ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, November 4, 2022

ಭಾರತದ ನೊಬೆಲ್ ವಂಚಿತ, ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಡಾ|| ಸುಭಾಶ್‌ರವರ ದುರಂತ ಕತೆ (ಭಾಗ ೨)

ಭಾರತದ ನೊಬೆಲ್ ವಂಚಿತ, ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಡಾ|| ಸುಭಾಶ್‌ರವರ ದುರಂತ ಕತೆ (ಭಾಗ ೨)

ಡಾ|| ಎಂ.ಜೆ. ಸುಂದರ್ ರಾಮ್ 

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು


ಹಿಂದಿನ ಸಂಚಿಕೆಯಲ್ಲಿ ಸುಭಾಷರು ತಮಗಾದ ತೇಜೋವಧೆಯಿಂದಾಗಿ  ಅಸಹಾಯಕರಾಗಿ ಪ್ರಾಣವನ್ನೇ ಕಳೆದುಕೊಂಡ ಘಟನಾವಳಿಗಳನ್ನು ಓದಿದ್ದೀರಿ. ತದನಂತರ ಹಲವು ಘಟನೆಗಳು ಇತಿಹಾಸದಲ್ಲಿ ದಾಖಲಾದವು.  ಅವರಿಗಾದ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸಿದ ಘಟನಾವಳಿಗಳನ್ನು ಡಾ|| ಎಂ.ಜೆ. ಸುಂದರ್ ರಾಮ್ ಅವರು ಈ ಲೇಖನದ ಮೂಲಕ ವಿವರಿಸಿದ್ದಾರೆ. 

ಕಾನುಪ್ರಿಯ ಅಗರ್ವಾಲ್ ದುರ್ಗಾಷ್ಟಮಿಯಂದು ಹುಟ್ಟಿದ್ದರಿಂದಲೂ ಮತ್ತು ಅವಳನ್ನು ಯಾರೂ ಸುಲಭವಾಗಿ ಗುರುತಿಸದಿರಲೆಂದೂ ಅವರಜ್ಜ ಅವಳಿಗೆ ದುರ್ಗಾ ಎಂದು ಮರುನಾಮಕರಣ ಮಾಡಿದರು. ಕಾನು ಪ್ರಿಯ ಕ್ರಮೇಣ ಜನಮನದಿಂದ ಅದೃಶ್ಯಳಾದಳು.೧೯೭೯ನೇ ಇಸವಿಯಲ್ಲಿ ಜಪಾನಿನ ಕ್ಯೋಟೊ ವಿಶ್ವವಿದ್ಯಾಲಯ (Kyoto   University)ದ ವಿಶ್ವವೈದ್ಯಕೀಯ ಸಮಾವೇಶದಲ್ಲಿ ಸುಭಾಶ್‌ರು ಸೃಷ್ಟಿಸಿದ ಪ್ರನಾಳಶಿಶುವಿನ ಬಗ್ಗೆ ಸಂಶೋಧನಾಪತ್ರ ಮಂಡಿಸಲು ಸುಭಾಶ್‌ರನ್ನು ಆಹ್ವಾನಿಸಿತ್ತು. ಆದರೆ ಭಾರತ ಸರ್ಕಾರ ಅವರಿಗೆ ಪಾಸ್‌ಪೋರ್ಟ್ ನೀಡದೆ ಅವರನ್ನು ಮಾನಸಿಕವಾಗಿ ಪೀಡಿಸಿತು. ಸ್ತ್ರೀ ದೇಹದ ಹೊರಗೆ ಜೀವವನ್ನು ಸೃಷ್ಟಿಸುವೆನೆಂದು ದುಸ್ಸಾಹಸ ಮಾಡ ಹೊರಟಿದ್ದ ಸುಭಾಶ್‌ರನ್ನು ಅವರ ಸಹೋದ್ಯೋಗಿಗಳು ಅಪಹಾಸ್ಯಮಾಡಿದರು; ಬಂಧುಗಳು ಹೀಯಾಳಿಸಿದರು; ಸರ್ಕಾರ ಛೀಮಾರಿ ಹಾಕಿತು. ನಮ್ಮ ದೇಶದ ವಿವಿಧೆಡೆಗಳಿಂದ ಸುಭಾಶ್ ಅವರಿಗೆ ಅನೇಕ ಆಹ್ವಾನಗಳು ಬಂದವು. ಆದರೆ ಅವರು ದೆಹಲಿಯಿಂದ ಮತ್ಯಾವುದೇ ಸ್ಥಳಕ್ಕ್ಕೂ ಹೋಗದಂತೆ ಭಾರತ ಸರ್ಕಾರವು ಅವರಿಗೆ ನಿರ್ಬಂಧ ಹೇರಿತು.

ಇಂತಹ ಅವಮಾನವನ್ನೂ ತೇಜೋವಧೆಯನ್ನೂ ಸಹಿಸಿಕೊಳ್ಳಲಾರದ ಸುಭಾಶ್ ಅತ್ಯಂತ ಹತಾಶರಾಗಿದ್ದರು.

ಎಲ್ಲ ಕಡೆಯಿಂದಲೂ, ಎಲ್ಲರಿಂದಲೂ ಸೋಲನುಭವಿಸಿದ ಅವಮಾನದಿಂದ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡು ಮನದಲ್ಲೇ ಕೊರಗುತ್ತಿದ್ದರು. ಬೇರೆ ದಾರಿ ತೋರದೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟರು. ಜಗತ್ಪçಸಿದ್ಧ ಸಂಶೋಧನೆಯಲ್ಲಿ ತೀವ್ರವಾಗಿ ಮುಳುಗಿದ್ದ ಸುಭಾಶ್, ‘ಸಧ್ಯಕ್ಕೆ ನಮಗೆ ಮಕ್ಕಳಾಗುವುದು ಬೇಡ; ನನ್ನ ಸಂಶೋಧನೆ ಯಶಸ್ವಿಯಾದ ನಂತರ ಅದರ ಬಗ್ಗೆ ಯೋಚಿಸೋಣ’ ಎಂದು ತಮ್ಮ ಪತ್ನಿ ನಮಿತಾರನ್ನು ಒಪ್ಪಿಸಿದ್ದರಂತೆ. ನಿಧನರಾದಾಗ ಅವರಿಗೆ ೫೦ ವರ್ಷ ವಯಸ್ಸಾಗಿತ್ತು.


‘ಭಾರತೀಯ ಸಂಶೋಧಕ ಸಮುದಾಯವು ನನ್ನ ಸಂಶೋಧನೆಯನ್ನು ಸಂದೇಹಪಡುವ ಬದಲಿಗೆ ಬೆಂಬಲಿಸಿ, ಆರ್ಥಿಕ ಸಹಾಯ ಒದಗಿಸಿ ಪ್ರೋತ್ಸಾಹಿಸಿದ್ದರೆ ನಾನು ಬ್ರಿಟಿಷ್ ಸಂಶೋಧಕರನ್ನು ಹಿಂದಿಕ್ಕಿ ಐವಿಎ¥s಼ï‌ನಲ್ಲಿ ಭಾರತಕ್ಕೆ ಅಗ್ರಸ್ಥಾನವನ್ನು ಗಳಿಸಿಕೊಡುತ್ತಿದ್ದೆ’ ಎಂದು ಸುಭಾಶ್ ಘೋಷಿಸಿದ್ದರು. 

ಆನಂದ್ ಕುಮಾರ್ ಆಗಮನ 

ಅಂದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ (Indian Council for Medical Research ICMR)ನ ನಿರ್ದೇಶಕರಾಗಿದ್ದ ಟಿ.ಸಿ. ಆನಂದ್ ಕುಮಾರ್ ಆಗಸ್ಟ್ ೧೬, ೧೯೮೬ರಂದು ಹರ್ಷ ಎಂಬ ಭಾರತದ ಮೊದಲ ಪ್ರನಾಳಶಿಶುವನ್ನು ಸೃಷ್ಠಿಸಿದರೆಂದು ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿತು. ೧೯೯೭ರಲ್ಲಿ ಆನಂದ್‌ಕುಮಾರ್ ವಿಜ್ಞಾನ ಕಾಂಗ್ರೆಸ್ (Science Congress)ನ ಅಧಿವೇಶನದಲ್ಲಿ ಭಾಗವಹಿ ಸಲು ಕೋಲ್ಕತ್ತಾಗೆ ಬಂದಾಗ ದುರ್ಗಾಳಿಗೆ ೨೨ ವಯಸ್ಸು. ಸುನಿತ್ ಮುಖರ್ಜಿಯವರು ಆನಂದ್ ಕುಮಾರ್‌ರನ್ನು ದುರ್ಗಾಳ ಮನೆಗೆ ಕರೆಸಿ ಅವಳಿಗೆ ಪರಿಚಯಿಸಿದರು.  

ಆನಂದ್ ಕುಮಾರ್‌ರಿಗೆ ಸುಭಾಷ್‌ರ ಎಲ್ಲ ಸಂಶೋಧನಾಪತ್ರಗಳನ್ನು ಮತ್ತಿತರ ದಾಖಲೆಗಳನ್ನು ಒಪ್ಪಿಸ ಲಾಯಿತು. ಅವರು ಅವೆಲ್ಲವನ್ನೂ ತಮ್ಮೊಡನೆ ಕೊಂಡೊಯ್ದು, ದೀರ್ಘ ಅಧ್ಯಯನಮಾಡಿ ಪರಿಶೋಧಿಸಿದರು. ಪ್ರನಾಳಶಿಶುವಿನ ಸೃಷ್ಟಿಯ ಬಗ್ಗೆ ತಮ್ಮ ಸಂಶೋಧನೆಯ ಪ್ರತಿಯೊಂದು ಹಂತದ ಮಾಹಿತಿಯನ್ನೂ ಸುಭಾಶ್ ವಿಷದವಾಗಿ, ಅಚ್ಚುಕಟ್ಟಾಗಿ ಬರೆದಿಟ್ಟಿದ್ದರು. ಆನಂದ್ ಕುಮಾರ್ ದುರ್ಗಾಳ ತಂದೆತಾಯಿಯರನ್ನು ಸಂಧಿಸಿ, ದೀರ್ಘವಾಗಿ ಚರ್ಚಿಸಿದರು. ಎಲ್ಲವನ್ನೂ ಪರಿಗಣಿಸಿದ ಆನಂದ್ ಕುಮಾರ್‌ಗೆ, ಸರ್ಕಾರ ಸುಭಾಶ್‌ರ ಮೇಲೆ ಹೊರಿಸಿದ್ದ ಆಪಾದನೆಗಳೆಲ್ಲ ನಿರಾಧಾರವಾದುವೆಂದೂ, ಹುಸಿಯಾದುದೆಂದೂ ಮನವರಿಕೆಯಾಯಿತು. 

ಆನಂದ್ ಕುಮಾರ್ ಸುಭಾಶ್‌ರನ್ನು ಕೆಲವು ವಿಷಯಗಳಲ್ಲಿ ಕಟುವಾಗಿ ವಿರೋಧಿಸಿದ್ದರೂ ಅವರ ಪ್ರತಿ ಯೊಂದು ಪತ್ರವನ್ನೂ ಅತ್ಯಂತ ಸಹನೆಯಿಂದಲೂ ನಿಷ್ಪಕ್ಷಪಾತದಿಂದಲೂ ಅಧ್ಯಯನಮಾಡಿದರು. ಸುಭಾಶ್‌ಗೆ ಆಗಿದ್ದ ಅನ್ಯಾಯ ಅವರಿಗೆ ಎದ್ದು ಕಾಣಿಸಿತು. ಆದ್ದರಿಂದ ಅವರನ್ನು ಎಲ್ಲ ಆಪಾದನೆಗಳಿಂದಲೂ ಮುಕ್ತ ಗೊಳಿಸಿ, ಅವರೇ ಭಾರತದ ಮೊದಲ ಪ್ರನಾಳಶಿಶುವಿನ ಶಿಲ್ಪಿಯೆಂದು ಬಹಿರಂಗವಾಗಿ ಘೋಷಿಸಿದರು. 

ತಮ್ಮನ್ನೇ ಭಾರತದ ಪ್ರಥಮ ಪ್ರನಾಳಶಿಶುವಿನ ಸೃಷ್ಟಿಕರ್ತನೆಂದು ನಮ್ಮ ಸರ್ಕಾರವು ಘೋಷಿಸಿದ್ದರೂ, ಸುಭಾಶ್ ತಮಗಿಂತಲೂ ಮೊದಲೇ ಈ ಸಂಶೋಧನೆಯನ್ನು ಮಾಡಿ ಶಿಶುವನ್ನು  ಸ್ತ್ರೀದೇಹದ ಹೊರಗೆ ಯಶಸ್ವಿಯಾಗಿ ಸೃಷ್ಟಿಮಾಡಿದ್ದ ವಿಷಯ ಕಣ್ಣು ಕೋರೈಸುವಂತೆ ಎದ್ದು ಕಾಣು ತ್ತಿತ್ತು. ಸರ್ಕಾರವು ತನಗೆ ನೀಡಿದ್ದ ‘ಮೊದಲ ಅಪ್ರನಾಳಶಿಶುವಿನ ಸೃಷ್ಟಿಕರ್ತ’ ಎಂಬ ಬುರುದು ಸುಭಾಶ್‌ರಿಗೇ ಸಲ್ಲಬೇಕೆಂದು ಆನಂದ್ ಕುಮಾರ್ ನಿರ್ಧರಿಸಿದರು. ಅದರಂತೆ, ತಮ್ಮ ತಲೆಯ ಮೇಲಿದ್ದ ಆ  ಕಿರೀಟವನ್ನು ತಾವಾಗಿಯೇ ಕಳಚಿ, ಸುಭಾಶ್‌ರೇ ಈ ಕಿರೀಟವನ್ನು ಧರಿಸಲರ್ಹರೆಂದು ಘೋಷಿಸಿ, ಭಾರತೀಯ ಪರಂಪರೆಯ ನಿಸ್ವಾರ್ಥತೆ ಮತ್ತು ಶ್ರೇಷ್ಠತೆಯನ್ನು ಮೆರೆದರು. ಎಂಥಹ ಕೆಚ್ಚೆದೆಯ, ದಿಟ್ಟತನದ ನಿಸ್ವಾರ್ಥ ನಿರ್ಧಾರ! ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಎದೆಯುಬ್ಬಿಸಿ ಅನುಕರಿಸಿ ಬೀಗುವ ನಿರ್ಧಾರ!  

ಪ್ರಸವಶಾಸ್ತ್ರ ಮತ್ತು  ಸ್ತ್ರೀರೋಗಶಾಸ್ತ್ರದ ಸಂಯುಕ್ತ ಸಂಘ (Federation of Obstetrics & Gynaecology)ದ ಪೂರ್ವಾಧ್ಯಕ್ಷೆ ಡಾ|| ಜಯಶ್ರೀ ಗಜರಾಜ್‌ರ ಪ್ರಕಾರ ‘ಸುಭಾಶ್‌ರು ಎಡ್‌ವರ್ಡ್ಸ್ರ ತಂತ್ರಜ್ಞಾನವನ್ನೇ ಬಳಸಿಕೊಂಡರು. ವ್ಯತ್ಯಾಸವೆಂದರೆ ಎಡ್‌ವರ್ಡ್ಸ್ ಹಾಗೂ ಸ್ಟೆಪ್‌ಟೊ ತಮ್ಮ ಸಂಶೋಧನೆಯ ಪ್ರತಿಯೊಂದು ಅಂಶವನ್ನೂ ಒಂದಲ್ಲ ಒಂದು ವೈದ್ಯಕೀಯ/ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಆಗಿಂದಾಗ ದಾಖಲಿಸುತ್ತ ಬಂದರು. ಆದರೆ ಸುಭಾಶ್‌ರು ತಮ್ಮ ಸಂಶೋಧನೆಯ ಯಾವ ಅಂಶವನ್ನೂ ನಿಯತಕಾಲಿಕೆಗಳಲ್ಲಿ ಬಹಿರಂಗಪಡಿಸಲಿಲ್ಲ. ವಿಜ್ಞಾನದಲ್ಲಿ ದಾಖಲೆಯಿಲ್ಲದೆ ಯಾವ ಹೇಳಿಕೆಯನ್ನೂ ಸಮರ್ಥಿಸಿಕೊಳ್ಳಲಾಗದು.’ 

ಆದರೆ ಸುಭಾಶ್‌ರವರ ಪ್ರಚಂಡ ಸಂಶೋಧನೆಯನ್ನು ಸಮರ್ಥಿಸುವ ಏಕೈಕ ಸಾಕ್ಷಿಯೆಂದರೆ ಅವರು ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯೊಂದೆ. ತಾವು ಯಾವ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿರುವರೆಂಬ ಮಾಹಿತಿ ಮತ್ಯಾರಿಗೂ ತಿಳಿಯಕೂಡದೆಂದು ಸುಭಾಶ್ ವಿಶೇಷ ಕಾಳಜಿ ವಹಿಸಿದರು ಏಕೆಂದರೆ, ತಮ್ಮ ಸಂಶೋಧನೆಯ ಪರಿಣಾಮ ಏನಾದೀತೆಂಬ ಅರಿವು ಅವರಿಗಿರಲಿಲ್ಲ. ಜೊತೆಗೆ, ಅಂದಿನ ಸಮಾಜ ಈ ಕ್ರಾಂತಿಕಾರಿ ಸಂಶೋಧನೆಯನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. 

ಕೊಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ದೃಭಜ್ಯೋತಿ ಚಟ್ಟೋಪಾಧ್ಯಾಯರವರು ಸುಭಾಶ್‌ರನ್ನು ಭಾರತದ ಗೆಲಿಲಿಯೊ ಎಂದು ಬಣ್ಣಿಸಿದ್ದಾರೆ. ೧೬೩೩ರಲ್ಲಿ ಗೆಲಿಲಿಯೊ ಬಗ್ಗೆ ವಿಚಾರಣೆಯಾದಾಗ ಅವರ ವೈಜ್ಞಾನಿಕ ಮತ್ತು ಮಾನವೀಯ ವಿಷಯಗಳ ವಿರುದ್ಧ ಧರ್ಮದ ಹೆಸರಲ್ಲಿ ಪುರೋಹಿತರ ಸಂಕುಚಿತ ವಿಚಾರಗಳು ಎದುರಾಗಿ ದುರಂತವಾಗಿ ಪರಿಣಮಿಸಿತು. ಇದೇ ರೀತಿ ರಾಜಕೀಯ ಪಕ್ಷಪಾತಿಗಳಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಭಾಶ್ ಸಿಡಿದು ನಿಂತರು. ಕೊನೆಗೆ ರಾಜಕೀಯವೇ ಮೇಲುಗೈಯಾಗಿ ಸುಭಾಶ್ ರÀನ್ನು ಆಹುತಿ ತೆಗೆದುಕೊಂಡುಬಿಟ್ಟಿತು. ಸುಭಾಶ್‌ರಿಗೆ ತಮ್ಮ ಜೀವಮಾನದಲ್ಲಿ ಮನ್ನಣೆ ಸಿಗದೆ ಹಾಡಿ ಹೊಗಳಲ್ಪಡದ ನಾಯಕ (uಟಿsuಟಿg heಡಿo)ರಾಗಿಯೇ ಉಳಿದುಬಿಟ್ಟರು. ೨೦೦೨ರಲ್ಲಿ, ಅವರ ನಿಧನದ ೨೧ ವರ್ಷಗಳ ಬಳಿಕ, ಡಾ|| ಆನಂದ್ ಕುಮಾರ್‌ರವರ ವರದಿಯ ಆಧಾರದ ಮೇಲೆ, ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆಗೆ ಜ್ಞಾನೋದಯವಾಗಿ, ಸುಭಾಶ್‌ರ ಸಂಶೋಧನೆಯನ್ನ ಅಂಗೀಕರಿಸಿ, ಅವರೇ ಭಾರತದ ಪ್ರಥಮ ಪ್ರನಾಳಶಿಶುವಿನ ಸೃಷ್ಠಿಕರ್ತರೆಂದು ಅಧಿಕೃತವಾಗಿ ಘೋಷಿಸಿತು. 

----

ಏಡಿ ಮನೋಭಾವ (Crab Mentality)

ಏಡಿಗಳ ಸಗಟು ವ್ಯಾಪಾರಿಯೊಬ್ಬ ಮುಚ್ಚಳವಿಲ್ಲದ, ತೆರೆದ ದೊಡ್ಡ ಪೀಪಾಯಿಗಳಲ್ಲಿ ಅವನ್ನು ಶೇಖರಿಸಿಟ್ಟಿದ್ದ. ‘ಜೀವಂತ ಏಡಿಗಳನ್ನು ಹೀಗೆ ತೆರೆದ ಪೀಪಾಯಿಗಳಲ್ಲಿಟ್ಟರೆ ಅವು ಮೇಲೇರಿ ತಪ್ಪಿಸಿಕೊಂಡು ಹೋಗುವುದಿಲ್ಲವೆ?’’ ಎಂದು ಜನ ಪ್ರಶ್ನಿಸಿದರಂತೆ. ಆ ವ್ಯಾಪಾರಿ, ‘ನಾನಿವುಗಳ ವರ್ತನೆಯನ್ನು ಅನೇಕ ವರ್ಷಗಳಿಂದ ಗಮನಿಸುತ್ತಿದ್ದೇನೆ. ಒಂದು ಏಡಿ ಪೀಪಾಯಿಯನ್ನು ಹತ್ತಲಾರಂಭಿಸುತ್ತಿದ್ದoತೆ ಇತರ ಏಡಿಗಳು ಅದರ ಕಾಲೆಳೆದು ಕೆಡವಿಬಿಡುತ್ತವೆ. ಆದ್ದರಿಂದ ಯಾವ ಏಡಿಯೂ ತಪ್ಪಿಸಿಕೊಂಡು ಹೋಗಲಾರದು’ ಎಂದನoತೆ! ಸುಭಾಶ್ ಇಂತಹ ವಿಷವರ್ತುಲ ದಲ್ಲಿ ಸಿಲುಕಿ ಬಲಿಪಶುಗಳಾದರೆಂದು ಆನಂದ್ ಕುಮಾರ್ ತಿಳಿಸಿದ್ದಾರೆ.

ಸುಭಾಶ್‌ರ ಕಾರ್ಯತಂತ್ರವು ಎಡ್‌ವರ್ಡ್ಸ್ರ ಕಾರ್ಯತಂತ್ರಕ್ಕಿoತ ಸರಳ ಮತ್ತು ಉತ್ತಮವಾಗಿದ್ದು, ಇಂದು ವೈದ್ಯರು ಜಗತ್ತಿನಾದ್ಯಂತ ಇವರ ಪದ್ಧತಿಯನ್ನೇ ಐವಿಎಫ್ ತಂತ್ರಗಾರಿಕೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಇದನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಬ್ರೆಜಿಲ್‌ನ ಅತಿ ದೊಡ್ಡ ನಗರವಾದ ಸಾವೊ ಪಾಲೊ (Sao Paulo)ದಲ್ಲಿ ಐವಿಎಫ್ ನ ೩೦ ವರ್ಷಗಳ ಯಶಸ್ವಿ ಪೂರೈಕೆಯ ನೆನಪಿಗಾಗಿ ಅಲ್ಲಿಯ ವೈದ್ಯಕೀಯ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಭಾಶ್‌ರವರ ಅಪ್ರತಿಮ ಕೊಡುಗೆಯನ್ನು ಮೆಚ್ಚಿ ಅವರಿಗೆ ಮರಣೋತ್ತರವಾಗಿ ಗೌರವ ಸಲ್ಲಿಸಿದೆ.     

ಭಾರತ ಸರ್ಕಾರ ಸುಭಾಶ್‌ರಿಗೆ ಅವರ ಸಂಶೋಧನೆಯನ್ನು ಪ್ರಕಟಿಸಲು ಅವಕಾಶ ಮಾಡಿಕೊಟ್ಟು, ಅವರಿಗೆ ಧನಸಹಾಯ ಒದಗಿಸಿ ಬೆನ್ನು ತಟ್ಟಿ ಉತ್ತೇಜಿಸಿದ್ದರೆ ಇವರು ಪ್ರನಾಳಶಿಶುವಿನ ಸೃಷ್ಠಿಯಲ್ಲಿ ವಿಶ್ವದಲ್ಲೇ ಮೊಟ್ಟಮೊದಲಿಗರಾಗಿ, ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದರೆಂದು ಅನೇಕ ಪಾಶ್ಚಾತ್ಯ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

3 comments:

 1. Thanks Sir for showcasing the unearthed truth in IVF science. End of the day science wins not awards.

  ReplyDelete
 2. ವಿಜ್ಞಾನಕ್ಕೆ ಸಾವಿಲ್ಲ

  ಸುಭಾಷರ ಸಂಶೋಧನೆಗೆ ಮರಣಾನಂತರವಾದರೂ ಮನ್ನಣೆ ದೊರಕಿತಲ್ಲ.

  ReplyDelete
 3. ಯಾವುದೇ ರಾಜಕೀಯ ಪಕ್ಷಕ್ಕೆ ಗುಲಾಮನಾಗದೇ ಸಿಗಬೇಕಾದ ಮನ್ನಣೆಯಿಂದ ವಂಚಿತರಾದ ಸುಭಾಷ್ ಅವರದ್ದು ಗೆಲಿಲಿಯೋ ತರಹ ದುರಂತಮಯ ಬದುಕು.ಅವರ ಮರಣಾನಂತರವಾದರೂ ಮನ್ನಣೆ ಲಭಿಸಿದ್ದು ಸಂತೋಷ. ಅಭಿನಂದನೆಗಳು ಸರ್.

  ReplyDelete