ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, July 4, 2022

ಕೀಟಾಹಾರಿ ಸಸ್ಯಗಳು

ಕೀಟಾಹಾರಿ ಸಸ್ಯಗಳು

ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.


ವನ್ಯ ಜೀವಿಗಳ ಬಗ್ಗೆ ಅಧ್ಯಯನ ನಡೆಸಿರುವ ಹಿನ್ನೆಲೆಯಲ್ಲಿ, ಕೆಲವು ವನ್ಯ ಜೀವಿಗಳ ಬಗ್ಗೆ ಲೇಖನಗಳನ್ನು ಬರೆಯುತ್ತಾ, ‘ಸವಿಜ್ಞಾನ’ ಓದುಗರಿಗೆ ಪರಿಚಿತರಾಗಿರುವ ಕೃಷ್ಣ ಚೈತನ್ಯ ಅವರು ಈ ಬಾರಿಯ ಲೇಖನದಲ್ಲಿ ನಮ್ಮಲ್ಲಿ ಕಂಡುಬರುವ ಕೆಲವು ಕೀಟಾಹಾರಿ ಸಸ್ಯಗಳನ್ನು ಪರಿಚಯಿಸಿದ್ದಾರೆ.



ನಮಗೆಲ್ಲಾ ತಿಳಿದಿರುವಂತೆ, ಸಸ್ಯಗಳು ಸ್ವಪೋಷಕ ಜೀವಿಗಳು. ಅಂದರೆ, ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಾಮರ್ಥ್ಯ. ಹೊಂದಿರುವ ಜೀವಿಗಳು. ಪರಿಸರದಲ್ಲಿನ ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ʼದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯ ಮೂಲಕ ಸಾವಯವ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಸೂರ್ಯನ ಬೆಳಕು ಮತ್ತು ಹರಿತ್ತು ಈ ಪ್ರಕ್ರಿಯೆಗೆ ಅತ್ಯವಶ್ಯ. ಆದರೆ, ಸಸ್ಯಗಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಇನ್ನಿತರ ಪೋಷಕಾಂಶಗಳ ಅವಶ್ಯಕತೆ ಇದೆ . ಈ ಪೋಷಕಾಂಶಗಳನ್ನು ಮಣ್ಣಿನಿಂದ ಲವಣಗಳ ರೂಪದಲ್ಲಿ ಅವು ಪಡೆದುಕೊಳ್ಳುತ್ತವೆ ಅಂಥ ಪೋಷಕಾಂಶಗಳಲ್ಲಿ ನೈಟ್ರೋಜನ್ ಕೂಡ ಒಂದು. ಇದು ಎಲ್ಲಾ ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯಕವಾಗಿ ಬೇಕಾದ ಪೋಷಕಾಂಶ.. ಗುಡುಗು ಸಹಿತ ಮಳೆ ಬೀಳುವಾಗ ಉಂಟಾಗುವ ನೈಟ್ರೋಜನ್ ಸ್ಥಿರೀಕರಣ ಕ್ರಿಯೆಯ ಮೂಲಕ ನೆಲಸಸ್ಯಗಳಿಗೆ ನೈಟ್ರೋಜನ್ ಲಭಿಸುತ್ತದೆ. ಜಲಸಸ್ಯಗಳಿಗೆ ಜಮೀನಿನಿಂದ ಹರಿದುಹೋಗುವ ನೀರಿನಿಂದ ನೈಟ್ರೋಜನ್ ದೊರೆಯುತ್ತದೆ. ಆದರೆ, ಜೌಗುನೆಲದಲ್ಲಿ ಬೆಳೆಯುವ ಸಸ್ಯಗಳಿಗೆ ನೈಟ್ರೋಜನ್ ಲಭ್ಯತೆ ಇರುವುದಿಲ್ಲ. ಹಾಗಾಗಿ, ಜೌಗು ನೆಲದಲ್ಲಿ ಬೆಳೆಯುವ ವಿಶಿಷ್ಟ ಕೀಟಹಾರಿ ಸಸ್ಯಗಳು ಅವಶ್ಯವಿರುವ ನೈಟ್ರೋಜನ್ಅನ್ನು ಕೀಟ ಮತ್ತಿತರ ಪ್ರಾಣಿಗಳಿಂದ ಪಡೆದುಕೊಳ್ಳುವ ವಿಧಾನ ಅನನ್ಯವಾಗಿದೆ.

ಕೀಟಹಾರಿ ಸಸ್ಯಗಳಲ್ಲಿ ಇದುವರೆಗೂ ಸುಮಾರು ೬೦೦ ಜಾತಿಗಳನ್ನು ಪ್ರಪಂಚದಲ್ಲಿ ಪತ್ತೆಹಚ್ಚಲಾಗಿದೆ. ನಮ್ಮ ಭಾರತದಲ್ಲಿ ಸುಮಾರು ೪೦ ಪ್ರಬೇಧಗಳು ದೇಶದ ವಿವಿಧ ಭಾಗಗಳಲ್ಲಿ ಕಾಣಸಿಗುತ್ತವೆ. ಜೌಗು ನೆಲವಿರುವ ಪ್ರದೇಶ, ಭತ್ತದ ಗದ್ದೆ, ಬೀಳು ಬಿಟ್ಟಿರುವ ನೀರಿನ ಪ್ರದೇಶ, ಕೆರೆ ಮತ್ತು ಅಣೆಕಟ್ಟೆಗಳ ಹಿನ್ನೀರು ಪ್ರದೇಶಗಳಲ್ಲಿ ಇವು ಸಾಮಾನ್ಯವಾಗಿ ಕಾಣಸಿಗುತ್ತವೆ. ಪ್ರಮುಖವಾಗಿ, ನೆಪೆಂಥಿಸ್, ಡ್ರಾಸೆರ ವೀನಸ್ ಫ್ಲೈ ಟ್ರ್ಯಾಪ್, ಯುಟ್ರಿಕ್ಯುಲೇರಿಯ, ಪಿಂಗ್ಯುಕುಲ ಮುಂತಾದ ಜಾತಿಗಳನ್ನು ಗುರುತಿಸಲಾಗಿದೆ. .ಎಲ್ಲವೂ ಹೂಬಿಡುವ ಸಸ್ಯಗಳಾಗಿದ್ದು, ಕೆಲವು ಏಕದಳ ಮತ್ತು ಕೆಲವು ದ್ವಿದಳ ಸಸ್ಯಗಳಾಗಿವೆ. ಸೂರ್ಯಕಾಂತಿ ಹೂವಿನ ಗಣದಲ್ಲಿ ಸೇರುವ ಆಸ್ಟರೇಲಿಸ್, ‍ಕಾರ್ನೇಷನ್ ಗಣದಲ್ಲಿ ಸೇರುವ ಕ್ಯಾರ್ಯೋಫಿಲ್ಲೇಲಿಸ್, ಹೆದರ್ ಗಣದಲ್ಲಿ ಬರುವ ಎರಿಕೇಲಿಸ್, ಪುದಿನ ಗಣದಲ್ಲಿ ಬರುವ ಲ್ಯಾಮಿಯೇಲಿಸ್ ಮತ್ತು ವೂಡ್ ಸರ‍್ರೆಲ್ ಗಣದ ಆಕ್ಸಿಡೇಲಿಸ್ ವರ್ಗಗಳಿಗೆ ಸೇರುವ ಹಲವಾರು ಪ್ರಭೇದಗಳಿವೆ. ಏಕದಳದಲ್ಲಿ ವಾಟರ್ ಪ್ಲಾಂಟೈನ್ ಗಣದ ಅಲಿಸ್ಮೇಟೇಲಿಸ್ ಮತ್ತು ಹುಲ್ಲಿನ ಗಣದ ಪೋಯೇಲಿಸ್ ವರ್ಗಗಳಲ್ಲಿ ಇಂಥ ಸಸ್ಯಗಳನ್ನು ಗುರುತಿಸಲಾಗಿದೆ.

ಹೂಜಿಗಿಡ (ನೆಫೆಂಥಿಸ್): ಮಂಕಿ ಕಪ್ಸ್ ಎಂತಲೂ ಕರೆಯಲಾಗುವ ಈ ಸಸ್ಯದ ಎಲೆಗಳು ಚಪ್ಪಟೆಯಾಗಿ, ಉದ್ದವಾಗಿರುತ್ತವೆ. ಎಲೆಯ ತುದಿಯಿಂದ ನೀಳವಾದ ದಾರದಂತಹ ಕಡ್ಡಿ ಬೆಳೆದು, ತುದಿಯಲ್ಲಿ ಹೂಜಿಯಾಕಾರದ ರಚನೆ ಇರುತ್ತದೆ. ಅದಕ್ಕೊಂದು ಮುಚ್ಚಳವಿರುತ್ತದೆ. ಹೂಜಿಯ ಬಾಯಿಯಲ್ಲಿ, ಮಕರಂದದಂತೆ ಕಾಣುವ, ಜಾರುವ ಗುಣವಿರುವ ಲೋಳೆ ಪದಾರ್ಥವಿದ್ದು ನೊಣ, ದುಂಬಿ, ಚಿಟ್ಟೆ ಮುಂತಾದ ಕೀಟಗಳನ್ನು ಆಕರ್ಷಿಸುತ್ತದೆ. ಆ ಲೋಳೆ ಪದಾರ್ಥವನ್ನು ಮಕರಂದವೆಂದು ಭ್ರಮಿಸಿ ಬರುವ ಕೀಟಗಳು ಅದರ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಜಾರಿ ಹೂಜಿಯೊಳಕ್ಕೆ ಬೀಳುತ್ತವೆ. ಹೂಜಿಯ ಒಳಭಾಗದಲ್ಲಿನ ಹೊರದರ್ಮ (ಎಪಿಡರ್ಮಲ್ ಅಂಗಾಂಶ)ವು ಜೀರ್ಣಗ್ರಂಥಿಯಾಗಿ ಮಾರ್ಪಾಟಾಗಿರುತ್ತದೆ. ನಡುವೆ ಇರುವ ರೋಮದಂಥ ರಚನೆಗಳು ಸಂವೇದನೆಯನ್ನು ಮುಚ್ಚಳಕ್ಕೆ ರವಾನಿಸಿ, ಅದು ತಕ್ಷಣ ಮುಚ್ಚಿಕೊಳ್ಳುವಂತೆ ಮಾಡುತ್ತವೆ. ಒಳಗಡೆ ಸಿಕ್ಕಿಹಾಕಿಕೊಂಡ ಕೀಟವು ಒದ್ದಾಡಿ, ಒದ್ದಾಡಿ ಉಸಿರುಗಟ್ಟಿ ಸಾಯುತ್ತದೆ. ನಂತರ ಜೀರ್ಣಗ್ರಂಥಿಗಳೂ ಕೀಟವನ್ನು ಜೀರ್ಣಿಸಿ ಅದರ ದೇಹದಲ್ಲಿರುವ ಪ್ರೋಟೀನ್‌ಗಳನ್ನು ಅಮೈನೊ ಆಮ್ಲಗಳಾಗಿ ವಿಭಜಿಸಿ ಅವುಗಳಲ್ಲಿರುವ ನೈಟ್ರೀಜನ್‌ಅನ್ನು ಪಡೆದುಕೊಳ್ಳುತ್ತವೆ.


ಚಿತ್ರ ಹೂಜಿ ಗಿಡ - ನೆಪೆಂಥಿಸ್

ವೀನಸ್ ಫ್ಲೆ ಕ್ಯಾಚರ್ (ನೊಣಹಿಡುಕ):  ಈ ಸಸ್ಯದಲ್ಲಿ ಹಸ್ತವನ್ನು ಹೋಲುವ ಎರಡು ಪುಟ್ಟ ರಚನೆಗಳಿದ್ದು, ಅವೆರಡು ಒಂದಕ್ಕೊಂದು  ಅಭಿಮುಖವಾಗಿರುತ್ತವೆ. ಈ ರಚನೆ ಕಡು ಕೆಂಪು ಬಣ್ಣದಿಂದ ಕೂಡಿದ್ದು ಮದ್ಯದಲ್ಲಿ ಕೆಲವು ರೋಮದಂಥ ಸಂವೇದಿ ಗ್ರಾಹಕ ಕೋಶಗಳು ಕಂಡುಬರುತ್ತವೆ. ಎಲೆಯ ಅಂಚಿನಲ್ಲಿ ಬೆರಳುಗಳಂಥ ಸಣ್ಣ ಸಣ್ಣ ಗುಂಡುಸೂಜಿಯ ಹಾಗೆ ಕಾಣುವ ರಚನೆಗಳು ಉದ್ದಕ್ಕೂ ಇರುತ್ತವೆ. ಆ ಕೆಂಬಣ್ಣದ ರಚನೆಯನ್ನು ಹೂವೆಂದು ಭ್ರಮಿಸಿ ಬರುವ ಕೀಟ ಅದರ ಮದ್ಯದಲ್ಲಿ ಕುಳಿತು ಮಕರಂದ ಹೀರುವ ವೇಳೆಗೆ ಗ್ರಾಹಕ ಕೋಶಗಳು ಕೀಟದ ಕಾಲಿಗೋ, ಶರೀರದ ಕೆಳ ಭಾಗಕ್ಕೋ ಸ್ಪರ್ಶಿಸುತ್ತಿದ್ದಂತೆ, ಹಸ್ತದಂತಹ ರಚನೆಗಳು ಮುಚ್ಚಿಕೊಳ್ಳುತ್ತವೆ. ಸೂಜಿಯಂಥ ರಚನೆಗಳು ನಮ್ಮ ಕೈ ಬೆರಳುಗಳನ್ನು ಬೆಸೆದುಕೊಂಡಂತೆ ಮಡಚಿಕೊಳ್ಳುತ್ತವೆ. ಬಂಧಿಯಾದ ಕೀಟ ಒದ್ದಾಡಿ ಸತ್ತ ನಂತರ ಅದನ್ನು ಜೀರ್ಣಿಸಿ, ನೈಟ್ರೋಜನ್ ಪಡೆದುಕೊಳ್ಳುತ್ತವೆ.‌
ಚಿತ್ರ: ವೀನಸ್ - ನೊಣಹಿಡುಕ


ಇಬ್ಬನಿ ಗಿಡ (ಸನ್ ಡ್ಯೂ ಪ್ಲಾಂಟ್): ಈ ಸಸ್ಯದಲ್ಲಿ ಎಲೆಗಳು ನೀಳವಾಗಿದ್ದು ಅದರ ತುಂಬೆಲ್ಲಾ ರೋಮಗಳಂಥ ರಚನೆಗಳಿರುತ್ತವೆ. ಇವುಗಳ ತುದಿಯಲ್ಲಿ ಅಂಟು ದ್ರವದ ಬಿಂದು ಇಬ್ಬನಿಯಂತೆ ಸಂಗ್ರಹವಾಗಿರುತ್ತದೆ. ಇದನ್ನು ಮಕರಂದವೆಂದು ತಿಳಿದು ಮೋಸಹೋಗುವ ಕೀಟ ಎಲೆಯ ಮೇಲೆ ಕೂರುತ್ತಿದ್ದಂತೆ ಅದರ ಕಾಲುಗಳು ಅಂಟಿಕೊಳ್ಳುತ್ತವೆ. ಬಿಡಿಸಿಕೊಳ್ಳಲೆಂದು ರಕ್ಕೆ ಬಡಿದಾಗ ರಕ್ಕೆಗಳು ಅಂಟಿಕೊಳ್ಳುತ್ತವೆ.! ನಂತರ ಎಲೆಗಳು ಕೀಟವನ್ನು ಒಳ ಸೇರಿಕೊಳ್ಳುವಂತೆ ಸುತ್ತಿಕೊಂಡು ಅದನ್ನು ನಿರ್ಜೀವಗೊಳಿಸಿ, ಜೀರ್ಣಿಸಿಕೊಳ್ಳುತ್ತದೆ.


ಚಿತ್ರ : ಇಬ್ಬನಿ ಗಿಡ – ಸನ್‌ ಡ್ಯೂ
ಹೀಗೆ, ಬೇರೆ ಬೇರೆ ರೀತಿಯ ರಚನೆಯನ್ನು ಹೊಂದಿದ್ದರೂ ಎಲ್ಲ ಕೀಟಹಾರಿ ಸಸ್ಯಗಳ ಉದ್ಧೇಶ ಮಾತ್ರ ನೈಟ್ರೋಜನ್‌ ಪಡೆಯುವುದೇ ಆಗಿರುತ್ತವೆ. ನೊಣ, ಸೊಳ್ಳೆ, ದುಂಬಿ, ಮುಂತಾದ ಕೀಟಗಳು ಮಾನವನಿಗೆ ಕಿರಿಕಿರಿ ಮಾಡುವುದರಿಂದ, ಆ ರೀತಿಯ ಕೀಟಗಳ ನಿಯಂತ್ರಣದಲ್ಲಿ ಈ ಸಸ್ಯಗಳು ಸಹಕಾರಿಯಾಗಿವೆ. ಆಹಾರ ಸಂಸ್ಕರಣೆಯಲ್ಲಿ ಬಳಸುವ ಕೆಲ ವಸ್ತುಗಳ ತಯಾರಿಕೆಯಲ್ಲಿ ಈ ಸಸ್ಯಗಳನ್ನು ಬಳಸಿಕೊಳ್ಳಲಾಗುತ್ತದೆ. ಎಲ ಬಗೆಯ ನೋವುನಿವಾರಕಗಳ ತಯಾರಿಕೆಯಲ್ಲಿಯೂ ಈ ಸಸ್ಯಗಳ ಬಳಕೆಯಿದೆ.


2 comments:

  1. ವಿಜ್ಞಾನದ ವಿದ್ಯಾರ್ಥಿಯಾಗಿದ್ದ. ಕಾಲದಲ್ಲಿ ಓದಿದ್ದ ವಿಷಯವನ್ನು ಮತ್ತೊಮ್ಮೆ ಮೆಲುಕು ಹಾಕುವಂತಾಯಿತು. ಲೇಖಕರು ತುಂಬಾ ವಿವರವಾಗಿ ಮತ್ತು ಸುಂದರವಾಗಿ ನಿರೂಪಿಸಿದ್ದಾರೆ. ಧನ್ಯವಾದಗಳು.

    ReplyDelete
  2. I had not seen some of these plants.nice information.

    ReplyDelete