ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, June 5, 2022

ಹುತ್ತ : ಅದರ ಬಗ್ಗೆ ಗೊತ್ತಾ ?

ಹುತ್ತ : ಅದರ ಬಗ್ಗೆ ಗೊತ್ತಾ ?

ಡಿ. ಕೃಷ್ಣಚೈತನ್ಯ
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹುತ್ತ ಎಂದ ಕೂಡಲೇ ಅದು ಹಾವಿನದ್ದು ಎಂದು ಭಾವಿಸುವ ಮಂದಿಗೆ ಹುತ್ತದ ರಚನೆ ಮಾಡುವುದು ಹಾವುಗಳಲ್ಲ, ಬದಲಿಗೆ ಗೆದ್ದಲು ಎಂಬ ಒಂದು ಬಗೆಯ ಕೀಟಗಳು ಎಂಬ ಸತ್ಯ ಗೋಚರಿಸಿದರೆ, ಹುತ್ತಕ್ಕೆ ಹಾಲೆರೆಯುವ ವ್ಯರ್ಥ ಆಚರಣೆ ನಿಲ್ಲಬಹುದೇನೋ. ಶಿಕ್ಷಕ ಹಾಗೂ ವನ್ಯಜೀವಿ ತಜ್ಞ , ಶ್ರೀ ಕೃಷ್ಣ ಚೈತನ್ಯ ಈ ಬಾರಿಯ ಲೇಖನದಲ್ಲಿ ಹುತ್ತಗಳ ಬಗ್ಗೆ ಬೆಳಕು ಚೆಲ್ಲವ ಪ್ರಯತ್ನ ಮಾಡಿದ್ದಾರೆ.

ನಾಗರಹಾವುಗಳನ್ನು ಹಾವುಗಳಲ್ಲೇ ಶ್ರೇಷ್ಠ ಎಂದು ಪರಿಗಣಿಸುವುದನ್ನು ಪುರಾಣಕಾಲದಿಂದಲೂ ನಾವು ನೋಡುತ್ತಿದ್ದೇವೆ. ದ್ವಾಪರಯುಗದಲ್ಲಿ ಸರ್ಪದ ಹೆಡೆಯ ಮೇಲೆ ನಿಂತು ನರ್ತಿಸಿದ ಶ್ರೀ ಕೃಷ್ಣನ ಕತೆ ಕೇಳಿಲ್ಲವೇ? ಶಿವನೂ ಸಹ ಹಾವುಗಳನ್ನೇ ಆಭರಣ ಮಾಡಿಕೊಂಡು ನಾಗಾಭರಣ ಎಂಬ ಹೆಸರನ್ನು ಪಡೆದಿಲ್ಲವೇ?  ಗಣಪತಿಯು ಹೊಟ್ಟೆ ಬಿರಿಯುವಷ್ಟು ತಿಂದು, ತನ್ನ ಹೊಟ್ಟೆ ಒಡೆದುಹೋಗುವುದನ್ನು ತಡೆಯಲು ಸುತ್ತಿಕೊಂಡದ್ದು ನಾಗರಹಾವನ್ನಲ್ಲವೇ? ಈ ಎಲ್ಲ ಕತೆಗಳ ಹಿಂದೆ ಇರುವ ಮೂಲ ಉದ್ದೇಶ ಹಾವುಗಳನ್ನು ಪೂಜಿಸುವುದರಿಂದಲಾದರೂ, ಅವು ಪರಿಸರದಲ್ಲಿ ಉಳಿಯಲಿ ಎಂಬ ಸಂದೇಶ ಕೊಡುವುದೇ ಆಗಿದೆ.

ಪ್ರತೀ ವರ್ಷ ನಾಗರ ಪಂಚಮಿ, ಸುಬ್ರಹ್ಮಣ್ಯ ಷಷ್ಠಿಯಂದು ಮನೆಯ ಹೆಂಗಸರು ಹುತ್ತಕ್ಕೆ ತನಿ(ಹಾಲು) ಎರೆದು ಪೂಜೆ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಏಕೆಂದರೆ, ಅಲ್ಲಿ ವಿಶೇಷವಾಗಿ ನಾಗರಹಾವು ಇರುತ್ತದೆ ಎಂಬ ನಂಬಿಕೆಯಿಂದ. ಹಾಗಾದರೆ, ಹಾವು ಅಲ್ಲಿರುತ್ತದೆಯೇ? ಹುತ್ತವನ್ನು ಹಾವು ನಿರ್ಮಿಸುತ್ತದೆಯೇ? ಎಂದು ನೋಡಿದಾಗ ಖಂಡಿತವಾಗಿ ಇಲ್ಲ ಎಂದು ಬರುವ ಉತ್ತರದಿಂದ ಆಶ್ಚರ್ಯವಾಗುತ್ತದೆ. ಹುತ್ತವನ್ನು ನಿರ್ಮಿಸುವುದು ನಿಜವಾಗಿ ಗೆದ್ದಲು ಹುಳುಗಳು. ಇವು ಸಂಧಿಪದಿ(ಆರ್ಥೋಪೋಡ)ಗಳ ವಂಶಕ್ಕೆ ಸೇರಿದ ಒಂದು ಬಗೆಯ ಕೀಟಗಳು. ಇಂಗ್ಲೀಷಿನಲ್ಲಿ ವ್ಹೈಟ್‍ಅಂಟ್ಸ್ ಅಥವಾ ಟರ್ಮೈಟ್ಸ್ ಎಂತಲೂ ಕರೆಯಲಾಗುವ ಇವು ಸಾದಾರಣವಾಗಿ 200 ಸೆಂ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಎಲೆ, ರೆಂಬೆ- ಕೊಂಬೆ, ಹುಲ್ಲು ಮುಂತಾದ ಸಸ್ಯ ತ್ಯಾಜ್ಯಗಳು ತಾವಾಗಿ ಕೊಳೆತು ಅಥವಾ ಶಿಲೀಂದ್ರ (ಬೂಷ್ಟು/ಆಣಬೆ)ಗಳಿಂದ ವಿಭಜನೆಗೊಂಡು ಭೂಮಿಗೆ ಸೇರಿದರೆ, ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಸಸ್ಯ ತ್ಯಾಜ್ಯಗಳು ತಾವಾಗಿ ಕೊಳೆಯದೇ ಇರುವುದರಿಂದ ಅವುಗಳನ್ನು ಭೂಮಿಗೆ ಸೇರಿಸಲು ಯಾವುದಾದರೊಂದು ಪ್ರತಿನಿಧಿ ಬೇಕಲ್ಲವೇ? ಅವೇ, ಗೆದ್ದಲುಗಳು. ಆಂಥ ತ್ಯಾಜ್ಯಗಳನ್ನು ಗೆದ್ದಲುಗಳು ತಿಂದು ಭೂಮಿಗೆ ವಿಸರ್ಜಿಸುತ್ತವೆ.

ಗೆದ್ದಲುಗಳು ಮರ ತಿನ್ನುವ ಜಿರಳೆಗಳಿಂದ ಜುರಾಸಿಕ್ ಯುಗದ ಅಂತ್ಯದಲ್ಲಿ ವಿಕಾಸಗೊಂಡ ಪ್ರಾಣಿಗಳು. ಪ್ರಪಂಚದಾದ್ಯಂತ ಇವಗಳಲ್ಲಿ ಸುಮಾರು 3106 ಪ್ರಭೇದಗಳನ್ನು ಇದುವರೆಗೆ ಈವರೆಗೆ ಗುರುತಿಸಲಾಗಿದೆ. ಸಮಾಜ ಜೀವಿಗಳಾದ ಗೆದ್ದಲುಗಳಲ್ಲಿ, ಮೂರು ಬಗೆಯ ಕೀಟಗಳನ್ನು ಗುರುತಿಸಬಹುದು.

೧. ರಾಣಿ ಗೆದ್ದಲು : ಇವು ಸದಾ ಹುತ್ತದ ಒಳಗಡೆಯೇ ಇದ್ದು ಕೇವಲ ಸಂತಾನೋತ್ಪತ್ತಿಯಲ್ಲಿ ತೊಡಗಿರುತ್ತದೆ. ಗಾತ್ರದಲ್ಲಿ ಸಾದಾರಣ ಗೆದ್ದಲಿಗಿಂತ ಸುಮಾರು ಮುವ್ವತ್ತು- ನಲ್ವತ್ತು ಪಟ್ಟು ಅಂದರೆ, ನಮ್ಮ ಹೆಬ್ಬೆರಳಿನ ಗಾತ್ರದಷ್ಟು ದೊಡ್ಡದಿರುತ್ತದೆ.



೨. ರಾಜ ಗೆದ್ದಲು : ರಾಣಿ ಗೆದ್ದಲಿಗಿಂತ ಸ್ವಲ್ಪ ಚಿಕ್ಕದಿರುತ್ತದೆ. ಎರಡು-ಮೂರು ಅಡಿ ಎತ್ತರವಿರುವ ಹುತ್ತದಲ್ಲಿ ನಾಲ್ಕರಿಂದ ಆರು ರಾಣಿ ಗೆದ್ದಲುಗಳಿದ್ದರೆ, ಐದರಿಂದ ಎಂಟು ಅಡಿ ಎತ್ತರವಿರುವ ಹುತ್ತದಲ್ಲಿ ಹತ್ತು-ಹನ್ನೆರಡು ರಾಣಿ ಹುಳುಗಳು ಇರುತ್ತವೆ. ಇವು ಸಾಧಾರಣವಾಗಿ, 30ರಿಂದ 50 ವರ್ಷ ಬದುಕುತ್ತವೆ.

೩. ಕೆಲಸಗಾರ ಗೆದ್ದಲು : ಹುತ್ತದಲ್ಲಿ ಅವು ನಿರ್ವಹಿಸುವ ಪಾತ್ರದ ಆಧಾರದಮೆಲೆ ಇವುಗಳಲ್ಲಿ ಮೂರು ಬಗೆ ಇರುತ್ತವೆ. ಹುತ್ತಕ್ಕೆ ಏನಾದರೂ ತೊಂದರೆಯಾದರೆ, ಅಂದರೆ ಹುತ್ತಕ್ಕೆ ಯಾವುದಾದರು ಪ್ರಾಣಿ ಮೈ ಅಥವಾ ಕೋಡು ಉಜ್ಜಿಕೊಂಡಾಗ, ಕೀಟಲೆ ಮಾಡುವ ಮನುಷ್ಯ ಕಾರಣವಿಲ್ಲದೆ ಹುತ್ತವನ್ನು ಒದ್ದು ಬೀಳಿಸಿದಾಗ, ಇಲ್ಲವೆ, ಹುತ್ತದ ತುದಿ ಅಥವಾ ಅಲಗುಗಳು ಮುರಿದಾಗ, ಹೊರಬಂದು ಆ ಪ್ರಾಣಿಯನ್ನು ಎದುರಿಸುವಂತೆ ಮಾಡಿ ಅದಕ್ಕೆ ಆಹಾರವಾಗುವ ‘ಆತ್ಮಹತ್ಯಾ’ ಗೆದ್ದಲು ಹುಳುಗಳು, ಹಾನಿಗೊಳಗಾದ ಹುತ್ತವÀನ್ನು ಸರಿಪಡಿಸುವ, ದೂರದಿಂದ ಆಹಾರ ತಂದು ಎಲ್ಲರಿಗೂ ಉಣಬಡಿಸುವ, ಹುತ್ತವನ್ನು ರಕ್ಷಿಸುªಸೈನಿಕ’ ಹುಳುಗಳು ಮತ್ತು ರಾಣಿ ಗೆದ್ದಲಿನ ಸೇವೆ ಮಾಡುವ, ಮೊಟ್ಟೆಗಳನ್ನು ಸೂಕ್ತ ಸ್ಥಳಗಳಿಗೆ ವರ್ಗಾಯಿಸಿ ಮರಿಗಳ ಲಾಲನೆ, ಪಾಲನೆ ಮಾಡುವ ‘ದಾದಿ’ ಗೆದ್ದಲು ಹುಳುಗಳು.

ಚಿತ್ರ 1 : ಏಳೆಂಟು ವರ್ಷಗಳಾಗಿರುವ ಹುತ್ತ

ಚಿತ್ರ 2: ಸುಮಾರು 30 ವರ್ಷ ಹಳೆಯದಾದ ಹುತ್ತ

ಒಂದು ಬದಿಯಿಂದ ಬಿಸಿಲು ಬಿದ್ದರೆ ಇನ್ನುಳಿದ ಕಡೆ ನೆರಳಿರಲೆಂದು ಗೆದ್ದಲುಗಳು ಹಲವಾರು ಅಲಗುಗಳಿರುವಂತೆ ಹುತ್ತವನ್ನು ನಿರ್ಮಿಸುತ್ತವೆ. ಇದು, ಹುತ್ತದ ತಾಪಮಾನವನ್ನು ಸ್ಥಿರವಾಗಿ ಇಡುವುದಕ್ಕಾಗಿ.  ಹುತ್ತದಲ್ಲಿ ಯಾವಾಗಲೂ ಸಾಮಾನ್ಯವಾಗಿ ೧೪-೧೫ ಡಿಗ್ರಿ ತಾಪಮಾನವಿರುವಂತೆ ಕಾಪಾಡಿಕೊಳ್ಳುತ್ತವೆÉ. ಅವುಗಳಿಗೆ ಅದಕ್ಕಿಂತ ಹೆಚ್ಚಿನ ಶಾಖ ಅಥವಾ ಬಿಸಿಲನ್ನು ಸಹಿಸಿಕೊಳ್ಳಲಾಗುವುದಿಲ್ಲ. ಹಾಗಾಗಿ, ಅವು ತಿನ್ನುವ ಪದಾರ್ಥಗಳ ಮೇಲೆ ಮೊದಲು ಮಣ್ಣಿನ ಪದರ ರೂಪಿಸಿಕೊಂಡು, ನಂತರ ಒಳಗಡೆ ಆ ವಸ್ತುವನ್ನು ತಿಂದು ಮುಗಿಸುತ್ತವೆ. ನಮ್ಮ ಮನೆಯ ಕಿಟಕಿ, ಬಾಗಿಲು ಮತ್ತು ಜಂತಿ ರೀಪರ್‍ಗಳಿಗೂ ಗೆದ್ದಲು ಹಿಡಿದಿರುವುದನ್ನು  ನಾವು ನೋಡಿದ್ದೇವೆ ಅಲ್ಲವೇ?. ಹಾಗಾದರೆ ಅವುಗಳಿಗೆ ಹುತ್ತವಿರುವುದಿಲ್ಲವೇ ಎಂದು ನೋಡಿದಾಗ, ಹತ್ತಿರದಲ್ಲಿ ಕೆಲವೊಮ್ಮೆ ಹುತ್ತ ಕಾಣಸಿಗುವುದಿಲ್ಲ. ಸೂಕ್ಷ್ಮವಾಗಿ ಅವಲೋಕಿಸಿದಾಗ ಹುತ್ತಗಳು ಹಲವಾರು ಮೀಟರ್ ದೂರದಲ್ಲಿದ್ದು ಅಲ್ಲಿಂದ ಮನೆಗೋ, ಬಿದ್ದು ಒಣಗಿರುವ ಎಲೆಗಳಿಗೋ, ರೆಂಬೆ ಕೊಂಬೆಗಳಿಗೋ ಭೂಗತ ಕೊಳವೆ ರೀತಿಯ ಮಾರ್ಗ ಅಥವಾ ಸುರಂಗ ಮಾರ್ಗಗಳನ್ನು ರಚಿಸಿಕೊಂಡಿರುತ್ತವೆ. ಆ ಸುರಂಗ ಮಾರ್ಗಗಳ ಮೂಲಕ ತ್ಯಾಜ್ಯ ಪದಾರ್ಥಗಳ ಸ್ಥಳಕ್ಕೆ ದಾವಿಸಿ ಅವುಗಳನ್ನು ತಿಂದು, ಸಾಗಿಸಿ ಮುಗಿಸುತ್ತವೆ. ಹುತ್ತದಲ್ಲಿ ಗೆದ್ದಲಿನ ಸಂಖ್ಯೆ ಮಿತಿಮೀರಿದಾಗ, ಸೂಕ್ತ ಸಮಯದಲ್ಲಿ ಅಂದರೆ, ಮಳೆ ಬಿದ್ದು ನೆಲ ಮೆದುವಾದಾಗ ರೆಕ್ಕೆ ಬೆಳೆಸಿಕೊಂಡು ಬೇರೆ ಸ್ಥಳದ ಆಯ್ಕೆಗೆ ಹಾರಿಕೊಂಡು ಹೋಗುತ್ತವೆ.

 


ರಾತ್ರಿಯ ವಿದ್ಯುತ್ ದೀಪದ ಬೆಳಕಿಗೆ ಅಸಂಖ್ಯಾತ ಗೆದ್ದಲಿನ ಚಿಟ್ಟೆಗಳು ಹಾರಾಡುತ್ತಿರುವುದನ್ನು, ಬೆಳಿಗ್ಗೆಯ ವೇಳೆಗೆ ರೆಕ್ಕೆಗಳ ರಾಶಿಯನ್ನು, ಪಕ್ಷಿಗಳು ಹುಳುಗಳನ್ನು ಹೆಕ್ಕಿ ತಿನ್ನುತ್ತಿರುವುದನ್ನು  ನಾವು ನೋಡಿರುತ್ತೇವೆ. ಕೆಲವೊಮ್ಮೆ ಮನೆಯ ಒಳಕ್ಕೂ ಬಂದು, ರೆಕ್ಕೆ ಉದುರಿಸಿ ಗೋಡೆಯ ಅಂಚು ಹಾಗೂ ಮೂಲೆಗಳಲಿ, ಒಂದರ ಹಿಂದೆ ಒಂದರಂತೆ ಬಾಲ ಹಿಡಿದು ಹರಿದಾಡುವುದನ್ನೂ ನೀವು ನೋಡಿರಬಹುದು. ಇವೇ ಗೆದ್ದಲಿನ ಚಿಟ್ಟೆಗಳು.ಇವುಗಳಿಗೆ ಮೆದುವಾದ ಸ್ಥಳ ಸಿಕ್ಕಲ್ಲಿ ಅಲ್ಲೇ ಮಣ್ಣನ್ನು ಕೊರೆದು ರಂಧ್ರ ಮಾಡಿ, ¼ಸೇರಿಕೊಂಡು ಸಂತಾನಭಿವೃದ್ಧಿ ಮಾಡಿ ಹೊಸ ಹುತ್ತ ನಿರ್ಮಾಣಕ್ಕೆ ಕಾರಣವಾಗುತ್ತವೆ.

ಗೆದ್ದಲು ಹುಳುಗಳ ಜೊಲ್ಲಿಗೆ ಅಂಟು ಗುಣವಿದ್ದು, ಮಣ್ಣನ್ನು ಜೊಲ್ಲಿನಿಂದ ಮಿಶ್ರಣ ಮಾಡಿ ಹುತ್ತ ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆÀ. ಜೀವಂತ ಹುತ್ತಕ್ಕೆ ಯಾವುದೇ ರಂದ್ರಗಳಿರುವುದಿಲ್ಲ. ಹುತ್ತದಲ್ಲಿ ರಂದ್ರಗಳು ಕಂಡುಬಂದಲ್ಲಿ, ಅದರಲ್ಲಿ ಗೆದ್ದಲು ಇಲ್ಲವೆಂದೇ ತಿಳಿಯಬೇಕು. ಜೀವ ಭಯದಿಂದಲೋ, ಆಕಸ್ಮಿಕವಾಗಿಯೋ ಅಥವಾ ಇಲಿಗಳನ್ನು ಹಿಡಿಯಲೆಂದೋ ಬಂದು ಹುತ್ತವನ್ನು ಸೇರಿಕೊಳ್ಳುವ ಹಾವು, ಪ್ರಶಸ್ತವಾದ ಜಾಗ ಹುಡುಕಿಕೊಂಡು  ಅಲ್ಲೇ ಸೇರಿಕೊಳ್ಳುವುದು ಉಂಟು. ಅದಕ್ಕೆಂದೇ ನಮ್ಮ ನಾಡಿನ ಮಹಿಳೆಯರು ಹುತ್ತದಲ್ಲಿ ಹಾವು ಇರುತ್ತದೆ ಎಂದು ಭ್ರಮಿಸಿ ಹಾಲು ಎರೆಯುವುದು. ಹುತ್ತಕ್ಕೆ ಹಾಲು ಎರೆದು ಅದನ್ನು ವ್ಯರ್ಥ ಮಾಡುವುದರ ಬದಲು ಆ ಹಾಲನ್ನು ಸಂಗ್ರಹಿಸಿ ಅನಾಥಾಶ್ರಮ, ವೃದ್ಧಾಶ್ರಮ, ಬಡವರು ಅಥವಾ ರೋಗಿಗಳಿಗೆ ವಿತರಿಸಿದರೆ ಸಾರ್ಥಕವಾಗುತ್ತದೆ. ಅದೂ ಅಲ್ಲದೆ, ನಿಜವಾಗಿಯೂ ಹಾವುಗಳು ಹಾಲು ಕುಡಿಯುವುದಿಲ್ಲ ಎಂಬ ಸತ್ಯವನ್ನು ನಮ್ಮ ನಾಡಿನ ಜನ ಅರ್ಥಮಾಡಿಕೊಂಡರೆ, ಶೀತರಕ್ತ ಪ್ರಾಣಿಯಾದ ಹಾವು ಹಾಲಿನಿಂದ ಒದ್ದೆಯಾಗಿ, ಉಸಿರುಗಟ್ಟಿ ಸಾಯುವುದು ತಪ್ಪುತ್ತದೆ. ಕಲ್ಲ ನಾಗರ ಕಂಡರೆ ಹಾಲು ಎರೆಯುವ ಜನ ನಿಜ ನಾಗರ ಕಂಡರೆ ಕೊಲ್ಲು ಕೊಲ್ಲು ಎಂಬುವರಯ್ಯ ಎಂಬ ವಚನ ನೆನಪಾಗುತ್ತದೆ ಅಲ್ಲವೆ? ಅಸಂಖ್ಯಾತ ಪಕ್ಷಿ ಪ್ರಾಣಿಗಳಿಗೆ ಆಹಾರವಾಗುತ್ತಾ ಆಹಾರ ಸರಪಣಿಯನ್ನು ಪೋಷಿಸುತ್ತಿರುವ, ಕಸಕಡ್ಡಿಯನ್ನು ತಿಂದು ಸ್ವಚ್ಚಗೊಳಿಸುವುದಲ್ಲದೆ,  ಅವುಗಳ ತ್ಯಾಜ್ಯವನ್ನು ಮಣ್ಣಿಗೆ ಸೇರಿಸಿ ಫಲವತ್ತತೆಯನ್ನು ಕಾಪಾಡುತ್ತಿರುವ ಗೆದ್ದಲು ಹುಳುಗಳ ಪಾತ್ರವನ್ನು ನಾವು ಕಡೆಗಣಿಸುವಂತಿಲ್ಲ.

16 comments:

  1. Excellent story about a ant insects congratulations 👏🎆👏

    ReplyDelete
  2. ಹುತ್ತ ಹಾವು ಕಟ್ಟಲ್ಲ ಗೆದ್ದಲಾಹುಳ ಅಂತಾ ಗೊತ್ತಿತ್ತು ಆದರೆ ಹುತ್ತದ ಬ್ರಹ್ಮಾಂಡ ದರ್ಶನ ಮಾಡಿಸಿದ್ದಕ್ಕೆ ವಂದನೆಗಳು, ಕೂತುಲಕಾರಿ ಉಪಯುಕ್ತ ಮಾಹಿತಿ ಧನ್ಯವಾದಗಳು ಚೈತನ್ಯ ಸರ್ 🙏

    ReplyDelete
  3. ಗೆದ್ದಲು ಹುತ್ತ ಕಟ್ಟುವಷ್ಟೆ ನಯ ನಾಜೂಕಾಗಿ ನಿಮ್ಮ ಲೇಖನವನ್ನು ಕಟ್ಟಿಕೊಟ್ಡಿದ್ದೀರಿ ಅಭಿನಂದನೆಗಳು ಸರ್

    ReplyDelete
  4. Well written. It is said that the anthill acts as the natural way of rainwater harvesting. Is it true??

    ReplyDelete