ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, June 5, 2022

ಸೌಂದರ್ಯಾರಾಧಕ ಬಾವರ್‌ ಹಕ್ಕಿ

ಸೌಂದರ್ಯಾರಾಧಕ ಬಾವರ್‌ ಹಕ್ಕಿ

ಲೇಖಕರು : ಡಾ. ಟಿ.ಎ.ಬಾಲಕೃಷ್ಣ ಅಡಿಗ



ಪ್ರಾಣಿ ಪ್ರಪಂಚದಲ್ಲಿ ಕೌಶಲ್ಯಪೂರ್ಣವಾದ ಹಾಗೂ ಆಕರ್ಷಕವಾದ‌ ಗೂಡುಗಳನ್ನು ಕಟ್ಟವುದರಲ್ಲಿ ಹಕ್ಕಿಗಳದ್ದು ಎತ್ತಿದ ಕೈ. ಅನೇಕ ಜಾತಿಯ ಹಕ್ಕಿಗಳಲ್ಲಿ ಮರಿಗಳ ಪಾಲನೆ ಹಾಗೂ ಪೋಷಣೆಗಾಗಿ ಗೂಡು ಕಟ್ಟುವ ಒಂದು ಸಹಜ ಪ್ರಕ್ರಿಯೆ ಕಂಡುಬರುತ್ತದೆ. ಅವುಗಳಲ್ಲಿ ಅತ್ಯಂತ ಸುಂದರವಾದ ಹಾಗೂ ಅತ್ಯಂತ ಅಲಂಕಾರಿಕ ಗೂಡುಗಳನ್ನು ರಚಿಸುವ ಕೌಶಲ್ಯವನ್ನು ಹೊಂದಿರುವ ಹಕ್ಕಿಗಳೆಂದರೆ, ಬಾವರ್‌ (Bower) ಹಕ್ಕಿಗಳು.

ಆಸ್ಟ್ರೇಲಿಯ ಹಾಗೂ ನ್ಯೂಗಿನಿ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಬಾವರ್‌ ಹಕ್ಕಿಗಳು ನಮ್ಮಲ್ಲಿರುವ ಕಾಗೆಗಳಿಗೆ ಹತ್ತಿರದ ಸಂಬಂಧಿಗಳು. ಈ ಹಕ್ಕಿಗಳಿಗೆ ಸುಂದರವಾದ ಪುಕ್ಕಗಳಿಲ್ಲ. ಇತರ ಅನೇಕ ಹಕ್ಕಿಗಳಿಗಿರುವಂತೆ ಇಂಪಾದ ದನಿಯೂ ಇಲ್ಲ. ಈ ಕೊರತೆಗಳನ್ನು ಅವು ಸುಂದರವಾದ ಲತಾಕುಂಜವನ್ನು ಕಟ್ಟುವುದರಲ್ಲಿ ಮತ್ತು ಅವುಗಳನ್ನು ಅಲಂಕರಿಸುವಲ್ಲಿ ಪರಿಹರಿಸಿಕೊಂಡಿವೆ. ಗಂಡು ಬಾವರ್‌ ಹಕ್ಕಿಯು ತನ್ನ ಸಂಗಾತಿಯನ್ನು ಒಲಿಸಿಕೊಳ್ಳಲೆಂದೇ ರಚಿಸುವ ವಿಹಾರ ಮಂಟಪವೇ ಈ ಲತಾ ಕುಂಜಗಳು ! ಅದು ತನ್ನ ಸಂಗಾತಿಯನ್ನು ಕೂಡುವುದಕ್ಕೆ ಬಹಳಷ್ಟು ಮುಂಚೆಯೇ ಈ ರೀತಿಯ ಮಂಟಪಗಳನ್ನು ಕಟ್ಟಲು ಪ್ರಾರಂಭಿಸುತ್ತದೆ. ಇವುಗಳ ಮಧ್ಯೆ ಯಾವುದೇ ವೈಶಿಷ್ಟ್ಯವಿಲ್ಲದ ಗೂಡುಗಳನ್ನು ರಚಿಸುತ್ತದೆ.

ಗರಗಸದ ಕೊಕ್ಕಿನ ಬಾವರ್‌ ಹಕ್ಕಿಗಳು (Senopocetes ) ಸರಳವಾದ ಲತಾಕುಂಜಗಳನ್ನು ರಚಿಸುತ್ತವೆ. ಇವು ಒಂದು ಮರವನ್ನು ಆರಿಸಿಕೊಂಡು, ಅದರ ಸುತ್ತಲೂ ಸಣ್ಣ ಜಾಗವನ್ನು ಸ್ವಚ್ಛಗೊಳಿಸುತ್ತವೆ. ಅಲ್ಲಿ ಬಿದ್ದಿರುವ ಕಸ ಕಡ್ಡಿಗಳು, ಒಣಗಿದ ಎಲೆಗಳು, ಕಲ್ಲು, ಮಣ್ಣು, ಹೆಂಟೆ ಮುಂತಾದ ವಸ್ತುಗಳನ್ನು ಆರಿಸಿ ಹೊರಕ್ಕೆ ಎಸೆಯುತ್ತವೆ ! ನಂತರ, ಮರದ ಬುಡದಲ್ಲಿರುವ ಸಣ್ಣ ಪುಟ್ಟ ರೆಂಬೆಗಳನ್ನು ಹಾಗೂ ಎಲೆಗಳನ್ನು ಕಿತ್ತು ಹಾಕುತ್ತವೆ. ಸುತ್ತಲೂ ಹಬ್ಬುವ ಬಳ್ಳಿಗಳನ್ನು ತಂದು ಅಲ್ಲಿ ನೆಡುತ್ತವೆ. ಈ ಬಳ್ಳಿಗಳನ್ನು ಒಳಗೆ ಬಾಗಿಸಿ ಮರದ ಬುಡಕ್ಕೆ ಅವುಗಳನ್ನು ಸಿಕ್ಕಿಸುತ್ತವೆ. ಕೆಳಭಾಗ ಪೇಲವವಾಗಿರುವ ಎಲೆಗಳನ್ನು ಹುಡುಕಿ ತರುತ್ತವೆ. ಈ ಎಲೆಗಳ ಬಿಳಿಯಾದ, ಹೊಳೆಯುವ ಕೆಳಭಾಗವನ್ನು ಮೇಲಕ್ಕೆ ಬರುವಂತೆ ನೆಲಕ್ಕೆ ಹಾಸುತ್ತವೆ. ಅಲ್ಲಿಯೇ ಮರದ ಮೇಲೆ ಕುಳಿತು ಸಂಗಾತಿಗಾಗಿ ಕಾಯತೊಡಗುತ್ತವೆ ! ಆಗಾಗ್ಗೆ ಕೆಳಗೆ ಬಂದು ಗಾಳಿಗೆ ಹಾರಿ, ತಲೆಕೆಳಗಾದ ಎಲೆಗಳನ್ನು ಸರಿಪಡಿಸುತ್ತವೆ. ಅಪರೂಪಕ್ಕೆ ಹೆಣ್ಣು ಹಕ್ಕಿಗಳೂ ಈ ರೀತಿಯ ಲತಾಕುಂಜಗಳನ್ನು ರಚಿಸುವ ಕಾಯಕಕ್ಕೆ ನೆರವಾ‌ಗುತ್ತವೆ.

                           
ಸ್ಯಾಟಿನ್ ಬಾವರ್‌ ಹಕ್ಕಿ (Philorrhyncus) ಕಟ್ಟುವ ಲತಾಕುಂಜಗಳು ಇನ್ನಷ್ಟು ವಿಶಾಲವಾಗಿಯೂ, ಸಂಕೀರ್ಣವಾಗಿಯೂ ಇರುತ್ತವೆ. ಈ ಹಕ್ಕಿಗಳಲ್ಲಿ, ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಲತಾಕುಂಜಗಳ ರಚನೆಯಲ್ಲಿ ಪಾಲ್ಗೊಳ್ಳುತ್ತವೆ. ಇವು, ಮರವೊಂದರ ಬುಡವನ್ನು ಆರಿಸಿ, ಅದನ್ನು ಶುಚಿಗೊಳಿಸಿದ ನಂತರ, ಅಲ್ಲಿ ಕೆಲವು ಇಂಚುಗಳಷ್ಟು ಎತ್ತರದ ಕಡ್ಡಿಗಳ ಕಟ್ಟೆಯೊಂದನ್ನು ನಿರ್ಮಿಸುತ್ತವೆ. ಅದರ ಮೇಲೆ ಕಡ್ಡಿಗಳಿಂದಲೇ ಕಮಾನುಗಳನ್ನು ನಿರ್ಮಿಸುತ್ತವೆ. ಈ ಕಮಾನುಗಳನ್ನು ಬಳ್ಳಿಗಳ ತಳಿರು, ತೋರಣಗಳಿಂದ ಅಲಂಕರಿಸುತ್ತವೆ. ಇವುಗಳ ಮುಂದೆ ಆಕರ್ಷಕವಾಗಿ ಕಾಣುವ ಬಣ್ಣ, ಬಣ್ಣದ ವಸ್ತುಗಳನ್ನು ಸಂಗ್ರಹಿಸಿ ಇಡುತ್ತವೆ. ಇದರಲ್ಲಿ, ಶಂಖದ ಹುಳುಗಳ ಚಿಪ್ಪು, ಒಣಗಿದ ಮೂಳೆ, ಬಣ್ಣ, ಬಣ್ಣದ ಪುಕ್ಕಗಳು ಮುಂತಾದ ವಸ್ತುಗಳಿರುತ್ತವೆ. ಕಮಾನಿನ ಎತ್ತರ ಏಳೆಂಟು ಅಡಿಗಳಷ್ಟು ಇರುವುದರಿಂದ, ಜೋಡಿ ಹಕ್ಕಿಗಳು ಒಳಗೂ, ಹೊರಗೂ ಸರಾಗವಾಗಿ ಓಡಾಡಿಕೊಂಡಿರುತ್ತವೆ. ಗಂಡು ಹಕ್ಕಿಯು ತಾನು ಆರಿಸಿಕೊಂಡ ಸಂಗಾತಿಯನ್ನು ಲತಾಕುಂಜದ ಒಳಗೂ, ಹೊರಗೂ ಓಡಿಸಿಯಾಡುತ್ತದೆ. ಹೆಣ್ಣಿನ ಮುಂದೆ ತಾನು ಸೆಟೆದುಕೊಂಡು ನಡೆಯುತ್ತದೆ ! ಕೆಲವೊಮ್ಮೆ ಬಾಗಿ ವಂದಿಸುತ್ತದೆ ! ಗಂಡು, ಹೆಣ್ಣು ಎರಡೂ ಈ ವಿಹಾರದಲ್ಲಿ ಉತ್ಸಾಹಪೂರ್ಣವಾಗಿ ಭಾಗವಹಿಸುತ್ತವೆ.
 

ತೋಟದ ಬಾವರ್‌ ಹಕ್ಕಿ(Amblyornis) ಅತ್ಯಂತ ಸುಂದರವಾದ ಲತಾಕುಂಜಗಳನ್ನು ನಿರ್ಮಿಸುವುದರಲ್ಲಿ ನಿಸ್ಸೀಮ ಎನಿಸಿಕೊಂಡಿದೆ. ಗಿಡಗಂಟಿಗಳ ನಡುವೆ ಎತ್ತರದ ಪ್ರದೇಶವೊಂದನ್ನು ಹುಡುಕಿ, ಅದರ ಸುತ್ತಲೂ ಪಾಚಿಯನ್ನು ಸೇರಿಸುತ್ತವೆ. ನಡುವಿನ ರೆಂಬೆಯನ್ನು ಬಲಪಡಿಸುತ್ತವೆ. ಅಕ್ಕ ಪಕ್ಕದ ಗಿಡಗಳ ರೆಂಬೆಗಳನ್ನು ಒಂದು ತುದಿ ನೆಲಕ್ಕೆ ಮುಟ್ಟುವಂತೆಯೂ, ಮತ್ತೊಂದು ತುದಿ ನಡುವಿನ ಕಂಬವನ್ನು ಮುಟ್ಟುವಂತೆಯೂ ಜೋಡಿಸುತ್ತವೆ. ಈ ರೆಂಬೆಗಳು ಸಾಮಾನ್ಯವಾಗಿ ಆರ್ಕಿಡ್‌ ಜಾತಿಯ ಸಸ್ಯಗಳದ್ದಾಗಿರುವುದರಿಂದ, ಅವು ಒಣಗದೇ, ಬಹುಕಾಲ ಹಸಿರಾಗಿಯೇ ಉಳಿಯುತ್ತವೆ. ಈ ದೊಡ್ಡ ರೆಂಬೆಗಳ ನಡುವೆ ಸಣ್ಣ, ಸಣ್ಣ ರೆಂಬೆಗಳನ್ನು ಸೇರಿಸುತ್ತವೆ. ನಂತರ, ಇದಕ್ಕೆ ಪಾಚಿಯನ್ನು ಲೇಪಿಸುತ್ತವೆ. ಈಗ, ಲತಾಕುಂಜದ ಮೇಲ್ಛಾವಣಿ ಸಿದ್ಧವಾದಂತಾಯಿತು !

ಹೀಗೆ, ತಾನು ನಿರ್ಮಿಸಿದ ಲತಾಕುಂಜದ ಮುಂದೆ ಪಾಚಿ ಗಿಡಗಳ ಒಂದು ಸುಂದರ ಕೈತೋಟವನ್ನು ಸಿದ್ಧಪಡಿಸುತ್ತವೆ. ಈ ಹಸಿರುಹಾಸಿನ ಮೇಲೆ ವಿವಿಧ ಬಣ್ಣಗಳ ಹೂವುಗಳನ್ನು ಹಾಗೂ ಹಣ್ಣುಗಳನ್ನು ತಂದು ಜೋಡಿಸುತ್ತವೆ. ಕೆಲವೊಮ್ಮೆ, ಅದರಲ್ಲಿ ಬಗೆ, ಬಗೆಯ ಅಣಬೆಗಳು, ಬಣ್ಣ, ಬಣ್ಣದ ಕೀಟಗಳೂ ಇರಬಹುದು. ಬಾಡಿದ, ಒಣಗಿದ ವಸ್ತುಗಳನ್ನು ಆಗಾಗ್ಗೆ ಆರಿಸಿ, ಹೊರಗೆಸೆದು, ಅವುಗಳ ಬದಲಿಗೆ ಅಂಥದ್ದೇ ಬೇರೆ ವಸ್ತುಗಳನ್ನು ತಂದು ಜೋಡಿಸುತ್ತವೆ. ಇದಕ್ಕಾಗಿ, ಗಂಡು ಹಕ್ಕಿಯು ಕೆಲವೊಮ್ಮೆ ಮೈಲಿಗಟ್ಟಲೆ ಅಲೆದಾಡಬೇಕಾಗಿ ಬರಬಹುದು ! ಹೀಗೆ, ಸುತ್ತಾಡಿ ಸಂಗ್ರಹಿಸಿದ ವಸ್ತುಗಳನ್ನು ಜೋಪಾನವಾಗಿ, ನಯವಾಗಿ ಜೋಡಿಸುತ್ತವೆ.

ಹೂಬನದ ನವಿಲಿನ ಸೌಂದರ್ಯವಾಗಲೀ, ಮಾಮರದ ಕೋಗಿಲೆಯ ಇಂಪಾಗಲೀ ಇಲ್ಲದ ಬಾವರ್‌ ಹಕ್ಕಿಗಳು ಹೀಗೆ ತಮ್ಮದೇ ಆದ ರೀತಿಯಲ್ಲಿ ಸೌಂದರ್ಯದ ಆಸ್ವಾದನೆ ಮಾಡುತ್ತವೆ. ಈ ಸೌಂದರ್ಯವು ಅವುಗಳ ಕಲಾಕುಶಲತೆಯ ಪ್ರತೀಕ. ಅದನ್ನು ಪ್ರಕಟಿಸುವ ಉದ್ದೇಶವೇ ಪ್ರೇಮದ ನಿವೇದನೆ ! ಈ ಸೌಂದರ್ಯಭರಿತ ಲತಾಕುಂಜಗಳ ಮಧುರ ಭಾವನೆಗಳಲ್ಲಿ ಗಂಡು, ಹೆಣ್ಣುಗಳು ಒಂದಾಗುತ್ತವೆ. ಈ ಭಾವನೆಗಳು ಅವುಗಳ ಸಾಂಸಾರಿಕ ಜೀವನದ ತಿರುಳಾಗಿ, ಉಳಿದುಹೋಗುತ್ತವೆ.

14 comments:

  1. ಬಾವರ್ ಹಕ್ಕಿಯ ಬಗೆಗಿನ ನಿಮ್ಮ ಲೇಖನ ಅದ್ಭುತವಾಗಿ ಮೂಡಿಬಂದಿದೆ ಸರ್. ವಿಶೇಷವಾಗಿ ಪಕ್ಷಿ ಗೂಡು ಕಟ್ಟುವ ವಿವರಣೆ ಸೊಗಸಾಗಿದೆ. ಅಭಿನಂದನೆಗಳು ಸರ್

    ReplyDelete
  2. Architectural skills of Bayer birds amazing. Lessons to our modern engineers on environmental friendly houses?

    ReplyDelete
  3. ಸೊಗಸಾದ ವಿವರಣೆ ಸರ್,🙏

    ReplyDelete
  4. ಬಾವರ್ ಹಕ್ಕಿ ಬಗ್ಗೆ ತಮ್ಮ ಲೇಖನ ತುಂಬಾ ಸೊಗಸಾಗಿ ಮುಡಿ ಬಂದಿದೆ ಗುರೂಜಿ ....🙏🙏🙏

    ReplyDelete
  5. ಈ ಹಕ್ಕಿಗಳ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಆದರೆ, ಸುಂದರವಾದ ಗೂಡು ಕಟ್ಟುವಲ್ಲಿ ಅವುಗಳ ಕಲಾನೈಪುಣ್ಯತೆ ಹಾಗೂ ಕೌಶಲ್ಯ ಅದ್ಭುತ ಮತ್ತು ಅದ್ವಿತೀಯ. ಈ ಪಕ್ಷಿಗಳು ಗೂಡು ಕಟ್ಟುವ ಬಗ್ಗೆ ತಮ್ಮ ವಿವರಣೆ ಸುಂದರ ವಾಗಿದೆ. ಅಭಿನಂದನೆಗಳು.

    ReplyDelete
  6. ನಮ್ಮೆಲ್ಲರನ್ನು ಬರೆಯುವಂತೆ ಪ್ರೋತ್ಸಾಹಿಸುತ್ತ ಬಂದಿರುವ ಗುರುಗಳಾದ ಡಾ. ಬಾಲಕೃಷ್ಣ ಅಡಿಗರು ಬಾವರ್ ಗಳ ವಿಶಿಷ್ಟ ಬದುಕನ್ನು ಅನಾವರಣಗೊಳಿಸಿದ್ದಾರೆ. ಸುಂದರ ಚಿತ್ತಾಕರ್ಷಕ ಲೇಖನಕ್ಕಾಗಿ ಗುರುಗಳಿಗೆ ಧನ್ಯವಾದಗಳು

    ReplyDelete
  7. ಇರುವುದೆಲ್ಲವ ಬದಿಗೆ ಬಿಟ್ಟು.....ಮನುಜ
    ಇರುವುದೆಲ್ಲವ ಬಗೆದು ಕಟ್ಟು......ಪಕ್ಷಿ
    ಅಪರೂಪದ ಪ್ರಕೃತಿ ಅನಾವರಣಗೊಳಿಸಿದ ಲೇಖನ : ಗುರುಗಳಿಗೆ ಅಭಿನಂದನೆಗಳು

    ReplyDelete
  8. Sir, very nicely written in the same spirit as the bird builds its nest. Inspiring article which makes us think that for building a good life, you need to be close to the nature and learn from it. Thanks Adiga Sir!!

    ReplyDelete
  9. Best architectural skills shown by a bird. Nature is really amazing. Thank you sir for letting us to know about this wonderful creature.

    ReplyDelete
  10. ಸೊಗಸಾಗಿ ಬರೆದಿದ್ದೀರಿ ಅಡಿಗ ಸರ್ . ಧನ್ಯವಾದಗಳು 🙏

    ReplyDelete
  11. ಗೂಡಿನೊಳಗಿನ ಬಾವರ್ ಹಕ್ಕಿ ಬಹಳ ಶೋಭಾಯಮಾನವಾಗಿ ಇದೆ. ನಿಸರ್ಗದಲ್ಲಿ ಮಾನವ ಮಾತ್ರ ಸೌಂದರ್ಯವನ್ನು ಆಸ್ವಾದಿಸುವ ಜೀವಿ ಎಂಬ ನಮ್ಮ ಅಭಿಪ್ರಾಯ ತಪ್ಪು. ಪ್ರಕೃತಿ ನಮಗಿಂತಲೂ ಅಧಿಕಾಧಿಕ ನಿಗೂಢ, ನಿತ್ಯ ನೂತನ. ನಿಸರ್ಗದ ಒಡಲು ಜ್ಞಾನದ ಭಂಡಾರವೇ ಸರಿ
    ಮೊದಲ ಚಿತ್ರದಲ್ಲಿ, ಹಾಗೂ ಕೊನೆಯ ಚಿತ್ರದಲ್ಲಿ ಕಂಡು ನೀಲಿ ಬಣ್ಣದ ವಸ್ತುಗಳು ಪ್ಲಾಸ್ಟಿಕ್ ನಂತೆ ನನಗೆ ಕಾಣಿಸಿತು. ಪ್ಲಾಸ್ಟಿಕ್ ಆಗಿದ್ದರೆ ಆತಂಕದ ವಿಚಾರವೇ.

    ReplyDelete