ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, September 4, 2022

ನಾವು ಬಂದದ್ದು ದಕ್ಷಿಣ ಅಮೇರಿಕಾದಿಂದ !

 ನಾವು ಬಂದದ್ದು ದಕ್ಷಿಣ ಅಮೇರಿಕಾದಿಂದ !

ಲೇಖಕರು : ತಾಂಡವಮೂರ್ತಿ.ಎ.ಎನ್.

ಪ್ರಕೃತಿಯಲ್ಲಿರುವ ಅಗಾಧ ಪ್ರಮಾಣದ ಸಸ್ಯ ಪ್ರಭೇದಗಳಲ್ಲಿ ನಮಗೆ ಆಹಾರವಾಗಿ ಒದಗುತ್ತಿರುವ ಸಸ್ಯ ಪ್ರಭೇದಗಳು ಕೆಲವೇ ಕುಟುಂಬಗಳಿಗೆ ಸೀಮಿತವಾಗಿವೆ. ಅವುಗಳಲ್ಲಿ ಒಂದು ಪ್ರಮುಕ ಕುಟುಂಬ ಸೊಲನೇಸಿ. ಬಹುತೇಕ ದಕ್ಷಿಣ ಅಮೇರಿ ಮೂಲದ ಈ ಕುಟುಂಬಕ್ಕೆ ಸೇರಿದ ಕೆಲ ಪ್ರಮುಖ ಸಸ್ಯ ಪ್ರಭೇದಗಳ ಪರಿಚಯ ಮಾಡಿಕೊಟ್ಟಿದ್ದಾರೆ, ಶಿಕ್ಷಕ ತಾಂಡವಮೂರ್ತಿ ಅವರು.

ಮಾನವನ ನಾಗರೀಕತೆಯನ್ನು ಗಾಢವಾಗಿ ಪ್ರಭಾವಿಸಿದ ಸಸ್ಯ ಕುಟುಂಬಗಳಲ್ಲಿ ಆಹಾರದ ಮೂಲವಾಗಿ ಪೋಷಿಸುವ ಪ್ರಭೇದಗಳ ಜೊತೆಗೆ ವ್ಯಸನಕಾರಕ ಹಾಗೂ ವಿಷಕಾರಿ ಆಲ್ಕಲಾಯಿಡ್ಗಳ ಮೂಲವಾಗಿರುವ ವೈವಿಧ್ಯಮಯ ಪ್ರಭೇದದ ಸಸ್ಯಗಳನ್ನು ಹೊಂದಿರುವ ಸೊಲನೇಸಿ() ಕುಟುಂಬ ಪ್ರಮುಖವಾದುದು. ಪ್ರಪಂಚದ ಎಲ್ಲಾ ನಾಗರೀಕತೆ ಮತ್ತು ಜನಾಂಗಗಳಲ್ಲಿ ಈ ಕುಟುಂಬದ ಸಸ್ಯಗಳ ಬಳಕೆ ಹಾಸು ಹೊಕ್ಕಾಗಿದೆ. ಬದನೆಯೊಂದನ್ನು ಹೊರತು ಪಡಿಸಿ ವಾಣಿಜ್ಯಿಕವಾಗಿ ಪ್ರಮುಖವಾದ ಈ ಕುಟುಂಬದ ಪ್ರಭೇದಗಳು ದಕ್ಷಿಣ ಅಮೇರಿಕ ಮೂಲದವು. ವಸಾಹತು ಯುಗದಲ್ಲಿ ಈ ಪ್ರಭೇದಗಳು ಪ್ರಪಂಚದಾದ್ಯಂತ ಯೂರೋಪಿಯನ್ ವಸಾಹತು ಶಾಹಿಗಳಿಂದ ವ್ಯಾಪಕವಾಗಿ ಪ್ರಸಾರಗೊಂಡು ಜನಪ್ರಿಯವಾದವು. ಸುಮಾರು 98 ಜಾತಿ(genera) ಮತ್ತು 2700 ಪ್ರಭೇದಗಳನ್ನು ಒಳಗೊಂಡಿರುವ ಈ ಕುಟುಂಬದ ಪ್ರಮುಖ, ಉಪಯುಕ್ತ ಸಸ್ಯ  ಪ್ರಭೇದಗಳ ಪರಿಚಯ ಇಲ್ಲಿದೆ.

ಸಸ್ಯ ವರ್ಗೀಕರಣದಲ್ಲಿ ಸೊಲನೇಸಿ ಕುಟುಂಬದ ಸ್ಥಾನ ಮಾನ

Kingdom/ಸಾಮ್ರಾಜ್ಯ  - Plantae/ಸಸ್ಯ ಸಾಮ್ರಾಜ್ತ

Division/ವಂಶ       - Angiospermae/ಆವೃತ ಬೀಜ ಸಸ್ಯಗಳು

Class/ವರ್ಗ           - Magnoliopsida (Dicotyledons)/ದ್ವಿದಳ ಸಸ್ಯಗಳು

Order/ಗಣ           - Solanales/ಸೊಲನೇಲಿಸ್

Family/ಕುಟುಂಬ      - Solanaceae/ಸೊಲನೇಸಿ

ಪ್ರಮುಖಜಾತಿಗಳು (genera)

ಸೊಲನಮ್/ Solanum

ಕ್ಯಾಪ್ಸಿಕಮ್/ Capsicum

ನಿಕೋಟಿಯಾನ/ Nicotiana

ದತೂರ/Datura

ಲೈಸಿಯಮ್/Lycium

ಹೆಚ್ಚು ಬಳಕೆಯಲ್ಲಿರುವ ಈ ಕುಟುಂಬದ ಸಸ್ಯಗಳ ಪರಿಚಯ ಮಾಡಿಕೊಳ್ಳೋಣ.

ಆಲೂಗಡ್ಡೆ (Solanum tuberosum)  

ದಕ್ಷಿಣ ಅಮೇರಿಕ ಮೂಲದ ಈ ಸಸ್ಯವು ಸುಮಾರು 7000 ವರ್ಷಗಳಿಂದಲೂ ಆಹಾರದ ಮೂಲವಾಗಿ ಬಳಕೆಯಲ್ಲಿದೆ.16ನೇ     ಶತಮಾನದಲ್ಲಿ ಸ್ಪಾನಿಷರು ಈ ಸಸ್ಯವನ್ನು ಯುರೋಪ್ ಗೆ ಪರಿಚಯಿಸಿದರು, ನಂತರ ವಸಾಹತು ಯುಗದಲ್ಲಿ ಜಗತ್ತಿನ ಇತರ ಭಾಗಗಳಿಗೆ ಆಲೂಗಡ್ಡೆಯ ಪರಿಚಯವಾಯಿತು. ಭಾರತದಲ್ಲಿ ಮೊದಲು ವಸಾಹತು ಸ್ಥಾಪಿಸಿದ ಪೋರ್ಚುಗೀಸರು ಆಲೂಗಡ್ಡೆಯನ್ನು ಇಲ್ಲಿ ಪರಿಚಯಿಸಿದರು.

ಈ ಸಸ್ಯದ ಗಡ್ಡೆ(tuber) ಮೂಲತ ಕಾಂಡದ ರೂಪಾಂತರವಾಗಿದ್ದು ಖಾದ್ಯ ಯೋಗ್ಯವಾಗಿದೆ. ಮೆಕ್ಕೆ ಜೋಳ, ಗೋಧಿ, ಭತ್ತದ ನಂತರ ಪ್ರಪಂಚದ ನಾಲ್ಕನೇ ಪ್ರಮುಖ ಆಹಾರ ಬೆಳೆಯಾಗಿದೆ. ಅಪೇಕ್ಷಿತ ತಳೀಕರಣದಿಂದ ಪ್ರಪಂಚದಾದ್ಯಂತ ಸುಮಾರು 5000 ಬಗೆಯ ಆಲೂಗಡ್ಡೆ ತಳಿಗಳು ರೂಪುಗೊಂಡಿವೆ. ಅಮೇರಿಕಾ ಮೂಲದ್ದಾದರೂ ಯೂರೋಪಿಯನ್ನರ ಪ್ರಮುಖ ಆಹಾರ ಮೂಲವಾಗಿದೆ. ಪ್ರಸ್ತುತ ಚೀನಾ ಮತ್ತು ಭಾರತ ಆಲೂಗಡ್ಡೆಯ ಪ್ರಮುಖ ಉತ್ಪಾದಕ ರಾಷ್ಟ್ರಗಳಾಗಿ ಗುರುತಿಸಿಕೊಂಡಿವೆ.

ಟೊಮ್ಯಾಟೊ (Solanum lycopersicum)

ಇದು ಸಹ ದಕ್ಷಿಣ ಅಮೇರಿಕಾ ಮೂಲದ ಸಸ್ಯ.ಅಜ್ಟೆಕ್ ನಾಗರೀಕತೆಯ ಕಾಲದಿಂದಲೂ ಆಹಾರವಾಗಿ ಬಳಕೆಯಲ್ಲಿದೆ.ಕೊಲಂಬಸ್ ನ ಅಮೇರಿಕಾ ಅನ್ವೇಷಣೆಯ ನಂತರ 16ನೇ ಶತಮಾನದಲ್ಲಿ ಸ್ಪಾನಿಷರಿಂದ ಟೊಮ್ಯಾಟೊ ಯುರೋಪ್ ಗೆ, ನಂತರ ವಸಾಹತು ಯುಗದಲ್ಲಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿಯೂ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು. ಟೊಮ್ಯಾಟೊ ಮೂಲತ: ಒಂದು ಬೆರಿ ಹಣ್ಣು,ಸಸ್ಯದ ಕಾಂಡ ದುರ್ಬಲವಾಗಿದ್ದು ಬೆಳವಣಿಗೆಗೆ ಆಧಾರ ಅವಶ್ಯಕ.ಟೊಮ್ಯಾಟೊ ಎಲ್ಲಾ ಶೈಲಿಯ ಆಹಾರಗಳಲ್ಲೂ ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ.ಇದರ ಹುಳಿ ಮಿಶ್ರಿತ ಪರಿಮಳ ಆಹಾರದ ರುಚಿಯನ್ನು ಹೆಚ್ಚಿಸುವುದರಿಂದ ವ್ಯಾಪಕವಾಗಿ ಬಳಕೆಯಾಗುವ ತರಕಾರಿಯಾಗಿ ಪ್ರಪಂಚದಾದ್ಯಂತ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಎಲೆ ಮತ್ತು ಪಕ್ವಗೊಳ್ಳದ ಕಾಯಿಗಳಲ್ಲಿ ಟೊಮ್ಯಾಟಿನ್ ಎಂಬ ಆಲ್ಕಲಾಯಿಡ್ ಹೆಚ್ಚಾಗಿ ಸಂಗ್ರಹವಾಗುವುದರಿಂದ ತಿನ್ನಲು ಯೋಗ್ಯವಲ್ಲ. ಪಕ್ವಗೊಂಡ ಹಣ್ಣಿನಲ್ಲಿ ಟೊಮ್ಯಾಟಿನ್ ಇರುವುದಿಲ್ಲ.

ಬದನೆ (Solanum melongena).

ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಮೂಲದ ಪ್ರಮುಖ ತರಕಾರಿ ಬೆಳೆಯಾದ ಬದನೆಕಾಯಿಯೂ ಸಹ ಟೊಮ್ಯಾಟೊದಂತೆಯೇ ಬೆರಿಹಣ್ಣು.ಮಸಾಲೆ ಮತ್ತು ಖಾದ್ಯ ತೈಲವನ್ನು ಹೀರಿಕೊಳ್ಳುವ ಬದನೆ ಕಾಯಿಯ ಸ್ಪಂಜಿನಂತಹ ಅಂಗಾಂಶವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ಸಸ್ಯದ ಎಲೆ ಮತ್ತು ಹೂವುಗಳಲ್ಲಿ ಸೊಲನಿನ್ ಎಂಬ ವಿಷಕಾರಿ ಆಲ್ಕಲಾಯಿಡ್ ಸಂಗ್ರಹವಾಗುವುದರಿಂದ ಮನುಷ್ಯರಿಗೆ ಮತ್ತು ಜಾನುವಾರುಗಳು ತಿನ್ನಲು ಯೋಗ್ಯವಲ್ಲ. ಬದನೆ ಕಾಯಿಯಲ್ಲಿ ಹಿಸ್ಟಮಿನ್ ಎಂಬ ರಾಸಾಯನಿಕವಿರುವುದರಿಂದ ಕೆಲವರಿಗೆ ಇದರ ಸೇವನೆ ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಬದನೆ ಕಾಯಿಯನ್ನು ಕತ್ತರಿಸಿ ಗಾಳಿಗೆ ತೆರೆದಿಟ್ಟಾಗ ಉತ್ಕರ್ಷಣೆಯಿಂದ ಕಂದು ಬಣ್ಣಕ್ಕೆ ತಿರುಗುತ್ತದೆ.

ಕ್ಯಾಪ್ಸಿಕಮ್ (ಕಾಯಿ ಮೆಣಸು)/Capsicum

ಇದೂ ಸಹ ದಕ್ಷಿಣ ಅಮೇರಿಕ ಮೂಲದ ಸಸ್ಯ.16ನೇ ಶತಮಾನದ ನಂತರ ಸ್ಪಾನಿಷರ ಮೂಲಕ ಯುರೋಪ್ ಮತ್ತು ಇತರ ಖಂಡಗಳಿಗೆ ಪರಿಚಯವಾಯಿತು.ಇದರ ಖಾದ್ಯ ಯೋಗ್ಯ ಭಾಗವು ಟೊಮ್ಯಾಟೊ ಮತ್ತು ಬದನೆ ಕಾಯಿಯಂತೆ ಬೆರಿಹಣ್ಣು.ಇದರಲ್ಲಿ ಕಡ್ಡಿ ಮೆಣಸು (Chilli capsicum) ಮತ್ತು ದಪ್ಪ ಮೆಣಸು (Bell capsicum) ಎಂಬ ಪ್ರಭೇದಗಳಿವೆ. ಸಾಮಾನ್ಯವಾಗಿ ಕಡ್ಡಿ ಮೆಣಸಿನಲ್ಲಿ ಖಾರದ ಸಂವೇದನೆಗೆ ಕಾರಣವಾದ ಕ್ಯಾಸ್ಪೈಸಿನ್ ಎಂಬ ಆಲ್ಕಲಾಯಿಡ್ ಹೆಚ್ಚಿನ ಪ್ರಮಾನದಲ್ಲಿರುತ್ತದೆ. ಸ್ತನಿಗಳಲ್ಲಿ ಬಾಯಿ ಮತ್ತು ಜೀರ್ಣನಾಳದ ಉರಿ ಸಂವೇದನೆಗೆ ಕ್ಯಾಸ್ಪೈಸಿನ್ ಕಾರಣವಾಗುತ್ತದೆ, ಆದರೆ ಪಕ್ಷಿಗಳಲ್ಲಿ ಇದರ ಪ್ರಭಾವ ಭಾಧಿಸುವುದಿಲ್ಲ. ಪ್ರಪಂಚದಾದ್ಯಂತ ಎಲ್ಲಾ ಶೈಲಿಯ ಆಹಾರಗಳಲ್ಲಿ ಕ್ಯಾಪ್ಸಿಕಮ್ ಆಹಾರದ ರುಚಿಯನ್ನು ಹೆಚ್ಚಿಸಲು ವ್ಯಾಪಕವಾಗಿ ಬಳಕೆಯಾಗುತ್ತದೆ.

ತಂಬಾಕು (Nicotiana tabacum)

ವ್ಯಸನಕಾರಕ ನಿಕೋಟಿನ್ ಎಂಬ ಆಲ್ಕಲಾಯಿಡ್ ನ ಮೂಲವಾದ ಈ ಸಸ್ಯವು ಸಹ ಅಮೇರಿಕಾ ಮೂಲದ್ದು.16ನೇ ಶತಮಾನದ ನಂತರ ಯೂರೋಪ್ ಮತ್ತು ಇತರ ಖಂಡಗಳಿಗೆ ಪರಿಚಯವಾಯಿತು.ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸಾವುಗಳಿಗೆ ತಂಬಾಕು ಕಾರಣವಾಗುತ್ತದೆ.ವಾರ್ಷಿಕ ಸರಾಸರಿ 6 ಮಿಲಿಯನ್ ಜನರ ಸಾವಿಗೆ ತಂಬಾಕು  ವ್ಯಸನದಿಂದ ಸಾವಿಗೀಡಾಗುತ್ತಾರೆ. ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ತಂಬಾಕು ವ್ಯಸನ ವಿವಿಧ ರೂಪಗಳಲ್ಲಿ (ಬೀಡಿ, ಸಿಗರೇಟ್, ಗುಟ್ಕಾ, ಪಾನ್, ಜಗಿಯುವ ತಂಬಾಕು, ಇತ್ಯಾದಿ) ಬಳಕೆಯಲ್ಲಿದೆ. ಕ್ಯಾನ್ಸರ್, ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣವಾದ ತಂಬಾಕು ಸೇವನೆ ಸಾಮಾಜಿಕ,ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದರೂ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ತಂಬಾಕು ಲಾಬಿ ವಿಶ್ವ ಆರ್ಥಿಕತೆಯನ್ನು ಪ್ರಭಾವಿಸುವುದರಿಂದ ಯಾವ ದೇಶವೂ ಸಂಪೂರ್ಣವಾಗಿ ತಂಬಾಕನ್ನು ನಿರ್ಬಂಧಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ.

ಒಟ್ಟಾರೆ ವೈವಿಧ್ಯಮಯ, ವೈರುಧ್ಯಮಯ ಪ್ರಭೇದಗಳನ್ನೊಳಗೊಂಡ ಸೊಲನೇಸಿ ಕುಟುಂಬ ಮಾನವನ ಪೋಷಣೆಗೆ ಸಹಕಾರಿಯಾಗಿರುವುದಲ್ಲದೆ, ವ್ಯಸನಕಾರಕ ಆಲ್ಕಲಾಯಿಡ್ ಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡುತ್ತವೆ.ಜಾಗತಿಕ ಆರ್ಥಿಕತೆಯಲ್ಲಿಯೂ ಪ್ರಮುಖ ಪಾತ್ರ ವಹಿಸುವ ಸೋಲನೇಸಿ ಕುಟುಂಬ ಸದಸ್ಯರು ಮಾನವ ನಾಗರೀಕತೆಯ ವಿಕಾಸದಲ್ಲಿ ಹಾಸುಹೊಕ್ಕಾಗಿ ತಮ್ಮ ಛಾಪು ಮೂಡಿಸಿವೆ. ಅಲ್ಲವೇ?  

ಲೇಖಕರು : ತಾಂಡವಮೂರ್ತಿ.ಎ.ಎನ್.
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಕಾರಮಂಗಲ
ಬಂಗಾರಪೇಟೆ(ತಾ.), ಕೋಲಾರ(ಜಿಲ್ಲೆ)

4 comments:

  1. ಸಹಸ್ರಾರು ವರ್ಷಗಳಿಂದ ವ್ಯವಸಾಯ ಪ್ರಧಾನವಾಗಿರುವ ನಮ್ಮ ದೇಶದ ಅನೇಕ ಬೆಳೆಗಳ ಮೂಲ ವಿದೇಶವಾಗಿದೆ.
    ಪ್ರಮುಖ ತರಕಾರಿ ಬೆಳೆಗಳಾದ ಆಲೂ, ಬದನೆ, ಟೊಮೆಟೊ, ಕ್ಯಾಪ್ಸಿಕಂ ಮತ್ತು ತಂಬಾಕು ಬೆಳೆ ಗಳು ದಕ್ಷಿಣ ಅಮೆರಿಕದ ಮೂಲದವು ಎನ್ನುವುದನ್ನು ಚೆನ್ನಾಗಿ ವಿವರಿಸಿದ್ದಾರೆ. ಧನ್ಯವಾದಗಳು ಸರ್

    ReplyDelete