÅದಾದರೂ ಹಾವು ಕಚ್ಚಿದಲ್ಲಿ, ಹೆದರುವ ಅವಶ್ಯವಿಲ್ಲ. ಹಾವು ಕಚ್ಚಿತು ಎಂದ ಕೂಡಲೇ ವ್ಯಕ್ತಿಯೊಬ್ಬ ತಾನು ಸಾಯುತ್ತೇನೆ ಎಂದು ಭಾವಿಸುವುದರಿಂದಲೇ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸುತ್ತವೆ. ಕೂಡಲೇ ಸೂಕ್ತ ಚಿಕಿತ್ಸೆ ದೊರೆತರೆ, ವ್ಯಕ್ತಿ ಬದುಕುಳಿಯುವುದರಲ್ಲಿ  ಸಂದೇಹವೇ ಇಲ್ಲ.

ಬಹಳಷ್ಟು ಹಾವುಗಳು ನಿರುಪದ್ರವಿಗಳು. ನೀರು ಹಾವು, ಹಸಿರುಬಾಲದ ಹಾವು, ಹೆಬ್ಬಾವು, ಮೊಂಡು ಬಾಲದ ಹಾವು, ವಿಷವಿಲ್ಲದ ಹಾವಿನ ಕೆಲವು ಉದಾಹರಣೆಗಳು.

ಚಿತ್ರ: ನೀರು ಹಾವು (checkered Keelback)

ಚಿತ್ರ: ಹಸಿರು ಹಾವು (Green wine snake)
ಚಿತ್ರಕೃಪೆ: ಅಂತರ್ಜಾಲ

ಸರೀಸೃಪ ವರ್ಗಕ್ಕೆ ಸೇರುವ ಹಾವುಗಳು ಶೀತರಕ್ತ ಪ್ರಾಣಿಗಳು. ಹಾವಿನ ಚರ್ಮ ಹುರುಪೆಗಳಿಂದ ಆವೃತವಾಗಿದೆ. ಹಾವು ಬೆಳೆದಂತೆ ಅದರ ಚರ್ಮ ಬೆಳೆಯುವುದಿಲ್ಲ. ಹೀಗಾಗಿ, ಎಲ್ಲ ಹಾವುಗಳು ನಿಯಮಿತವಾಗಿ ಪೊರೆ ಬಿಡುತ್ತವೆ.

ಗೆದ್ದಲು ಹುಳುಗಳು ಸತತ ಪರಿಶ್ರಮದಿಂದ ಕಟ್ಟುವ ಹುತ್ತ, ಅವುಗಳ ಸಂತತಿ ನಶಿಸಿದ ಮೇಲೆ ಇಲಿಗಳಿಗೆ ಆಶ್ರಯ ತಾಣವಾಗುತ್ತದೆ. ಇಲಿಗಳನ್ನು ಹುಡುಕಿಕೊಂಡು ಬರುವ ಹಾವುಗಳು ಇಲಿಗಳನ್ನು ಭಕ್ಷಿಸಿದ ನಂತರ, ತಮ್ಮ ಆವಾಸಕ್ಕೆ ಪ್ರಶಸ್ತವಾಗಿರುವುದರಿಂದ ಹುತ್ತದಲ್ಲಿಯೇ ಬೀಡು ಬಿಡುತ್ತವೆ. ವಿಶೇಷ ದಿನಗಳಂದು ನಾಡಿನ ಮಹಿಳೆಯರಿಂದ ಪೂಜಾದಿ ಸೇವೆಗಳನ್ನು ಸ್ವೀಕರಿಸುತ್ತವೆ. ಈ ಸಂದರ್ಭದಲ್ಲಿ ಹುತ್ತಕ್ಕೆ ಹಾಲೆರೆಯುವುದನ್ನೂ ನೋಡಿದ್ದೇವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಾವು ಹಾಲನ್ನು ಕುಡಿಯುವುದೇ? ಖಂಡಿತಾ ಇಲ್ಲ ! ಬದಲಿಗೆ, ಅದೇ ಹಾಲನ್ನು ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗಾದರೂ ನೀಡಿದಲ್ಲಿ, ಅದರಿಂದ ಅವರಿಗಾದರೂ ಪ್ರಯೋಜನವಾದೀತು. ಇದು, ಎಲ್ಲರೂ ಯೋಚಿಸಬೇಕಾದ ವಿಷಯ.

ಹಾವಿಗೆ ದ್ವೇಷ ಇದೆಯೇ ?

ಖಂಡಿತಾ ಇಲ್ಲ. ಹಾವುಗಳನ್ನು ಕೊಲ್ಲುವ ಸಂದರ್ಭದಲ್ಲಿ, ಅವು ಅರೆ ಜೀವವಾಗಿ ತಪ್ಪಿಸಿಕೊಂಡಾಗ ಅವುಗಳಿಗಾದ ಹೊಡೆತದ ನೋವು ಇರುವವರೆಗೂ, ಸಿಕ್ಕುವ ಯಾವುದೇ ವ್ಯಕ್ತಿಯನ್ನು ಕಚ್ಚಬಹುದೇ ಹೊರತು, ವ್ಯಕ್ತಿಯ ಮೇಲಿನ ದ್ವೇಷದಿಂದಲ್ಲ. ಹಾವುಳಿಗೆ ನೆನಪಿನ ಶಕ್ತಿ ಇಲ್ಲ. ಅದಾಗಿ ಬಂದು ಹಾವೊಂದು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಕಚ್ಚಿರುವ ಯಾವುದೇ ಇತಿಹಾಸ ದಾಖಲಾಗಿಲ್ಲ. ಮನೆಯ ಬಳಿ ಅಥವಾ ಜಮೀನಿನ ಬಳಿ ಹಾವು ಕಂಡುಬಂದರೆ, ಅಲ್ಲಿ ಇಲಿಗಳ ಓಡಾಟವಿದೆ ಎಂದರ್ಥ. ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಬರುತ್ತವೆಯೇ ಹೊರತು, ನಮ್ಮನ್ನಲ್ಲ. ಸಂತಾನೋತ್ಪತ್ತಿಯ ಸಮಯವಾದ ಕಾರಣ, ಬೇಸಿಗೆಯ ಪ್ರಾರಂಭದಲ್ಲಿ ಹಾವುಗಳು ಹರಿದಾಡುವುದು ಹೆಚ್ಚು. ರಾತ್ರಿಯ ವೇಳೆ ಹಾವುಗಳು ಹರಿದಾಡುವುದು ಸರ್ವೇ ಸಾಮಾನ್ಯ. ಏಕೆಂದರೆ, ಅವುಗಳ ಆಹಾರವಾದ ಇಲಿ, ಕಪ್ಪೆಗಳು ಹೊರಬರುವುದು ಇದೇ ಸಮಯದಲ್ಲಿ.

ಹಾವುಗಳು ಮಾನವನ ಮಿತ್ರ ಹಾಗೂ ರೈತನ ಬಂಧು. ಹಾವುಗಳ ಬಗ್ಗೆ ಪ್ರಚಲಿತದಲ್ಲಿರುವ ಮೂಢನಂಬಿಕೆಗಳನ್ನು ತೊರೆದು, ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯ. ನಾವೂ ಬದುಕೋಣ, ಹಾವುಗಳನ್ನೂ ಬದುಕಲು ಬಿಡೋಣ.

2 comments:

  1. ಹಾವುಗಳು ಅವುಗಳ ವಿಧಗಳು ಹಾಗೆ ಅವುಗಳಿಂದ ಆಗುವ ಅನುಕೂಲಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೀರಿ ನಿಮ್ಮ ಲೇಖನ ಅವುಗಳ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುತ್ತದೆ. ಹೀಗೆ ಇನ್ನೂ ಉತ್ತಮವಾದ ಲೇಖನಗಳು ನಿಮ್ಮಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ

    ReplyDelete
  2. ಉರಗಗಳ ಬಗೆಗಿನ ನಿಮ್ಮ ಲೇಖನ ಮಾಹಿತಿ ಪೂರ್ಣ ವಾಗಿದೆ ಸರ್, ಅಭಿನಂದನೆಗಳು

    ReplyDelete