ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, August 4, 2022

ನಾವು ವಿಷವಾಯು ಉಸಿರಾಡುತ್ತಿದ್ದೇವೆಯೆ?

ನಾವು ವಿಷವಾಯು ಉಸಿರಾಡುತ್ತಿದ್ದೇವೆಯೆ?

ಗಜಾನನ ಎನ್. ಭಟ್ (ಹವ್ಯಾಸಿ ಲೇಖಕರು, ಪ್ರೌಢಶಾಲಾ ವಿಜ್ಞಾನ ಶಿಕ್ಷಕರು,) 

ಸರಕಾರಿ ಪ್ರೌಢಶಾಲೆ, ಉಮ್ಮಚಗಿ,

ಯಲ್ಲಾಪುರ ತಾ., ಶಿರಸಿ ಶೈಕ್ಷಣಿಕ ಜಿಲ್ಲೆ 

ಉತ್ತರ ಕನ್ನಡ

 

ಮಾನವನೂ ಸೇರಿದಂತೆ ಎಲ್ಲ ಜೀವಿಗಳ ಉಸಿರಾಟಕ್ಕೆ ಅತ್ಯವಶ್ಯವಾದ ಅಕ್ಸಿಜನ್‌ ಇಂದು ಶುದ್ಧವಾಗಿ ಉಳಿದಿಲ್ಲ. ನಮ್ಮದೇ ದುಷ್ಕೃತ್ಯಗಳ ಫಲವಾಗಿ ಕೆಲವು ವಿಷಾನಿಲಗಳು ವಾತಾವರಣವನ್ನು ಸೇರುತ್ತಿವೆ. ಈ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು  ʼಸವಿಜ್ಞಾನʼ ತಂಡದ ಶಿಕ್ಷಕರಾದ ಶ್ರೀ ಗಜಾನನ ಭಟ್‌, ತಮ್ಮ ಈ ಲೇಖನದಲ್ಲಿ ಮಾಡಿದ್ದಾರೆ.

ಸೌರವ್ಯೂಹದಲ್ಲೇ ಭೂಮಿಯು ಅತ್ಯಂತ ವಿಶಿಷ್ಟವಾದ, ವಿಶೇಷವಾದ ಗ್ರಹ ಎಂಬುದು ನಮಗೆಲ್ಲಾ ತಿಳಿದ ವಿಷಯ. ಜೀವಿಗಳ ವಾಸಕ್ಕೆ ಸೂಕ್ತವಾದ ಏಕೈಕ ಜೀವ ಮಂಡಲ. ಇಲ್ಲಿ ಜೀವಿಗಳ ವಾಸಕ್ಕೆ ಅವಶ್ಯವಾದ ಜೀವಜಲ ಹಾಗೂ ಉಸಿರಾಟಕ್ಕೆ ಮೂಲಭೂತವಾದ ಆಕ್ಸಿಜನ್ ಪ್ರಾಕೃತಿಕವಾಗಿ ನೆಲೆಗೊಂಡಿದೆ. ಹಾಗಾಗಿ, ಇಲ್ಲಿ ವಿವಿಧ ಜೀವ ಸಂಕುಲಗಳು ವಿಕಸಿತವಾಗಲು ಸಾಧ್ಯವಾಗಿದೆ.

ಭೂಪದರವನ್ನು ಆವರಿಸಿರುವ ಗಾಳಿಯು ವಿವಿಧ ಅನಿಲಗಳ ಮಿಶ್ರಣವಾಗಿದೆ. ಇದು ಪ್ರಮುಖವಾಗಿ ಶೇಕಡಾ ೭೮.೦೯ ನೈಟ್ರೋಜನ್ ೨೦.೯೫ ಆಕ್ಸಿಜನ್, ೦.೯೩ ಆರ್ಗಾನ್, ೦.೦೪ ಕಾರ್ಬನ್ ಡೈಆಕ್ಸೈಡ್,  ೦.೦೧ ಹೈಡ್ರೋಜನ್ ಅಲ್ಲದೆ, ಅಲ್ಪ ಪ್ರಮಾಣದ ಮಿಥೇನ್, ನೀರಾವಿ, ಹಾಗೂ ನಿಯಾನ್‌, ಇವುಗಳ ಸಂಯೋಜನೆಯಾಗಿದೆ.ಇವುಗಳಲ್ಲಿ ಜೀವಿಗಳ ಉಸಿರನ್ನು ಹಿಡಿದಿಡಲು ಅಗತ್ಯವಾಗಿ ಬೇಕಾದ ಅನಿಲವೇ . ಆಕ್ಸಿಜನ್. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ʼಜೀವಾನಿಲʼ ಎಂದೂ ಕರೆಯಲಾಗುತ್ತದೆ. ಇದು ಬಣ್ಣ ಹಾಗೂ ವಾಸನೆ ರಹಿತವಾಗಿದ್ದು ಸಾಮಾನ್ಯ ವಾತಾವರಣದಲ್ಲಿ ಗೋಚರಿಸದೆ, ಕೇವಲ ರಾಸಾಯನಿಕ ವಿಶ್ಲೇಷಣೆಯಿಂದ ಮಾತ್ರ ಇದರ ಇರುವಿಕೆಯನ್ನು ಪತ್ತೆ ಹಚ್ಚಬಹುದು.

 

ಗಾಳಿ ನಮಗೇಕೆ ಬೇಕು..?

ನೀರಿಲ್ಲದೇ ನಾವು ಮೂರರಿಂದ ನಾಲ್ಕು ದಿನಗಳವರೆಗೆ ಬದುಕಿರಬಹುದು. ಆದರೆ ಗಾಳಿ (ಆಕ್ಸಿಜನ್) ಇಲ್ಲದೆ ಕ್ಷಣ ಮಾತ್ರವೂ ನಾವು ಜೀವಿಸಲು ಸಾಧ್ಯವಿಲ್ಲ. ನಾವು ದೇಹದ ಒಳಕ್ಕೆ ತೆಗೆದುಕೊಂಡ ಆಕ್ಸಿಜನ್,  ಶ್ವಾಸಕೋಶಗಳ ವಾಯುಕೂಪಿಕೆಗಳ (ಆಲ್ವಿಯೋಲೈ) ಮುಖಾಂತರ ದೇಹದ ಜೀವಕೋಶಗಳ ತ್ಯಾಜ್ಯವಾದ ಕಾರ್ಬನ್ ಡೈಆಕ್ಸೈಡ್‌ನೊಂದಿಗೆ ವಿನಿಮಯಗೊಂಡು, ರಕ್ತಕ್ಕೆ ಸೇರುತ್ತದೆ. ರಕ್ತದಲ್ಲಿರುವ ಹೀಮೋಗ್ಲೋಬಿನ್ ಜೊತೆ ರಾಸಾಯನಿಕವಾಗಿ ಬೆರೆತು ಆಕ್ಸಿಹೀಮೋಗ್ಲೋಬಿನ್ ಎಂಬ ಸಂಯುಕ್ತವಾಗುತ್ತದೆ. ಆಕ್ಸಿಹಿಮೋಗ್ಲೋಬಿನ್ ರೂಪದಲ್ಲಿ ನಮ್ಮ ದೇಹದ ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯಾ ಎಂಬ ಕಣದಂಗಗಳನ್ನು  ಸೇರಿ, ಜೀರ್ಣವಾದ ಆಹಾರªನ್ನು ಉತ್ಕರ್ಷಣೆಗೆ ಒಳಪಡಿಸಿ ಶಕ್ತಿ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಹೀಗೆ ಬಿಡುಗಡೆಯಾದ ಶಕ್ತಿಯು ATP (ಅಡಿನೋಸಿನ್ ಟೈಫಾಸ್ಪೇಟ್) ರೂಪದಲ್ಲಿ ಸಂಗ್ರಹವಾಗಿದ್ದು. ನಮಗೆ ಅಗತ್ಯವಾದಾದ ADP (ಅಡಿನೋಸಿನ್ ಡೈಫಾಸ್ಪೇಟ್) ರೂಪಕ್ಕೆ ಪರಿವರ್ತನೆಯಾಗಿ ಬಳಕೆಯಾಗುತ್ತದೆ. ಒಂದೊಮ್ಮೆ, ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಆಕ್ಸಿಜನ್ ಲಭ್ಯವಾಗದಿದ್ದಲ್ಲಿ, ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಯಗಳಾಗಿ ದೇಹದಲ್ಲಿ ನೈಟ್ರೋಜನ್ ಯುಕ್ತ ಕಶ್ಮಲ ಪ್ರಮಾಣ ಮಿತಿಮೀರಿ, ಕೊನೆಗೆ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ. ಹೀಗಾಗಿ, ನಮ್ಮ ದೇಹಕ್ಕೆ ಆಕ್ಸಿಜನ್ ಅತ್ಯಂತ ಪ್ರಮುಖ ಜೈವಿಕ ಅವಶ್ಯಕತೆಯಾಗಿದೆ.

 

 

 

ಗಾಳಿಯು ವಿಷಪೂರಿತವಾಗುವುದೇತಕೆ ?

ಇತ್ತೀಚೆಗೆ, ಕೋವಿಡ್ ಕಾರಣದಿಂದ ಎಲ್ಲೆಲ್ಲೂ ಆಕ್ಸಿಜನ್ನ ಕೊರತೆಯಿಂದ ಹಾಹಾಕಾರ ಉಂಟಾಗಿದ್ದನ್ನು  ಕಂಡಿದ್ದೇವೆ. ಕೆಲವೇ ವರ್ಷಗಳ ಹಿಂದೆ ಕುಡಿಯುವ ನೀರನ್ನು ಬಾಟಲಿಗಳಲ್ಲಿ ತುಂಬಿ, ಮಾರುತ್ತಿದ್ದದ್ದನ್ನು ನೋಡಿ ಜನರು ನಗೆಯಾಡಿ ಹಾಸ್ಯ ಮಾಡುತ್ತಿದ್ದರು. ನಂತರ, ಕ್ರಮೇಣ ಬಾಟಲಿ ನೀರನ್ನೇ ಕುಡಿಯಲು ಪ್ರಾರಂಭಿಸಿದರು. ವಿಪರ್ಯಾಸವೆಂದರೆ, ಇಂದು ಆಕ್ಸಿಜನ್ಅನ್ನು ಸಿಲಿಂಡರ್‌ಗಳಲ್ಲಿ ತುಂಬಿ ಜನರಿಗೆ ಉಸಿರಾಟಕ್ಕೆ ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಕೆಲವೇ ವರ್ಷಗಳಲ್ಲಿ ಆಕ್ಸಿಜನ್ಅÀನ್ನು ಕೂಡಾ, ಅಡಿಗೆ ಅನಿಲದಂತೆ ಮನೆಮನೆಗೆ ಪೂರೈಸುವಂಥ ದಿನಗಳು ದೂರವಿಲ್ಲ.

ಭೂಮಿಯ ಎಲ್ಲಾ ಕಡೆಗೂ ಆಕ್ಸಿಜನ್ ಸಮ ಪ್ರಮಾಣದಲ್ಲಿ ಹಂಚಿಕೆಯಾಗಿದ್ದರೂ ಕೂಡಾ ಮಾನವನ ಅನಪೇಕ್ಷಿತ ಚಟುವಟಿಕೆಗಳಿಂದ ಗಾಳಿಯು ತೀವ್ರವಾಗಿ ಮಲಿನವಾಗುತ್ತಿದೆ. ಕೆಲವು ಕಡೆ, ಇದು ಉಸಿರಾಟಕ್ಕೆ ಯೋಗ್ಯವಲ್ಲದ ಮಟ್ಟಕ್ಕೆ ತಲುಪಿದೆ. ಶ್ವಾಸಕೋಶದ ಆಕ್ಸಿಜನ್ನ ಮಟ್ಟ ೯೫ ರಿಂದ ೧೦೦ (SPO) ಇರಬೇಕಾದದ್ದು, ಇದರ ಕುಸಿತವು ರೋಗಿಯನ್ನು ಸಾವಿನೆಡೆಗೆ ಕೊಂಡೊಯ್ಯುತ್ತದೆ. ಇದಕ್ಕೆಲ್ಲ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾನವನೇ ಜವಾಬ್ದಾರನಾಗಿದ್ದು, ಈ ಒಂದು ಪರಿಸ್ಥಿತಿಗೆ ಪ್ರಮುಖ ಕಾರಣಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

      ಮಾನವ ತನ್ನ ವೈಭವಯುತ ಜೀವನಕ್ಕಾಗಿ ನಿರಂತರವಾಗಿ ಅರಣ್ಯ ನಾಶದಲ್ಲಿತೊಡಗಿದ್ದಾನೆ. ಇಂದು ನೈಸರ್ಗಿಕವಾಗಿ  ಆಕ್ಸಿಜನ್ ಪೂರೈಸುವ ಗಿಡಮರಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಆತಂಕಕಾರಿಯಾಗಿದೆ. ಸುಸ್ಥಿರ ವಾತಾವರಣಕ್ಕಾಗಿ ಒಟ್ಟು ಭೂ ಪ್ರದೇಶದ ಶೇಕಡಾ ೩೩ರಷ್ಟು ಅರಣ್ಯ ಪ್ರದೇಶ ಇರಬೇಕಾಗಿದ್ದು, ಪ್ರಸ್ತುತ ಕೇವಲ ಶೇಕಡಾ ೧೭ ರಿಂದ ೧೮ರಷ್ಟು ಮಾತ್ರ ಇರುವುದು ತುಂಬಾ ಅಪಾಯಕಾರಿಯಾಗಿದೆ.

      ಆಧುನಿಕತೆಯ ಹಿಂದೆ ಓಡುತ್ತಿರುವ ಮಾನವ, ಅತಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿರುವುದು ಗಾಳಿಯು ವಿಷಪೂರಿತ ಅಗುವುದಕ್ಕೆ ಕಾರಣವಾಗಿದೆ.

      ಇಂದು ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವಾಹನಗಳು ರಸ್ತೆಗಿಳಿಯುತ್ತಿವೆ. ಇವು ಹೊರಸೂಸುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್‌ನಂಥ ವಿಷಾನಿಲಗಳು ವಾತಾವರಣವನ್ನು ಸೇರಿ, ಗಾಳಿಯು ಉಸಿರಾಟಕ್ಕೆ ಯೋಗ್ಯವಲ್ಲದ ಸ್ಥಿತಿ ತಲುಪಿದೆ.

      ವಿವಿಧ ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳಾದ ಹೈಡ್ರೋಜನ್‌ಕ್ಲೋರೈಡ್, ಬೆಂಝೀನ್, ಟಾಲಿನ್‌, ಡಯಾಕ್ಸಿನ್, ಕ್ಯಾಡ್ಮಿಯಂ, ಮರ್ಕ್ಯುರಿ, ಕ್ರೋಮಿಯಂ ಮುಂತಾದವುಗಳ ಕಣಗಳು ೦.೧ ಮೈಕ್ರಾನ್‌ಗಿಂತಲೂ ಚಿಕ್ಕದಾದ ಮಾಲಿನ್ಯಕಾರಕ ಕಣಗಳಾಗಿದ್ದು, ಸುಲಭವಾಗಿ ನಮ್ಮ ಶ್ವಾಸಕೋಗಳನ್ನು ಪ್ರವೇಶಿಸಿ ನಮ್ಮ ದೇಹಕ್ಕೆ ಮಾರಣಾಂತಿಕ ರೋಗ ತರುವುದರ ಜೊತೆಗೆ ದೇಹದಲ್ಲಿ ಆಕ್ಸಿಜನ್ನ ಪ್ರಮಾಣವನ್ನು ಕುಗ್ಗಿಸಬಹುದು.

      ಹಸಿರು ಮನೆ ಪರಿಣಾಮದಿಂದಾಗಿ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್‌ನಂಥ ಅನಿಲಗಳು ಭೂ ವಾತಾವರಣದಲ್ಲಿ ಶೇಖರಗೊಂಡು, ಆಕ್ಸಿಜನ್ ಸಾಂದ್ರತೆ ಹಾಗೂ ಗುಣಮಟ್ಟ ಕುಸಿಯಲು ಕಾರಣವಾಗುತ್ತದೆ.

ಗಾಳಿಯು ಇದೇ ತರನಾಗಿ ವಿಷಯುಕ್ತವಾಗುತ್ತಾ ಸಾಗಿದರೆ ಸುಮಾರು ೨೦೩೦ರ ಹೊತ್ತಿಗೆ, ಪ್ರತಿ ವರ್ಷ ಜಗತ್ತಿನಲ್ಲಿ ಸುಮಾರು ೫೫೬೦೦ ಮಂದಿ ಉಸಿರಾಟದ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಅಪಾರ ಪ್ರಮಾಣದ ಜೀವಸಂಕುಲಗಳು ಪ್ರಪಂಚದಿಂದ  ಕಣ್ಮರೆಯಾಗುವಲ್ಲಿಯಾವ ಸಂಶಯವಿಲ್ಲ. ಈ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಈಗಿಂದಲೇ ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಂಡರೆ ಸ್ಪಲ್ಪಮಟ್ಟಿಗಾದರೂ ಸಂಭವಿಸಬಹುದಾದ  ದುರಂತಗಳನ್ನು ತಡೆಗಟ್ಟಲು ಸಾಧ್ಯ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

 

      ಸಾದ್ಯವಾದಷ್ಷು ಗಿಡಮರಗಳನ್ನು ಬೆಳೆಸಿ, ಪರಿಸರ ಕಾಳಜಿ ಮೆರೆಯುವುದು.

      ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಪ್ರತಿ ಊರಿಗೊಂದು ಗ್ರಾಮವನ ಯೋಜನೆ ರೂಪಿಸಿ ಯಶಸ್ವಿಗೊಳಿಸುವುದು.

      ಕೈಗಾರಿಕೆಗಳ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸಂಸ್ಕರಿಸಿ ವಾತಾವರಣಕ್ಕೆ ಬಿಡುವುದು.

      ೦.೧ ಮೈಕ್ರಾನ್‌ಗಿಂತಲೂ ಕಡಿಮೆ ಗಾತ್ರದ ಮಾಲಿನ್ಯಕಾರಕಗಳನ್ನು ವಾತಾವರಣಕ್ಕೆ ಬಿಡದಂತೆ ಕೈಗಾರಿಕೆಗಳನ್ನು ನಿಯಂತ್ರಿಸುವುದು.

      ಕುಟುಂಬಕ್ಕೆ ಒಂದೇ ವಾಹನ ಎಂಬ ನಿಯಮ ಜಾರಿಗೆ ತಂದು, ಪಾಲಿಸುವುದು.

      ಕೈಗಾರಿಕೆಗಳನ್ನು ಜನವಸತಿರಹಿತ ಪ್ರದೇಶದಲ್ಲಿ ಸ್ಥಾಪಿಸಿ, ಅವು ಹೊಗೆ ಉಗುಳುವ ಚಿಮಣಿಗಳನ್ನು ಸಾಧ್ಯವಾದಷ್ಷು ಎತ್ತರಿಸಿ, ವಿಷಾನಿಲಗಳ ಪ್ರಮಾಣ ಮತ್ತು ಪ್ರಭಾವವನ್ನುತಗ್ಗಿಸುವುದು

      .ವಾಯುಮಾಲಿನ್ಯ ಹೆಚ್ಚಿರುವ  ಪ್ರದೇಶಗಳಲ್ಲಿ ಕಾರ್ಬನ್ ಮೊನಾಕ್ಸೈಡ್ ಅಲಾರಾಂಗಳನ್ನು ಅಳವಡಿಸಿ, ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ನಿರಂತರವಾಗಿ ಅವಲೋಕಿಸಿ ನಿಯಂತ್ರಿಸುವ ಕರ‍್ಯ ನಡೆಸುವುದು.

      ಮನೆಗಳು ಮತ್ತು ಕಾರ್ಯಾಲಯಗಳಿಗೆ ಸಾಧ್ಯವಾದಷ್ಟು ದೊಡ್ಡದಾದ ಕಿಟಕಿಗಳನ್ನು ಅಳವಡಿಸಿ ಹೆಚ್ಚಿನ ಗಾಳಿ, ಬೆಳಕು ಬರುವಂತೆ ರೂಪಿಸಬೇಕು.

      ನಗರ ಪ್ರದೇಶಗಳಲ್ಲಿ ತಾರಸಿ ಉದ್ಯಾನವನಕ್ಕೆ ಪ್ರೇರೇಪಣೆ ನೀಡಿ, ಸರ‍್ವಜನಿಕರು ಗಾಳಿ ಶುದ್ದೀಕರಣಕ್ಕೆ ಕೈ ಜೋಡಿಸುವಂತಾಗಬೇಕು.


ಈ ಮೇಲಿನ ಎಲ್ಲಾ ಕ್ರಮಗಳನ್ನು ತುರ್ತಾಗಿ ಅಳವಡಿಸಿಕೊಂಡು ಶುದ್ದವಾದ ಗಾಳಿಯನ್ನು ಪಡೆಯುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಶುದ್ಧ ಆಕ್ಸಿಜನ್ನ ಪ್ರಮಾಣ ಹೆಚ್ಚಾಗಿ, ಉಸಿರಾಟ ಸುಲಭವಾದಾಗ ಮಾತ್ರ, ದೇಹದ ಕಶ್ಮಲ ತೊಲಗಿಸಿ ಸದೃಢವಾಗಲು ಸಾಧ್ಯ. ಹೆಚ್ಚೆಚ್ಚು ಶುದ್ದ ಗಾಳಿ ಸೇವಿಸೋಣ, ಒಳ್ಳೆಯ ಆರೋಗ್ಯವನ್ನು  ಪಡೆಯೋಣ.


No comments:

Post a Comment