ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, November 4, 2022

ಜೇಡ: ಅದರ ಸೋಜಿಗ ನೋಡ !


ಜೇಡ: ಅದರ ಸೋಜಿಗ ನೋಡ !

ಲೇಖಕರು : ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಜೇಡ ಎಲ್ಲರ ಗಮನವನ್ನು ಬಾಲ್ಯದಿಂದಲೇ ಸೆಳೆದಿರುತ್ತದೆ. ಜೇಡಗಳ ವೈವಿದ್ಯತೆ ಅವುಗಳ ಬಲೆಗಳಷ್ಟೇ ಸೋಜಿಗವನ್ನು ಉಂಟುಮಾಡುವಂತದ್ದು . ಜೀವಜಗತ್ತಿನ ಆಹಾರ ಜಾಲದಲ್ಲಿ ಜೇಡಗಳು ಪ್ರಮುಖ ಪಾತ್ರವಹಿಸುತ್ತವೆ. ರೈತನಿಗೂ ಜೈವಿಕನಿಯಂತ್ರಣದ ಮೂಲಕ ಸಹಾಯಕವಾಗಿವೆ ಎನ್ನುವುದನ್ನು ವಿವರಿಸಿದ್ದಾರೆ  ಡಿ. ಕೃಷ್ಣಚೈತನ್ಯ ಅವರು 

ಒಮ್ಮೆ ಪಕ್ಷಿಗಳ ಛಾಯಾ ಚಿತ್ರ ಸೆರೆಹಿಡಿಯಲು ಕಾಫಿ ಗಿಡಗಳ ನಡುವೆ ನುಸುಳಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಒಂದು ಜೇಡ ಬಲೆ ನೇಯುತ್ತಿದ್ದುದು ಕಣ್ಣಿಗೆ ಬಿತ್ತು. ಅಯ್ಯೋ ನೋಡದೆ ಏನಾದರು ನುಗ್ಗಿದ್ದರೆ, ಅದು ಶ್ರಮಪಟ್ಟು ನೇಯುತ್ತಿದ್ದ ಬಲೆ ಹಾಳಾಗುತ್ತಿತ್ತಲ್ಲ ಎಂದು ಥಟ್ ಎಂದು ನಿಂತೆ. ಪಕ್ಷಿ ಮೇಲಿದ್ದ ಗಮನ ಸಂಪೂರ್ಣ ಜೇಡನ ಕಡೆಗೆ ತಿರುಗಿತ್ತು. ತಕ್ಷಣ ನೆನಪಾದದ್ದು ಸ್ಪೈಡರ್‌ ಮ್ಯಾನ್‌ ಚಿತ್ರ. ಹತ್ತಿರದಿಂದ ಗಮನಿಸಿದಾಗ ಅದರ ಕುಶಲಕಲೆಯ ಪರಿಚಯ ಬೆರಗು ಮೂಡಿಸಿತು.


ಜೇಡಗಳಲ್ಲಿ ಹಲವಾರು ವಿಧಗಳಿವೆ. ಗಿಡ-ಮರಗಳ ನಡುವೆ ವಾಸಿಸುವ ಜೇಡಗಳು ಸಾಮಾನ್ಯವಾಗಿ ಚಪ್ಪಟೆಯಾದ ಬಲೆಗಳನ್ನು ನೇಯುತ್ತವೆ. ನೆಲದಲ್ಲಿ ವಾಸಿಸುವ ವಾಸಿಸುವ ಜೇಡಗಳು ಕೊಳವೆ ಅಥವಾ ಸುರಂಗಗಳಂತಹ ಇಲ್ಲವೇ ಹಪ್ಪಳದಂತೆ ಹರಡಿರುವ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಮುಳ್ಳಿನ ಪೊದೆಗಳಲ್ಲಿ ಮುದ್ದೆಯಂತಹ ಗೂಡನ್ನು ಕಟ್ಟಿಕೊಳ್ಳುತ್ತವೆ. ಸಣ್ಣ ಗಾತ್ರದ ಜೇಡಗಳೆಂದರೆ ಹೆಸರುಕಾಳಿನ ಗಾತ್ರದಷ್ಟಿದ್ದು ಅತ್ಯಂತ ದೊಡ್ಡ ಜೇಡವೆಂದರೆ ಸುಮಾರು ಹಲಸಿನ ಬೀಜದಷ್ಟು ದೊಡ್ಡದಿರುತ್ತದೆ. ಕೆಲವು ಪ್ರಭೇದಗಳು ವಿಷಪೂರಿತವಾಗಿದ್ದು ಸಾವನ್ನುಂಟು ಮಾಡುತ್ತವೆ. ಪ್ರಪಂಚದಲ್ಲಿ ಸುಮಾರು ೧೩೨ ಕುಟುಂಬಗಳಲ್ಲಿ ಸುಮಾರು ೫೦,೩೫೬ ಪ್ರಭೇದಗಳನ್ನು ಇಲ್ಲಿಯವರೆಗೆ ಗುರುತಿಸಲಾಗಿದೆ.


ಎಲ್ಲಾ ಜೇಡಗಳು ಆರ್ಥ್ರೋಪೋಡ ವರ್ಗಕ್ಕೆ ಸೇರಿದ್ದರೂ ರೇಷ್ಮೆ ಸ್ರವಿಸುವ ವಿಶಿಷ್ಟ ಗುಣ ಮಾತ್ರ ಕೆಲವೇ ಕೆಲವು ಕೀಟಗಳಿಗೆ ಇದೆ. ಕಂಬಳಿಹುಳುಗಳು ಸಹ ರೇಷ್ಮೆ ಸ್ರವಿಸುವ ಗುಣವನ್ನು ಹೊಂದಿವೆ. ಗಿಡಗಳ ನಡುವೆಯೋ, ರಸ್ತೆಯಲ್ಲೊ ನಡೆದು ಹೋಗುತ್ತಿದ್ದಾಗ ಕಂಬಳಿಹುಳು ದಾರದಲ್ಲಿ ನೇತಾಡುವುದನ್ನು ಯಾರು ತಾನೆ ನೋಡಿಲ್ಲ? ಅತ್ಯಂತ ಬೆಲೆಬಾಳುವ ರೇಷ್ಮೆ ತಯಾರಿಸುವ ಹುಳು/ ಪತಂಗ ಕೀಟವೆ? ಅಲ್ಲವೇ?


ಜೇಡ ಬಲೆ ನೇಯುವುದಂತು ಸೋಜಿಗವೋ ಸೋಜಿಗ! ಅದಕ್ಕಾಗಿ ಜಾಗದ ಆಯ್ಕೆ, ಸಣ್ಣ ಕೀಟಗಳ ಹಾರಾಡುವ ಜಾಗ, ಅವುಗಳ ಲಭ್ಯತೆ ಮತ್ತು ತನಗೆ ಸಿಗಬಹುದಾದ ರಕ್ಷಣೆಯ ಬಗ್ಗೆ ಕಾಳಜಿವಹಿಸುತ್ತದೆ. ಮೊದಲು ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಂಡು ಸುತ್ತಲಿನ ಗಿಡಗಳು, ರೆಂಬೆಗಳು ಅಥವಾ ಯಾವುದಾದರೂ ರಚನೆಗಳ ನಡುವಿನ ದೂರ ಇವೆಲ್ಲವನ್ನು ದೃಷ್ಟಿಯಿಂದಲೇ ಲೆಕ್ಕಾಚಾರ ಹಾಕಿ ಮೊದಲು ನೀಳವಾದ ಎಳೆಗಳನ್ನು ಸ್ರವಿಸಿ ಗೂಡಿನ ಕೇಂದ್ರದಿದ ದೂರಕ್ಕೆ ಎಳೆಗಳನ್ನು ಅಂಟಿಸಿ ಬರುತ್ತದೆ. ನಾವೆಲ್ಲರೂ ಜೇಡದ ಬಗ್ಗೆ ಒಂದು ಸಾಲನ್ನು ಕೇಳಿಯೇ ಇರುತ್ತೇವೆ. ಅದೇ “ಜೇಡ ನೋಡು ಎಷ್ಟು ಸಾರಿ ಕೆಳಕ್ಕೆ ಬಿದ್ದರೂ ಅದೇ ಎಳೆಯನ್ನು ಹಿಡಿದುಕೊಂಡು ಹತ್ತಿ ಬರುತ್ತದೆ” ಎಂದು. ಅದು ವಾಸ್ತವವಾಗಿ ಬಲೆ ಹೆಣೆಯಲು ದಾರ ಬಿಟ್ಟುಕೊಂಡು ದೂರದ ಗಮ್ಯಕ್ಕೆ ಅಂಟಿಸಿ ಬರುವ ಕ್ರಮವಾಗಿರುತ್ತದೆ. ಇದರಿಂದ ನಾವೂ “ಮರಳಿಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವವನ್ನು ಪ್ರೇರಣೆಯಾಗಿಸಿ ಬದುಕಿಗೆ ಅನ್ವಯಿಸಿಕೊಳ್ಳಬಹುದು. ಗೂಡಿನಿಂದ ಇಳಿಯದೇ ಒಂದೇ ಬಾರಿಗೆ ಬಿದ್ದು ಶೀಘ್ರವಾಗಿ ನೇಯಲು ಅನುಸರಿಸುವ ತಂತ್ರವಾಗಿದೆ. ಹೀಗೆ ಎಲ್ಲಾ ಕಡೆಯಲ್ಲೂ ದಾರಗಳನ್ನು ಅಂಟಿಸಿದ ಮೇಲೆ ದೂರದಿಂದ ಎಲ್ಲಾ ಎಳೆಗಳಿಗೂ ಅಡ್ಡವಾಗಿ ಎಳೆ ಅಂಟಿಸುವ ಬಲೆಯ ಕೆಲಸ ಪ್ರಾರಂಭಿಸುತ್ತದೆ ಅದರೆಳೆಗಳ ಅಂತರ ಎಷ್ಟು ಕರಾರುವಾಕ್ಕಾಗಿರುತ್ತದೆ ಎಂದರೆ ಎಂರೂ ಮೂಗಿನ ಮೇಲೆ ಬೆರಳಿಡಬೇಕು. ಈ ದೂರವನ್ನು ಅಳತೆ ಮಾಡಿಕೊಳ್ಳಲು ಉಪಯೋಗಿಸುವ ಅಳತೆ ಪಟ್ಟಿ ಎಂದರೆ, ಅದರ ಕಾಲುಗಳು. ಅದಕ್ಕಿರುವ ಎಂಟು ಕಾಲುಗಳನ್ನು ಉಪಯೋಗಿಸುವ ಕೌಶಲ ದಿಗ್ಭ್ರಮೆ ಮೂಡಿಸುತ್ತದೆ. ನಾಲ್ಕು ಕಾಲುಗಳು ಚಲನೆಗೆ ಸಹಕರಿಸಿದರೆ, ಒಂದು ಕಾಲನ್ನು ಪಕ್ಕದ ಎಳೆಯನ್ನು ಎಳೆದುಕೊಳ್ಳಲು, ಇನ್ನೊಂದು ಕಾಲನ್ನು ದೂರದ ಅಳತೆಗೆ, ಮತ್ತೊಂದನ್ನು ಬಾಯಿಯಿಂದ ಸ್ರವಿಸುವ ಎಳೆಯನ್ನು ನಿರ್ದಿಷ್ಟ ದೂರಕ್ಕೆ ತಳ್ಳಲು, ಮಗದೊಂದನ್ನು ಆ ಎಳೆಯನ್ನು ಅಂಟಿಸಲು ಬಳಸಿಕೊಳ್ಳುತ್ತದೆ.


ಈ ರೀತಿ ಬಲೆಯನ್ನು ನೇಯ್ದ ನಂತರ ಅದರ ಮಧ್ಯ ಭಾಗದಲ್ಲಿ ಆಹಾರಕ್ಕಾಗಿ ಕಾದು ಕುಳಿತುಕೊಳ್ಳುತ್ತದೆ. ಗಾಳಿಯಲ್ಲಿ ಹಾರಾಡಿಕೊಂಡು ಹೋಗುವ ಸಣ್ಣ ಸಣ್ಣ ಕೀಟಗಳು ಬಲೆಗೆ ಬಿದ್ದು ಅವು ಅಂಟಿಕೊಡ ತಕ್ಷಣ, ಅಲ್ಲಿಗೆ ಧಾವಿಸಿ ಬರುವ ಜೇಡ ಅದರ ಸುತ್ತ ಅಂಟಾದ ಎಳೆಯನ್ನು ಸ್ರವಿಸಿ ಬಂಧಿಸುತ್ತದೆ. ನಂತರ ಅದನ್ನು ಭಕ್ಷಿಸುತ್ತದೆ. ಜೇಡದ ಬಲೆ ಹಳೆಯದಾದಂತೆ ಅದರ ಅಂಟುಗುಣ ದೂಳಿನಿಂದ ಕಡಿಮೆಯಾಗಿ ಅಥವಾ ಯಾವುದಾದರೂ ಪಕ್ಷಿ-ಪ್ರಾಣಿಗಳ ಚಲನೆಯಿಂದ ಹಾನಿಗೊಳಗಾದರೆ ಅದನ್ನು ದುರಸ್ತಿ ಮಾಡಿಕೊಳ್ಳದೇ ಅವು ಹೊಸಬಲೆಯನ್ನು ಕಟ್ಟಿಕೊಳ್ಳುತ್ತವೆ.


 
ಜೇಡಗಳು ಕೀಟಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾರಾಡುವ ಚಿಟ್ಟೆಗಳು, ಕೀಟಗಳು, ಪತಂಗಗಳು, ಡ್ರ್ಯಾಗನ್‌ ಫ್ಲೈ ಮುಂತಾದವುಗಳನ್ನು ಇವು ನಿಯಂತ್ರಿಸುವುದರಿಂದ ಸಸ್ಯ ಹಾಗೂ ಆಹಾರ ಬೆಳೆಗಳ ರಕ್ಷಣೆಯನ್ನು ಇವು ಮಾಡುತ್ತವೆ. ಇನ್ನು ಕೆಲವು ಜೇಡಗಳ ಅಂಟು ಚರ್ಮಕ್ಕೆ ತಾಗಿ ಸುತ್ತಿಕೊಂಡರೆ ಕಡಿತ, ಗಂದೆ ಬರುತ್ತದೆ. ಕೆಲವು ಪ್ರಬೇಧಗಳ ಜೇಡಗಳು ಕಚ್ಚುವುದರಿಂದ ಉರಿಯೂತ ಉಂಟಾಗುತ್ತದೆ. ಬ್ಲಾಕ್‌ ವಿಡೊ ಅತ್ಯಂತ ವಿಷಪೂರಿತವಾಗಿದ್ದು ಮರಣವನ್ನು ತರುತ್ತದೆ.

2 comments:

  1. ಜೇಡಗಳ ಬಗ್ಗೆ ವಿವರವಾದ ಮತ್ತು ಆಳವಾದ ಮಾಹಿತಿ ನೀಡಿದ್ದೀರಿ ಸರ್. ವ್ಯವಸಾಯದಲ್ಲಿ ಕೂಡಾ ಕೆಲವು ಕೀಟಗಳ ಹತೋಟಿಯಲ್ಲಿ ಅವುಗಳ ಪಾತ್ರ ಗಮನಾರ್ಹ. ಉತ್ತಮ ಲೇಖನ, ಧನ್ಯವಾದಗಳು ಸರ್.

    ReplyDelete
  2. ಜೇಡಗಳ ಬಗ್ಗೆ ಮಾಹಿತಿ ಹಂಚಿಕೆ ಚೆನ್ನಾಗಿದೆ ಸರ್.ಧನ್ಯವಾದಗಳು.

    ReplyDelete