ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, November 4, 2022

"ಹೆತ್ತworryಗೆ ಹೆಗ್ಗಣ ಮುದ್ದು"

"ಹೆತ್ತworryಗೆ ಹೆಗ್ಗಣ ಮುದ್ದು"

ಡಾ. ಟಿ.ಎ. ಬಾಲಕೃಷ್ಣ ಅಡಿಗ 





ಹೆತ್ತವರ worry ಮಾನವರಿಗಷ್ಟೇ ಅಲ್ಲ ಸರ್ವ ಜೀವಜಾತರಿಗೂ ಇದ್ದದ್ದೇ. ಪ್ರಾಣಿಗಳ ಬದುಕಿನ ಸಾರ್ಥಕತೆ ಇರುವುದೇ ಸಂತಾನ ವೃದ್ಧಿಯಲ್ಲಿ. ಅವುಗಳ ಶಕ್ತಿಯ ಬಳಕೆ ಸಂತಾನದ ರಕ್ಷಣೆಗೇ ಮೀಸಲು. ಪ್ರಾಣಿಗಳ ವರಿಯನ್ನು  ಸೋದಾಹರಣವಾಗಿ ವಿವರಿಸಿದ್ದಾರೆ. ಪ್ರಧಾನ ಸಂಪಾದಕರಾದ ಡಾ.ಟಿ.ಎ ಬಾಲಕೃಷ್ಣ ಅಡಿಗರು


     ಅರೆ, ಇದೇನು ? ಹೆತ್ತವರಿಗೆ ಹೆಗ್ಗಣ ಮುದ್ದು' ಅನ್ನೋ ಗಾದೆ ಕೇಳಿದ್ವಿ. ಹೆತ್ತwoorryಗೆ ಅಂದ್ರಲ್ಲ... ಅಂತ ಕೇಳಿದ್ದೀರಾ ....? ಹೆತ್ತ ಮೇಲೆ ಮರಿಗಳನ್ನು ಸರಿಯಾಗಿ ನೋಡಿಕೊಳ್ಳೋದು ಪೋಷಕರಿಗೆ ಒಂದು ಸಮಸ್ಯೆಯೇ ಅಲ್ಲವೆ ?. ತಮ್ಮ ಮರಿಗಳ ಪಾಲನೆ ಹಾಗೂ ಪೋಷಣೆಯ ಈ ಸಮಸ್ಯೆ ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ ಪ್ರಪಂಚದ ಅನೇಕ ವಂಶಗಳಲ್ಲಿ ತಮ್ಮ ಸಂತಾನ ಸಂರಕ್ಷಣೆಯ ಜವಾಬ್ದಾರಿಯನ್ನು ಪೋಷಕ ಜೀವಿಗಳು ಸಮಯೋಚಿತವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸುವುದನ್ನು ನಾವು ಗಮನಿಸಬಹುದು. ಇದರಲ್ಲಿ ಪೋಷಕ ಜೀವಿಗಳು ತೋರಿಸುವ ಕಾಳಜಿ, ಅದಕ್ಕಾಗಿ ಮಾಡುವ ಪ್ರಯತ್ನಗಳು ಹಾಗೂ ತ್ಯಾಗ ನಿಜಕ್ಕೂ ಆಚ್ಚರಿ ಮೂಡಿಸುವಂತದು. ಪ್ರಾಣಿಗಳಲ್ಲಿ ಮರಿಗಳ ಪಾಲನೆ ಮತ್ತು ಪೋಷಣೆಯ ಅವಶ್ಯಕತೆಯಾದರೂ ಏನು ? ಪ್ರಾಣಿಗಳು ತಾವು ವಾಸಿಸುವ ಪರಿಸರದಲ್ಲಿನ ಪರಿಸ್ಥಿತಿಗಳ ತೀವ್ರತೆಯಿಂದ ಮರಿಗಳನ್ನು ಕಾಪಾಡುವುದು, ಬೆಳವಣಿಗೆಗೆ ಅವಶ್ಯವಾದ ಆಹಾರವನ್ನು ಪೂರೈಸುವುದು ಹಾಗೂ ಭಕ್ಷಕ ಪ್ರಾಣಿಗಳಿಂದ ಮರಿಗಳನ್ನು ರಕ್ಷಿಸುವುದು ಇದರ ಮೂಲ ಉದ್ದೇಶ.
ತಮ್ಮ ಜೀವತಾವಧಿಯಲ್ಲಿ ಒಂದೇ ಒಂದು ಬಾರಿ ಸಂತಾನೋತ್ಪತ್ತಿ ಮಾಡುವ ಪ್ರಾಣಿಗಳು ಮರಿಗಳ ಪಾಲನೆ ಮತ್ತು ಪೋಷಣೆಗೆ ಹೆಚ್ಚು ಸಮಯ ಹಾಗೂ ಶಕ್ತಿಯನ್ನು ವ್ಯಯಿಸುತ್ತವೆ. ಅದರೆ, ಹಲವು ಬಾರಿ ಸಂತಾನೋತ್ಪತ್ತಿ ಮಾಡುವ ಪ್ರಾಣಿಗಳು ಅಧಿಕ ಸಂಖ್ಯೆಯ ಮೊಟ್ಟೆಗಳನ್ನು ಉತ್ಪತ್ತಿ ಮಾಡುವ ಕ್ರಿಯೆಗೇ ಹೆಚ್ಚಿನ ತಮ್ಮ ಶಕ್ತಿಯನ್ನು ವ್ಯಯಿಸುತ್ತವೆ. ಮರಿಗಳ ಉಳಿವಿನ ಪ್ರಶ್ನೆಯನ್ನು ಪ್ರಕೃತಿಗೇ ಬಿಟ್ಟು ಬಿಡುತ್ತವೆ.

ಅಪ್ಪನೋ ?, ಅಮ್ಮನೋ?

ಮರಿಗಳ ಬದುಕುಳಿವು ಇಲ್ಲಿ ಪ್ರಮುಖ ಪ್ರಶ್ನೆ. ಈ ನಿಟ್ಟಿನಲ್ಲಿ ತಂದೆ, ತಾಯಿ, ಎರಡೂ ಜೀವಿಗಳು ಶ್ರಮ ಹಾಕುವುದು ಬಹುತೇಕ ಸಾಮಾನ್ಯ. ಆದರೆ, ಕೆಲವೊಮ್ಮೆ ಕೇವಲ ತಂದೆ ಅಥವಾ ತಾಯಿ ಜೀವಿ ಈ ಜವಾಬ್ದಾರಿಯನ್ನು ಹೊರುವುದನ್ನು ಗಮನಿಸಬಹುದು. ಹೆಚ್ಚಿನ ಉದಾಹರಣೆಗಳಲ್ಲಿ, ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುವ ದೃಷ್ಟಿಯಿಂದ ತಾಯಿ ಜೀವಿಯೇ ಈ ಸಂದರ್ಭದಲ್ಲಿ ಅಧಿಕ ಶ್ರಮ ಹಾಕುವುದನ್ನು ನೋಡಬಹುದು.

ಪ್ರಾಣಿ ಪ್ರಪಂಚದಲ್ಲಿ ಶೇ.95ರಷ್ಟು ಪ್ರಾಣಿಗಳು ಬೆನ್ನು ಹುರಿಯಿಲ್ಲದ ಅಕಶೇರುಕಗಳು. ಉಳಿದುವು ಬೆನ್ನು ಹುರಿಯಿರುವ ಕಶೇರುಕಗಳು. ಇಷ್ಟು ಬೃಹತ್‌ ಸಂಖ್ಯೆಯಲ್ಲಿದ್ದರೂ, ಅಕಶೇರುಕ ಪ್ರಾಣಿಗಳಲ್ಲಿ ಮರಿಗಳ ಪಾಲನೆ ಹಾಗೂ ಪೋಷಣೆಯ ಜವಾಬ್ದಾರಿಹೊರುವ ಪ್ರಭೇದಗಳ ಸಂಖ್ಯೆ ಬಹಳ ವಿರಳ. ಅದೇ ಕಶೇರುಕ ಪ್ರಾಣಿಗಳ ಎಲ್ಲ ಐದು ವರ್ಗಗಳಲ್ಲಿಯೂ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಕಾಣ ಸಿಗುತ್ತವೆ.

ಅಕಶೇರುಕಗಳಲ್ಲಿ, ಸಂಧಿಪದಿಗಳಾದ ಕೆಲವು ಕೀಟಗಳಲ್ಲಿ, ಏಡಿಗಳಲ್ಲಿ ಮತ್ತು ಜೇಡಗಳಲ್ಲಿ ಹಾಗೂ ಮೃದ್ವಂಗಿಗಳಾದ ಕೆಲ ಬಗೆಯ ಬಸವನ ಹುಳುಗಳಲ್ಲಿ ಮತ್ತು ಆಕ್ಟೋಪಸ್‌ ಗಳಲ್ಲಿ ಮರಿಗಳ ಪಾಲನೆ, ಪೋಷಣೆಗೆ ಸಂಬಂಧಿಸಿದಂತೆ ಕುತೂಹಲಕರವಾದ ಹಲವು ಸಂಗತಿಗಳನ್ನು ಗಮನಿಸಬಹುದು.

ಖಂಡವಿದೆಕೋ ಮಾಂಸವಿದೆಕೋ

ತಮ್ಮ ಮೊಟ್ಟೆಗಳು ಮರಿಗಳಾದ ಮೇಲೆ ಅವು ಬೆಳೆದು ಪ್ರೌಢಾವಸ್ಥೆ ತಲುಪಿ ಸ್ವತಂತ್ರವಾಗುವರೆಗೆ ಅವುಗಳಿಗೆ ಅಹಾರವನ್ನೊದಗಿಸುವುದು ಇಂಥ ಪೋಷಕ ಜೀವಿಗಳಿಗೆ ಒಂದು ಸವಾಲೇ ಸರಿ. ಇದಕ್ಕಾಗಿ ಪೋಷಕ ಜೀವಿಗಳು ಹಲವು ಬಗೆಯ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತವೆ.

ನ್ಯೂಸೆಲ್ಲಾ (Nucella) ಜಾತಿಗೆ ಸೇರಿದ ಸಮುದ್ರವಾಸಿ ಬಸವನಹುಳುಗಳಲ್ಲಿ ತಾಯಿಜೀವಿಯು ಫಲವಂತ ಮೊಟ್ಟೆಗಳ ಜೊತೆಗೆ, ಭ್ರೂಣವಿಲ್ಲದ ಪೌಷ್ಟಿಕ ಮೊಟ್ಟೆಗಳನ್ನೂ(trophic eggs) ಇಡುತ್ತದೆ.ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಇವೇ ಆಹಾರದ ಮೊದಲ ಆಕರ ! ಇದರಲ್ಲಿ ಇನ್ನೊಂದು ಪ್ರಯೋಜನವೂ ಇದೆ. ಮರಿಗಳಲ್ಲಿ ಪರಸ್ಪರ ಸ್ವಜಾತಿಭಕ್ಷಣೆ (cannibalism)) ಆಗುವುದನ್ನು ಇದು ತಪ್ಪಿಸುತ್ತದೆ.



(ಚಿತ್ರ 1) ನ್ಯೂಸೆಲ್ಲಸ್ ನ ಪೌಷ್ಟಿಕ ಮೊಟ್ಟೆಗಳು

ಟಾಕ್ಸಿಯಸ್‌( Toxeus ) ಜಾತಿಗೆ ಸೇರಿದ ಹಾರುವ ಜೇಡಗಳಲ್ಲಿ ತಾಯಿ ಜೀವಿಯು ತನ್ನ ದೇಹದಿಂದ ಹಾಲಿನಂಥ ಪೋಷಕಾಂಶಯುಕ್ತ ದ್ರವವೊಂದನ್ನು ಸ್ರವಿಸುತ್ತದೆ. ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ಪ್ರೋಟೀನ್‌ ಅಂಶ ಇರುವ ಈ ದ್ರವವನ್ನು ಸುಮಾರು 30 ರಿಂದ 40 ದಿನಗಳ ಕಾಲ ಮರಿಗಳು ಇದನ್ನು ಸೇವಿಸಿ ಬೆಳೆದು ನಂತರ ಸ್ವತಂತ್ರವಾಗುತ್ತವೆ. ಯಾವುದೇ ಕಾರಣಕ್ಕೆ ಈ ಸ್ರವಿಕೆ ನಿಂತು ಹೋದರೆ ಮರಿಗಳ ಬೆಳವಣಿಗೆ ಕುಂಠಿತವಾಗುತ್ತದೆ.

              
(ಚಿತ್ರ 2) ಟಾಕ್ಸಿಯಸ್- ಹಾರುವ ಜೇಡ

ಒಂದು ಬಗೆಯ ನಿದ್ರಾರೋಗ ಉಂಟುಮಾಡುವ ಟ್ರೈಪಾನೊಸೋಮ(Trypanosoma) ಎಂಬ ಏಕಕೋಶ ಜೀವಿಯ ಸೋಂಕಿಗೆ ಕಾರಣವಾಗುವ ಟ್ಸೀ ಟ್ಸ್ಲೀ ನೊಣ ಗ್ಲಾಸೀನಾ (Glossina-tse tse fly) ದಲ್ಲಿ ಪ್ರೌಢ ಹೆಣ್ಣು ನೊಣ ಒಂದು ಬಾರಿಗೆ ಒಂದೇ ಮೊಟ್ಟೆ ಉತ್ಪತ್ತಿ ಮಾಡುತ್ತದೆ. ಪ್ರತಿ ಹತ್ತು ದಿನಕ್ಕೆ ಒಂದರಂತೆ ತನ್ನ ಉಳಿದ ಜೀವಿತಾಧಿಯಲ್ಲಿ ಮೊಟ್ಟೆ ಇಡುತ್ತಾ ಹೋಗುತ್ತದೆ. ಇದಕ್ಕಾಗಿ, ಹೆಣ್ಣು ನೊಣವನ್ನು 'ಕೀಟ ಪ್ರಪಂಚದ ಮಹಾಮಾತೆ' ಎಂದು ಕರೆಯಲಾಗುತ್ತದೆ । ಮೊಟ್ಟೆಯು ತಾಯಿಯ ಗರ್ಭಾಶಯದಲ್ಲೇ ಉಳಿದು, ಅಲ್ಲಿ ಸ್ರವಿಕೆಯಾಗುವ ಹಾಲಿನಂಥ ದ್ರವವನ್ನು ಸೇವಿಸುತ್ತಾ ಬೆಳೆಯುತ್ತದೆ. ಮರಿ ಹೊರಬಂದಾಗ, ಅದರ ಗಾತ್ರ ತಾಯಿಯಷ್ಟೇ ಅಥವಾ ತುಸು ಹೆಚ್ಚು ಇರುತ್ತದೆ । ಈ ಒಂದು ಪ್ರಕ್ರಿಯೆಯಲ್ಲಿ ತಾಯಿ ನೊಣ ವಹಿಸುವ ಶ್ರಮ ಹಾಗೂ ವ್ಯಯಿಸುವ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.


(ಚಿತ್ರ 3) ಟ್ಸಿ ಟ್ಸಿ ನೊಣ ಮರಿಯಿಡುತ್ತಿರುವುದು

ತ್ಯಾಗಮಯಿ ತಾಯಿ

ತಾಯಿ ಪ್ರಾಣಿಯ ತ್ಯಾಗದ ಅತ್ಯಂತ ಕುತೂಹಲಕಾರಿ ಉದಾಹರಣೆಯನ್ನು ವೆಲ್ವೆಟ್‌ ಜೇಡಗಳಲ್ಲಿ ನೋಡಬಹುದು. ಇಲ್ಲಿ ತಾನಿಟ್ಟ ಮೊಟ್ಟೆಗಳು ಮರಿಯಾಗುತ್ತಿದ್ದಂತೆ, ತಾನು ಸೇವಿಸಿ,ಜೀರ್ಣಿಸಿದ ಆಹಾರವನ್ನು ಹೊರಹಾಕಿ ಮರಿಗಳಿಗೆ ಒದಗಿಸುತ್ತದೆ. ಮರಿಗಳು ಸ್ವಲ್ಪ ಬೆಳೆದ ಮೇಲೆ, ತಾಯಿ ಜೇಡವು ತನ್ನ ದೇಹದ ಆಂಗಗಳನ್ನು ದ್ರವ ರೂಪಕ್ಕೆ ಪರಿವರ್ತಿಸಿ, ತಾನೇ ಅವುಗಳಿಗೆ ಆಹಾರವಾಗುತ್ತದೆ । ತಮ್ಮ ಸತ್ತ ತಾಯಿಯ ದೇಹವನ್ನು ಪೂರ್ತಿ ಭಕ್ಷಿಸುವವರೆಗೆ ಮರಿಗಳು ಗೂಡಿನಿಂದ ಹೊರಬರುವುದೇ ಇಲ್ಲ. ತನ್ನ ಮರಿಗಳು ಬಲಿಷ್ಠವಾಗಿ ಬೆಳೆದು ಬದುಕಲೆಂದು ತಾಯಿ ಮಾಡುವ ತ್ಯಾಗ ಇದು !


(ಚಿತ್ರ 4) ವೆಲ್ವೆಟ್ ಜೇಡ
ಹಲವು ಪ್ರಭೇದದ ಆಕ್ಟೋಪಸ್‌ ಗಳಲ್ಲಿ ಮೊಟ್ಟೆಗಳು ಮರಿಯಾಗಲು ಕೆಲವು ತಿಂಗಳು ಇಲ್ಲವೇ ವರ್ಷವೇ ಬೇಕಾಗಬಹುದು. ಈ ಅವಧಿಯಲ್ಲಿ ತಾಯಿ ಆಕ್ಟೋಪಸ್‌ ಬೇಟೆಗೂ ಹೋಗದೆ ಕಾವಲು ಕಾಯುತ್ತಾ ಇರುತ್ತದೆ. ಜೀವಿತಾವಧಿಯಲ್ಲಿ ಒಂದೇ ಬಾರಿ ಮೊಟ್ಟೆಯಿಡುವಲ್ಲಿ ತನ್ನೆಲ್ಲಾ ಶಕ್ತಿಯನ್ನು ವ್ಯಯಿಸುತ್ತದೆ.
(ಚಿತ್ರ 5) ಆಕ್ಟೋಪಸ್ ಮೊಟ್ಟೆಗಳು

ತಂದೆಯ ತ್ಯಾಗ

ತಾಯಿ ಜೀವಿಯು ತನ್ನ ಜೀವಿತಾವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿರುವ ಸಂದರ್ಭಗಳಲ್ಲಿ ತಂದೆ ಜೀವಿಯು ಮರಿಗಳ ಪಾಲನೆ, ಪೋಷಣೆಯ ಜವಾಬ್ದಾರಿಯನ್ನು ಹೊರಬೇಕಾಗಿ ಬರುತ್ತದೆ. ಇದರಲ್ಲಿ, ಇನ್ನೊಂದು ನಿರ್ದಿಷ್ಟ ಪ್ರಯೋಜನವೂ ಇದೆ. ತನ್ನ ಮರಿಗಳ ಪಾಲನೆ ಮಾಡುವ ಗಂಡು ಜೀವಿಗಳು ಪ್ರಭೇದದ ಇತರ ಹೆಣ್ಣು ಜೀವಿಗಳಿಗೆ ಇಷ್ಟವಾಗುತ್ತವೆ. ಅಂಥ ಒಳ್ಳೆ ತಂದೆ ಸಿಗುವುದು ಕಷ್ಟ ಅಲ್ಲವೇ?. ಆ ಗಂಡಿನೊಂದಿಗೆ ಇತರ ಹೆಣ್ಣು ಜೀವಿಗಳು ಕೂಡಲು ಬಯಸುತ್ತವೆ. ಅಷ್ಟೇ ಅಲ್ಲ, ತಮ್ಮ ಮರಿಗಳ ಪಾಲನೆ, ಪೋಷಣೆಯ ಜವಾಬ್ದಾರಿಯನ್ನೂ ಆ ಗಂಡಿಗೇ ವಹಿಸುತ್ತವೆ । ಜಿರಳೆಗಳನ್ನು ಹೋಲುವ ಜಲತಿಗಣೆಗಳಲ್ಲಿ (water bugs) ತಂದೆ ಕೀಟವು ತನ್ನ ಸಂಗಾತಿ ಇಟ್ಟ ನೂರಕ್ಕೂ ಹೆಚ್ಚು ಮೊಟ್ಟೆಗಳನ್ನು ತನ್ನ ಬೆನ್ನ ಮೇಲಿರಿಸಿಕೊಂಡೇ ತಿರುಗಾಡುತ್ತದೆ. ಇದರಿಂದಾಗಿ, ಅದರ ಈಜುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆಹಾರ ಗಳಿಸುವ ಪ್ರಕ್ರಿಯೆಯೂ ಕುಂಠಿತವಾಗುತ್ತದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ತಂದೆ ಕೀಟಕ್ಕೆ ಭಕ್ಷಕ ಪ್ರಾಣಿಗಳಿಂದ ಮೊಟ್ಟೆಗಳಿಗೆ ರಕ್ಷಣೆ ಕೊಡುವುದೇ ಮುಖ್ಯವಾಗುತ್ತದೆ. ಜೊತೆಗೆ, ತನ್ನ ಹಿಂಗಾಲುಗಳಿಂದ ಮೊಟ್ಟೆಗಳನ್ನು ಆಗಾಗ ಸವರುತ್ತಾ ಶುಭ್ರಗೊಳಿಸುತ್ತದೆ. ಈ ಮೂಲಕ ಮೊಟ್ಟೆಗಳಿಗೆ ಸಾಕಷ್ಟು ಆಕ್ಸಿಜನ್‌ ಒದಗುವಂತೆ ಹಾಗೂ ಶಿಲೀಂದ್ರ ಮುಂತಾದ ಸೂಕ್ಷ್ಮಜೀವಿಗಳ ಸೋಂಕು ತಗುಲದಂತೆ ಎಚ್ಚರ ವಹಿಸುತ್ತದೆ. ತಂದೆಯ ಬೆನ್ನ ಮೇಲಿನ ಸವಾರಿಯಲ್ಲಿ ಉಳಿದುಕೊಂಡ ಮೊಟ್ಟೆಗಳು ಮರಿಗಳಾಗುತ್ತವೆ. ಜಾರಿಬಿದ್ದ ಮೊಟ್ಟೆಗಳು ನಾಶ ಹೊಂದುತ್ತವೆ.

(ಚಿತ್ರ 6) ಗಂಡು ಜಲತಿಗಣೆಯ ಮೇಲೆ ಮೊಟ್ಟೆಗಳ ಸವಾರಿ

ಶಿಶು ಪಾಲನೆ ಕೋಣೆಗಳು ಕೆಲವು ಅಕಶೇರುಕಗಳಲ್ಲಿ ಮರಿಗಳಿಗಾಗಿ ಗೂಡು, ಬಿಲ ಅಥವಾ ಶಿಶು ಪಾಲನೆ ಕೋಣೆಗಳನ್ನು(nurseries ) ರಚಿಸುವ ವ್ಯವಸ್ಥೆ ಇದೆ. ಬ್ರೊಮೇಲಿಯಾ(Bromelia) ಎಂಬ ಗಿಡದಲ್ಲಿ ಬುಡದ ಎಲೆಗಳು ಒಂದನ್ನೊಂದು ಆವರಿಸಿ, ಸಣ್ಣ ಕುಳಿಗಳನ್ನು ನಿರ್ಮಿಸುತ್ತವೆ. "ಈ ಕುಳಿಗಳಲ್ಲಿ ಮೆಟೊಪಾಲಿಯಸ್‌(Metopaulias) ಜಾತಿಯ ಏಡಿ
ಸುಮಾರು 80ರಿಂದ 90 ಮೊಟ್ಟೆಗಳನ್ನು ಇಡುತ್ತದೆ. ಈ ಕುಳಿಗಳು ಮರಿಗಳಿಗೆ ಬೆಳೆಯಲು ಪ್ರಶಸ್ತವಾದ ತಾಣ. ತಾಯಿ ಏಡಿ ಸಣ್ಣ, ಸಣ್ಣ ಕೀಟಗಳನ್ನು ಹಿಡಿದು ತಂದು ಮರಿಗಳಿಗೆ ಆಹಾರವನ್ನಾಗಿ ಒದಗಿಸುತ್ತದೆ. ಅಲ್ಲದೆ, ಈ ಕುಳಿಗಳಲ್ಲಿ ಸೇರುವ ಕಳೆಗಿಡಗಳನ್ನು ತೆಗೆದುಹಾಕಿ ನೀರನ್ನು ಶುದ್ಧವಾಗಿಡುತ್ತದೆ. ಮರಿಗಳಿಗೆ ಅವಶ್ಯವಾದಷ್ಟು ಆಕ್ಸಿಜನ್‌ ಒದಗಿಸಲು ಈ ಕ್ರಿಯೆ ನೆರವಾಗುತ್ತದೆ. ಜೊತೆಗೆ, ಮೃದ್ವಂಗಿಗಳ ಸಣ್ಣ ಶಂಖುಗಳನ್ನು ತಂದು ಕುಳಿಗಳಲ್ಲಿ ಹಾಕುತ್ತವೆ. ಮರಿಗಳ ಬೆಳವಣಿಗೆಗೆ ಅವಶ್ಯವಾದ ಕಾಲ್ದಿಯಂ ಅನ್ನು ಇವು ನೀರಿಗೆ ಒದಗಿಸುತ್ತವೆ.

(ಚಿತ್ರ 7) ಮೆಟೋಪಾಲಿಯಸ್ ಏಡಿ

ಸೆಗಣಿ ಕೀಟಗಳು(dung beetles) ಗೂಡು ಕಟ್ಟಿ ಅದರೊಳಗೆ ಮೊಟ್ಟೆಗಳನ್ನು ಇಡುತ್ತವೆ. ಹೊರಬಂದ ಮರಿಗಳಿಗೆ ಸೆಗಣಿಯೇ ಅಹಾರ | ಗಂಡು ಮತ್ತು ಹೆಣ್ಣು ಕೀಟಗಳು ಸೇರಿ ತಾಜಾ ಸೆಗಣಿಯನ್ನು ಹುಡುಕಿ, ಅದನ್ನು ಉಂಡೆ ಮಾಡಿ ಗೂಡಿನ ಒಳಗೆ ತಳ್ಳುತ್ತವೆ. ಅದನ್ನು ಅಹಾರವಾಗಿ ಸೇವಿಸುತ್ತಾ ಮರಿಗಳು ಬೆಳೆಯುತ್ತವೆ |
(ಚಿತ್ರ 8) ಸೆಗಣಿ ಕೀಟಗಳು
ಅಕಶೇರುಕ ಪ್ರಾಣಿಗಳ ಹಲವು ಉದಾಹರಣೆಗಳಲ್ಲಿ ಪೋಷಕ ಜೀವಿಗಳು ತಮ್ಮ ಮರಿಗಳ ಉಳಿವಿಗಾಗಿ ಮಾಡುವ ಪ್ರಯತ್ನಗಳು ಹಾಗೂ ತ್ಯಾಗಗಳನ್ನು ನೋಡಿದಿರಲ್ಲವೇ ? ಎಷ್ಟಾದರೂ 'ಹೆತ್ತworryಗೆ ಹೆಗ್ಗಣ ಮುದ್ದು', ಅಲ್ಲವೇ?

9 comments:

  1. Great article Sir. It will help researchers even better if the original references were provided for the study discussed.

    ReplyDelete
  2. ಮಾತೃ ಹೃದಯಿ ಎಂಬುದು ಕೆಲವೇ ಜೀವಿಗಳಿಗೆ ಸೀಮಿತ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದಿರಿ.
    ಧನ್ಯವಾದಗಳು ಸರ್

    ReplyDelete
  3. Wow very interesting and informative article sir. 🙏🙏

    ReplyDelete
  4. ಉಪಯುಕ್ತವಾದ ಮಾಹಿತಿ. ಧನ್ಯವಾದಗಳು ಸರ್

    ReplyDelete
  5. Its shows Incredible Parental Care among these arthropods

    ReplyDelete
  6. ತುಂಬಾ ಉಪಯುಕ್ತವಾದ ಮತ್ತು ಕುತೂಹಲಕಾರಿ ಮಾಹಿತಿಯನ್ನು ಒಳಗೊಂಡಿರುವ ಲೇಖನ. ತಾಯಿಯ ತ್ಯಾಗದ ಜೊತೆಗೆ ತಂದೆಯ ತ್ಯಾಗ ಕೂಡಾ ಕಡಿಮೆಯೇನಿಲ್ಲ. ಧನ್ಯವಾದಗಳು.

    ReplyDelete
  7. ಓದುಗರ ಕುತೂಹಲವನ್ನು ಹೆಚ್ಚಿಸುವ ಲೇಖನವಿದು ಸರ್ . ಜೀವವೈವಿಧ್ಯತೆಯ ವಿಕಾಸದಲ್ಲಿ ಸಂತಾನೋತ್ಪತ್ತಿ ಮತ್ತು ಪೋಷಕರ ಆರೈಕೆಯು ನಿಸರ್ಗದ ಅದ್ಭುತ ಪ್ರಕ್ರಿಯೆಯಾಗಿದೆ. 👏👏👌👌🙏🙏

    ReplyDelete
  8. ಕುತೂಹಲಕರ ಮಾಹಿತಿ.ಧನ್ಯವಾದಗಳು

    ReplyDelete
  9. ಮಾಹಿತಿ ಸಂಗ್ರಹ : ಓದುಗರಿಗೆ ಆಸಕ್ತಿದಾಯಕ ವಿಷಯ

    ReplyDelete