ಸವಿಜ್ಞಾನ ಜನವರಿ - 2023 ರ ಲೇಖನಗಳು
Ø ಸಂಪಾದಕರ ಡೈರಿಯಿಂದ .....
Ø “ನಶಿಸುವ ಹಾದಿಯಲ್ಲಿ ವೈ ವರ್ಣತಂತು…” - ಡಾ. ಟಿ.ಎ. ಬಾಲಕೃಷ್ಣ ಅಡಿಗ.
ಸವಿಜ್ಞಾನ ಜನವರಿ - 2023 ರ ಲೇಖನಗಳು
Ø “ನಶಿಸುವ ಹಾದಿಯಲ್ಲಿ ವೈ ವರ್ಣತಂತು…” - ಡಾ. ಟಿ.ಎ. ಬಾಲಕೃಷ್ಣ ಅಡಿಗ.
ಸಂಪಾದಕರ ಡೈರಿಯಿಂದ .....
ರಾಮಚಂದ್ರಭಟ್ ಬಿ.ಜಿ.
ಸಂಪಾದಕರು
( ಪ್ರಧಾನ ಸಂಪಾದಕರ ಪರವಾಗಿ )
ನಶಿಸುವ ಹಾದಿಯಲ್ಲಿ Y ವರ್ಣತಂತು
ಮಾನವ ಜನಾಂಗದ ವಿನಾಶಕ್ಕೆ ದಾರಿಯೇ ?
ಬಹುತೇಕ ಉನ್ನತ ಜೀವಿಗಳಲ್ಲಿ, ಅದರಲ್ಲಿಯೂ ಏಕಲಿಂಗಿ ಪ್ರಾಣಿಗಳಲ್ಲಿ ಗಂಡು
ಮತ್ತು ಹೆಣ್ಣು ಜೀವಿಗಳು ಭಿನ್ನವಾಗಿದ್ದು, ನಿರ್ದಿಷ್ಟ ಗುಣ ಲಕ್ಷಣಗಳಲ್ಲಿ ವ್ಯತ್ಯಾಸಗಳನ್ನು ಹೊಂದಿರುತ್ತವೆ.
ಹೀಗಾಗಿ, ಹೆಣ್ಣು ಮತ್ತು ಗಂಡು ಜೀವಿಗಳನ್ನು ಅವುಗಳ ಬಾಹ್ಯ ಲಕ್ಷಣಗಳಿಂದಲೇ ಗುರುತಿಸಬಹುದು. ಈ ನಿರ್ದಿಷ್ಟ
ವ್ಯತ್ಯಾಸಗಳಿಗೆ ಕಾರಣವಾಗುವ ವಂಶವಾಹಿಗಳು (ಜೀನ್) ಆ ಜೀವಿಗಳ ಒಟ್ಟು ವಂಶವಾಹಿಗಳ ಸಮೂಹವಾದ ಜೀನೋಮ್ (genome) ನ ಒಂದು ಜೊತೆ ವರ್ಣತಂತುಗಳಲ್ಲಿ
ಮಾತ್ರ ಕಂಡುಬರುತ್ತವೆ. ಈ ವರ್ಣತಂತುಗಳನ್ನು ಲಿಂಗ
ವರ್ಣತಂತುಗಳು (sex chromosomes) ಎಂದು ಕರೆಯಲಾಗುತ್ತದೆ.
ಉಳಿದ ಎಲ್ಲ ಜೋಡಿ ವರ್ಣತಂತುಗಳನ್ನು ಕಾಯ ವರ್ಣತಂತುಗಳು (somatic chromosomes) ಎಂದು ಕರೆಯಲಾಗುತ್ತದೆ.
ಸ್ತನಿ ಪ್ರಾಣಿಗಳಲ್ಲಿ ಯಗ್ಮಜವು (zygote) ಗಂಡಾಗಿ ಬೆಳೆಯುವುದೇ ಅಥವಾ
ಹೆಣ್ಣಾಗಿ ಬೆಳೆಯುವುದೇ ಎಂಬುದನ್ನು ನಿರ್ಣಯಿಸುವುದು ಅದರಲ್ಲಿರುವ ಜೋಡಿ ಲಿಂಗ ವರ್ಣತಂತುಗಳ ಸಂಯೋಜನೆ.
ಯುಗ್ಮಜದಲ್ಲಿ X ಮತ್ತು X ಎಂಬ ಎರಡು ಲಿಂಗ ವರ್ಣತಂತುಗಳಿದ್ದಲ್ಲಿ, ಅದು
ಹೆಣ್ಣು ಜೀವಿಯಾಗಿ ಬೆಳೆಯುತ್ತದೆ. ಬದಲಿಗೆ, X
ಮತ್ತು Y ಎಂಬ ಎರಡು ಲಿಂಗ ವರ್ಣತಂತುಗಳಿದ್ದರೆ,
ಆ ಯಗ್ಮಜವು ಗಂಡು ಜೀವಿಯಾಗಿ ಬೆಳೆಯುತ್ತದೆ. ಇದು ಲಿಂಗ ನಿರ್ಣಯದಲ್ಲಿ ಈ ವರ್ಣತಂತುಗಳ ಪಾತ್ರ. ಈ
ರೀತಿಯ ಲಿಂಗ ನಿರ್ಣಯವನ್ನು XX - XY ವಿಧಾನದ ಲಿಂಗ ನಿರ್ಣಯ ಎಂದು ಕರೆಯಲಾಗುತ್ತದೆ.
ಮಾನವರಲ್ಲಿಯೂ ಇದೇ ರೀತಿಯ ಲಿಂಗ ನಿರ್ಣಯ ಪ್ರಕ್ರಿಯೆ ನಡೆಯುತ್ತದೆ.
ಚಿತ್ರ 1. XX - XY ವಿಧಾನದ ಲಿಂಗ ನಿರ್ಣಯ
ಲಿಂಗ ನಿರ್ಣಯದಲ್ಲಿ Y ವರ್ಣತಂತುವಿನ
ಪಾತ್ರವೇನು?
ಮಾನವರಲ್ಲಿ X ವರ್ಣತಂತುವಿಗಿಂತ Y ವರ್ಣತಂತು ಗಾತ್ರದಲ್ಲಿ ಚಿಕ್ಕದಿದೆ.
ಆಷ್ಟೇ ಅಲ್ಲ, ಒಟ್ಟು ಡಿ ಎನ್ ಎ ಸಂಯೋಜನೆಯಲ್ಲಿಯೂ ಭಿನ್ನವಾಗಿದೆ. X ವರ್ಣತಂತುವಿನಲ್ಲಿ ಸುಮಾರು
900 ಗುರುತಿಸಲಾದ ವಂಶವಾಹಿಗಳಿದ್ದರೆ, Y ವರ್ಣತಂತುವಿನಲ್ಲಿ ಕೇವಲ 55 ವಂಶವಾಹಿಗಳಿವೆ
! ಜೊತೆಗೆ, ಯಾವುದೇ ಆನುವಂಶೀಯ ಸಂಕೇತಗಳನ್ನು ಹೊಂದಿಲ್ಲದ, ಪುನಾರವರ್ತನೆಯಾಗುವ ಅನುಕ್ರಮಣಿಕೆ ಹೊಂದಿರುವ
ಡಿ.ಎನ್.ಎ. ಇದೆ. ಈ 55 ವಂಶವಾಹಿಗಳಲ್ಲಿ ಭ್ರೂಣದಲ್ಲಿ ಗಂಡು ಲಕ್ಷಣಗಳು ಬೆಳೆಯಲು ಕಾರಣವಾಗುವ ಮುಖ್ಯ ವಂಶವಾಹಿಯೂ
ಇದೆ. ಗರ್ಭಧಾರಣೆಯಾದ ಸುಮಾರು 12 ವಾರಗಳ ನಂತರ ಈ ಮುಖ್ಯ ವಂಶವಾಹಿಯು ವೃಷಣಗಳ ಬೆಳವಣಿಗೆಗೆ ಪೂರಕವಾಗಿರುವ ಇತರ ವಂಶವಾಹಿಗಳನ್ನು
ಪ್ರೇರೇಪಿಸುತ್ತದೆ. ಭ್ರೂಣದಲ್ಲಿ ಬೆಳೆದ ವೃಷಣವು ಟೆಸ್ಟೋಸ್ಟೀರೋನ್
ಮತ್ತಿತರ ಪೂರಕ ಹಾರ್ಮೋನುಗಳನ್ನು ಸ್ರವಿಸುವ ಮೂಲಕ ಭ್ರೂಣವು ಪೂರ್ಣ ಪ್ರಮಾಣದ ಗಂಡು ಶಿಶುವಾಗಿ ಬೆಳೆಯಲು
ಅನುವು ಮಾಡಿಕೊಡುತ್ತದೆ.
Y ವರ್ಣತಂತುವಿನಲ್ಲಿರುವ ಈ ಮುಖ್ಯ ವಂಶವಾಹಿಗೆ 1990ರಲ್ಲಿ SRY (sex region on Y) ಎಂದು ಹೆಸರಿಸಲಾಯಿತು. ಕಾಯ ವರ್ಣತಂತುವೊಂದರಲ್ಲಿ ಇರುವ SOX 9 ಎಂಬ ವಂಶವಾಹಿಯಲ್ಲಿ ಒಂದು ಆನುವಂಶೀಯ ಪಥಮಾರ್ಗವನ್ನು (pathway) ಇದು ಪ್ರೇರೇಪಿಸುತ್ತದೆ. ಈ ಪಥಮಾರ್ಗವು ಬಹುತೇಕ ಕಶೇರುಕ ಪ್ರಾಣಿಗಳಲ್ಲಿ ಗಂಡಿನ ಲಕ್ಷಣಗಳು ಬೆಳೆಯಲು ಅತ್ಯಂತ ಅವಶ್ಯವಾಗಿದೆ.
ಈ ಒಂದು ವ್ಯವಸ್ಥೆ ವಿಕಾಸಗೊಂಡದ್ದು ಹೇಗೆ ?
ಆಸ್ಟ್ರೇಲಿಯಾದಲ್ಲಿ ಕಂಡುಬರುವ ಪ್ಲಾಟಿಪಸ್ (ಮೊಟ್ಟೆ ಇಡುವ ಪ್ರಾಚೀನ
ಸ್ತನಿ) ಪ್ರಾಣಿಗಳಲ್ಲಿ ಲಿಂಗ ವರ್ಣತಂತುಗಳ ಕಾರ್ಯ ಶೈಲಿ ಬೇರೆಯೇ ರೀತಿ ಇದ್ದು, ಹಕ್ಕಿಗಳಲ್ಲಿರುವ
ವ್ಯವಸ್ಥೆಯನ್ನು ಹೋಲುತ್ತದೆ. ಇಲ್ಲಿ X ಮತ್ತು Y ವರ್ಣತಂತುಗಳು ಇತರ ಕಾಯ ವರ್ಣತಂತುಗಳಂತೆ ಸಮರೂಪಿಯಾಗಿಯೇ
ಇರುತ್ತವೆ. ಅವುಗಳಲ್ಲಿನ ವಂಶವಾಹಿ ಸಂಯೋಜನೆಯೂ ಒಂದೇ ರೀತಿ ಇರುತ್ತದೆ. ಹೀಗಾಗಿ, ಮಿಲಿಯನ್ ಗಟ್ಟಲೆ
ವರ್ಷಗಳ ಹಿಂದೆ ಎಲ್ಲ ಸ್ತನಿ ಪ್ರಾಣಿಗಳ X ಮತ್ತು Y ವರ್ಣತಂತುಗಳು ಇತರ ಕಾಯ ವರ್ಣತಂತುಗಳಂತೆಯೇ ಇದ್ದಿರಬಹುದು
ಎಂದು ಅಂದಾಜಿಸಲಾಗಿದೆ.
ಅಂದರೆ, ಪ್ಲಾಟಿಪಸ್ ನಿಂದ ಮಾನವನವರೆಗಿನ ವಿಕಾಸದ ನಡುವಿನ ಸುಮಾರು 166
ಮಿಲಿಯನ್ ವರ್ಷಗಳ ಅವಧಿಯಲ್ಲಿ Y ವರ್ಣತಂತು 900 - 55 = 845 ವಂಶವಾಹಿಗಳನ್ನು ಕಳೆದುಕೊಂಡಿದೆ
! ಈ ಲೆಕ್ಕದಲ್ಲಿ, ಅಂದಾಜು ಪ್ರತಿ ಒಂದು ಮಿಲಿಯನ್ ವರ್ಷಕ್ಕೆ 5 ವಂಶವಾಹಿಗಳನ್ನು ಕಳೆದುಕೊಂಡಿದೆ
ಎನ್ನುತ್ತಾರೆ ವಿಜ್ಞಾನಿಗಳು. ಇದೇ ರೀತಿಯ ಪ್ರಕ್ರಿಯೆ ಮುಂದುವರೆದಲ್ಲಿ, Y ವರ್ಣತಂತುವಿನಲ್ಲಿ
ಈಗ ಉಳಿದಿರುವ 55 ವರ್ಣತಂತುಗಳೂ ಕ್ರಮೇಣ ನಶಿಸಿ ಹೋಗಬಹುದು ಎಂಬುದು ವಿಜ್ಞಾನಿಗಳ ಅಂದಾಜು !
ತನ್ನಲ್ಲಿ ಈಗ ಉಳಿದಿರುವ 55 ವಂಶವಾಹಿಗಳನ್ನು ಕಳೆದುಕೊಂಡು, Y ವರ್ಣತಂತು ಸಂಪೂರ್ಣವಾಗಿ ನಶಿಸಿಹೋಗುವ ಸಾಧ್ಯತೆಗೆ ತಗುಲಬಹುದಾದ ಅವಧಿಯ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅದು ಕೆಲವು ಸಾವಿರಗಳಿಂದ ಹಲವು ಮಿಲಿಯನ್ ಗಳಷ್ಟು ವರ್ಷ ತೆಗೆದುಕೊಳ್ಳಬಹುದು ಎಂದು ವಿವಿಧ ರೀತಿಯ ಅಂದಾಜುಗಳಿವೆ. ಮೇಲೆ ಹೇಳಲಾದ ಲೆಕ್ಕಾಚಾರದಲ್ಲಿ ಅದಕ್ಕೆ ಕನಿಷ್ಟ 11 ಮಿಲಿಯನ್ ವರ್ಷಗಳಾದರೂ ಬೇಕು !
ಒಂದು ಸಮಾಧಾನಕರ ಸಂಗತಿಯೆಂದರೆ, ಇಲಿಗಳ (rodents) ಕುಟುಂಬಕ್ಕೆ ಸೇರಿದ
ಎರಡು ಬಗೆಯ ಸ್ತನಿಗಳಲ್ಲಿ Y ವರ್ಣತಂತು ಈಗಾಗಲೇ ನಶಿಸಿದ್ದರೂ, ಅವುಗಳಲ್ಲಿ ಗಂಡು ಜೀವಿಗಳು ಇನ್ನೂ
ಬದುಕುಳಿದಿರುವುದು ! ಪೂರ್ವ ಯುರೋಪ್ ನಲ್ಲಿ ಕಂಡುಬರುವ ಮೋಲ್ ವೋಲ್(mole voles - Eg : Ellobius) ಗಳಲ್ಲಿ ಮತ್ತು ಜಪಾನ್ ನಲ್ಲಿ ಕಂಡುಬರುವ
ಮುಳ್ಳಿಲಿಗಳ(spiny rats - Eg : Tokudaia)
ಕೆಲ ಪ್ರಬೇಧಗಳಲ್ಲಿ SRY ವಂಶವಾಹಿಯಷ್ಟೇ ಅಲ್ಲ, Y ವರ್ಣತಂತು ಕೂಡಾ ಪೂರ್ತಿ ನಶಸಿಹೋಗಿದೆ. X ವರ್ಣತಂತು
ಹಾಗೇ ಉಳಿದಿದೆ.
ಜಪಾನಿನ ಹೊಕೈಡೋ ವಿಶ್ವವಿದ್ಯಾಲಯದ ವಿಜ್ಞಾನಿ ಅಸಾಟೋ ಕುರೋಯಿವ (Asato
Kuroiwa) ಎಂಬಾಕೆ ಮೂರು ಪ್ರಬೇಧದ ಮುಳ್ಳಿಲಿಗಳ ಮೇಲೆ ನಡೆಸಿದ ಸಂಶೋಧನೆ ಕೆಲವು ಕುತೂಹಲಕಾರಿ ಅಂಶಗಳನ್ನು ಹೊರಹಾಕಿದೆ. ಆತಂಕಿತ ಪ್ರಬೇಧಗಳ ಪಟ್ಟಿಯಲ್ಲಿರುವ
ಈ ಇಲಿಗಳಲ್ಲಿ ಸಾಮಾನ್ಯವಾಗಿ Y ವರ್ಣತಂತುಗಳ ಮೇಲೆ ಕಂಡುಬರುವ ಬಹುತೇಕ ವಂಶವಾಹಿಗಳು ಇತರ ಕಾಯ ವರ್ಣತಂತುಗಳಿಗೆ
ಸ್ಥಳಾಂತರಗೊಂಡಿದ್ದುವು. ಆದರೆ, SRY ವಂಶವಾಹಿ ಬೇರೆ ಯಾವ ವರ್ಣತಂತುವಿನಲ್ಲಿಯೂ ಕಂಡುಬರಲಿಲ್ಲ !
ಅಲ್ಲದೆ, ಗಂಡು ಜೀವಿಗಳ ಜೀನೋಮ್ ನಲ್ಲಿ SRY ನ ಕೆಲವು ನಿರ್ದಿಷ್ಟ ಅನುಕ್ರಮಣಿಕೆಗಳು ಕಂಡುಬಂದವು.
ಗಂಡು ಜೀವಿಗಳಲ್ಲಿ ಮಾತ್ರ ವರ್ಣತಂತು 3 ರಲ್ಲಿರುವ ಮುಖ್ಯ ಲಿಂಗ ನಿರ್ಣಯ ವಂಶವಾಹಿ SOX 9 ನಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳು ಗೋಚರಿಸಿದುವು. ಸುಮಾರು 17000 ನೈಟ್ರೋಜನ್ ಬೇಸ್ ಜೋಡಿಗಳಿರುವ ಸಣ್ಣ ತಾಣವೊಂದು ಪುನರಾವರ್ತನೆಯಾಗಿರುವುದು ಕಂಡುಬಂತು.
ಈ ಸಣ್ಣ ತುಣುಕು, SRY ಗೆ ಪೂರಕವಾಗಿ SOX 9 ವಂಶವಾಹಿಯನ್ನು
ಪ್ರೇರೇಪಿಸುತ್ತದೆ. ಆದರೆ, ಹೆಣ್ಣು ಜೀವಿಗಳ ಜೀನೋಮ್ ನಲ್ಲಿ ಇಂಥ ತಾಣಗಳು ಕಂಡು ಬರಲಿಲ್ಲ. ಈ ರೀತಿಯದೇ
ವ್ಯತ್ಯಾಸ ಮೋಲ್ ವೋಲ್ ಗಳಲ್ಲಿಯೂ ಇದೆಯೇ ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ.
ಮಾನವ ಜನಾಂಗವೇ ವಿನಾಶವಾಗುವುದೇ ?
ಒಂದು ವೇಳೆ Y ವರ್ಣತಂತು ಪೂರ್ತಿ ನಶಿಸಿಹೋದಲ್ಲಿ ಮಾನವ ಜನಾಂಗದ ಭವಿಷ್ಯ
ಏನು ? ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ಕೆಲವು ಬಗೆಯ ಹಲ್ಲಿಗಳಲ್ಲಿ (ಉದಾ : ಆಸ್ಪೆಡೋಸೆಲಿಸ್ - Aspedoscelis) ಹಾಗೂ ಹಾವುಗಳಲ್ಲಿ (ಉದಾ : ಟೈಫ್ಲೀನಾ
- Typhlina ) ಗಂಡು ಜೀವಿಗಳೇ ಇಲ್ಲ ! ಇಲ್ಲಿ
ಹೆಣ್ಣು ಜೀವಿ ಇಡುವ ಮೊಟ್ಟೆಗಳು ನಿಷೇಚನವಿಲ್ಲದೆ ಅನಿಷೇಕ ಜನನ (parthenogenesis) ಪ್ರಕ್ರಿಯೆಯ
ಮೂಲಕ ಹೆಣ್ಣು ಜೀವಿಗಳಾಗಿಯೇ ಬೆಳೆಯುತ್ತವೆ. ಅಂದರೆ, ಈ ಪ್ರಬೇಧಗಳಲ್ಲಿ ಸಂಪೂರ್ಣ ಸ್ತ್ರೀ ಸಾಮ್ರಾಜ್ಯ
!. ಇಂಥದ್ದೇ ಒಂದು ಬೆಳವಣಿಗೆ ಮಾನವನಲ್ಲಿಯೂ ಸಾಧ್ಯವೇ ? ಎಂಬುದು ಈಗಿರುವ ಕುತೂಹಲದ ಪ್ರಶ್ನೆ. ವಿಜ್ಞಾನಿಗಳ
ಪ್ರಕಾರ ಇದು ಸಾಧ್ಯವಿಲ್ಲ ಏಕೆಂದರೆ, ಮಾನವರಲ್ಲಿ ಕನಿಷ್ಟ 30 ನಿರ್ಣಾಯಕ,
'ಅಚ್ಚೊತ್ತಿದ' ವಂಶವಾಹಿಗಳು ತಂದೆಯಿಂದ ಪುರುಷಾಣುವಿನ ಮೂಲಕ ಬಂದಾಗ ಮಾತ್ರ ಅಭಿವ್ಯಕ್ತಿಗೊಳ್ಳುವ
ಸಾಮರ್ಥ್ಯ ಪಡೆಯುತ್ತವೆ. ಹೀಗಾಗಿ, ಸಮರ್ಥ ಸಂತಾನೋತ್ಪತ್ತಿಗೆ ಪುರುಷಾಣುಗಳು ಅತ್ಯಗತ್ಯ. Y ವರ್ಣತಂತು
ಪೂರ್ತಿವಿನಾಶವಾಗಲಿದೆ ಎಂದರೆ, ಅದು ಮಾನವ ಜನಾಂಗದ ಅಂತ್ಯವೇ ಎಂದು ಅಂದಾಜಿಸಬೇಕಾಗುತ್ತದೆ !
ಮೇಲಿನ ಸಂಶೋಧನೆ ಒಂದು ಪರ್ಯಾಯ ಸಾಧ್ಯತೆಯನ್ನು ತೊರಿಸಿಕೊಟ್ಟಿದೆ. ಅದೇನೆಂದರೆ,
ಮುಂದೆ ಮಾನವರಲ್ಲಿ ಲಿಂಗ ನಿರ್ಣಯಕ್ಕಾಗಿಯೇ ಬೇರೊಂದು ವಂಶವಾಹಿ ವಿಕಾಸಗೊಳ್ಳುವ ಸಾಧ್ಯತೆ ! ಆದರೆ, ಅದರ ಬೆನ್ನಲ್ಲೇ ಹಲವು ಆತಂಕಗಳೂ ಸೃಷ್ಟಿಯಾಗುವ ಭಯವೂ
ಇದೆ. ವಿಶ್ವದ ವಿವಿಧ ಭಾಗಗಳಲ್ಲಿ ಒಂದಕ್ಕಿಂತ ಹೆಚ್ಚು ಇಂಥ ವಂಶವಾಹಿಗಳು ವಿಕಾಸಗೊಂಡರೆ ಏನಾಗಬಹುದು?
ಅಂಥ ಸಂದರ್ಭದಲ್ಲಿ, ಲಿಂಗ ವರ್ಣತಂತುಗಳ ನಡುವಿನ ಈ 'ಸ್ಪರ್ಧೆ' ಯಿಂದಾಗಿ
ಹೊಸ ಮಾನವ ಪ್ರಬೇಧಗಳ ಉದಯವಾಗಿ ಅವುಗಳು ಪ್ರತ್ಯೇಕೀಕರಣಕ್ಕೆ (isolation) ಒಳಗಾಗುವ ಸಾಧ್ಯತೆಯೂ
ಇದೆ ! ಮುಳ್ಳಿಲಿಗಳಲ್ಲಿ ಮತ್ತು ವೋಲ್ ಗಳಲ್ಲಿ ನಡೆದಿರುವುದು ಇಂಥದ್ದೇ ಒಂದು ಪ್ರಕ್ರಿಯೆ.
ಅಂದರೆ, ಊಹಿಸಿ ನೋಡಿ. ಸುಮಾರು 11 ಮಿಲಿಯನ್ ವರ್ಷಗಳ ನಂತರ ಭೂಮಿಯ ಮೇಲೆ ಒಂದೋ ಮಾನವರೇ ಇರುವುದಿಲ್ಲ ಅಥವಾ ವಿವಿಧ
ಬಗೆಯ ಲಿಂಗ ನಿರ್ಣಯ ವ್ಯವಸ್ಥೆ ಹೊಂದಿರುವ ವಿಭಿನ್ನ ಪ್ರಬೇಧಗಳ ಮಾನವರು ಕಂಡು ಬರಬಹುದು !
ಆಧಾರ :
DNA ಅಣುವಿನ ರಚನೆಯ ಆವಿಷ್ಕಾರದ ಹಿಂದಿರುವ ಸತ್ಯ
ಡಾ.ಫ್ರಾಂಕ್ಲಿನ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ನ್ಯೂನ್‌ಹ್ಯಾಮ್ ಮಹಿಳಾ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಪ್ರಭಾವಶಾಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಾರ್ಬನ್ ಮತ್ತು ಗ್ರ್ಯಾಫೈಟ್ ಮೈಕ್ರೋಸ್ಟ್ರಕ್ಚರ್‌ಗಳನ್ನು ವಿಶ್ಲೇಷಿಸುವ ಬ್ರಿಟಿಷ್ ಕೋಲ್ ಯುಟಿಲೈಸೇಶನ್ ರಿಸರ್ಚ್ ಅಸೋಸಿಯೇಷನ್ (BCURA) ಗಾಗಿ ಅವರು ಕೆಲಸ ಮಾಡಿದರು.
ಹಲವಾರು ವರ್ಷಗಳ ನಂತರ, ಡಾ. ಫ್ರಾಂಕ್ಲಿನ್ ಅವರು ಟರ್ನರ್ ಮತ್ತು ನೆವಾಲ್ ಫೆಲೋಶಿಪ್ ಪಡೆದರು
ಡಾ. ಫ್ರಾಂಕ್ಲಿನ್‌ರ ಡಿಎನ್‌ಎ ಸಂಶೋಧನೆಯು ನೊಬೆಲ್‌ಗೆ
ಅರ್ಹವಾಗಿದೆ ಎಂದು ವ್ಯಾಪಕವಾಗಿ ಭಾವಿಸಲಾಗಿದ್ದರೂ, ಅವರು ಹೆಚ್ಚಾಗಿ ಕಡೆಗಣಿಸಲ್ಪಟ್ಟರು, ಆಕೆಯ ಜೀವನಚರಿತ್ರೆ
ರಚಿಸಿದ ಬ್ರೆಂಡಾ ಮ್ಯಾಡಾಕ್ಸ್ ರವರು ಅವರನ್ನು "ದಿ ಡಾರ್ಕ್ ಲೇಡಿ ಆಫ್ ಡಿಎನ್‌ಎ"
ಎಂದು ಕರೆದರು. ಸಹೋದ್ಯೋಗಿಯಾದ ವಿಲ್ಕಿನ್ಸ್‌ರವರ ಅವಹೇಳನಕಾರಿ ಉಲ್ಲೇಖವು ಫ್ರಾಂಕ್ಲಿನ್‌ರವರ ಕೊಡುಗೆಯನ್ನು
ಕತ್ತಲೆಯಲ್ಲಿ ಇರಿಸಿತು. ಸಂಶೋಧನಾ ಕ್ಷಿತಿಜದ ಉತ್ಕ್ರಾಂತಿ ಎನಿಸಿದ ದ್ವಿಸುರುಳಿ ರಚನೆಯ ಹಿಂದಿನ
ಫ್ರಾಂಕ್ಲಿನ್‌ರವರ ಸಂಶೋಧನಾ ಶ್ರಮವನ್ನು ಪುರುಷ ಪ್ರಧಾನ ಸಮಾಜವು ಮನ್ನಿಸಲಿಲ್ಲ. ಧುವತಾರೆಯಂತೆ
ಮಿನುಗಬೇಕಿದ್ದ ಡಾ. ಫ್ರಾಂಕ್ಲಿನ್‌ರವರಿಗೆ ಯಾವುದೇ ಗೌರವ ನೀಡಲಿಲ್ಲ- ಆದರೆ ನಂತರ ಒಬ್ಬರು ಫ್ರಾಂಕ್ಲಿನ್‌ರವರು
ರಸಾಯನಶಾಸ್ತ್ರಕ್ಕಾಗಿ ನೊಬೆಲ್‌ಗೆ ಅರ್ಹರು ಎಂದು ಸೂಚಿಸಿದರೂ, ಮರಣೋತ್ತರ ನಾಮನಿರ್ದೇಶನಗಳೂ ಆಗಲಿಲ್ಲ.
ಕೃಪೆ: ಆಟೋಬಯೋಗ್ರಫಿ ಆಫ್ ಬ್ರೆಂಡನ್
ಮೆಡಾಕ್ಸ್.
ಸಂಗ್ರಹ ಮತ್ತು ಅನುವಾದ:
ವಿಜ್ಞಾನ ಶಿಕ್ಷಕರು.
ಸರ್ಕಾರಿ ಪ್ರೌಢಶಾಲೆ, ಎಲೆಕ್ಯಾತನಹಳ್ಳಿ,
ನೆಲಮಂಗಲ ತಾ. ಬೆಂಗಳೂರು ಗ್ರಾ,ಜಿಲ್ಲೆ.- 562111.
ದೂ: 9900276979